ಮೈಸೂರು ಸಾಂಸ್ಕೃತಿಕ ವಲಯದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡು ಹಿರಿಯ ಮತ್ತು ಕಿರಿಯ ಸಾಹಿತಿಗಳ ಪ್ರೀತಿಗೆ, ಗೌರವಕ್ಕೆ ಪಾತ್ರರಾಗಿದ್ದ ನಲುಮೆಯ ಸ್ನೇಹಿತರಾದ ಹಿರಿಮರಳಿ ಧರ್ಮರಾಜ್ ಹೃದಯಾಘಾತದಿಂದ ಭಾನುವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಆತ್ಮೀಯರ ಸರಣಿ ಸಾವಿನಿಂದ ಘಾಸಿಗೊಂಡಿರುವ ಮನಸ್ಸು ಧರ್ಮರಾಜ್ ಅವರ ಅಗಲಿಕೆಯಿಂದ ಮತ್ತಷ್ಟು ವಿಲಗುಟ್ಟತೊಡಗಿದೆ. ಧರ್ಮರಾಜ್ ಮತ್ತು ನನ್ನ ಗೆಳೆತನ ಒಂದೂವರೆ ದಶಕದ್ದು. ನಾನು ಮತ್ತು ಅವರು ಆಯೋಜಿಸುತ್ತಿದ್ದ ಬಹುತೇಕ ಸಮಾರಂಭಗಳಲ್ಲಿ ಪರಸ್ಪರ ಭಾಗಿಯಾಗುತ್ತಿದ್ದೆವು. ನನ್ನ ತವರು ಮಂಡ್ಯ ನೆಲದ ಪ್ರತಿಭೆ ಎಂಬ ಕಾರಣಕ್ಕೆ ವಿಶೇಷ ಆದರ ಅವರೆಡೆಗಿತ್ತು.
ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತ್ತಕೋತ್ತರ ಪದವಿ ಪಡೆದ ನಂತರ, ಪಾಂಡವಪುರದ ಹಿರಿಮರಳಿಯಿಂದ ಬದುಕನ್ನು ಕಟ್ಟಿಕೊಳ್ಳಲು ಮೈಸೂರಿಗೆ ಬಂದ ಧರ್ಮರಾಜ್ ಅವರು, ಹುಟ್ಟೂರಿನ ಹೆಸರನ್ನು ತಮ್ಮೊಂದಿಗೆ ಹಾಸುಹೊಕ್ಕಾಗಿಸಿಕೊಂಡು ನೆಲೆನಿಂತವರು. ಮೈಸೂರಿನ ಪ್ರತಿಷ್ಠಿತ ಹಾರ್ಡ್ವಿಕ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಲೇಜಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಅವಿರತವಾಗಿ ಕೈಗೊಂಡು ಮುನ್ನಡೆಸುತ್ತಿದ್ದರು. ಹಿರಿಯ ಸಾಹಿತ್ಯ ಚೇತನಗಳನ್ನು ತಮ್ಮ ಕಾಲೇಜಿಗೆ ಕರೆಸುವ ಮೂಲಕ ವಿದ್ಯಾರ್ಥಿಗಳಿಗೆ ಅವರ ಒಡನಾಟ ಸಿಗುವಂತೆ ಮಾಡುತ್ತಿದ್ದ ಕ್ರಿಯಾಶೀಲ ವ್ಯಕ್ತಿತ್ವ ಅವರದ್ದಾಗಿತ್ತು.
ಹಿರಿಯ ಸಾಹಿತಿಗಳಾದ ನಾಡೋಜ ಡಾ. ದೇಜಗೌ, ಡಾ. ಸಿಪಿಕೆ, ಡಾ. ಮಳಲಿ ವಸಂತಕುಮಾರ್ ಅವರಂತಹ ದಿಗ್ಗಜರ ಅತ್ಯಾಪ್ತ ಒಡನಾಟದಲ್ಲಿ ಅನುಗಾಲವೂ ಇದ್ದ ಧರ್ಮರಾಜ್ ಅವರು, ಮಳಲಿಯವರಿಗೆ ಒಂದು ರೀತಿಯಲ್ಲಿ ‘ಬಲಗೈ’ ಆಗಿದ್ದರು. ಮಳಲಿಯವರೂ ಸಹ ಧರ್ಮರಾಜರ ವೃತ್ತಿ, ಬರಹ, ಸಂಘಟನೆ, ಬದುಕಿಗೆ ಬೆನ್ನೆಲುಬಾಗಿದ್ದರು. ಸಾಹಿತ್ಯ ಕೃಷಿಗೆ ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡು ‘ಪ್ರೇಮ ವಸಂತ’, ‘,ಮುತ್ತು ಉದುರಿತು’, ‘ಕನ್ನಡ ಸರಳ ವ್ಯಾಕರಣ’ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಮೂರು ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಕವನಗಳು, ಲೇಖನಗಳು ಹಲವಾರು ಪತ್ರಿಕೆಯಲ್ಲಿ ಸಹ ಪ್ರಕಟವಾಗಿವೆ.
ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದ ಧರ್ಮರಾಜ್ ಅವರು ಕರ್ನಾಟಕ ವಿಚಾರ ವೇದಿಕೆ ಮತ್ತು ಹಿರಿಮರಳಿ ಸಾಂಸ್ಕೃತಿಕ ಸಿರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ವಿಚಾರ ಸಂಕಿರಣ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ, ಉಪನ್ಯಾಸ, ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಆಯೋಜಿಸುವ ಮೂಲಕ ನೂರಾರು ಮಂದಿ ಹಿರಿಯ ಮತ್ತು ಕಿರಿಯ ಪ್ರತಿಭಾವಂತರಿಗೆ ‘ವೇದಿಕೆ’ ಕಲ್ಪಿಸಿದ ಹೆಗ್ಗಳಿಕೆ ಹೊಂದಿದ್ದರು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿ ‘ಸಹಕಾರ ಕ್ಷೇತ್ರ’ದಲ್ಲಿ ಸಹ ಪಯಣ ಆರಂಭಿಸಿದ್ದರು.
