Sunday, March 15, 2026
Google search engine
Home Blog Page 97

ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ; ವ್ಯಕ್ತಿ ಸಾವು

0

ಪಾವಗಡ: ಟಿವಿಎಸ್ ದ್ವಿಚಕ್ರ ವಾಹನ ಹಾಗೂ ಆಂಧ್ರ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ತಾಲ್ಲೂಕಿನ ಮುರಾರಾಯನ ಗ್ರಾಮದ ಬಳಿ ನಡೆದಿದೆ.

ಮೃತ ವ್ಯಕ್ತಿ ಆಂಧ್ರದ ಆರ್. ಅನಂತಪುರ ಗ್ರಾಮದ ಲಕ್ಷ್ಮಿನರಸಪ್ಪ (58) ಎಂದು ತಿಳಿದುಬಂದಿದೆ.

ದೊಮ್ಮತಮರಿ ಕಡೆಯಿಂದ ಮಡಕಶಿರಾ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ, ಮಡಕಶಿರಾ ಕಡೆಯಿಂದ ದೊಮ್ಮತಮರಿ ಕಡೆಗೆ ಬರುತ್ತಿದ್ದ ಆಂಧ್ರ ಸರ್ಕಾರಿ ಬಸ್ ನಡುವೆ ಮುರಾರಾಯನ ಹಳ್ಳಿ ಬಳಿಯ ಕೆರೆ ಪಕ್ಕದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಪಾವಗಡ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಕರಿಂದ ಜಾತಿ ತಾರತಮ್ಯ-ಬಿಇಒಗೆ ದೂರು

0

*ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು

ಪಾವಗಡ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ಮಕ್ಕಳನ್ನು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾದ ಶಿಕ್ಷಕರೇ ಮಕ್ಕಳ ನಡುವೆ ಜಾತಿ ತಾರತಮ್ಯ ಮಾಡಿದ ಘಟನೆ ಇಂದು ತಾಲೂಕಿನ ಸಾಸಲಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಪತ್ರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ದೈಹಿಕ ಶಿಕ್ಷಕಿಯ ಹೆಸರನ್ನು ಉಲ್ಲೇಖಿಸಿದ್ದು, ಮಕ್ಕಳ ಮುಂದೆಯೆ ಅಸಭ್ಯವಾಗಿ ಮಾತನಾಡುವುದು, ಹಾಗೂ ಭಾನುವಾರ ವಿಶೇಷ ಶಾಲೆಯ ಹೆಸರಿನಲ್ಲಿ ಕಲಿಕೆಗೆ ಬದಲಾಗಿ ಕಾಲಹರಣ ಮಾಡುವರೆಂದು, ಶಾಲೆಯಲ್ಲಿ ಹಲವಾರು ರೀತಿಯಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ತಾರತಮ್ಯ ಮಾಡುವರೆಂದು ಸಾಸಲಕುಂಟೆ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ದೂರಿದ್ದಾರೆ.

ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ವಿದ್ಯಾರ್ಥಿಗಳು ದೂರು ಸಲ್ಲಿಸಿದರು.

ಈ ಸಂಬಂಧ ಪೋಷಕರು ಹಾಗೂ ಊರಿನ ಯುವಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರು. ಈ ಸಂಧರ್ಭದಲ್ಲಿ ಸಾಸಲಕುಂಟೆ ಗ್ರಾಮದ ಭರತ್, ಅಖಿಲ್, ಪಾಲಾಕ್ಷಿ, ಯಶ್ವಂತ್, ಗೋಪಾಲ, ಪ್ರಶಾಂತ್, ರಾಜ, ಆದರ್ಶ, ಸುದರ್ಶನ್ ಗಣೆಶ್, ನರಸಿಂಹ ಇತರರು ಹಾಜರಿದ್ದರು.

