ಬಗರ್ ಹುಕುಂ ಜಮೀನು ಸಾಗುವಳಿ ಮಾಡುವ ರೈತರ ನೈಜ ಬದುಕು ಮತ್ತು ಬವಣೆಗಳನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿರುವ ‘ಬಿಸಿಲು ಕುದುರೆ’ ಎಂಬ ಕನ್ನಡ ಚಲನಚಿತ್ರ, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಿಂಬದಹಳ್ಳಿಯ ರೈತ ಚಿಕ್ಕೇಗೌಡನ (ಸಂಪತ್ ಮೈತ್ರೇಯ) ಕುಟುಂಬದ ಕಥೆಯನ್ನು ನಿರೂಪಿಸುವ ಮೂಲಕ ಇಡೀ ರೈತಾಪಿ ಜಗತ್ತಿನ ತಲ್ಲಣಗಳನ್ನು ಮಂಡಿಸುತ್ತದೆ.
ಭೂ ಒಡೆತನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ದ್ವಂದ್ವಾತಕ ಕಾನೂನುಗಳ ಬಿಕ್ಕಟ್ಟು ಮತ್ತು ಸಮನ್ವಯದ ಕೊರತೆ ಹಾಗೂ ಭ್ರಷ್ಟ ಅಧಿಕಾರಿವರ್ಗ ಮುಂತಾದವು ಬಗರ್ ಹುಕುಂ ಸಾಗುವಳಿ ಮಾಡುವ ಅನೇಕ ರೈತ ಕುಟುಂಬಗಳನ್ನು ಬಲಿ ತೆಗೆದುಕೊಂಡಿವೆ.
ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ದಿಂಬದಹಳ್ಳಿಯ ರೈತ ಮುನಿಮಾರೇಗೌಡ ತೀರಿಕೊಂಡ ಬಳಿಕ ಅವನ ಇಬ್ಬರು ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಪಾಲು ಮಾಡಿಕೊಳ್ಳುತ್ತಾರೆ. ಅಕ್ಷರಸ್ಥನಾದ ಅಣ್ಣನು ಪೇಟೆಯ ಬದುಕಿನ ನಾಜೂಕುತನದ ರಿವಾಜುಗಳನ್ನು ಕರಗತ ಮಾಡಿಕೊಂಡು ಬೆಂಗಳೂರು ನಗರದಲ್ಲಿ ಅಂಗಡಿ ಉದ್ಯಮದಲ್ಲಿ ನೆಲೆ ಕಂಡುಕೊಂಡಿರುತ್ತಾನೆ.
ಹಳ್ಳಿಯಲ್ಲಿಯೇ ತಳವಂದಿಗನಾಗಿ ದನಕರು ಹೊಲಮನೆ ಬಂಧುಬಳಗ ಹೀಗೆ ಬಂಗಬಾಳನ್ನು ತಬ್ಬಿಕೊಂಡ ಅನಕ್ಷರಸ್ಥ ತಮ್ಮನಾದ ಚಿಕ್ಕೇಗೌಡ ಅಣ್ಣನ ನಾಜೂಕಿನ ಮಾತುಗಳಿಗೆ ತಲೆಗುಣುಕಾಕಿ ಪಿತ್ರಾರ್ಜಿತ ಅರ್ಧ ಎಕರೆ ಜಮೀನನ್ನು ಮಾತ್ರ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಾನೆ. ತಂದೆಯ ಉಳಿದೆಲ್ಲಾ ಸ್ವಾನುಭವದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡ ಅಣ್ಣನು, ಸರ್ಕಾರದಿಂದ ಮಂಜೂರಾತಿಯಾಗದಿದ್ದ ನಾಲ್ಕು ಎಕರೆ ಕಾಡಂಚಿನ ಬಗರ್ ಹುಕುಂ ಭೂಮಿಯನ್ನು ಮತ್ತು ತಲೆಮಾರುಗಳಿಂದ ವಾಸಿಸುತ್ತಿದ್ದ ಮನೆಯನ್ನು ಚಿಕ್ಕೇಗೌಡನಿಗೆ ವಹಿಸಿಕೊಟ್ಟು ಮಹದುಪಕಾರ ಮಾಡಿದ್ದೇನೆಂಬ ಭಾವನೆಯಿಂದ ನಿರುಮ್ಮಳವಾಗಿ ಬೆಂಗಳೂರಿಗೆ ಹೋಗುತ್ತಾನೆ.
