Thursday, March 12, 2026
Google search engine
Home Blog Page 70

ತುಮಕೂರು ವಿವಿಯಲ್ಲಿ‌ ನಾಳೆ ವಿಶಿಷ್ಟ ಜನಪದ‌ ಕ್ರೀಡಾಕೂಟ

Publicstory/Prajayoga

ತುಮಕೂರು: ವಿವಿ ಆವರಣದಲ್ಲಿ ವಿಶ್ವ ಜನಪದ ದಿನಾಚರಣೆ ಪ್ರಯುಕ್ತ ಡಾ.ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜನಪದ ಕ್ರೀಡಾಕೂಟವನ್ನು‌ (ಸೆ.6ರ) ನಾಳೆ ಬೆಳಿಗ್ಗೆ 9 ಗಂಟೆಗೆ‌ ಎರ್ಪಡಿಸಲಾಗಿದೆ. ವೀರಗಾಸೆ ಪ್ರದರ್ಶನ ಹಾಗೂ ಸಿದ್ಧರಾಜು ತಂಡದಿಂದ ಜನಪದ ಗೀತೆ ಗಾಯನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಸೀ ಕ್ರೀಡೆಗಳಾದ ಲಗೋರಿ, ಚಿನ್ನಿದಾಂಡು, ಕಣ್ಣಮುಚ್ಚಾಲೆ, ಆಣೆಕಲ್ಲು, ಬುಗುರಿ, ಚೌಕಾಬಾರ, ಅಳಗುಳಿ ಮನೆ, ಹಗ್ಗ ಜಗ್ಗಾಟ, ಮರಕೋತಿ, ಹಾವುಏಣಿ, ಕುಂಟೆಬಿಲ್ಲೆ ಸೇರಿದಂತೆ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರಿಯಾಶೀಲ‌ ಚಟುವಟಿಕೆಯಲ್ಲಿರುವ ತುಮಕೂರು ವಿವಿ ಡಾ.ಡಿವಿ ಗುಂಡಪ್ಪ ಕನ್ನಡ‌ ಅಧ್ಯಯನ ಕೇಂದ್ರ ಜನಪದ ಕ್ರೀಡಾ ಕೂಟ ಆಯೋಜನೆ ಮಾಡುವ ಮೂಲಕ ಗಮನಸೆಳೆದಿದೆ.

ಆಧುನಿಕತೆಯ ಭರಾಟೆಯಿಂದ ಜನಪದ ಸಂಗೀತ, ಕಲೆ ಮತ್ತು ಆಟಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕ್ರೀಡಾಕೂಟವನ್ನು ಆಯೋಜನೆ‌ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹಳ್ಳಿ ಆಟಗಳ ಸೊಬಗನ್ನು ಪರಿಚಯಿಸಲು ವಿವಿ ಮುಂದಾಗಿದೆ ಎಂದು ತುಮಕೂರು ವಿವಿಯ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕರು ಡಾ.ಪಿ.ಎಂ.ಗಂಗಾಧರಯ್ಯ ತಿಳಿಸಿದ್ದಾರೆ.

ಸರ್ವ ಧರ್ಮೀಯರಿಂದ ಗಣೇಶ ಚತುರ್ಥಿ ಆಚರಣೆ

Publicstory/prajayoga

ಗೂಳೂರು: ಹೋಬಳಿಯ ಕೊಂಡಾಪುರ ಗೋಮಾಳದಲ್ಲಿ (ಕೆ.ಲಕ್ಕಪ್ಪನಗರ) ಐದನೆಯ ದಿನವಾದ ಭಾನುವಾರ ಸಂಜೆ ಗಣೇಶ ಮೂರ್ತಿಯನ್ನು ಅದ್ದೂರಿ ವಿಸರ್ಜನೆ ಮಾಡಲಾಯಿತು.

ಗ್ರಾಪಂ ಸದಸ್ಯ ವೆಂಕಟೇಶ್ ಅವರ ನೇತೃತ್ವದಲ್ಲಿ ಪೂಜೆ ವಿಧಿ ವಿಧಾನಗಳೊಂದಿಗೆ ಗಣೇಶ ಮೂರ್ತಿ ಮೆರವಣಿಗೆ ಟ್ರ್ಯಾಕ್ಟರ್ ಮೂಲಕ ಪ್ರಾರಂಭವಾಗಿ ಜಿಲ್ಲಾಡಳಿತದ ಸೂಚನೆಯೊಂದಿಗೆ ಕೊಂಡಾಪುರ ಕೆರೆಯಲ್ಲಿ ಅಂತ್ಯವಾಯಿತು.

ಗೋಮಾಳವು, ಗ್ರಾಮವಾಗಿ ಪರಿವರ್ತನೆಗೊಂಡು ಸುಮಾರು ಇಪತ್ತಕ್ಕಿಂತಲೂ ಅಧಿಕ ವರ್ಷಗಳು ಕಳೆದಿದ್ದರೂ ಇಷ್ಟು ಜನರು ಸೇರಿರಲಿಲ್ಲ.  ಮಹಿಳೆಯರು ಗಣೇಶ ಚತುರ್ಥಿ ವೇಳೆ ದೇವಸ್ಥಾನಕ್ಕಷ್ಟೇ ಬರುತ್ತಿದ್ದರು. ಈ ಸಲ ಮೆರವಣಿಗೆಯೊಂದಿಗೆ ಸಾಗಿದರು ಹಾಗೂ ಯುವ ಮಹಿಳಾ ಮಣಿಗಳು ಹಾಡಿಗೆ ಹೆಜ್ಜೆ ಹಾಕಿದ್ದು ಅಚ್ಚರಿಯನ್ನುಂಟು ಮಾಡಿತು. ನಿಜಕ್ಕೂ ಇದು ಯಶಸ್ವಿ ಆಚರಣೆ. ಗಣೇಶ ಹಬ್ಬಕ್ಕೆ ಪ್ರತೀ ಮನೆಯಿಂದಲೂ ಹಣ ಸಂಗ್ರಹ ಮಾಡಿ ಸಾಮೂಹಿಕವಾಗಿ  ಆಚರಣೆ ಮಾಡಿದ್ದೇವೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ‌ ನೀಡಿದರು.

