Saturday, March 14, 2026
Google search engine
Home Blog Page 71

ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಿಸಿ :ಕಳ್ಳಿಪಾಳ್ಯ ಲೋಕೇಶ್

0

Publicstory/prajayoga

ವರದಿ,ದೇವರಾಜ್ ಗುಬ್ಬಿ

ಗುಬ್ಬಿ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪೋಷಿಸಿ ಬೆಳೆಸುವ ಕೆಲಸ ಮಾಡಲು ಶಿಕ್ಷಣ ಇಲಾಖೆ ಆಯೋಜಿಸುವ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಮತ್ತು ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಕರೆ ನೀಡಿದರು.

ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಕಸಬಾ ಹೋಬಳಿ ಅಡಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕುಚಿತ ಮನೋಭಾವ ಬೆಳೆಸಿಕೊಂಡ ಮಕ್ಕಳು ಸೂಕ್ಷ್ಮ ಮತೀಯ ಆಲೋಚನೆ ಮಾಡುತ್ತಾರೆ. ಇಂತಹ ವೇದಿಕೆ ಮೂಲಕ ಮಕ್ಕಳಲ್ಲಿ ವಿಶಾಲ ಹಾಗೂ ಕ್ರೀಡಾ ಮನೋಭಾವ ಬೆಳೆಸುವ ಕೆಲಸ ಆಗಬೇಕಿದೆ ಎಂದರು.

ಮಕ್ಕಳ ವಿಕಸನಕ್ಕೆ ಪಾಠ ಪ್ರವಚನ ಜೊತೆ ಸಾಂಸ್ಕೃತಿಕ ಕಲೆ ಅಗತ್ಯವಿದೆ. ಹಲವು ಪ್ರತಿಭೆಗಳು ಎಲೆ ಮರೆ ಕಾಯಂತೆ ಮರೆಯಾಗುವ ಮುನ್ನ ಮಕ್ಕಳ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ಬೇಕು. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ವೇದಿಕೆ ಉತ್ತಮ. ಕ್ರೀಡೆಗೆ ನಾನಾ ರೀತಿಯ ತರಬೇತಿ ನೀಡುವ ಕೆಲಸ ಮಾಡುವ ಸರ್ಕಾರ ಮಕ್ಕಳಲ್ಲಿ ಅಡಗಿರುವ ಕಲೆಗೆ ನೀರೆರೆಯುವ ಕೆಲಸ ಮಾಡಬೇಕು. ಪ್ರತಿಭಾ ಕಾರಂಜಿ ಮೂಲಕ ಬೆಳಕಿಗೆ ಬರುವ ಮಕ್ಕಳ ಪ್ರತಿಭೆ ಹಾಗೆಯೇ ಮುಂದುವರೆಸಲು ಸಹಕಾರ ನೀಡಲು ಸರ್ಕಾರ ಇಲಾಖೆಗೆ ನಿರ್ದೇಶನ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅಡಗೂರು ಕ್ಲಸ್ಟರ್ ಶಾಲೆಯ ಎಲ್ಲಾ ಮಕ್ಕಳು ತಮ್ಮ ಕಲೆಯ ಪ್ರದರ್ಶನ ಮಾಡಿದರು.

ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ, ಮಂಜುನಾಥ್, ಎಸ್ ಡಿಎಂಸಿ ಸದಸ್ಯ ನಿರಂಜನ್, ಮುಖಂಡರಾದ  ಆನಂದ್, ಲಕ್ಷ್ಮಣ, ಕೃಷ್ಣಪ್ಪ ಇತರರು ಇದ್ದರು.

