Thursday, March 12, 2026
Google search engine
Home Blog Page 33

ಅಂಬೇಡ್ಕರ್ ಚಿಂತನೆಗಳು ಮಹಿಳೆಯರ ಸಬಲೀಕರಣಕ್ಕೆ ಮಹತ್ವವಾದವು.


ತುಮಕೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಅಂಬೇಡ್ಕರ್ ಮತ್ತು ಮಹಿಳಾ ಸಬಲೀಕರಣ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಾಪಕರಾದ ಡಾ.ಗುಂಡೇಗೌಡ ರವರು ಮಾತನಾಡಿ ಮಹಿಳೆಯರ ಸಬಲೀಕರಣಕ್ಕೆ ಅಂಬೇಡ್ಕರ್ ರವರ ಕೊಡುಗೆ ಮಹತ್ವವಾದುದು. ಅಂಬೇಡ್ಕರ್ ರವರ ಚಿಂತನೆಗಳು ವಿದೇಶದವರ ಮೇಲೂ ಪ್ರಭಾವ ಬೀರಿ, ಅವರ ಚಿಂತನೆಗಳನ್ನು ವಿದೇಶದವರು ಅಳವಡಿಸಿಕೊಂಡರು.

ಹೆಣ್ಣು ಮಕ್ಕಳಿಗೆ ಮೊದಲು ಶಿಕ್ಷಣವನ್ನು ಕೊಡಬೇಕು ಎಂದು ಒತ್ತಾಸೆಯನ್ನು ಇಟ್ಟುಕೊಂಡು ಕೆಲಸ ಮಾಡಿದರು. ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದನ್ನು ಹೆಣ್ಣು ಮಕ್ಕಳು ಮನಗಾಣಬೇಕು ಎಂಬುದನ್ನು ಅಂಬೇಡ್ಕರ್ ಹೇಳಿದರು. ಅಂಬೇಡ್ಕರ್ ರವರ ಆಶಯವನ್ನು ವಿದ್ಯಾರ್ಥಿಗಳು ಪೂರೈಸಬೇಕು, ಕಾನೂನು ಗೌರವಿಸಿ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ. ಅಧ್ಯಾಪಕರಾದ ಪ್ರೊ.ಸಿದ್ದಶ ಡಿ.ಜೆ , ಪ್ರೊ.ನಿವೇದಿತಾ, ಪ್ರೊ ರಾಜೇಶ್, ಪ್ರೊ. ಮಂಜುಕುಮಾರ್, ಪ್ರೊ.ಮಾನಸ ಪ್ರೊ.ಯಶೋದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತುರುವೇಕೆರೆ::ಯಾವ ಗ್ರಾ.ಪಂ ಗೆ ಯಾರು ಅಧ್ಯಕ್ಷರು…

ತುರುವೇಕೆರೆ: ತಾಲ್ಲೂಕಿನ ಒಂಬತ್ತು ಗ್ರಾಮ ಪಂಚಾಯಿತಿಗಳಿಗೆ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಿತು.

ಅವುಗಳಲ್ಲಿ ಬಾಣಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಎಂ.ಎನ್.ಲಲಿತ ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಎ.ಹೊಸಹಳ್ಳಿ ಪಾಳ್ಯದ ಕಾಂತರಾಜು, ವಡವನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಪ್ರಕಾಶ್ ಎನ್.ಕೆ, ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳೆ ದಿವ್ಯಶ್ರೀ, ಸಂಪಿಗೆ ಗ್ರಾಮ ಪಂಚಾಯಿತಿಯ ಪ್ರವರ್ಗ ಅ ವರ್ಗದ ಅಧ್ಯಕ್ಷರಾಗಿ ಶಿವಲಿಂಗಮೂತರ್ಿ, ಸಾಮಾನ್ಯ ವರ್ಗದ ಉಪಾಧ್ಯಕ್ಷರಾಗಿ ಶಮಂತ್ ಕುಮಾರಿ, ಗೋಣಿತುಮಕೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಹಿಂದುಳಿದ ವರ್ಗಅ ಮೀಸಲಾತಿಯ ಕಲ್ಪನಅಶೋಕ್ಕುಮಾರ್, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ನಾಗೇಂದ್ರ, ತಂಡಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಸಿಎಂಬಿ ಶಾಂತಾ, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ರೇಕಾಮಣಿ, ದಂಡಿನಶಿವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಹನುಮಂತರಾಜು ಡಿ.ಟಿ, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ಕುಮಾರ ಸ್ವಾಮಿ, ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಕೀರ್ತಿ ಎಚ್.ಎನ್, ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಮಂಜುಳ, ಮುತ್ತಗದಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಸಿಎಂ ಮೀಸಲಾತಿಯ ಪ್ರೇಮಲತ, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆ.

ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ, ಬೆಸಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರನಾಯಕ್, ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿ ತಿಪ್ಪೇಸ್ವಾಮಿ, ತೋಟಗಾರಿಕಾ ಸಹಾಯ ನಿರ್ದೇಶಕ ಆಂಜನೇಯರೆಡ್ಡಿ, ಕೃಷಿ ಸಹಾಯಕ ನಿರ್ದೇಶಕಿ ಪೂಜಾ.ವಿ, ಹೇಮಾವತಿ ಎಂಜಿನಿಯರ್ ಶಿವಪ್ರಸಾದ್, ಎಂಜಿನಿಯರ್ ವಾಸದೇವಮೂರ್ತಿ, ಲೋಕೋಪಯೋಗಿ ಎಂಜಿನಿಯರ್ ಪ್ರಭಾಕರ್.ವಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಬಹುಮುಖ ವ್ಯಕ್ತಿತ್ವದ ವೂಡೇ ಪಿ.ಕೃಷ್ಣ

ಉತ್ತಮ ಮೌಲ್ಯಗಳನ್ನು ಯುವಜನರಲ್ಲಿ ತುಂಬಿ ಅವರನ್ನು ಜವಾಬ್ದಾರಿಯುತ ಪೌರರನ್ನಾಗಿಸುವ ದೃಷ್ಟಿಯನ್ನೇ ಪ್ರಧಾನವಾಗಿಟ್ಟು ಕೊಂಡಿರುವ ಆದರ್ಶಪ್ರಾಯರಾದ ಡಾ. ವೂಡೇ ಪಿ. ಕೃಷ್ಣರವರು ಶಿಕ್ಷಣ ಕ್ಷೇತ್ರದಲ್ಲಿ ಕಂಡ ಅಪರೂಪದ ಸಾಧಕರು. ಅವರ ಕುರಿತಾದ ಲೇಖನಮಾಲೆ ಪ್ರತಿ ಭಾನುವಾರ ಪಬ್ಲಿಕ್ ಸ್ಟೋರಿಯಲ್ಲಿ ಪ್ರಕಟವಾಗಲಿದೆ.