ಇತ್ತ ದಿಂಬದಹಳ್ಳಿಯ ಚಿಕ್ಕೇಗೌಡನ ಕಣ್ಣಕುಣಿಕೆಯಲ್ಲಿ ನಾಲ್ಕು ಎಕರೆ ಬಗರ್ ಹುಕುಂ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ತೋಟ ಮಾಡಬೇಕೆಂಬ ಕನಸು ಚಿಗುರೊಡೆಯುತ್ತದೆ. ಆತನ ಗರ್ಭಿಣಿ ಹೆಂಡತಿಯಾದ ಸರೋಜ (ಸುನೀತಾ) ಗಂಡನ ಕನಸಿನ ತೋಟದ ಸಸಿಯ ಬೇರಿಗೆ ನೀರೆರೆಯುತ್ತಾಳೆ. ಆ ಜಮೀನು ಈಗ ಸರೋಜಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕಂದನಿಗೂ ನಾಳೆಯ ಬದುಕಿಗೆ ಊಡಾಗಬಹುದೆಂಬ ನಿರೀಕ್ಷೆಯಲ್ಲಿ, ಭೂ ಮಂಜೂರಾತಿಯ ಬಿಸಿಲು ಕುದುರೆಯ ಬೆನ್ನೇರಿ ಲಂಚಗುಳಿ ಅಧಿಕಾರಿಗಳ ಕಂದಾಯ ಇಲಾಖೆ ಕಚೇರಿಯ ಮೆಟ್ಟಿಲುಗಳನ್ನು ಹತ್ತಿಳಿದು, ತನ್ನ ಪಾಲಿಗೆ ಬಂದಿದ್ದ ಅರ್ಧ ಎಕರೆ ಜಮೀನನ್ನು ಮಂಜಪ್ಪಶೆಟ್ಟಿ ಎಂಬ ಬಡ್ಡಿಕುಳದವನಿಗೆ ನಾಲ್ಕು ಲಕ್ಷ ರೂಪಾಯಿಗಳಿಗೆ ಮಾರಿ ಬಸವಳಿಯುವ ಹೊತ್ತಿಗೆ ನಾಲ್ಕು ಎಕರೆ ಬಗರ್ ಹುಕುಂ ಜಮೀನಿನ ಭೂಮಂಜೂರು ಸಾಗುವಳಿ ಪತ್ರವನ್ನು ಪಡೆಯುತ್ತಾನೆ ಚಿಕ್ಕೇಗೌಡ. ಭೂ ಒಡೆತನ ಸಿಕ್ಕಿತೆಂದು ಆನಂದತುಂದಿಲನಾದ ಚಿಕ್ಕೇಗೌಡನ ಕಣ್ಣಿನ ಕನಸಿನ ತೋಟವು ನನಸಾಗಲು ತನ್ನ ಪಾಲಿಗೆ ಬಂದಿದ್ದ ಮನೆಯನ್ನು ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ತೆಗೆದುಕೊಳ್ಳುವ ದಾರಿ ಕಾಣಿಸುತ್ತದೆ.
ಅಷ್ಟೊತ್ತಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೋಜಿಣಿದಾರರೊಂದಿಗೆ ದಿಂಬದಹಳ್ಳಿಯ ಕಾಡಂಚಿಗೆ ಬಂದು ಅರಣ್ಯ ಭೂಮಿಯ ನಕಾಶೆ ಹಿಡಿದು ಸರ್ವೆ ಮಾಡುತ್ತಾ, ಚಿಕ್ಕೇಗೌಡ ಅರಣ್ಯಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡಿರುವನೆಂದು ಆರೋಪಿಸಿ ಅರಣ್ಯದ ಹದ್ದುಬಸ್ತಿಗೆ ಕಲ್ಲುಗಳನ್ನು ನೆಡುತ್ತಾರೆ.
