Sunday, December 7, 2025
Google search engine
Home Blog Page 19

ತುರುವೇಕೆರೆ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಹಲವು ಚರ್ಚೆ

0

ತುರುವೇಕೆರೆ: ರಾಜ್ಯದ ಸರ್ಕಾರಿ ನೌಕರರ ಹಿತ ದೃಷ್ಟಿಯಿಂದ ಎನ್.ಪಿ.ಎಸ್ ಗೆ ಬದಲಾಗಿ ಹಳೆ ಪಿಂಚಣಿ ಯೋಜನೆ ತರುವುದು ಮತ್ತು 7ನೇ ವೇತನ ಆಯೋಗವನ್ನು ಶೀಘ್ರವೇ ಜಾರಿ ಮಾಡುವ ಸಂಬಂಧ ಬೇಡಿಕೆಗಳನ್ನು ಸ್ಥಳೀಯ ಶಾಸಕರಾದ ಎಂ.ಟಿ.ಕೃಷ್ಣಪ್ಪನವರ ಮೂಲಕ ಸರ್ಕಾರಕ್ಕೆ ಜ.19 ರಂದು ಮನವಿ ಸಲ್ಲಿಸಲಾಗುವುದೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಂರಾಜು ಮುನಿಯೂರು ತಿಳಿಸಿದರು.

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ತಾಲ್ಲೂಕು ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ನೌಕರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಷಡಕ್ಷರಿಯವರ ನೇತೃತ್ವದಲ್ಲಿ ಮಂಡ್ಯದಲ್ಲಿ ಜ.6ರಂದು ನಡೆದ ರಾಜ್ಯಕಾರ್ಯಕಾರಣಿ ಸಭೆಯಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಅದರಂತೆ ರಾಜ್ಯದ ಸರ್ಕಾರಿ ನೌಕರರ ಬಹು ನಿರೀಕ್ಷಿತ ಬೇಡಿಕೆಯಂತೆ 7ನೇ ವೇತನ ಆಯೋಗದ ಪರಿಷ್ಕರಣೆ ಮಾಡಿ ಜಾರಿಗೆ ತರುವುದು, ನೌಕರರಿಗೆ ವಿಶೇಷವಾಗಿ ನಗದು ರಹಿತ ಚಿಕಿತ್ಸೆ ನೀಡುವುದು ಮತ್ತು ಬಹಳ ಮುಖ್ಯವಾಗಿ ರಾಜ್ಯದ ಲಕ್ಷಾಂತರ ನೌಕರರ ಹಾಗು ಅವರ ಕುಟುಂಬದವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪಿಂಚಣಿ ಯೋಜನೆಯನ್ನು ತೆಗೆದು ಹಾಕಿ, ಹಳೆ ಪಿಂಚಣಿ ಯೋಜನೆಯನ್ನು ಶೀಘ್ರವೇ ಜಾರಿಗೆ ತರುವ ನಿರ್ಣಯಗಳ್ನು ಕೈಗೊಳ್ಳಲಾಗಿದ್ದು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಶಾಸಕರಿಗೆ ಹಾಗು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ರಾಜ್ಯ ಸರ್ಕಾರಿ ನೌಕರರ ಬಗ್ಗೆ ವಿಶೇಷ ಕಾಳಜಿ ಇರುವ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಮೂರೂ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ ಎಂದ ಅವರು

ತಾಲ್ಲೂಕಿನ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 50 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಯೊಂದಿಗೆ ಮತ್ತು ಜನಪ್ರತಿನಿಧಿಗಳು ಹಾಗು ತಾಲ್ಲೂಕಿನ ನೌಕರರ ಸಹಕಾರದಿಂದ ಮೇಲಂತಸ್ಥಿನ ನೌಕರರ ಸಮುದಾಯ ಭವನವನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಶುಕ್ರವಾರ ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ಹಾಗು ಜಿಲ್ಲಾಧ್ಯಕ್ಷರಾದ ಎನ್.ನರಸಿಂಹರಾಜುರವರು ಆಗಮಿಸಲಿದ್ದಾರೆ.

ಸರ್ಕಾರದ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಖಜಾಂಚಿ ನಾಗರಾಜು, ಉಪಾಧ್ಯಕ್ಷ ವೀರಪ್ರಸನ್ನ, ರಾಜ್ಯ ಪರಿಷತ್ ಸದಸ್ಯ ಗಿಡ್ಡೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ, ನಿದರ್ೇಶಕರಾದ ಮಮತ, ಅಶ್ವಿನಿ, ಪಾಪಣ್ಣ ಇನ್ನಿತರರು ಪಾಲ್ಗೊಂಡಿದ್ದರು.

ನಿಮ್ಮ ಸಾಧನೆ ಸಮಾಜದ ಸಾಧನೆಯಾಗಲಿ: ವೂಡೇ ಕೃಷ್ಣ

ತುಮಕೂರು: ನೀವು ಮಾಡುವ ಸಾಧನೆ ಸಮಾಜದ ಸಾಧನೆಯಂತಾಗಬೇಕು ಎಂದು ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿ, ನಾಡೋಜ ಡಾ. ವೂಡೇ ಪಿ.ಕೃಷ್ಣ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ನಗರದ ಗಂಗಸಂದ್ರದಲ್ಲಿರುವ ಶೇಷಾದ್ರಿ ಪುರಂ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಯುವ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತೃದೇವೊಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವ, ಎಂಬುದು ನಮ್ಮ ಸಂಸೃತಿ, ಆದರೆ ಸ್ವಾಮಿ ವಿವೇಕಾನಂದರು ದರಿದ್ರ ದೇವೋಭವ, ಮೂರ್ಖದೇವೋಭವ, ಪಾಪಿ ದೇವೋಭವ ಎನ್ನುತ್ತಿದ್ದರು.‌ ಬಡವರು, ಅಜ್ಞಾನಿಗಳಲ್ಲೂ ದೇವರನ್ನು ಕಾಣಬೇಕು ಎನ್ನುತ್ತಿದ್ದರು. ವಿದ್ಯಾರ್ಥಿಗಳು ವಿವೇಕ ವಾಣಿಯಂತೆ ಬದುಕಬೇಕು ಎಂದು ಕರೆ ನೀಡಿದರು.

“ಶಿಕ್ಷಣ ಎನ್ನುವುದು ಜೀವನದ ನಿರಂತರ ಕಲಿಕೆ” ಕ್ಷಣ ಕ್ಷಣ ಕಲಿಯುವುದೇ ಶಿಕ್ಷಣ. ನಾವೂ ಯಾವತ್ತಿಗೂ ಕೂಡ ವಿದ್ಯಾರ್ಥಿಗಳಾಗಿ ಬದುಕಬೇಕು. ಇಂದಿಗೆ ಮನುಷ್ಯ ನಿರ್ಮಾಣದ ಶಿಕ್ಷಣಬೇಕು, ರಾಷ್ಟ್ರ ನಿರ್ಮಾಣದ ಶಿಕ್ಷಣಬೇಕು. ಮನುಷ್ಯನನ್ನು ನಿರ್ಮಾಣ ಮಾಡಬೇಕಾಗಿದೆ. ನಿಜವಾದ ಮಾನವ ಸಂಪನ್ಮೂಲದ ಅಭಿವೃದ್ಧಿಯೇ ರಾಷ್ಟ್ರದ ಸಂಪತ್ತಾಗಿದೆ ಎಂದು ಕೃಷ್ಣ ಅಭಿಪ್ರಾಯಪಟ್ಟರು”

ನಮ್ಮ ಮಾತು ಮುತ್ತಿನಂತೆ, ಮಂತ್ರದಂತೆ ಇರಬೇಕು,  ಮಾತು ಮಂತ್ರದ ಶಕ್ತಿ ಎಂದಿದ್ದಾರೆ” ನಮ್ಮ ಪರಿಸರದಲ್ಲಿ ಸಿಗುವ ಸಂಸ್ಕೃತಿಯನ್ನು, ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿ ಬೆಂಗಳೂರಿನ ಸದಾಶಿವನಗರ ಯೂಥ್ ಅಸೋಸಿಯೇಷನ್ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ ಎಸ್ ವೀರಭದ್ರಯ್ಯ ಮಾತನಾಡಿ, ಮಕ್ಕಳನ್ನು ಮಕ್ಕಳ ಏಳಿಗೆಗಾಗಿ ಶ್ರಮಿಸುವವರು ತಂದೆ ತಾಯಿಗಳು ಮಾತ್ರ ಎಂದರು.

