Saturday, July 27, 2024
Google search engine
Homeಜೀವನ ಚರಿತ್ರೆಬಹುಮುಖ ವ್ಯಕ್ತಿತ್ವದ ವೂಡೇ ಪಿ.ಕೃಷ್ಣ

ಬಹುಮುಖ ವ್ಯಕ್ತಿತ್ವದ ವೂಡೇ ಪಿ.ಕೃಷ್ಣ

ಉತ್ತಮ ಮೌಲ್ಯಗಳನ್ನು ಯುವಜನರಲ್ಲಿ ತುಂಬಿ ಅವರನ್ನು ಜವಾಬ್ದಾರಿಯುತ ಪೌರರನ್ನಾಗಿಸುವ ದೃಷ್ಟಿಯನ್ನೇ ಪ್ರಧಾನವಾಗಿಟ್ಟು ಕೊಂಡಿರುವ ಆದರ್ಶಪ್ರಾಯರಾದ ಡಾ. ವೂಡೇ ಪಿ. ಕೃಷ್ಣರವರು ಶಿಕ್ಷಣ ಕ್ಷೇತ್ರದಲ್ಲಿ ಕಂಡ ಅಪರೂಪದ ಸಾಧಕರು. ಅವರ ಕುರಿತಾದ ಲೇಖನಮಾಲೆ ಪ್ರತಿ ಭಾನುವಾರ ಪಬ್ಲಿಕ್ ಸ್ಟೋರಿಯಲ್ಲಿ ಪ್ರಕಟವಾಗಲಿದೆ.

ಕೃಷ್ಣ ಅವರು ಅಧ್ಯಯನಶೀಲರು ಮಾತ್ರವಲ್ಲದೇ, ಉತ್ತಮ ಬರಹಗಾರರು, ಒಳ್ಳೆಯ ವಾಗ್ಮಿ ಕೂಡಾ ಆಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸಜ್ಜನರು, ‘ವಿದ್ಯಂ ದಧಾತಿ ವಿನಯಂ’ ಎಂಬ ಮಾತಿಗೆ ವ್ಯಾಖ್ಯಾನದಂತಿದ್ದಾರೆ. ಹಾಗೆಯೇ ಬದುಕುತ್ತಿದ್ದಾರೆ.

ಪ್ರಸ್ತುತದಲ್ಲಿ ಶಿಕ್ಷಣ ಕಲಿಯುವ ಯುವ ಸಮುದಾಯವು ಹೀಗೆ ಬದುಕಬೇಕೆಂಬ ಆಸೆಗಣ್ಣಿನಿಂದ ನೋಡುವಂತಿದ್ದಾರೆ. ಅವರ ಏಳಿಗೆಗಾಗಿ ಸದಾ ಸಭೆ ಸಮಾರಂಭಗಳಲ್ಲಿ ಭಾಷಣಗಳಿಂದ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಡಾ. ವೂಡೇ ಪಿ. ಕೃಷ್ಣರವರ ನಾಯಕತ್ವದಲ್ಲಿ ನಡೆಯುತ್ತಿರುವ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳು, ಗಾಂಧೀ ಶಾಂತಿ ಪ್ರತಿಷ್ಠಾನ, ಭಾರತೀಯ ಇಂಜಿನಿಯರುಗಳ ಸಂಸ್ಥೆ ಮೊದಲಾದ ಸಂಸ್ಥೆಗಳಿಗೆ ಆಧ್ಯಾತ್ಮಿಕ, ವೈಚಾರಿಕ, ವೈಜ್ಞಾನಿಕ, ಸಾಂಸ್ಕೃತಿಕ ಸ್ಪರ್ಶ ನೀಡಿ; ಶಿಸ್ತು, ಸಹಕಾರ ಮನೋಭಾವ, ಜಾತ್ಯತೀತ ಸ್ವರೂಪ, ಉತ್ತಮ ಸಂಸ್ಕಾರಗಳ ಗುಣಗಳನ್ನು ತುಂಬಿ ಎಲ್ಲರೂ ಮೆಚ್ಚುವಂತಹ ಆದರ್ಶ ಸಂಸ್ಥೆಗಳನ್ನಾಗಿ ರೂಪಿಸಿದ್ದಾರೆ. ಇದು ಗಮನಾರ್ಹ ಮಾತ್ರವಲ್ಲದೆ ಶ್ಲಾಘನೀಯ ಸಾಧನೆಯೂ ಹೌದು.

