ತುಮಕೂರು: ಒಕ್ಕಲಿಗ ಸಮುದಾಯ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೆ,ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸುರೇಶಗೌಡ ಅವರನ್ನು ಗೆಲ್ಲಿಸುವಂತೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ
ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಸಮಾವೇಶ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುರೇಶಗೌಡ ಅವರಿಗೆ ಭವಿಷ್ಯದಲ್ಲಿ ಒಳ್ಳೆಯ ನಾಯಕನಾಗಿ ಬೆಳೆಯಲು ಅವಕಾಶವಿದೆ. ಹಾಗಾಗಿ ಅವರ ಬೆನ್ನಿಗೆ ನಿಲ್ಲಬೇಕಿದೆ ಎಂದರು.
ಕರ್ನಾಟಕದ ರಾಜಕಾರಣದಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಮಹತ್ವದ್ದಾಗಿದೆ.ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧ ರಾಜ್ಯದ ಹೆಮ್ಮೆಯ ಪ್ರತೀಕ. ಎಸ್.ಎಂ.ಕೃಷ್ಣ,ಡಿ.ವಿ.ಸದಾನಂದಗೌಡ ರಂತಹ ಹಿರಿಯ ನಾಯಕರು ಮುಖ್ಯಮಂತ್ರಿ ಗಳಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ.ಅವರ ರೀತಿಯಲ್ಲಿಯೇ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಸುರೇಶಗೌಡ ಅವರಲ್ಲಿದ್ದು,ಗ್ರಾಮಾಂತರದ ಮತದಾರರು ಅವರ ಕೈ ಹಿಡಿಯುವಂತೆ ಮುದ್ದಹನುಮೇಗೌಡ ಮನವಿ ಮಾಡಿದರು.
ಮಾಜಿ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಮಾತನಾಡಿ, ನನ್ನ ಹತ್ತು ವರ್ಷಗಳ ಶಾಸಕ ಅವಧಿಯಲ್ಲಿ ಸಮಾಜದ ಘನತೆ ಗೌರವ ವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಒಕ್ಕಲಿಗ ಸಮುದಾಯದ ಜೊತೆಗೆ ಎಲ್ಲಾ ಸಮುದಾಯಗಳಿಗೂ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದೇನೆ ಎಂದರು.
ರೈತರ ಸಂಕಟವನ್ನು ಕಣ್ಣಾರೆ ಕಂಡು ಅದರ ನಿವಾರಣೆಗಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿದ್ಯುತ್ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ರೈತರ ಕಷ್ಟ ಮನವರಿಕೆ ಮಾಡಿಕೊಟ್ಟು ಪ್ರಯೋಗಿಕವಾಗಿ ಪ್ರತಿ ಐಪಿಸೇಟ್ ಗೆ ಒಂದು ಟಿಸಿ ನೀಡುವ ಯೋಜನೆ ತಂದು ಜನರಿಗೆ ಅನುಕೂಲ ಮಾಡಲಾಗಿದೆ.ಇದರ ಫಲವಾಗಿ ನನ್ನಿಂದ ದೂರವಾಗಿದ್ದ ಒಕ್ಕಲಿಗ ಇನ್ನಿತರ ಜಾತಿಯ ಮುಖಂಡರು ನನ್ನೊಂದಿಗೆ ಬಂದಿದ್ದಾರೆ. ಇದು ನನಗೆ ಆನೆ ಬಲ ತಂದುಕೊಟ್ಟಿದೆ.ಯಾರಿಗೂ ಮೋಸ ಮಾಡಿಲ್ಲ.ಈ ಬಾರಿ ನಾನು ಶಾಸಕನಾಗುವಂತೆ ಆಶೀರ್ವದಿಸಿದರೆ, ಗ್ರಾಮಾಂತರ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಅತ್ಯಂತ ಪ್ರಗತಿ ಹೊಂದಿದ ರಾಜ್ಯ ವಾಗಲಿದೆ ಎಂಬ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಒಕ್ಕಲಿಗ ಮುಖಂಡರಾದ ಮಾಸ್ತಿಗೌಡ, ವೈ.ಟಿ.ನಾಗರಾಜು, ಬೆಳಗುಂಬ ಕೆಂಪರಾಜು,ಬೆಳ್ಳಿ ಲೋಕೇಶ್ ಮಾತನಾಡಿದರು ಸಿದ್ದೇಗೌಡ, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ವಿಜಯಕುಮಾರ್, ಮಾಜಿ ಜಿ.ಪಂ ಸದಸ್ಯ ರಾಮೇಗೌಡ, ಬೆಳಗುಂಬ ನರಸಿಂಹಮೂರ್ತಿ, ತಾರಾದೇವಿ, ಹನುಮಂತರಾಜು, ಯೋಗೀಶಗೌಡ,ಪಂಚೆ ರಾಮಚಂದ್ರಪ್ಪ, ದೇವರಾಜು ಸೇರಿದಂತೆ ಹತ್ತಾರು ಮಂದಿ ಪಾಲ್ಗೊಂಡಿದ್ದರು
ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ, ಶ್ರೀ ಬಾಲಗಂಗಾಧರ ನಾಥ್ ಸ್ವಾಮೀಜಿ,ಶ್ರೀ ನಿರ್ಮಲಾನಂದನಾಥಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಗೌರವ ಸಲ್ಲಿಸಲಾಯಿತು. ಅಲ್ಲದೆ ನೇಗಿಲು ಹೋತ್ತು, ಒಕ್ಕಲುತನದ ಹೆಗ್ಗುರುತು ಪ್ರದರ್ಶಿಸಲಾಯಿತು