ಬೆಂಗಳೂರಿನ ಆಟೋ ಚಾಲಕ ಮಗನ ಓದಿಗಾಗಿ ಭಾನುವಾರವೂ ಕೆಲಸ ಮಾಡುತ್ತಿದ್ದ  ಆ ತಂದೆಯ ತ್ಯಾಗ, ಪರಿಶ್ರಮದಿಂದ ಆತನ ಮಗ  ವೈದ್ಯಕೀಯ ವಿದ್ಯಾರ್ಥಿಯಾದ ಘಟನೆಯನ್ನು ಉದಾಹರಿಸುತ್ತಾ ತಂದೆ ತಾಯಿಯರ ಪರಿಶ್ರಮ ಮತ್ತು ಆಸೆಯನ್ನು ಪ್ರತಿ ಮಕ್ಕಳು ತಿಳಿದುಕೊಳ್ಳ ಬೇಕು ಎಂದು ಹೇಳಿದರು.

“ಯಾರಾದರೂ ಕೋತಿ ಎಂದರೆ ನಾವು ತಿರುಗಿ ಮಂಗ ಎನ್ನಬಹುದಲ್ಲವೇ ಅದರ ಬದಲಾಗಿ ದೇವರಲ್ಲಿ ಅವರಿಗೆ ಒಳ್ಳೆಯ ಬುದ್ದಿಕೊಡಿ ಎಂದು ಕೇಳಿಕೊಳ್ಳುವುದೇ ಉತ್ತಮ” ಎಂದರು.

ಸ್ವಾಮಿ ವಿವೇಕಾನಂದರ “ ಹೇಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ”, “ ನನ್ನ ಏಳಿಗೆಗೆ ನಾನೇ ಶಿಲ್ಪಿ “ ಎಂದು ಮಕ್ಕಳ ಮೂಲಕ ಹೇಳಿಸಿದರು.


ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಜಿ ಟಿ ಮಾತನಾಡಿ, ಸಾರ್ಥಕತೆ ಎಂಬುದು ಪ್ರತಿಯೊಬ್ಬರ ಜೀವನಕ್ಕೂ ಭಿನ್ನವಾಗಿರುತ್ತದೆ. ವಿದ್ಯಾರ್ಥಿಗಳು ತಂದೆ ತಾಯಿಗಳ ಗುರಿ ಉದ್ದೇಶವನ್ನು ಅರ್ಥಮಾಡಿಕೊಂಡು ಸಾರ್ಥಕತೆಕಡೆ ಸಾಗಬೇಕು, ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಿ ಎಂದರು.


ಕಾರ್ಯಕ್ರಮದಲ್ಲಿ  ಭಾನುಪ್ರಕಾಶ್ ಎಸ್  ಡಿ ಹಾಗೂ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವರಾಜು ಬಿ.ವಿ ವೇದಿಕೆಯಲ್ಲಿದ್ದರು.

ಮಹಿಳೆಯರ ನಗ್ನ: ಹೊಸ ಕಾನೂನಿಗೆ ಭಾರೀ ಚರ್ಚೆ

ಮಹಿಳೆಯರನ್ನು ಸಾರ್ವಜನಿಕವಾಗಿ ನಗ್ನಗೊಳಿಸುವ ಕೃತ್ಯಗಳಿಗೆ ತಡೆ ಹಾಕುವ ಹಿನ್ನೆಲೆಯಲ್ಲಿ ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಸಿಎಂ ನೇತೃತ್ವದಲ್ಲಿ ಚರ್ಚೆ ನಡೆಯಿತು.

ಗುರುವಾರ ನಡೆದ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಮಹಿಳೆಯರ ನಗ್ನತೆ ಪ್ರಕರಣಗಳ ಬಗ್ಗೆ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಠಿಣ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ, ಗಲ್ಲು ಶಿಕ್ಷೆ ನೀಡುವ ಕಾನೂನು ಜಾರಿಗೆ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ. ಎಲ್ಲಾ ಪಕ್ಷದವರು ಸಹಕಾರ ಕೊಡಬೇಕು ಎಂದು ಕೋರಿದರು.

ಸದನದಲ್ಲಿ ಮಸೂದೆಯನ್ನು ಮಂಡಿಸಿದ ಕಾನೂನು ಸಚಿವರು, ಮಹಿಳೆಯರನ್ನು ಪೂರ್ತಿಯಾಗಿ ನಗ್ನಗೊಳಿಸುವುದು, ಅರೆ ನಗ್ನಗೊಳಿಸುವುದನ್ನು ಸೇರಿಸಲಾಗಿದೆ. ಸಾರ್ವಜನಿಕವಾಗಿ ಎಂಬುದನ್ನು ಮಹಿಳೆಯ ಏಕಾಂತದಲ್ಲಿ, ನಿರ್ಜನ ಪ್ರದೇಶದಲ್ಲಿ ನಗ್ನ ಗೊಳಿಸುವುದನ್ನು ಸಾರ್ವಜನಿಕವಾಗಿ ನಗ್ನಗೊಳಿಸಲಾಗುವುದು ಎಂದೇ ಮಸೂದೆ ವ್ಯಾಖ್ಯಾನಿಸುತ್ತದೆ. ಆರೋಪಿಗಳಿಗೆ ಜೀವಂತ ಪರ್ಯಂತ ಜೈಲು ಶಿಕ್ಷೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

– ಹೀಗೆ ಹೊಸ ಮಸೂದೆಯ ಚರ್ಚೆ ನಡೆದಿದ್ದು ಗುರುವಾರ ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಣುಕು ವಿಧಾನಸಭಾ ಅಧಿವೇಶನದಲ್ಲಿ.

ಮುಖ್ಯಮಂತ್ರಿಯಾಗಿ ಅಭಿನಯಿಸಿದ ವಿದ್ಯಾರ್ಥಿ ಶಶಿಕುಮಾರ ನಾಯಕ್, ಅವರು ಮಹಿಳೆಯರ ಸುರಕ್ಷತೆ, ಹೊಸ ಕಾಯ್ದೆಯ ಬಗ್ಗೆ ಅದ್ಬುತವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿದರು. ಕಾನೂನು ಸಚಿವರಾಗಿದ್ದ ವಿದ್ಯಾರ್ಥಿ ನರಸಿಂಹರಾಜು ಹೊಸ ಮಸೂದೆ ಮಂಡಿಸಿದರು.

ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಿವಲಿಂಗಮ್ಮ , ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಉಲ್ಲೇಖಿಸಿದ ಅವರು, ಮಹಿಳೆಯರ ರಕ್ಷಣೆಗೆ ಸರ್ಕಾರ ತೆಗೆದುಕೊಂಡಿರುವ ಹಲವು ಕ್ರಮಗಳ ಕುರಿತು ವಿವರಿಸಿದರು. ಸಚಿವೆಯ ದಿಟ್ಟ ಮಾತುಗಳಿಗೆ, ತೆಗೆದುಕೊಂಡಿರುವ ಕ್ರಮಗಳ ವಾಕ್ ಲಹರಿಗೆ ಶಾಸಕರು ತಲೆ ದೂಗಿದರು.

ವಿರೋಧ ಪಕ್ಷದ ನಾಯಕ, ಹರ್ಷವರ್ಧನ್ ಮಾತನಾಡಿ, ಶಿಕ್ಷೆಯ ಪ್ರಮಾಣ ಹದಿನಾಲ್ಕು ವರ್ಷ ಸಾಕಾಗುವುದಿಲ್ಲ. 20 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ರಮೇಶ್, ಪ್ರಾಧ್ಯಾಪಕರಾದ ಖಾಶಿಪ್ ಅಹಮದ್ ಅವರು ಮಸೂದೆ ರಚನೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಿದ್ದರು.

ಉಪ ಪ್ರಾಂಶುಪಾಲರಾದ ಒಬಣ್ಣ, ಪ್ರಾಧ್ಯಾಪಕರಾದ ಮಮತಾ, ಗೌರಿಶಂಕರ್, ರೇಣುಕಾ, ತರಣಮ್, ಪುರುಷೋತ್ತಮ, ಶ್ರೀನಿವಾಸ್, ಶ್ವೇತಾ ಇದ್ದರು.