ಸಾರ್ವಜನಿಕರು ಕೆಆರ್‌ಎಸ್ ಪಕ್ಷದ ಜೊತೆಗೂಡಿ

ಶಿರಾ: ತಾಲೂಕಿನ ಜನತೆ ಕಾನೂನುಬದ್ಧವಾದ ತಮ್ಮ ಹಕ್ಕುಗಳನ್ನು ಪಡೆಯಲು, ಯಾರಿಗೂ ಲಂಚ ನೀಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಳ್ಳಲು ಮತ್ತು ಜಿಲ್ಲೆಯ ಪಾರದರ್ಶಕ ಆಡಳಿತ ಸ್ಥಾಪನೆಗೆ ಸಾರ್ವಜನಿಕರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸಂಪರ್ಕಿಸಬಹುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಗಜೇಂದ್ರಕುಮಾರ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಧುಗಿರಿಯ ಎಸಿ ಕಚೇರಿಯಲ್ಲಿ ಎಸಿಬಿ ನಡೆಸಿದ ದಾಳಿಗೆ ಸಂಬಂಧಿಸಿಂತೆ ಭ್ರಷ್ಟರನ್ನು ಜೈಲಿಗೆ ಕಳುಹಿಸಿರುವುದರಲ್ಲಿ ಕೆ‌ಆರ್‌ಎಸ್ ಪಕ್ಷದ ಪಾತ್ರ ದೊಡ್ಡದು. ಶಿರಾ ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು, ಲಂಚಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡಲು  ಮತ್ತು ಜನ ಸಾಮಾನ್ಯರು ಗೌರವಯುತವಾಗಿ ಬದುಕುವಂತಹ ವಾತಾವರಣ ಕಲ್ಪಿಸಲು ನಮ್ಮ ಪಕ್ಷದ ಜೊತೆಗೂಡಿ ಮತ್ತು ಬೆಂಬಲಿಸಿ ಎಂದು ತಾಲೂಕು ಅಧ್ಯಕ್ಷ ನರಸಿಂಹರಾಜು ಸಿ.ಎನ್, ಶಿರಾ ಎಂಎಲ್‌ಎ ಅಭ್ಯರ್ಥಿ ಪ್ರದೀಪ್ ಕುಮಾರ್ ದೊಡ್ಡಮುದ್ದೇಗೌಡ ಅವರು ಮನವಿ ಮಾಡಿದ್ದಾರೆ.

ಪರಿಹಾರ ದೊರೆಯದೆ ರೈತ ಆತ್ಮಹತ್ಯೆ

0

ಚಿಕ್ಕನಾಯಕನಹಳ್ಳಿ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನನ್ನು ವಶಪಡಿಸಿಕೊಂಡು ಪರಿಹಾರ ನೀಡಿಲ್ಲವೆಂದು ಮನ ನೊಂದ ರೈತ ರಂಗಣ್ಣ (65) ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ತಾಲೂಕಿನ ಸಾಲುಕಟ್ಟೆ ಗ್ರಾಮದಲ್ಲಿ ನಡೆದಿದೆ.
ರೈತ ರಂಗಣ್ಣನ ಜಮೀನನ್ನು ಕೆಬಿ ಕ್ರಾಸ್ ನಿಂದ ಹುಳಿಯಾರು  ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ವಶಪಡಿಸಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಿರಲಿಲ್ಲ.  ಇವರ ಮನವಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಮತ್ತು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರು ಉತ್ಪಾದಿಸುವ ವಿದ್ಯುತ್‌ಗೆ ಸಹಾಯಧನ: ಡಿಸಿ ವೈ.ಎಸ್. ಪಾಟೀಲ್