ಕಂದಾಯ ಇಲಾಖೆ ಭೂಮಂಜೂರಾತಿ ನೀಡಿದ್ದರೂ ಸಹ ಹಿಂದೆ 1915 ರಲ್ಲಿ ಬ್ರಿಟಿಷ್ ಸರ್ಕಾರದ ಅಧೀನದಲ್ಲಿದ್ದ ಮೈಸೂರು ಮಹಾರಾಜರು ಅರಣ್ಯ ಭೂಮಿಯನ್ನಾಗಿ ಘೋಷಣೆ ಮಾಡಲಾಗಿದ್ದು, ಸ್ವಾತಂತ್ರ್ಯೋತ್ತರ ಕಾಲದಲ್ಲಿಯೂ1963 ರಲ್ಲಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ಕಾಯ್ದೆಯ ಅನ್ವಯ ಆ ಭೂಮಿಯು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದಾಗಿತ್ತು. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಾನೂನುಗಳ ತೊಡಕು ಚಿಕ್ಕೇಗೌಡನ ನೆಮ್ಮದಿಯ ಬಾಳಿಗೆ ಗಂಭೀರವಾದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಈ ಭೂವಿವಾದ ಎಸಿಎಫ್ ಕೋರ್ಟಿನ ಕಟಕಟೆಗೆ ಬರುತ್ತದೆ. ಜಮೀನನ್ನು ಕೋರ್ಟಿನಲ್ಲಿ ಲಾಯರ್ ಮೂಲಕ ದಾವೆ ಹೂಡಿ ಹಿಂಪಡೆಯಲು ತೀರ್ಮಾನಿಸುತ್ತಾನೆ ಚಿಕ್ಕೇಗೌಡ.
ತನ್ನ ಜಮೀನಿನಲ್ಲಿ ಬೋರ್ವೆಲ್ ಹಾಕಿಸಿ ತೋಟ ಮಾಡಬೇಕೆಂದು ಮನೆಯನ್ನು ಬ್ಯಾಂಕಿನಲ್ಲಿ ಅಡಮಾನವಿರಿಸಿ ತೆಗೆದುಕೊಂಡಿದ್ದ ದುಡ್ಡನ್ನು, ಲಾಯರ್ ಮಂಜುನಾಥನಿಗೆ ಕೊಟ್ಟು ಬರಿಗೈಯಾಗುತ್ತಾನೆ. ಊರಿನಲ್ಲಿ ಯಾರಿಂದಲೂ ನಯಾಪೈಸೆ ಸಾಲ ಹುಟ್ಟದ ಸ್ಥಿತಿಗೆ ತಲುಪುತ್ತಾನೆ. ಎಸಿಎಫ್ ಕೋರ್ಟಿನಲ್ಲಿ ಚಿಕ್ಕೇಗೌಡನ ವಿರುದ್ಧವಾಗಿ ತೀರ್ಪು ನೀಡಿದ ನ್ಯಾಯಾಧೀಶರು, ಕಂದಾಯ ಇಲಾಖೆ ಮಂಜೂರು ಮಾಡಿದ್ದ ನಾಲ್ಕು ಎಕರೆ ಜಮೀನನ್ನು 1963 ರ ಅರಣ್ಯ ಕಾನೂನು 43(A) ಅನ್ವಯ ಅರಣ್ಯ ಇಳಾಖೆಯ ವಶಕ್ಕೆ ನೀಡುತ್ತಾರೆ.
ಬ್ಯಾಂಕಿನ ಸಾಲ ಹಿಂತಿರುಗಿಸಲಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ಮನೆಯನ್ನು ಜಪ್ತಿ ಮಾಡಿ ಹರಾಜು ಹಾಕುವುದಾಗಿ ನೊಟೀಸ್ ಕಳಿಸುತ್ತಾರೆ. ದಿಕ್ಕು ತೋಚದ ಚಿಕ್ಕೇಗೌಡ ಊರಾಚೆ ಕಲ್ಲಿನ ಗಣಿಗಾರಿಕೆಯಿಂದ ತೋಡಿ ಬರಿದಾದ ಕಲ್ಗುಟ್ಟೆ ತಲುಪುತ್ತಾನೆ.