ಅಕ್ರಮ‌ ಸಾಗುವಳಿ ಮಂಜೂರಿಗೆ ಡಿಜಿಟಲ್ ಸ್ಪರ್ಶ

0

ಕಂದಾಯ ಸಚಿವ ಕೃಷ್ಣಭೈರೇಗೌಡರ ವಿನೂತನ ಆಲೋಚನೆ

ಲಕ್ಷ್ಮೀಕಾಂತರಾಜು ಎಂ ಜಿ
…lakshmikantharajumg@gmail.com


ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಭೂ ಮಂಜೂರು ಮಾಡುವ ಉದ್ದೇಶಕ್ಕೆ ಕರ್ನಾಟಕ ಸರ್ಕಾರವು ವಿನೂತನ ತತ್ರಾಂಶವೊಂದನ್ನು ರೂಪಿಸುವ ಮೂಲಕ ಭೂ ಮಂಜೂರಾತಿ ಸಮಿತಿಯು ( ಬಗರ್ ಹುಕುಂ ಕಮಿಟಿ) ತಾಂತ್ರಿಕ ನೆರವಿನಿಂದಲೂ ರೈತರ ಸಾಗುವಳಿ ಪರಿಶೀಲನೆ ಮಾಡುವ ಮೂಲಕ ಭೂ ಮಂಜೂರಾತಿ ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಹೊಸ ಆಯಾಮ ನೀಡಲಾಗಿದೆ.

ಬಗರ್ ಹಕುಂ ಎಂಬ ಹೆಸರಿನಲ್ಲಿ ಸಿದ್ಧಪಡಿಸಿರುವ ತತ್ರಾಂಶದಲ್ಲಿ ಅರ್ಜಿದಾರನ ಸಾಗುವಳಿ ಜಮೀನಿನ ಕಳೆದ ಹದಿನೈದು ವರ್ಷದ ಹಿಂದಿನ ಫೋಟೋವನ್ನು ಕೆಎಸ್ ಆರ್ ಎಸ್ ಎಸಿ ಯಿಂದ ಉಪಗ್ರಹ ಆಧಾರಿತ ಫೋಟೋ ಪಡೆದು ಇಲ್ಲಿ ಉಳುಮೆ ಮಾಡುತ್ತಿದ್ದ ಕುರಿತು ಪರಿಶೀಲಿಸಿ ಮಂಜೂರಿಗೆ ಸಮಿತಿ ಮುಂದೆ ಅರ್ಜಿ ಮಂಡಿಸಲು ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ತಹಸೀಲ್ದಾರ್ ಅವರುಗಳಿಗೆ ನಿರ್ದೇಶನ ನೀಡಲಾಗಿದೆ.

ರಾಜ್ಯದ ಎಲ್ಲ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರುಗಳ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಮಿತಿ ರಚನೆಯಾಗಿದ್ದು , ಮುಂದಿನ ಎಂಟು ತಿಂಗಳಲ್ಲಿ ಭೂ ಮಂಜೂರು ಕೋರಿ ಬಂದಿರುವ ಅರ್ಜಿಗಳ ವಿಲೇ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೆಗೌಡರು ಹೇಳಿರುವುದು ಬಹಳ ವರ್ಷಗಳಿಂದ ಮಂಜೂರಾತಿಗಾಗಿ ಬಾಕಿ ಇರುವ ಅರ್ಜಿದಾರ ಅರ್ಹ ರೈತರುಗಳಿಗೆ ವರದಾನವಾಗಲಿದೆ.

ನಮೂನೆ 50,53 ಹಾಗೂ 57 ಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಸಾವಿರಾರು ಅರ್ಜಿಗಳು ಬಾಕಿ ಇವೆ. 54 ಲಕ್ಷ ಎಕರೆ ಮಂಜೂರಾತಿ‌ ಕೋರಿ 9,56,512 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದು, ಈ ಎಲ್ಲ ಅರ್ಜಿಗಳನ್ನು ನಿಯಾಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರಾದ ಕೃಷ್ಣಭೈರೇಗೌಡ ಹೇಳಿದ್ದಾರೆ.

ವಾಸ್ತವದಲ್ಲಿ 50 ಲಕ್ಷ ಎಕರೆ ಮಂಜೂರು ಮಾಡಬಹುದಾದ ಭೂಮಿ ಇಲ್ಲದಿರುವುದು ಮತ್ತು ಅನರ್ಹ ಅರ್ಜಿಗಳೇ ತುಂಬಿರುವುದರಿಂದ ಪಾರದರ್ಶಕವಾಗಿ ಹಾಗೂ ನಿಯಾಮಾನುಸಾರ ವಿಲೇ ಮಾಡಲಾಗುವ ಉದ್ದೇಶವನ್ನು ಕಂದಾಯ ಸಚಿವರು ಹೊಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಗ್ರಾಮವೊಂದರ ಸರ್ವೆ ನಂಬರ್ ವೊಂದರಲ್ಲಿ ಹಲವರು ಮಂಜೂರು ಕೋರಿ ಅರ್ಜಿ ಸಲ್ಲಿಸಿದ್ದರೆ ಅರ್ಜಿ ನಮೂನೆಗಳಾದ 50,53,57 ಗಳ ಹಿರಿತನದಲ್ಲಿ ಅರ್ಜಿಗಳಿಗೆ ಆದ್ಯತೆ ನೀಡಿ ಅರ್ಜಿ ವಿಲೇವಾರಿ ಮಾಡಬೇಕೆಂದು ಕಂದಾಯ ಇಲಾಖೆಯು ಡಿಸೆಂಬರ್ ಒಂದರಂದು ಹೊರಡಿಸಿರುವ ಬಗರ್ ಹುಕುಂ ಸಮಿತಿ ಸಂಬಂಧದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಾರ್ ಕೋಡ್ ಮತ್ತು “ಇ” ಸಾಗುವಳಿ ಚೀಟಿ

ಈ ಬಾರಿ ಮಂಜೂರಿಯಾಗುವ ಭೂಮಿಯ ಅರ್ಜಿದಾರನಿಗೆ ನೀಡುವ ಸಾಗುವಳಿ ಚೀಟಿಗೆ ಇ ಸಾಗುವಳಿ ಚೀಟಿ ನೀಡುವುದು ಹಾಗೂ ಬಾರ್ ಕೋಡ್ ಹಾಗೂ ಸಮಿತಿಯ ನಡವಳಿಗಳೆಲ್ಲವನ್ನೂ ಆನ್ ಲೈನ್ ನಲ್ಲಿ ದಾಖಲಿಸುವದರಿಂದ ಇಡೀ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣವಾಗುವ ಮೂಲಕ ಪಾರದರ್ಶಕವಾಗಲಿದೆ.

ಈ ಹಿಂದಿನ ಭೂ ಮಂಜೂರಾತಿ ಪ್ರಕ್ರಿಯೆಗಳಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿದ್ದ ಕಾರಣ ಮಂಜೂರಿ ಭೂಮಿಯನ್ನು ದುರಸ್ತಿ ಮಾಡಲೂ ಸಾಧ್ಯವಾಗಿಲ್ಲ. ಇದರಿಂದ ಸುಮಾರು ನಲವತ್ತು ವರ್ಷಗಳ ಹಿಂದಿನ ಮಂಜೂರಿ ಭೂಮಿಗಳು ದುರಸ್ತಿ ಕಾಣದ ಪ್ರಕರಣಗಳಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಸ್ತುತ ಭೂ ಮಂಜೂರಾತಿ ಸಮಿತಿ, ಪ್ರಕ್ರಿಯೆಗಳಿಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಮಾಡಿ ಸಮಸ್ಯೆ ಮುಕ್ತ ಮಾಡಲು ಸರ್ಕಾರ ಪಣತೊಟ್ಟಿರುವುದು ಅರ್ಹ ರೈತರಿಗೆ ವರದಾನವೇ ಸರಿ.

ಬಗರ್ ಹುಕುಂ ತತ್ರಾಂಶ

ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿರುವವರು ಅರ್ಜಿ ಸಲ್ಲಿಸಿದ ದಿನಾಂಕಕ್ಕೆ ಸರ್ಕಾರಿ ಭೂಮಿಯಲ್ಲಿ ಹದಿನೈದಯ ವರ್ಷ ಸಾಗುವಳಿ ಮಾಡಿರಬೇಕೆಂಬುದು ನಿಯಮ. ಅರ್ಜಿದಾರ ರೈತ ಹದಿನೈದಕ್ಕೂ ಹೆಚ್ವು ವರ್ಷ ಸಾಗುವಳಿ ಮಾಡಿದ್ದಾನೋ? ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಬಗರ್ ಹುಕುಂ ಎಂಬ ತತ್ರಾಂಶ ರೂಪಿಸಲಾಗಿದೆ.

ಇದರಿಂದ ಹದಿನೈದು ವರ್ಷಗಳ ಹಿಂದಿನ ಉದ್ದೇಶಿತ ಭೂಮಿಯ ಫೋಟೋಗಳನ್ನ ವೀಕ್ಷಿಸಿ ಮಂಜೂರಿಗೆ ಅರ್ಹನಿದ್ದಾನೆಯೇ? ಇಲ್ಲವೋ? ಎಂಬುದನ್ನು ಸಮಿತಿ ತೀರ್ಮಾನಿಸುತ್ತದೆ.

