Publicstory/Prajayoga
ಡಿಕೆಶಿ-ಸಿದ್ದು ಜತೆ ಮಾತುಕತೆ ನಡೆಸಿ ಮಹ್ವತ್ವದ ನಿರ್ಧಾರ ಪ್ರಕಟಿಸಿದ ಎಸ್ಪಿಎಂ
ಬೆಂಗಳೂರು: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಕುಣಿಗಲ್ ವಿಧಾನಸಭಾ ಕ್ಷೇತ್ರದ ಚುಣಾವಣಾ ಅಖಾಡ ರಂಗೇರುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗುರುವಾರ ಬೆಳಗ್ಗೆ ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಆಗುವುದು ಖಚಿತ ಎನ್ನುತ್ತಲೇ ಇಂದು ಸಂಜೆಯೊಳಗೆ ಕಾಂಗ್ರೆಸ್ಗೆ ರಾಜೀನಾಮೆ ಪತ್ರ ಕೊಡುವೆ ಎಂದರು.
ರಾಜೀನಾಮೆ ಘೋಷಣೆಗೂ ಮುನ್ನ ಡಿಕೆಶಿ ಅವರನ್ನು ಭೇಟಿ ಮಾಡಿ ಮುದ್ದಹನುಮೇಗೌಡರು ಮಾತುಕತೆ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಎಸ್.ಪಿ.ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು. ಈ ಕುರಿತು ಈ ಹಿಂದೆ ಹಲವು ಬಾರಿ ಎಸ್ಪಿಎಂ ಆಕ್ರೋಶ ಹೊರ ಹಾಕಿದ್ದರು. ಈ ಭಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿರುವ ಎಸ್ಪಿಎಂ, ಕಾಂಗ್ರೆಸ್ನಿಂದ ಟಿಕೆಟ್ ಕೇಳಿದ್ದರು. ಆದರೆ, ಹಾಲಿ ಶಾಸಕ ರಂಗನಾಥ್ ಪರ ಡಿ.ಕೆ.ಸುರೇಶ್ ಮತ್ತು ಡಿಕೆಶಿ ಒಲವಿದ್ದು, ಎಸ್ಪಿಎಂಗೆ ಕಾಂಗ್ರೆಸ್ನಿಂದ ಭರವಸೆ ಸಿಕ್ಕಿಲ್ಲ. ಹಾಗಾಗಿ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸುತ್ತಲೇ ಮತ್ತೊಮ್ಮೆ ಬೇಸರ ಹೊರಹಾಕಿದರು.
ರಾಜೀನಾಮೆ ಘೋಷಣೆಗೂ ಮುನ್ನ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮುದ್ದಹನುಮೇಗೌಡರು ಮಾತುಕತೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದಿಂದ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ರೆ ಹೇಳಲಿ ಎಂದು ಕೇಳಿದ್ದೇನೆ. 1989ರಲ್ಲಿ ಕುಣಿಗಲ್ ಕ್ಷೇತ್ರಕ್ಕೆ ಬಿಫಾರಂ ಕೊಟ್ರು, ಬಳಿಕ ಇನ್ನೊಬ್ಬರಿಗೆ ಸಿ ಫಾರಂ ಕೊಟ್ರು. ಅಂದಿನಿಂದಲೂ ನನಗೆ ಹಲವು ಬಾರಿ ಸಮಸ್ಯೆ ಆಗಿದೆ ಎಂದು ಬೇಸರ ಹೊರಹಾಕಿದರು.
ನಾನು ಕಾಂಗ್ರೆಸ್ನಿಂದ ದೂರ ಸರಿದಿದ್ದೇನೆ. ಸಾಂಕೇತಿಕವಾಗಿ ಭೇಟಿ ಮಾಡಬೇಕಿತ್ತು. ಹಾಗಾಗಿ ಭೇಟಿ ಮಾಡಿದ್ದೇನೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಸುರ್ಜೇವಾಲಾ ದೂರವಾಣಿ ಮೂಲಕ ಮಾತನಾಡಿದ್ರು. ಇತ್ತೀಚಿಗೆ ನನ್ನ ಜತೆ ಮಾತನಾಡಿಲ್ಲ. ಇಂದು ಸಂಜೆಯೊಳಗೆ ಕಾಂಗ್ರೆಸ್‌ಗೆ ಅಧಿಕೃತವಾಗಿ ರಾಜೀನಾಮೆ ಕೊಡ್ತೀನಿ ಎಂದರು.
ನಾನು ತುಮಕೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷನಾಗಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಹಲವು ಅವಕಾಶ ಕೊಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ ನಾನು ಪಕ್ಷಕ್ಕೆ ದುಡಿದಿದ್ದೇನೆ. ನಾಲ್ಕು ಬಾರಿ ನನಗೆ ಟಿಕೆಟ್ ತಪ್ಪಿತ್ತು. 2019ರ ಲೋಕಸಭಾ ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿಸಿದ್ರು. 2019ರಲ್ಲಿ ನನಗೆ ಟಿಕೆಟ್ ತಪ್ಪಿಸುವಲ್ಲಿ ಕೆಲವರ ಪಾತ್ರ ಇದೆ. ವೇಣುಗೋಪಾಲ್ ಅವರು ಆ ಸಮಯದಲ್ಲಿ ನನಗೆ ಕೆಲ ಭರವಸೆ ಕೊಟ್ಟಿದ್ರು. ಈಗ ಅವರು ಅದರ ಬಗ್ಗೆ ಮಾತನಾಡಿಲ್ಲ. ಇತ್ತಿಚೆಗೆ ನಡೆದ ರಾಜಕೀಯ ವಿದ್ಯಮಾನಗಳಿಂದ ಇಂತಹ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.