ಪಾವಗಡ: ತಿಮ್ಮರಾಯಪ್ಪ ರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ತಾಲೂಕಿನ ಜನತೆ ಋಣ ತೀರಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು.
ಪಾವಗಡ ನಗರದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ ಎಂ ತಿಮ್ಮರಾಯಪ್ಪ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು
ತಾಲ್ಲೂಕಿನ ಜನತೆಯ ಆಶೀರ್ವಾದ ನನ್ನ ಮೇಲೆ ಸದಾ ಇದೆ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸಿ ಕಳುಹಿಸಿ ಮಂತ್ರಿಯನ್ನಾಗಿ ಮಾಡುತ್ತೇನೆ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಪ್ರತಿ ಸಾರಿ ಬಂದಾಗಲೂ ಮನೆ ಮಗ ಎಂಬ ಪ್ರೀತಿಯಿಂದ ನನ್ನನ್ನು ಕಂಡಿದ್ದೀರಾ ಪ್ರೀತಿಯಿಂದ ಕಂಡಿದ್ದೀರಾ ಬೆಂಬ ನೀಡಿ ಕೈಬಲಪಡಿಸಿದ್ದೀರಾ ಅದನ್ನು ನಾನು ಮರೆಯಲಾರೆ ಕುಡಿಯುನೀರಿನ ಸಮಸ್ಯೆಗಳನ್ನು ಅಲ್ಲದೆ ಪಂಚರತ್ನಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ತಾಲ್ಲೂಕು ಅಭಿವೃದ್ದಿ ಗೊಳಿಸುತ್ತೆನೆ ಎಂದರು.
ರಾಜ್ಯದಲ್ಲಿ ಮುಂದಿನ ೫ವರ್ಷಕ್ಕೆ ಮುಖ್ಯ ಮಂತ್ರಿಯನ್ನಾಗಿ ಅಶೀರ್ವಾದ ಮಾಡುತ್ತಿರೆಂದು ನಂಬಿದ್ದೇನೆ ಎಂದರು.
ಕೃಷಿಕರ ಕುಟುಂಬಕ್ಕೆ ಆದಾಯವಾಗಲಿ ಎಂದು ಭೂರಹಿತ ಕುಟುಂಬಕ್ಕೆ ತಿಂಗಳಿಗೆ 2000 ರೂ ನೀಡತಕ್ಕದ್ದು.ಹಾಗೆ ರೈತರಿಗೆ ಒಂದು ಎಕರೆ ಭೂಮಿಗೆ 10 ಸಾವಿರ ರೂ ವರ್ಷಕ್ಕೆ ಬೆಳೆ ವಿಮೆ ಎಕರೆ ವರೆಗೂ ನೀಡಲಾಗುವುದು. ವೃದ್ಧಾಪ್ಯ ಹಾಗೂ ವಿಧವೆ ವೇತನ 5000 ರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟರು.
ಮಾಜಿ ಶಾಸಕ ಕೆ ಎಂ ತಿಮ್ಮಿರಾಯಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಲರಾಮರೆಡ್ಡಿ, ಗೋವಿಂದ ಬಾಬು,ತಿಮ್ಮಾರೆಡ್ಡಿ,ಆರ್ ಸಿ ಅಂಜಿನಪ್ಪ, ಚಂದ್ರಶೇಖರ, ಚೆನ್ನಮಲ್ಲಯ್ಯ, ಕೊತ್ತೂರು ನಾಗೇಶ,ಸಾಯಿ ಸುಮನ, ದೀಪು, ಎನ್ ಎ ಈರಣ್ಣ,ಶಿವಪ್ಪ ನಾಯ್ಕ್. ರಾಮಕೃಷ್ಣ ರೆಡ್ಡಿ,ಅಂಬಿಕಾ, ಸೇರಿದಂತೆ ಮತ್ತಿತರರು ಹಾಜರಿದ್ದರು.
ತುರುವೇಕೆರೆ: ರಾಹುಲ್ ಗಾಂಧಿ ಕ್ಷೇತ್ರಕ್ಕೆ ಎರಡು ಬಾರಿ ಆಗಮಿಸಿದ್ದಾಗ ಸೇರಿದ್ದ ಜನಸ್ಥೋಮ ನೋಡಿದರೆ ಇಲ್ಲಿ ನಾನು ಗೆಲ್ಲುವುದು ಶತಸಿದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಆಡಳಿತ ಕಂಡು ಬೇಸತ್ತು ಹೋಗಿದ್ದಾರೆ ಎಂದರು.
ರಾಜ್ಯದ ಜನತೆ ಬದಲಾವಣೆಯನ್ನು ಬಯಸಿದ್ದು ಇದ್ದಕ್ಕೆ ಕಾಂಗ್ರೆಸ್‍ನ ಜನಪರ ಯೋಜನೆಗಳೇ ಕಾರಣ. ರಾಹುಲ್ ಗಾಂಧಿಯವರ ಉತ್ಸಾಹ ಕಂಡು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹುರುಪು ಬಂದಿದ್ದು ತಾಲ್ಲೂಕಿನಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಕಾಂತರಾಜು ಬಿ.ಎಂ ಅವರು ಜೆಡಿಎಸ್ಗೆ ವೋಟು ಹಾಕಿ ಎಂದಿದ್ದಾರೆಂಬ ತಿರುಚಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಪಕ್ಷದ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾವ ಅಭ್ಯರ್ಥಿಯೂ ತನಗೆ ವೋಟಿ ಕೊಡಿ ಎಂದು ಕೇಳುವುದು ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ವೋಟಾಕಿ ಎಂದು ಹೇಳಲು ಸಾದ್ಯವಿದೆಯೇ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸುವವರು ಗೆಲ್ಲುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಹಿಂದೆ ಕಾಂಗ್ರೆಸ್‍ನಲ್ಲಿ ತಾಳ್ಕೆರೆ ಸುಬ್ರಹ್ಮಣ್ಯ, ಬಿ.ಭೈರಪ್ಪಾಜಿ, ಎಸ್.ರುದ್ರಪ್ಪ ಇವರೆಲ್ಲಾ ಮೊದಲ ಬಾರಿಗೆ ಗೆದ್ದಿದ್ದು ಅದರಂತೆ ನಾನೂ ಕೂಡ 25 ಸಾವಿರ ಮತಗಳಿಂದ ಗೆಲ್ಲಲಿದ್ದೇನೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಕಮಿಷನ್, ಕಳಪೆ ಕಾಮಗಾರಿ ಮಾಡುತ್ತಾ, ಕೇವಲ ಸ್ಟಾರ್ ಮುಖಂಡರನ್ನು ಕರೆತಂದು ಕ್ಷೇತ್ರದಲ್ಲಿ ಮತಪ್ರಚಾರ ಮಾಡುತ್ತಿದ್ದಾರೆ. ಈ ಆಟ ನಡೆಯದು. ಅದರಲ್ಲೂ ಬಿಜೆಪಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ವಿಫಲವಾಗಿದೆ. ಹಾಲಿ ಬಿಜೆಪಿ ಶಾಸಕರು ಕೊಬರಿ ಬಗ್ಗೆ ಮಾತಾಡಲಿ ನಂತರ ಪ್ರಚಾರ ಮಾಡಲಿ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ 150 ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ ಎಂದು ಭರವಸೆ ತೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕ್ಷೇತ್ರಕ್ಕೆ ಬಂದು ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಪರ ಪ್ರಚಾರ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಮುಖಂಡರು, ಕಾರ್ಯಕರ್ತರಿಗೂ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ, ನಾಗೇಶ್, ಮಾಜಿ ಅಧ್ಯಕ್ಷ ಮಾಳೆಕೃಷ್ಣಪ್ಪ, ಮುಖಂಡರುಗಳಾದ ಹನುಮಂತಯ್ಯ, ನಂಜುಂಡಯ್ಯ, ಕೊಳಾಲನಾಗರಾಜು, ತ್ರೈಲೋಕ್ಯನಾಥ್, ದಂಡಿನಶಿವರಕುಮಾರ್, ಶತೃಘ್ನ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ತುಮಕೂರು: ಒಕ್ಕಲಿಗ ಸಮುದಾಯ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೆ,ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸುರೇಶಗೌಡ ಅವರನ್ನು ಗೆಲ್ಲಿಸುವಂತೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ
ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಸಮಾವೇಶ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುರೇಶಗೌಡ ಅವರಿಗೆ ಭವಿಷ್ಯದಲ್ಲಿ ಒಳ್ಳೆಯ ನಾಯಕನಾಗಿ ಬೆಳೆಯಲು ಅವಕಾಶವಿದೆ. ಹಾಗಾಗಿ ಅವರ ಬೆನ್ನಿಗೆ ನಿಲ್ಲಬೇಕಿದೆ ಎಂದರು.