ದುರಸ್ತಿ ಕಾರ್ಯ ಸರಳೀಕರಣಕ್ಕೆ ಮುನ್ನುಡಿ
…………..

ಭೂ ಮಂಜೂರಾತಿ ಸಮಿತಿಯಿಂದ ಭೂಮಿ ಮಂಜೂರಾಗಿ ಐವತ್ತು ವರ್ಷಗಳಾಗಿದ್ದರೂ ಕೆಲ ಪ್ರಕರಣಗಳಲ್ಲಿ ಮಂಜೂರಿ ಜಮೀನು ದುರಸ್ತಿಯಾಗಿರುವುದಿಲ್ಲ. ಈ ಪ್ರಕ್ರಿಯೆಗೆ ನಮೂನೆ 1 ರಿಂದ 5 ಹಾಗೂ 6 ರಿಂದ 8 ಭರ್ತಿ ಮಾಡಿ ಪರಿಶೀಲನೆ ಕಾರ್ಯ ಸುದೀರ್ಘವಾದ ಪ್ರಕ್ರಿಯೆಯಾಗಿದ್ದು ಸಿದ್ದಪಡಿಸಿದ ಕಡತಗಳಲ್ಲಿ ಆದೇಶವಾಗುವುದು ಎರಡೋ,ಮೂರೋ ಮಾತ್ರ. ಈ ಸಮಸ್ಯೆಗೆ ಮುಕ್ತಿ ಹಾಡಲು ಮಂಜೂರಿ ಸಮಯದಲ್ಲಿಯೇ ದುರಸ್ತಿ ಕಾರ್ಯವನ್ನೂ ಮುಗಿಸಿ ಅದೇ ಸಮಯದಲ್ಲಿ ಪೋಡಿ ಮಾಡುವ ಉದ್ದೇಶ ಹೊಂದಿರುವ ಸಚಿವ ಕೃಷ್ಞಭೈರೇಗೌಡರ ನಿಲುವು ಮೆಚ್ಚುವಂತದ್ದು.

ನಾಳೆ (ಜನವರಿ 13) ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕೃತಿ ಲೋಕಾರ್ಪಣೆ

ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ಸಭಾಂಗಣದಲ್ಲಿ ಜನವರಿ 13ರ (ಶನಿವಾರ) ಸಂಜೆ 4:00 ಗಂಟೆಗೆ ಯುವ ಕಥೆಗಾರ ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕತಾಸಂಕಲನ ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾಶಾಖೆ ತುಮಕೂರು, ಪ್ರಗತಿಪರ ಸಂಘಟನೆಗಳು ತುಮಕೂರು ಹಾಗೂ ರೂಹು ಪುಸ್ತಕ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಹಿರಿಯ ಲೇಖಕರು, ಕಾರ್ಮಿಕ ಇಲಾಖೆಯ ವಿಶ್ರಾಂತ ಅಧಿಕಾರಿಗಳೂ ಆದ ತುಂಬಾಡಿ ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಹಿರಿಯ ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿ ಪುಸ್ತಕ ಅನಾವರಣಗೊಳಿಸಲಿದ್ದಾರೆ. ನಿತ್ಯಾನಂದ ಬಿ ಶೆಟ್ಟಿ, ಡಾ. ರವಿಕುಮಾರ್ ನೀಹ, ಕೇಶವಮಳಗಿ, ಮಲ್ಲಿಕಾ ಬಸವರಾಜು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.

ನಾಡೋಜ ಡಾ.ವೂಡೇ ಪಿ ಕೃಷ್ಣ ಅವರ ಜೀವನ ಸಂಗಾತಿ

ಕಳೆದಸಂಚಿಕೆಯಿಂದ……..

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿದ್ದಾಳೆ ಎನ್ನುವುದು ಪ್ರತೀತಿ. ಆದರೆ ಕೃಷ್ಣರವರ ಯಶಸ್ಸಿನ ಹಿಂದೆ ನಿಲ್ಲದೆ ಜೊತೆಜೊತೆಯಲ್ಲೇ ಇವರ ಪತ್ನಿ ಸವಿತಾರವರು ಇದ್ದಾರೆ.

‘ಕೃಷ್ಣರವರು ಇತರರಿಗಿಂತ ವಿಭಿನ್ನ ಸ್ವಭಾವದವರು ಎನ್ನುವುದನ್ನು ಬಿಟ್ಟರೆ ನನಗೆ ಹೆಚ್ಚಿಗೆ ಗೊತ್ತಿರಲಿಲ್ಲ. ವಿವಾಹವಾದ ನಂತರ ಇವರ ವ್ಯಕ್ತಿತ್ವ ನಿಧಾನವಾಗಿ ನನ್ನೆದುರು ತೆರೆದುಕೊಳ್ಳುತ್ತಾ ಹೋಯಿತು. ಹಾಗೆಯೇ ಇವರ ಮೇಲೆ ನನಗಿರುವ ಗೌರವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ವಿವಾಹದ ನಂತರ ನನ್ನ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿ ಪಡೆಯಲು ಮಾರ್ಗದರ್ಶನ ಮಾಡಿದರು. ಸ್ವತಂತ್ರವಾಗಿ ಏನನ್ನಾದರೂ ಸಾಧಿಸಲು ಹಾಗೂ ಮಹಿಳಾ ಉದ್ಯಮಿ ಆಗುವ ನಿಟ್ಟಿನಲ್ಲಿ ಮಂಡ್ಯದಲ್ಲಿ ಸಣ್ಣ ಉದ್ಯಮವೊಂದನ್ನು ಸ್ಥಾಪಿಸಿ, ಇದರ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ನನಗೆ ಜವಾಬ್ದಾರಿ ಕೊಟ್ಟರು. ಇದಲ್ಲದೆ ಶಾರದಾ ಮಠದವರು ನಡೆಸುವ ನಿವೇದಿತಾ ಶಾಲೆಯಲ್ಲಿ ನಾನು ಸ್ವಯಂಸೇವಕಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಪತಿ ಕೃಷ್ಣರವರ ಪ್ರೋತ್ಸಾಹವೇ ಕಾರಣ’ ಎನ್ನುವುದು ಸವಿತಾರವರ ಮನದಾಳದ ಮಾತು.

ಕೃಷ್ಣರವರ ವ್ಯಕ್ತಿತ್ವವನ್ನು ಶ್ರೀಮತಿ ಸವಿತಾರವರು ವಿವರಿಸುವಂತೆ “ಯಾವುದೇ ನಾಟಕೀಯವಿಲ್ಲದ ಸಹಜ ವ್ಯಕ್ತಿತ್ವ ಅವರದು. ಎಲ್ಲರೂ ಹೊರಗಡೆ ಸಮಾಜದಲ್ಲಿ ಅವರನ್ನು ಹೇಗೆ ನೋಡುತ್ತಾರೋ ಅದೇ ಅವರ ಮೂಲ ವ್ಯಕ್ತಿತ್ವ,

ಅಂದರೆ ಮೇಲ್ನೋಟಕ್ಕೆ ಒಂದು ತರಹ, ಒಳಗೆ ಇನ್ನೊಂದು ತರಹ ಇರುವವರಲ್ಲ. ಅವರ ವ್ಯಕ್ತಿತ್ವದ ಮುಖ್ಯ ಲಕ್ಷಣ ಎಂದರೆ ಅವರು ಬಹಳ ಸರಳ ಜೀವಿ, ಅನಗತ್ಯ ಆಡಂಬರ ಅವರಿಗೆ ಇಷ್ಟವಿಲ್ಲ. ಎಷ್ಟು ಅಗತ್ಯವೋ ಅಷ್ಟೇ ಸಾಕು ಎನ್ನುವ ಮನೋಭಾವದವರು. ಮುಖ್ಯವಾಗಿ ಅವರಿಗೆ ವಸ್ತುಗಳ ಮೇಲೆ ಅನಗತ್ಯ ಪ್ರೀತಿಯಿಲ್ಲ. ಅತಿ ಅವಶ್ಯವಾದ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುತ್ತಾರೆ. ಆಡಂಬರಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನೂ ಕೊಂಡವರಲ್ಲ. ಹಾಗೆಯೇ ಅವಶ್ಯವಿರುವ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಹಿಂದು ಮುಂದು ನೋಡಿದವರಲ್ಲ” ಎಂದು ಮುಕ್ತವಾಗಿ ಹೇಳುತ್ತಾರೆ.