ಕೃಷ್ಣ ಅವರು ಅಧ್ಯಯನಶೀಲರು ಮಾತ್ರವಲ್ಲದೇ, ಉತ್ತಮ ಬರಹಗಾರರು, ಒಳ್ಳೆಯ ವಾಗ್ಮಿ ಕೂಡಾ ಆಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸಜ್ಜನರು, ‘ವಿದ್ಯಂ ದಧಾತಿ ವಿನಯಂ’ ಎಂಬ ಮಾತಿಗೆ ವ್ಯಾಖ್ಯಾನದಂತಿದ್ದಾರೆ. ಹಾಗೆಯೇ ಬದುಕುತ್ತಿದ್ದಾರೆ.

ಪ್ರಸ್ತುತದಲ್ಲಿ ಶಿಕ್ಷಣ ಕಲಿಯುವ ಯುವ ಸಮುದಾಯವು ಹೀಗೆ ಬದುಕಬೇಕೆಂಬ ಆಸೆಗಣ್ಣಿನಿಂದ ನೋಡುವಂತಿದ್ದಾರೆ. ಅವರ ಏಳಿಗೆಗಾಗಿ ಸದಾ ಸಭೆ ಸಮಾರಂಭಗಳಲ್ಲಿ ಭಾಷಣಗಳಿಂದ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಡಾ. ವೂಡೇ ಪಿ. ಕೃಷ್ಣರವರ ನಾಯಕತ್ವದಲ್ಲಿ ನಡೆಯುತ್ತಿರುವ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳು, ಗಾಂಧೀ ಶಾಂತಿ ಪ್ರತಿಷ್ಠಾನ, ಭಾರತೀಯ ಇಂಜಿನಿಯರುಗಳ ಸಂಸ್ಥೆ ಮೊದಲಾದ ಸಂಸ್ಥೆಗಳಿಗೆ ಆಧ್ಯಾತ್ಮಿಕ, ವೈಚಾರಿಕ, ವೈಜ್ಞಾನಿಕ, ಸಾಂಸ್ಕೃತಿಕ ಸ್ಪರ್ಶ ನೀಡಿ; ಶಿಸ್ತು, ಸಹಕಾರ ಮನೋಭಾವ, ಜಾತ್ಯತೀತ ಸ್ವರೂಪ, ಉತ್ತಮ ಸಂಸ್ಕಾರಗಳ ಗುಣಗಳನ್ನು ತುಂಬಿ ಎಲ್ಲರೂ ಮೆಚ್ಚುವಂತಹ ಆದರ್ಶ ಸಂಸ್ಥೆಗಳನ್ನಾಗಿ ರೂಪಿಸಿದ್ದಾರೆ. ಇದು ಗಮನಾರ್ಹ ಮಾತ್ರವಲ್ಲದೆ ಶ್ಲಾಘನೀಯ ಸಾಧನೆಯೂ ಹೌದು.

ಅಧಿಕಾರವಿದ್ದರೂ ಯಾವುದೇ ಬಿಗುವಿಲ್ಲದೆ ಡಂಭಾಚಾರವಿಲ್ಲದೆ ತಾವಿರುವ ಸಂಸ್ಥೆಗಳಿಗೆ ಸಹಾಯಕ್ಕಾಗಿ ಹುಡುಕಿಕೊಂಡು ಬಂದವರನ್ನು ಬರಿಗೈಲಿ ಕಳುಹಿಸದೆ ಕೈಲಾದ ಸಹಾಯವನ್ನು ಮಾಡುವುದರೊಂದಿಗೆ, ಸಂಸ್ಥೆಯ ಕಾನೂನಿನ ಇತಿಮಿತಿಯಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ, ಗ್ರಾಮೀಣಭಾಗದ ಪ್ರತಿಭಾವಂತರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಒದಗಿಸಿರುವುದು ಕೂಡಾ ಬಡವರ ಬಗ್ಗೆ, ಅದರಲ್ಲೂ ಯುವಪೀಳಿಗೆ ಬಗ್ಗೆ ಇರುವ ಇವರ ಪ್ರೀತಿ ಎಂತಹದ್ದು ಎಂಬುದು ಅರ್ಥವಾಗುತ್ತದೆ.

ಭಾರತದ ರಾಷ್ಟ್ರಪತಿಗಳು ಅಧ್ಯಕ್ಷರಾಗಿರುವ ಬಹು ದೊಡ್ಡ ಮಾನವೀಯ ಸಂಸ್ಥೆಗಳಾದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಭಾರತೀಯ ಕ್ಷಯರೋಗ ಸಂಸ್ಥೆಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಡಾ. ಕೃಷ್ಣರವರು ಒಬ್ಬರಾಗಿರುವುದು ಕನ್ನಡಿಗರಿಗೆ ಹೆಮ್ಮೆ ತರುವ ಸಂಗತಿ. 2013ರಲ್ಲಿ ರೆಡ್‌ ಕ್ರಾಸ್‌ ಮಾನವೀಯ ಸೇವೆಗಾಗಿ ನೀಡಲ್ಪಡುವ ಅತ್ಯುನ್ನತ ರಾಷ್ಟ್ರಪ್ರಶಸ್ತಿಯಾದ ‘ರಾಷ್ಟ್ರಪತಿಗಳ ಚಿನ್ನದ ಪದಕ’ ಇವರಿಗೆ ಸಂದಿದೆ.

ನಮ್ಮದು ಪ್ರಗತಿಪರ ರಾಷ್ಟ್ರ, ದೇಶದ ಪುನರ್‌ನಿರ್ಮಾಣದಲ್ಲಿ ವಿದ್ಯಾರ್ಥಿಗಳಲ್ಲಿ ಉನ್ನತ ಆದರ್ಶಗಳನ್ನು ಬೆಳೆಸುವುದರಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮಹತ್ವವಾದದ್ದು. ಆದರ್ಶ, ನಿಸ್ವಾರ್ಥ, ಬದ್ಧತೆ ಹಾಗೂ ಅರ್ಪಣಾ ಮನೋಭಾವ ಹೊಂದಿರುವ ಏಕವ್ಯಕ್ತಿ ಕಾರ್ಯವು ಬಹುಜನರ ಮೇಲೆ ವಿಶೇಷ ಪ್ರಭಾವವನ್ನು ಬೀರಬಲ್ಲದು.

