Wednesday, September 18, 2024
Google search engine
Homeಕಾನನದ ಕುಸುಮಮತ ಹಾಕುವ ಮುನ್ನ ಈ ಹಸಿವಿನ ಕಥನ ಓದಿ

ಮತ ಹಾಕುವ ಮುನ್ನ ಈ ಹಸಿವಿನ ಕಥನ ಓದಿ

ನಾನು ತುಂಬಾ ದಿನಗಳಿಂದಲೂ ಈ ವಿಷಯದ ಬಗ್ಗೆ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಬರೆಯಲು ಆಗಲಿಲ್ಲ. ನಾನು ಯಾವುದೇ ಪಕ್ಷದ ಏಜೆಂಟ್ ಅಲ್ಲ ಮತ್ತು ನನಗೂ ರಾಜಕೀಯಕ್ಕೂ ತುಂಬಾ ದೂರ. ಒಮ್ಮೊಮ್ಮೆ ಕೆಲವು ರಾಜಕಾರಣಿಗಳು ನನಗೆ ಯಮಲೋಕದಿಂದ ಭಾವನೆಗಳಿಲ್ಲದೆ ಇಳಿದು ಬಂದ ಯಮಧೂತರಂತೆ ಕಾಣುತ್ತಾರೆ. ಆದ್ದರಿಂದ ರಾಜಕೀಯಕ್ಕೂ ನನಗೂ ಅಷ್ಟು ನಂಟಿಲ್ಲ. ಆದರೆ ಪ್ರತಿ ಬಾರಿಯೂ ಉತ್ತಮ ನಾಯಕರನ್ನು ಆರಿಸಲು ನನ್ನ ಮತವನ್ನು ಚಲಾಯಿಸುತ್ತೇನೆ.

ಇಂದು ನಾನು ಇಲ್ಲಿ ಹೇಳೋದಕ್ಕೆ ಹೊರಟಿರುವುದು ಹಸಿವು ಮತ್ತು ಬಡತನದ ಬಗ್ಗೆ ಅಷ್ಟೇ ಮತ್ತೆ ಇದಕ್ಕೆ ರಾಜಕೀಯ ಲೇಪನ ಮಾಡುವುದು ಬೇಡ ಎನ್ನುವುದೇ ನನ್ನ ವಿನಂತಿ.

ನಾನು ತುಮಕೂರು ಜಿಲ್ಲೆಯ ಶಿರಾ ದಿಂದ ಸುಮಾರು 27 ಕಿ. ಮೀ ದೂರವಿರುವ ಹೊಸೂರು ಎಂಬ ಸೇವಾ ವಂಚಿತ ಊರಿನಲ್ಲಿ ಹುಟ್ಟಿದ್ದು, ನಾನು ಹುಟ್ಟಿದ್ದು 20ನೇ ಶತಮಾನದ ಕೊನೆಯಲ್ಲಿ ಆದರೂ ಜೀವನವೆಲ್ಲವೂ ಕಟ್ಟಿಕೊಂಡಿದ್ದು 21ನೇ ಶತಮಾನದಲ್ಲಿಯೇ, ನಮ್ಮದು ತುಂಬಾ ಬಡಕುಟುಂಬ ಒಮ್ಮೊಮ್ಮೆ ಊಟವಿಲ್ಲದೆ ಮೇಲ್ವರ್ಗದವರ ತಿಥಿ ಮತ್ತು ಮದುವೆಗಳಲ್ಲಿ ಉಳಿದ ಊಟ ತಿಂದು ಬಂದು ಮಲಗುತ್ತಿದ್ದುದೂ ಎಷ್ಟೋ ಉದಾಹರಣೆಗಳು ಇವೆ.

ಒಮ್ಮೆ ನಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ರಾಗಿ ಮತ್ತು ಅಕ್ಕಿ ಒಟ್ಟಿಗೆ ಖಾಲಿಯಾಗಿತ್ತು.ಅಪ್ಪ ಅವೆಲ್ಲವನ್ನು ತರಲು ಅಶಕ್ತನಾಗಿದ್ದ ಅಜ್ಜಿ ಮತ್ತು ಅಮ್ಮ ಎಲ್ಲರ ಮನೆಗಳಲ್ಲಿಯೂ ಬಟ್ಟಲಿನಲ್ಲಿ ಅಕ್ಕಿ ಮತ್ತು ರಾಗಿಹಿಟ್ಟನ್ನು ಸಾಲ ಮಾಡಿದ್ದಳು, ಮತ್ತೆ ಮತ್ತೆ ಹೋಗಿ ಬೇರೆಯವರನ್ನು ಸಾಲ ಕೇಳಲು ಅವರಿಬ್ಬರಿಗೂ ತಮ್ಮ ಸ್ವಾಭಿಮಾನ ಹಿಂದೆ ಎಳೆಯುತ್ತಿತ್ತು.