ಅಧಿಕಾರವಿದ್ದರೂ ಯಾವುದೇ ಬಿಗುವಿಲ್ಲದೆ ಡಂಭಾಚಾರವಿಲ್ಲದೆ ತಾವಿರುವ ಸಂಸ್ಥೆಗಳಿಗೆ ಸಹಾಯಕ್ಕಾಗಿ ಹುಡುಕಿಕೊಂಡು ಬಂದವರನ್ನು ಬರಿಗೈಲಿ ಕಳುಹಿಸದೆ ಕೈಲಾದ ಸಹಾಯವನ್ನು ಮಾಡುವುದರೊಂದಿಗೆ, ಸಂಸ್ಥೆಯ ಕಾನೂನಿನ ಇತಿಮಿತಿಯಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ, ಗ್ರಾಮೀಣಭಾಗದ ಪ್ರತಿಭಾವಂತರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಒದಗಿಸಿರುವುದು ಕೂಡಾ ಬಡವರ ಬಗ್ಗೆ, ಅದರಲ್ಲೂ ಯುವಪೀಳಿಗೆ ಬಗ್ಗೆ ಇರುವ ಇವರ ಪ್ರೀತಿ ಎಂತಹದ್ದು ಎಂಬುದು ಅರ್ಥವಾಗುತ್ತದೆ.

ಭಾರತದ ರಾಷ್ಟ್ರಪತಿಗಳು ಅಧ್ಯಕ್ಷರಾಗಿರುವ ಬಹು ದೊಡ್ಡ ಮಾನವೀಯ ಸಂಸ್ಥೆಗಳಾದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಭಾರತೀಯ ಕ್ಷಯರೋಗ ಸಂಸ್ಥೆಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಡಾ. ಕೃಷ್ಣರವರು ಒಬ್ಬರಾಗಿರುವುದು ಕನ್ನಡಿಗರಿಗೆ ಹೆಮ್ಮೆ ತರುವ ಸಂಗತಿ. 2013ರಲ್ಲಿ ರೆಡ್‌ ಕ್ರಾಸ್‌ ಮಾನವೀಯ ಸೇವೆಗಾಗಿ ನೀಡಲ್ಪಡುವ ಅತ್ಯುನ್ನತ ರಾಷ್ಟ್ರಪ್ರಶಸ್ತಿಯಾದ ‘ರಾಷ್ಟ್ರಪತಿಗಳ ಚಿನ್ನದ ಪದಕ’ ಇವರಿಗೆ ಸಂದಿದೆ.

ನಮ್ಮದು ಪ್ರಗತಿಪರ ರಾಷ್ಟ್ರ, ದೇಶದ ಪುನರ್‌ನಿರ್ಮಾಣದಲ್ಲಿ ವಿದ್ಯಾರ್ಥಿಗಳಲ್ಲಿ ಉನ್ನತ ಆದರ್ಶಗಳನ್ನು ಬೆಳೆಸುವುದರಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮಹತ್ವವಾದದ್ದು. ಆದರ್ಶ, ನಿಸ್ವಾರ್ಥ, ಬದ್ಧತೆ ಹಾಗೂ ಅರ್ಪಣಾ ಮನೋಭಾವ ಹೊಂದಿರುವ ಏಕವ್ಯಕ್ತಿ ಕಾರ್ಯವು ಬಹುಜನರ ಮೇಲೆ ವಿಶೇಷ ಪ್ರಭಾವವನ್ನು ಬೀರಬಲ್ಲದು.

ವ್ಯಕ್ತಿಗೆ ಒಂದು ಮುಖ. ಆದರೆ ವ್ಯಕ್ತಿತ್ವಕ್ಕೆ ನಾನಾ ಮುಖಗಳು, ಹರಿಯುವ ನೀರಿನಂತೆ, ಉರಿಯುವ ಜ್ಯೋತಿಯಂತೆ, ಬೀಸುವ ಗಾಳಿಯಂತೆ, ಸೂಸುವ ಮಳೆಯಂತೆ, ಹರಿಯುವ ನೀರು ತಾನು ಹರಿದ ಎಡೆಯನ್ನೆಲ್ಲಾ ಸಸ್ಯಶ್ಯಾಮಲಗೊಳಿಸುತ್ತದೆ, ಹೊಚ್ಚ ಹೊಸದಾಗಿಸುತ್ತದೆ. ಉರಿಯುವ ಜ್ಯೋತಿ ತಾನು ಉರಿದೊಡೆ ಕತ್ತಲನ್ನು ನೀಗುತ್ತದೆ, ತನ್ನ ಪರಿಸರವನ್ನು ಬೆಳಗುತ್ತದೆ. ಮೋಡದಿಂದ ಹನಿಹನಿಯಾಗಿ ಸೂಸುವ ಮಳೆ ನೆಲದಲ್ಲಿ ತನ್ನ ಕಾಲೂರಿ ಇಳೆಯ ಬೆಳೆಯ ಕತ್ತೆತ್ತಿಸಿ, ಜೀವಕೋಟಿಗಳ ಬದುಕಿಗೆ ಜೀವರಸವಾಗುತ್ತದೆ. ಇದು ಸಹೃದಯ ಚೇತನಗಳಿಗೆ ಮಾತ್ರ ಸಾಧ್ಯ. ಹಾಗೆ ಇದನ್ನು ಸಾಧ್ಯವಾಗಿಸಿಕೊಂಡಿರುವ, ಸ್ಪಂದನಶೀಲ ಹೃದಯವಂತಿಕೆ ಪಡೆದಿರುವವರ ಮೊದಲ ಸಾಲಿನಲ್ಲಿ ಡಾ. ವೂಡೇ ಪಿ. ಕೃಷ್ಣರವರು ನಿಲ್ಲುತ್ತಾರೆ.