ತುಮಕೂರು ಗ್ರಾಮಾಂತರ: ರೈತರು ತಮ್ಮ ಜಮೀನುಗಳಲ್ಲಿ ಪುನರ್ ನವೀಕರಿಸಬಹುದಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ ೨೦ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಗ್ರಾಮಾಂತರದ ನಾಗವಲ್ಲಿಯಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಉಜ್ವಲ ಭಾರತ- ಉಜ್ವಲ ಭವಿಷ್ಯ ವಿದ್ಯುಚ್ಚಕ್ತಿ ೨೦೪೭ ಎಂಬ ಶೀರ್ಷಿಕೆಯಡಿ ಗುರುವಾರ ನಡೆದ ವಿದ್ಯುತ್ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ೨೦೪೭ಕ್ಕೆ ಭಾರತಕ್ಕೆ ಸ್ವಾತಂತ್ರ‍್ಯ ಲಭಿಸಿ ೧೦೦ ವರ್ಷಗಳಾಗುವ ಹಿನ್ನೆಲೆಯಲ್ಲಿ ಭಾರತವು ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ ವಿದ್ಯುತ್ ಸ್ವಾವಲಂಬನೆಯನ್ನು ಹೊಂದುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದರು.

ನಮ್ಮ ರಾಜ್ಯವು ೨೫-೩೦ ವರ್ಷಗಳ ಹಿಂದೆ ಬರೀ ೭೦೦ ಮೆಗಾವ್ಯಾಟ್ ವಿದ್ಯುತ್ತನ್ನಷ್ಟೇ ಉತ್ಪಾದಿಸಲು ಶಕ್ತವಾಗಿತ್ತು. ಇಂದು ೯೦೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಬಳಿ ೧೩ಸಾವಿರ ಎಕರೆ ಭೂ ಪ್ರದೇಶದಲ್ಲಿ ರಾಜ್ಯದಲ್ಲಿಯೇ ಬೃಹತ್ ಪ್ರಮಾಣದ ಸೋಲಾರ್ ಪಾರ್ಕ್ ಸ್ಥಾಪಿಸಲಾಗಿದೆ. ೪೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಈಗ ೨೧೦೦ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ವಿಜಯಪುರದ ಕೂಡಿಗಿ ಅಣು ವಿದ್ಯುತ್ ಸ್ಥಾವರದಲ್ಲಿ ೨೪೦೦ ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದರು.

ಸುಮಾರು ಏಳೆಂಟು ವರ್ಷಗಳ ಹಿಂದೆ ದಿನಕ್ಕೆ ೧೨ ಗಂಟೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇಂದು ೨೨ ಗಂಟೆಗಳ ಕಾಲ ಪೂರೈಸುವಷ್ಟು ವಿದ್ಯುತ್ ಲಭ್ಯವಿದೆ. ಆದರೆ ವಿದ್ಯುತ್ ಪೂರೈಸಲು ಡಿಸ್ಟ್ರಿಬ್ಯೂಶನ್ ಲೈನ್ ಮತ್ತು ವಿತರಣ ಕೇಂದ್ರಗಳಿಗೆ ರೈತರು ಜಾಗ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಇರುವ ಅಡಚಣೆಯಿದ್ದು, ರೈತರು ವಿದ್ಯುತ್ ಇಲಾಖೆಯವರಿಗೆ ಅಗತ್ಯ ಸಹಕಾರ ನೀಡಬೇಕೆಂದರು.