ವ್ಯಕ್ತಿಗೆ ಒಂದು ಮುಖ. ಆದರೆ ವ್ಯಕ್ತಿತ್ವಕ್ಕೆ ನಾನಾ ಮುಖಗಳು, ಹರಿಯುವ ನೀರಿನಂತೆ, ಉರಿಯುವ ಜ್ಯೋತಿಯಂತೆ, ಬೀಸುವ ಗಾಳಿಯಂತೆ, ಸೂಸುವ ಮಳೆಯಂತೆ, ಹರಿಯುವ ನೀರು ತಾನು ಹರಿದ ಎಡೆಯನ್ನೆಲ್ಲಾ ಸಸ್ಯಶ್ಯಾಮಲಗೊಳಿಸುತ್ತದೆ, ಹೊಚ್ಚ ಹೊಸದಾಗಿಸುತ್ತದೆ. ಉರಿಯುವ ಜ್ಯೋತಿ ತಾನು ಉರಿದೊಡೆ ಕತ್ತಲನ್ನು ನೀಗುತ್ತದೆ, ತನ್ನ ಪರಿಸರವನ್ನು ಬೆಳಗುತ್ತದೆ. ಮೋಡದಿಂದ ಹನಿಹನಿಯಾಗಿ ಸೂಸುವ ಮಳೆ ನೆಲದಲ್ಲಿ ತನ್ನ ಕಾಲೂರಿ ಇಳೆಯ ಬೆಳೆಯ ಕತ್ತೆತ್ತಿಸಿ, ಜೀವಕೋಟಿಗಳ ಬದುಕಿಗೆ ಜೀವರಸವಾಗುತ್ತದೆ. ಇದು ಸಹೃದಯ ಚೇತನಗಳಿಗೆ ಮಾತ್ರ ಸಾಧ್ಯ. ಹಾಗೆ ಇದನ್ನು ಸಾಧ್ಯವಾಗಿಸಿಕೊಂಡಿರುವ, ಸ್ಪಂದನಶೀಲ ಹೃದಯವಂತಿಕೆ ಪಡೆದಿರುವವರ ಮೊದಲ ಸಾಲಿನಲ್ಲಿ ಡಾ. ವೂಡೇ ಪಿ. ಕೃಷ್ಣರವರು ನಿಲ್ಲುತ್ತಾರೆ.

ಬಹುಶಃ ಅನಾಮಧೇಯವಾಗಿ ಕಳೆದು ಹೋಗಬಹುದಾಗಿದ್ದ ತನ್ನ ಹಳ್ಳಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಸಂಲಗ್ನಗೊಳಿಸುವ ಮೂಲಕ ಕಾಲಗರ್ಭದಲ್ಲಿ ಕರಗಿಹೋದ ತಮ್ಮ ಮೂಲ ಗ್ರಾಮವನ್ನು ಜೀವಂತವಾಗಿ ಇಟ್ಟಿದ್ದಾರೆ. ಹೀಗಾಗಿ ವೂಡೇ ಇಂದು ಅಸ್ತಿತ್ವದಲ್ಲಿಲ್ಲದಿದ್ದರೂ ಗಮನಾರ್ಹ ಸ್ಥಳವಾಗಿದೆ. ನೆನಪಿನ ರಂಗಸ್ಥಳದಲ್ಲಿ ಚಿರಂತನವಾಗಿದೆ. ಇದಕ್ಕೆ ಕಾರಣ ಡಾ.ವೂಡೇ ಪಿ. ಕೃಷ್ಣ, ನಾನಿಂಥ ಊರಿನವನು ಎಂಬ ಹೆಮ್ಮೆ ವ್ಯಕ್ತಿಯದಾದರೆ, ನನ್ನ ಮಡಿಲಲ್ಲಿ ಇಂಥವನು ಬದುಕಿದ್ದನಲ್ಲಾ ಎಂಬ ಹಿಗ್ಗು ಊರಿನ ಸುತ್ತಿನ ಪರಿಸರದ್ದು,

ಅನ್ಯರ ಮನನೋಯಿಸುವ ಮಾತನ್ನು ಕೃಷ್ಣರವರು ಎಂದೂ ಆಡಿದವರಲ್ಲ. ಸೌಮ್ಯತೆಯೇ ಮೈವೆತ್ತ ಮೂರ್ತಿಯಂತಿರುವ ಡಾ. ಕೃಷ್ಣ ತಮ್ಮ ಬಾಳಿನುದ್ದಕ್ಕೂ ತಮ್ಮ ಉದಾತ್ತ ವ್ಯಕ್ತಿತ್ವವನ್ನು ಮೆರೆದವರು. ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಅಷ್ಟೇ ಪ್ರಮಾಣದ ಸತ್ಯಸಂಧತೆ, ಪ್ರಾಮಾಣಿಕತೆ ಮತ್ತು ಘನತೆ ಗೌರವಗಳು ಇವರಲ್ಲಿ ಮನೆಮಾಡಿಕೊಂಡಿವೆ. ಇತರರಿಗಾಗಿ ತಾವು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು, ಫಲಾಪೇಕ್ಷೆಯನ್ನು ಎಂದೂ ನಿರೀಕ್ಷಿಸಿದವರಲ್ಲ. ಇವರಿಗೆ ಮಾರ್ಗವು ಗುರಿಯಷ್ಟೇ ಮುಖ್ಯ. ಜನರ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಕರ್ಮಸಿದ್ಧಾಂತದಲ್ಲಿ ಇವರಿಗೆ ನಂಬಿಕೆ.

ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಇವರನ್ನು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್‌ರವರ ವಿಚಾರಧಾರೆಗಳು, ತಂದೆ ತಾಯಿಯರ ಮೌಲ್ಯಯುತ ಬದುಕಿನ ಅಂಶಗಳು ವಿದ್ಯಾರ್ಥಿ ದೆಸೆಯಿಂದಲೇ ಪ್ರಭಾವಿಸಿ ಮುನ್ನಡೆಸಿವೆ.

ಕೃಷ್ಣರವರ ಕಾರ್ಯತತ್ಪರತೆ ಇವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು, ಸರಳಜೀವಿ, ಸ್ನೇಹಶೀಲ ವ್ಯಕ್ತಿ, ದೇಶ-ವಿದೇಶಗಳಲ್ಲಿ ಎಷ್ಟೇ ದೊಡ್ಡ ಸಭೆ-ಸಮಾರಂಭವಿರಲಿ ಇವರ ವೇಷಭೂಷಣದಲ್ಲಿ ಯಾವುದೇ ಬದಲಾವಣೆಯೂ ಇಲ್ಲ. ಮಾಮೂಲಿಯಂತೆ ಶ್ವೇತ ಶುಭ್ರವಸ್ತ್ರಧಾರಿ, ಒಮ್ಮೆ ಅಮೆರಿಕದ ಸಿವಿಲ್ ಇಂಜಿನಿಯರುಗಳ ಸೊಸೈಟಿ ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷರಾದ ಡಾ. ರಾಬರ್ಟ್ ಡಿ. ಸ್ಟೀವನ್ಸ್ ರವರು ಇವರ ಸರಳ ಉಡುಪನ್ನು ಮುಟ್ಟಿನೋಡಿ ಮೆಚ್ಚಿದರು.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದಾನೆ ಎಂಬ ಸಂಗತಿ ಬಹು ಮುಖ್ಯ. ಈ ನಿಟ್ಟಿನಲ್ಲಿ ಕೃಷ್ಣರ ಬಗ್ಗೆ ಯೋಚಿಸಿದಾಗ ಇವರ ಅನನ್ಯತೆ ನಮ್ಮ ಕಣ್ಣಿಗೆ ರಾಚುತ್ತದೆ. ಇವರ ಸರಳತೆ, ಆದರ್ಶ, ನಿರುಪದ್ರವಿ ಬದುಕು ಇಂದಿನ ಯುವಜನಾಂಗಕ್ಕೆ ಮಾರ್ಗದರ್ಶಕವಾದುದು.

ಕೃಷ್ಣರವರದು ಮೇರು ವ್ಯಕ್ತಿತ್ವ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ವೈಚಾರಿಕವಾಗಿ ಯಾವುದೇ ಕ್ಷೇತ್ರದಲ್ಲಿ ತಮ್ಮ ಮಿತಿಯಲ್ಲಿ ನ್ಯಾಯವನ್ನು ಸಲ್ಲಿಸುವ ದಕ್ಷತೆ ಇವರದು.

ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತರೆಂದರೆ ಇವರಿಗೆ ಅಚ್ಚುಮೆಚ್ಚು. ಅರ್ಹರನ್ನು ಸನ್ಮಾನಿಸಿ ಗೌರವಿಸಲು ಇವರು ಸದಾ ಮುಂದು. ಜ್ಞಾನದ ಬುತ್ತಿಯನ್ನು ಹೊಂದುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಅಂತಹವರನ್ನು ತಾವಿರುವ ಸಂಸ್ಥೆಗಳಿಗೆ ಕರೆಯಿಸಿ, ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಮುಖಗಳನ್ನು ತಿಳಿಸಿ, ಆ ರೀತಿಯಲ್ಲಿ ಬೆಳೆಯಲು ಪ್ರೇರೇಪಿಸುತ್ತಾರೆ.

ರಾಜಕೀಯ ಸ್ಥಾನಮಾನಗಳಿಗೆ ಎಂದೂ ಆಸೆಪಡದೆ ರಾಜಕೀಯೇತರ ಸಾರ್ವಜನಿಕ ಸೇವಾಕ್ಷೇತ್ರದಲ್ಲಿ ಪ್ರಬಲವಾಗಿ ಗುರುತಿಸಿಕೊಂಡವರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತಿ ಪಡೆದ ಸುಸಂಸ್ಕೃತ ಮುತ್ಸದ್ಧಿ, ಇವರ ಬದುಕು ಹಾಗೂ ಅಪೂರ್ವ ಸಾಧನೆಗಳು ಸದಾ ಕಾಲಕ್ಕೂ ಸರ್ವರಿಗೂ ಸ್ಫೂರ್ತಿದಾಯಕ. ಮುಂದಿನ ಪೀಳಿಗೆ ಬಾಳಿದರೆ ಹೀಗೇ ಬಾಳಬೇಕು ಎಂಬ ಸಂದೇಶವನ್ನು ನೀಡುವ ಇವರ ಬದುಕು ಮಾರ್ಗದರ್ಶಕವಾದುದು. ಅಂಥವರ ಬದುಕಿನತ್ತ ಒಂದು ಪಕ್ಷಿನೋಟ ಇದಾಗಿದೆ.

Publicstory ಯಲ್ಲಿ “ಶಿಕ್ಷಣ ಶಿಲ್ಪಿ” ನಾಡೋಜ ಡಾ.ವೂಡೇ ಪಿ ಕೃಷ್ಣ ಜೀವನ ಚಿತ್ರಣ

ಮೌಲ್ಯಗಳನ್ನು ಬಿತ್ತಬೇಕಾಗಿರುವ ಮಾದ್ಯಮಗಳು ಸ್ಥಗಿತಗೊಂಡಾಗ ಮೌಲ್ಯವರ್ದನೆ ಸಾಧ್ಯವೇ…
ಇಂದಿನ ಸಿನಿಮಾ ಮತ್ತು ಮಾದ್ಯಮಗಳ ಉದ್ಯಮ ನೀತಿ ಕಾರಣ ಯುವಜನತೆಯನ್ನು ಕ್ರೌರ್ಯ, ಅಹಂಕಾರ, ಉನ್ಮಾದದಲ್ಲಿ ಮುಳುಗುವಂತೆ ಮಾಡಲಾಗುತ್ತಿದೆ. ಮಾರ್ಗದರ್ಶನ ( ತಂದೆ, ತಾಯಿ) ಮಾಡಬೇಕಾದವರೆಲ್ಲ ಕೈ ಕಟ್ಟಿ ಕೂರುವಂತಾಗಿದೆ.


ಇಂತಹ ಸಂದರ್ಭದಲ್ಲಿ ಮೌಲ್ಯಯುತ ಮಹನೀಯರ ಜೀವನ, ಅವರ ಆದರ್ಶಗಳು ಯುವಜನತೆಯ ಕಣ್ತೆರೆಸುವ ಕೆಲಸ ಮಾಡುತ್ತವೆ. ಮಹನೀಯರ ಜೀವನ ಚರಿತ್ರೆ ಗಳು ಯುವಜನತೆಗೆ ತಲುಪಿಸಬೇಕಾದ ಸಾಮಾಜಿಕ ತುರ್ತು ಇದೆ ಎಂಬುದನ್ನು ಎಲ್ಲರೂ ಹೇಳುತ್ತಿದ್ದಾರೆ. ಈ ಕೆಲಸಕ್ಕೀಗ ಪಬ್ಲಿಕ್ ಸ್ಟೋರಿ ಮುಂದಾಗುತ್ತಿದೆ.


ಮೊದಲಿನ ಸಿನಿಮಾಗಳು ಹೇಗಿರುತ್ತಿದ್ದವು. ವಿಶಾಲಾಕ್ಷಿ ದಕ್ಷಿಣ ಮೂರ್ತಿಯವರ “ವ್ಯಾಪ್ತಿ- ಪ್ರಾಪ್ತಿ” ಕಾದಂಬರಿ. ಡಾ. ರಾಜ್ ಕುಮಾರ್ ನಟನೆಯ ಆಕಸ್ಮಿಕ ಸಿನಿಮಾವಾದಾಗ ಅನೇಕ ಮದ್ಯದಂಗಡಿಗಳನ್ನು ಜನರೇ ಸ್ವಯಂ ಪ್ರೇರಿತವಾಗಿ ಮುಚ್ಚಿಸಿದರು.


“ನನ್ನ ಬದುಕು ಯಾರೊಬ್ಬರಿಗೂ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ ಯಾವುದೋ ಮೂಲೆಯಲ್ಲಿನ ಊರಿನಲ್ಲಿ ಹುಟ್ಟಿ ಸಾಮಾಜಿಕವಾಗಿ ಸೌಲಭ್ಯಗಳಿಂದ ವಂಚಿತವಾಗಿರುವ ಮಗುವಿಗೆ ಅದರಂಥದೆ ಪರಿಸರದಲ್ಲಿದ್ದ ನನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಬಹುದು. ಅಂತಹ ಮಕ್ಕಳಿಗೆ ತಾವು ಹಿಂದುಳಿದವರು, ಅಸಮರ್ಥರು ಅನ್ನುವ ಭ್ರಮೆಯಿಂದ ಬಿಡುಗಡೆ ಹೊಂದಲು ನನ್ನ ಬದುಕು ಸ್ಪೂರ್ತಿ ನೀಡಬಹುದೇನೋ” ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಅವರ ಆತ್ಮಕಥೆ ” ವಿಂಗ್ಸ್ ಆಫ್ ಫೈರ್ ” ಕೃತಿಯನ್ನು ರಚಿಸಿದ ಕಾರಣವನ್ನು ಕುರಿತು ಹೇಳಿದ ಮಾತು ನೆನಪಾಗುತ್ತಿದೆ.


