Thursday, December 12, 2024
Google search engine
Homeತುಮಕೂರು ಲೈವ್ಶಿರಾದಲ್ಲಿ ಕವಿ ಸಿದ್ದಲಿಂಗಯ್ಯ ನೆನಪು: ಶಂಕರಯ್ಯ ಅವರ ಕಣ್ಣಲ್ಲಿ ಕ್ರಾಂತಿ ಕವಿಯ ಚಿತ್ರಣ...

ಶಿರಾದಲ್ಲಿ ಕವಿ ಸಿದ್ದಲಿಂಗಯ್ಯ ನೆನಪು: ಶಂಕರಯ್ಯ ಅವರ ಕಣ್ಣಲ್ಲಿ ಕ್ರಾಂತಿ ಕವಿಯ ಚಿತ್ರಣ…

Public story


ಸಿರಾ: ವಿದ್ಯಾರ್ಥಿ ದಿಶೆಯಿಂದಲೇ ಅನೇಕ ಚಳುವಳಿಗಳಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಸಾಹಿತ್ಯ ಕೃಷಿಯ ಮೂಲಕ ತಮ್ಮ ಅನುಭವಲೋಕವನ್ನು ವಿಸ್ತರಿಸಿಕೊಂಡಿದ್ದ ಡಾ.ಸಿದ್ದಲಿಂಗಯ್ಯನವರು ಜಗತ್ತು ಇರುವವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಉಳಿಯುವವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಸೋಮವಾರ ಬಿಆರ್‌ಸಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಿದ್ದಲಿಂಗಯ್ಯನವರು ತುಳಿತಕ್ಕೊಳಗಾದವರ, ದೀನದಲಿತರ ಸಿಟ್ಟು-ಸೆಡರು ಆಕ್ರಂದನಗಳನ್ನು ತನ್ನ ಸಾಹಿತ್ಯದ ಮೂಲಕ ನವ್ಯದ ಅಂತರ್ಮುಖಿ ನೆಲೆಗಳಿಗೆ ತಮ್ಮ ಬಹಿರ್ಮುಖಿ ಕವಿತೆಗಳ ಮೂಲಕ ಸಮರ್ಥವಾಗಿ ತಿಳಿಸಿದ್ದರು. ಅವರ ಆತ್ಮಕಥೆ ಊರುಕೇರಿ ಎರಡು ಭಾಗದಲ್ಲಿ ಪ್ರಕಟಗೊಂಡು, ಇಂಗ್ಲೀಷ್‌ ಮತ್ತು ತಮಿಳು ಭಾಷೆಗೆ ಅನುವಾದಗೊಂಡಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಸ್ಮಶಾನದ ಕಲ್ಲುಗಳ ಮೇಲೆ ರಚಿತವಾದ ಅವರ ಪದ್ಯ ಮತ್ತು ಹಾಡುಗಳು ರಾಜ್ಯದ ಬಹುತೇಕ ಜನರ ಆತ್ಮಗೀತೆಗಳೇ ಆಗಿವೆ ಎಂದು ಅವರ ಸಾಹಿತ್ಯ ರಚನೆಯ ಕುರಿತು ವಿವರಿಸಿದರು.