ಸೆ.17 ಸಿದ್ದಗಂಗಾ ಮಠದಲ್ಲಿ  ಯೋಗಾಥಾನ್-2022

0

Publicstory/Prajayoga

ತುಮಕೂರು : ಶ್ರೀ ಸಿದ್ದಗಂಗಾ ಮಠದಲ್ಲಿ ಸೆಪ್ಟೆಂಬರ್ 17ರಂದು “ಯೋಗದಿಂದ ರೋಗ ಮುಕ್ತ, ಯೋಗವನ್ನು ಸಾರಿ ವಿಶ್ವ ದಾಖಲೆ ಮಾಡೋಣ” ಎಂಬ ಘೋಷ ವಾಕ್ಯದೊಂದಿಗೆ   ನಡೆಯುವ ಯೋಗ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 15ಸಾವಿರ ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಯನ್ನು ಕೈಗೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ  ಸೂಚಿಸಿದ್ದಾರೆ.

ಅಂದು ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ವಿಶ್ವ ಯೋಗ ದಿನಾಚರಣೆ ಸಮಿತಿ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಅಶ್ವಿನಿ ಆಯುರ್ವೇದ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ಬ್ರಹ್ಮಕುಮಾರಿ ಸಂಸ್ಥೆ, ಪದವಿಧರ ಆಯುಷ್ ವೈದ್ಯರ ಸಂಘ, ಆರೋಗ್ಯ ಭಾರತಿ ಸಂಸ್ಥೆ, ಕಾಲೇಜು ಶಿಕ್ಷಣ ಸಂಸ್ಥೆಗಳು, ಜಿಲ್ಲಾ ಮಟ್ಟದ ಎಲ್ಲಾ ಇಲಾಖಾವಾರು ಅಧಿಕಾರಿಗಳು ಸೇರಿದಂತೆ ವಿವಿಧ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ  ಎಂದು ತಿಳಿಸಿದರು.

ಭಾಗವಹಿಸುವ ಯೋಗಪಟುಗಳು www.yogathon2022.com ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಕು ನಿಲ್ಲಿಸು ಜಾತಿ ಸೊಕ್ಕ

0

Publicstory/Prajayoga

ಹರೀಶ್ ಬ್ರಹ್ಮದೇವರಹಳ್ಳಿ

ನಾನು ಹಿಂದೂ
ನೀವ್ಯಾಕೆ ಜಾತಿಯಲಿ ಮುಂದು…!

ನಾನು ಬೆನಕ
ಆದರ ಜೊತೆ ಯಾಕೆ ಕನಕ
ತೆರೆಯ ಬೇಡ ಹೋಳಿಗೆಯಲಿನ
ಜಾತಿಯೆಂಬ ಕನಕ…!

ನಾನು ವಿನಾಯಕ
ಆದರೆ ಯಾಕೆ ಜೊತೆಗೆ ನಾಯಕ
ವಿಂಗಡಿಸಬೇಡ ಹಿಂದೂ
ಸಾಮಾಜ್ರದಲಿನ ನಾಯಕ…!

ನಾನು ಏಕದಂತ
ಆದರೆ ಯಾಕೆ ಜೊತೆಗೆ ಯಾದವಂತ
ಬೆರ್ಪಡಿಸಬೇಡ ಯಾಮಾರಿಯೂ
ತರಬೇಡ ಯಾದವಂತ…!

ನಾನು ಗಣಪ್ಪ
ಆದರೆ ಯಾಕೆ ಜಾತಿಯೆಂಬ ವಡ್ಡ ಅಡ್ಡ
ಹಿಂದೂ ನಾವೆಲ್ಲ ಒಂದು
ತರಬೇಡ ಜಾತಿಯೆಂದು ಅಡ್ಡ…!

ನಾನು ಗಣೇಶ
ಅದರೆ ಯಾಕೆ ಹಳೆಯವೇಶ
ಹಾಕಬೇಡ ಎಲ್ಲಿಯೂ
ಯಾವ ಜಾತಿಯ ಸಂದೇಶ..!

ನಾನು ಗಜಮುಖ
ಆದರೆ ಯಾಕೆ ಜೊತೆಗೆ ಮಣೆಗಾರನ ಮುಖ
ಸಾಕಲ್ಲವೇನೂ ಹಿಂದೂವೆಂಬ
ದೊಡ್ಡ ಗಾತ್ರದ ಮಖ…!