ಡಾ.ಅಬ್ದುಲ್ ಕಲಾಂ, ಡಾ.ರಾಜ್ ಕುಮಾರ್ ಅವರಂತೆ ಆದರ್ಶದ ಸಮಾಜ ನಿರ್ಮಾಣದತ್ತ ತಮ್ಮ‌ ಬದುಕನ್ನೇ ಮುಡುಪಾಗಿಟ್ಟಿದ್ದಾರೆ ಡಾ. ವೂಡೇ ಪಿ. ಕೃಷ್ಣ ಅವರು. ಆದರ್ಶ ತುಂಬುವ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಹೆಸರಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರ ಹೆಸರು ಶಿಕ್ಷಣ ಕ್ಷೇತ್ರದಲ್ಲಿ ಜನಜನಿತ.

ಅಪ್ಪಟ ಗಾಂಧಿವಾದಿ, ಸ್ವತಂತ್ರ ಹೋರಾಟದಗಾರರಾದ ವೂಡೇದ ಹನುಮಂತಪ್ಪನವರ ಕುಟುಂಬದ ಈ ಚೇತನ ಸಮಾಜಸೇವಾ ಗುಣಗಳ ಆಗರ. ಇವರ ಜೀವನ ಚರಿತ್ರೆ “ಶಿಕ್ಷಣ ಶಿಲ್ಪಿ” ಕೃತಿ ಯನ್ನು ನಮ್ಮ publicstory.in ನಲ್ಲಿ ಮುಂದಿನ ಭಾನುವಾರದಿಂದ ವಾರಕ್ಕೊಮ್ಮೆ ಪ್ರಕಟಿಸಲಾಗುವುದು.

ಆರೇಳು ದೇಶಗಳಲ್ಲಿ ಓದುಗರನ್ನು ಸೃಷ್ಟಿಸಿಕೊಂಡಿರುವ publicstory ಓದುಗ ಬಳಗದ ಯುವಜನತೆಗೆ ಇವರ ಜೀವನ ಚಿತ್ರ ಸ್ಪೂರ್ತಿ ಮತ್ತು ಮಾರ್ಗದರ್ಶನವಾಗುತ್ತದೆ ಎಂಬ ಭರವಸೆ ನಮಗಿದೆ.

ಸಂಪಾದಕಿ- ಡಾ. ಶ್ವೇತಾರಾಣಿ ಹೆಚ್. Publicstory.in

ಲೇಖಕರು : ಡಾ. ಕೆ. ವಿ ಮುದ್ದವೀರಪ್ಪ ಪ್ರೊ ಎಂ.ಜಿ. ರಂಗಸ್ವಾಮಿ

ಎನ್ ಎಸ್ ಎಸ್ ಸಂವಿಧಾನದ ಆಶಯಕ್ಕೆ ನೀರೆರೆಯಲಿ

ತುಮಕೂರು: ಶ್ರಮದಾನ, ಸ್ವಚ್ಛತೆಯ ಜತೆಗೆ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರ ನಡುವೆ ಬಿತ್ತುವ ಕೆಲಸವನ್ನು ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಪ್ರಮುಖ ಗುರಿಯಾಗಿಸಿಕೊಳ್ಳಬೇಕು ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ರಮೇಶ್ ಹೇಳಿದರು.

ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ಎನ್ ಎಸ್ ಎಸ್ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎನ್ ಎಸ್ ಎಸ್ ಸೇರುವುದರಿಂದ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಯಲಿದೆ. ಅಲ್ಲದೇ ಬದುಕಿನ ಗುರಿಯನ್ನು ಹೊಂದಲು ಸಹಾಯ ಮಾಡಲಿದೆ ಎಂದರು.

ಸಮಾಜದಲ್ಲಿ ಶಾಂತಿ ಸಾಮರಸ್ಯ, ಸಹೋದರತೆ, ಆರ್ಥಿಕ ಸಮಾನತೆಯ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಸಿದ್ಧಾರ್ಥ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಧಿಮಾರಿ ರವಿಕಿರಣ್ ಬಿ.ಎಸ್. ಮಾತನಾಡಿ, ಎನ್ ಎಸ್ ಎಸ್ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆಯ ಮೂಲಕ ಕಾನೂನು ಅರಿವು, ಮಹತ್ವದ ಬೆಳವಣಿಗೆಗಳನ್ನು ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬಹುದು. ಎನ್ ಎಸ್ ಎಸ್ ನಲ್ಲಿ ಉನ್ನತ ಸ್ಥಾನ ಗಳಿಸಿದರೆ ಉದ್ಯೋಗದಲ್ಲೂ ಮೀಸಲಾತಿ ಸಿಗಲಿದೆ ಎಂದರು.

ಸುಫಿಯಾ ಲಾ ಕಾಲೇಜಿ‌ನ ಅಧ್ಯಕ್ಷರಾದ, ಮಾಜಿ ಶಾಸಕ ಎಸ್. ಷಫೀ ಅಹಮದ್ ಮಾತನಾಡಿ, ಕಾಲೇಜಿನ ಬೆಳವಣಿಗೆಯನ್ನು ಶಾಘ್ಲಿಸಿದರು.

ಎನ್ ಎಸ್ ಎಸ್ ಸಂಯೋಜನಾಧಿಕಾರಿ ಮಮತಾ ಪಿ.ಎಲ್, ಉಪ ಪ್ರಾಂಶುಪಾಲರಾದ ಓಬಯ್ಯ, ಗ್ರಂಥಪಾಲಕ ಸುಬ್ರಹ್ಮಣ್ಯ ಎಲ್, ಸೂಪರಿಡಿಂಡ್ ಟೆಂಟ್ ಜಗದೀಶ, ಕಾಲೇಜಿನ ಉಪನ್ಯಾಸಕರಾದ ಖಾಷಿಪ್ ಅಹ್ಮದ್, ಸಯ್ಯದ್ ಜೈನತ್ ತರೊನಂ, ಟಿ.ಜೆ.ಶ್ರೀನಿವಾಸ್,ರೇಣುಕಾ, ಅಶ್ವತ್ಥಕುಮಾರ್, ಸಿಬ್ಬಂದಿ ಪಾಷಾ ಇದ್ದರು.

ಲಯನ್ಸ್ ಕ್ಲಬ್ ಗೆ ಲೋಕೇಶ್ ನೇತೃತ್ವ

ತುರುವೇಕೆರೆ: 2023-24 ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.7ರಂದು ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಿ.ಕೆ.ನಾಗರಾಜು ತಿಳಿಸಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷವೂ ಸಹಾ ಜಿ.ಸಿ.ಶ್ರೀನಿವಾಸ್ ಅವರ ಅಧ್ಯಕ್ಷರ ನೇತೃತ್ವದಲ್ಲಿ ನಮ್ಮ ಸಂಸ್ಥೆ ನೂರಾರು ವಿವಿಧ ಸೇವಾ ಚಟುವಟಿಕೆ ಗಳನ್ನು ನಡೆಸಿ ಉತ್ತಮ ಪ್ರಶಸ್ತಿಯನ್ನೂ ಸಹಾ ಪಡೆದುಕೊಂಡಿದೆ ಎಂದರು.

