ಚುನಾವಣಾ ವೇಳೆ ಹೆಚ್ಚಾಗುವ ಹತ್ಯೆಗಳು ಮತ್ತು ರಾಜಕೀಯ ತಂತ್ರಕ್ಕೆ ಕೆಳ ಮತ್ತು ಹಿಂದುಳಿದ ವರ್ಗದ ಯುವಕರು ಬಲಿಯಾಗುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಬರೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರವೀಣ್ ಎಂಬ ಹುಡುಗನ ಹತ್ಯೆ ಆಗಿರುವುದು ಅತ್ಯಂತ ಖಂಡನೀಯವಾದ ಬೆಳವಣಿಗೆ.
ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಹತ್ಯೆ ಆಗಿದ್ದರೂ ಸಹ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರವು ಸುಳ್ಯದ ಪ್ರವೀಣ್ ಅವರ ಹತ್ಯೆಯನ್ನು ತಡೆಯಲು ವಿಫಲವಾಗಿದೆ.
ಚುನಾವಣಾ ವರ್ಷ ಬಂತೆಂದರೆ ಎಲ್ಲೆಲ್ಲೂ ಸಾವು ನೋವುಗಳದ್ದೇ ಸುದ್ದಿಯಾಗುತ್ತದೆ.
2017-18 ರ ಸಂದರ್ಭ ತೆಗೆದುಕೊಂಡರೆ ಆಗ ಪರೇಶ್ ಮೇಸ್ತಾ ನಿಂದ ಹಿಡಿದು ಹಲವು ಯುವಕರ ಜೀವಹಾನಿ ಆದಾಗ ಅದನ್ನು ರಾಜಕೀಯಗೊಳಿಸಿದ ಬಿಜೆಪಿಗರು ಈ ದಿನದವರೆಗೂ ಆ ಹತ್ಯೆಗೆ ಕಾರಣ ಏನು ಎಂಬುದನ್ನು ಕಂಡು ಹಿಡಿದಿಲ್ಲ. ಸಿಬಿಐ ಮಟ್ಟದ ತನಿಖೆಗೆ ವಹಿಸಿದರೂ ಕೂಡಾ ಆ ಕೊಲೆಗಳಿಗೆ ಕಾರಣ ಏನೆಂಬುದನ್ನು ಕಂಡು ಹಿಡಿಯಲು ಸರ್ಕಾರ ವಿಫಲವಾಗಿದೆ.
ಇನ್ನು ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲೂ ಹಿಂಸಾಚಾರ ನಡೆದು ಪಶ್ಚಿಮ ಬಂಗಾಳದ ಸರ್ಕಲ್ ಒಂದರಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿರುವಂತಹ ಭೀಕರ ಚಿತ್ರಣಕ್ಕೆ ಇಡೀ ಬಂಗಾಳ ಸಾಕ್ಷಿಯಾಯಿತು.
ಇದಾದ ಬಳಿಕ ಇದೀಗ ಕರ್ನಾಟಕ ಚುನಾವಣಾ ವರ್ಷದಲ್ಲೂ ಕೂಡಾ ಹಂತ ಹಂತವಾಗಿ ಹಿಂಸಾಚಾರಗಳು ನಡೆಯುತ್ತಿದ್ದು ಪ್ರವೀಣ್ ಅವರ ಕೊಲೆಯೂ ಇದಕ್ಕೆ ಸೇರ್ಪಡೆಯಾಗಿದೆ.
* ಕೆಳ ಮತ್ತು ಹಿಂದುಳಿದ ವರ್ಗದ ಯುವಕರು ಬಲಿ ಮತ್ತು ಬಿಜೆಪಿಯ ಅಪಾಯಕಾರಿ ಚುನಾವಣಾ ತಂತ್ರ
ಮೇಲ್ನೋಟಕ್ಕೆ ಇದು ಹಿಂದುಳಿದ ಮತ್ತು ಕೆಳ ಸಮುದಾಯದ ಬಡ ಹುಡುಗರನ್ನು ಬಳಸಿಕೊಂಡು ಮಾಡುತ್ತಿರುವ ಕೃತ್ಯದಂತೆ ಕಾಣ ಬರುತ್ತಿದ್ದು ಬಿಜೆಪಿಗಾಗಿ ಕೆಲಸ ಮಾಡುವ ಅವರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಹರ್ಷ ಕೊಲೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಖೈದಿಗಳಿಗೆ ಕೆಲವೊಂದು ಲಕ್ಸುರಿ ಸೌಲಭ್ಯಗಳು ದೊರೆಯುತ್ತಿರುವುದನ್ನು ಗಮನಿಸಿದರೆ ಮತ್ತು ಹಳೆಯ ಸಾವುಗಳಿಗೆ ಕಾರಣವೇ ತಿಳಿಯದಂತಹ ಈ ವಿಷಮ ಸಂದರ್ಭದಲ್ಲಿ ಈ ಕೊಲೆಗಳು ಮತ್ತು ಬಿಜೆಪಿಯ ಅಪಾಯಕಾರಿ ಚುನಾವಣಾ ತಂತ್ರಗಳ ಬಗ್ಗೆ ಅತ್ಯಂತ ಗಂಭೀರವಾದ ಅನುಮಾನಗಳು ನನ್ನೊಳಗೆ ವ್ಯಕ್ತವಾಗುತ್ತಿವೆ.
ಎಲ್ಲಕ್ಕಿಂತ ಬೇಸರದ ಸಂಗತಿ ಎಂದರೆ ಬಿಜೆಪಿಯಂತ ಯಾರೋ ಕೆಲ ಸಂವಿಧಾನ ವಿರೋಧಿಗಳು ಎತ್ತಲು ಹೊರಟಿರುವ ಚುನಾವಣಾ ಕಪ್ ಗೆ ಹಿಂದುಳಿದ ಸಮುದಾಯದ ಯುವಕರು ಮತ್ತು ಅಲ್ಪಸಂಖ್ಯಾತ ಸಮುದಾಯದ ಹುಡುಗರು ಬಲಿಯಾಗುತ್ತಿರುವುದು.
ಈ ಎಲ್ಲಾ ಹಿನ್ನಲೆಯಲ್ಲಿ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ಮನಸ್ಸುಗಳು ಈ ಚುನಾವಣಾ ಅರಾಜಕತೆಯನ್ನು ಒಕ್ಕೋರಲಿನಿಂದ ಖಂಡಿಸಬೇಕು ಮತ್ತು ಅಭಿವೃದ್ಧಿ ಮಾಡುವ ಮತ್ತು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಯೋಗ್ಯತೆ ಇಲ್ಲದೇ ಇದ್ದರೂ ಬಡವರ ಮನೆಯ ಮಕ್ಕಳನ್ನು ತಮ್ಮ ಹೀನಾಯ ರಾಜಕೀಯಕ್ಕೆ ಬಳಸಿಕೊಳ್ಳುವ ಸಂವಿಧಾನ ವಿರೋಧಿ ಬಿಜೆಪಿಗರಿಗೆ ತಕ್ಕ ಪಾಠ ಕಲಿಸಬೇಕು!! ಎಂದಿದ್ದಾರೆ.