ನಾಡೋಜ ವೂಡೇ ಪಿ ಕೃಷ್ಣ ಹಾಗೂ ಸವಿತಾ ಅವರ ವಿವಾಹ ಸಮಾರಂಭದಲ್ಲಿ ಡಾ. ಎಚ್ ನರಸಿಂಹಯ್ಯ ಅವರರೊಂದಿಗೆ ದೊಡ್ಡಪ್ಪ ಡಬ್ಲೂ ಹೆಚ್ ಹನುಮಂತಪ್ಪನವರು ಈ ಚಿತ್ತದಲ್ಲಿ ಇದ್ದಾರೆ.

ಡಾ. ಕೃಷ್ಣರವರ ನಡೆ-ನುಡಿ, ಊಟ, ಜೀವನ ಶೈಲಿ, ಎಲ್ಲವೂ ಸರಳ. ‘ಹಿತಮಿತ ಮೃದುವಚನ ಗಂಭೀರ ಸುಂದರ ವೇಷಂ’ ಎಂಬ ಮಾತಿಗೆ ಪ್ರತೀಕದಂತೆ ಬದುಕುತ್ತಿದ್ದಾರೆ.

ಖಾದಿ ಬಟ್ಟೆ ಬಿಟ್ಟರೆ ಬೇರೆ ಬಟ್ಟೆಯನ್ನು ಇವರು ಧರಿಸುವುದಿಲ್ಲ. ಬಿಳಿಯ ಅಂಗಿಯನ್ನು ಬಿಟ್ಟರೆ ಬೇರೆ ಬಣ್ಣದ ಅಂಗಿಗಳನ್ನು ಧರಿಸುವುದಿಲ್ಲ. ಇವರು ಎಂದೂ ಕಛೇರಿಯ ಕೆಲಸವನ್ನು ಮನೆಗೆ ತಂದವರಲ್ಲ. ಕುಟುಂಬದ ನೆಮ್ಮದಿಯನ್ನು ಕೆಡಿಸಿಕೊಂಡವರಲ್ಲ. ದೇಹಿ ಎಂದು ಸಹಾಯ ಕೇಳಿಕೊಂಡು ಬಳಿ ಬಂದವರನ್ನು ಇವರೆಂದೂ ನಿರಾಸೆಗೊಳಿಸಿಲ್ಲ ಎನ್ನುತ್ತಾರೆ ಸವಿತಾ.

ನಮ್ಮ ವಿವಾಹ 1991ರಲ್ಲಿ ನೆರವೇರಿದ್ದು, ಅಂದಿನಿಂದ ಇಲ್ಲಿ ಯವರೆಗಿನ ನಮ್ಮ ಬದುಕನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ ‘ಅವರಂತಹ ಉನ್ನತ ವ್ಯಕ್ತಿತ್ವ ದವರು ನನಗೆ ಪತಿಯಾಗಿ ದೊರಕಿದ್ದು ನನ್ನ ಭಾಗ್ಯ’ ಎಂದು ಗೌರವದಿಂದಲೇ ಹೇಳುತ್ತಾರೆ.

ಮುಂದುವರೆಯುವುದು…….

ಮನೆಯಿಲ್ಲ ಕಟ್ಟಿಸಿಕೊಡಿ – ಮಕ್ಕಳ ಅಳಲು

0

ಸಿರಾ:- ಸರ್ ನಮ್ಮ ತಂದೆತಾಯಿ ಇಬ್ಬರೂ ಮರಣ ಹೊಂದಿದ್ದಾರೆ. ಕಷ್ಟದಲ್ಲೂ ಶಾಲೆ ಬಿಟ್ಟಿಲ್ಲ

ಈ ಹಳ್ಳಿಯಲ್ಲಿ ವಾಸಮಾಡಲು ನಮಗೆ ಸ್ವಂತ ಮನೆಯಿಲ್ಲ. ಆಗಾಗಿ ನಮಗೆ ನಿವೇಶನವನ್ನು ನೀಡಿ ಮನೆಯನ್ನು ನಿರ್ಮಿಸಿಕೊಡಿ ಮತ್ತು ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಡಿ ಎಂದು ತರೂರು ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಸಿಂಚನ ರವರು ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಳು.


ಶಿರಾ ತಾಲೂಕಿನ ತರೂರು ಗ್ರಾಮ ಪಂಚಾಯಿತಿ, ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಹಾಗೂ ಸಿಎಂಸಿಎ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಪುಷ್ಪಲಕ್ಷ್ಮೀರವರು ದೀಪ ಬೆಳಗುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಯ ಮಕ್ಕಳು ತಮ್ಮ ತಮ್ಮ ಶಾಲೆಯ ಮತ್ತು ಗ್ರಾಮದ ಸಮಸ್ಯೆ-ಸವಾಲುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.


ಗಂಜಲಗುಂಟೆ ಅಂಗನವಾಡಿ ಕಾರ್ಯಕರ್ತೆಯಾದ ಹೇಮಾರವರು ಸಭೆಯಲ್ಲಿ ತಮ್ಮ ಅಂಗನವಾಡಿ ಕೇಂದ್ರದ ಸಮಸ್ಯೆಯನ್ನು ಚರ್ಚಿಸುತ್ತಾ, ನಮ್ಮ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡಯಿಲ್ಲ, ಶಾಲೆಯ ಒಂದು ನಿರುಪಯುಕ್ತ ಕೊಠಡಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ. ಆ ಕೊಠಡಿಯು ಸಹ ಮಕ್ಕಳನ್ನು ಕೂರಿಸಲು ಅಪಾಯಕಾರಿಯಾಗಿದ್ದು, ಕೇಂದ್ರದ ಹೊರಗಡೆ ಮಕ್ಕಳಿಗೆ ಊಟ, ಪಾಠ ಎಲ್ಲವನ್ನು ಸಹ ನಡೆಸಲಾಗುತ್ತಿದೆ‌ ಎಂದರು.

ಇಲಾಖೆಯಿಂದ ಕಟ್ಟಡ ಕಟ್ಟಲು ಅನುಮೋದನೆ ಆಗಿದ್ದರೂ ಕೂಡ ಯಾವುದೇ ಜನಪ್ರತಿನಿಧಿಗಳು ಕಟ್ಟಡವನ್ನು ಕಟ್ಟಿಕೊಡಲು ಮುಂದೆ ಬರುತ್ತಿಲ್ಲ. ಇದರಿಂದ ಕೇಂದ್ರವನ್ನು ನಡೆಸಲು ಬಹಳ ಕಷ್ಟಕರವಾಗುತ್ತಿದೆ. ಕೂಡಲೇ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇಂದ್ರಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಿ ಕೊಡಬೇಕೆಂದು ಕೇಳಿಕೊಂಡರು.


ಸಭೆಯಲ್ಲಿ ಮಕ್ಕಳು ತಮ್ಮ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವಂತೆ, ರಸ್ತೆಗಳನ್ನು ಸರಿಪಡಿಸುವಂತೆ, ಶಾಲೆಗೆ ನೀರನ್ನು ಪೂರೈಸುವಂತೆ, ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸುವಂತೆ, ಆಟದ ಮೈದಾನವನ್ನು ಮತ್ತು ಕಾಂಪೌಂಡ್ ಒದಗಿಸುವಂತೆ, ಶೌಚಾಲಯವನ್ನು ನಿರ್ಮಿಸಿಕೊಡುವಂತೆ, ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಒಟ್ಟು 9 ಶಾಲೆಗಳಿಂದ 200ಕ್ಕೂ ಹೆಚ್ಚು ಮಕ್ಕಳು, 5 ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿ, ಒಟ್ಟು 35 ಸಮಸ್ಯೆಗಳನ್ನು ಹೇಳಿಕೊಂಡರು.

ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಹುಬೇಗ ಬಗೆಹರಿಸುವುದಾಗಿ ತಿಳಿಸಿದರು.


ಸಭೆಯಲ್ಲಿ ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಮಂಜುನಾಥ್ ಅಮಲಗೊಂದಿರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಭಾರತ ಸರ್ಕಾರವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು 2030ನ್ನು ಒಪ್ಪಿಕೊಂಡಿದ್ದು ಮಕ್ಕಳ ಆರೋಗ್ಯ, ರಕ್ಷಣೆ, ಶಿಕ್ಷಣ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧನೆ ಹಾಗೂ ಹಸಿವು, ತಾರತಮ್ಯ ಮತ್ತು ಶೋಷಣೆಗಳು ಕೊನೆಗೊಳಿಸುವುದಕ್ಕೆ ಬದ್ಧವಾಗಿದೆ. ಮಕ್ಕಳ ಪರಿಸ್ಥಿತಿಯನ್ನು ತಳಮಟ್ಟದಿಂದಲೇ ಗಮನಿಸಿ ಅವಶ್ಯಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ.

ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಶೇ.35ರಷ್ಟಿದೆ. ಕರ್ನಾಟಕ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು 2006ರಲ್ಲಿ ಪ್ರಾರಂಭಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವೆಂಬರ್ 2023 ರಿಂದ 24 ಜನವರಿ 2024ರ ವರೆಗೆ 10 ವಾರಗಳ ಮಕ್ಕಳಿಗೆ ಸ್ಪಂದಿಸುವ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವಂತೆ ಪ್ರಸ್ತುತ ವರ್ಷವೂ ಸುತ್ತೋಲೆ ಹೊರಡಿಸಿದೆ.

ಈ ಅಭಿಯಾನದಲ್ಲಿ ಪಂಚಾಯತ್ ಮಟ್ಟದಲ್ಲಿ ಎಲ್ಲಾ ಶಾಲೆಗಳಿಗೆ ಮಕ್ಕಳ ದನಿ ಪೆಟ್ಟಿಗೆ, ಕೋರಿಕೆ ಪತ್ರಗಳನ್ನು ವಿತರಿಸಬೇಕಾಗುತ್ತದೆ, ಪಂಚಾಯತ್ ಅಧಿಕಾರಿಗಳು ಶಾಲೆ ಮತ್ತು ಅಂಗನವಾಡಿಗಳಿಂದ ಮಕ್ಕಳ ಸ್ಥಿತಿಗತಿ ವರದಿಯನ್ನು ಸಂಗ್ರಹಿಸಿ ಪಂಚಾಯತ್ ಮಟ್ಟದಲ್ಲಿ ರಚಿಸಿರುವ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಬೇಕಾಗುತ್ತದೆ.

ತದನಂತರ ಒಂದು ದಿನ ಎಲ್ಲಾ ಶಾಲೆಯ ಮಕ್ಕಳನ್ನು ಸೇರಿಸಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಮಾಡಬೇಕಿದೆ. ಎಲ್ಲಾ ಮಕ್ಕಳಿಗೆ ರೋಗನಿರೋಧಕಗಳು ತಲುಪಿರುವ ಬಗ್ಗೆ, ಅಪೌಷ್ಟಿಕತೆಯಿರುವ ಮಕ್ಕಳ ಬಗ್ಗೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ದತಿಗಳನ್ನು ನಿಲ್ಲಿಸುವ ಬಗ್ಗೆ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ, ಮಕ್ಕಳಿಗೆ ಬದುಕಲು ಮತ್ತು ಶಿಕ್ಷಣ ಪಡೆಯಲು ಬೇಕಾದ ಸೌಲಭ್ಯಗಳನ್ನೂ ಒಳಗೊಂಡಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚಿಸಬೇಕಿದೆ.

ಆದ್ದರಿಂದ ಸಭೆಯಲ್ಲಿ ಮಕ್ಕಳೂ ಸಹ ವೈಯಕ್ತಿಕ, ತಮ್ಮ ಹಳ್ಳಿಯ ಮತ್ತು ಶಾಲೆಯ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಬೇಕೆಂದು ಅಭಿಪ್ರಾಯಪಟ್ಟರು.


ನೋಡಲ್ ಅಧಿಕಾರಿಗಳಾದ ಮಂಜುಪ್ರಸಾದ್ ರವರು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗೂ ಗಂಗೆ ಶೀರ್ಷಿಕೆಯಡಿ ಪ್ರತಿಯೊಬ್ಬರಿಗೂ ಸಮಾನವಾಗಿ ನೀರನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಜೊತೆಗೆ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ಅನೇಕ ಮಕ್ಕಳು ತಮ್ಮ ಹಳ್ಳಿಯಲ್ಲಿ ಮತ್ತು ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇವೆಂದು ತಿಳಿಸಿದರು.


ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಗ್ರಾಮ ಪಂಚಾಯತಿಯ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಪುಷ್ಪಲಕ್ಷ್ಮೀರವರು ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಗ್ರಾಮ ಪಂಚಾಯತಿಯು ಬದ್ದವಾಗಿದ್ದು, ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಶ್ರಮಿಸುತ್ತೇವೆ. ಈ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರಿಂದ ಪಂಚಾಯತಿಯಲ್ಲಿ ಕ್ರಿಯಾ ಯೋಜನೆ ಮಾಡಲು ಸಹಾಯಕವಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತರಾಯಪ್ಪರವರು ಹಿಂದಿನ ವರ್ಷದ ಮಕ್ಕಳ ಗ್ರಾಮಸಭೆಯ ಅನುಪಾಲನಾ ವರದಿಯನ್ನು ಮಂಡಿಸಿದರು. ಶಿಕ್ಷಕರಾದ ಹನುಮಂತರಾಜು ರವರು ನಿರೂಪಿಸಿದರು. ರಾಜ್ಯದ ಮಕ್ಕಳ ಸ್ಥಿತಿಗತಿ ವರದಿಯನ್ನು ಪ್ರದರ್ಶಿಸಲಾಯಿತು. ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ಪಂಚಾಯತ್ ವತಿಯಿಂದ ಎಲ್ಲಾ ಶಾಲೆಗಳಿಗೆ ಆಟದ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಿಕ್ಷಣ ಇಲಾಖೆಯ ಸಿಆರ್‌ಪಿ ಸುರೇಶ್ ರವರು, ಆರೋಗ್ಯ ಇಲಾಖೆಯ ಸಿಬ್ಬಂದಿ ಗೋಪಿನಾಥ್, ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಸಿದ್ದೇಶ್ ಕೆ.ಎಸ್ ರವರು, ಗ್ರಾಮ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ನಾಗಣ್ಣ, ರಾಮಕ್ಕರವರು, ಸಿಎಂಸಿಎ ಸ್ವಯಂಸೇವಕರಾದ ನವ್ಯರವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗದವರು, ಮಕ್ಕಳು ಮತ್ತು ಗ್ರಾಮಸ್ಥರು ಹಾಜರಿದ್ದರು.

ಅನುದಾನಿತ ಶಾಲೆಗಳಿಗೆ ಸಹ ಶಿಕ್ಷಕರ ನೇಮಿಸಲು ಹುಚ್ಚಯ್ಯ ಆಗ್ರಹ

0

Publicstory

ತುರುವೇಕೆರೆ: ಮಕ್ಕಳ ಶೈಕ್ಷಣಿಕ ಹಿತದೃಷ್ಟಯಿಂದ 2016 ರಿಂದ ಇಲ್ಲಿಯ ವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಶೀಘ್ರವೇ ನೇಮಿಸಲು ಅವಕಾಶ ಕಲ್ಪಿಸಬೇಕೆಂದು ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ರಾಜ್ಯಾಧ್ಯಕ್ಷ ವೈ.ಎಚ್.ಹುಚ್ಚಯ್ಯನವರು ಆಗ್ರಹಿಸಿದ್ದಾರೆ.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಅನುದಾನಿತ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು
ರಾಜ್ಯದಾದ್ಯಂತ ಸುಮಾರು ಹತ್ತು ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದುವರೆಗೆ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳೂ ಸಹ ಶಿಕ್ಷಕರನ್ನು ನೇಮಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಬಂದಿವೆ ಎಂದು ಟೀಕಿಸಿದರು.

ಅನುದಾನಿತ ಶಾಲೆಗಳಿಗೆ ಬಡವರು, ಕೂಲಿಕಾರ್ಮಿಕರ ಮಕ್ಕಳೇ ಜೀವಾಳ. ಆದರೆ ವಿಷಯ ಶಿಕ್ಷಕರುಗಳಿಲ್ಲದೆ ಅವರ ಭವಿಷ್ಯ ಹಾಳಾಗುತ್ತಿದೆ. ಮೊದಲೇ ಈ ಶಾಲೆಗಳು ಎಂದರೆ ಮೂಗು ಮುರಿಯುವ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.


ಈ ಹಿನ್ನೆಲೆಯಲ್ಲಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರುವುದು ಅನಿವಾರ್ಯವಾಗಿತ್ತು. ನ್ಯಾಯಾಲಯವು ಕೂಡಲೇ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶವನ್ನೂ ಸಹ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು, ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಸೇರಿದಂತೆ ಎಲ್ಲರಿಗೂ ನೀಡಲಾಗಿದೆ. ಅಲ್ಲದೇ ಕೂಡಲೇ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡಬೇಕೆಂದೂ ಸಹ ಮನವಿ ಕೂಡ ಮಾಡಿಕೊಳ್ಳಲಾಗಿದೆ ಎಂದರು.