ದಲಿತ ಮುಖಂಡ ಹಾಗೂ ಹೋರಾಟಗಾರ ಜೆ.ಎನ್.ರಾಜಸಿಂಹ ಮಾತನಾಡಿ, ದೀನದಲಿತರ ನಾಡಿಮಿಡಿತ ಅರಿತಿದ್ದ ಡಾ.ಸಿದ್ದಲಿಂಗಯ್ಯನವರು ಸಾಹಿತ್ಯದ ಮೂಲಕ ಎತ್ತರಕ್ಕೆ ಬೆಳೆದು, ಸಮಾಜವನ್ನೂ ಬೆಳೆಯುವಂತೆ ಮಾಡಿದರು.ಅವರ ಸಾಹಿತ್ಯವು ಮೆರವಣಿಗೆ, ಹೋರಾಟ, ಚಳುವಳಿ, ಬೀದಿ ನಾಟಕಗಳಿಗೆ ಜೀವಂತಿಕೆ ತಂದುಕೊಟ್ಟಿದೆ ಅಲ್ಲದೇ ಸಮುದಾಯದ ಜಾಥಾಗಳ ಮೂಲಕ ಮನೆಮಾತಾಗಿ, ದಲಿತರಿಗೆ ಸಂಬಂಧಿಸಿದ ವಿಷಯಗಳು ಬರವಣಿಗೆ ರೂಪದಲ್ಲಿ ಹೊರಬರುವಂತೆ ನೋಡಿಕೊಂಡರು. ಜನರ ಆಕ್ರೋಶ, ದುಗುಡ ಕನಸುಗಳನ್ನು ತನ್ನದೇ ಆದ ಬರಹಗಳ ಮೂಲಕ ಜನರಿಗೆ ತಿಳಿಸುವ ಮೂಲಕ ಎಂದೆಂದಿಗೂ ಅಜರಾಮರ ಎಂದು ಬಣ್ಣಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎನ್.ಕುಮಾರ್‌ ಮಾತನಾಡಿ, ದಲಿತ-ಬಂಡಾಯ ಸಾಹಿತ್ಯ ಮತ್ತು ದಲಿತ ಚಳುವಳಿಗಳ ಚರಿತ್ರೆಯನ್ನು ಬರೆದವರಲ್ಲಿ ಡಾ.ಸಿದ್ದಲಿಂಗಯ್ಯನವರು ಪ್ರಮುಖ ಪಾತ್ರ ವಹಿಸಿದ್ದರು. ದಲಿತ ಸಾಹಿತ್ಯದ ಆದಿಕವಿ ಎಂದೇ ಕರೆಯಿಸಿಕೊಳ್ಳುವ ದಿವಂಗತರು ಸರಳ ಪದಗಳಲ್ಲಿ ಧ್ವನಿಪೂರ್ಣ ರೂಪಕಗಳಲ್ಲಿ ಹಾಡುಕಟ್ಟುವ ಪ್ರತಿಭೆ ಕರಗತವಾಗಿತ್ತು. ಇವರನ್ನು ಕೇವಲ ದಲಿತ ಕವಿ ಎಂದು ಸೀಮಿತಗೊಳಿಸಿದರೆ ಅವರಿಗೆ ಅಪಮಾನ ಮಾಡಿದಂತಾಗುತ್ತದೆ. ಇಡೀ ಸಮಾಜಕ್ಕೆ ಸಂದೇಶ ನೀಡುವಂತಹ ನಾಟಕ, ಕಾವ್ಯ ಹಾಗೂ ಆತ್ಮಕಥನಗಳನ್ನು ಅಧ್ಯಯನ ಮಾಡಿದಾಗ, ಹಸಿದವರ, ಶೋಷಿತರ ಪರವಾದ ನಿಲುವು ಎದ್ದಕಾಣುತ್ತದೆ. ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಅವರು ಹುಟ್ಟುಹಾಕಿದ ಚಳುವಳಿಗಳು, ಸಂದೇಶಗಳು ಎಂದೆಂದಿಗೂ ಜೀವಂತವಾಗಿವೆ ಎಂದರು.

ಯುವ ಮುಖಂಡ ರೂಪೇಶ್‌ ಎಸ್.ಎನ್.ಕೃಷ್ಣಯ್ಯ ಮಾತನಾಡಿ, ವಿಧಾನ ಪರಿಷತ್‌ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರ, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿರುವ ಕೆಲಸಗಳು ಇಂದಿಗೂ ಜೀವಂತವಾಗಿವೆ. ಇವರು ಸಾಹಿತ್ಯ ಕೃಷಿ ಇನ್ನೂ ಅವಶ್ಯಕತೆ ಇತ್ತು. ವಿಧಿಯಾಟ ಅವರ ಬದುಕನ್ನು ಇಲ್ಲಿಗೇ ಕೊನೆಗೊಳಿಸಿದೆ. ನೋವನ್ನುಂಡು, ದನಿ ಇಲ್ಲದ ಸಣ್ಣಪುಟ್ಟ ಸಮುದಾಯಗಳಿಗೂ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು ಕನ್ನಡ ಬರಹ ಮತ್ತು ಅಭಿವ್ಯಕ್ತಿಯ ಹೊಸ ಛಾಪನ್ನೇ ಮಾಡಿಸಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದ್ವಾರನಕುಂಟೆ ಲಕ್ಷ್ಮಣ್‌ ಮಾತನಾಡಿ, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ್ದ ಭಾಷಣ ಸರ್ಕಾರದಲ್ಲಿ ಹೊಸ ಛಾಪನ್ನೇ ಮೂಡಿಸಿತ್ತು ಎಂದು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಚಿದಾನಂದ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸಿದ್ದಲಿಂಗಯ್ಯನವರು ಕವಿ, ಲೇಖಕ, ಅಧ್ಯಾಪಕ, ಉತ್ತಮ ಆಡಳಿತಗಾರ, ವಿಮರ್ಶಕ, ಶಾಸಕ ಹಾಗೂ ನಾಟಕಕಾರರಾಗಿ ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮೂಲಕ ಅವರ ಹೆಸರನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಬಿ.ವಿ.ಕೆಂಚಪ್ಪ, ಸಿ.ಆರ್.ಪಿ. ಆರ್‌.ತಿಪ್ಪೇಸ್ವಾಮಿ, ರೇವಣಸಿದ್ದಯ್ಯ, ಜಿ.ಟಿ.ಕುಮಾರ್‌, ಶಿಕ್ಷಕ ಮಹಾದೇವಪ್ಪ ಇತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?