ನಮ್ಮ ಕುಟುಂಬದಲ್ಲಿ ಅತಿಯಾಗಿ ಊಟ ಮಾಡುತ್ತಿದ್ದವನೆಂದರೆ ನಾನೊಬ್ಬನೇ ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಪಾತ್ರೆ ಪೂರ್ತಿ ಖಾಲಿ ಮಾಡಿಬಿಡುತ್ತಿದ್ದೆ. ನನಗೂ ನನ್ನ ತಮ್ಮನಿಗೆ ಮನೆಯಲ್ಲಿ ಊಟಕ್ಕಾಗಿ ಆಗಾಗ ಮಹಾಯುದ್ಧ ನಡೆಯುತ್ತಿತ್ತು. ಮನೆಯಲ್ಲಿ ಹಿಟ್ಟು ಖಾಲಿಯಾದಾಗ ಕೆಲವು ರಾತ್ರಿಗಳು ನಮ್ಮ ಮನೆಯಲ್ಲಿ ನಮ್ಮ ಊರಿನ ಬೋರಿನ ನೀರು ನಮ್ಮ ಆಹಾರವಾಗಿರುತ್ತಿತ್ತು. ಅಂದು ಅಪ್ಪ ಯಾಕಾದರೂ ಬೆಳಿಗ್ಗೆಯಾಗುತ್ತೋ ಎಂದು ಗುನುಗಿ ನಿದ್ರೆಗೆ ಜಾರಿದರು, ಅಮ್ಮ ನಮ್ಮನ್ನು ದಿಟ್ಟಿಸಿ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಮಲಗಿದಳು, ಅಜ್ಜಿ ದೇವರೇ ಯಾಕಪ್ಪ ಇಂತ ಕಷ್ಟ ಕೊಟ್ಟೆ ಅಂತ ದೇವರಿಗೆ ಹಿಡಿ ಶಾಪ ಹಾಕುತ್ತಾ ನಿದ್ರಿಸಲು ಮುಂದಾದಳು. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಯಾರ ಸಾಂತ್ವನವೂ ಅಲ್ಲ ಒಂದು ತುತ್ತು ಅನ್ನ ಮಾತ್ರ ಆದ್ರೆ ಅದೇ ಇರಲಿಲ್ಲ.


ಬೆಳಗ್ಗೆ ಎದ್ದಾಗ ಅಮ್ಮ ಒಲೆಯಲ್ಲಿ ಸೌದೆ ಹಾಕಿ ಮನೆ ತುಂಬಾ ಹೊಗೆ ಎಬ್ಬಿಸಿದ್ದಳು, ನಾನು ಮಲಗಿಕೊಂಡೆ ಮೃಷ್ಟಾನ್ನ ಭೋಜನದ ಕನಸು ಕಾಣುತ್ತಿದ್ದೆ ಎದ್ದು ನೋಡಿದರೆ ಓಲೆ ಹೊತ್ತಿಸಿದ್ದಳು. ಹಾಳು ಮುಖದಲ್ಲಿ ಎದ್ದು ಬಂದವನೇ ಅಮ್ಮನನ್ನು ಕೇಳಿದಾಗ, ಬೇರೆಯವರು ನಮ್ಮ ಮನೆಯಲ್ಲಿ ಅಡುಗೆ ಮಾಡಿಲ್ಲ ಅಂತ ಗೊತ್ತಾಗಬಾರದು ಅಂತ ಒಲೆ ಹೊತ್ತಿಸಿದ್ದೇನೆ ನಿಮ್ಮಪ್ಪ ಊರೋರ ಹತ್ತಿರ ಸಾಲ ಕೇಳೋಕೆ ಹೋಗಿದಾರೆ ಒಂದು ಕೆ ಜಿ ಅಕ್ಕಿ ತಗೊಂಡ್ ಬರ್ತಾರೆ ಇರು ಅನ್ನ ಮಾಡೋಣ ಅಂದಳು. ಆಗಲೇ ನಿರಾಸೆಯಿಂದ ದುಃಖ ಒತ್ತರಿಸಿ ಬಂತು

