ತುರುವೇಕೆರೆ: ರಾಹುಲ್ ಗಾಂಧಿ ಕ್ಷೇತ್ರಕ್ಕೆ ಎರಡು ಬಾರಿ ಆಗಮಿಸಿದ್ದಾಗ ಸೇರಿದ್ದ ಜನಸ್ಥೋಮ ನೋಡಿದರೆ ಇಲ್ಲಿ ನಾನು ಗೆಲ್ಲುವುದು ಶತಸಿದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಆಡಳಿತ ಕಂಡು ಬೇಸತ್ತು ಹೋಗಿದ್ದಾರೆ ಎಂದರು.
ರಾಜ್ಯದ ಜನತೆ ಬದಲಾವಣೆಯನ್ನು ಬಯಸಿದ್ದು ಇದ್ದಕ್ಕೆ ಕಾಂಗ್ರೆಸ್‍ನ ಜನಪರ ಯೋಜನೆಗಳೇ ಕಾರಣ. ರಾಹುಲ್ ಗಾಂಧಿಯವರ ಉತ್ಸಾಹ ಕಂಡು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹುರುಪು ಬಂದಿದ್ದು ತಾಲ್ಲೂಕಿನಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಕಾಂತರಾಜು ಬಿ.ಎಂ ಅವರು ಜೆಡಿಎಸ್ಗೆ ವೋಟು ಹಾಕಿ ಎಂದಿದ್ದಾರೆಂಬ ತಿರುಚಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಪಕ್ಷದ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾವ ಅಭ್ಯರ್ಥಿಯೂ ತನಗೆ ವೋಟಿ ಕೊಡಿ ಎಂದು ಕೇಳುವುದು ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ವೋಟಾಕಿ ಎಂದು ಹೇಳಲು ಸಾದ್ಯವಿದೆಯೇ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸುವವರು ಗೆಲ್ಲುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಹಿಂದೆ ಕಾಂಗ್ರೆಸ್‍ನಲ್ಲಿ ತಾಳ್ಕೆರೆ ಸುಬ್ರಹ್ಮಣ್ಯ, ಬಿ.ಭೈರಪ್ಪಾಜಿ, ಎಸ್.ರುದ್ರಪ್ಪ ಇವರೆಲ್ಲಾ ಮೊದಲ ಬಾರಿಗೆ ಗೆದ್ದಿದ್ದು ಅದರಂತೆ ನಾನೂ ಕೂಡ 25 ಸಾವಿರ ಮತಗಳಿಂದ ಗೆಲ್ಲಲಿದ್ದೇನೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಕಮಿಷನ್, ಕಳಪೆ ಕಾಮಗಾರಿ ಮಾಡುತ್ತಾ, ಕೇವಲ ಸ್ಟಾರ್ ಮುಖಂಡರನ್ನು ಕರೆತಂದು ಕ್ಷೇತ್ರದಲ್ಲಿ ಮತಪ್ರಚಾರ ಮಾಡುತ್ತಿದ್ದಾರೆ. ಈ ಆಟ ನಡೆಯದು. ಅದರಲ್ಲೂ ಬಿಜೆಪಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ವಿಫಲವಾಗಿದೆ. ಹಾಲಿ ಬಿಜೆಪಿ ಶಾಸಕರು ಕೊಬರಿ ಬಗ್ಗೆ ಮಾತಾಡಲಿ ನಂತರ ಪ್ರಚಾರ ಮಾಡಲಿ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ 150 ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ ಎಂದು ಭರವಸೆ ತೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕ್ಷೇತ್ರಕ್ಕೆ ಬಂದು ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಪರ ಪ್ರಚಾರ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಮುಖಂಡರು, ಕಾರ್ಯಕರ್ತರಿಗೂ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ, ನಾಗೇಶ್, ಮಾಜಿ ಅಧ್ಯಕ್ಷ ಮಾಳೆಕೃಷ್ಣಪ್ಪ, ಮುಖಂಡರುಗಳಾದ ಹನುಮಂತಯ್ಯ, ನಂಜುಂಡಯ್ಯ, ಕೊಳಾಲನಾಗರಾಜು, ತ್ರೈಲೋಕ್ಯನಾಥ್, ದಂಡಿನಶಿವರಕುಮಾರ್, ಶತೃಘ್ನ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.