ಸರ್ಕಾರವೇ ಕಲ್ಲುಗಣಿಗಾರಿಕೆಯ ಗುತ್ತಿಗೆ ನೀಡಿ, ಹಿಂದೊಮ್ಮೆ ಸುತ್ತಮುತ್ತಲಿನ ಜೀವಮಂಡಲದ ಗುರುತಾಗಿದ್ದ ಗುಡ್ಡವು ಯಂತ್ರಗಳಿಂದ ಬಗೆದು ತೆಗೆದು ಈಗ ಬರಿದಾಗಿದೆ. ಬಿಕೋ ಎನ್ನುವ ಕಲ್ಗುಟ್ಟೆಯ ಪಾಡು ಚಿಕ್ಕೇಗೌಡನಿಗೂ ಬಂದೊದಗಿರುವ ದೃಶ್ಯ ಮತ್ತು ಆ ಸಂದರ್ಭದಲ್ಲಿ ಧ್ವನಿಗೊಂಡಿರುವ ಹಾಡು ಸಮಸ್ತ ಬಗರ್ ಹುಕುಂ ರೈತರ ಎದೆಗಳನ್ನು ಬಗೆದು ಹಾಕಿರುವ ಸರ್ಕಾರದ ರೈತವಿರೋಧಿ ಕಾನೂನುಗಳ, ಭ್ರಷ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ರಾಕ್ಷಸೀಯತೆಗೆ ಕನ್ನಡಿ ಹಿಡಿಯುತ್ತವೆ. ‘ಬದುಕಬೇಕು ಅನ್ನಿಸ್ತಿಲ್ಲ ಕಣೇ ಸರೋಜ’ ಎಂದು ಹೆಂಡತಿಯ ಮುಂದೆ ಹತಾಶನಾಗಿ ಕಣ್ಣೀರಾಗುತ್ತಾನೆ. ಬಸುರಿ ಹೆಂಡತಿಯೂ ತಮಗೀಗ ಒದಗಿರುವ ಪರಿಸ್ಥಿತಿ ಮತ್ತು ಹೊಟ್ಟೆಯಲ್ಲಿರುವ ಕಂದನ ಮುಂದಿನ ಪಾಡೇನೆಂದು ನೆನೆದು ಕಣ್ಣೀರಾಗುತ್ತಾಳೆ.
ಇದೇ ವೇಳೆಗೆ ಊರದೇವತೆಯ ಪರಿಶೆ ಸಾರಿಕ್ಕಿ ಇಡೀ ಊರು ರಂಗು ತುಂಬಿಕೊಂಡು ಸಡಗರ ಸಂಭ್ರಮದಿಂದ ಉರಿದುಬ್ಬುತ್ತಿರುತ್ತದೆ. ಮನೆಯಲ್ಲಿದ್ದ ಫಲಿನಕುರಿ ಮರಿಹಾಕಿದ್ದು, ಮರಿಗುರಿಯನ್ನು ಹೋದಷ್ಟಕ್ಕೆ ಸೀದು ಚಿಕ್ಕೇಗೌಡನು ಕೂಡಾ ಊರಬ್ಬಕ್ಕೆ ಬೇಕಾದ ಹೂವು ಹಣ್ಣು ದವನ ತರಕಾರಿಗಳನ್ನು ಹೊತ್ತು ತರುತ್ತಾನೆ.
