Thursday, March 12, 2026
Google search engine
Home Blog Page 44

ಏ.30: ತುಮಕೂರಲ್ಲಿ ಪ್ರಜಾಪ್ರಭುತ್ವದ ಹಬ್ಬ

ತುಮಕೂರು: ಮತದಾರರಲ್ಲಿ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಏಪ್ರಿಲ್ ೩೦ರಂದು ಬೆಳಿಗ್ಗೆ ೮ ಗಂಟೆಗೆ ಜಿಲ್ಲೆಯಾದ್ಯಂತ ಆಯೋಜಿಸಲಾಗುವುದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ಪ್ರಸ್ತುತ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದ್ದು, ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಏಪ್ರಿಲ್ 3೦ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಒಂದೇ ರೀತಿಯ ’ಪ್ರಜಾಪ್ರಭುತ್ವದ ಹಬ್ಬ ’ಮೇ 10 ಮತದಾನ’ ಎಂಬ ಧ್ಯೇಯ ಒಳಗೊಂಡಿರುವ ಬಾವುಟವನ್ನು ಸಿದ್ಧಪಡಿಸಿ ಪ್ರತಿ ಮತಗಟ್ಟೆಗಳಿರುವ ಪ್ರದೇಶಾವಾರು ಧ್ವಜಾರೋಹಣವನ್ನು ನೆರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮತದಾರರನ್ನು ಸೆಳೆಯಲು ಸ್ಥಳೀಯ ಜನಪದ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾಲ್ನಡಿಗೆ ಜಾಥಾ ಸೇರಿದಂತೆ ಚುನಾವಣಾ ವಿಷಯಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪ್ರೇರಿತ ಅಥವಾ ಸಂಬಂಧಿತ ವ್ಯಕ್ತಿಗಳು ಭಾಗವಹಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.
ಒಂದು ಗಂಟೆಗೆ ಕಡಿಮೆ ಇಲ್ಲದಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಒಟ್ಟಾರೆ ಪ್ರತಿ ಮತಗಟ್ಟೆಯನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಭಾರತ ಚುನಾವಣಾ ಆಯೋಗ ಈ ವರ್ಷ ಬಿಡುಗಡೆ ಮಾಡಿರುವ ಚುನಾವಣಾ ಗೀತೆಯನ್ನು ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ 2018 ರಲ್ಲಿ ಬಿಡುಗಡೆ ಮಾಡಿರುವ ಚುನಾವಣಾ ಗೀತೆಗಳನ್ನು ಬಳಸಬಹುದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಬಿತ್ತಿಪತ್ರಗಳ ವಿತರಣೆ, ಎಲ್ಇಡಿ ವಾಹನಗಳ ಮೂಲಕ ಜಾಗೃತಿ, ಮತದಾನದ ಮಹತ್ವ ಕುರಿತು ಬೀದಿ ನಾಟಕ, ಜಾನಪದ ಕಲೆಗಳ ಮೂಲಕ ಮತದಾರರ ಜಾಗೃತಿ, ಸೈಕಲ್, ದ್ವಿಚಕ್ರ ವಾಹನ ಮತ್ತು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವುದು, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಕುರಿತು ಮಾಹಿತಿ, ಭಾರತ ಚುನಾವಣಾ ಆಯೋಗ ನೈತಿಕ ಚುನಾವಣೆ ನಡೆಸಲು ಮತದಾರರಿಗಾಗಿ ಹೊರ ತಂದಿರುವ ಸಿವಿಜಿಲ್, ಕೆವೈಸಿ, ಚುನಾವಣಾ ಸಕ್ಷಮ್ ಆಪ್ಗಳು ಸೇರಿದಂತೆ ಸಹಾಯವಾಣಿ 1950 ರ ಬಗ್ಗೆ ಪ್ರಚುರಪಡಿಸಬೇಕು. ನಿಮ್ಮ ಮತಗಟ್ಟೆ ಎಲ್ಲಿದೇ ಎಂದು ತಿಳಿದುಕೊಳ್ಳಿ ಮತ್ತು ಮೇ 10 ರಂದು ತಪ್ಪದೇ ಮತದಾನ ಮಾಡಿ ಎನ್ನುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಡಾ.ಜಿ‌ ಪರಮೇಶ್ವರ್ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು; ಪೆಟ್ಟು

0

ತುಮಕೂರು: ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು,ತಲೆಗೆ ತೀವ್ರ ಪೆಟ್ಟು ಬಿದ್ದಿದೆ.

Advertise

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೈರೇನಹಳ್ಳಿ ಗ್ರಾಮದಲ್ಲಿ ಚುನಾವಣ ಪ್ರಚಾರದಲ್ಲಿ ತೋಡಗಿರುವಾಗ ಕಿಡಿಗೇಡಿಗಳು ಕಲ್ಲು ಎಸೆದ ಪರಿಣಾಮ ತಲೇಗೆ ತೀವ್ರ ಪೆಟ್ಟು ಬಿದ್ದಿದೆ. ತಕ್ಷಣ ಕಾರ್ಯಕರ್ತರು ಅಕ್ಕಿರಾಂಪುರ ಗ್ರಾಮದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಕಾರ್ಯಕರ್ತರು ಪರಮೇಶ್ವರ್ ಅವರನ್ನು ಎತ್ತಿ ಕುಣಿಸುತ್ತಿದ್ದ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಕಿಡಿಗೇಡಿಗಳು ಕಲ್ಲು ಬೀಸಿದ್ದಾರೆ. ತಲೆಗೆ ಕಲ್ಲು ಬಿದ್ದ ತಕ್ಷಣ ತಲೆ ಭಾಗ ಹಿಡಿದು ಕೆಳಗಿಳಿದ ಪರಮೇಶ್ವರ್ ಅವರನ್ನು ಅಕ್ಕಿರಾಂಪುರ ಆಸ್ಪತ್ರೆಗೆ ಕರೆದೊಯ್ದು,ನಂತರ ಸಿದ್ಧಾರ್ಥ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾವಗಡಕ್ಕೆ ಬೇಕು ಡಬ್ಬಲ್ ಎಂಜಿನ್ ಸರ್ಕಾರ

ಪಾವಗಡ: ಡಬ್ಬಲ್ ಇಂಜಿನ್ ಸರ್ಕಾರ ರಚಿಸಲು ಈ ಭಾಗದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೃಷ್ಣ ನಾಯ್ಕ್ ಗೆ ಮತವನ್ನು ಕೊಟ್ಟು ಗೆಲ್ಲಿಸಿ ಎಂದು ಕ್ಷೇತ್ರದ ಜನತೆಗೆ ಮನವಿ ಮಾಡಿದ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ ಸತ್ಯ ಕುಮಾರ್ ಯಾದವ್ ಮನವಿ ಮಾಡಿದರು.

ಬುದುವಾರ ಪಟ್ಟಣದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಡಬಲ್ ಇಂಜಿನ್ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ್ ರವರಿಗೆ ಮತ ಕೊಟ್ಟು ಗೆಲ್ಲಿಸಿದರೆ ತ್ರಿಬಲ್ ಇಂಜಿನ್ ಸರ್ಕಾರ ರಚಿಸಬಹುದು ನೀವು ಮತ ಕೊಟ್ಟು ಗೆಲ್ಲಿಸಿ ಎಂದು ಕೇಳಿದರು.

ಮೋದಿ ಸರ್ಕಾರ ಬಂದ ನಂತರ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರಗಳಲ್ಲಿ ನಮ್ಮ ಭಾರತ 5ನೇ ಸ್ಥಾನ ಪಡೆದಿದೆ ಈ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಬಡವರ ವಸತಿ ಯೋಜನೆಗೋಸ್ಕರ 3 ಕೋಟಿ 55 ಲಕ್ಷ ರೂ ನಿರ್ಮಾಣ ಮಾಡಿದೆ. ಅದಕ್ಕೋಸ್ಕರ 8 ಲಕ್ಷ ಕೋಟಿ ರೂ ಖರ್ಚು ಮಾಡಿದೆ.ಕರ್ನಾಟಕದಲ್ಲಿ 7,ಲಕ್ಷ 10 ಸಾವಿರರೂ ಬಡವರ ವಸತಿ ಯೋಜನೆ ನಿರ್ಮಾಣಕ್ಕೆ ಮುಂದಾಗಿದೆ.

ಮುದ್ರಾ ಯೋಜನೆ ಮುಖಾಂತರ ಒಂದು ಕೋಟಿ ಆರು ಲಕ್ಷ ಮಂದಿ ಯುವ ಜನತೆಗೆ ಮುದ್ರಾ ಸಾಲ ನೀಡಿ 76,000 ಸಾವಿರ ಕೋಟಿ ರೂ ಮಂಜೂರು ಮಾಡಿದೆ. ಒಂದು ಕೋಟಿ ಆರು ಲಕ್ಷ ಯುವಜನತೆ ಮುದ್ರಾ ಯೋಜನೆಯಲ್ಲಿ ಸಾಲ ಪಡೆದವರು ಸ್ವಯಾರ್ಜಿತವಾಗಿ ಜೀವನ ನಡೆಸುತ್ತಿದ್ದಾರೆ.

