Thursday, June 20, 2024
Google search engine
Homeತುಮಕೂರು ಲೈವ್ಕೊರೊನಾ ಸೋಂಕಿತರಿನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ: ಮಾಧುಸ್ವಾಮಿ

ಕೊರೊನಾ ಸೋಂಕಿತರಿನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ: ಮಾಧುಸ್ವಾಮಿ

Publicstory


ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ನಿಗ್ರಹಕ್ಕೆ ಸದಸ್ಯರೆಲ್ಲರೂ ಹೆಚ್ಚಿನ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುವ ಮುಖೇನ ನಗರವನ್ನು ಸೋಂಕಿನಿಂದ ಪಾರು ಮಾಡಲು‌ ಸಹಕರಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬಂಧ ಪಾಲಿಕೆ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಟ್ಟುನಿಟ್ಟಿನ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ ಕೆಂಪು ವಲಯದಲ್ಲಿದ್ದ ತುಮಕೂರು ಪ್ರಸ್ತುತ ಪಿಂಕ್ ವಲಯಕ್ಕೆ ಬಂದಿದೆ. ಆದರೂ, ಜಿಲ್ಲೆ ಸಮಾಧಾನದ ಸ್ಥಿತಿಗೆ ತಲುಪಬೇಕೆಂದರೆ ಸಂಪೂರ್ಣ ಕೋವಿಡ್ ನಿಗ್ರಹಕ್ಕೆ‌ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಸೋಂಕಿತರ ಆರೈಕೆಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಸೆಂಟರ್ ಗೆ ಸೋಂಕಿತರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮುಂದೆ ಪಾಸಿಟಿವ್ ಬಂದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸುವ ವ್ಯವಸ್ಥೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಾಗಾಗಿ ಹೊಸ ಪಾಸಿಟಿವ್ ಪ್ರಕರಣಗಳ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಗೆ ಸ್ಥಳಾಂತರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರೆಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

ಆಕ್ಸಿಜನ್, ಐಸಿಯು, ವೆಂಟಿಲೇಟರ್, ಸೋಂಕಿತರಿಗೆ ನೀಡುವ ಚಿಕಿತ್ಸೆ, ಸೋಂಕಿತರ ಆರೈಕೆ, ಸೋಂಕು ಹರಡದಂತೆ ತಡೆಗಟ್ಟವುದು ಸೇರಿದಂತೆ ನಾನಾ ಸಮಸ್ಯೆಗಳ ನಿವಾರಣೆಗಾಗಿ ತೆಗೆದುಕೊಂಡು ಕ್ರಮಗಳಿಂದಾಗಿ ಸೋಂಕಿನ ನಿಯಂತ್ರಣದಲ್ಲಿ ಜಿಲ್ಲೆ ಸುಧಾರಣೆ ಕಂಡಿದೆ. ಮತ್ತಷ್ಟು ಸುಧಾರಣೆ ಆಗಲೇಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.

ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ಶ್ರಮಿಸುವ ಮೂಲಕ ಸದಸ್ಯರು ಸಹಕರಿಸಬೇಕು. ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು‌ ಹೇಳಿದರು.

ಸಂಸದ ಜಿ.ಎಸ್.‌ಬಸವರಾಜು ಮಾತನಾಡಿ, ನಾವೆಲ್ಲರೂ ಕೋವಿಡ್ ಸಂಕಷ್ಟದಲ್ಲಿದ್ದೇವೆ. ಹೋಂ‌ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಪಾಲನೆ‌ ಮಾಡಿ, ಕುಟುಂಬದವರಿಗೆ ಸೋಂಕು ಹಬ್ಬುವುದನ್ನು ತಪ್ಪಿಸಬೇಕು. ಸೋಂಕಿತರನ್ನು ಕೋವಿಡ್ ಕೇರ್ ಗೆ ಸ್ಥಳಾಂತರಿಸುವ ಕೆಲಸ ಮಾಡಬೇಕು. ವಾರ್ಡ್ ಸಭೆ ಮಾಡಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ 8ನೇ ವಾರ್ಡಿನ ಪಾಲಿಕೆ ಸದಸ್ಯ ಸಯ್ಯಾದ್ ನಯಾಜ್ ಅಹಮದ್ ಮಾತನಾಡಿ, ಮೂರನೇ ಅಲೆ ಪ್ರಾರಂಭದ ವೇಳೆಗೆ ಕೋವಿಡ್ ಕಡಿವಾಣಕ್ಕೆ ಜಿಲ್ಲೆಯಲ್ಲಿ ಅತ್ಯಗತ್ಯ ಕ್ರಮ ಕೈಗೊಳ್ಳಬೇಕಿದೆ. ನಮ್ಮ ವ್ಯಾಪ್ತಿಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಆಕ್ಸಿಜನ್ ಪೂರೈಕೆ ಮಾಡಲು ಪೈಪ್ ಲೈನ್ ಅಳವಡಿಕೆಗೆ ಒಪ್ಪಿಗೆ ಕೊಡಬೇಕು. ಅಗತ್ಯವಿರುವ ಆಕ್ಸಿಜನ್ ಅನ್ನಿ ನಾವೇ ಪೂರೈಕೆ ಮಾಡಿಕೊಳ್ಳುತ್ತೇವೆ ಎಂದು ಮನವಿ‌ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಪ್ರತಿಕ್ರಿಯಿಸಿ, ಆಮ್ಲಜನಕ ಪೂರೈಕೆ ಜಿಲ್ಲಾಡಳಿತದಿಂದಲೇ ಆಗಬೇಕು. ಯಾರೂ ಸ್ವಯಂ ಆಗಿ ಪೂರೈಕೆ ಮಾಡಿಕೊಳ್ಳುವಂತಿಲ್ಲ. ಜಿಲ್ಲಾಡಳಿತದ ಗಮನಕ್ಕೆ ಬಾರದೆ ಆಮ್ಲಜನಕ ರವಾನೆ ಹಾಗೂ ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹಾಗಾಗಿ ಜಿಲ್ಲಾಡಳಿತದ ಒಪ್ಪಿಗೆ ಮೇರೆಗೆ ಆಮ್ಲಜನಕ ಪೂರೈಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಆಮ್ಲಜನಕ ಪೂರೈಕೆ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಲಭ್ಯವಿಲ್ಲ.‌ ಆಮ್ಲಜನಕ ಪೂರೈಕೆಯಾದರೆ ಜಿಲ್ಲಾಸ್ಪತ್ರೆಯಲ್ಲೆ 200 ಹಾಸಿಗೆಗಳನ್ನು ಹೆಚ್ವಿಸಲಾಗುವುದು. ಆಮ್ಲಜನಕವನ್ನು ಜಿಲ್ಲಾಧಿಕಾರಿ ಒಪ್ಪಿಗೆ ಮೇರೆಗೆ ಪಡೆಯಬೇಕು. ಹಾಗಾಗಿ‌ ಆಮ್ಲಜನಕ ಸಾಂದ್ರಕಗಳ ಮೂಲಕ ಬೆಡ್ ಗಳ ವ್ಯವಸ್ಥೆ ಮಾಡುಕೊಳ್ಳುವಂತೆ ತಿಳಿಸಿದರು.