2023-24 ರ ಅವಧಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೋಕೇಶ್ ಮಾತನಾಡಿ, ನನ್ನ ಪ್ರಸಕ್ತ ಅವಧಿಯಲ್ಲಿ ಪ್ರತಿ ತಿಂಗಳು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಜೊತೆಗೆ ಗಿಡಗಳನ್ನು ನೆಡುವುದು, ಶೈಕ್ಷಣಿಕ ಮತ್ತು ಆರೋಗ್ಯ ಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕ್ಯಾನ್ಸರ್ ಮತ್ತು ಡಯಾಬಿಟೀಸ್ ಬಗ್ಗೆ ಜಾಗೃತಿ ಜಾಥಾ, ಅನಾಥರಿಗೆ ರಕ್ಷಣೆ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸುವ ಪ್ರಯತ್ನ, ಶಾಲೆಗಳಿಗೆ ಅಗತ್ಯವಿರುವ ಸೌಕರ್ಯವನ್ನು ಕಲ್ಪಿಸುವುದು ಎಂದು ವಿವರಿಸಿದರು.

ತಾಲ್ಲೂಕಿನ ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಲ್ಯಾಪ್‌ಟಾಪ್ ವಿತರಣೆ, ಎಂದಿನಂತೆ ತಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿರುವ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಜುಲೈ 7 ರ ಶುಕ್ರವಾರ ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿರುವ ಅಧಿಕಾರ ಪದಗ್ರಹಣ ಸಮಾರಂಭವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸುವರು. ಪ್ರಮಾಣ ವಚನವನ್ನು ಮಾಜಿ ಜಿಲ್ಲಾ ರಾಜ್ಯಪಾಲ ಜಿ.ಶ್ರೀನಿವಾಸ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಜಿ.ಸಿ.ಶ್ರೀನಿವಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಾಂತ್ಯಾಧ್ಯಕ್ಷ ಜಿ.ಗುರುಪ್ರಸಾದ್, ವಲಯಾಧ್ಯಕ್ಷ ಜೆ.ಮಿಹಿರಕುಮಾರ್, ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್ ಸೇರಿದಂತೆ ಹಲವರು ಉಪಸ್ಥಿತರಿರುವರು.

ಇದೇ ಸಂಧರ್ಬದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಡಾ.ಆಶಾಚೌದ್ರಿ ಮತ್ತು ಡಾ.ಚೌದ್ರಿ ನಾಗೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್, ಡಾ.ನಾಗರಾಜ್, ಗಂಗಾಧರ ದೇವರಮನೆ, ಎಸ್.ಎಂ.ಕುಮಾರಸ್ವಾಮಿ, ವಿವಿದ ಪದಾಧಿಕಾರಿಗಳಾದ ಟಿ.ವಿ.ಮಹೇಶ್, ಮಿಹಿರಕುಮಾರ್, ಬಸವರಾಜು, ರವಿಕುಮಾರ್, ಸುಮಾಮಲ್ಲಿಕ್, ವೆಂಕಟೇಶ್ಶೆಟ್ಟರು. ಶಿವಾನಂದ್, ಸುನಿಲ್ಬಾಬು, ಪ್ರದೀಪ್ ಗುಪ್ತಾ, ರಂಗನಾಥ್, ಪ್ರಸನ್ನ, ಮನು ಸೇರಿದಂತೆ ಇತರರು ಇದ್ದರು.

ವೆಂಕಟಲಕ್ಷ್ಮಮ್ಮ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

0

ಸಿ.ಎಸ್. ಪುರ: ಹೋಬಳಿಯ ನೆಟ್ಟೆಕೆರೆ ಕರಿಯಣ್ಣನ ಪಾಳ್ಯದ ನಿವಾಸಿ, ಗುತ್ತಿಗೆದಾರದಾದ ಕೆ.ಆರ್. ರಾಮಣ್ಣ ಅವರ ತಾಯಿಯವರಾದ ವೆಂಕಟಲಕ್ಷ್ಮಮ್ಮ ಅವರು ಇಂದು ನಿಧನರಾದರು.

ಅವರ ಅಂತ್ಯಕ್ರಿಯೆಯು ನೆಟ್ಟಕೆರೆ ಕರಿಯಣ್ಣಪಾಳ್ಯದಲ್ಲಿ ಇಂದು (ಶನಿವಾರ) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಡಾಕ್ಟ್ರೆಂದ್ರೆ ನಮ್ಮ ಡಾಕ್ಟ್ರು ಕಣ್ರೀ…

0

ಎಂಥದೇ ಸಂದರ್ಭ ಇರಲಿ, ಎಷ್ಟೇ ಕಷ್ಟ ಇರಲಿ, ಕಡೇ ಪಕ್ಷ ದೂರವಾಣಿಯಲ್ಲಾದರೂ ಸಂಪರ್ಕದಲ್ಲಿದ್ದು ಕೊಂಡೇ ರೋಗಿಗಳೊಂದಿಗೆ ನಿಲ್ಲುವವರು ನಮ್ ಡಾಕ್ಟರ್ ಡಾ. ರಜನಿ ಅವರು.

ವೈದ್ಯರುಗಳು ದೇವರ ಸ್ವರೂಪ ಎಂಬ ಮಾತಿನಲ್ಲಿ ಎರಡು ಮಾತಿಲ್ಲ. ಇವರೆಲ್ಲ ಹಳೇ ಕಾಲದ ವೈದ್ಯರು. ಹೆಸರಾಂತ ಕಥೆಗಾರ ಡಾ.‌ಬೆಸಗರಹಳ್ಳಿ ರಾಮಣ್ಣ ಅವರ ಶಿಷ್ಯೆ. ಒಳ್ಳೆಯ ಕವಿಯತ್ರಿಯೂ ಹೌದು.

ಯಾರೋ ಗೊತ್ತೇ ಇಲ್ಲದ ರೋಗಿಗೆ ಮಧ್ಯರಾತ್ರಿಯಲ್ಲಿ ತುರ್ತು ರಕ್ತ ಬೇಕಾದಾಗ ತಮ್ಮ ರಕ್ತವನ್ನು ಕೊಡುತ್ತಲೇ ಚಿಕಿತ್ಸೆ ನೀಡಿದವರು.‌ ರೋಗಿಯ ಕಾಳಜಿಯೇ ಅವರಿಗೆ ಮುಖ್ಯ. ಮಕ್ಕಳ ಚಿಕಿತ್ಸೆಯಲ್ಲಿ ಅವರದು ಎತ್ತಿದ ಕೈ.

ಕೊರೊನಾ‌ ಕಾಲದಲ್ಲಿ ರೋಗಿಯನ್ನು ಮುಟ್ಟಲು ಎಲ್ಲ ವೈದ್ಯರುಗಳು ಹೆದರುತ್ತಿದ್ದಾಗ ಅವರ ಎದೆಗೆ ಸೆತಾಸ್ಕೋಪ್ ಹಿಡಿದು ಧೈರ್ಯ ತುಂಬಿದವರು.

ಸೋಂಕಿನಿಂದ ಮುಕ್ತರಾದವರು ಸಹ ಅವರ ವೈದ್ಯರುಗಳು ಅವರನ್ನು ಮುಟ್ಟಿನೋಡಲಿಲ್ಲ ಎಂದು ಇವರಲ್ಲಿಗೆ ಬಂದು ಮುಟ್ಟಿಸಿಕೊಂಡು ನಿರಾಳದಾವರನೇಕರು.