ರೈತರು/ ನಾಗರೀಕರಿಗೆ ವಿದ್ಯುತ್ ಕುರಿತ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಿದ್ದು, ಪ್ರತಿ ತಿಂಗಳ ಮೂರನೇ ಶನಿವಾರದಂದು “ವಿದ್ಯುತ್ ಅದಾಲತ್” ನಡೆಸುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮುಂದೆ ಈ ದೇಶವನ್ನು ಮುನ್ನೆಡೆಸುವವರು ವಿದ್ಯಾರ್ಥಿಗಳು. ವಿದ್ಯುತ್ ಉತ್ಪಾದನೆ, ಉತ್ಪಾದನಾ ಮೂಲಗಳು, ವಿದ್ಯುತ್ ಸದ್ಬಳಕೆ, ಅಪವ್ಯಯವನ್ನು ತಡೆಗಟ್ಟುವ ಕುರಿತು ಅರಿವನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆ ಇಲ್ಲದಿರುವ ಕಡೆ ವಿದ್ಯುತ್ ವ್ಯರ್ಥವಾಗುತ್ತಿದ್ದರೆ ಅದನ್ನು ಉಳಿಸುವುದನ್ನು ಕಲಿಯಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ ವಿದ್ಯುತ್ ನಿತ್ಯ ಜೀವನಕ್ಕೆ ಅತ್ಯವಶ್ಯಕ. ಭಾರತದಲ್ಲಿಯೇ ಮೊದಲ ಬಾರಿಗೆ ೧೯೦೪ರಲ್ಲಿ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದಿಸಿದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ. ಕೇಂದ್ರ ಸರ್ಕಾರವು ೨೦೪೭ರ ವೇಳೆಗೆ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದಿಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಲಾಗಿದೆ ಎಂದರು.

ಜಲವಿದ್ಯುತ್, ಥರ್ಮಲ್ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆ ದುಬಾರಿ ವೆಚ್ಚ ತಗಲುವುದರೊಂದಿಗೆ ಅದರಿಂದಾಗುವ ಅವಘಢಗಳು ಬೀಕರ ಪರಿಣಾಮವನ್ನುಂಟು ಮಾಡುತ್ತದೆ. ಜನರು ಮನೆಗಳ ತಾರಸಿ, ಕಟ್ಟಡಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಸರ್ಕಾರ ಸಹಾಯಧನವನ್ನು ನೀಡುತ್ತದೆ ಎಂದರು.

ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ, ಪವನ ಶಕ್ತಿಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ನಮ್ಮ ದೇಶ, ರಾಜ್ಯ, ಜಿಲ್ಲೆ, ಗ್ರಾಮಗಳು ವಿದ್ಯುತ್ ಸ್ವಾವಲಂಬಿ ಆಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಮಹೋತ್ಸವ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಇನ್ನಷ್ಟು ಜನಕ್ಕೆ ತಲುಪಿಸಬೇಕೆಂದು ತಿಳಿಸಿದರು.
ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಎಲ್ ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರವು ೨೦೪೭ರ ವೇಳೆಗೆ ಪುನರ್ ನವೀಕರಿಸಬಹುದಾದ ಮೂಲಗಳಾದ, ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸೌರ ಮತ್ತು ಪವನ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ. ಈಗಾಗಲೇ ಪಾವಗಡ ತಾಲೂಕಿನ ನಾಗಲಮಡಿಕೆಯಲ್ಲಿ ಬೃಹತ್ ಸೋಲಾರ್ ಪಾರ್ಕ್ ಕಾರ್ಯನಿರ್ವಹಿಸುತ್ತಿದೆ. ಇದನ್ನು ತಾಲೂಕುವಾರು ವಿಸ್ತರಿಸುವ ಯೋಜನೆಯಿದೆ ಎಂದರು.

ಕೇಂದ್ರ ಸರ್ಕಾರವು ಸಾರ್ವಜನಿಕ ಉಪಯೋಗಕ್ಕಾಗಿ ದೀನ ದಯಾಳ್ ಉಪಾಧ್ಯಾಯ್ ಗ್ರಾಮೀಣ್ ಜ್ಯೋತಿ ಯೋಜನೆಯನ್ನು ತಂದು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದೆ. ರಾಜ್ಯ ಸರ್ಕಾರ ಬೆಳಕು ಯೋಜನೆಯಡಿ ಬಿಪಿಎಲ್ ಪಡಿತರದಾರರ ಮನೆ-ಮನೆಗೆ ವಿದ್ಯುತ್ ಒದಗಿಸುವ ಯೋಜನೆಯಾಗಿದ್ದು, ೧೦ ಸಾವಿರ ಕುಟುಂಬಗಳಲ್ಲಿ ೬ ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಜ್ಯೋತಿ ಮತ್ತು ಬೆಳಕು ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ ಕುಮಾರ್, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಜಿ. ಸೇರಿದಂತೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