ಸೌಭಾಗ್ಯ ಯೋಜನೆ ಮುಖಾಂತರ ಪ್ರತಿ ಮನೆಗೆ ವಿದ್ಯುತ್ ನೀಡಿದ್ದು ನಮ್ಮ ಮೋದಿ ಸರ್ಕಾರ ಅದನ್ನು ಅರಿಯಬೇಕು ಬಡ ಜನತೆ ಎಂದು ವಿದ್ಯುತ್ ಯೋಜನೆ ಬಗ್ಗೆ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಂತಹ ಕಾಲದಲ್ಲಿ ರೈಲ್ವೆ ಯೋಜನೆಗೆ ಒಂದು ವರ್ಷಕ್ಕೆ ಕೇವಲ ಎಂಟುನೂರ 34 ಕೋಟಿ ರೂ ಖರ್ಚು ಮಾಡುತ್ತಿದ್ದ ಅಂತಹ ಸಮಯದಲ್ಲಿ ಮೋದಿ ಸರ್ಕಾರ ಬಂದ ನಂತರ ಪ್ರತಿ ವರ್ಷ ಮೂರು ಸಾವಿರದ ನಾಲ್ಕು ನೂರ 64 ಕೋಟಿ ರೂಗಳು ರೈಲ್ವೆ ನಿರ್ಮಾಣಕ್ಕಾಗಿ ಖರ್ಚು ಮಾಡುತ್ತಿದೆ. ರೈಲ್ವೆ ಯೋಜನೆಗಳಿಗೆ ಖರ್ಚು ಮಾಡಿದ ವಿವರಗಳನ್ನು ಹೇಳಿದರು.

ಹಾಗಾಗಿ ಈ ತಾಲೂಕು ಹಿಂದುಳಿದಿದೆ ಅಭಿವೃದ್ಧಿಗೋಸ್ಕರ ಈ ಕ್ಷೇತ್ರದ ಬಿಜೆಪಿ ಎಂಎಲ್ಎ ಇದ್ರೆ ಇನ್ನಷ್ಟು ಅಭಿವೃದ್ಧಿಯ ನಡೆಯುತ್ತದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುವ ಮುಖಾಂತರ ಅಭಿವೃದ್ಧಿ ಆಗಲು ಸಾಧ್ಯ ಇಲ್ಲದಿದ್ದರೆ ಇನ್ನೂ ಹಿಂದೆ ಉಳಿಯುತ್ತದೆ ಎಂದು ಸತ್ಯಕುಮಾರ ಯಾದವ್ ಕ್ಷೇತ್ರದ ಜನತೆಗೆ ವಿವರಿಸಿದರು .

ಈ ಸಂದರ್ಭದಲ್ಲಿ ಗಜೇಂದ್ರ. ರವಿ ಶಂಕರ್ ನಾಯ್ಕ್. .ಸತ್ಯ ಸಾಯಿ ಜಿಲ್ಲಾ ಅಧ್ಯಕ್ಷರು ವಜ್ರ ಭಾಸ್ಕರ್ ರೆಡ್ಡಿ. ಕೃಷ್ಣಮೂರ್ತಿ. ಮುಖಂಡರಾದ ಕಡಪಲಕೆರೆ ನವೀನ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

JDS ಗೆ ಮಾಜಿ ಶಾಸಕ ಷಫಿ ಅಹಮದ್

0

ತುಮಕೂರು: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಷಫಿ ಅಹ್ಮದ್ ಹಾಗೂ ಅವರ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ತಿಳಿಸಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಆಶೋಕ ರಸ್ತೆಯಲ್ಲಿನ ಜೆಡಿಎಸ್ ಕಛೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಸಮ್ಮುಖದಲ್ಲಿ ಷಪಿ ಅಹ್ಮದ್ ಹಾಗೂ ಅವರ ಬೆಂಬಲಿಗರು ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆ ಗೊಳ್ಳಲಿದ್ದಾರೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ, ತಿಪ್ಪೇಸ್ವಾಮಿ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹನ್ನೊಂದು ಕ್ಷೇತ್ರದಲ್ಲಿಯೂ ಸಹ ಜೆಡಿಎಸ್ ಗೆ ಉತ್ತಮ ವಾತಾವರಣ ವಿದೆ. 9 ರಿಂದ 10 ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದೇವೆ ಎಂದರು.

ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಗೋವಿಂದ ರಾಜ್ ಮಾತನಾಡಿ, ಷಫಿ ಅಹ್ಮದ್ ಹಾಗೂ ಅವರ ಅಪಾರ ಬೆಂಬಲಿಗರು ಜೆಡಿಎಸ್ ಗೆ ಸೇರ್ಪಡೆ ಗೊಳ್ಳುತ್ತಿರುವುದರಿಂದ ಜೆಡಿಎಸ್ ಗೆ ಅನೆ ಬಲ ಬಂದತ್ತಿದೆ. ಅವರ ಕುಟುಂಬದಲ್ಲೇ ಒಂದೂವರೆ ಸಾವಿರದಷ್ಷು ಜನ ಇದ್ದಾರೆ. ಅವರ ಎಲ್ಲಾ ಮತಗಳೂ ಒಳಗೊಂಡತೆ ಬೆಂಬಲಿಗರ ಮತಗಳು ಜೆಡಿಎಸ್ ತೆಕ್ಕೆಗೆ ಬಿಳಲಿದೆ ಎಂದರು.

ಚುನಾವಣೆ ಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ವಲಸೆ ಬರುವುದು ಸಹಜ. ಅದರಂತೆ ಅಸಮಾಧಾನಿತರನ್ನು ಸಮಾಧಾನ ಗೊಳಿಸುವುದು ಕಷ್ಟದ ಕೆಲಸ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಮತ ಹಾಕುವ ಮುನ್ನ ಈ ಹಸಿವಿನ ಕಥನ ಓದಿ

ನಾನು ತುಂಬಾ ದಿನಗಳಿಂದಲೂ ಈ ವಿಷಯದ ಬಗ್ಗೆ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಬರೆಯಲು ಆಗಲಿಲ್ಲ. ನಾನು ಯಾವುದೇ ಪಕ್ಷದ ಏಜೆಂಟ್ ಅಲ್ಲ ಮತ್ತು ನನಗೂ ರಾಜಕೀಯಕ್ಕೂ ತುಂಬಾ ದೂರ. ಒಮ್ಮೊಮ್ಮೆ ಕೆಲವು ರಾಜಕಾರಣಿಗಳು ನನಗೆ ಯಮಲೋಕದಿಂದ ಭಾವನೆಗಳಿಲ್ಲದೆ ಇಳಿದು ಬಂದ ಯಮಧೂತರಂತೆ ಕಾಣುತ್ತಾರೆ. ಆದ್ದರಿಂದ ರಾಜಕೀಯಕ್ಕೂ ನನಗೂ ಅಷ್ಟು ನಂಟಿಲ್ಲ. ಆದರೆ ಪ್ರತಿ ಬಾರಿಯೂ ಉತ್ತಮ ನಾಯಕರನ್ನು ಆರಿಸಲು ನನ್ನ ಮತವನ್ನು ಚಲಾಯಿಸುತ್ತೇನೆ.

ಇಂದು ನಾನು ಇಲ್ಲಿ ಹೇಳೋದಕ್ಕೆ ಹೊರಟಿರುವುದು ಹಸಿವು ಮತ್ತು ಬಡತನದ ಬಗ್ಗೆ ಅಷ್ಟೇ ಮತ್ತೆ ಇದಕ್ಕೆ ರಾಜಕೀಯ ಲೇಪನ ಮಾಡುವುದು ಬೇಡ ಎನ್ನುವುದೇ ನನ್ನ ವಿನಂತಿ.

ನಾನು ತುಮಕೂರು ಜಿಲ್ಲೆಯ ಶಿರಾ ದಿಂದ ಸುಮಾರು 27 ಕಿ. ಮೀ ದೂರವಿರುವ ಹೊಸೂರು ಎಂಬ ಸೇವಾ ವಂಚಿತ ಊರಿನಲ್ಲಿ ಹುಟ್ಟಿದ್ದು, ನಾನು ಹುಟ್ಟಿದ್ದು 20ನೇ ಶತಮಾನದ ಕೊನೆಯಲ್ಲಿ ಆದರೂ ಜೀವನವೆಲ್ಲವೂ ಕಟ್ಟಿಕೊಂಡಿದ್ದು 21ನೇ ಶತಮಾನದಲ್ಲಿಯೇ, ನಮ್ಮದು ತುಂಬಾ ಬಡಕುಟುಂಬ ಒಮ್ಮೊಮ್ಮೆ ಊಟವಿಲ್ಲದೆ ಮೇಲ್ವರ್ಗದವರ ತಿಥಿ ಮತ್ತು ಮದುವೆಗಳಲ್ಲಿ ಉಳಿದ ಊಟ ತಿಂದು ಬಂದು ಮಲಗುತ್ತಿದ್ದುದೂ ಎಷ್ಟೋ ಉದಾಹರಣೆಗಳು ಇವೆ.

ಒಮ್ಮೆ ನಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ರಾಗಿ ಮತ್ತು ಅಕ್ಕಿ ಒಟ್ಟಿಗೆ ಖಾಲಿಯಾಗಿತ್ತು.ಅಪ್ಪ ಅವೆಲ್ಲವನ್ನು ತರಲು ಅಶಕ್ತನಾಗಿದ್ದ ಅಜ್ಜಿ ಮತ್ತು ಅಮ್ಮ ಎಲ್ಲರ ಮನೆಗಳಲ್ಲಿಯೂ ಬಟ್ಟಲಿನಲ್ಲಿ ಅಕ್ಕಿ ಮತ್ತು ರಾಗಿಹಿಟ್ಟನ್ನು ಸಾಲ ಮಾಡಿದ್ದಳು, ಮತ್ತೆ ಮತ್ತೆ ಹೋಗಿ ಬೇರೆಯವರನ್ನು ಸಾಲ ಕೇಳಲು ಅವರಿಬ್ಬರಿಗೂ ತಮ್ಮ ಸ್ವಾಭಿಮಾನ ಹಿಂದೆ ಎಳೆಯುತ್ತಿತ್ತು.