ಡಾ. ರಜನಿ ಅವರಿಗೇನೆ ಕೊರೊನಾ ಸೋಂಕು ಬಾಧಿಸಿದಾಗ ಮನೆಯಲ್ಲಿದ್ದುಕೊಂಡೇ ದೂರವಾಣಿ ಮೂಲಕ ಕೆಲ ಸೋಂಕಿತರಿಗೆ ಧೈರ್ಯ, ಚಿಕಿತ್ಸೆ ನೀಡಿದರು.

ವೇದಿಕೆ ಯಾವುದಾದರೂ ಸರಿಯೇ, ಸರಿ ದಾರಿಯಲ್ಲೇ ಸಾಗುವ, ಎಂಥವರಾದರೂ ಸರಿಯೇ ತಪ್ಪು ಮಾಡಿದ್ದರೆ ಮುಖಕ್ಕೆ ನೇರವಾಗಿ ಮಾತನಾಡುವ ಚಾತಿ ಅವರದು.

ಮಂಡ್ಯದ ಗುಣ ನಮ್ಮದು ಎಂದು ನಿರ್ಭಿಡೆಯಿಂದ ಹೇಳುವ ಅವರಿಗೆ ಅವರ ಭಾಷಣ, ಮಾತಿನಿಂದಾಗಿಯೇ ನೂರಾರು ಮಹಿಳಾ ಅಭಿಮಾನಿಗಳನ್ನು ಸಂಪಾದನೆ ಆಗಿದ್ದಾರೆ.

ರಾತ್ರಿ ಹತ್ತಾದರೂ ಸರಿಯೇ ಡಾ. ರಜನಿ ಅವರೇ ಚಿಕಿತ್ಸೆ ನೀಡಬೇಕು ಎಂದು ಕಾಯುವವರೇ ಹೆಚ್ಚು. ಹಳ್ಳಿ ಜನರ ಪ್ರೀತಿಯ ವೈದ್ಯೆ ಡಾ. ರಜನಿ ಅವರಿಗೆ ವೈದ್ಯರ ದಿನಾಚಣೆಯ ಶುಭಾಷಯಗಳು ಮೇಡಂ.


-ಸಿ.ಕೆ.ಮಹೇಂದ್ರ

ಕುರುಹಿನಶೆಟ್ಟಿ ನೇಕಾರರಿಗೆ ಶಾಸಕರು ಹೇಳಿದ ಗುಟ್ಟು

ಗುಬ್ಬಿ: ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮುದಾಯವು ಮುಂದಾದಾಗ ಮಾತ್ರ
ಮುಖ್ಯ ವಾಹಿನಿಯಲ್ಲಿ ತಮ್ಮ ನೆಲೆಯನ್ನು ಕಾಣಬಹುದು ಎಂದು ಶಾಸಕ ಎಸ್. ಆರ್ ಶ್ರೀನಿವಾಸ್ ತಿಳಿಸಿದರು.

ಪಟ್ಟಣದಲ್ಲಿ ಕುರುಹಿನ ಶೆಟ್ಟಿ ನೇಕಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಶಾಸಕರಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಡಿಮೆ ಸಂಖ್ಯೆಯಲ್ಲಿ ಇರುವ ಸಮುದಾಯಗಳು ಶೈಕ್ಷಣಿಕವಾಗಿ ಮುಂದುವರೆದು ಉನ್ನತ ಉದ್ದೇಗಳನ್ನು ಅಲಂಕರಿಸಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ ಅವರನ್ನು ಚೆಕ್‌ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಜಗನ್ನಾಥ್, ಪಟ್ಟಣ ಪಂಚಾಯತಿ ಸದಸ್ಯರಾದ ಕುಮಾರ್, ರೇಣುಕಾ ಪ್ರಸಾದ್, ಮುಖಂಡರಾದ ಕೆಂಪೇಗೌಡ, ವೆಂಕಟೇಶ್ ಗೌಡ, ಅಶೋಕ್ ಕುಮಾರ್, ಸಮಾಜದ ಅಧ್ಯಕ್ಷರಾದ ಜಿ.ಎಸ್ ಕಾಂತರಾಜು, ಸಂಘದ ಪದಾಧಿಕಾರಿಗಳು ಇದ್ದರು.

ಇವರೆಂದರೆ ಯಾಕಿಷ್ಟ?

0

ಇವರೆಂದರೆ ಜನರಿಗೆ ಯಾಕಿಷ್ಟ? ಹೀಗೆ ಅನೇಕ ಪೊಲೀಸರು ಕೇಳುತ್ತಾರೆ. ಎಷ್ಟೋ ಜನರಿಗೆ ಇವರು ಒಡಹುಟ್ಟಿದ ಅಣ್ಣನೇ ಆಗಿ ಹೋಗಿದ್ದಾರೆ.

ಬಡವ, ಶ್ರೀಮಂತರು, ಆ ಜಾತಿ, ಈ ಜಾತಿ ಎಂಬುದಿಲ್ಲ. ಎಲ್ಲರಿಗೂ ಕೆ.ಆರ್. ಚಂದ್ರಶೇಖರ್ ಅವರನ್ನು ಕಂಡರೆ ಬಲು ಇಷ್ಟ.

ಪ್ರಾಣವನ್ನು ಲೆಕ್ಕಿಸದೇ ಜನರಿಗಾಗಿ ಏನು ಬೇಕಾದರೂ ಮಾಡಬಲ್ಲ ಪೊಲೀಸ್ ಅಧಿಕಾರಿ ಇವರು. ರಾಷ್ಟ್ರಪತಿ, ಮುಖ್ಯಮಂತ್ರಿ ಪದಕ ಯಾವತ್ತೋ ಬರಬೇಕಿತ್ತು. ಪೊಲೀಸ್ ಇಲಾಖೆಯಲ್ಲಿ ಒಬ್ಬನಿಂದ ಏನು ಮಾಡಲು ಸಾಧ್ಯವಿಲ್ಲ. ಪದಕ ಕೊಟ್ಟರೆ ನನ್ನ ಜತೆ ಕೆಲಸ ಮಾಡಿದ ತಂಡಕ್ಕೆ ಕೊಡಿ, ಇಲ್ಲವಾದರೆ ನನಗೂ ಬೇಡ ಎಂದು ಇಲಾಖೆಯಲ್ಲಿ ಹೇಳಿದ ಏಕೇಕ ಅಧಿಕಾರಿ ಇವರು.