ಕರ್ನಾಟಕದ ರಾಜಕಾರಣದಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಮಹತ್ವದ್ದಾಗಿದೆ.ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧ ರಾಜ್ಯದ ಹೆಮ್ಮೆಯ ಪ್ರತೀಕ. ಎಸ್.ಎಂ.ಕೃಷ್ಣ,ಡಿ.ವಿ.ಸದಾನಂದಗೌಡ ರಂತಹ ಹಿರಿಯ ನಾಯಕರು ಮುಖ್ಯಮಂತ್ರಿ ಗಳಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ.ಅವರ ರೀತಿಯಲ್ಲಿಯೇ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಸುರೇಶಗೌಡ ಅವರಲ್ಲಿದ್ದು,ಗ್ರಾಮಾಂತರದ ಮತದಾರರು ಅವರ ಕೈ ಹಿಡಿಯುವಂತೆ ಮುದ್ದಹನುಮೇಗೌಡ ಮನವಿ ಮಾಡಿದರು.
ಮಾಜಿ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಮಾತನಾಡಿ, ನನ್ನ ಹತ್ತು ವರ್ಷಗಳ ಶಾಸಕ ಅವಧಿಯಲ್ಲಿ ಸಮಾಜದ ಘನತೆ ಗೌರವ ವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಒಕ್ಕಲಿಗ ಸಮುದಾಯದ ಜೊತೆಗೆ ಎಲ್ಲಾ ಸಮುದಾಯಗಳಿಗೂ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದೇನೆ ಎಂದರು.
ರೈತರ ಸಂಕಟವನ್ನು ಕಣ್ಣಾರೆ ಕಂಡು ಅದರ ನಿವಾರಣೆಗಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿದ್ಯುತ್ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ರೈತರ ಕಷ್ಟ ಮನವರಿಕೆ ಮಾಡಿಕೊಟ್ಟು ಪ್ರಯೋಗಿಕವಾಗಿ ಪ್ರತಿ ಐಪಿಸೇಟ್ ಗೆ ಒಂದು ಟಿಸಿ ನೀಡುವ ಯೋಜನೆ ತಂದು ಜನರಿಗೆ ಅನುಕೂಲ ಮಾಡಲಾಗಿದೆ.ಇದರ ಫಲವಾಗಿ ನನ್ನಿಂದ ದೂರವಾಗಿದ್ದ ಒಕ್ಕಲಿಗ ಇನ್ನಿತರ ಜಾತಿಯ ಮುಖಂಡರು ನನ್ನೊಂದಿಗೆ ಬಂದಿದ್ದಾರೆ. ಇದು ನನಗೆ ಆನೆ ಬಲ ತಂದುಕೊಟ್ಟಿದೆ.ಯಾರಿಗೂ ಮೋಸ ಮಾಡಿಲ್ಲ.ಈ ಬಾರಿ ನಾನು ಶಾಸಕನಾಗುವಂತೆ ಆಶೀರ್ವದಿಸಿದರೆ, ಗ್ರಾಮಾಂತರ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಅತ್ಯಂತ ಪ್ರಗತಿ ಹೊಂದಿದ ರಾಜ್ಯ ವಾಗಲಿದೆ ಎಂಬ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಒಕ್ಕಲಿಗ ಮುಖಂಡರಾದ ಮಾಸ್ತಿಗೌಡ, ವೈ.ಟಿ.ನಾಗರಾಜು, ಬೆಳಗುಂಬ ಕೆಂಪರಾಜು,ಬೆಳ್ಳಿ ಲೋಕೇಶ್ ಮಾತನಾಡಿದರು ಸಿದ್ದೇಗೌಡ, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ವಿಜಯಕುಮಾರ್, ಮಾಜಿ ಜಿ.ಪಂ ಸದಸ್ಯ ರಾಮೇಗೌಡ, ಬೆಳಗುಂಬ ನರಸಿಂಹಮೂರ್ತಿ, ತಾರಾದೇವಿ, ಹನುಮಂತರಾಜು, ಯೋಗೀಶಗೌಡ,ಪಂಚೆ ರಾಮಚಂದ್ರಪ್ಪ, ದೇವರಾಜು ಸೇರಿದಂತೆ ಹತ್ತಾರು ಮಂದಿ ಪಾಲ್ಗೊಂಡಿದ್ದರು
ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ, ಶ್ರೀ ಬಾಲಗಂಗಾಧರ ನಾಥ್ ಸ್ವಾಮೀಜಿ,ಶ್ರೀ ನಿರ್ಮಲಾನಂದನಾಥಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಗೌರವ ಸಲ್ಲಿಸಲಾಯಿತು. ಅಲ್ಲದೆ ನೇಗಿಲು ಹೋತ್ತು, ಒಕ್ಕಲುತನದ ಹೆಗ್ಗುರುತು ಪ್ರದರ್ಶಿಸಲಾಯಿತು
ತುಮಕೂರು: ಕಳೆದ ಚುನಾವಣೆಯಲ್ಲಿ ಮೋಸ, ಕುತಂತ್ರದಿಂದ ಸೋಲಿಸಿದ ನನಗೆ ಈ ಸಲದ ಚುನಾವಣೆಯ ಧರ್ಮಯುದ್ಧದಲ್ಲಿ ಶ್ರೀಕೃಷ್ಣ ಪರಮಾತ್ಮನ ಮಕ್ಕಳಾದ ಗೊಲ್ಲರು ನನ್ನ ಪರವಾಗಿ ನಿಲ್ಲಬೇಕು. ಧರ್ಮಯುದ್ಧದಲ್ಲಿ ನನಗೆ ಗೆಲುವು ತಂದುಕೊಡಬೇಕು ಎಂದು ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಮನವಿ ಮಾಡಿದರು.
ಶಕ್ತಿಸೌಧದಲ್ಲಿ ಆಯೋಜಿಸಿದ್ದ ಕಾಡುಗೊಲ್ಲರ ಸಮಾವೇಶದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣನ ಕಾರಣದಿಂದಾಗಿ ಅಧರ್ಮದ ವಿರುದ್ಧ ಪಾಂಡವರು ಜಯಗಳಿಸಿದರು. ಕೃಷ್ಣನ ವಂಶಸ್ಥರಾದ ಕಾಡುಗೊಲ್ಲರು ನನ್ನ ಪರವಾಗಿ ನಿಲ್ಲಬೇಕು. ನಿಮ್ಮ ಶಕ್ತಿ ನನಗೆ ಕೊಡಿ ಎಂದು ಕೇಳಿದರು.