ನಮ್ಮ ಕುಟುಂಬದಲ್ಲಿ ಅತಿಯಾಗಿ ಊಟ ಮಾಡುತ್ತಿದ್ದವನೆಂದರೆ ನಾನೊಬ್ಬನೇ ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಪಾತ್ರೆ ಪೂರ್ತಿ ಖಾಲಿ ಮಾಡಿಬಿಡುತ್ತಿದ್ದೆ. ನನಗೂ ನನ್ನ ತಮ್ಮನಿಗೆ ಮನೆಯಲ್ಲಿ ಊಟಕ್ಕಾಗಿ ಆಗಾಗ ಮಹಾಯುದ್ಧ ನಡೆಯುತ್ತಿತ್ತು. ಮನೆಯಲ್ಲಿ ಹಿಟ್ಟು ಖಾಲಿಯಾದಾಗ ಕೆಲವು ರಾತ್ರಿಗಳು ನಮ್ಮ ಮನೆಯಲ್ಲಿ ನಮ್ಮ ಊರಿನ ಬೋರಿನ ನೀರು ನಮ್ಮ ಆಹಾರವಾಗಿರುತ್ತಿತ್ತು. ಅಂದು ಅಪ್ಪ ಯಾಕಾದರೂ ಬೆಳಿಗ್ಗೆಯಾಗುತ್ತೋ ಎಂದು ಗುನುಗಿ ನಿದ್ರೆಗೆ ಜಾರಿದರು, ಅಮ್ಮ ನಮ್ಮನ್ನು ದಿಟ್ಟಿಸಿ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಮಲಗಿದಳು, ಅಜ್ಜಿ ದೇವರೇ ಯಾಕಪ್ಪ ಇಂತ ಕಷ್ಟ ಕೊಟ್ಟೆ ಅಂತ ದೇವರಿಗೆ ಹಿಡಿ ಶಾಪ ಹಾಕುತ್ತಾ ನಿದ್ರಿಸಲು ಮುಂದಾದಳು. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಯಾರ ಸಾಂತ್ವನವೂ ಅಲ್ಲ ಒಂದು ತುತ್ತು ಅನ್ನ ಮಾತ್ರ ಆದ್ರೆ ಅದೇ ಇರಲಿಲ್ಲ.


ಬೆಳಗ್ಗೆ ಎದ್ದಾಗ ಅಮ್ಮ ಒಲೆಯಲ್ಲಿ ಸೌದೆ ಹಾಕಿ ಮನೆ ತುಂಬಾ ಹೊಗೆ ಎಬ್ಬಿಸಿದ್ದಳು, ನಾನು ಮಲಗಿಕೊಂಡೆ ಮೃಷ್ಟಾನ್ನ ಭೋಜನದ ಕನಸು ಕಾಣುತ್ತಿದ್ದೆ ಎದ್ದು ನೋಡಿದರೆ ಓಲೆ ಹೊತ್ತಿಸಿದ್ದಳು. ಹಾಳು ಮುಖದಲ್ಲಿ ಎದ್ದು ಬಂದವನೇ ಅಮ್ಮನನ್ನು ಕೇಳಿದಾಗ, ಬೇರೆಯವರು ನಮ್ಮ ಮನೆಯಲ್ಲಿ ಅಡುಗೆ ಮಾಡಿಲ್ಲ ಅಂತ ಗೊತ್ತಾಗಬಾರದು ಅಂತ ಒಲೆ ಹೊತ್ತಿಸಿದ್ದೇನೆ ನಿಮ್ಮಪ್ಪ ಊರೋರ ಹತ್ತಿರ ಸಾಲ ಕೇಳೋಕೆ ಹೋಗಿದಾರೆ ಒಂದು ಕೆ ಜಿ ಅಕ್ಕಿ ತಗೊಂಡ್ ಬರ್ತಾರೆ ಇರು ಅನ್ನ ಮಾಡೋಣ ಅಂದಳು. ಆಗಲೇ ನಿರಾಸೆಯಿಂದ ದುಃಖ ಒತ್ತರಿಸಿ ಬಂತು

ಆಗಲೇ ಅಳಲು ಶುರು ಮಾಡಿದೆ ರಾತ್ರಿನೂ ಊಟ ಇಲ್ಲ ಈಗಲೂ ಇಲ್ಲ ನನಗೆ ಹೊಟ್ಟೆ ಹಸೀತಿದೆ ಏನಾದ್ರೂ ಕೊಡಮ್ಮ ಅಂತ ಜೋರಾಗಿ ಅಳಲು ಶುರು ಮಾಡಿದೆ. ನನ್ನೊಡನೆ ನನ್ನ ತಮ್ಮನೂ ಅಳಲು ಶುರು ಮಾಡಿದ. ಅಮ್ಮ ಮತ್ತು ಅಜ್ಜಿ ಇಬ್ಬರನ್ನು ಸಂತೈಸಲು ವಿಫಲರಾಗಿ ಅವರ ಕಣ್ಣುಗಳು ತೇವಗೊಂಡವು. ಅಪ್ಪ ಊರಿನಿಂದ ಸಪ್ಪೆ ಮೊರೆ ಹಾಕಿಕೊಂಡು ಸಾಲ ಸಿಗದೇ ಬರಿ ಕೈನಲ್ಲಿ ವಾಪಸ್ಸಾಗಿದ್ದನ್ನು ನೋಡಿ ನನಗೆ ಇನ್ನು ಅಳು ಜಾಸ್ತಿಯಾಯಿತು.


ನನಗೆ ಇನ್ನೂ ಚೆನ್ನಾಗಿ ನೆನಪಿದೆ ಅವತ್ತು ಭಾನುವಾರ ನಮ್ಮೂರಿನಲ್ಲಿ ಮೇಲ್ವರ್ಗದವರ ಒಂದು ದೊಡ್ಡ ವಿವಾಹವಿತ್ತು ಅವರ ಮನೆಕಡೆಯಿಂದ ಗಾಳಿ ಬೀಸಿದಾಗ ನನ್ನ ಹಸಿವೂ ಇನ್ನೂ ಜಾಸ್ತಿಯಾಗುತ್ತಿತ್ತು ಕೊನೆಗೆ ನನ್ನ ಹಸಿವಿನ ಕಟ್ಟೆಯೊಡೆದು ಮದುವೆಯ ಮನೆ ಕಡೆ ಓಡಿದೆ ಅಲ್ಲಿ ನೋಡಿದರೆ ಮುಹೂರ್ತ ಆಗೋವರೆಗೂ ಊಟ ಹಾಕೋದಿಲ್ಲ ಅಂತ ಹೇಳ್ಬಿಟ್ರು. ಅಲ್ಲೆಯೇ ನಿಂತು ಬೇಗ ಟೈಮ್ ಆಗ್ಲಪ್ಪ ದೇವರೇ ಅಂತ ಬೇಡಿಕೊಳ್ಳಲು ಶುರು ಮಾಡಿದೆ, ಕೊನೆಗೆ ಊಟದ ಸಮಯ ಬಂದೆ ಬಿಟ್ಟಿತು ನಾನು ಆಸೆಯಿಂದ ಮೊದಲನೇ ಪಂಕ್ತಿಯಲ್ಲಿ ಕುಳಿತು ಮಾಸಿದ ಶಾಲಾ ಸಮವಸ್ತ್ರದಲ್ಲಿ ಊಟಕ್ಕಾಗಿ ಬಕಾಸುರನಂತೆ ಕಾಯುತ್ತಿದ್ದೆ. ಹಾಗೆಯೇ ನನ್ನ ಪಕ್ಕದಲ್ಲಿ ಮದುವೆಗೆ ಬಂದ ಬಂಧು ಬಳಗ ಕುಳಿತುಕೊಂಡರು. ಇನ್ನೇನು ಊಟಕ್ಕೆ ಬಾಳೆ ಎಲೆ ಪಡೆಯುವಷ್ಟರಲ್ಲಿ ಮದುವೆ ಮನೆಯವನು ಬಂದು ನೀವು ಕೊನೆ ಪಂಕ್ತಿಯಲ್ಲಿ ತಿನ್ನಬೇಕು ಈಗಲ್ಲ ಎದ್ದೇಳೋ ಮೇಲೆ ಅಂತ ಅವಮಾನಿಸಿ ನನ್ನನ್ನು ಅಲ್ಲಿಂದ ಎಳಿಸಿಯೇ ಬಿಟ್ಟ, ಅವನು ಗದರಿದ ಧ್ವನಿಗೆ ನನ್ನ ಹೃದಯದ ಬಡಿತ ಇನ್ನೂ ಜೋರಾಯಿತು ಅಲ್ಲಿಂದ ಅಳುತ್ತಾ ಹೊರ ನಡೆದೆ.

ಅಂದು ನಾನು ಒಂದು ತುತ್ತು ಅನ್ನಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ನಮಗೆ ಅನ್ನ ತುಂಬಾ ಅಪರೂಪದ ಆಹಾರವಾಗಿತ್ತು.
ಆಗ ತಾನೇ ಸರ್ಕಾರದಿಂದ BPL ಕಾರ್ಡಿನವರಿಗೆ ಅಕ್ಕಿ ಕೊಡ್ತಾರೆ ಅಂತ ನಮ್ಮೂರಿನ ಸೊಸೈಟಿ ಇಂದ ಒಂದು ಅಧಿಸೂಚನೆ ಬಂದಿತ್ತು, ಅಪ್ಪ BPL ಕಾರ್ಡ್ ಮಾಡಿಸಲು ಅವರಿವರ ಕೈ ಕಾಲು ಹಿಡಿದು ಅರ್ಜಿ ಹಾಕಿದಾಗ ನಿಮಗೆ ಜಮೀನು ಜಾಸ್ತಿ ಇದೆ ಅಂತ APL ಕಾರ್ಡ್ ಕೊಟ್ಟುಬಿಟ್ಟರು ಅದಕ್ಕೆ 2 ಲೀಟರ್ ಸೀಮೆ ಎಣ್ಣೆ ಬಿಟ್ಟರೆ ಬೇರೆ ಏನೂ ಕೊಡುತ್ತಿರಲಿಲ್ಲ. ಹೀಗೆ ನಮ್ಮ ಬಾಲ್ಯವನ್ನು ಅನ್ನವಿಲ್ಲದೆ ಅರೆ ಹೊಟ್ಟೆಯಲ್ಲಿ ಕಳೆದೆವು. ನಂತರ ನಾನು 6 ನೇ ತರಗತಿಗೆ ಹೋದಾಗ 1 ರಿಂದ 5 ನೇ ತರಗತಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿದ್ದರು.