ಶಿಕ್ಷಕರನ್ನು ನೇಮಕ ಮಾಡದೇ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದಂತಾಗಿದೆ. ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಅವಕಾಶ ನೀಡಿರುವ ಸರ್ಕಾರ ಅನಿದಾನಿತ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅವಕಾಶ ನೀಡದೆ ಮಲತಾಯಿ ಧೋರಣೆ ತಾಳಿದೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತಿದೆ. ಸರ್ಕಾರ ಹಲವಾರು ಯೋಜನೆಗಳಿಗೆ ಸಹಸ್ರಾರು ಕೋಟಿ ವೆಚ್ಚ ಮಾಡುತ್ತದೆ. ಆದರೆ ಶಿಕ್ಷಕರ ನೇಮಕಕ್ಕೆ ಕೇವಲ ಮುನ್ನೂರು ಕೋಟಿಯಷ್ಠೇ ಬೇಕು. ಆದರೂ ಸಹ ವ್ಯಯ ಮಾಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಎಲ್ಲಾ ಸರ್ಕಾರಗಳೂ ಸಹ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವುದು ದುರಂತವೇ ಸರಿ ಎಂದು ವಿಷಾದಿಸಿದರು.
ಈಗಾಗಲೇ ರಾಜ್ಯದ ನೂರಾರು ಅನುದಾನಿತ ಶಾಲಾ ಆಡಳಿತ ಮಂಡಲಿಯ ಪದಾಧಿಕಾರಿಗಳು. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮಠ ಮಂದಿರಗಳು, ಪ್ರಭಾವಿ ಜನಪ್ರತಿನಿಧಿಗಳೂ ಸಹ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ.

ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದ ಶಿಕ್ಷಣ ಕ್ಷೇತ್ರದ ಸಮಸ್ಯೆಯನ್ನು ವಿವರಿಸಲಾಗುವುದು. ಇದಕ್ಕೂ ಮೀರಿ ಶಿಕ್ಷಕರ ಹುದ್ದೆ ತುಂಬಲು ಅವಕಾಶ ನೀಡದಿದ್ದಲ್ಲಿ ನ್ಯಾಯಾಂಗ ನಿಂದನೆ ಕುರಿತು ಚಿಂತಿಸಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ದೇವರಾಜಯ್ಯ, ಜಿಲ್ಲಾ ಅಧ್ಯಕ್ಷರಾದ ಕೆ.ವಿ.ಕೃಷ್ಣಮೂರ್ತಿ, ಬಾಣಸಂದ್ರ ವಿಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ್, ಹುಲ್ಲೇಕೆರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಪ್ರಸನ್ನಕುಮಾರ್, ವಿದ್ಯಾರಣ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಕೃಷ್ಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಉಗ್ರಯ್ಯ, ಕಂಚಿರಾಯ ಸ್ವಾಮಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ರತ್ನಮ್ಮ ಎ.ಕಂಚೀರಾಯ, ಸಂಪಿಗೆಯ ಚಂಪಕ ವಿದ್ಯಾ ಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು, ದೀಪು ಸಂಸ್ಥೆಯ ನಟೇಶ್, ರಾಮಾಂಜನೇಯ ಗ್ರಾಮಾಂತರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಂಪತ್ತು, ಮುಖ್ಯಶಿಕ್ಷಕ ನಾಗರಾಜು, ಕನ್ನಡಭಾರತಿ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಂತರರಾಷ್ಟ್ರೀಯ ಗಮನ ಸೆಳೆದ ಲಕ್ಷ್ಮೀರಂಗಯ್ಯ

ತುಮಕೂರು : ಬುದ್ಧನ ಕುರಿತಾದ ಸಂಶೋಧನಾ ಕ್ಷೇತ್ರದಲ್ಲಿ ಡಾ. ಲಕ್ಷ್ಮೀರಂಗಯ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ‌ ಗಮನ ಸೆಳೆದಿದ್ದಾರೆ ಎಂದು ಚಿಂತಕ ಡಾ.ಸಿ.ಚಂದ್ರಶೇಖರ್ ಗಮನ ಸೆಳೆದರು

ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದ್ದು ಈ ಸಂಶೋಧನೆಗಳ ಪಲಿತಾಂಶಗಳು ಸಮಾಜಕ್ಕೆ ಉಪಯೋಗವಾಗುತ್ತಿರುವುದು ವಿಜ್ಞಾನ ಕ್ಷೇತ್ರಕ್ಕೂ ಮತ್ತು ಸಮಾಜ ವಿಜ್ಞಾನಗಳ ಕ್ಷೇತ್ರಕ್ಕೂ ಅಂತರವಿರುವುದನ್ನು ಕಾಣಬಹುದು ಎಂದು ಅವರು ಹೇಳಿದರು.

ನಾಟಕ ಮನೆ ತುಮಕೂರು ಹಾಗೂ ಕರ್ನಾಟಕ ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಈಚೆಗೆ ನಗರದಲ್ಲಿ ಆಯೋಜಿಸಿದ್ದಜನಪದ ಗೀತ ಗಾಯನ, ರಂಗ ಪ್ರಯೋಗ, ಹಾಗೂ ಡಾ.ಲಕ್ಲ್ಮೀ ರಂಗಯ್ಯ ನವರಿಗೆ ಅಭಿನಂದನ ಸಮಾರಂಭ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾದ ಪ್ರೊ.ಬಿ.ರಮೇಶ್ ರವರು ಅಭಿನಂದನಾ ನುಡಿಗಳನ್ನಾಡುತ್ತಾ ತುಮಕೂರಿನ ನೆಲದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕøತಿ.ಕ್ರೀಡೆ, ರಂಗಭೂಮಿ, ಜನಪದ, ಮುಂತಾದ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುವಂತೆ ಚಳುವಳಿಗಳನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವುದು ಮೊದಲುನಿಂದಲೂ ರೂಡಿಯಾಗಿ ಬಂದಿದೆ, ನಾಟಕಮನೆ ರಂಗಭೂಮಿಯ ಜೊತೆಯಲ್ಲಿ ಈ ನಾಡಿನ ಯುವ ಸಾಧಕರನ್ನು ಗುರುತಿಸಿ ಅಭಿನಂದಿಸುವುದರ ಮೂಲಕ ಮತಷ್ಟು ತನ್ನ ಘನತೆಯ ಮೆರಗನ್ನು ಹೆಚ್ಚಿಸಿಕೊಂಡಿದೆ ಎಂದರು.

ಚಿಂತಕ ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದರಾದ ಡಾ. ಲಕ್ಷ್ಮಣದಾಸ್ ವಹಿಸಿದ್ದರು ಕವಿಗಳಾದ ಡಾ.ಓ ನಾಗರಾಜು ಪ್ರಾಸ್ತವಿಕ ಮಾತುಗಳನ್ನಾಡಿದರು.ಹಿರಿಯ ರಂಗಕರ್ಮಿ ಹೆಚ್ ಎಂ ರಂಗಯ್ಯ, ಮಲ್ಲಿಕಾಬಸವರಾಜು, ನಾಟಕ ಮನೆ ಮಹಾಲಿಂಗು, ಡಾ. ಮಣಿಗಯ್ಯ ಎಲ್ ,ಡಾ.ಬಾಲಕೃಷ್ಣಪ್ಪ ವೈ.ಕೆ.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್ ಡಿ ಎಂ,ಡಿ ವಿ. ಸುರೇಶ್ ಕುಮಾರ್ ,ವಿರೂಪಾಕ್ಷ ಡ್ಯಾಗೇರಹಳ್ಳಿ ಮಂಟೇಸ್ವಾಮಿ, ಮಲ್ಲಿಕಾರ್ಜುನ ಕೆಂಕೆರೆ ಉಪಸ್ಥಿತರಿದ್ದರು ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರು ಜನಪದ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು ನವೀನ್ ತಿಪಟೂರು ರವರ ನಿರ್ದೇಶನದಲ್ಲಿ ಸರಸತಿಯಾಗಲೊಲ್ಲೆ ಎಂಬ ನಾಟಕವನ್ನು ಸಾವಿತ್ರಿ ಬಾಫುಲೆರವರ ಜನ್ಮದಿನಾಚಾರಣೆಯ ಅಂಗವಾಗಿ ರಂಗ ಪ್ರಯೋಗನ್ನು ಪ್ರದರ್ಶಿಸಲಾಯಿತು. ದೇವರಾಜು ಮೆಳೆಹಳ್ಳಿ ಕಾರ್ಯಕ್ರಮ ನಿರೂಪಿಸಿದರು, ಸೋರೆಕುಂಟೆ ಸಿದ್ದೇಶ್ ಸ್ವಾಗತಿಸಿ, ಪ್ರಕಾಶ್ ವಂದಿಸಿದರು.

