Publicstory
ತುರುವೇಕೆರೆ: ಸಮಾಜ ಮುಖಿಯಾಗಿ ದುಡಿಯುವ ಮಕ್ಕಳಿಗೆ ಜ್ಞಾನ ಕೌಶಲ್ಯ ತುಂಬುವ ಕೆಲಸ ಶಿಕ್ಷಕನಾದರೆ ಅದೇ ಮಕ್ಕಳ ಸದೃಢ ಆರೋಗ್ಯ ಕಾಪಾಡುವ ಮಹತ್ತರವಾದ ಜವಬ್ದಾರಿ ವೈದ್ಯರದು. ಹಾಗಾಗಿ ಇರ್ವರ ಸೇವೆ ದೇಶಕ್ಕೆ ಅತ್ಯಮೂಲ್ಯವೆಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹಾದೇವಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದಂಡಿನಶಿವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ವೈದ್ಯ ಡಾ.ಚಿಕ್ಕಸ್ವಾಮಯ್ಯ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವೈದ್ಯರು ಬಡವರು, ನಿರ್ಗತಿಕರು, ಅಸಹಾಕರ, ಕಾರ್ಮಿಕರ, ಅಶಕ್ತ ಮಹಿಳೆಯರ ಸೇವೆಗೆ ತಮ್ಮ ಬದುಕನ್ನು ಸವೆಸಬೇಕೆ ವಿನಹ ವ್ಯಾಪಾರಿ ಮನೋದರ್ಮ ತಾಳದೆ ವೃತ್ತಿ ಧರ್ಮ ಕಾಪಾಡಿಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ವೈದ್ಯರಾಗಿ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ ಆ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ ಎಂದರು.
ಜಾನಪದ ಕಲಾವಿದ ದಂಡಿನಶಿವರ ಗಂಗಾಧರ್ ಗೌಡ ಮಾತನಾಡಿ, ಕಳೆದ 70 ವರ್ಷಗಳ ಹಿಂದೆ ಪ್ರಾಥಮಿಕ ಚಿಕಿತ್ಸೆಗಾಗಿಯೇ ಪರದಾಡುತ್ತಿದ್ದ ದಂಡಿನಶಿವರ ಭಾಗದ ಜನರಿಗೆ ಶಾಶ್ವತ ಸರ್ಕಾರಿ ಆಸ್ಪತ್ರೆ ಕಟ್ಟಡ ಕಟ್ಟಲು ಹಳ್ಳಿಹಳ್ಳಿ ತಿರುಗಿ, ಚಂದ ಸಂಗ್ರಹಿಸಿ ನೂತನ ಆರೋಗ್ಯ ಕೇಂದ್ರ ನಿರ್ಮಿಸಿದ ಶ್ರೇಯಸ್ಸು ಅಂದಿನ ವೈದ್ಯ ಡಾ.ಚಿಕ್ಕಸ್ವಾಮಿಗೆ ಸಲ್ಲುತ್ತದೆ. ಅವರು ತಮ್ಮ ಇಳಿ ವಯಸ್ಸಿನಲ್ಲೂ ನಿಸ್ವಾರ್ಥ ಮನೋಭಾವನೆಯಿಂದ ಜನರಿಗೆ ಸೇವೆ ಮಾಡುವ ಗುಣ ಇಂದಿನ ಯುವ ವೈದ್ಯರುಗಳಿಗೆ ಮಾದರಿಯಾಗಿದೆ ಎಂದರು.
ಇದೇ ವೇಳೆ ವೈದ್ಯ ಡಾ.ಚಿಕ್ಕಸ್ವಾಮಿ ಹಾಗು ಅವರ ಪುತ್ರಿ ಮಂಜುಳ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯರಾಜ್ಕುಮಾರ್, ಗುಡಿಗೌಡ ಸಿದ್ದೇಗೌಡ, ರಂಗೇಗೌಡ, ತಿಮ್ಮೇಗೌಡ, ವೆಂಕಟೇಶ್, ಶಿವಣ್ಣ, ನಾಗರಾಜು, ವಕೀಲ ಶೇಖರಪ್ಪ, ನಟರಾಜು, ಸುರೇಶ್, ಡಿ.ಸಿ.ಕುಮಾರ್, ನಂಜುಂಡೇಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.