ನನ್ನ ತಮ್ಮನಿಗೆ ಮಧ್ಯಾಹ್ನದ ಸಮಯದಲ್ಲಿ ಅನ್ನ ಸಿಗುತ್ತಿತ್ತು ನಾನು ಶಾಲೆಗೆ ಒಂದೇ ಡಬ್ಬಿಯಲ್ಲಿ ಮುದ್ದೆ ಮತ್ತು ಸಾರನ್ನು ಹಾಕಿಕೊಂಡು ಹೋಗುತ್ತಿದ್ದೆ ಇದನ್ನು ನೋಡಿ ನನ್ನ ಸ್ನೇಹಿತರು ಎಷ್ಟೋ ಸಲ ಅಪಹಾಸ್ಯ ಮಾಡುತ್ತಿದ್ದರು. ದಿನ ಕಳೆದಂತೆ ನಾನು ಡಬ್ಬಿ ತರುವುದನ್ನು ನಿಲ್ಲಿಸಿಬಿಟ್ಟೆ.
ನಂತರ ನಾನು ಎಸ್ ಎಸ್ ಎಲ್ ಸಿ ಗೆ ಬಂದಾಗ ಪ್ರೌಢಶಾಲೆಗೂ ಬಿಸಿಯೂಟದ ಯೋಜನೆಯನ್ನು ವಿಸ್ತರಿಸಿದರು ಆಗ ನಾನು ಪ್ರತಿ ನಿತ್ಯವೂ ಶಾಲೆಯಲ್ಲಿ ಬೆಳಿಗ್ಗೆಯದು ಮತ್ತು ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮಾಡುತ್ತಿದ್ದೆ. ಅಪ್ಪ ಆಗ ತಾನೇ ನಮ್ಮೂರಿನ ಸಾಹುಕಾರರ ಜಮೀನನ್ನು ಕೋರಿ ಪಡೆದು ಗದ್ದೆ ಮಾಡಿ ಭತ್ತ ಬೆಳೆಯಲು ಶುರು ಮಾಡಿದ್ದರು ಶ್ರಮವಹಿಸಿ ಭತ್ತ ಬೆಳೆಯುತ್ತಿದ್ದರು, ಆದರೆ ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಅವು ಎರಡರಿಂದ ಮೂರೂ ತಿಂಗಳಿಗೆ ಖಾಲಿಯಾಗುತ್ತಿದ್ದವು ಮರಳಿ ನಾವು ಅದೇ ಸ್ಥಿತಿಗೆ ಬರುತ್ತಿದ್ದೆವು. ವರ್ಷವಿಡೀ ನಮ್ಮ ಮನೆಯಲ್ಲಿ ಅದೇ ಬಡತನ ಮತ್ತು ಹಸಿವಿನ ನರ್ತನವಾಗುತ್ತಿತ್ತು.
ನಾನು ಪದವಿಗೆ ಬಂದಾಗ ನನ್ನ ವಿದ್ಯಾಭಾಸ ಮಾಡಿಸಲು ಅಪ್ಪನು ಒದ್ದಾಡುತ್ತಿದ್ದರು ಪ್ರತಿನಿತ್ಯವೂ ಬಸ್ ಚಾರ್ಜಿಗೆ ಅಪ್ಪನನ್ನು ತಿಗಣೆ ರಕ್ತ ಹೀರುವಂತೆ ಪೀಡಿಸುತ್ತಿದ್ದೆ ಆ ಸಮಯದಲ್ಲಿ ಹಬ್ಬಗಳೇನಾದರೂ ಬಂದರೆ ಅಪ್ಪ ಹಬ್ಬಗಳಿಗೆ ಶಾಪ ಹಾಕುತ್ತಿದ್ದರು, ಯಾಕಾದರೂ ಈ ಹಬ್ಬಗಳು ಬರುತ್ತವೋ ಅಂತ. ನಾನು ಪದವಿಗೆ ಬಂದಾಗ ಸುಮಾರು 2013 ನೇ ಇಸವಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ನಂತರ ಅನ್ನ ಭಾಗ್ಯ ಎಂಬ ಯೋಜನೆಯನ್ನು ಜಾರಿಗೆ ತಂದರು, ಅಪ್ಪ ಇದೆ ಸರಿಯಾದ ಸಮಯವೆಂದು ರೇಷನ್ ಕಾರ್ಡ್ ಅನ್ನು BPL ಗೆ ತಿದ್ದುಪಡಿ ಮಾಡಿಸಿದ. ಇದರಿಂದ ನಮ್ಮ ಕುಟುಂಬಕ್ಕೆ ಪ್ರತಿ ತಿಂಗಳೂ 28 ಕೆ ಜಿ ಅಕ್ಕಿ ಸಿಗಲು ಪ್ರಾರಂಭವಾಯಿತು ಆಗ ಅಪ್ಪ ಸ್ವಲ್ಪ ನಿರಾಳನಾದ ಮತ್ತು ನಮ್ಮ ಮನೆಯಲ್ಲಿ ಪ್ರತಿ ನಿತ್ಯವೂ ಒಲೆ ಉರಿಯಲು ಪ್ರಾರಂಭಿಸಿತು.

ಒಂದಂತೂ ನಿಜ ಈ ಯೋಜನೆಯಿಂದ ಎಷ್ಟೋ ಬಡಜನರ ಹೊಟ್ಟೆ ತುಂಬಿದೆ. ಮತ್ತು ಕೆಳವರ್ಗದ ಜನರು ಈಗಲೂ ಸಂತೃಪ್ತಿಯಿಂದ ಊಟ ಮಾಡುತ್ತಿದ್ದಾರೆ. ಅನ್ನಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಬಡ ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿವೆ. ಹಾಗೆಯೆ ಆಗಾಗ ಕೆಲವು ಉಳ್ಳವರು ಹೇಳುತ್ತಾರೆ ಬಡವರು ಈ ಯೋಜನೆಯಿಂದ ಸೋಮಾರಿಯಾಗುತ್ತಿದ್ದಾರೆ ಎನ್ನುವ ಮಿಶ್ರ ಪ್ರತಿಕ್ರಿಯೆಗಳನ್ನು ಫೇಸ್ ಬುಕ್ ಮತ್ತು ಟಿ ವಿ ಗಳಲ್ಲಿ ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ (MSW- Master of Social Work) ಓದುವಾಗ “ಹಳ್ಳಿಗಳ ಕುಟುಂಬಗಳ ಮೇಲೆ ಅನ್ನಭಾಗ್ಯ ಯೋಜನೆಯ ಪರಿಣಾಮದ ಮೇಲೆ ಒಂದು ಅಧ್ಯಯನ ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದೆ. ಮತ್ತು ತುಮಕೂರಿನ ಸುತ್ತ ಮುತ್ತ ಹಾಗೂ ಶಿರಾ ತಾಲೂಕಿನ ಸುಮಾರು ಹಳ್ಳಿಗಳಲ್ಲಿ ದತ್ತಾಂಶಗಳನ್ನು ಕಲೆ ಹಾಕಿದಾಗಲೇ ನನಗೆ ಗೊತ್ತಾಗಿದ್ದು ತುತ್ತು ಅನ್ನಕ್ಕಾಗಿ ಪ್ರಾಣ ಬಿಟ್ಟ ಜೀವಗಳು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಹಾಗೂ ಅದೇ ಅನ್ನಕ್ಕಾಗಿ ಪಟ್ಟಣ ಸೇರಿದ ಎಷ್ಟೋ ಯುವಕರು ನನ್ನ ಅಧ್ಯಯನದಲ್ಲಿದ್ದರು.


ಅನ್ನ ಭಾಗ್ಯ ಯೋಜನೆಯು ಎಷ್ಟೋ ಕೆಳವರ್ಗ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿದೆ ಮತ್ತು ಸ್ವಾಭಿಮಾನದಿಂದ ಎಷ್ಟೋ ಬಡ ಕುಟುಂಬಗಳು ಎದೆಯುಬ್ಬಿಸಿ ನನ್ನ ಅನ್ನ ನನ್ನ ಹಕ್ಕು ಎಂದು ಹೇಳುವಂತೆ ಮಾಡಿದೆ. ಆದರೂ ಇತ್ತೀಚಿನ ದಿನಗಳಲ್ಲಿ ತಿನ್ನುವ ಅನ್ನದಲ್ಲಿ ರಾಜಕೀಯ ಮಾಡುವ ರಾಜಕೀಯ ನಾಯಕರು ಒಮ್ಮೆ ಕೆಳ ಹಂತಕ್ಕಿಳಿದು ಬಡವರ ಬವಣೆ ಮತ್ತು ಕೆಳವರ್ಗದವರ ನಾಡಿ ಮಿಡಿತವನ್ನು ಅರಿಯಬೇಕಾಗಿದೆ.


ಲೇಖಕರು: ನರಸಿಂಹರಾಜು ಎಲ್
ಹೊಸೂರು , ಶಿರಾ ತಾಲ್ಲೂಕು ,
ತುಮಕೂರು ಜಿಲ್ಲೆ.
9611512423

ಯಾದವರಿಗೆ ಮಾಜಿ ಶಾಸಕರು ಹೇಳಿದ ಗುಟ್ಟು

0

ಪಾವಗಡ : ತಾಲ್ಲೂಕಿನ ಕೆಲವು ಕಿಡಿಗೇಡಿ ವ್ಯಕ್ತಿಗಳು ಯಾದವ ಸಮುದಾಯ ಕಾಂಗ್ರೆಸ್ ಪರವಿಲ್ಲ,ವೆಂಕಟೇಶ್ ಪರವಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ.ವೆಂಕಟರಮಣಪ್ಪ ಯಾದವ ಸಮುದಾಯಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ಬಾರಿ ನನ್ನನ್ನು ಆಶೀರ್ವದಿಸಿ ‌ವಿಧಾನಸೌಧಕ್ಕೆ ಕಳಿಸಿದೀರಾ ಅದೇ ರೀತಿ ನನ್ನ ಮಗ ವೆಂಕಟೇಶ್ ಗೆಲ್ಲುವಿಗೆ ಸಮುದಾಯ ಶ್ರಮಿಸಬೇಕು ಎಂದು ಮಾಜಿ ಸಚಿವ ವೆಂಕಟರಮಣಪ್ಪ ಕರೆ ನೀಡಿದರು.