ನಾನು ಕರಿಮುಖ
ಆದರೆ ಯಾಕೆ ಜೊತೆಗೆ ಗೌಡ
ಬೇಕಾಗಿಲ್ಲ ಹಿಂದೂ ಬಿಟ್ಟು
ಬೇರ್ಯಾವ ಪ್ರಮಾಣಪತ್ರದ ಗೌಡ…!

ಮನುಜ ಸಾಕು ನಿಲ್ಲಿಸು
ನಿನ್ನ ಜಾತಿ ಸೊಕ್ಕ
ನನಗೆ ಇಲ್ಲದಾಗ ಯಾಕೆ
ಬೇಕು ಈ ಜಾತಿ ಹಕ್ಕ…!

(ಬಹರ ಲೇಖಕರದ್ದು, ವೆಬ್‌ಸೈಟ್‌ನ ಅಭಿಪ್ರಾಯವಲ್ಲ)

ಕಾಂಗ್ರೆಸ್ಗೆ ಮುದ್ದಹನುಮೇಗೌಡ ರಾಜೀನಾಮೆ!

Publicstory/Prajayoga

ಡಿಕೆಶಿ-ಸಿದ್ದು ಜತೆ ಮಾತುಕತೆ ನಡೆಸಿ ಮಹ್ವತ್ವದ ನಿರ್ಧಾರ ಪ್ರಕಟಿಸಿದ ಎಸ್ಪಿಎಂ

ಬೆಂಗಳೂರು: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಕುಣಿಗಲ್ ವಿಧಾನಸಭಾ ಕ್ಷೇತ್ರದ ಚುಣಾವಣಾ ಅಖಾಡ ರಂಗೇರುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಗುರುವಾರ ಬೆಳಗ್ಗೆ ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಆಗುವುದು ಖಚಿತ ಎನ್ನುತ್ತಲೇ ಇಂದು ಸಂಜೆಯೊಳಗೆ ಕಾಂಗ್ರೆಸ್​ಗೆ ರಾಜೀನಾಮೆ ಪತ್ರ ಕೊಡುವೆ ಎಂದರು.

ರಾಜೀನಾಮೆ ಘೋಷಣೆಗೂ ಮುನ್ನ ಡಿಕೆಶಿ ಅವರನ್ನು ಭೇಟಿ ಮಾಡಿ ಮುದ್ದಹನುಮೇಗೌಡರು ಮಾತುಕತೆ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಎಸ್​.ಪಿ.ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು. ಈ ಕುರಿತು ಈ ಹಿಂದೆ ಹಲವು ಬಾರಿ ಎಸ್​ಪಿಎಂ ಆಕ್ರೋಶ ಹೊರ ಹಾಕಿದ್ದರು. ಈ ಭಾರಿ ಕುಣಿಗಲ್​ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿರುವ ಎಸ್​ಪಿಎಂ, ಕಾಂಗ್ರೆಸ್​ನಿಂದ ಟಿಕೆಟ್​ ಕೇಳಿದ್ದರು. ಆದರೆ, ಹಾಲಿ ಶಾಸಕ ರಂಗನಾಥ್​ ಪರ ಡಿ.ಕೆ.ಸುರೇಶ್​ ಮತ್ತು ಡಿಕೆಶಿ ಒಲವಿದ್ದು, ಎಸ್​ಪಿಎಂಗೆ ಕಾಂಗ್ರೆಸ್​ನಿಂದ ಭರವಸೆ ಸಿಕ್ಕಿಲ್ಲ. ಹಾಗಾಗಿ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸುತ್ತಲೇ ಮತ್ತೊಮ್ಮೆ ಬೇಸರ ಹೊರಹಾಕಿದರು.