ಊರಬ್ಬಕ್ಕೆ ಪೂಜಾ ಕುಣಿತ ಪಟದ ಕುಣಿತ ತಮಟೆ ಭೇರಿ ನಗಾರಿ ರಂಗೇರುವಾಗ ಇಡೀ ಊರು ತನ್ನ ಸಾವಿನ ಆಚರಣೆಯ ಸಂಭ್ರಮಕ್ಕೆ ತೊಡಗಿರುವಂತೆ ಚಿಕ್ಕೇಗೌಡ ಭಾವಿಸುತ್ತಾನೆ. ಮನೆಯಲ್ಲಿ ಜಳಕ ಮಾಡುತ್ತಿದ್ದ ತನ್ನ ಗರ್ಭಿಣಿ ಹೆಂಡತಿಯಾದ ಸರೋಜಳಿಗೆ ಹೊಲದ ಕಡೆಗೆ ಹೋಗಿ ಬರುವೆನೆಂದು ತಿಳಿಸಿ ತಾನು ಕಳೆದುಕೊಂಡ ಜಮೀನಿಗೆ ಹೋಗುತ್ತಾನೆ. ತಾನೇ ತನ್ನ ಕೈಯಾರ ಉತ್ತು ಬಿತ್ತಿ ಬೆಳೆದು ಹಾಲ್ದುಂಬಿ ಕಾಳೊರೆಯುತ್ತಿರುವ ರಾಗಿಹೊಲ ಮತ್ತು ಅಕ್ಕಡಿ ಸಾಲಿನ ಜೋಳದ ದಂಟನ್ನು ತಬ್ಬಿಕೊಂಡು ತಾನಿನ್ನು ಈ ಲೋಕಕ್ಕೆ ವಿದಾಯ ಹೇಳುತ್ತಿರುವುದಾಗಿ ತನ್ನದೇ ರೋದನೆಯ ಭಾಷೆಯಲ್ಲಿ ಹಸಿರು ಹೊಲದ ಕಿವಿಗೆ ಹಾಕಿ ಊರಾಚೆಯ ಮರದ ಕೊಂಬೆಯಲ್ಲಿ ನೇಣಿಗೆ ಶರಣಾಗುತ್ತಾನೆ ಚಿಕ್ಕೇಗೌಡ.
ಗಂಡನ ಸಾವಿನ ಸುದ್ದಿ ತಿಳಿದ ಬಸುರಿ ಸರೋಜ ಹತಾಶಳಾಗಿ ಬಾವಿಯೊಂದರ ಬಳಿ ಬಂದು ನಿಂತು ಹೊಟ್ಟೆಯೊಳಗಿರುವ ಕಂದನನ್ನು ತಡಕಿಕೊಳ್ಳುತ್ತಾಳೆ. ಇದಿಷ್ಟು ಬಗರ್ ಹುಕುಂ ಜಮೀನಿನ ರೈತ ಚಿಕ್ಕೇಗೌಡನ ಕುಟುಂಬದ ಕಥೆ. ಈ ಕಥೆ ಇಲ್ಲಿಗೆ ಮುಗಿಯುವುದಿಲ್ಲ…
ಆಳುವ ವರ್ಗಗಳ ವಿಷಮಕೂಟ ವ್ಯವಸ್ಥೆಯಿಂದ ಜರ್ಜರಿತನಾಗಿ ನೇಣಿಗೆ ಕೊರಳೊಡ್ಡುವ ಬಡರೈತ ಚಿಕ್ಕೇಗೌಡನ ನೈಜ ಕಥಾನಕದ ನಿರೂಪಣೆಯ ಮೂಲಕ, ಸರ್ಕಾರದ ವೈರುಧ್ಯಮಯ ನೀತಿಗಳಿಂದಾಗಿ ರೈತರ ಬದುಕಿನಲ್ಲಾಗಿರುವ ಜೀವಾಂತಕ ಗಾಯದ ಯಾತನೆಯನ್ನು ಮತ್ತು ಗಾಯದ ಚಹರೆಗಳನ್ನು ನಿರ್ದೇಶಕ ಹೃದಯಶಿವ ಅತ್ಯಂತ ಪರಿಣಾಮಕಾರಿಯಾಗಿ ಬೆಳ್ಳಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಸಾಹಿತ್ಯ(literature), ಸಂಗೀತ(music) ಹಾಗೂ ಕಲೆ(art)ಗಳಿಂದ ದೂರ ಬಹುದೂರ ಸಾಗುತ್ತಿರುವ ಕೆಲವು ನಿರ್ದೇಶಕರಿಂದಾಗಿ ಆಧುನಿಕ ಕನ್ನಡ ಸಿನಿಮಾ ಉದ್ಯಮವು ಲೈಂಗಿಕತೆ(Sex), ಅಪರಾಧ(Crime), ಶ್ರೀಮಂತಿಕೆ(Richness), ಮಾದಕತೆ(glamour), ತಂತ್ರಜ್ಞಾನ(Technology), ಭ್ರಮೆ(Hallucination), ಆಶ್ಲೀಲತೆ(obscenity)ಗಳನ್ನೇ ಸಿನಿಮಾ ಎಂದು ಒಪ್ಪಿಸುತ್ತಿದೆ.