ಆಗಲೇ ಅಳಲು ಶುರು ಮಾಡಿದೆ ರಾತ್ರಿನೂ ಊಟ ಇಲ್ಲ ಈಗಲೂ ಇಲ್ಲ ನನಗೆ ಹೊಟ್ಟೆ ಹಸೀತಿದೆ ಏನಾದ್ರೂ ಕೊಡಮ್ಮ ಅಂತ ಜೋರಾಗಿ ಅಳಲು ಶುರು ಮಾಡಿದೆ. ನನ್ನೊಡನೆ ನನ್ನ ತಮ್ಮನೂ ಅಳಲು ಶುರು ಮಾಡಿದ. ಅಮ್ಮ ಮತ್ತು ಅಜ್ಜಿ ಇಬ್ಬರನ್ನು ಸಂತೈಸಲು ವಿಫಲರಾಗಿ ಅವರ ಕಣ್ಣುಗಳು ತೇವಗೊಂಡವು. ಅಪ್ಪ ಊರಿನಿಂದ ಸಪ್ಪೆ ಮೊರೆ ಹಾಕಿಕೊಂಡು ಸಾಲ ಸಿಗದೇ ಬರಿ ಕೈನಲ್ಲಿ ವಾಪಸ್ಸಾಗಿದ್ದನ್ನು ನೋಡಿ ನನಗೆ ಇನ್ನು ಅಳು ಜಾಸ್ತಿಯಾಯಿತು.


ನನಗೆ ಇನ್ನೂ ಚೆನ್ನಾಗಿ ನೆನಪಿದೆ ಅವತ್ತು ಭಾನುವಾರ ನಮ್ಮೂರಿನಲ್ಲಿ ಮೇಲ್ವರ್ಗದವರ ಒಂದು ದೊಡ್ಡ ವಿವಾಹವಿತ್ತು ಅವರ ಮನೆಕಡೆಯಿಂದ ಗಾಳಿ ಬೀಸಿದಾಗ ನನ್ನ ಹಸಿವೂ ಇನ್ನೂ ಜಾಸ್ತಿಯಾಗುತ್ತಿತ್ತು ಕೊನೆಗೆ ನನ್ನ ಹಸಿವಿನ ಕಟ್ಟೆಯೊಡೆದು ಮದುವೆಯ ಮನೆ ಕಡೆ ಓಡಿದೆ ಅಲ್ಲಿ ನೋಡಿದರೆ ಮುಹೂರ್ತ ಆಗೋವರೆಗೂ ಊಟ ಹಾಕೋದಿಲ್ಲ ಅಂತ ಹೇಳ್ಬಿಟ್ರು. ಅಲ್ಲೆಯೇ ನಿಂತು ಬೇಗ ಟೈಮ್ ಆಗ್ಲಪ್ಪ ದೇವರೇ ಅಂತ ಬೇಡಿಕೊಳ್ಳಲು ಶುರು ಮಾಡಿದೆ, ಕೊನೆಗೆ ಊಟದ ಸಮಯ ಬಂದೆ ಬಿಟ್ಟಿತು ನಾನು ಆಸೆಯಿಂದ ಮೊದಲನೇ ಪಂಕ್ತಿಯಲ್ಲಿ ಕುಳಿತು ಮಾಸಿದ ಶಾಲಾ ಸಮವಸ್ತ್ರದಲ್ಲಿ ಊಟಕ್ಕಾಗಿ ಬಕಾಸುರನಂತೆ ಕಾಯುತ್ತಿದ್ದೆ. ಹಾಗೆಯೇ ನನ್ನ ಪಕ್ಕದಲ್ಲಿ ಮದುವೆಗೆ ಬಂದ ಬಂಧು ಬಳಗ ಕುಳಿತುಕೊಂಡರು. ಇನ್ನೇನು ಊಟಕ್ಕೆ ಬಾಳೆ ಎಲೆ ಪಡೆಯುವಷ್ಟರಲ್ಲಿ ಮದುವೆ ಮನೆಯವನು ಬಂದು ನೀವು ಕೊನೆ ಪಂಕ್ತಿಯಲ್ಲಿ ತಿನ್ನಬೇಕು ಈಗಲ್ಲ ಎದ್ದೇಳೋ ಮೇಲೆ ಅಂತ ಅವಮಾನಿಸಿ ನನ್ನನ್ನು ಅಲ್ಲಿಂದ ಎಳಿಸಿಯೇ ಬಿಟ್ಟ, ಅವನು ಗದರಿದ ಧ್ವನಿಗೆ ನನ್ನ ಹೃದಯದ ಬಡಿತ ಇನ್ನೂ ಜೋರಾಯಿತು ಅಲ್ಲಿಂದ ಅಳುತ್ತಾ ಹೊರ ನಡೆದೆ.