ರಾಜೀನಾಮೆ ಘೋಷಣೆಗೂ ಮುನ್ನ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮುದ್ದಹನುಮೇಗೌಡರು ಮಾತುಕತೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದಿಂದ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ರೆ ಹೇಳಲಿ ಎಂದು ಕೇಳಿದ್ದೇನೆ. 1989ರಲ್ಲಿ ಕುಣಿಗಲ್ ಕ್ಷೇತ್ರಕ್ಕೆ ಬಿಫಾರಂ ಕೊಟ್ರು, ಬಳಿಕ ಇನ್ನೊಬ್ಬರಿಗೆ ಸಿ ಫಾರಂ ಕೊಟ್ರು. ಅಂದಿನಿಂದಲೂ ನನಗೆ ಹಲವು ಬಾರಿ ಸಮಸ್ಯೆ ಆಗಿದೆ ಎಂದು ಬೇಸರ ಹೊರಹಾಕಿದರು.

ನಾನು ಕಾಂಗ್ರೆಸ್​ನಿಂದ ದೂರ ಸರಿದಿದ್ದೇನೆ. ಸಾಂಕೇತಿಕವಾಗಿ ಭೇಟಿ ಮಾಡಬೇಕಿತ್ತು. ಹಾಗಾಗಿ ಭೇಟಿ ಮಾಡಿದ್ದೇನೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಸುರ್ಜೇವಾಲಾ ದೂರವಾಣಿ ಮೂಲಕ ಮಾತನಾಡಿದ್ರು. ಇತ್ತೀಚಿಗೆ ನನ್ನ ಜತೆ ಮಾತನಾಡಿಲ್ಲ. ಇಂದು ಸಂಜೆಯೊಳಗೆ ಕಾಂಗ್ರೆಸ್‌ಗೆ ಅಧಿಕೃತವಾಗಿ ರಾಜೀನಾಮೆ ಕೊಡ್ತೀನಿ ಎಂದರು.

ನಾನು ತುಮಕೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷನಾಗಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಹಲವು ಅವಕಾಶ ಕೊಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ ನಾನು ಪಕ್ಷಕ್ಕೆ ದುಡಿದಿದ್ದೇನೆ. ನಾಲ್ಕು ಬಾರಿ ನನಗೆ ಟಿಕೆಟ್ ತಪ್ಪಿತ್ತು. 2019ರ ಲೋಕಸಭಾ ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿಸಿದ್ರು. 2019ರಲ್ಲಿ ನನಗೆ ಟಿಕೆಟ್ ತಪ್ಪಿಸುವಲ್ಲಿ ಕೆಲವರ ಪಾತ್ರ ಇದೆ. ವೇಣುಗೋಪಾಲ್ ಅವರು ಆ ಸಮಯದಲ್ಲಿ ನನಗೆ ಕೆಲ ಭರವಸೆ ಕೊಟ್ಟಿದ್ರು. ಈಗ ಅವರು ಅದರ ಬಗ್ಗೆ ಮಾತನಾಡಿಲ್ಲ. ಇತ್ತಿಚೆಗೆ ನಡೆದ ರಾಜಕೀಯ ವಿದ್ಯಮಾನಗಳಿಂದ ಇಂತಹ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ಎತ್ತುಗಳ ಕಳ್ಳ ಸಾಗಾಣಿಕೆ; ಆರೋಪಿಗಳ ಬಂಧನ

0

Publicstory/Prajayoga

– ವರದಿ, ಎ.ಶ್ರೀನಿವಾಸಲು

ಪಾವಗಡ: ಪಟ್ಟಣದ ತುಮಕೂರು ರಸ್ತೆಯಲ್ಲಿ ಬುಧವಾರ  ರಾತ್ರಿ 9 ಗಂಟೆ ವೇಳೆಗೆ, ಅಕ್ರಮವಾಗಿ ಎತ್ತುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಹಿಂದೂಪರ ಸಂಘಟನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದಾಗ ಕಣೆಕಲ್ ನಿಂದ ಹಿಂದೂಪುರಕ್ಕೆ 05 ಎತ್ತುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡ ಹೋಗುತ್ತಿರುವ ವಿಚಾರ ತಿಳಿದು ಬಂದಿದೆ.   ಈ  ವೇಳೆ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆಂಧ್ರಪ್ರದೇಶದ ಆದಿಗೇನಪಲ್ಲಿಯ ಭೀಮಣ್ಣ (28). ಕನೇಕಲ್ ನ. ಅಫಾನ್ ಫಯಾಜ್ (23) ಬಂಧಿತ ಆರೋಪಿಗಳಾಗಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ಗಣೇಶೋತ್ಸವ : ಸಿದ್ದಲಿಂಗ ಶ್ರೀ