ಪ್ರವೀಣ್ ನೆಟ್ಟಾರ್ ಹತ್ಯೆ; ಇಬ್ಬರ ಬಂಧನ

ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಪಟ್ಟ ಇಬ್ಬರನ್ನು ಬಂಧಿಸಿ, ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ದ.ಕ.ಜಿಲ್ಲೆಯ ಎಸ್ಪಿ ಹೃಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.

ಶಫೀಕ್ ಮತ್ತು ಝಾಕೀರ್ ಎಂಬುವವರನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ.
ಪ್ರಕರಣ ತನಿಖೆಯಲ್ಲಿರುವುದರಿಂದ ಹೆಚ್ಚೇನು ಹೇಳಲು ಸಾಧ್ಯವಿಲ್ಲ ತಿಳಿಸಿದ್ದಾರೆ.

ಸರ್ಕಾರದ ವೈಫಲ್ಯ; ಭಾಜಪ ಮಂಡಲದ ಅಧ್ಯಕ್ಷರು ರಾಜೀನಾಮೆ

0

ಚಿತ್ರದುರ್ಗ : ಇತ್ತೀಚೆಗೆ ನಡೆದ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಖಂಡಿಸಿ ಮತ್ತು ಮುಖ್ಯಮಂತ್ರಿ, ಗೃಹ ಸಚಿವರ ಹುಸಿ ಭರವಸೆಗಳನ್ನು ವಿರೋಧಿಸಿ ಜಿಲ್ಲೆಯ ಭಾಜಪದ 9 ಮಂಡಲದ ಅಧ್ಯಕ್ಷರು ರಾಜೀನಾಮೆ ಸಲ್ಲಿದ್ದಾರೆ.

ಪಕ್ಷಕ್ಕಾಗಿ ಶ್ರಮಿಸುತ್ತಿರುವವರ ಜೀವ ಬೆಲೆಕಟ್ಟಲಾಗದ್ದು. ಈ ಹಿಂದೆ ಹತ್ಯೆಯಾದ ಕಾರ್ಯಕರ್ತರಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎಂದು ನಮ್ಮ ಕಣ್ಣೆದುರಿಗಿದೆ.
ಭಾಜಪ ಕೆಡವಲ ರಾಜಕೀಯ ಪಕ್ಷವಲ್ಲ. ಅದೊಂದು ವಿಚಾರ ಸಂಘಟನೆ. ಇದರ ಸಿದ್ಧಾಂತದ ನಿಲುವಿಗಾಗಿ ಅದೆಷ್ಟೋ ಕಾರ್ಯಕರ್ತರ ಬಲಿದಾನವಾಗಿದೆ. ಇಂಥ ಸಹಸ್ರಾರು ತ್ಯಾಗ ಬಲಿದಾನದಿಂದ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ನಮ್ಮದೇ ಸರ್ಕಾರಗಳು ಅಧಿಕಾರದಲ್ಲಿವೆ. ಆದರೂ ಮುಗ್ಧ ಕಾರ್ಯಕರ್ತರ ಸರಣಿ ಕೊಲೆಗಳು ನಡೆಯುತ್ತಿವೆ.