ಅಂದು ನಾನು ಒಂದು ತುತ್ತು ಅನ್ನಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ನಮಗೆ ಅನ್ನ ತುಂಬಾ ಅಪರೂಪದ ಆಹಾರವಾಗಿತ್ತು.
ಆಗ ತಾನೇ ಸರ್ಕಾರದಿಂದ BPL ಕಾರ್ಡಿನವರಿಗೆ ಅಕ್ಕಿ ಕೊಡ್ತಾರೆ ಅಂತ ನಮ್ಮೂರಿನ ಸೊಸೈಟಿ ಇಂದ ಒಂದು ಅಧಿಸೂಚನೆ ಬಂದಿತ್ತು, ಅಪ್ಪ BPL ಕಾರ್ಡ್ ಮಾಡಿಸಲು ಅವರಿವರ ಕೈ ಕಾಲು ಹಿಡಿದು ಅರ್ಜಿ ಹಾಕಿದಾಗ ನಿಮಗೆ ಜಮೀನು ಜಾಸ್ತಿ ಇದೆ ಅಂತ APL ಕಾರ್ಡ್ ಕೊಟ್ಟುಬಿಟ್ಟರು ಅದಕ್ಕೆ 2 ಲೀಟರ್ ಸೀಮೆ ಎಣ್ಣೆ ಬಿಟ್ಟರೆ ಬೇರೆ ಏನೂ ಕೊಡುತ್ತಿರಲಿಲ್ಲ. ಹೀಗೆ ನಮ್ಮ ಬಾಲ್ಯವನ್ನು ಅನ್ನವಿಲ್ಲದೆ ಅರೆ ಹೊಟ್ಟೆಯಲ್ಲಿ ಕಳೆದೆವು. ನಂತರ ನಾನು 6 ನೇ ತರಗತಿಗೆ ಹೋದಾಗ 1 ರಿಂದ 5 ನೇ ತರಗತಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿದ್ದರು.