ಕ್ಷೇತ್ರದ 35 ಗ್ರಾಮಪಂಚಾಯಿತಿಗಳಲ್ಲಿ 3ರಲ್ಲಿ ಕಾಡುಗೊಲ್ಲರಿಗೆ, ಒಂದರಲ್ಲಿ ಗೊಲ್ಲ ಸಮುದಾಯಕ್ಕೆ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದರು.
ಕ್ಷೇತ್ರದ ಹಿರೇಹಳ್ಳಿ, ಗಳಿಗೇನಹಳ್ಳಿ, ಗ್ರಾಮಪಂಚಾಯಿತಿಗಳಲ್ಲಿ ಕಾಡುಗೊಲ್ಲ ಸಮುದಾಯಕ್ಕೆ, ಸೀತಕಲ್ಲು ಗ್ರಾಮ ಪ೦ಚಾಯಿತಿಯಲ್ಲಿ ಗೊಲ್ಲ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿ, ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದರು.
ಶಿರಾ ಉಪಚುನಾವಣೆಯಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ನಾನು ಗೊಲ್ಲ ಸಮುದಾಯಕ್ಕೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದ್ದನ್ನು ಕಣ್ಣಾರೆ ಕಂಡು, ಇವರ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಅಭಿವೃದ್ಧಿಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ
ಬೇಡಿಕೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟು, ನಿಗಮವನ್ನು ಸ್ಥಾಪಿಸಿ, ಚಂಗಾವರ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇನೆ ಎಂದರು.
ಅಲ್ಲದೆ ಕ್ಷೇತ್ರದ 38 ಗೊಲ್ಲರಹಟ್ಟಿಗಳಿಗೂ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಅಗತ್ಯವಿರುವರಿಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ನೀಡಿ, ಅವರ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲುವು ತಂದುಕೊಡುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಗೊಲ್ಲರಹಟ್ಟಿಗಳನ್ನು ದತ್ತು ಪಡೆದು, ಅಲ್ಲಿನ ಶಾಲೆ,ಅಂಗನವಾಡಿ ಸೇರಿದಂತೆ ಗ್ರಾಮವನ್ನು ದತ್ತು ಪಡೆದು, ಅಭಿವೃದ್ಧಿ ಪಡಿಸಲಾಗುವುದು. ಇದರ ಜೊತೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನ ತಂದು ಕಾಡುಗೊಲ್ಲ ಮತ್ತು ಗೊಲ್ಲ ಸಮುದಾಯದ ಮಕ್ಕಳ ಶೈಕ್ಷಣಿಕ, ಅರ್ಥಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಬಿ.ಸುರೇಶಗೌಡ ತಿಳಿಸಿದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಮಾತನಾಡಿ,ನಾನು ಇಂದು ಒಂದು ನಿಗಮದ ಅಧ್ಯಕ್ಷನಾಗಿದ್ದರೆ ಅದಕ್ಕೆ ಸುರೇಶಗೌಡರೇ ಕಾರಣ. ಶಿರಾ ಉಪಚುನಾವಣೆಯಲ್ಲಿ ನನ್ನೊಂದಿಗೆ ಶಿರಾಕ್ಷೇತ್ರದ 372 ಕಾಡುಗೊಲ್ಲರ ಹಟ್ಟಿಗಳನ್ನು ಸುತ್ತಿ, ಅಲ್ಲಿನ ನಿಜಸ್ಥಿತಿ ಅರಿತ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಡುಗೊಲ್ಲ ನಿಗಮದ ಸ್ಥಾಪನೆ ಕುರಿತಂತೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ನಿಗಮ ಸ್ಥಾಪನೆಯಾಯಿತು.ಅಲ್ಲದೆ ಕಾಡುಗೊಲ್ಲರ ಅರಾಧ್ಯ ಧೈವಗಳಿರುವ ಜುಂಜಪ್ಪನಗುಡ್ಡೆ, ಹೆತ್ತಪ್ಪನ ದೇವಾಲಯ,ಚಿಕ್ಕಣ್ಣನ ಹಟ್ಟಿಗಳಿಗೆ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಅವರನ್ನು ನಾವು ಈ ಚುನಾವಣೆಯಲ್ಲಿ ಕೈ ಹಿಡಿಬೇಕಾಗಿದೆ ಎಂದರು
ತುಮಕೂರು ಗ್ರಾಮಾಂತರ ಓಬಿಸಿ ಮೋರ್ಚಾದ ಶಿವಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ 38 ಗೊಲ್ಲರಹಟ್ಟಿಗಳಿದ್ದು, ಅವುಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿಗಳನ್ನು ಕಲ್ಪಿಸಲು ಸುರೇಶಗೌಡರು ಅವಿರತ ಶ್ರಮಿಸಿದ್ದಾರೆ.ಅಲ್ಲದೆ ಗೊಲ್ಲರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸುರೇಶಗೌಡರು ಶಾಸಕರಾಗಿದ್ದ ಕಾಲದಲ್ಲಿ ಮಾಡಿದ್ದು, ಕಾಡುಗೊಲ್ಲ ಸಮುದಾಯದ ಆಸೆ, ಅಮೀಷಗಳಿಗೆ ಬಲಿಯಾಗದೆ ಸುರೇಶಗೌಡರನ್ನು ಈ ಬಾರಿ ಬೆಂಬಲಿಸುವಂತೆ ಮನವಿ ಮಾಡಿದರು.
ಕಾಡುಗೊಲ್ಲ ಸಮುದಾಯದ ಯುವ ಮುಖಂಡ ಗೋವಿಂದರಾಜು ಮಾತನಾಡಿ,ಕರೋನ ಸಂದರ್ಭದಲ್ಲಿ ಸುರೇಶಗೌಡರು ಸೋಂಕಿಗೆ ಒಳಗಾದವರಿಗೆ ಬೆಡ್ ಒದಗಿಸಲು ಅವಿರತ ಶ್ರಮಿಸಿದ್ದಾರೆ.ಅಲ್ಲದೆ ಕ್ಷೇತ್ರದಾದ್ಯಂತ ದಿನಸಿ ಕಿಟ್ ವಿತರಿಸಿ ಎಲ್ಲರಿಗೂ ಅನುಕೂಲ ಕಲ್ಪಿಸಲಾಗಿದೆ.ಇದರ ಅನುಕೂಲ ಪಡೆದ ಪ್ರತಿಯೊಬ್ಬರು ಸುರೇಶಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶಿರಾ:- ಸಿರಾ ತಾಲ್ಲೂಕಿನ ಚಿಗುರು ಯುವಜನ ಸಂಘವು ದೊಡ್ಡಆಲದಮರ ಗ್ರಾಮದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪರವಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲು ಪರಿಸರ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಚಿಗುರು ಯುವಜನ ಸಂಘದ ಅಧ್ಯಕ್ಷರಾದ ಮಂಜುನಾಥ್‌ಅಮಲಗೊಂದಿ ರವರು ಮಾತನಾಡಿ, ಚಿಗುರು ಯುವಜನ ಸಂಘವು ಗ್ರಾಮೀಣ ಪ್ರದೇಶದ ಸಮಾನ ಮನಸ್ಕ ಯುವಜನರು ಕಟ್ಟಿಕೊಂಡ ಒಂದು ಸ್ವಯಂಸೇವಾ ಸಂಘವಾಗಿದೆ. . ಈಗ ಚುನಾವಣೆಯ ಸಂದರ್ಭದಲ್ಲಿ ಸಿರಾ ವಿಧಾನಸಭೆಯ ಮತದಾರರ ಪರವಾಗಿ ತಾಲ್ಲೂಕಿನ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಈ ಕೆಳಗಿನ ನಮ್ಮ ಸಲಹೆಗಳನ್ನು ಎಲ್ಲಾ ಅಭ್ಯರ್ಥಿಗಳಿಗೆ ಇಮೇಲ್, ವಾಟ್ಸಪ್ ಮೂಲಕ ಕಳಿಸಿಕೊಡಲಾಗಿದೆ ಎಂದು ತಿಳಿಸಿದರು.