3ನೇ ವಾರ್ಡ್ ಸದಸ್ಯ ಲಕ್ಷ್ಮಿನರಸಿಂಹರಾಜು ಹಾಗೂ 7ನೇ ವಾರ್ಡ್ ಕುಮಾರ್ ಮಾತನಾಡಿ, ನಗರದ ಬಹುತೇಕ ಪಿಎಚ್ ಸಿ ಗಳಲ್ಲಿ ಕೋವಿಡ್ ಔಷಧಗಳ ಕೊರತೆಯಿದೆ. ಅಲ್ಲದೆ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕೋವಿಡ್ ಸೋಂಕು ತಗುಲಿದ ಪರಿಣಾಮ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಮರ್ಪಕ ಸಿಬ್ಬಂದಿಗಳ ವ್ಯವಸ್ಥೆ‌‌ ಇಲ್ಲದೆ‌ ಸೋಂಕಿತರ ಆರೈಕೆ ಕಷ್ಟವಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ತೆಗೆದುಕೊಳ್ಳುವ ಮೂಲಕ‌ ಸಿಬ್ಬಂದಿಗಳ ಕೊರತೆ ಸಮಸ್ಯೆ ಸರಿದೂಗಿಸಲಾಗುತ್ತಿದೆ. ಮಾರ್ಗಸೂಚಿ ಅನ್ವಯ ಪಿಎಚ್ ಸಿ ಗಳಿಗೆ ಸಮರ್ಪಕ ಔಷಧ ವಿತರಣೆ ಮಾಡುವಂತೆ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
20ನೇ ವಾರ್ಡಿನ ಸದಸ್ಯ ಶ್ರೀನಿವಾಸ್ ಮಾತನಾಡಿ, ಪಾಲಿಕೆಯಿಂದ ರೆಫರ್ ಆಗಿ ಹೋದರೂ ಸೋಂಕಿತನಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯೊಂದು ಒಂದು ಲಕ್ಷ ರೂ. ಹಣ ಪಡೆದಿದೆ ಎಂದು ಸಭೆ ಗಮನಕ್ಕೆ ತಂದಾಗ, ದಾಖಲೆ ಸಮೇತ ದೂರು ಕೊಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಹಾಕುವ ವ್ಯವಸ್ಥೆ ಒಂದೇ ಕಡೆ ನಡೆಯುತ್ತಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಹಾಗಾಗಿ, ಈ ವ್ಯವಸ್ಥೆ ಪ್ರತ್ಯೇಕವಾಗಿ ಆಗಬೇಕು. ಸೋಂಕಿತರ ಮನೆಗೆ ಸ್ಯಾನಿಟೈಸ್ ಮಾಡುವ ಸಿಬ್ಬಂದಿಗಳಿಗೆ ಅಗತ್ಯವಿರುವಷ್ಟು ಪಿಪಿಇ‌ ಕಿಟ್ ನೀಡಬೇಕು ಎಂದು ಸದಸ್ಯರು ಸಭೆ ಗಮನಕ್ಕೆ ತಂದರು.

ಸದಸ್ಯರ ಮನವಿ ಮೇರೆಗೆ ಸದಸ್ಯರು ನಿರ್ಣಯಿಸಿದ ಜಾಗದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಅಗತ್ಯಕ್ಕೆ ಅನುಗುಣವಾಗಿ ಪಿಪಿಇ ಕಿಟ್ ನೀಡುವಂತೆ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ನಿರ್ದೇಶಿಸಿದರು.

ಕೊಳಚೆ ಪ್ರದೇಶಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಸಂಸಾರ ಹಾಳುಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ , ದಾಖಲೆ ಸಮೇತ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೇಯರ್ ಕೃಷ್ಣಪ್ಪ ಮಾತನಾಡಿ, ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ಐಸಿಯು, ವೆಂಟಿಲೇಟರ್, ಆಮ್ಲಜನಕ ಹಾಸಿಗೆಗಳಿವೆ ಎಂಬ ಮಾಹಿತಿ ಸಿಗುವ ವ್ಯವಸ್ಥೆ ಮಾಡಿದರೆ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗಲಿದೆ ಎಂದು‌ ಮನವಿ ಮಾಡಿದರು. ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?