ನನ್ನ ತಮ್ಮನಿಗೆ ಮಧ್ಯಾಹ್ನದ ಸಮಯದಲ್ಲಿ ಅನ್ನ ಸಿಗುತ್ತಿತ್ತು ನಾನು ಶಾಲೆಗೆ ಒಂದೇ ಡಬ್ಬಿಯಲ್ಲಿ ಮುದ್ದೆ ಮತ್ತು ಸಾರನ್ನು ಹಾಕಿಕೊಂಡು ಹೋಗುತ್ತಿದ್ದೆ ಇದನ್ನು ನೋಡಿ ನನ್ನ ಸ್ನೇಹಿತರು ಎಷ್ಟೋ ಸಲ ಅಪಹಾಸ್ಯ ಮಾಡುತ್ತಿದ್ದರು. ದಿನ ಕಳೆದಂತೆ ನಾನು ಡಬ್ಬಿ ತರುವುದನ್ನು ನಿಲ್ಲಿಸಿಬಿಟ್ಟೆ.
ನಂತರ ನಾನು ಎಸ್ ಎಸ್ ಎಲ್ ಸಿ ಗೆ ಬಂದಾಗ ಪ್ರೌಢಶಾಲೆಗೂ ಬಿಸಿಯೂಟದ ಯೋಜನೆಯನ್ನು ವಿಸ್ತರಿಸಿದರು ಆಗ ನಾನು ಪ್ರತಿ ನಿತ್ಯವೂ ಶಾಲೆಯಲ್ಲಿ ಬೆಳಿಗ್ಗೆಯದು ಮತ್ತು ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮಾಡುತ್ತಿದ್ದೆ. ಅಪ್ಪ ಆಗ ತಾನೇ ನಮ್ಮೂರಿನ ಸಾಹುಕಾರರ ಜಮೀನನ್ನು ಕೋರಿ ಪಡೆದು ಗದ್ದೆ ಮಾಡಿ ಭತ್ತ ಬೆಳೆಯಲು ಶುರು ಮಾಡಿದ್ದರು ಶ್ರಮವಹಿಸಿ ಭತ್ತ ಬೆಳೆಯುತ್ತಿದ್ದರು, ಆದರೆ ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಅವು ಎರಡರಿಂದ ಮೂರೂ ತಿಂಗಳಿಗೆ ಖಾಲಿಯಾಗುತ್ತಿದ್ದವು ಮರಳಿ ನಾವು ಅದೇ ಸ್ಥಿತಿಗೆ ಬರುತ್ತಿದ್ದೆವು. ವರ್ಷವಿಡೀ ನಮ್ಮ ಮನೆಯಲ್ಲಿ ಅದೇ ಬಡತನ ಮತ್ತು ಹಸಿವಿನ ನರ್ತನವಾಗುತ್ತಿತ್ತು.
ನಾನು ಪದವಿಗೆ ಬಂದಾಗ ನನ್ನ ವಿದ್ಯಾಭಾಸ ಮಾಡಿಸಲು ಅಪ್ಪನು ಒದ್ದಾಡುತ್ತಿದ್ದರು ಪ್ರತಿನಿತ್ಯವೂ ಬಸ್ ಚಾರ್ಜಿಗೆ ಅಪ್ಪನನ್ನು ತಿಗಣೆ ರಕ್ತ ಹೀರುವಂತೆ ಪೀಡಿಸುತ್ತಿದ್ದೆ ಆ ಸಮಯದಲ್ಲಿ ಹಬ್ಬಗಳೇನಾದರೂ ಬಂದರೆ ಅಪ್ಪ ಹಬ್ಬಗಳಿಗೆ ಶಾಪ ಹಾಕುತ್ತಿದ್ದರು, ಯಾಕಾದರೂ ಈ ಹಬ್ಬಗಳು ಬರುತ್ತವೋ ಅಂತ. ನಾನು ಪದವಿಗೆ ಬಂದಾಗ ಸುಮಾರು 2013 ನೇ ಇಸವಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ನಂತರ ಅನ್ನ ಭಾಗ್ಯ ಎಂಬ ಯೋಜನೆಯನ್ನು ಜಾರಿಗೆ ತಂದರು, ಅಪ್ಪ ಇದೆ ಸರಿಯಾದ ಸಮಯವೆಂದು ರೇಷನ್ ಕಾರ್ಡ್ ಅನ್ನು BPL ಗೆ ತಿದ್ದುಪಡಿ ಮಾಡಿಸಿದ. ಇದರಿಂದ ನಮ್ಮ ಕುಟುಂಬಕ್ಕೆ ಪ್ರತಿ ತಿಂಗಳೂ 28 ಕೆ ಜಿ ಅಕ್ಕಿ ಸಿಗಲು ಪ್ರಾರಂಭವಾಯಿತು ಆಗ ಅಪ್ಪ ಸ್ವಲ್ಪ ನಿರಾಳನಾದ ಮತ್ತು ನಮ್ಮ ಮನೆಯಲ್ಲಿ ಪ್ರತಿ ನಿತ್ಯವೂ ಒಲೆ ಉರಿಯಲು ಪ್ರಾರಂಭಿಸಿತು.