ಗೃಹ ಸಚಿವರು, ಮುಖ್ಯಂಮತ್ರಿಗಳು ಕಠಿಣ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ. ಇದರಿಂದ ನಾವೆಲ್ಲರೂ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿಯ ಅಪಾಯಕಾರಿ ಚುನಾವಣಾ ತಂತ್ರ: ಎಚ್.ಸಿ.ಮಹಾದೇವಪ್ಪ

ಚುನಾವಣಾ ವೇಳೆ ಹೆಚ್ಚಾಗುವ ಹತ್ಯೆಗಳು ಮತ್ತು ರಾಜಕೀಯ ತಂತ್ರಕ್ಕೆ ಕೆಳ ಮತ್ತು ಹಿಂದುಳಿದ ವರ್ಗದ ಯುವಕರು ಬಲಿಯಾಗುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಬರೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರವೀಣ್ ಎಂಬ ಹುಡುಗನ ಹತ್ಯೆ ಆಗಿರುವುದು ಅತ್ಯಂತ ಖಂಡನೀಯವಾದ ಬೆಳವಣಿಗೆ.
ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಹತ್ಯೆ ಆಗಿದ್ದರೂ ಸಹ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರವು ಸುಳ್ಯದ ಪ್ರವೀಣ್ ಅವರ ಹತ್ಯೆಯನ್ನು ತಡೆಯಲು ವಿಫಲವಾಗಿದೆ.
ಚುನಾವಣಾ ವರ್ಷ ಬಂತೆಂದರೆ ಎಲ್ಲೆಲ್ಲೂ ಸಾವು ನೋವುಗಳದ್ದೇ ಸುದ್ದಿಯಾಗುತ್ತದೆ.

2017-18 ರ ಸಂದರ್ಭ ತೆಗೆದುಕೊಂಡರೆ ಆಗ ಪರೇಶ್ ಮೇಸ್ತಾ ನಿಂದ ಹಿಡಿದು ಹಲವು ಯುವಕರ ಜೀವಹಾನಿ ಆದಾಗ ಅದನ್ನು ರಾಜಕೀಯಗೊಳಿಸಿದ ಬಿಜೆಪಿಗರು ಈ ದಿನದವರೆಗೂ ಆ ಹತ್ಯೆಗೆ ಕಾರಣ ಏನು ಎಂಬುದನ್ನು ಕಂಡು ಹಿಡಿದಿಲ್ಲ. ಸಿಬಿಐ ಮಟ್ಟದ ತನಿಖೆಗೆ ವಹಿಸಿದರೂ ಕೂಡಾ ಆ ಕೊಲೆಗಳಿಗೆ ಕಾರಣ ಏನೆಂಬುದನ್ನು ಕಂಡು ಹಿಡಿಯಲು ಸರ್ಕಾರ ವಿಫಲವಾಗಿದೆ.
ಇನ್ನು ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲೂ ಹಿಂಸಾಚಾರ ನಡೆದು ಪಶ್ಚಿಮ ಬಂಗಾಳದ ಸರ್ಕಲ್ ಒಂದರಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿರುವಂತಹ ಭೀಕರ ಚಿತ್ರಣಕ್ಕೆ ಇಡೀ ಬಂಗಾಳ ಸಾಕ್ಷಿಯಾಯಿತು.

ಇದಾದ ಬಳಿಕ ಇದೀಗ ಕರ್ನಾಟಕ ಚುನಾವಣಾ ವರ್ಷದಲ್ಲೂ ಕೂಡಾ ಹಂತ ಹಂತವಾಗಿ ಹಿಂಸಾಚಾರಗಳು ನಡೆಯುತ್ತಿದ್ದು ಪ್ರವೀಣ್ ಅವರ ಕೊಲೆಯೂ ಇದಕ್ಕೆ ಸೇರ್ಪಡೆಯಾಗಿದೆ.