ಶಿಸ್ತಿನ ಸಿಪಾಯಿ : ‌ವೂಡೇ ಪಿ ಕೃಷ್ಣ

ಕಳೆದ ಸಂಚಿಕೆಯಿಂದ……..

ಸದಾ ದೃಢ ಚಿತ್ತ, ದೃಢ ಸಂಕಲ್ಪ, ದೃಢ ವಿಶ್ವಾಸ ಹೊಂದಿದ ಹಸಿರು ಚೇತನವೂ, ಶಿಸ್ತಿನ ಸಿಪಾಯಿಯೂ ಆಗಿರುವ ಕೃಷ್ಣರು ಸದಾ ಕ್ರಿಯಾಶೀಲರು. ಅವರ ಮನೆ ಯಾವಾಗಲೂ ಕನ್ನಡಿಯಂತೆ ಹೊಳೆಯುತ್ತಿರುತ್ತದೆ. ಆದರೆ ಅವರ ಮನೆಯಲ್ಲಿ ಯಾರೂ ಕೆಲಸಗಾರರಿಲ್ಲ ! ಪತಿ-ಪತ್ನಿ ಇಬ್ಬರೇ ಮನೆಯನ್ನು ಶುಚಿ ಮಾಡುತ್ತಾರೆ ಎಂಬುದು ಆಶ್ಚರ್ಯವಾದರೂ ಸತ್ಯ.

ಒಂದು ಕಡೆ ಹಿರಿಯ ಸ್ವಾತಂತ್ರ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ ಹೇಳುತ್ತಾರೆ: ಕೃಷ್ಣರವರು ಬಂದು ‘ಚೆನ್ನಮ್ಮನವರ ಆತ್ಮಕತೆ’ ಪುಸ್ತಕಗಳನ್ನು ತಾವೇ ಎತ್ತಿಕೊಂಡು ಹೋಗಿ ಅವರ ಗಾಡಿಯಲ್ಲಿ ಇಟ್ಟರಂತೆ. ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಈ ಕೆಲಸ ಮಾಡಿದರಲ್ಲ, ಎಂತಹ ಉದಾತ್ತ ವ್ಯಕ್ತಿತ್ವ ಎಂದು ಮೂಕವಿಸ್ಮಿತರಾದರಂತೆ ಚೆನ್ನಮ್ಮನವರು.

ಪ್ರತಿದಿನ ತಾವು ಮಾಡಬೇಕಾದ ಕೆಲಸದ ಪಟ್ಟಿಯನ್ನು ಬೆಳಿಗ್ಗೆ-ಸಾಯಂಕಾಲ ತಾವೇ ಸಿದ್ಧಪಡಿಸುವ ಕೃಷ್ಣರ ಗುಣ ನಿಜಕ್ಕೂ ಅನುಕರಣೀಯ. ಮನುಷ್ಯ ಸುಖಾ ಸುಮ್ಮನೆ ಬದುಕಬಾರದು. ಆದರೆ ಬಾಳಬೇಕು, ಬಾಳಿದರೆ ಕೃಷ್ಣರ ರೀತಿ ಬಾಳಬೇಕೆಂಬುದು ಕೃಷ್ಣರ ಸ್ನೇಹ ವಲಯದ ಅಭಿಮತ.

ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಪೊಲೀಸ್ ಪಡೆ ವಿದ್ಯಾರ್ಥಿಮಿತ್ರರ ಮುಷ್ಕರ ಸದ್ದಡಗಿಸಲು ಪ್ರಯತ್ನಿಸಿದಾಗ ಕಾಲೇಜಿನ ಅಂದಿನ ಪ್ರಾಂಶುಪಾಲರು ಹಾಗೂ ಆಡಳಿತ ವರ್ಗದ ವಿರುದ್ಧ ಡಾ. ಕೃಷ್ಣರವರು ಧ್ವನಿ ಎತ್ತಿದ ಆ ದಿನವನ್ನು ಇವರ ಸ್ನೇಹ ಬಳಗ ಇಂದೂ ನೆನಪಿಸಿಕೊಳ್ಳುತ್ತದೆ.

ವಿದ್ಯಾರ್ಥಿಗಳ ತೊಂದರೆಗಳಿಗೆ ಸ್ಪಂದಿಸುವ ಇವರ ವಿನೂತನ ಗುಣವೇ ಇಂದು ಇವರನ್ನು ಶಿಕ್ಷಣ ಕ್ಷೇತ್ರದ ಒಬ್ಬ ಅಪ್ರತಿಮ ಆಡಳಿತಗಾರರನ್ನಾಗಿ ರೂಪಿಸಿದೆ.

ಇವರು ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದು ಯಶಸ್ಸನ್ನು ಕಾಣಲೇಬೇಕು ಎಂಬ ಛಲ ಇದೆ. ಇವರು ಆಯಾ ಸಂಘಸಂಸ್ಥೆಗಳಿಗೆ ಅಗತ್ಯವಾದ ಸೌಲಭ್ಯ, ಸಲಕರಣೆಗಳನ್ನು ತಕ್ಷಣವೇ ವ್ಯವಸ್ಥೆ ಮಾಡಿಕೊಡುವುದರಿಂದ ಇವರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಶೀಘ್ರ ಪ್ರಗತಿ ಸಾಧ್ಯವಾಗಿದೆ. ಸದಾ ಸಮಾಜಸೇವೆಗೆ ಹಾತೊರೆಯುವ ಇವರ ನಾಡಿಮಿಡಿತ ಅಡಗಿರುವುದೇ ಇವರ ಕ್ರಿಯಾಶೀಲತೆಯಲ್ಲಿ. ಒಬ್ಬ ಮಾದರಿ ಸ್ವಯಂ ಸೇವಕನ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಇವರು ತಮ್ಮ ಪೂರ್ವಜರ ಸಾಧನೆ, ಹಿರಿಮೆಗರಿಮೆಗಳ ಪ್ರತೀಕವಾಗಿದ್ದಾರೆ. ಸರ್. ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಅನೇಕ ಅಪರೂಪದ ಮಾಹಿತಿಗಳು, ಚಿತ್ರಗಳನ್ನೊಳಗೊಂಡ ಉತ್ತಮ ಜೀವನ ಚರಿತ್ರೆಯ ಪುಸ್ತಕ ಸೇರಿದಂತೆ ಹಲವಾರು ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದಾರೆ. ಜೊತೆಗೆ 1988ರಿಂದ 1990ರವರೆಗೆ ‘ಬ್ರಹ್ಮವಾಣಿ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ತಮ್ಮ ವೈಚಾರಿಕ ಗುರು ರಾಜಾ ರಾಮ್‌ ಮೋಹನ್ ರಾಯ್‌ರ ನೆನಪನ್ನು ಶಾಶ್ವತವಾಗಿರಿಸಲು ಡಬ್ಲ್ಯೂ. ಹೆಚ್. ಹನುಮಂತಪ್ಪನವರು 1978ರಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ರಾಜಾ ರಾಮ್‌ ಮೋಹನ್ ರಾಯ್ ಅವರ ಅಮೃತಶಿಲೆಯ ಪ್ರತಿಮೆಯನ್ನು ಕಲ್ಕತ್ತಾದಲ್ಲಿ ಮಾಡಿಸಿ ತಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಆಗಿನ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ್‌ರಿಂದ ಅನಾವರಣ ಮಾಡಿಸಿದರು. ಮೇ 22ರಂದು ರಾಜಾ ರಾಮ್‌ಮೋಹನ್ ರಾಯ್‌ರವರ ಜನ್ಮ ದಿನಾಚರಣೆಯಂದು ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ವೂಡೇ ಮನೆತನದ ಡಬ್ಲ್ಯೂ ಹೆಚ್. ಹನುಮಂತಪ್ಪ (ಜೂನಿಯರ್)ನವರಿಂದ ಹಿಡಿದು ಡಬ್ಲ್ಯೂ ಹೆಚ್. ದೇವಕುಮಾರ್, ಡಬ್ಲ್ಯೂ. ಹೆಚ್. ಪುಟ್ಟಯ್ಯನವರು ಮತ್ತು ಅವರ ಮಕ್ಕಳಾದ ಡಾ. ಕೃಷ್ಣರವರು ನಡೆಸಿಕೊಂಡೇ ಬರುತ್ತಿದ್ದಾರೆ.

ಮುಂದುವರೆಯುವುದು…….