ಬಹುಶಃ ಅನಾಮಧೇಯವಾಗಿ ಕಳೆದು ಹೋಗಬಹುದಾಗಿದ್ದ ತನ್ನ ಹಳ್ಳಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಸಂಲಗ್ನಗೊಳಿಸುವ ಮೂಲಕ ಕಾಲಗರ್ಭದಲ್ಲಿ ಕರಗಿಹೋದ ತಮ್ಮ ಮೂಲ ಗ್ರಾಮವನ್ನು ಜೀವಂತವಾಗಿ ಇಟ್ಟಿದ್ದಾರೆ. ಹೀಗಾಗಿ ವೂಡೇ ಇಂದು ಅಸ್ತಿತ್ವದಲ್ಲಿಲ್ಲದಿದ್ದರೂ ಗಮನಾರ್ಹ ಸ್ಥಳವಾಗಿದೆ. ನೆನಪಿನ ರಂಗಸ್ಥಳದಲ್ಲಿ ಚಿರಂತನವಾಗಿದೆ. ಇದಕ್ಕೆ ಕಾರಣ ಡಾ.ವೂಡೇ ಪಿ. ಕೃಷ್ಣ, ನಾನಿಂಥ ಊರಿನವನು ಎಂಬ ಹೆಮ್ಮೆ ವ್ಯಕ್ತಿಯದಾದರೆ, ನನ್ನ ಮಡಿಲಲ್ಲಿ ಇಂಥವನು ಬದುಕಿದ್ದನಲ್ಲಾ ಎಂಬ ಹಿಗ್ಗು ಊರಿನ ಸುತ್ತಿನ ಪರಿಸರದ್ದು,

ಅನ್ಯರ ಮನನೋಯಿಸುವ ಮಾತನ್ನು ಕೃಷ್ಣರವರು ಎಂದೂ ಆಡಿದವರಲ್ಲ. ಸೌಮ್ಯತೆಯೇ ಮೈವೆತ್ತ ಮೂರ್ತಿಯಂತಿರುವ ಡಾ. ಕೃಷ್ಣ ತಮ್ಮ ಬಾಳಿನುದ್ದಕ್ಕೂ ತಮ್ಮ ಉದಾತ್ತ ವ್ಯಕ್ತಿತ್ವವನ್ನು ಮೆರೆದವರು. ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಅಷ್ಟೇ ಪ್ರಮಾಣದ ಸತ್ಯಸಂಧತೆ, ಪ್ರಾಮಾಣಿಕತೆ ಮತ್ತು ಘನತೆ ಗೌರವಗಳು ಇವರಲ್ಲಿ ಮನೆಮಾಡಿಕೊಂಡಿವೆ. ಇತರರಿಗಾಗಿ ತಾವು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು, ಫಲಾಪೇಕ್ಷೆಯನ್ನು ಎಂದೂ ನಿರೀಕ್ಷಿಸಿದವರಲ್ಲ. ಇವರಿಗೆ ಮಾರ್ಗವು ಗುರಿಯಷ್ಟೇ ಮುಖ್ಯ. ಜನರ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಕರ್ಮಸಿದ್ಧಾಂತದಲ್ಲಿ ಇವರಿಗೆ ನಂಬಿಕೆ.

ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಇವರನ್ನು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್‌ರವರ ವಿಚಾರಧಾರೆಗಳು, ತಂದೆ ತಾಯಿಯರ ಮೌಲ್ಯಯುತ ಬದುಕಿನ ಅಂಶಗಳು ವಿದ್ಯಾರ್ಥಿ ದೆಸೆಯಿಂದಲೇ ಪ್ರಭಾವಿಸಿ ಮುನ್ನಡೆಸಿವೆ.