Publicstory/Prajayoga

ತುಮಕೂರು: ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 46ನೇ ವರ್ಷದ 35 ದಿನಗಳ ಗಣೇಶೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

ಗಣೇಶೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ,‌ ಸ್ವಾತಂತ್ರ್ಯೋತ್ಸವಕ್ಕೆ ಕೊಡುಗೆ ಕೊಟ್ಟ ಉತ್ಸವ ಎಂದರೆ ಗಣೇಶೋತ್ಸವ ಎಂದು ಹಮ್ಮೆಯಿಂದ ಹೇಳಿಕೊಳ್ಳಬಹುದು. ಬಾಲಗಂಗಾಧರನಾಥ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಬಹಳ ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದರು. ಮನೆಗಳಲ್ಲಿ ಗಣೇಶೋತ್ಸವನ್ನು ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಗ್ರವಾಗಿ ಒಟ್ಟಾಗಿ ಸೇರಿ ಐಕ್ಯತೆಯಿಂದ ಗಣೇಶೋತ್ಸವವನ್ನು ಮಾಡಬೇಕೆಂಬ ವ್ಯವಸ್ಥೆ ಮಾಡಿ ಜನರಲ್ಲಿ ಸ್ವಾತಂತ್ರ್ಯೋತ್ಸವದ ಕಿಚ್ಚನ್ನು ಹಚ್ಚಬೇಕು ಎಂಬ ಉದ್ಧೇಶವನ್ನಿಟ್ಟುಕೊಂಡು ಪ್ರಾರಂಭ ಮಾಡಿದರು ಎಂದು ನುಡಿದರು.

ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ ಗಣೇಶೋತ್ಸವಕ್ಕೆ ಒಂದು ಇತಿಹಾಸವಿದೆ. ಭಾರತೀಯ ಪರಂಪರೆಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹತ್ತು ಹಲವು ಕ್ಷೇತ್ರಗಳ ವೈವಿಧ್ಯಮಯ ಕಲಾವಿದರು ಈಕ್ಷೇತ್ರಕ್ಕೆ ಬಂದು ತಮ್ಮಲ್ಲಿನ ತಮ್ಮ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ವಿನಾಯಕನ ಸೇವೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಈ ಗಣಪತಿಯನ್ನು ಸಾಂಸ್ಕೃತಿಕ ಗಣಪತಿ ಎಂದು ಕರೆಯಲು ಇಚ್ಚಿಸುತ್ತೇನೆ ಎಂದರು.

ಗಣೇಶೋತ್ಸವನ್ನು ಬರೀ ಹಿಂದೂಗಳೇ ಆಚರಿಸಕೊಂಡು ಬಂದಿಲ್ಲ, ಮುಸ್ಲೀಂ ಬಾಂಧವರೂ ಕೂಡ ಆಚರಿಸಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ, ಆದುದರಿಂದ ನಾವು ಗಣಪತಿಯನ್ನು ಹಿಂದೂ ಗಣಪತಿ ಎಂದು ಲೇಬಲ್ ಮಾಡದೆ ಸರ್ವಜನಾಂಗದ ಗಣಪತಿ ಎಂದು ಕರೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿದ್ಧಿವಿನಾಯಕ ಸೇವಾ ಮಂಡಳಿ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್, ಮಹಾನಗರಪಾಲಿಕೆ ಸದಸ್ಯೆ ನಾಸಿರಾ ಬಾನು, ದಸರಾ ಉತ್ಸವ ಸಮಿತಿಯ ಕೋರಿ ಮಂಜುನಾಥ್, ಸಿದ್ದಿವಿನಾಯಕ ಸೇವಾ ಮಂಡಳಿ ಉಪಾಧ್ಯಕ್ಷ, ಬಾವಿಕಟ್ಟೆ ಮಂಜುನಾಥ್, ಎಸ್.ನಾಗಣ್ಣ, ಬೆಸ್ಕಾಂನ ಹಿರಿಯ ಅಧಿಕಾರಿಗಳಾದ ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಅವಳು ಶಿವೆ!