ಪಾವಗಡ ಪಟ್ಟಣದ ‌ಎಸ್‌ಎಸ್‌ಕೆ‌ ರಂಗಮಂದಿರದಲ್ಲಿ ನಡೆದ ಯಾದವ ಸಮುದಾಯದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ನುಡಿದಂತೆ ನಡೆಯುವವನ್ನು ನಾನು,ಅದೇ ರೀತಿ ಯಾದವ ಸಮುದಾಯವೂ ಮಾತು ಕೊಟ್ಟು, ಮಾತಿಗೆ ತಪ್ಪಿಲ್ಲ ನಿಮ್ಮ ಆಶಿರ್ವಾದ ದಿಂದ ನಾಲ್ಕು ಬಾರಿ ಶಾಸಕ ಎರಡು ಬಾರಿ ಮಂತ್ರಿ ಯಾಗಿದೇನೆ .ನನಗೆ ಆಶಿರ್ವಾದ ನೀಡಿದಂತೆ ಮುಂದಿನ ತಿಂಗಳು ಮೇ ಹತ್ತರಂದು ನಡೆಯುವ ಚುನಾವಣೆಯಲ್ಲಿ ಹೆಚ್ ವಿ ವೆಂಕಟೇಶ್ ಗೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದ ವೆಂಕಟರಮಣಪ್ಪ ‌ಯಾದವ‌ ಸಮಾಜದ ಹಿತ ಕಾಪಡುವುದೆ ನನ್ನ ಪರಮಗುರಿ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಮಾತನಾಡುತ್ತಾ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಪಾವಗಡದಲ್ಲೂ ಉತ್ಸಾಹಿ ಯುವನಾಯಕ ಹೆಚ್ ವಿ ವೆಂಕಟೇಶ್ ರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡುವಂತೆ ಕೋರಿದರು.

ಯಾದವ ಸಮುದಾಯದ ಮುಖಂಡರಾದ ಜಿ ಜೆ ರಾಜಣ್ಣ,ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಮಾಜಿ ಜಿ ಪಂ ಸದಸ್ಯರಾದ ಕೋಟೆ ಪ್ರಭಾಕರ್,ಪಾಪಣ್ಣ, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ನರಸಿಂಹಪ್ಪ ಮಾತನಾಡಿದರು.

ಕುರುಬರ ಸಂಘದ ಅಧ್ಯಕ್ಷ ರಾದ ಮೈಲಪ್ಪ, ಮಾನಂ ವೆಂಕಟಸ್ವಾಮಿ ರೈತ ಸಂಘದ ಮುಖಂಡ ನರಸಿಂಹ ರೆಡ್ಡಿ, ಮಾಜಿ ಶಾಸಕ ಉಗ್ರ ನರಸಿಂಹಪ್ಪ, ಯುವ ಕಾಂಗ್ರೆಸ್ ನ ದಿವ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು,ಮಹಿಳಾ ಮುಖಂಡರಾದ ಸುಮ್ಮ ಅನಿಲ್ ಕುಮಾರ್, ಉಷಾ ರಾಣಿ, ಜಯಲಕ್ಷ್ಮೀಮ್ಮ ಮತ್ತಿತರರು ಹಾಜರಿದ್ದರು.

Box

ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಮಾತನಾಡುತ್ತಾ ಹಿತ್ತ ಶತ್ರುಗಳ ಕಾಟ ಹೆಚ್ಚಾಗಿದೆ ಅವರ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ ಯಾದವ ಜನಾಂಗದ ಪ್ರೀತಿ ವಿಶ್ವಾಸ ಕ್ಕೆ ದಕ್ಕೆಯಾಗದಂತೆ ನಾನು ನನ್ನ ತಂದೆ ಕೆಲಸ ಮಾಡಿದ್ದೇವೆ ಪ್ರತಿ ಗೊಲ್ಲರಹಟ್ಟಿಯ ಜನ ನಮ್ಮನ್ನು ಸಹೋದರಂತೆ ನೋಡಿದೆ‌. ಪ್ರತಿಬಾರಿಯಂತೆ ಯಾದವ ಸಮುದಾಯ ಮತ ನೀಡಿ ಆಶೀರ್ವದಿಸುವಂತೆ ಕೋರಿದ ವೆಂಕಟೇಶ್. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿನ ಗೃಹಲಕ್ಷ್ಮೀ,ಅನ್ನಭಾಗ್ಯ,200 ಯುನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು.

ಗಣತಿ; ತುಮಕೂರಲ್ಲಿ ಎಮ್ಮೆ‌ಕಮ್ಮಿ, ಕುರಿಗಳೇ ಹೆಚ್ಚು!

0

2019 ರ ಜಿಲ್ಲಾವಾರು ಜಾನುವಾರು ಗಣತಿ ವರದಿ ಬಿಡುಗಡೆಯಾಗಿದೆ. ಈ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಕುರಿಗಳಿರುವ ಜಿಲ್ಲೆ ತುಮಕೂರು ಆಗಿದೆ.

ಜಿಲ್ಲೆ ಹಸು, ಅಡು, ಎಮ್ಮೆಗಳ ಸಾಕಣೆಯಲ್ಲಿ ಮೊದಲನೇ ಮೂರು ಸ್ಥಾನದಿಂದ ಕೆಳಗಿಳಿದಿದೆ.

ಅತಿಹೆಚ್ಚು ದನಗಳನ್ನು ಹೊಂದಿರುವ ಮೊದಲ ಮೂರು ಜಿಲ್ಲೆಗಳು

  1. ಬೆಳಗಾವಿ (5,49,540)
  2. ಹಾಸನ (5,48,185)
  3. ಶಿವಮೊಗ್ಗ (5,18,653)

ಅತಿಹೆಚ್ಚು ಎಮ್ಮೆಗಳು

  1. ಬೆಳಗಾವಿ (8,44,171)
  2. ಬಾಗಲಕೋಟೆ (2,34,340)
  3. ವಿಜಯಪುರ (1,77,079)

ಅತಿಹೆಚ್ಚು ಆಡುಗಳು

  1. ಬೆಳಗಾವಿ (7,01,741)
  2. ವಿಜಯಪುರ (5,69,098)
  3. ಕಲಬುರಗಿ (4,46,200)

ಅತಿಹೆಚ್ಚು ಕುರಿಗಳು

  1. ಚಿತ್ರದುರ್ಗ (13,52087)
  2. ತುಮಕೂರು (12,90,008)
  3. ಬಳ್ಳಾರಿ (12,72,828)

~

ಸಿನಿಮಾ: ಬಿಸಿಲು ಕುದುರೆ – ತಲ್ಲಣಗಳ ದೃಶ್ಯಕಾವ್ಯ

0

ಬಗರ್ ಹುಕುಂ ಜಮೀನು ಸಾಗುವಳಿ ಮಾಡುವ ರೈತರ ನೈಜ ಬದುಕು ಮತ್ತು ಬವಣೆಗಳನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿರುವ ‘ಬಿಸಿಲು ಕುದುರೆ’ ಎಂಬ ಕನ್ನಡ ಚಲನಚಿತ್ರ, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಿಂಬದಹಳ್ಳಿಯ ರೈತ ಚಿಕ್ಕೇಗೌಡನ (ಸಂಪತ್ ಮೈತ್ರೇಯ) ಕುಟುಂಬದ ಕಥೆಯನ್ನು ನಿರೂಪಿಸುವ ಮೂಲಕ ಇಡೀ ರೈತಾಪಿ ಜಗತ್ತಿನ ತಲ್ಲಣಗಳನ್ನು ಮಂಡಿಸುತ್ತದೆ.

ಭೂ ಒಡೆತನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ದ್ವಂದ್ವಾತಕ ಕಾನೂನುಗಳ ಬಿಕ್ಕಟ್ಟು ಮತ್ತು ಸಮನ್ವಯದ ಕೊರತೆ ಹಾಗೂ ಭ್ರಷ್ಟ ಅಧಿಕಾರಿವರ್ಗ ಮುಂತಾದವು ಬಗರ್ ಹುಕುಂ ಸಾಗುವಳಿ ಮಾಡುವ ಅನೇಕ ರೈತ ಕುಟುಂಬಗಳನ್ನು ಬಲಿ ತೆಗೆದುಕೊಂಡಿವೆ.

ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ದಿಂಬದಹಳ್ಳಿಯ ರೈತ ಮುನಿಮಾರೇಗೌಡ ತೀರಿಕೊಂಡ ಬಳಿಕ ಅವನ ಇಬ್ಬರು ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಪಾಲು ಮಾಡಿಕೊಳ್ಳುತ್ತಾರೆ. ಅಕ್ಷರಸ್ಥನಾದ ಅಣ್ಣನು ಪೇಟೆಯ ಬದುಕಿನ ನಾಜೂಕುತನದ ರಿವಾಜುಗಳನ್ನು ಕರಗತ ಮಾಡಿಕೊಂಡು ಬೆಂಗಳೂರು ನಗರದಲ್ಲಿ ಅಂಗಡಿ ಉದ್ಯಮದಲ್ಲಿ ನೆಲೆ ಕಂಡುಕೊಂಡಿರುತ್ತಾನೆ.