* ಕೆಳ ಮತ್ತು ಹಿಂದುಳಿದ ವರ್ಗದ ಯುವಕರು ಬಲಿ ಮತ್ತು ಬಿಜೆಪಿಯ ಅಪಾಯಕಾರಿ ಚುನಾವಣಾ ತಂತ್ರ

ಮೇಲ್ನೋಟಕ್ಕೆ ಇದು ಹಿಂದುಳಿದ ಮತ್ತು ಕೆಳ ಸಮುದಾಯದ ಬಡ ಹುಡುಗರನ್ನು ಬಳಸಿಕೊಂಡು ಮಾಡುತ್ತಿರುವ ಕೃತ್ಯದಂತೆ ಕಾಣ ಬರುತ್ತಿದ್ದು ಬಿಜೆಪಿಗಾಗಿ ಕೆಲಸ ಮಾಡುವ ಅವರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಹರ್ಷ ಕೊಲೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಖೈದಿಗಳಿಗೆ ಕೆಲವೊಂದು ಲಕ್ಸುರಿ ಸೌಲಭ್ಯಗಳು ದೊರೆಯುತ್ತಿರುವುದನ್ನು ಗಮನಿಸಿದರೆ ಮತ್ತು ಹಳೆಯ ಸಾವುಗಳಿಗೆ ಕಾರಣವೇ ತಿಳಿಯದಂತಹ ಈ ವಿಷಮ ಸಂದರ್ಭದಲ್ಲಿ ಈ ಕೊಲೆಗಳು ಮತ್ತು ಬಿಜೆಪಿಯ ಅಪಾಯಕಾರಿ ಚುನಾವಣಾ ತಂತ್ರಗಳ ಬಗ್ಗೆ ಅತ್ಯಂತ ಗಂಭೀರವಾದ ಅನುಮಾನಗಳು ನನ್ನೊಳಗೆ ವ್ಯಕ್ತವಾಗುತ್ತಿವೆ.
ಎಲ್ಲಕ್ಕಿಂತ ಬೇಸರದ ಸಂಗತಿ ಎಂದರೆ ಬಿಜೆಪಿಯಂತ ಯಾರೋ ಕೆಲ ಸಂವಿಧಾನ ವಿರೋಧಿಗಳು ಎತ್ತಲು ಹೊರಟಿರುವ ಚುನಾವಣಾ ಕಪ್ ಗೆ ಹಿಂದುಳಿದ ಸಮುದಾಯದ ಯುವಕರು ಮತ್ತು ಅಲ್ಪಸಂಖ್ಯಾತ ಸಮುದಾಯದ ಹುಡುಗರು ಬಲಿಯಾಗುತ್ತಿರುವುದು.
ಈ ಎಲ್ಲಾ ಹಿನ್ನಲೆಯಲ್ಲಿ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ಮನಸ್ಸುಗಳು ಈ ಚುನಾವಣಾ ಅರಾಜಕತೆಯನ್ನು ಒಕ್ಕೋರಲಿನಿಂದ ಖಂಡಿಸಬೇಕು ಮತ್ತು ಅಭಿವೃದ್ಧಿ ಮಾಡುವ ಮತ್ತು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಯೋಗ್ಯತೆ ಇಲ್ಲದೇ ಇದ್ದರೂ ಬಡವರ ಮನೆಯ ಮಕ್ಕಳನ್ನು ತಮ್ಮ ಹೀನಾಯ ರಾಜಕೀಯಕ್ಕೆ ಬಳಸಿಕೊಳ್ಳುವ ಸಂವಿಧಾನ ವಿರೋಧಿ ಬಿಜೆಪಿಗರಿಗೆ ತಕ್ಕ ಪಾಠ ಕಲಿಸಬೇಕು!! ಎಂದಿದ್ದಾರೆ.

ರಾಜ್ಯದಲ್ಲಿ ಯೋಗಿ ಸರ್ಕಾರದ ಮಾದರಿ!