0

Publicstory/Prajayoga

ಡಾ.ವಡ್ಡಗೆರೆ ನಾಗರಾಜಯ್ಯ
8722724174

ಜಟಾಧರ ನೀಲಕಂಠನ ಮುಡಿಯಲ್ಲಿ
ನಿಟ್ಟುಗಟ್ಟೆ ಕಟ್ಟಿದ ಗಂಗಮ್ಮ ಎಂಬ
ಸವತಿಯ ಕೂಟೆ ಜಗಳ ಕಾಯ್ದವಳು!

ಅಂಟು ಮುಟ್ಟಾಗಿ
ಮುಟ್ಟಿನ ಕೋಡಿ ಹರಿದರೂ
ನೀರಿಲ್ಲದ ಠಾವಿನಲ್ಲಿ ಮಡಿಬಟ್ಟೆ
ಬಿಡಲಾಗದೆ ಚಡಪಡಿಸಿದವಳು!

ತಾನೊಂದು ಚಮ್ಮಡದ ತುಂಡೆಂದು
ಅರಿಯುವ ಮುನ್ನ ಶಿವನುಟ್ಟ
ಗಜಚರ್ಮಾಂಬರವ ಕಂಡು ಬೆಚ್ಚಿಬಿದ್ದವಳು!

ಸುಡುಗಾಡು ಬಿಸಿಬೂದಿಯ ಭೂತನಾಥ
ನರಕಪಾಲವ ಹಿಡಿದು ಕೊರಳಿಗೆ
ಸರುಪವ ಧರಿಸಿ ತಕಥೋಂ ನಾಟ್ಯವಾಡುವಾಗ
ಡಮರು ನಿನಾದವಾಗಿ
ನಂಜುಂಡನ ಗುಂಡಿಗೆ ತಾಳದ ಲಯಕ್ಕೆ
ನುಡಿಗೊಂಡು ಒಡನೆ ಕುಣಿದ ನಾಟ್ಯ ಮಯೂರಿ!

ಕೈಲಾಸದಲ್ಲಿ ಲಿಂಗ ಕತ್ತರಿಸಿ
ಧಾರಿಣಿಯ ಸೆಳೆವಿಗೆ ಇಳಿಯುವಾಗ
ಅಂಗಾತ ಮೈಯೊಡ್ಡಿ ಭಗಪೀಠದಲ್ಲಿ
ಆಂತುಕೊಂಡ ಮಹಾ ಧರಿತ್ರಿ; ಸೃಷ್ಟಿ ವ್ಯಷ್ಟಿ ಸಮಷ್ಟಿ!
ಅವಳು ಶಿವೆ!!

ಹಿಮಗಿರಿಯ ಪಾದ ಪಂಕಜದ
ಕಣಿವೆ ಕಂದರದಲ್ಲಿ ಕಾಮಧೇನು
ಕರಿ ತುರಗ ಮೂಷಿಕ
ಮೂಗುತ್ತದ ಕ್ವಾವೆಯಲ್ಲಿಳಿದ
ಮುನ್ನೂರು ಮೂವತ್ತು ಕೋಟಿ
ಜೀವಮಂಡಲ ದೇವಮಂಡಲ ರಾಶಿಗಣದೊಡತಿ!