ಹಳ್ಳಿಯಲ್ಲಿಯೇ ತಳವಂದಿಗನಾಗಿ ದನಕರು ಹೊಲಮನೆ ಬಂಧುಬಳಗ ಹೀಗೆ ಬಂಗಬಾಳನ್ನು ತಬ್ಬಿಕೊಂಡ ಅನಕ್ಷರಸ್ಥ ತಮ್ಮನಾದ ಚಿಕ್ಕೇಗೌಡ ಅಣ್ಣನ ನಾಜೂಕಿನ ಮಾತುಗಳಿಗೆ ತಲೆಗುಣುಕಾಕಿ ಪಿತ್ರಾರ್ಜಿತ ಅರ್ಧ ಎಕರೆ ಜಮೀನನ್ನು ಮಾತ್ರ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಾನೆ. ತಂದೆಯ ಉಳಿದೆಲ್ಲಾ ಸ್ವಾನುಭವದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡ ಅಣ್ಣನು, ಸರ್ಕಾರದಿಂದ ಮಂಜೂರಾತಿಯಾಗದಿದ್ದ ನಾಲ್ಕು ಎಕರೆ ಕಾಡಂಚಿನ ಬಗರ್ ಹುಕುಂ ಭೂಮಿಯನ್ನು ಮತ್ತು ತಲೆಮಾರುಗಳಿಂದ ವಾಸಿಸುತ್ತಿದ್ದ ಮನೆಯನ್ನು ಚಿಕ್ಕೇಗೌಡನಿಗೆ ವಹಿಸಿಕೊಟ್ಟು ಮಹದುಪಕಾರ ಮಾಡಿದ್ದೇನೆಂಬ ಭಾವನೆಯಿಂದ ನಿರುಮ್ಮಳವಾಗಿ ಬೆಂಗಳೂರಿಗೆ ಹೋಗುತ್ತಾನೆ.

ಇತ್ತ ದಿಂಬದಹಳ್ಳಿಯ ಚಿಕ್ಕೇಗೌಡನ ಕಣ್ಣಕುಣಿಕೆಯಲ್ಲಿ ನಾಲ್ಕು ಎಕರೆ ಬಗರ್ ಹುಕುಂ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ತೋಟ ಮಾಡಬೇಕೆಂಬ ಕನಸು ಚಿಗುರೊಡೆಯುತ್ತದೆ. ಆತನ ಗರ್ಭಿಣಿ ಹೆಂಡತಿಯಾದ ಸರೋಜ (ಸುನೀತಾ) ಗಂಡನ ಕನಸಿನ ತೋಟದ ಸಸಿಯ ಬೇರಿಗೆ ನೀರೆರೆಯುತ್ತಾಳೆ. ಆ ಜಮೀನು ಈಗ ಸರೋಜಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕಂದನಿಗೂ ನಾಳೆಯ ಬದುಕಿಗೆ ಊಡಾಗಬಹುದೆಂಬ ನಿರೀಕ್ಷೆಯಲ್ಲಿ, ಭೂ ಮಂಜೂರಾತಿಯ ಬಿಸಿಲು ಕುದುರೆಯ ಬೆನ್ನೇರಿ ಲಂಚಗುಳಿ ಅಧಿಕಾರಿಗಳ ಕಂದಾಯ ಇಲಾಖೆ ಕಚೇರಿಯ ಮೆಟ್ಟಿಲುಗಳನ್ನು ಹತ್ತಿಳಿದು, ತನ್ನ ಪಾಲಿಗೆ ಬಂದಿದ್ದ ಅರ್ಧ ಎಕರೆ ಜಮೀನನ್ನು ಮಂಜಪ್ಪಶೆಟ್ಟಿ ಎಂಬ ಬಡ್ಡಿಕುಳದವನಿಗೆ ನಾಲ್ಕು ಲಕ್ಷ ರೂಪಾಯಿಗಳಿಗೆ ಮಾರಿ ಬಸವಳಿಯುವ ಹೊತ್ತಿಗೆ ನಾಲ್ಕು ಎಕರೆ ಬಗರ್ ಹುಕುಂ ಜಮೀನಿನ ಭೂಮಂಜೂರು ಸಾಗುವಳಿ ಪತ್ರವನ್ನು ಪಡೆಯುತ್ತಾನೆ ಚಿಕ್ಕೇಗೌಡ. ಭೂ ಒಡೆತನ ಸಿಕ್ಕಿತೆಂದು ಆನಂದತುಂದಿಲನಾದ ಚಿಕ್ಕೇಗೌಡನ ಕಣ್ಣಿನ ಕನಸಿನ ತೋಟವು ನನಸಾಗಲು ತನ್ನ ಪಾಲಿಗೆ ಬಂದಿದ್ದ ಮನೆಯನ್ನು ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ತೆಗೆದುಕೊಳ್ಳುವ ದಾರಿ ಕಾಣಿಸುತ್ತದೆ.

ಅಷ್ಟೊತ್ತಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೋಜಿಣಿದಾರರೊಂದಿಗೆ ದಿಂಬದಹಳ್ಳಿಯ ಕಾಡಂಚಿಗೆ ಬಂದು ಅರಣ್ಯ ಭೂಮಿಯ ನಕಾಶೆ ಹಿಡಿದು ಸರ್ವೆ ಮಾಡುತ್ತಾ, ಚಿಕ್ಕೇಗೌಡ ಅರಣ್ಯಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡಿರುವನೆಂದು ಆರೋಪಿಸಿ ಅರಣ್ಯದ ಹದ್ದುಬಸ್ತಿಗೆ ಕಲ್ಲುಗಳನ್ನು ನೆಡುತ್ತಾರೆ.

ಕಂದಾಯ ಇಲಾಖೆ ಭೂಮಂಜೂರಾತಿ ನೀಡಿದ್ದರೂ ಸಹ ಹಿಂದೆ 1915 ರಲ್ಲಿ ಬ್ರಿಟಿಷ್ ಸರ್ಕಾರದ ಅಧೀನದಲ್ಲಿದ್ದ ಮೈಸೂರು ಮಹಾರಾಜರು ಅರಣ್ಯ ಭೂಮಿಯನ್ನಾಗಿ ಘೋಷಣೆ‌ ಮಾಡಲಾಗಿದ್ದು, ಸ್ವಾತಂತ್ರ್ಯೋತ್ತರ ಕಾಲದಲ್ಲಿಯೂ1963 ರಲ್ಲಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ಕಾಯ್ದೆಯ ಅನ್ವಯ ಆ ಭೂಮಿಯು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದಾಗಿತ್ತು. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಾನೂನುಗಳ ತೊಡಕು ಚಿಕ್ಕೇಗೌಡನ ನೆಮ್ಮದಿಯ ಬಾಳಿಗೆ ಗಂಭೀರವಾದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಈ ಭೂವಿವಾದ ಎಸಿಎಫ್ ಕೋರ್ಟಿನ ಕಟಕಟೆಗೆ ಬರುತ್ತದೆ. ಜಮೀನನ್ನು ಕೋರ್ಟಿನಲ್ಲಿ ಲಾಯರ್ ಮೂಲಕ ದಾವೆ ಹೂಡಿ ಹಿಂಪಡೆಯಲು ತೀರ್ಮಾನಿಸುತ್ತಾನೆ ಚಿಕ್ಕೇಗೌಡ.

ತನ್ನ ಜಮೀನಿನಲ್ಲಿ ಬೋರ್ವೆಲ್ ಹಾಕಿಸಿ ತೋಟ ಮಾಡಬೇಕೆಂದು ಮನೆಯನ್ನು ಬ್ಯಾಂಕಿನಲ್ಲಿ ಅಡಮಾನವಿರಿಸಿ ತೆಗೆದುಕೊಂಡಿದ್ದ ದುಡ್ಡನ್ನು, ಲಾಯರ್ ಮಂಜುನಾಥನಿಗೆ ಕೊಟ್ಟು ಬರಿಗೈಯಾಗುತ್ತಾನೆ. ಊರಿನಲ್ಲಿ ಯಾರಿಂದಲೂ ನಯಾಪೈಸೆ ಸಾಲ ಹುಟ್ಟದ ಸ್ಥಿತಿಗೆ ತಲುಪುತ್ತಾನೆ. ಎಸಿಎಫ್ ಕೋರ್ಟಿನಲ್ಲಿ ಚಿಕ್ಕೇಗೌಡನ ವಿರುದ್ಧವಾಗಿ ತೀರ್ಪು ನೀಡಿದ ನ್ಯಾಯಾಧೀಶರು, ಕಂದಾಯ ಇಲಾಖೆ ಮಂಜೂರು ಮಾಡಿದ್ದ ನಾಲ್ಕು ಎಕರೆ ಜಮೀನನ್ನು 1963 ರ‌ ಅರಣ್ಯ ಕಾನೂನು 43(A) ಅನ್ವಯ ಅರಣ್ಯ ಇಳಾಖೆಯ ವಶಕ್ಕೆ ನೀಡುತ್ತಾರೆ.

ಬ್ಯಾಂಕಿನ ಸಾಲ ಹಿಂತಿರುಗಿಸಲಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ಮನೆಯನ್ನು ಜಪ್ತಿ ಮಾಡಿ ಹರಾಜು ಹಾಕುವುದಾಗಿ ನೊಟೀಸ್ ಕಳಿಸುತ್ತಾರೆ. ದಿಕ್ಕು ತೋಚದ ಚಿಕ್ಕೇಗೌಡ ಊರಾಚೆ ಕಲ್ಲಿನ ಗಣಿಗಾರಿಕೆಯಿಂದ ತೋಡಿ ಬರಿದಾದ ಕಲ್ಗುಟ್ಟೆ ತಲುಪುತ್ತಾನೆ.