೧. ಮುಂದಿನ 25 ವರ್ಷಗಳ ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗಲಿರುವ ಗಿಡಮರಗಳಿಗೆ ಈಗಲೇ ಪರಿಹಾರ ರೂಪದಲ್ಲಿ ಅರಣ್ಯ ಬೆಳೆಸಲು ಬೆಂಗಾಡಿನಲ್ಲಿ ಸ್ಥಳ ನಿಗದಿ ಮಾಡಿ, ಅರಣ್ಯವನ್ನು ಬೆಳೆಸಲು ಆರಂಭಿಸಬೇಕು. ಇಲ್ಲಿ ಬೆಳೆಸಿದಷ್ಟೇ ಸಂಖ್ಯೆಯ ಮರಗಳನ್ನು ವಿವಿಧ ಯೋಜನೆಗಳು ಜಾರಿಯಾಗುವ ಹಂತದಲ್ಲಿ ಕಡಿಯಲು ಅನುಮತಿ ಸಿಗಬೇಕು. ಕೈಗಾರಿಕೆ ಸಂಸ್ಥಾಪಕರಿಗೆ, ಸಿವಿಲ್ ಕಾಮಗಾರಿಗಳ ಗುತ್ತಿಗೆದಾರರಿಗೆ ಅವರವರ ಶ್ರೇಣಿಗೆ ತಕ್ಕಂತೆ, ಬದಲೀ ಅರಣ್ಯ ಬೆಳೆಸಲು ಅಲ್ಲಿ ಅವಕಾಶ ಇರಬೇಕು. ಅರಣ್ಯವನ್ನು ಬೆಳೆಸಿದರೆ ಮಾತ್ರ ಅಂಥವರ ಲೈಸೆನ್ಸ್ ನವೀಕರಣ ಮಾಡಬೇಕು.
೨. ಎಲ್ಲ ಡೇರಿ ಕೇಂದ್ರಗಳಲ್ಲಿ ಗೋಬರ್ ಗ್ಯಾಸ್ ಉತ್ಪಾದನೆಯ ಪ್ರಾತ್ಯಕ್ಷಿಕೆ ಇರಬೇಕು. ಅದರಿಂದ ಸಿಗುವ ಅನಿಲವನ್ನೇ ಅಲ್ಲೇ ವಿದ್ಯುತ್ತನ್ನಾಗಿ ಪರಿವರ್ತಿಸಿ ಅಲ್ಲಿನದೇ ಶೀತಲಘಟಕಗಳಲ್ಲಿ ಬಳಸಬೇಕು.
೩. ಇನ್ನು ಐದು ವರ್ಷಗಳಲ್ಲಿ ಹಳ್ಳಿಗಳ, ನಗರಗಳ ಚರಂಡಿ ನೀರಿನ ಶೇ. 50ರಷ್ಟನ್ನು ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಆಯಾ ಹಳ್ಳಿ, ನಗರಗಳಿಗೆ ಪೂರೈಸುವ ವ್ಯವಸ್ಥೆಯಾಗಬೇಕು.
೪. ಹಳ್ಳಕೊಳ್ಳಗಳನ್ನು ಕಸ, ಚರಂಡಿನೀರನ್ನು ಸಂಗ್ರಹಗಾರಗಳನ್ನಾಗಿಸದೆ ಅವುಗಳ ಸ್ವಚ್ಛತೆಯನ್ನು, ಅವುಗಳ ಪಾವಿತ್ರತೆಯನ್ನು ಕಾಪಾಡಬೇಕು.
೫. ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ನಿವಾಸಗಳು ತಮಗೆ ಬೇಕಿದ್ದ ನೀರು ಮತ್ತು ವಿದ್ಯುತ್ತನ್ನೂ ತಮ್ಮ ಕಟ್ಟಡದಲ್ಲೇ ಸಂಗ್ರಹಿಸಬೇಕು. ಹೊರಗಿನ ನೀರು ಮತ್ತು ವಿದ್ಯುತ್ತನ್ನು ಸಾಗಿಸಿ ತರದಂತೆ ನಿರ್ಬಂಧ ವಿಧಿಸಬೇಕು.
೬. ತಾಲ್ಲೂಕು ಕೇಂದ್ರದಲ್ಲಿ ಇನ್ನು ಐದು ವರ್ಷಗಳ ಒಳಗೆ ಒಂದು ಮಾದರಿ ಮನೆಯನ್ನು ನಿರ್ಮಿಸಬೇಕು. ಕೃಷಿತ್ಯಾಜ್ಯದಿಂದ ಪ್ಲೈವುಡ್ ಹಲಗೆ, ಒತ್ತಿಟ್ಟಿಗೆಗಳ ಗೋಡೆಯಂಥ ಸುಸ್ಥಿರ ವಿಧಾನದ ಕಟ್ಟಡ ಅದಾಗಿರಬೇಕು. ಮಳೆಕೊಯ್ಲು, ಸೋಲಾರ್ ವಿದ್ಯುತ್ತಿನ ಉತ್ಪಾದನೆಗೆ ಅದು ಮಾದರಿಯಾಗಬೇಕು. ಕೃಷಿತ್ಯಾಜ್ಯದಿಂದ ಅಡುಗೆ ಅನಿಲ ಮತ್ತು ವಿದ್ಯುತ್ ಉತ್ಪಾದನೆಯ ಪ್ರಾತ್ಯಕ್ಷಿಕೆಯೂ ಅಲ್ಲಿರಬೇಕು.
೭. ಪ್ರತಿ ಮನೆಯಲ್ಲೂ ಮಳೆನೀರಿನ ಕೊಯ್ಲನ್ನು ಮಾಡಬೇಕು. ಅದೇ ನೀರನ್ನು ಬಳಸುವಂತೆ ಕಡ್ಡಾಯ ಮಾಡಬೇಕು.
೮. ತಾಲ್ಲೂಕು ಕೇಂದ್ರವೂ ಸೇರಿದಂತೆ ತಾಲ್ಲೂಕಿನ ಹಳ್ಳಿಗಳ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಹೂಳೆತ್ತಿಸಿ ಅಲ್ಲೆಲ್ಲ ಕಳೆರಹಿತ ಶುದ್ಧನೀರು ಸಂಗ್ರಹವಾಗುವಂತೆ ಮಾಡಬೇಕು.
೯. ನಗರದ ಎಲ್ಲ ವಾಹನಗಳಿಗೆ ಹಾರ್ನ್ ಕೋಟಾ ನಿಗದಿ ಮಾಡಬೇಕು. ತಿಂಗಳಿಗೆ 50ಕ್ಕಿಂತ ಹೆಚ್ಚು ಬಾರಿ ಹಾರ್ನ್ ಮಾಡುವವರಿಗೆ ಶುಲ್ಕ ವಿಧಿಸಬೇಕು. ಬಾಡಿಗೆ ವಾಹನಗಳನ್ನು ಹೊರತುಪಡಿಸಿ, ಎಲ್ಲ ಪೆಟ್ರೋಲ್/ಡೀಸೆಲ್ ಚಾಲಿತ ವಾಹನಗಳಿಗೂ ತಿಂಗಳಿಗೆ ಗರಿಷ್ಠ 300 ಕಿ.ಮೀ. ಓಡಾಟದ ಕೋಟಾವನ್ನು ವಿಧಿಸಬೇಕು. ಅದನ್ನು ಮೀರಿದವರು ಹೆಚ್ಚುವರಿ ಶುಲ್ಕ ತೆರುವಂತಾಗಬೇಕು. ಹೀಗೆ ಸಂಗ್ರಹವಾದ ನಿಧಿಯನ್ನು ಟಯರ್‌ಗಳ ಮರುಸಂಸ್ಕರಣೆಗೆ ಬಳಸಬೇಕು.