ಗಂಗಮ್ಮನಿಗೆ ತಲೆಬಾಗಿ
ಸಕಲ ಕುಲದ ತಾಯಿ ನೀನೆಂದು ನಮಿಸಿ
ಜೋಡಿ ನಿಟ್ಟುಗಟ್ಟೆ ನಿಜಲಿಂಗಕ್ಕೆ ಲೇಸೆಂದು
ಅಭೇದ್ಯವಾಗಿ ಎಲ್ಲರೊಳಗೊಂದಾದ
ಧನ್ವಂತ್ರಿಯ ಮಗಳು
ಎರಡೊಂದಾಗಿ ಕೂಡಿದ ಮಹಾದೇವಿ;
ಅವಳು ಶಿವೆ!!

ನನ್ನ ನೆತ್ತಿ ಬಾಯೊಳಗಿಳಿದು
ಪರಕಾಯ ಆವಾಹನೆಗೊಂಡು
ಆಮೋದ ಪ್ರಮೋದ ಭ್ರೂಮಧ್ಯ ಬೆಳಕಾಗಿ
ನಾಭಿಯಲ್ಲಿ ಚಿಗುರಿ ಬೋಧಿಯಾದವಳು!
ಅವಳು ಶಿವೆ!!

(ಬರಹ ಲೇಖಕರದ್ದು, ವೆಬ್‌ಸೈಟ್‌ನ ಅಭಿಪ್ರಾಯವಲ್ಲ)

ಕೆಆರ್‌ಎಸ್ ಪಕ್ಷದ ಕಾರ್ಯಾಚರಣೆ ; ಎಚ್ಚೆತ್ತ ಟಿಎಚ್‌ಒ

Publicstory/prajayoga

ಶಿರಾ: ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಆರ್‌ಎಸ್ ಪಕ್ಷ ನಡೆಸಿದ್ದ ಕಾರ್ಯಾಚರಣೆ ಪ್ರತಿಫಲವಾಗಿ ನೂತನ ವೈದ್ಯರನ್ನು ನೇಮಿಸುವುದಾಗಿ ಟಿಎಚ್ಒ ಭರವಸೆ ನೀಡಿದ್ದಾರೆ ಎಂದು ಶಿರಾ ಕ್ಷೇತ್ರದ ವಿಧಾಸಭಾ ಸಂಭಾವ್ಯ ಅಭ್ಯರ್ಥಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ವೈದ್ಯರು ಮೂರು ತಿಂಗಳಿನಿಂದಲೂ ಗೈರಾಗಿದ್ದರು. ನಾವು ಆ.26 ರಂದು ಬೇಟಿ ನೀಡಿದಾಗ ವೈದ್ಯರು ಇರಲಿಲ್ಲ. ಫ್ಯಾಕ್ಟ್ ಚೆಕ್ ಮಾಡಲು ಮತ್ತೊಮ್ಮೆ ಆ.29 ರಂದು ಕೂಡ ಭೇಟಿ ನೀಡಿದಾಗ ವೈದ್ಯರ ಗೈರು ಹಾಜರಿಯನ್ನು ಖಚಿತ ಪಡಿಸಿಕೊಂಡು ಫೇಸ್ ಬುಕ್ ವೀಡಿಯೋ ಲೈವ್ ಮಾಡಿ, ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್ ಅವರ ಗಮನಕ್ಕೆ ತಂದಿದ್ದೆವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆರೋಗ್ಯ ಕೇಂದ್ರಕ್ಕೆ ಮತ್ತೊಬ್ಬ ವೈದ್ಯರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಕಾರ್ಯಾಚರಣೆಗೆ ಸಾರ್ವಜನಿಕರ ಬೆಂಬಲ ಸಿಕ್ಕಿದೆ. ಇದು ಹೀಗೇ ಮುಂದುವರೆಯಲಿ ಎಂದು ಪ್ರಕಟಣೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆ ಪಡೆಯಲು ಆಧಾರ್ ಜೋಡಿಸಿ : ತಹಶಿಲ್ದಾರ್