ಸರ್ಕಾರವೇ ಕಲ್ಲುಗಣಿಗಾರಿಕೆಯ ಗುತ್ತಿಗೆ ನೀಡಿ, ಹಿಂದೊಮ್ಮೆ ಸುತ್ತಮುತ್ತಲಿನ ಜೀವಮಂಡಲದ ಗುರುತಾಗಿದ್ದ ಗುಡ್ಡವು ಯಂತ್ರಗಳಿಂದ ಬಗೆದು ತೆಗೆದು ಈಗ ಬರಿದಾಗಿದೆ. ಬಿಕೋ ಎನ್ನುವ ಕಲ್ಗುಟ್ಟೆಯ ಪಾಡು ಚಿಕ್ಕೇಗೌಡನಿಗೂ ಬಂದೊದಗಿರುವ ದೃಶ್ಯ ಮತ್ತು ಆ ಸಂದರ್ಭದಲ್ಲಿ ಧ್ವನಿಗೊಂಡಿರುವ ಹಾಡು ಸಮಸ್ತ ಬಗರ್ ಹುಕುಂ ರೈತರ ಎದೆಗಳನ್ನು ಬಗೆದು ಹಾಕಿರುವ ಸರ್ಕಾರದ ರೈತವಿರೋಧಿ ಕಾನೂನುಗಳ, ಭ್ರಷ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ರಾಕ್ಷಸೀಯತೆಗೆ ಕನ್ನಡಿ ಹಿಡಿಯುತ್ತವೆ. ‘ಬದುಕಬೇಕು ಅನ್ನಿಸ್ತಿಲ್ಲ ಕಣೇ ಸರೋಜ’ ಎಂದು ಹೆಂಡತಿಯ ಮುಂದೆ ಹತಾಶನಾಗಿ ಕಣ್ಣೀರಾಗುತ್ತಾನೆ. ಬಸುರಿ ಹೆಂಡತಿಯೂ ತಮಗೀಗ ಒದಗಿರುವ ಪರಿಸ್ಥಿತಿ ಮತ್ತು ಹೊಟ್ಟೆಯಲ್ಲಿರುವ ಕಂದನ ಮುಂದಿನ ಪಾಡೇನೆಂದು ನೆನೆದು ಕಣ್ಣೀರಾಗುತ್ತಾಳೆ.

ಇದೇ ವೇಳೆಗೆ ಊರದೇವತೆಯ ಪರಿಶೆ ಸಾರಿಕ್ಕಿ ಇಡೀ ಊರು ರಂಗು ತುಂಬಿಕೊಂಡು ಸಡಗರ ಸಂಭ್ರಮದಿಂದ ಉರಿದುಬ್ಬುತ್ತಿರುತ್ತದೆ. ಮನೆಯಲ್ಲಿದ್ದ ಫಲಿನಕುರಿ ಮರಿಹಾಕಿದ್ದು, ಮರಿಗುರಿಯನ್ನು ಹೋದಷ್ಟಕ್ಕೆ ಸೀದು ಚಿಕ್ಕೇಗೌಡನು ಕೂಡಾ ಊರಬ್ಬಕ್ಕೆ ಬೇಕಾದ ಹೂವು ಹಣ್ಣು ದವನ ತರಕಾರಿಗಳನ್ನು ಹೊತ್ತು ತರುತ್ತಾನೆ.

ಊರಬ್ಬಕ್ಕೆ ಪೂಜಾ ಕುಣಿತ ಪಟದ ಕುಣಿತ ತಮಟೆ ಭೇರಿ ನಗಾರಿ ರಂಗೇರುವಾಗ ಇಡೀ ಊರು ತನ್ನ ಸಾವಿನ‌ ಆಚರಣೆಯ ಸಂಭ್ರಮಕ್ಕೆ ತೊಡಗಿರುವಂತೆ ಚಿಕ್ಕೇಗೌಡ ಭಾವಿಸುತ್ತಾನೆ. ಮನೆಯಲ್ಲಿ ಜಳಕ‌ ಮಾಡುತ್ತಿದ್ದ ತನ್ನ ಗರ್ಭಿಣಿ ಹೆಂಡತಿಯಾದ ಸರೋಜಳಿಗೆ ಹೊಲದ ಕಡೆಗೆ ಹೋಗಿ ಬರುವೆನೆಂದು ತಿಳಿಸಿ ತಾನು ಕಳೆದುಕೊಂಡ ಜಮೀನಿಗೆ ಹೋಗುತ್ತಾನೆ. ತಾನೇ ತನ್ನ ಕೈಯಾರ ಉತ್ತು ಬಿತ್ತಿ ಬೆಳೆದು ಹಾಲ್ದುಂಬಿ ಕಾಳೊರೆಯುತ್ತಿರುವ ರಾಗಿಹೊಲ ಮತ್ತು ಅಕ್ಕಡಿ ಸಾಲಿನ ಜೋಳದ ದಂಟನ್ನು ತಬ್ಬಿಕೊಂಡು ತಾನಿನ್ನು ಈ ಲೋಕಕ್ಕೆ ವಿದಾಯ ಹೇಳುತ್ತಿರುವುದಾಗಿ ತನ್ನದೇ ರೋದನೆಯ ಭಾಷೆಯಲ್ಲಿ ಹಸಿರು ಹೊಲದ ಕಿವಿಗೆ ಹಾಕಿ ಊರಾಚೆಯ ಮರದ ಕೊಂಬೆಯಲ್ಲಿ ನೇಣಿಗೆ ಶರಣಾಗುತ್ತಾನೆ ಚಿಕ್ಕೇಗೌಡ.

ಗಂಡನ ಸಾವಿನ ಸುದ್ದಿ ತಿಳಿದ ಬಸುರಿ ಸರೋಜ ಹತಾಶಳಾಗಿ ಬಾವಿಯೊಂದರ ಬಳಿ ಬಂದು ನಿಂತು ಹೊಟ್ಟೆಯೊಳಗಿರುವ ಕಂದನನ್ನು ತಡಕಿಕೊಳ್ಳುತ್ತಾಳೆ. ಇದಿಷ್ಟು ಬಗರ್ ಹುಕುಂ ಜಮೀನಿನ ರೈತ ಚಿಕ್ಕೇಗೌಡನ ಕುಟುಂಬದ ಕಥೆ. ಈ ಕಥೆ ಇಲ್ಲಿಗೆ ಮುಗಿಯುವುದಿಲ್ಲ…

ಆಳುವ ವರ್ಗಗಳ ವಿಷಮಕೂಟ ವ್ಯವಸ್ಥೆಯಿಂದ ಜರ್ಜರಿತನಾಗಿ ನೇಣಿಗೆ ಕೊರಳೊಡ್ಡುವ ಬಡರೈತ ಚಿಕ್ಕೇಗೌಡನ ನೈಜ ಕಥಾನಕದ ನಿರೂಪಣೆಯ ಮೂಲಕ, ಸರ್ಕಾರದ ವೈರುಧ್ಯಮಯ ನೀತಿಗಳಿಂದಾಗಿ ರೈತರ ಬದುಕಿನಲ್ಲಾಗಿರುವ ಜೀವಾಂತಕ ಗಾಯದ ಯಾತನೆಯನ್ನು ಮತ್ತು ಗಾಯದ ಚಹರೆಗಳನ್ನು ನಿರ್ದೇಶಕ ಹೃದಯಶಿವ ಅತ್ಯಂತ ಪರಿಣಾಮಕಾರಿಯಾಗಿ ಬೆಳ್ಳಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಸಾಹಿತ್ಯ(literature), ಸಂಗೀತ(music) ಹಾಗೂ ಕಲೆ(art)ಗಳಿಂದ ದೂರ ಬಹುದೂರ ಸಾಗುತ್ತಿರುವ ಕೆಲವು ನಿರ್ದೇಶಕರಿಂದಾಗಿ ಆಧುನಿಕ ಕನ್ನಡ ಸಿನಿಮಾ ಉದ್ಯಮವು ಲೈಂಗಿಕತೆ(Sex), ಅಪರಾಧ(Crime), ಶ್ರೀಮಂತಿಕೆ(Richness), ಮಾದಕತೆ(glamour), ತಂತ್ರಜ್ಞಾನ(Technology), ಭ್ರಮೆ(Hallucination), ಆಶ್ಲೀಲತೆ(obscenity)ಗಳನ್ನೇ ಸಿನಿಮಾ ಎಂದು ಒಪ್ಪಿಸುತ್ತಿದೆ.

ಕೋಟಿಗಟ್ಟಳೆ ಬಂಡವಾಳ ಹೂಡಿ ಕೋಟ್ಯಾನುಕೋಟಿ ರೂಪಾಯಿಗಳನ್ನು ಪ್ರೇಕ್ಷಕರಿಂದ ಸುಲಿಗೆ ಮಾಡುತ್ತಿರುವ ಬಂಡವಾಳಶಾಹಿಗಳಿಗೆ ಸಮಾಜ ಬದಲಾಣೆಯ ಯಾವುದೇ ಹೊಣೆಗಾರಿಕೆ ಕಾಣಿಸುತ್ತಿಲ್ಲ. ಕೆಲವರು ಸಿನಿಮಾಗಳಿಂದಲೇ ದುಡ್ಡು ಮಾಡಿ ಕೋಮುವಾದದ ವ್ಯಾಪಾರಿಗಳಾಗಿದ್ದಾರೆ. ದಗಲ್ಬಾಜಿ ರಾಜಕಾರಣಿಗಳ ಏಜೆಂಟರುಗಳಾಗಿದ್ದಾರೆ. ಇಂತಹ ವಿಕೃತಿಗಳಿಂದ ಕನ್ನಡ ಸಿನಿಮಾ ಉದ್ಯಮವು ಬಿಡಿಸಿಕೊಳ್ಳಬೇಕು.ಇದು ರೈತರ ಭಾರತ. ರೈತರ ಬದುಕು ಸುಧಾರಣೆಯಾಗಬೇಕೆಂಬ ಹಂಬಲವಿರುವ ನೇಗಿಲ ಯೋಗಿಗಳ ‘ಬಿಸಿಲು ಕುದುರೆ’ ಎಂಬ ಈ ಚಲನಚಿತ್ರವನ್ನು ನೀವೂ ನೋಡಿ ಬೆಂಬಲಿಸುವಿರೆಂಬ ಸದಾಶಯದೊಂದಿಗೆ…

