ಕಂದಾಯ ಸಚಿವ ಕೃಷ್ಣಭೈರೇಗೌಡರ ವಿನೂತನ ಆಲೋಚನೆ
ಲಕ್ಷ್ಮೀಕಾಂತರಾಜು ಎಂ ಜಿ
…lakshmikantharajumg@gmail.com
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಭೂ ಮಂಜೂರು ಮಾಡುವ ಉದ್ದೇಶಕ್ಕೆ ಕರ್ನಾಟಕ ಸರ್ಕಾರವು ವಿನೂತನ ತತ್ರಾಂಶವೊಂದನ್ನು ರೂಪಿಸುವ ಮೂಲಕ ಭೂ ಮಂಜೂರಾತಿ ಸಮಿತಿಯು ( ಬಗರ್ ಹುಕುಂ ಕಮಿಟಿ) ತಾಂತ್ರಿಕ ನೆರವಿನಿಂದಲೂ ರೈತರ ಸಾಗುವಳಿ ಪರಿಶೀಲನೆ ಮಾಡುವ ಮೂಲಕ ಭೂ ಮಂಜೂರಾತಿ ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಹೊಸ ಆಯಾಮ ನೀಡಲಾಗಿದೆ.
ಬಗರ್ ಹಕುಂ ಎಂಬ ಹೆಸರಿನಲ್ಲಿ ಸಿದ್ಧಪಡಿಸಿರುವ ತತ್ರಾಂಶದಲ್ಲಿ ಅರ್ಜಿದಾರನ ಸಾಗುವಳಿ ಜಮೀನಿನ ಕಳೆದ ಹದಿನೈದು ವರ್ಷದ ಹಿಂದಿನ ಫೋಟೋವನ್ನು ಕೆಎಸ್ ಆರ್ ಎಸ್ ಎಸಿ ಯಿಂದ ಉಪಗ್ರಹ ಆಧಾರಿತ ಫೋಟೋ ಪಡೆದು ಇಲ್ಲಿ ಉಳುಮೆ ಮಾಡುತ್ತಿದ್ದ ಕುರಿತು ಪರಿಶೀಲಿಸಿ ಮಂಜೂರಿಗೆ ಸಮಿತಿ ಮುಂದೆ ಅರ್ಜಿ ಮಂಡಿಸಲು ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ತಹಸೀಲ್ದಾರ್ ಅವರುಗಳಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದ ಎಲ್ಲ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರುಗಳ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಮಿತಿ ರಚನೆಯಾಗಿದ್ದು , ಮುಂದಿನ ಎಂಟು ತಿಂಗಳಲ್ಲಿ ಭೂ ಮಂಜೂರು ಕೋರಿ ಬಂದಿರುವ ಅರ್ಜಿಗಳ ವಿಲೇ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೆಗೌಡರು ಹೇಳಿರುವುದು ಬಹಳ ವರ್ಷಗಳಿಂದ ಮಂಜೂರಾತಿಗಾಗಿ ಬಾಕಿ ಇರುವ ಅರ್ಜಿದಾರ ಅರ್ಹ ರೈತರುಗಳಿಗೆ ವರದಾನವಾಗಲಿದೆ.
ನಮೂನೆ 50,53 ಹಾಗೂ 57 ಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಸಾವಿರಾರು ಅರ್ಜಿಗಳು ಬಾಕಿ ಇವೆ. 54 ಲಕ್ಷ ಎಕರೆ ಮಂಜೂರಾತಿ ಕೋರಿ 9,56,512 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದು, ಈ ಎಲ್ಲ ಅರ್ಜಿಗಳನ್ನು ನಿಯಾಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರಾದ ಕೃಷ್ಣಭೈರೇಗೌಡ ಹೇಳಿದ್ದಾರೆ.
ವಾಸ್ತವದಲ್ಲಿ 50 ಲಕ್ಷ ಎಕರೆ ಮಂಜೂರು ಮಾಡಬಹುದಾದ ಭೂಮಿ ಇಲ್ಲದಿರುವುದು ಮತ್ತು ಅನರ್ಹ ಅರ್ಜಿಗಳೇ ತುಂಬಿರುವುದರಿಂದ ಪಾರದರ್ಶಕವಾಗಿ ಹಾಗೂ ನಿಯಾಮಾನುಸಾರ ವಿಲೇ ಮಾಡಲಾಗುವ ಉದ್ದೇಶವನ್ನು ಕಂದಾಯ ಸಚಿವರು ಹೊಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಗ್ರಾಮವೊಂದರ ಸರ್ವೆ ನಂಬರ್ ವೊಂದರಲ್ಲಿ ಹಲವರು ಮಂಜೂರು ಕೋರಿ ಅರ್ಜಿ ಸಲ್ಲಿಸಿದ್ದರೆ ಅರ್ಜಿ ನಮೂನೆಗಳಾದ 50,53,57 ಗಳ ಹಿರಿತನದಲ್ಲಿ ಅರ್ಜಿಗಳಿಗೆ ಆದ್ಯತೆ ನೀಡಿ ಅರ್ಜಿ ವಿಲೇವಾರಿ ಮಾಡಬೇಕೆಂದು ಕಂದಾಯ ಇಲಾಖೆಯು ಡಿಸೆಂಬರ್ ಒಂದರಂದು ಹೊರಡಿಸಿರುವ ಬಗರ್ ಹುಕುಂ ಸಮಿತಿ ಸಂಬಂಧದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬಾರ್ ಕೋಡ್ ಮತ್ತು “ಇ” ಸಾಗುವಳಿ ಚೀಟಿ
ಈ ಬಾರಿ ಮಂಜೂರಿಯಾಗುವ ಭೂಮಿಯ ಅರ್ಜಿದಾರನಿಗೆ ನೀಡುವ ಸಾಗುವಳಿ ಚೀಟಿಗೆ ಇ ಸಾಗುವಳಿ ಚೀಟಿ ನೀಡುವುದು ಹಾಗೂ ಬಾರ್ ಕೋಡ್ ಹಾಗೂ ಸಮಿತಿಯ ನಡವಳಿಗಳೆಲ್ಲವನ್ನೂ ಆನ್ ಲೈನ್ ನಲ್ಲಿ ದಾಖಲಿಸುವದರಿಂದ ಇಡೀ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣವಾಗುವ ಮೂಲಕ ಪಾರದರ್ಶಕವಾಗಲಿದೆ.