0

Publicstory/prajayoga

ತಿಪಟೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆಯುತ್ತಿದ್ದ ರೈತರು ಮುಂದೆಯೂ ಈ ಸೌಲಭ್ಯವನ್ನು ಪಡೆಯಬೇಕೆಂದರೆ ಎಲ್ಲಾ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಇ- ಕೆವೈಸಿ ಮಾಡುವ ಮೂಲಕ  ಜೋಡಣೆ ಮಾಡಬೇಕಾಗಿದೆ ಎಂದು ತಹಶಿಲ್ದಾರ್ ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಆಧಾರ್ ಜೋಡಣೆ ಮಾಡುವ ರೀತಿ ಆ್ಯಂಡ್ರಾಯ್ಡ್ ಮೊಬೈಲ್ ಗೂಗಲ್ ಸರ್ಚ್ ನಲ್ಲಿ ಪಿಎಂ ಕಿಸಾನ್ ಕೆವೈಸಿ ಎಂದು ಒಟಿಪಿ  ಕೊಟ್ಟು, ಮೊಬೈಲ್ ಸಂಖ್ಯೆ ನಮೂದಿಸಿದಾಗ ಬಂದ ಒಟಿಪಿ ನಂಬರ್ ಅನ್ನು ಲಿಂಕ್ ನಲ್ಲಿ ನಮೂದಿಸಬೇಕು. ಈ ರೀತಿ ಕೆವೈಸಿ ಮಾಡಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಗ್ರಾಮ ಒನ್ ಸೆಂಟರ್ ಅಥವಾ ಕರ್ನಾಟಕ ಒನ್ ಸೆಂಟರ್ ನಲ್ಲಿ ರೈತರು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಗಣೇಶೋತ್ಸವಕ್ಕೆ ಸಹಾಯಾಸ್ತ ನೀಡಲು ಬದ್ಧ : ಕೆ.ಟಿ ಶಾಂತಕುಮಾರ್

Publicstory/prajayoga

– ವರದಿ, ಮಿಥುನ್ ತಿಪಟೂರು

ತಿಪಟೂರು : ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಿಸುತ್ತಿರುವ ತಾಲೂಕಿನ ಎಲ್ಲಾ ಯುವಜನರಿಗೆ ಸಹಾಯಾಸ್ತ ನೀಡುತ್ತೇನೆ ಎಂದು ಕಾಂಗ್ರಸ್ ಮುಖಂಡ ಕೆ ಟಿ ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಘ್ನ ನಿವಾರಕನಾದ ವಿನಾಯಕನ ಪ್ರತಿಷ್ಠಾಪನೆಗೆ ತಣ್ಣೀರೆರಚಿ, ಯುವಕರಲ್ಲಿನ ಉತ್ಸಾಹವನ್ನೇ ಕಿತ್ತುಕೊಳ್ಳುವ ಆರಕ್ಷರ ಕಾನೂನುಗಳನ್ನು ಸ್ವಲ್ಪ ಸಡಿಸಲಿಸಬೇಕು. ಇವರು ಹಾಕುವ ನಿರ್ಬಂಧಗಳು ಎಲ್ಲಾ ಕಡೆಯೂ ಸಾಮಾನ್ಯವಾಗಿರಬೇಕು. ಒಂದೇ   ಅನ್ವಯಿಸ ಬೇಕು. ಎಲ್ಲೆಡೆಯೂ ಒಂದೇ ರೀತಿಯ  ಕಾನೂನು ಇರಬೇಕು. ಪ್ರಬಲರಿಗೆ ಅನುಮತಿ ನೀಡಿ ಅಸಹಾಯಕರಿಗೆ ಅನುಮತಿ  ನಿರಾಕರಿಸಿದರೆ ಈ ಬಗ್ಗೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಆದರೆ, ಈ ಬಾರಿ ಫ್ಲೆಕ್ಸ್, ಡಿ.ಜೆ, ಪಟಾಕಿಗಳಿಗೆ ನಿರ್ಬಂಧ ಹೇರಿರುವುದು ಜನರಿಗೆ ಬೇಸರ ತಂದಿದೆ ಎಂದು ತಿಳಿಸಿದರು.