ಮಹಿಳೆಯರನ್ನು ಸಾರ್ವಜನಿಕವಾಗಿ ನಗ್ನಗೊಳಿಸುವ ಕೃತ್ಯಗಳಿಗೆ ತಡೆ ಹಾಕುವ ಹಿನ್ನೆಲೆಯಲ್ಲಿ ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಸಿಎಂ ನೇತೃತ್ವದಲ್ಲಿ ಚರ್ಚೆ ನಡೆಯಿತು.
ಗುರುವಾರ ನಡೆದ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಮಹಿಳೆಯರ ನಗ್ನತೆ ಪ್ರಕರಣಗಳ ಬಗ್ಗೆ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಠಿಣ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ, ಗಲ್ಲು ಶಿಕ್ಷೆ ನೀಡುವ ಕಾನೂನು ಜಾರಿಗೆ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ. ಎಲ್ಲಾ ಪಕ್ಷದವರು ಸಹಕಾರ ಕೊಡಬೇಕು ಎಂದು ಕೋರಿದರು.
ಸದನದಲ್ಲಿ ಮಸೂದೆಯನ್ನು ಮಂಡಿಸಿದ ಕಾನೂನು ಸಚಿವರು, ಮಹಿಳೆಯರನ್ನು ಪೂರ್ತಿಯಾಗಿ ನಗ್ನಗೊಳಿಸುವುದು, ಅರೆ ನಗ್ನಗೊಳಿಸುವುದನ್ನು ಸೇರಿಸಲಾಗಿದೆ. ಸಾರ್ವಜನಿಕವಾಗಿ ಎಂಬುದನ್ನು ಮಹಿಳೆಯ ಏಕಾಂತದಲ್ಲಿ, ನಿರ್ಜನ ಪ್ರದೇಶದಲ್ಲಿ ನಗ್ನ ಗೊಳಿಸುವುದನ್ನು ಸಾರ್ವಜನಿಕವಾಗಿ ನಗ್ನಗೊಳಿಸಲಾಗುವುದು ಎಂದೇ ಮಸೂದೆ ವ್ಯಾಖ್ಯಾನಿಸುತ್ತದೆ. ಆರೋಪಿಗಳಿಗೆ ಜೀವಂತ ಪರ್ಯಂತ ಜೈಲು ಶಿಕ್ಷೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

– ಹೀಗೆ ಹೊಸ ಮಸೂದೆಯ ಚರ್ಚೆ ನಡೆದಿದ್ದು ಗುರುವಾರ ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಣುಕು ವಿಧಾನಸಭಾ ಅಧಿವೇಶನದಲ್ಲಿ.
ಮುಖ್ಯಮಂತ್ರಿಯಾಗಿ ಅಭಿನಯಿಸಿದ ವಿದ್ಯಾರ್ಥಿ ಶಶಿಕುಮಾರ ನಾಯಕ್, ಅವರು ಮಹಿಳೆಯರ ಸುರಕ್ಷತೆ, ಹೊಸ ಕಾಯ್ದೆಯ ಬಗ್ಗೆ ಅದ್ಬುತವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿದರು. ಕಾನೂನು ಸಚಿವರಾಗಿದ್ದ ವಿದ್ಯಾರ್ಥಿ ನರಸಿಂಹರಾಜು ಹೊಸ ಮಸೂದೆ ಮಂಡಿಸಿದರು.
ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಿವಲಿಂಗಮ್ಮ , ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಉಲ್ಲೇಖಿಸಿದ ಅವರು, ಮಹಿಳೆಯರ ರಕ್ಷಣೆಗೆ ಸರ್ಕಾರ ತೆಗೆದುಕೊಂಡಿರುವ ಹಲವು ಕ್ರಮಗಳ ಕುರಿತು ವಿವರಿಸಿದರು. ಸಚಿವೆಯ ದಿಟ್ಟ ಮಾತುಗಳಿಗೆ, ತೆಗೆದುಕೊಂಡಿರುವ ಕ್ರಮಗಳ ವಾಕ್ ಲಹರಿಗೆ ಶಾಸಕರು ತಲೆ ದೂಗಿದರು.
ವಿರೋಧ ಪಕ್ಷದ ನಾಯಕ, ಹರ್ಷವರ್ಧನ್ ಮಾತನಾಡಿ, ಶಿಕ್ಷೆಯ ಪ್ರಮಾಣ ಹದಿನಾಲ್ಕು ವರ್ಷ ಸಾಕಾಗುವುದಿಲ್ಲ. 20 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ರಮೇಶ್, ಪ್ರಾಧ್ಯಾಪಕರಾದ ಖಾಶಿಪ್ ಅಹಮದ್ ಅವರು ಮಸೂದೆ ರಚನೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಿದ್ದರು.
ಉಪ ಪ್ರಾಂಶುಪಾಲರಾದ ಒಬಣ್ಣ, ಪ್ರಾಧ್ಯಾಪಕರಾದ ಮಮತಾ, ಗೌರಿಶಂಕರ್, ರೇಣುಕಾ, ತರಣಮ್, ಪುರುಷೋತ್ತಮ, ಶ್ರೀನಿವಾಸ್, ಶ್ವೇತಾ ಇದ್ದರು.