ಅಗತ್ಯಬಿದ್ದರೆ ರಾಜ್ಯದಲ್ಲೂ ಯೋಗಿ ಆದಿತ್ಯನಾಥ ಸರ್ಕಾರದ ಮಾದರಿಯನ್ನು ಜಾರಿಗೆ ತರುತ್ತೇವೆ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರವೀಣ್ ಕೊಲೆ ಪ್ರಕರಣ ಭೇದಿಸಲು ಐದು ತಂಡ ರಚನೆ ಮಾಡಲಾಗಿದೆ. ಹರ್ಷನ ಕೊಲೆ ಪ್ರಕರಣದಲ್ಲಿ ತಕ್ಷಣ ದಸ್ತಗಿರಿ ಮಾಡಿದಂತೆ ಇಲ್ಲೂ ಆಗುತ್ತದೆ. ಇಂತ ಚಟುವಟಿಕೆ ವಿರುದ್ಧ ಸಮರ ಸಾರಿದ್ದೇವೆ. ಇದರ ಪರಿಣಾಮ ಜನರಿಗೆ ಮುಂದೆ ಗೊತ್ತಾಗುತ್ತದೆ ಎಂದರು.

ಸೌಹಾರ್ದತೆ ಕದಡುವ ಕೆಲಸ ನಡೆಯುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಈ ಶಕ್ತಿಗಳು ತಲೆ ಎತ್ತಿ ನಿಂತಿವೆ.  ನಮ್ಮ ದಕ್ಷ ಪೊಲೀಸರು ಸ್ಲೀಪರ್ ಸೆಲ್ ನಲ್ಲಿರುವ ಉಗ್ರರನ್ನು ಜೈಲಿಗೆ ಕಳಿಸುವ ಕೆಲಸವನ್ನು ಮಾಡಿದ್ದಾರೆ. ನಾವು ಕೈಕಟ್ಟಿ ಕುಳಿತಿಲ್ಲ ಎಂದು ತಿಳಿಸಿದರು.

ಸರ್ಕಾರದಿಂದ ಜನೋತ್ಸವ ರದ್ದು; ಎಚ್‌ಡಿಕೆ ವ್ಯಂಗ್ಯ

ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಧ್ಯರಾತ್ರಿ ಜ್ಞಾನೋದಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ಬೆಳ್ಳಾರೆ ಹತ್ಯೆಯ ಹಿನ್ನೆಲೆ ರದ್ದುಗೊಳಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ‘ಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನದಿಂದ ಸರ್ಕಾರ ಮುಖ ಉಳಿಸಿಕೊಂಡಿದೆ.
ಸರಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರಕಾರದ ವರ್ಷದ ಸಾಧನೆ!!
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ? ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ʼಮತಕ್ಕಾಗಿ ಕೋಮು ಗಳʼ ಇರಿಯುವುದಾ ಸಾಧನೆ?
ಸಾಧನೆ ನೆಪದಲ್ಲಿ ನಲಿಯುವ ಮುನ್ನ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲವಲ್ಲ.
ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ ʼಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ?
ತಾಯಿಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ʼನಾದʼದಂತೆ ಕೇಳುತ್ತಿವೆಯಾ? ಬಿಜೆಪಿಯ ʼಮತಕ್ಕಾಗಿ ಮರಣಮೃದಂಗʼದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. ಕರಾವಳಿ ಕೆರಳಿದೆ. ಕರ್ನಾಟಕ ಕೆರಳುವುದು ಬಾಕಿ ಇದೆ.

ಏನು ಸಾಧನೆ ಅಂತ ಸರಕಾರ ಜನರಿಗೆ ಹೇಳುತ್ತದೆ?

*40% ಕಮಿಷನ್
*ಕೋವಿಡ್ ಹೆಸರಿನಲ್ಲಿ ಕೊಳ್ಳೆ
*ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್‌ ಕೋಟಾ
*ಪಿಎಸ್ಐ ನೇಮಕದಲ್ಲಿ ಕಾಸಿನಾಟ
*ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ನೋಟಿನಾಟ
ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರಕಾರ ಮಾಡಿದ್ದೇನು?

ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರಕಾರ ಬದುಕಿದೆಯಾ? ಸತ್ತಿದೆಯಾ?  ಎಂದು ರಾಜ್ಯ ಸರಕಾರದ ವಿರಿದ್ಧ ಕಿಡಿಕಾರಿದ್ದಾರೆ.