೧೦. ಎಲ್ಲಡೆಯಲ್ಲೂ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹ ಮತ್ತು ಮರುಬಳಕೆಯನ್ನು ಕಡ್ಡಾಯ ಮಾಡಬೇಕು. ಟಾರ್ ರಸ್ತೆ ಮತ್ತು ಆವರಣದ ಗೋಡಗಳಿಗೆ ಶೇ. 20ರಷ್ಟನ್ನಾದರೂ ಅಂಥ ಮರುಬಳಕೆಯ ಪ್ಲಾಸ್ಟಿಕ್ ಮತ್ತು ಟಯರ್ ಚಕ್ಕೆಗಳ ಬಳಕೆಯನ್ನು ಕಡ್ಡಾಯ ಮಾಡಬೇಕು. ಎಲ್ಲ ಮದ್ಯ, ಪೇಯ, ಮತ್ತು ಔಷಧ ತಯಾರಿಸುವ ಕಂಪನಿ/ಅಂಗಡಿಗಳು ಗಾಜಿನ ಖಾಲಿ ಬಾಟಲಿಗಳನ್ನು ಹಿಂಪಡೆಯುವುದನ್ನು ಕಡ್ಡಾಯ ಮಾಡಬೇಕು.
೧೧. ಕೊಳವೆ ಬಾವಿಗಳಿಗೆ ಜಿಯೊ ಟ್ಯಾಗಿಂಗ್ ಮಾಡಬೇಕು. ಟ್ಯಾಂಕರ್‌ಗಳಿಗೆ ನಗರದ ಕೊಳವೆ ಬಾವಿಗಳಿಂದ ನೀರೆತ್ತದಂತೆ ನಿಷೇಧ ಹಾಕಬೇಕು. ನಗರ ಪ್ರದೇಶದಲ್ಲಿ ಹೊಸ ಕೊಳವೆ ಬಾವಿಗಳಿಗೆ ಲಿಲಾವಿನ ಮೂಲಕ ಲೈಸೆನ್ಸ್ ಲಭಿಸುವಂತೆ ಮಾಡಬೇಕು. ಮನೆಕಟ್ಟುವ ಮೊದಲು ಮನೆಯ ವಿಸ್ತೀರ್ಣ/ಗಾತ್ರಕ್ಕೆ ತಕ್ಕಷ್ಟು ಮಳೆನೀರಿನ ಸಂಗ್ರಹಕ್ಕೆ ನೆಲದಡಿಯಲ್ಲಿ ವ್ಯವಸ್ಥೆ ಮಾಡಿರಬೇಕು.
೧೨. ಎಲ್ಲಾ ಕಡೆ ಮೃತ ಶರೀರಗಳನ್ನು ಸುಡುವ ಪ್ರಮಾಣಕ್ಕೆ ಅನುಗುಣವಾಗಿ ನೆನಪಿನ ವೃಕ್ಷಗಳನ್ನು ಬೆಳೆಸಲು ಸ್ಥಳವನ್ನು ನಿಗದಿ ಮಾಡಬೇಕು. ಗೋಬರ್ ಗ್ಯಾಸ್ ಅಥವಾ ಜೈವಿಕ ತ್ಯಾಜ್ಯದಿಂದ ಲಭಿಸುವ ಅನಿಲದಿಂದ ಶವಸಂಸ್ಕಾರ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು. [ಶವಸಂಸ್ಕಾರಕ್ಕೆ ಪೂರಕ ಟಿಪ್ಪಣಿ: ಇಡೀ ಮಾನವ ಕಳೇವರವನ್ನೇ ಪೆಟ್ಟಿಗೆಯಲ್ಲಿಟ್ಟು ಗೊಬ್ಬರವನ್ನಾಗಿಸುವ ಕಾಂಪೋಸ್ಟಿಂಗ್ ಟೆಕ್ನಾಲಜಿ ಇದೆ. ಮಿತ್ರ ಗುರುರಾಜ ದಾವಣಗೆರೆಯವರ ಪ್ರಶಸ್ತಿವಿಜೇತ “ಡೇಟಾ ದೇವರು ಬಂದಾಯ್ತು” ಕೃತಿಯಲ್ಲಿ ಅದರ ಚಿತ್ರ ವಿವರಗಳಿವೆ. ಅಂಥ ಒಂದಾದರೂ ಘಟಕವನ್ನು ಪ್ರಾತ್ಯಕ್ಷಿಕೆಗೆಂದು ರಾಜಧಾನಿಯಲ್ಲಿ ಸ್ಥಾಪಿಸಬೇಕು. ಆ ಕಾಂಪೋಸ್ಟನ್ನು ವಾರಸುದಾರರ ತೋಟಗಳಲ್ಲಿ ಬಳಸುವಂತೆ ಪ್ರೇರಣೆ ನೀಡಬೇಕು].
೧೩. ತಾಲ್ಲೂಕಿನ ಶಾಲೆಗಳಲ್ಲಿ ಇಕೋ ಕ್ಲಬ್ ಗಳನ್ನು ಸಶಕ್ತೀಕರಗೊಳಿಸಬೇಕು. ಇದರಿಂದ ಹಳ್ಳಿಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಯುವ ತಂಡಗಳನ್ನು ರಚಿಸಲು ಪ್ರೇರೇಪಿಸಬೇಕು.
೧೪. ಕೈತೋಟಗಳನ್ನು ನಿರ್ಮಿಸಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು. ಪ್ರತಿ ಕುಟುಂಬವೂ ನುಗ್ಗೆ ಕರಿಬೇವು ನೆಡುವಂತೆ ಕಡ್ಡಾಯ ಮಾಡಬೇಕು.
೧೫. ಸಾರ್ವಜನಿಕ ಸ್ಮಶಾನಗಳಲ್ಲಿ ನೆಡುತೋಪುಗಳನ್ನು ನಿರ್ಮಿಸಬೇಕು. ಸತ್ತವರಿಗೆ ಸ್ಮಾರಕ ಮಾಡುವ ಬದಲು ಅದೇ ಜಾಗದಲ್ಲಿ ವೃಕ್ಷಗಳನ್ನು ನೆಡುವುದನ್ನು ಕಡ್ಡಾಯ ಮಾಡಬೇಕು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಮಧು ಎನ್.ಆರ್,ರವರು ಮಾತನಾಡಿ, ಪರಿಸರವು ಪ್ರತಿಯೊಂದು ಜೀವಿಗೂ ಅತ್ಯಗತ್ಯ. ಆಗಾಗಿ ಮಾನವರ ಜೊತೆ ಎಲ್ಲಾ ಜೀವಿಗಳಿಗೂ ಬದುಕುವುದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡಬೇಕಾಗಿದೆ. ಇಂದು ಅದರ ಭಾಗವಾಗಿ ನಮ್ಮ ಸಂಘದಿಂದ ಪರಿಸರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ನಂತರ ಗೆದ್ದ ಅಭ್ಯರ್ಥಿಗಳು ಪರಿಸರ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಕಾರ್ಯಗತ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ಚಿಗುರು ಯುವಜನ ಸಂಘದ ಸದಸ್ಯರಾದ ಅಂಬಿಕಾ ಎನ್, ತಿಮ್ಮೇಗೌಡ, ದರ್ಶನ್ ಜೆ, ಯಶೋಧ ಸಿ ಜೆ, ಹಾಗೂ ಹರೀಶ್ ಎಸ್ ರವರು ಹಾಜರಿದ್ದರು.