ಈ ಹಿಂದಿನ ಭೂ ಮಂಜೂರಾತಿ ಪ್ರಕ್ರಿಯೆಗಳಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿದ್ದ ಕಾರಣ ಮಂಜೂರಿ ಭೂಮಿಯನ್ನು ದುರಸ್ತಿ ಮಾಡಲೂ ಸಾಧ್ಯವಾಗಿಲ್ಲ. ಇದರಿಂದ ಸುಮಾರು ನಲವತ್ತು ವರ್ಷಗಳ ಹಿಂದಿನ ಮಂಜೂರಿ ಭೂಮಿಗಳು ದುರಸ್ತಿ ಕಾಣದ ಪ್ರಕರಣಗಳಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಸ್ತುತ ಭೂ ಮಂಜೂರಾತಿ ಸಮಿತಿ, ಪ್ರಕ್ರಿಯೆಗಳಿಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಮಾಡಿ ಸಮಸ್ಯೆ ಮುಕ್ತ ಮಾಡಲು ಸರ್ಕಾರ ಪಣತೊಟ್ಟಿರುವುದು ಅರ್ಹ ರೈತರಿಗೆ ವರದಾನವೇ ಸರಿ.
ಬಗರ್ ಹುಕುಂ ತತ್ರಾಂಶ
ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿರುವವರು ಅರ್ಜಿ ಸಲ್ಲಿಸಿದ ದಿನಾಂಕಕ್ಕೆ ಸರ್ಕಾರಿ ಭೂಮಿಯಲ್ಲಿ ಹದಿನೈದಯ ವರ್ಷ ಸಾಗುವಳಿ ಮಾಡಿರಬೇಕೆಂಬುದು ನಿಯಮ. ಅರ್ಜಿದಾರ ರೈತ ಹದಿನೈದಕ್ಕೂ ಹೆಚ್ವು ವರ್ಷ ಸಾಗುವಳಿ ಮಾಡಿದ್ದಾನೋ? ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಬಗರ್ ಹುಕುಂ ಎಂಬ ತತ್ರಾಂಶ ರೂಪಿಸಲಾಗಿದೆ.
ಇದರಿಂದ ಹದಿನೈದು ವರ್ಷಗಳ ಹಿಂದಿನ ಉದ್ದೇಶಿತ ಭೂಮಿಯ ಫೋಟೋಗಳನ್ನ ವೀಕ್ಷಿಸಿ ಮಂಜೂರಿಗೆ ಅರ್ಹನಿದ್ದಾನೆಯೇ? ಇಲ್ಲವೋ? ಎಂಬುದನ್ನು ಸಮಿತಿ ತೀರ್ಮಾನಿಸುತ್ತದೆ.
ದುರಸ್ತಿ ಕಾರ್ಯ ಸರಳೀಕರಣಕ್ಕೆ ಮುನ್ನುಡಿ
…………..
ಭೂ ಮಂಜೂರಾತಿ ಸಮಿತಿಯಿಂದ ಭೂಮಿ ಮಂಜೂರಾಗಿ ಐವತ್ತು ವರ್ಷಗಳಾಗಿದ್ದರೂ ಕೆಲ ಪ್ರಕರಣಗಳಲ್ಲಿ ಮಂಜೂರಿ ಜಮೀನು ದುರಸ್ತಿಯಾಗಿರುವುದಿಲ್ಲ. ಈ ಪ್ರಕ್ರಿಯೆಗೆ ನಮೂನೆ 1 ರಿಂದ 5 ಹಾಗೂ 6 ರಿಂದ 8 ಭರ್ತಿ ಮಾಡಿ ಪರಿಶೀಲನೆ ಕಾರ್ಯ ಸುದೀರ್ಘವಾದ ಪ್ರಕ್ರಿಯೆಯಾಗಿದ್ದು ಸಿದ್ದಪಡಿಸಿದ ಕಡತಗಳಲ್ಲಿ ಆದೇಶವಾಗುವುದು ಎರಡೋ,ಮೂರೋ ಮಾತ್ರ. ಈ ಸಮಸ್ಯೆಗೆ ಮುಕ್ತಿ ಹಾಡಲು ಮಂಜೂರಿ ಸಮಯದಲ್ಲಿಯೇ ದುರಸ್ತಿ ಕಾರ್ಯವನ್ನೂ ಮುಗಿಸಿ ಅದೇ ಸಮಯದಲ್ಲಿ ಪೋಡಿ ಮಾಡುವ ಉದ್ದೇಶ ಹೊಂದಿರುವ ಸಚಿವ ಕೃಷ್ಞಭೈರೇಗೌಡರ ನಿಲುವು ಮೆಚ್ಚುವಂತದ್ದು.