ತುಮಕೂರು- ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ. ಹಾಗಾಗಿ ನುಡಿದಂತೆ ನಡೆಯುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಹೇಳಿದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಸುರೇಶ್‍ಬಾಬು ಪರ ಮತಯಾಚಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಶಕ್ತಿ ತುಂಬುತ್ತೇನೆ ಅಂತ ಹೇಳುತ್ತಾರೆ. ಆದರೆ ಅವರು ನುಡಿದಂತೆ ಮೋದಿ ನಡೆಯುವುದಿಲ್ಲ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ನಾವು. ಈಗಾಗಲೇ ನಾನು ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡುವಂತೆ ಪತ್ರ ಬರೆದಿದ್ದೇನೆ. ಯಾವುದೇ ಒಂದು ಸಮಾಜಕ್ಕೆ ದೇವೇಗೌಡರಿಂದ ಅನ್ಯಾಯವಾಗಿಲ್ಲ ಎಂದು ಹೇಳಿದರು
ಸಕ್ರಿಯವಾಗಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿದ್ದೆ. ಆದರೆ ನಾನು ನನ್ನ ಅಳಿಯನಿಗೆ ಟಿಕೆಟ್ ಕೇಳಿದೆ, ಆದರೆ ನನ್ನ ಮನವಿ ಸ್ಪಂದಿಸದೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು ಜಾತ್ಯಾತೀತ ನಿಲುವುಳ್ಳ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಡವರು, ರೈತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಹಿತ ಕಾಪಾಡಲು ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಣಾಳಿಕೆಯಲ್ಲಿರುವ ಅಂಶಗಳು ಜಾರಿಗೆ ಬರಬೇಕಾದರೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ಅಭ್ಯರ್ಥಿ ಸುರೇಶ್‍ಬಾಬು ಅವರು ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸದಾ ಬಡವರ ಪರವಾಗಿಯೇ ಕೆಲಸ ಮಾಡುತ್ತಾರೆ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಯನ್ನು ಈ ಬಾರಿ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವದಿಸಬೇಕು ಎಂದರು.
ಅಭ್ಯರ್ಥಿ ಸಿ.ಬಿ. ಸುರೇಶ್‍ಬಾಬು ಮಾತನಾಡಿ, ನನ್ನ ತಂದೆ ತೀರಿ ಹೋದಾಗ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ರಾಜಕೀಯಕ್ಕೆ ಕರೆ ತಂದರು ಎಂದರು.
ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಋಣವನ್ನು ತೀರಿಸಲು ಕ್ಷೇತ್ರದ ಜನತೆ ನನಗೆ ಮತ್ತೊಂದು ಬಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬಡವರ ನಾಡಿ ಮಿಡಿತವನ್ನು ದೇವೇಗೌಡರು, ಕುಮಾರಸ್ವಾಮಿ ಅವರು ಅರಿತಿದ್ದಾರೆ. ಹಾಗಾಗಿ ಅವರು ಸದಾ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದರು.
ಜಾತ್ಯಾತೀತ ಹೆಸರಿಗೆ ತಕ್ಕಂತೆ ನಮ್ಮ ಪಕ್ಷದಲ್ಲಿ ಎಲ್ಲ ಜಾತಿ, ವರ್ಗದವರು ಇದ್ದಾರೆ. ಎಲ್ಲ ವರ್ಗ, ಸಮುದಾಯದ ಏಳ್ಗೆಯನ್ನು ಜೆಡಿಎಸ್ ಪಕ್ಷ ಬಯಸುತ್ತದೆ. ಇದಕ್ಕೆ ಬದ್ಧವಾಗಿ ಸದಾ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಕಿರಣ್‍ಕುಮಾರ್ ಮನೆಯಲ್ಲಿ ಸಾವರ್ಕರ್ ಫೆÇೀಟೋ ಇದೆ. ಡಿ.ಕೆ. ಶಿವಕುಮಾರ್ ಬಂದರೆ ಅವರ ತಲೆಗೆ ಕೇಸರಿ ಪೇಟೆ ತೊಡಿಸುತ್ತಾರೆ. ಇವರು ಚುನಾವಣೆಯಾದ ಬಳಿಕ ಎಲ್ಲಿ ಇರುತ್ತಾರೆ ಎಂಬುದು ಗೊತ್ತಿಲ್ಲ. ಹಾಗಾಗಿ ಇವರ ಮಾತುಗಳಿಗೆ ಜನತೆ ಮರುಳಾಗಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಹದೇವಯ್ಯ, ಜಯಪ್ರಕಾಶ್, ರಾಜಕುಮಾರ್, ರಾಮಚಂದ್ರಯ್ಯ, ಪಾವಗಡ ಶ್ರೀರಾಮ್, ಸೋಲಾರ್ ಕೃಷ್ಣಮೂರ್ತಿ, ಹರ್ಷ, ಪುಷ್ಪಾ, ನಗ್ಮಾ, ಕಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.