ತುಮಕೂರು : ಸ್ಮಾರ್ಟ್ ತುಮಕೂರು ಮೊದಲ ಮಳೆಗೆ ಹಲವಾರು ಅದ್ವಾನಗಳು ಆಗಿ ಜನರನ್ನು ಇಕಟ್ಟಿಗೆ ಸಿಕ್ಕಿಸಿದೆ. ಅಂಡರ್‍ಪಾಸ್ ಗಳು ಈಜುಕೊಳವಾಗಿವೆ.
ನಗರದ ತಗ್ಗು ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿದೆ.
ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್‍ನಲ್ಲಿ ಆರಡಿಗೂ ಹೆಚ್ಚು ನೀರು ನಿಂತು ಕೆರೆಯಂತಾಗಿದೆ, ಬೆಳಗಿನ ವೇಳೆಯಲ್ಲಿ ಕಾಲೇಜಿಗೆ ಹೋಗುವವರಿಗೆ, ಕಛೇರಿಗೆ ಹೋಗುವವರಿಗೆ ತೀವ್ರ ತೊಂದರೆ ಉಂಟಾಗಿದೆ.
ಎಸ್.ಐ.ಟಿ ಮತ್ತು ಎಸ್.ಎಸ್.ಪುರಂ ತಗ್ಗಿನ ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಗಿದೆ.
ತುಮಕೂರಿನ ಆರ್.ಟಿ ನಗರ(ಸರ್ವೋದಯ ಕಾಲೇಜು ಹಿಂಭಾಗ)ದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ.
ತುಮಕೂರು- ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ. ಹಾಗಾಗಿ ನುಡಿದಂತೆ ನಡೆಯುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಹೇಳಿದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಸುರೇಶ್‍ಬಾಬು ಪರ ಮತಯಾಚಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಶಕ್ತಿ ತುಂಬುತ್ತೇನೆ ಅಂತ ಹೇಳುತ್ತಾರೆ. ಆದರೆ ಅವರು ನುಡಿದಂತೆ ಮೋದಿ ನಡೆಯುವುದಿಲ್ಲ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ನಾವು. ಈಗಾಗಲೇ ನಾನು ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡುವಂತೆ ಪತ್ರ ಬರೆದಿದ್ದೇನೆ. ಯಾವುದೇ ಒಂದು ಸಮಾಜಕ್ಕೆ ದೇವೇಗೌಡರಿಂದ ಅನ್ಯಾಯವಾಗಿಲ್ಲ ಎಂದು ಹೇಳಿದರು
ಸಕ್ರಿಯವಾಗಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿದ್ದೆ. ಆದರೆ ನಾನು ನನ್ನ ಅಳಿಯನಿಗೆ ಟಿಕೆಟ್ ಕೇಳಿದೆ, ಆದರೆ ನನ್ನ ಮನವಿ ಸ್ಪಂದಿಸದೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು ಜಾತ್ಯಾತೀತ ನಿಲುವುಳ್ಳ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಡವರು, ರೈತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಹಿತ ಕಾಪಾಡಲು ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಣಾಳಿಕೆಯಲ್ಲಿರುವ ಅಂಶಗಳು ಜಾರಿಗೆ ಬರಬೇಕಾದರೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ಅಭ್ಯರ್ಥಿ ಸುರೇಶ್‍ಬಾಬು ಅವರು ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸದಾ ಬಡವರ ಪರವಾಗಿಯೇ ಕೆಲಸ ಮಾಡುತ್ತಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಯನ್ನು ಈ ಬಾರಿ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವದಿಸಬೇಕು ಎಂದರು. ಅಭ್ಯರ್ಥಿ ಸಿ.ಬಿ. ಸುರೇಶ್‍ಬಾಬು ಮಾತನಾಡಿ, ನನ್ನ ತಂದೆ ತೀರಿ ಹೋದಾಗ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ರಾಜಕೀಯಕ್ಕೆ ಕರೆ ತಂದರು ಎಂದರು.
ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಋಣವನ್ನು ತೀರಿಸಲು ಕ್ಷೇತ್ರದ ಜನತೆ ನನಗೆ ಮತ್ತೊಂದು ಬಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಬಡವರ ನಾಡಿ ಮಿಡಿತವನ್ನು ದೇವೇಗೌಡರು, ಕುಮಾರಸ್ವಾಮಿ ಅವರು ಅರಿತಿದ್ದಾರೆ. ಹಾಗಾಗಿ ಅವರು ಸದಾ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದರು.
ಜಾತ್ಯಾತೀತ ಹೆಸರಿಗೆ ತಕ್ಕಂತೆ ನಮ್ಮ ಪಕ್ಷದಲ್ಲಿ ಎಲ್ಲ ಜಾತಿ, ವರ್ಗದವರು ಇದ್ದಾರೆ. ಎಲ್ಲ ವರ್ಗ, ಸಮುದಾಯದ ಏಳ್ಗೆಯನ್ನು ಜೆಡಿಎಸ್ ಪಕ್ಷ ಬಯಸುತ್ತದೆ. ಇದಕ್ಕೆ ಬದ್ಧವಾಗಿ ಸದಾ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಕಿರಣ್‍ಕುಮಾರ್ ಮನೆಯಲ್ಲಿ ಸಾವರ್ಕರ್ ಫೆÇೀಟೋ ಇದೆ. ಡಿ.ಕೆ. ಶಿವಕುಮಾರ್ ಬಂದರೆ ಅವರ ತಲೆಗೆ ಕೇಸರಿ ಪೇಟೆ ತೊಡಿಸುತ್ತಾರೆ. ಇವರು ಚುನಾವಣೆಯಾದ ಬಳಿಕ ಎಲ್ಲಿ ಇರುತ್ತಾರೆ ಎಂಬುದು ಗೊತ್ತಿಲ್ಲ. ಹಾಗಾಗಿ ಇವರ ಮಾತುಗಳಿಗೆ ಜನತೆ ಮರುಳಾಗಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಹದೇವಯ್ಯ, ಜಯಪ್ರಕಾಶ್, ರಾಜಕುಮಾರ್, ರಾಮಚಂದ್ರಯ್ಯ, ಪಾವಗಡ ಶ್ರೀರಾಮ್, ಸೋಲಾರ್ ಕೃಷ್ಣಮೂರ್ತಿ, ಹರ್ಷ, ಪುಷ್ಪಾ, ನಗ್ಮಾ, ಕಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.
Koratagere: ಪರಮೇಶ್ವರ್ ಗೆದ್ದರೆ ನನಗೆ ಸಂತೋಷವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಬೇಕಿರುವುದು ರಾಜ್ಯದ 7 ಕೋಟಿ ಜನರ ಆಶಯವಾಗಿದೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ, ರಾಜ್ಯದ ಜನರು ತಲೆ ತಗ್ಗಿಸುವಂತೆ ರಾಜ್ಯಭಾರ ಮಾಡುತ್ತಿರುವ ಬಿಜೆಪಿಯನ್ನು ತೊಲಗಿಸಿ ರಾಜ್ಯವನ್ನು ಉಳಿಸಲು ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.
ಸ್ವಾತಂತ್ರ ಬಂದಾಗಿನಿಂದ ನಾನು ಮುಖ್ಯಮಂತ್ರಿ ಹುದ್ದೆ ಬಿಡುವವರೆಗೆ ರಾಜ್ಯದ ಸಾಲ 2.70 ಲಕ್ಷ ಕೋಟಿ, ಆದರೆ ಈಗ 5.64 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ, ಕೇವಲ ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿ, ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ, ಯೋಜನಾ ಬದ್ಧ ವೆಚ್ಚ 103ರಷ್ಟಿದೆ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ, ಬಿಜೆಪಿ ಸರ್ಕಾರ ಒಂದು ಮನೆಯನ್ನು ನೀಡಿಲ್ಲ ಎಂದರು.