ಆಗಿನ್ನೂ ಕೊರಟಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಬಂದಿದ್ದರು. ಏಕಾಏಕಿ ಚಿರತೆಯೊಂದು ಊರಿಗೆ ನುಗ್ಗಿತು. ಪತ್ರಕರ್ತರ ದಂಡು ಚಂದ್ರಶೇಖರ್ ಸರ್ ಜತೆಗೆ ಇತ್ತು. ಪತ್ರಕರ್ತರಿಗೆ ಸುದ್ದಿ ಮಾಡುವ ಹುಮ್ಮಸ್ಸು. ಇದೇ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಾರಿಬಂದ ಚಿರತೆಯನ್ನು ಪ್ರಾಣ ಲೆಕ್ಕಿಸದೇ ಬರಿಗೈಲಿ ಹಿಡಿದವರು ಚಂದ್ರಶೇಖರ್. ಅವರ ಈ ಸಾಹಸ ಕಂಡು ಇಡೀ ತುಮಕೂರು ಜಿಲ್ಲೆ ಮೆಚ್ಚುಗೆ ಸೂಚಿಸಿತು. ಗೌರವದಿಂದ ಸೆಲ್ಯೂಟ್ ಮಾಡಿತು.

ಅಂಬೇಡ್ಕರ್, ಬಸವಣ್ಣ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ಶಿವರಾಮ ಕಾರಂತ ಹೀಗೆ ಅನೇಕ ಸಾಹಿತಿ ದಿಗ್ಗಜರನ್ನು ಓದಿಕೊಂಡಿರುವ ಬೆರಣಿಕೆಯ ಪೊಲೀಸ್ ಅಧಿಕಾರಿಗಳ ಸಾಲಿಗೆ ಇವರು ಸೇರುತ್ತಾರೆ.

ಠಾಣೆಗೆ ಬಂದ ಜನರಿಗೆ ನೋವಾಗದಂತೆ ವರ್ತಿಸುವ ಮಾನವೀಯ ಅಧಿಕಾರಿ ಎಂದೇ ಹೆಸರಾಗಿದ್ದಾರೆ. ಎಂತದೇ ಕೇಸಾದರೂ ಅಪರಾಧಿಗಳನ್ನು ಹುಡುಕುವಲ್ಲೂ ನಿಸ್ಸೀಮರು. ಅಪರಾಧದ ವಿಚಾರದಲ್ಲಿ ರಾಜೀ ಇಲ್ಲವೇ ಇಲ್ಲ.

ಕೊರಟಗೆರೆಯ ಜನಪ್ರಿಯ ಪೊಲೀಸ್ ಅಧಿಕಾರಿಯೆಂಬ ಹೆಗ್ಗಳಿಕೆ ಇವರಿಗೆ. ಚಂದ್ರಶೇಖರ್ ಸರ್ ಬಂದಿದ್ದಾರೆ ಎಂದರೆ ನೂರಾರು ಜನರು ಈಗಲೂ ಅಲ್ಲಿ ಸೇರುತ್ತಾರೆ.

ರೈತರನ್ನು ಕಂಡರೆ ಇನ್ನಿಲ್ಲದ ಪ್ರೀತಿ ಅವರಿಗೆ. ಸ್ವತಹ ಕೃಷಿಯನ್ನು ಮಾಡುತ್ತಾರೆ. ಹೊಲ ಉಳುಮೆ ಮಾಡುತ್ತಾ ಮಣ್ಣಿನ ಮಗನಾಗಿಯೂ ಗುರುತಿಸಿಕೊಳ್ಳುತ್ತಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಮಂಡ್ಯದ ಮಣ್ಣಿನ ಘಮಲು ಬಿಟ್ಟಿಲ್ಲ.

ನಾಚಿ ನೀರಾಗುವ, ಹೊಸ ಕೃಷಿಕರನ್ನು ಕಂಡರೆ ನಾವೆಲ್ಲ IAS ಎನ್ನುತ್ತಾರೆ. ಅಂದರೆ ಇಂಡಿಯನ್ ಅಗ್ರಿಕಲ್ಚರ್ ಸರ್ವೀಸ್. ಮಣ್ಣಿನ ಮಕ್ಕಳೆಲ್ಲ IAS ಆಫೀಸರ್ ಗಳು ಎಂದೇ ಅವರ ಭಾವನೆ. ಹೀಗಾಗಿಯೇ ರೈತರಿಗೆ ಮೊದಲ ಗೌರವ ನೀಡುತ್ತಾರೆ.

ಜನರ ಕಷ್ಟ, ಸುಖದ ಜತೆ ಭಾಗಿಯಾಗುವ ತಾಯಿ ಹೃದಯದ ಅಧಿಕಾರಿ ಎಂದೇ ಜನಜನಿತ. ಪೊಲೀಸ್ ಇಲಾಖೆಯಲ್ಲಿ ಜನಸ್ನೇಹಿ ಅಧಿಕಾರಿಯ ಪಟ್ಟ ಸಿಗುವುದು ಸುಲಭ ಸಾಧ್ಯವಲ್ಲ. ಸದ್ಯ, ಸಿಐಡಿಯಲ್ಲಿ ಬೆಂಗಳೂರಿನಲ್ಲಿ ಡಿವೈ ಎಸ್ಪಿ ಆಗಿರುವ ಚಂದ್ರಶೇಖರ್ ಸರ್ ಅವರ ಹುಟ್ಟುಹಬ್ಬ ಈ ದಿನ. (ಜೂನ್ 28). ಇಂತಹ ಅಧಿಕಾರಿಗಳ ಸಂಖ್ಯೆ, ನೂರು ಸಾವಿರವಾದರೆ ಕನ್ನಡ ನಾಡು ಧನ್ಯೋಸ್ಮಿ ಆಗುವುದರಲ್ಲಿ ಸಂದೇಹಪಡಬೇಕಾಗಿಲ್ಲ.

ಪೊಲೀಸ್ ಅಧಿಕಾರಿ ಯಾಕಾಗಬೇಕು? ಹೇಗಿರಬೇಕು ಎಂಬುದಕ್ಕೆ ಚಂದ್ರಶೇಖರ್ ಅವರು ಇಲಾಖೆಯಲ್ಲಿ ಇಡುತ್ತಿರುವ ಹೆಜ್ಜೆ ಗುರುತುಗಳೇ ಆದರ್ಶವಾಗಬೇಕಾಗಿದೆ.

ಅವರ ಹುಟ್ಟು ಹಬ್ಬದ ಆಚರಣೆಯ ಸಂಭ್ರಮದಲ್ಲಿ ಮಿಂದೆದ್ದ ಎಲ್ಲ ಜನರಿಗೂ ಅವರೇ ಆದರ್ಶ, ಒಡಹುಟ್ಟಿದ ಅಣ್ಣ. ಒಬ್ಬ ಅಧಿಕಾರಿಯನ್ನು ಜನರು ಹೀಗೆ ತಮ್ಮ ಹೃದಯದಲ್ಲಿಟ್ಟು ಪೂಜಿಸಿ, ಆದರ್ಶ ವ್ಯಕ್ತಿಯಾಗಿಸಿಕೊಂಡಿದ್ದಾರೆ ಎಂದರೆ ಸುಖಾಸುಮ್ಮನೆಯ ಮಾತಲ್ಲ. ಎಲ್ಲ ಅಧಿಕಾರಿಗಳು ಚಂದ್ರಶೇಖರ್ ಸರ್ ಆಗಿಬಿಟ್ಟರೆ ಎಷ್ಟೊಂದು ಚೆಂದ ಅಲ್ಲವೇ?


ಸಿ.ಕೆ.ಮಹೇಂದ್ರ