ತಾರಾಗಣ : ಸಂಪತ್ ಮೈತ್ರೇಯ : ಚಿಕ್ಕೇಗೌಡ
ಸುನಿತಾ : ಸರೋಜಿ
ಕರಿಸುಬ್ಬು : ಸುಬ್ಬಣ್ಣ
ಮಳವಳ್ಳಿ ಸಾಯಿಕೃಷ್ಣ : ಶೆಟ್ಟಿ ಮಂಜಣ್ಣ
ಭಾಸ್ಕರ್ ಶೆಟ್ಟಿ : ACF
ವಿಕ್ಟರಿ ವಾಸು : ವಕೀಲ.
ಕಥೆ, ಚಿತ್ರಕತೆ, ಸಂಭಾಷಣೆ, ಗೀತರಚನೆ, ನಿರ್ದೇಶನ, ನಿರ್ಮಾಣ : ಹೃದಯ ಶಿವ.ಬಗೀತ ಸಂಗೀತ : ಇಮ್ತಿಯಾಜ್ ಸುಲ್ತಾನ್
ಹಿನ್ನೆಲೆ ಸಂಗೀತ : ನೀತು ನಿನಾದ್
ಛಾಯಾಗ್ರಹಣ : ನಾಗಾರ್ಜುನ್ ಡಿ
ಸಂಕಲನ : ಬಿ. ಎಸ್.ಕೆಂಪರಾಜು

ಸಿನಿ ವಿಮರ್ಶೆ: ಡಾ.ವಡ್ಡಗೆರೆ ನಾಗರಾಜಯ್ಯ
8722724174

ಮಧುಗಿರಿಯಲ್ಲಿ ದೇವೇಗೌಡರು ಭಾವುಕರಾಗಿದ್ದೇಕೆ?

ಮಧುಗಿರಿ: ಇಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ ದೇವೇಗೌಡರು ಭಾವುಕರಾದರು.

ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದರೂ ನನ್ನನ್ನು ಇಲ್ಲಿಗೆ ತುಮಕೂರಿ‌ನ ಕೆಲ ಮುಖಂಡರೇ ಒತ್ತಾಯವಾಗಿ ಕರೆತಂದು ಬಲಿಪಶು ಮಾಡಿದರು ಎಂದರು.

ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್ ನಾಯಕರಿಗೆ ಉತ್ತರ ಕೊಡೋಕೆ, ನನ್ನನ್ನು ಸೋಲಿಸಿದವರಿಗೆ ವೀರಭದ್ರಯ್ಯನವರನ್ನು ಗೆಲ್ಲಿಸುವ ಮೂಲಕ ಉತ್ತರ ಕೊಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಮುಖಂಡರ ವಿರುದ್ದ ಹರಿಹಾಯ್ದರು.

ಈ ಹಿಂದೆ ನಾನು ಸಿಎಂ ಆಗುವ ಸಂದರ್ಭದಲ್ಲಿ ತುಮಕೂರಿನಲ್ಲಿ 9 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲೂ ಮತದಾರರು ಅದೇ ಫಲಿತಾಂಶವನ್ನು ನೀಡಬೇಕು. ಕುಮಾರಣ್ಣ ನಿಮ್ಮ ಮೇಲೆ ವಿಶ್ವಾಸ ವಿಟ್ಟಿದ್ದು, ಅವರು ರಾಜ್ಯದ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಕೊಟ್ಟ ಮಾತಿನಂತೆ ನಡೆಯುತ್ತಾರೆ ಆದ್ದರಿಂದ ಈ ಬಾರಿ ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.

ಶಾಸಕ ಎಂ.ವಿ. ವೀರಭದ್ರಯ್ಯನವರು ಮಧುಗಿರಿ ಕಂದಾಯ ಜಿಲ್ಲೆಯನ್ನಾಗಿ ಮಾಡಬೇಕು. ಏಕಶಿಲಾ ಬೆಟ್ಟಕೆ ರೋಪ್ ವೇ ಅಳವಡಿಸಬೇಕು ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡಬೇಕು ಎಂಬ ಕನಸು ಹೊಂದಿದ್ದು, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ ಬಿಜೆಪಿಯಿಂದಾಗಿ ಕರ್ನಾಟಕದ ಗೌರವವಿಲ್ಲದಂತಾಗಿದ್ದು, ಅವರು ಯಡಿಯೂರಪ್ಪನನ್ನು ಮುಗಿಸಿದ್ದಾರೆ. ರಾಜ್ಯದ 7 ಕೋಟಿ ಜನತೆಯ ಕಲ್ಯಾಣಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಹಿಂದುಳಿದವರಿಗೆ ಮೀಸಲಾತಿ ಕೊಟ್ಟವರು ಕೆಂಪೇಗೌಡನ ಮಗ ದೇವೇಗೌಡ. ಇಂತಹ ದೇವೇಗೌಡರನ್ನು ಕಾಂಗ್ರೆಸ್ ನವರು ಇಳಿ ವಯಸ್ಸಿನಲ್ಲಿ ತುಮಕೂರಿನಿಂದ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿ ಅನ್ನದಲ್ಲಿ ವಿಷ ಹಾಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಾಧನೆ ಏನು ಎಂದ ಅವರು ಅವರು ಸಿಡಿಯಲ್ಲಿರುವ ಮಂತ್ರಿಗಳಿಗೆ ಇವತ್ತು ಟಿಕೆಟ್ ಕೊಟ್ಟಿದ್ದಾರೆ. ಇಂತಹ ಅಪವಿತ್ರರು ರಾಜ್ಯದಲ್ಲಿದ್ದರೆ ಮಳೆಯಾಗುತ್ತಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಒಬ್ಬಂಟಿಯಾಗಿದ್ದು, ಅವರ ಕೈಯಲ್ಲಿ ಏನು ಆಗುತ್ತದೆ ಎಂದು ಕೆಲವರು ಕೇಳುತ್ತಿದ್ದು, 50 ಆಕಳು ಕಟ್ಟಿದರೂ ಅಲ್ಲಿ ಒಂದೇ ಹೋರಿ ಕಟ್ಟುವುದು ಎಂಬುದನ್ನು ಅವರು ಅರಿಯಬೇಕು ಎಂದು ಸಮಾವೇಶದಲ್ಲಿ ನಗೆ ಚಟಾಕಿ ಹಾರಿಸಿದರು.

ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ ಕಳೆದ 5 ವರ್ಷಗಳಲ್ಲಿ ಪ್ರಕೃತಿ ನಮ್ಮ ಪರವಾಗಿ ಇರಲಿಲ್ಲ. ಆರಂಭದಲ್ಲಿ ಬೀಕರ ಬರಗಾಲ ಆವರಿಸಿತ್ತು ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ 300 ಬೋರ್ ವೆಲ್ ಗಳನ್ನು ಕೊರೆಸಲಾಗಿತ್ತು. 6.70 ಕೋಟಿ ಅನುದಾನ ತಂದು ತಾಲೂಕಿನಲ್ಲಿ ಮೇವು ಬ್ಯಾಂಕ್ ಆರಂಭಿಸಿ ರೈತರ ನೆರವಿಗೆ ದಾವಿಸಲಾಗಿತ್ತು. 2 ವರ್ಷ ಕರೋನಾ ಆವರಿಸಿ ಕಾಮಗಾರಿ ಕುಂಟಿತಗೊಂಡಿತ್ತು. ಬಿಜೆಪಿ ಸರ್ಕಾರದಲ್ಲಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತಹ ಪರಿಸ್ಥಿತಿ ಇದ್ದರೂ 1143 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದರು.

ಅಕ್ರಮ ಮಾರ್ಗದಿಂದ ಗೌರಿಶಂಕರ್ ಆಯ್ಕೆ: ಸಿಎಂ

ತುಮಕೂರು: ಶಾಸಕ ಗೌರಿಶಂಕರ್ ಅಕ್ರಮ ಮಾರ್ಗದಿಂದ ಆಯ್ಕೆಯಾಗಿದ್ದು, ಇದರಿಂದ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಭಾರೀ ನಷ್ಟವಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗೌರಿಶಂಕರ್ ಎಂಥವರು ಎಂದು ನ್ಯಾಯಾಲಯವೇ ಹೇಳಿದೆ. ಅಕ್ರಮವನ್ನು ಸಕ್ರಮ ಮಾಡುವ ಕಾಲ ಈಗ ಬಂದಿದೆ. ಸುರೇಶಗೌಡರು ಸಿಟ್ಟಾಗಿ ಮಾತನಾಡಿದರೂ ಅವರ ಮನಸ್ಸು ಮಗುವಿನಂತದು ಎಂದರು.

ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಬಿ.ಸುರೇಶಗೌಡ ಪರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾನುವಾರ ಅಬ್ಬರದ ಪ್ರಚಾರ ನಡೆಸಿದರು.

ಗೂಳೂರಿನಲ್ಲಿ ನಡೆದ ಪ್ರಚಾರದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಲಾಯಿತು.

ಸುರೇಶಗೌಡರು ಒಬ್ಬ ಸಾಧಕರು.‌ಕಳೆದ ಸಲ ಅವರು ಗೆಲುವು ಸಾಧಿಸಿದ್ದರೆ 5000 ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ತರುತ್ತಿದ್ದರು ಎಂದರು.

ಶಾಸಕ ಗೌರಿಶಂಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ನ್ಯಾಯಾಲಯದಲ್ಲಿ ಸುರೇಶಗೌಡರಿಗೆ ಗೆಲವು ಆಗಿದೆ.‌ಇನ್ನೂ ಜನತಾ ನ್ಯಾಯಾಲಯದಲ್ಲಿ ಗೆಲುವು ಸಿಗಬೇಕಾಗಿದೆ ಎಂದರು.