ಬಿಜೆಪಿ ಲಂಚ ಹೊಡೆಯುವುದನ್ನು ಕಡಿಮೆ ಮಾಡಿದ್ದರೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಕಡಿಮೆ ಮಾಡುವ ಅಗತ್ಯ ಬರುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರಲಿದೆ, ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ, ರೈತರ ಸಾಲಮನ್ನಾ ಮಾಡಲು ಆಗದ ಬಿಜೆಪಿ ಉದ್ಯಮಿಗಳ 12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ, ಶ್ರೀಮಂತರ ಪರ ಇರುವ ಬಿಜೆಪಿ, ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗಲಿದೆ ಎನ್ನುವ ಮನೋಭಾವನೆ ಇರುವವರಿಗೆ ಅಧಿಕಾರ ಕೊಡಬೇಕೆ ಎಂದು ಪ್ರಶ್ನಿಸಿದರು.
ಮೋದಿ ಚುನಾವಣೆಗಾಗಿ ಬರುತ್ತಿದ್ದಾರೆ, ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಮುಖ ನೋಡಿ ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿದೆ, ಮೋದಿ ನೂರು ಬಾರಿ ಬಂದರೂ ಬಿಜೆಪಿಯ ಭ್ರಷ್ಟ್ರತೆಯನ್ನು ಮುಚ್ಚಲು ಆಗುವುದಿಲ್ಲ, ರಾಜ್ಯದ ಜನರು ಪ್ರಬುದ್ಧರಿದ್ದಾರೆ, ಅಚ್ಛೇದಿನ್ ಬರುತ್ತದೆ ಎಂದರು ಬಂತಾ ಎಂದು ಪ್ರಶ್ನಿಸಿದರು
ಪಾವಗಡ: .ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಎಂದು ಅದರೆ ೪೦/ ಕಮಿಷನ್ ಹಗರಣ ಗಳ ಸರ್ಕಾರ ವೇ ಬಿಜೆಪಿ ,ವಿಧಾನಸೌಧದ ಪ್ರತಿ ಗೋಡೆಯು ಲಂಚ ಲಂಚ ಅಂತ ಪಿಸುಗುಟ್ಟುತ್ತಿವೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಇಂದು ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನರೇಂದ್ರ ಮೋದಿಯ ಅಚ್ಚೇದಿನ ಎಲ್ಲಿಗೆ ಬಂತು. ಗ್ಯಾಸ್ ,ಗೊಬ್ಬರ,ಆಡುಗೆ ಎಣ್ಣೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯು ಸೇರಿದಂತೆ ಇಂದು ಪ್ರತಿವಸ್ತುವಿನ ಬೆಲೆಯು ಏರಿದೆ ಎಂದ ಸಿದ್ಧರಾಮಯ್ಯ ಮಿಸ್ಟರ್ ನರೇಂದ್ರ ಮೋದಿ ಕರ್ನಾಟಕದ ಬಿಜೆಪಿ ಸರ್ಕಾರ ದಿನ ಲೂಟಿ ಮಾಡುತ್ತಿದ್ದರು ನೀವು ಯಾಕೆ ಕಣ್ಣು ಮುಚ್ಚಿಕುಳಿತುಕೊಂಡಿದ್ದೀರಿ ಎಂದು ಛೇಡಿಸಿದರು.
ಸ್ವಿಸ್ ಬ್ಯಾಂಕ್ ನಿಂದ ಹಣ ತಂದು ಎಲ್ಲರ ಅಕೌಂಟ್ ಗಳಿಗೆ ೧೫ ಲಕ್ಷ ಹಾಕಿಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಾನು ಮಾಡಿದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರದವರು ರದ್ದು ಮಾಡಿದರು. ಬಿಜೆಪಿ ಜನರ ಆಶೀರ್ವಾದ ದಿಂದ ಆಯ್ಕೆ ಯಾದ ಸರ್ಕಾರವಲ್ಲ ಅನೈತಿಕ ಮಾರ್ಗದಿಂದ . ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿದರು, ಅಧಿಕಾರಕ್ಕೆ ಬಂದಾದ ಮೇಲೆ ಬರಿ ಲೂಟಿಗೆ ಇಳಿದರು ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ನಿಂದ ಹೋಮ ಹವನ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಬಾರಿಯು ಯಾವ ಪಕ್ಷಕ್ಕೂ ಬಹುಮತಬರಬಾರದು ಎಂದು ಹೋಮ ಹವನ ಮಂತ್ರ ತಂತ್ರ ಕ್ಕೆ ಮೊರೆ ಹೋಗಿದ್ದಾರೆ ಕಾಂಗ್ರೆಸ್ ನವರಿಗೆ ಜಾಸ್ತಿ ಸೀಟು ಬಂದರೆ ಕಾಂಗ್ರೆಸ್ ನವರ ಜೊತೆ ಬಿಜೆಪಿ ಗೆ ಜಾಸ್ತಿ ಬಂದರೆ ಬಿಜೆಪಿ ಯವರ ಜೊತೆ ಜೆಡಿಎಸ್ ನವರು ಹೋಗತ್ತಾರೆ.ಇವರಿಗೆ 25 ಸೀಟು ಬಂದರೆ ಹೆಚ್ಚು ಎಂದರು.
ಪಾವಗಡ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ.
ಪಾವಗಡಕ್ಕೆಕುಡಿಯುವ ನೀರು ಇರಲಿಲ್ಲ ವೆಂಕಟರಮಣಪ್ಪ ಅಂದು ಮಾಜಿ ಶಾಸಕರಾಗಿದ್ದರು.ನನ್ನ ಮೇಲೆ ಒತ್ತಾಯ ಮಾಡಿದ್ದರ ಫಲ ಇಂದು ತುಂಗಭದ್ರಾ ಹಿನ್ನೀರಿ ನಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ.ಈ ಯೋಜನೆ ಜಾರಿಮಾಡಿದ್ದು ನಾವು ತಿಮ್ಮರಾಯಪ್ಪ ಕುಮಾರಸ್ವಾಮಿ ಅಲ್ಲ ಎಂದರು.
ಸೋಲಾರ್ ಎನರ್ಜಿ ಪ್ರಾಜೆಕ್ಟ್ ನಿಂದ ೨೦೦೦ ಮೇಗವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಮಾಡಿದ್ದೇವೆ. ಇದು ಏಷ್ಯಾದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತ್ತು ಎಂದರು.
ಪಾವಗಡ ಮಲೆನಾಡು ಆಗುತ್ತದೆ. ಎತ್ತಿನ ಹೊಳೆಯಿಂದಲ್ಲೂ ಪಾವಗಡಕ್ಕೆ ನೀರು ಬರುತ್ತದೆ ಎಂದರು.