ಭೌತಿಕವಾಗಿ ದೈತ್ಯರಾಗಿದ್ದ ಧರ್ಮರಾಜ್ ಅವರು ಸಾಂಸ್ಕೃತಿಕವಾಗಿ ಸಹ ದೈತ್ಯರಾಗಿಯೇ ಮೈಸೂರಿನಲ್ಲಿ ಬೆಳೆಯುತ್ತಿದ್ದರು. ಹಿರಿಯರು ಕಿರಿಯರೆಂಬ ಭೇದವೆಣಿಸದೆ ಎದುರು ಸಿಕ್ಕವರೆಲ್ಲರನ್ನೂ ಹೃದಯಪೂರ್ವಕವಾಗಿ ‘ಅಣ್ಣಯ್ಯ’ ಎಂದೇ ಕರೆಯುತ್ತಿದ್ದ ವಿನಯವಂತರು. ಸರಳತೆ, ಸಜ್ಜನಿಕೆ, ನಿಗರ್ವಿತನ, ಪರೋಪಕಾರಿ, ನಿಸ್ವಾರ್ಥತೆ, ಸಾಮರಸ್ಯ ಗುಣಗಳ ಗಣಿಯಾಗಿದ್ದರು. ಯಾರನ್ನೂ ಸುಖಾಸುಮ್ಮನೆ ಟೀಕಿಸಿದವರಲ್ಲ, ದೂಷಿಸಿದವರಲ್ಲ, ದ್ವೇಷಿಸಿದವರೂ ಅಲ್ಲ. ಮೈಸೂರಿನ ಎಲ್ಲಾ ಸಾಂಸ್ಕೃತಿಕ ಸಂಘಟಕರು ಮತ್ತು ಸಾಹಿತಿಗಳ ಜೊತೆಗೆ ಸೌಹಾರ್ದ ಬಾಂಧವ್ಯ ಇಟ್ಟುಕೊಂಡಿದ್ದರು. ಅದರಲ್ಲೂ ಸಾಹಿತಿ ಮತ್ತು ಸಹೋದ್ಯೋಗಿ ಬೆಸೂರ್ ಮೋಹನ್ ಪಾಳೇಗಾರ್ ಮತ್ತು ಭೂಮಿಗಿರಿ ಪ್ರಕಾಶನದ ಬೆಟ್ಟೇಗೌಡರ ಜೊತೆಗೆ ಖಾಸ ಗೆಳತನವಿತ್ತು.
ಶಿಕ್ಷಣ, ಸಾಹಿತ್ಯ, ಸಂಘಟನೆ, ಸಹಕಾರ ಕ್ಷೇತ್ರದಲ್ಲಿ ದಕ್ಷತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿದ್ದ ಹಿರಿಮರಳಿ ಧರ್ಮರಾಜ್ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಸಹ ತಮ್ಮ ಕವನ ವಾಚಿಸಿ ಗಮನಸೆಳೆದಿದ್ದರು. ಇವರ ಬಹುಮುಖ ಪ್ರತಿಭೆಯ ಸಾಧನೆಗೆ ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನೀಡಲಾಗುವ ‘ಕನ್ನಡ ಸೇವಾರತ್ನ ಪ್ರಶಸ್ತಿ, ಬೆಂಗಳೂರಿನ ಕುವೆಂಪು ಕಲಾನಿಕೇತನ ಸಂಘಟನೆಯ ‘ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿ’ ಸೇರಿದಂತೆ ಹತ್ತಾರು ಪ್ರಶಸ್ತಿಗಳು ದೊರಕಿವೆ.
ಯಾವತ್ತಿಗೂ ಯಾರಿಗೂ ಕೇಡನ್ನು ಬಯಸದ ಹಿರಿಮರಳಿ ಧರ್ಮರಾಜ್ ಅವರ ಅಕಾಲಿಕ ಅಗಲಿಕೆ ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವುಂಟು ಮಾಡಿದೆ. ಸದಾ ಕನ್ನಡ ಕೆಲಸ ಮಾಡಲು ಪತರುಗುಟ್ಟುತ್ತಿದ್ದ ಅವರ ಯೋಜನೆಗಳು, ಆಲೋಚನೆಗಳು ಅಪೂರ್ಣಗೊಂಡಿವೆ. ಮರುಜನ್ಮವಿರುವುದಾದರೆ ಮತ್ತೊಮ್ಮೆ ಹುಟ್ಟಿ ಬನ್ನಿ ಧರ್ಮಣ್ಣ…ನೀವು ನನ್ನನ್ನು ಕಿರಿಯ ಎನ್ನದೆ ಸದಾ ಬಾಯಿತುಂಬ ‘ಅಣ್ಣಯ್ಯ’, ‘ಸಜಗೌ’ ಎಂದು ಕರೆಯುತ್ತಿದ್ದ ಪ್ರೀತಿಯ ದನಿ ನನ್ನೊಳಗೆ ಅನುಗಾಲವೂ ಅನುರಣಿಸುತ್ತಿರುತ್ತದೆ…
– ಟಿ. ಸತೀಶ್ ಜವರೇಗೌಡ, ಮಂಡ್ಯ*