ಕೃಷ್ಣರವರ ಕಾರ್ಯತತ್ಪರತೆ ಇವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು, ಸರಳಜೀವಿ, ಸ್ನೇಹಶೀಲ ವ್ಯಕ್ತಿ, ದೇಶ-ವಿದೇಶಗಳಲ್ಲಿ ಎಷ್ಟೇ ದೊಡ್ಡ ಸಭೆ-ಸಮಾರಂಭವಿರಲಿ ಇವರ ವೇಷಭೂಷಣದಲ್ಲಿ ಯಾವುದೇ ಬದಲಾವಣೆಯೂ ಇಲ್ಲ. ಮಾಮೂಲಿಯಂತೆ ಶ್ವೇತ ಶುಭ್ರವಸ್ತ್ರಧಾರಿ, ಒಮ್ಮೆ ಅಮೆರಿಕದ ಸಿವಿಲ್ ಇಂಜಿನಿಯರುಗಳ ಸೊಸೈಟಿ ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷರಾದ ಡಾ. ರಾಬರ್ಟ್ ಡಿ. ಸ್ಟೀವನ್ಸ್ ರವರು ಇವರ ಸರಳ ಉಡುಪನ್ನು ಮುಟ್ಟಿನೋಡಿ ಮೆಚ್ಚಿದರು.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದಾನೆ ಎಂಬ ಸಂಗತಿ ಬಹು ಮುಖ್ಯ. ಈ ನಿಟ್ಟಿನಲ್ಲಿ ಕೃಷ್ಣರ ಬಗ್ಗೆ ಯೋಚಿಸಿದಾಗ ಇವರ ಅನನ್ಯತೆ ನಮ್ಮ ಕಣ್ಣಿಗೆ ರಾಚುತ್ತದೆ. ಇವರ ಸರಳತೆ, ಆದರ್ಶ, ನಿರುಪದ್ರವಿ ಬದುಕು ಇಂದಿನ ಯುವಜನಾಂಗಕ್ಕೆ ಮಾರ್ಗದರ್ಶಕವಾದುದು.

ಕೃಷ್ಣರವರದು ಮೇರು ವ್ಯಕ್ತಿತ್ವ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ವೈಚಾರಿಕವಾಗಿ ಯಾವುದೇ ಕ್ಷೇತ್ರದಲ್ಲಿ ತಮ್ಮ ಮಿತಿಯಲ್ಲಿ ನ್ಯಾಯವನ್ನು ಸಲ್ಲಿಸುವ ದಕ್ಷತೆ ಇವರದು.

ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತರೆಂದರೆ ಇವರಿಗೆ ಅಚ್ಚುಮೆಚ್ಚು. ಅರ್ಹರನ್ನು ಸನ್ಮಾನಿಸಿ ಗೌರವಿಸಲು ಇವರು ಸದಾ ಮುಂದು. ಜ್ಞಾನದ ಬುತ್ತಿಯನ್ನು ಹೊಂದುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಅಂತಹವರನ್ನು ತಾವಿರುವ ಸಂಸ್ಥೆಗಳಿಗೆ ಕರೆಯಿಸಿ, ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಮುಖಗಳನ್ನು ತಿಳಿಸಿ, ಆ ರೀತಿಯಲ್ಲಿ ಬೆಳೆಯಲು ಪ್ರೇರೇಪಿಸುತ್ತಾರೆ.

ರಾಜಕೀಯ ಸ್ಥಾನಮಾನಗಳಿಗೆ ಎಂದೂ ಆಸೆಪಡದೆ ರಾಜಕೀಯೇತರ ಸಾರ್ವಜನಿಕ ಸೇವಾಕ್ಷೇತ್ರದಲ್ಲಿ ಪ್ರಬಲವಾಗಿ ಗುರುತಿಸಿಕೊಂಡವರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತಿ ಪಡೆದ ಸುಸಂಸ್ಕೃತ ಮುತ್ಸದ್ಧಿ, ಇವರ ಬದುಕು ಹಾಗೂ ಅಪೂರ್ವ ಸಾಧನೆಗಳು ಸದಾ ಕಾಲಕ್ಕೂ ಸರ್ವರಿಗೂ ಸ್ಫೂರ್ತಿದಾಯಕ. ಮುಂದಿನ ಪೀಳಿಗೆ ಬಾಳಿದರೆ ಹೀಗೇ ಬಾಳಬೇಕು ಎಂಬ ಸಂದೇಶವನ್ನು ನೀಡುವ ಇವರ ಬದುಕು ಮಾರ್ಗದರ್ಶಕವಾದುದು. ಅಂಥವರ ಬದುಕಿನತ್ತ ಒಂದು ಪಕ್ಷಿನೋಟ ಇದಾಗಿದೆ.

RELATED ARTICLES

3 COMMENTS

  1. […] ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ […]

  2. […] ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ […]

  3. […] ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ […]

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?