ಒಂದಂತೂ ನಿಜ ಈ ಯೋಜನೆಯಿಂದ ಎಷ್ಟೋ ಬಡಜನರ ಹೊಟ್ಟೆ ತುಂಬಿದೆ. ಮತ್ತು ಕೆಳವರ್ಗದ ಜನರು ಈಗಲೂ ಸಂತೃಪ್ತಿಯಿಂದ ಊಟ ಮಾಡುತ್ತಿದ್ದಾರೆ. ಅನ್ನಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಬಡ ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿವೆ. ಹಾಗೆಯೆ ಆಗಾಗ ಕೆಲವು ಉಳ್ಳವರು ಹೇಳುತ್ತಾರೆ ಬಡವರು ಈ ಯೋಜನೆಯಿಂದ ಸೋಮಾರಿಯಾಗುತ್ತಿದ್ದಾರೆ ಎನ್ನುವ ಮಿಶ್ರ ಪ್ರತಿಕ್ರಿಯೆಗಳನ್ನು ಫೇಸ್ ಬುಕ್ ಮತ್ತು ಟಿ ವಿ ಗಳಲ್ಲಿ ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ (MSW- Master of Social Work) ಓದುವಾಗ “ಹಳ್ಳಿಗಳ ಕುಟುಂಬಗಳ ಮೇಲೆ ಅನ್ನಭಾಗ್ಯ ಯೋಜನೆಯ ಪರಿಣಾಮದ ಮೇಲೆ ಒಂದು ಅಧ್ಯಯನ ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದೆ. ಮತ್ತು ತುಮಕೂರಿನ ಸುತ್ತ ಮುತ್ತ ಹಾಗೂ ಶಿರಾ ತಾಲೂಕಿನ ಸುಮಾರು ಹಳ್ಳಿಗಳಲ್ಲಿ ದತ್ತಾಂಶಗಳನ್ನು ಕಲೆ ಹಾಕಿದಾಗಲೇ ನನಗೆ ಗೊತ್ತಾಗಿದ್ದು ತುತ್ತು ಅನ್ನಕ್ಕಾಗಿ ಪ್ರಾಣ ಬಿಟ್ಟ ಜೀವಗಳು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಹಾಗೂ ಅದೇ ಅನ್ನಕ್ಕಾಗಿ ಪಟ್ಟಣ ಸೇರಿದ ಎಷ್ಟೋ ಯುವಕರು ನನ್ನ ಅಧ್ಯಯನದಲ್ಲಿದ್ದರು.


ಅನ್ನ ಭಾಗ್ಯ ಯೋಜನೆಯು ಎಷ್ಟೋ ಕೆಳವರ್ಗ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿದೆ ಮತ್ತು ಸ್ವಾಭಿಮಾನದಿಂದ ಎಷ್ಟೋ ಬಡ ಕುಟುಂಬಗಳು ಎದೆಯುಬ್ಬಿಸಿ ನನ್ನ ಅನ್ನ ನನ್ನ ಹಕ್ಕು ಎಂದು ಹೇಳುವಂತೆ ಮಾಡಿದೆ. ಆದರೂ ಇತ್ತೀಚಿನ ದಿನಗಳಲ್ಲಿ ತಿನ್ನುವ ಅನ್ನದಲ್ಲಿ ರಾಜಕೀಯ ಮಾಡುವ ರಾಜಕೀಯ ನಾಯಕರು ಒಮ್ಮೆ ಕೆಳ ಹಂತಕ್ಕಿಳಿದು ಬಡವರ ಬವಣೆ ಮತ್ತು ಕೆಳವರ್ಗದವರ ನಾಡಿ ಮಿಡಿತವನ್ನು ಅರಿಯಬೇಕಾಗಿದೆ.


ಲೇಖಕರು: ನರಸಿಂಹರಾಜು ಎಲ್
ಹೊಸೂರು , ಶಿರಾ ತಾಲ್ಲೂಕು ,
ತುಮಕೂರು ಜಿಲ್ಲೆ.
9611512423

RELATED ARTICLES

3 COMMENTS

  1. ನಿಜವಾಗಿಯೂ ಈ ಲೇಖನವನ್ನು ಓದುವಾಗ ನನ್ನ ಕಣ್ಣಲ್ಲಿ ನೀರು ಬಂತು ಇವೆಲ್ಲವೂ ನಮ್ಮ ಜೀವನದಲ್ಲಿ ನಾವೂ ಕೂಡ ಅನುಭವಿಸಿದ್ದೇವೆ , ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ ಅದ್ಬುತವಾದ ಲೇಖನ ಸರ್.

  2. ತುಂಬಾ ಒಳ್ಳೆಯ ಸಂದೇಶ ಹಾಗೂ ಅನುಭವದ ಆ ಕಷ್ಟಗಳು ಮನಕುಲುಕಿಸುತ್ತವೆ…

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?