ಕೋಟಿಗಟ್ಟಳೆ ಬಂಡವಾಳ ಹೂಡಿ ಕೋಟ್ಯಾನುಕೋಟಿ ರೂಪಾಯಿಗಳನ್ನು ಪ್ರೇಕ್ಷಕರಿಂದ ಸುಲಿಗೆ ಮಾಡುತ್ತಿರುವ ಬಂಡವಾಳಶಾಹಿಗಳಿಗೆ ಸಮಾಜ ಬದಲಾಣೆಯ ಯಾವುದೇ ಹೊಣೆಗಾರಿಕೆ ಕಾಣಿಸುತ್ತಿಲ್ಲ. ಕೆಲವರು ಸಿನಿಮಾಗಳಿಂದಲೇ ದುಡ್ಡು ಮಾಡಿ ಕೋಮುವಾದದ ವ್ಯಾಪಾರಿಗಳಾಗಿದ್ದಾರೆ. ದಗಲ್ಬಾಜಿ ರಾಜಕಾರಣಿಗಳ ಏಜೆಂಟರುಗಳಾಗಿದ್ದಾರೆ. ಇಂತಹ ವಿಕೃತಿಗಳಿಂದ ಕನ್ನಡ ಸಿನಿಮಾ ಉದ್ಯಮವು ಬಿಡಿಸಿಕೊಳ್ಳಬೇಕು.ಇದು ರೈತರ ಭಾರತ. ರೈತರ ಬದುಕು ಸುಧಾರಣೆಯಾಗಬೇಕೆಂಬ ಹಂಬಲವಿರುವ ನೇಗಿಲ ಯೋಗಿಗಳ ‘ಬಿಸಿಲು ಕುದುರೆ’ ಎಂಬ ಈ ಚಲನಚಿತ್ರವನ್ನು ನೀವೂ ನೋಡಿ ಬೆಂಬಲಿಸುವಿರೆಂಬ ಸದಾಶಯದೊಂದಿಗೆ…
ತಾರಾಗಣ : ಸಂಪತ್ ಮೈತ್ರೇಯ : ಚಿಕ್ಕೇಗೌಡ
ಸುನಿತಾ : ಸರೋಜಿ
ಕರಿಸುಬ್ಬು : ಸುಬ್ಬಣ್ಣ
ಮಳವಳ್ಳಿ ಸಾಯಿಕೃಷ್ಣ : ಶೆಟ್ಟಿ ಮಂಜಣ್ಣ
ಭಾಸ್ಕರ್ ಶೆಟ್ಟಿ : ACF
ವಿಕ್ಟರಿ ವಾಸು : ವಕೀಲ.
ಕಥೆ, ಚಿತ್ರಕತೆ, ಸಂಭಾಷಣೆ, ಗೀತರಚನೆ, ನಿರ್ದೇಶನ, ನಿರ್ಮಾಣ : ಹೃದಯ ಶಿವ.ಬಗೀತ ಸಂಗೀತ : ಇಮ್ತಿಯಾಜ್ ಸುಲ್ತಾನ್
ಹಿನ್ನೆಲೆ ಸಂಗೀತ : ನೀತು ನಿನಾದ್
ಛಾಯಾಗ್ರಹಣ : ನಾಗಾರ್ಜುನ್ ಡಿ
ಸಂಕಲನ : ಬಿ. ಎಸ್.ಕೆಂಪರಾಜು
ಸಿನಿ ವಿಮರ್ಶೆ: ಡಾ.ವಡ್ಡಗೆರೆ ನಾಗರಾಜಯ್ಯ
8722724174