ಪಾವಗಡಕ್ಕೆ ಶಿಘ್ರವೇ ನೀರು ಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ ರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಹಿಸಿ ,ಪಾವಗಡಕ್ಕೆ ಎನ್ನುಬೇಕು ಎಂದು ವೆಂಕಟೇಶ್ ಕೇಳುತ್ತಾರೋ ಅವೆಲ್ಲಾ ಕೆಲಸ ಮಾಡಿಕೋಡುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕದ 224 ಕ್ಷೇತ್ರದ ಯಾವೊಂದು ಕ್ಷೇತ್ರಕ್ಕೂ 14/ಇರುವ ಮುಸ್ಲಿಂ ರಿಗೆ ,2/ ಇರುವ ಕ್ರಿಶ್ಚಿಯನ್ ರಿಗೆ ಬಿಜೆಪಿ ಟಿಕೇಟ್ ನೀಡಿಲ್ಲ ,ಮುಸ್ಲಿಂರಿಗೆ ಸ್ವಾಭಿಮಾನ ವಿದರೆ ಬಿಜೆಪಿ ಹಾಗೂ ಜೆಡಿಎಸ್ ಗೆ ವೋಟ್ ಹಾಕಬಾರದು ಎಂದು ಹೇಳಿದ ಸಿದ್ದರಾಮಯ್ಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಲಿರುವ ಗೃಹ ಜ್ಯೋತಿ ಗೃಹ ಲಕ್ಷ್ಮೀ, ಅನ್ನ ಭಾಗ್ಯ ,ನಿರುದ್ಯೋಗ ಪದವಿದರರಿಗೆ ಎರಡು ವರ್ಷಗಳ ಕಾಲ ೩೦೦೦ ರೂ ಡಿಪ್ಲೊಮಾ ಪದವಿದರರಿಗೆ ೧೫೦೦ ಮಹಿಳೆಯರಿಗೆ ಉಚಿತ ಬಸ್ ಪಾಸ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಮಾಜಿ ಸಚಿವ ವೆಂಕಟರಮಣಪ್ಪ,ಎ ಪಿ ಪಿ ಸಿ ಸಿ ಮಾಜಿ ಅಧ್ಯಕ್ಷ ರಘುವೀರ್ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಮಾತನಾಡಿದರು.
ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ. ಸುದೇಶ್ ಬಾಬು. ಹೆಚ್ ವಿ ಕುಮಾರಸ್ವಾಮಿ ಮಾನಂ ವೆಂಕಟಸ್ವಾಮಿ. ರಾಮಾಂಜಿನಪ್ಪ. ಶಂಕರ್ ರೆಡ್ಡಿ. ರವಿ, ರಾಜೇಶ್ ,ಅನಿಲ್, ಮುಗಾದಳ ಬೆಟ್ಟ ನರಸಿಂಹಯ್ಯ. ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಮೈಲಪ್ಪ. ಬತ್ತಿನೇನಿ ನಾನಿ. ಮಂಜಣ್ಣ. ಶ್ರೀ ರಾಮ್. ಉಮೇಶ್. ಭಗವಂತಪ್ಪ. ಪರಿಟಾಲ ಭರತ್. ಆನಂದಪ್ಪ. ರವಿ. ರೇವಣ್ಣ. ಬಸವರಾಜು.ಮಾರಪ್ಪ,ದಿವಾಕರ್,ಶ್ರೀನಿವಾಸ ಮತ್ತಿತರರು ಹಾಜರಿದ್ದರು.
ಹೆಬ್ಬೂರು: ಸುರೇಶಗೌಡರು ಇಡೀ ರಾಜ್ಯದಲ್ಲೇ ಮಾದರಿ ಶಾಸಕರಂತೆ ಕೆಲಸ ಮಾಡಿದ್ದರು. ಸುರೇಶಗೌಡರು ದ್ರೋಹದಿಂದ, ಮೋಸದಿಂದ ಸೋಲಿಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿದ ಸುರೇಶಗೌಡರನ್ನು ಈ ಸಲ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಮಾಂತರದ ಜನರಿಗೆ ಮನವಿ ಮಾಡಿದರು. ಇಲ್ಲಿ ಸುರೇಶಗೌಡರ ಪರ ಪ್ರಚಾರ ನಡೆಸಿದರು.
ಸುರೇಶ ಗೌಡರನ್ನು ಕಳೆದ ಸಲ ಮೋಸದಿಂದ ಸೋಲಿಸಿದ್ದಾರೆ. ಈ ಸಲ ಅವರನ್ನು ಹಿಂದೂ, ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಗೆಲ್ಲಿಸಬೇಕು. ಎಲ್ಲರೂ ಸೇರಿಕೊಂಡು ಅವರ ಗೆಲುವಿಗೆ ಕೆಲಸ ಮಾಡಬೇಕು. ಅವರಿಗೆ ಮೋಸ ಮಾಡದಂತೆ ನೋಡಿಕೊಳ್ಳಬೇಕು ಎಂದರು.
ಸುರೇಶಗೌಡರು ದೇಶಕ್ಕೆ ಮಾದರಿಯಾದ ಶಾಸಕರು. ಅವರಿಗೆ ಯಾವತ್ತೂ ಮೋಸವಾಗದಂತೆ ಇಲ್ಲಿನ ಜನರೇ ನೋಡಿಕೊಳ್ಳಬೇಕು ಎಂದರು. ಸೇರಿದ್ದ ಸಹಸ್ರಾರು ಜನರು ಸಿಳ್ಳೆ, ಕೇಕೆ ಹೊಡೆದರು.
ಜಿಲ್ಲೆಯ ಅಭಿವೃದ್ಧಿ ಗೆ ಬಿಜೆಪಿ ಸರ್ಕಾರ ಕೊಡುಗೆ ನೀಡಿದೆ. ಮಾಜಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರು, ಸಂಸದ ಜಿ.ಎಸ್.ಬಸವರಾಜ್ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರೆಲ್ಲರ ಆರ್ಶೀವಾದದಿಂದ ಸುರೇಶಗೌಡರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಕರ್ನಾಟಕವನ್ನು ಅಭಿವೃದ್ಧಿಗೊಳಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರುತ್ತೇವೆ ವಾಗ್ದಾನ ಮಾಡಿದರು.
ಮಾಜಿ ಶಾಸಕ ಸುರೇಶಗೌಡರು ಮಾತನಾಡಿ, ಹೊನ್ನುಡಿಕೆ ರಸ್ತೆಗೆ, ನಾಗವಲ್ಲಿ- ಸಿ.ಎಸ್ .ಪುರ ರಸ್ತೆ, ನಾಗವಲ್ಲಿ,ಹೊನ್ನುಡಿಕೆ ಸೇರಿದಂತೆ ಹನ್ನೊಂದು ಪಂಚಾಯತಿಗಳಿಗೆ ನೂರು ಕೋಟಿ ಅನುದಾನದಲ್ಲಿ ಕುಡಿಯುವ ನೀರು ಕೊಟ್ಟಿದ್ದು ಯಡಿಯೂರಪ್ಪನವರು. ಅವರ ಕಾಲದಲ್ಲಿ 2500 ಕೋಟಿ ರೂಪಾಯಿ ಅನುದಾನವನ್ನು ಕ್ಷೇತ್ರಕ್ಕೆ ಕೊಟ್ಟರು ಎಂದು ಸ್ಮರಿಸಿದರು. ಈ ಸಲ ನಮ್ಮದೇ ಸರ್ಕಾರ ಬರಲಿದೆ. ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಪಡಿಸುವೆ. ಹತ್ತು ವರ್ಷದ ಅವಧಿಯಲ್ಲಿ ನಾನೇದರೂ ತಪ್ಪು ಮಾಡಿದ್ರೆ ನಿಮ್ಮ ಕಾಲಿಗೆ ಬೀಳುತ್ತೇನೆ. ನನ್ನನ್ನು ಕ್ಷಮಿಸಿ. ಇಡೀ ಕ್ಷೇತ್ರವನ್ನು ದೇಶವೇ ತಿರುಗಿ ನೋಡುವಂತೆ ಅಭಿವೃದ್ಧಿಪಡಿಸುವೆ ಎಂದು ಭರವಸೆ ನೀಡಿದರು.
ಲಕ್ಷಕ್ಜೂ ಅಧಿಕ ಜನರು ಸೇರಿದ್ದರು. ರಸ್ತೆಯ ಉದ್ದಗಲಕ್ಕೂ ಜನರು ಕಿಕ್ಕಿರಿದು ಸೇರಿದ್ದರು. ಜಾಗ ಸಾಲದೇ ಸಿಕ್ಕಸಿಕ್ಕ ಕಟ್ಟಡ, ಮರಗಳನ್ನು ಏರಿ ಯಡಿಯೂರಪ್ಪ ಅವರತ್ತ ಕೈ ಬೀಸಿದರು.