___________________________________________

ಪ್ರತೀ ವರ್ಷ ಹಿಂದೂಗಳಿಗೆ ಮಾತ್ರವೇ ಸೀಮಿತವಾಗುತ್ತಿದ್ದ ಗಣೇಶ ಚತುರ್ಥಿ ಈ ಬಾರಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮದವರು ಸೇರಿ ಆಚರಣೆ ಮಾಡಿ, ಗ್ರಾಮವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸಿದ್ದೇವೆ. ನಾವೆಲ್ಲರೂ ಒಮ್ಮತದಿಂದ ಸಾಗಬೇಕಿದೆ. ಅದಕ್ಕಾಗಿಯೇ ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಣೇಶೋತ್ಸವವನ್ನು ಸಾರ್ವತ್ರೀಕರಣಗೊಳಿಸಿದರು. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಸಹಭಾಗಿತ್ವ ಅತಿ ಮುಖ್ಯ. ಅದಕ್ಕೆ ಸಾಕ್ಷಿಯಾಗಿ ಜಾತಿ ಧರ್ಮದ ಗೋಡೆಗಳನ್ನು ಮೀರಿ ಹಬ್ಬ ಆಚರಣೆ ಮಾಡಿದ್ದೇವೆ. ನಮ್ಮೂರಿನ ಸಮಸ್ತ ಜವಾಬ್ದಾರಿ ನನ್ನ ಮೇಲಿದೆ. ಜನರ ಕಷ್ಟ ಸುಖಗಳನ್ನು ಆಲಿಸುವುದೇ‌ ನನ್ನ ನಿತ್ಯದ ಕಾಯಕ. ಆದ್ದರಿಂದ ಈ ವೇಳೆ ಯಾವುದೇ ಅಡಚಣೆಯಾಗದಂತೆ ಸಕಲ ಸೌಕಭ್ಯಗಳನ್ನು ಒದಗಿಸಿ ಸಹಕರಿಸಿದ್ದೇನೆ. ಇದು ನಮ್ಮ ಕರ್ತವ್ಯವಷ್ಟೆ.

ವೆಂಕಟೇಶ್, ಕೆ.ಲಕ್ಕಪ್ಪನಗರ, ಜೆಡಿಎಸ್ ಮುಖಂಡರು ಹಾಗೂ ಗ್ರಾಪಂ ಸದಸ್ಯರು,ಹೆತ್ತೇನಹಳ್ಳಿ.

___________________________________________

ತಂಗಿಯ‌ ನೆನಪಿನಲ್ಲಿ ಬಾಗಿನ ಅರ್ಪಿಸುವ ನರಸಿಂಹಮೂರ್ತಿ

0

Publicstory/Prajayoga

ವರದಿ, ಸಿರಾಜ್ ಅಹಮದ್ ಕೆ ಎ

ಕೊಡಿಗೇನಹಳ್ಳಿ: ತಂಗಿಯ ನೆನಪು ಮರೆಯಲಾಗದೆ ನೆನಪಿಗಾಗಿ ಇಡೀ ಗ್ರಾಮದ ಮಹಿಳೆಯರಿಗೆ ಗೌರಿ ಬಾಗಿನ ನೀಡುವ ಮೂಲಕ ಅಣ್ಣ ತಂಗಿ ಸಂಬಂಧಕ್ಕೆ ಇಲ್ಲೊಬ್ಬರು ನೀರೆರರೆದಿದ್ದಾರೆ.

ಹೌದು ಹೊಬಳಿಯ ದೊಡ್ಡಮಾಲೂರು ಗ್ರಾಮದ ನರಸಿಂಹಮೂರ್ತಿ ಕೃಷಿಕರಾಗಿದ್ದು, ಕಳೆದ 8 ವರ್ಷಗಳ ಹಿಂದೆ ತಂಗಿ ವಿಶಾಲಾಕ್ಷಿ ಅನಾರೋಗ್ಯದ ಕಾರಣ ಮೃಪಟ್ಟಿದ್ದರು. ತನ್ನ ತಂಗಿಯ ನೆನಪು ಮರೆಯಬಾರದೆಂದು ಪ್ರತಿ ವರ್ಷ ಗೌರಿ ಗಣೇಶ ಹಬ್ಬದಂದು ಇಡೀ ಗ್ರಾಮದ ಮಹಿಳೆಯರಿಗೆ ಗೌರಿ ಬಾಗಿನ ನೀಡುವ ಮೂಲಕ ತನ್ನ ತಂಗಿಯನ್ನು ಕಾಣುತ್ತಿದ್ದಾರೆ.

ಈ ವೇಳೆ ಮಾತನಾಡಿದ ನರಸಿಂಹಮೂರ್ತಿ, ನನಗೆ ದೇವರು ಬೇಕಾದದ್ದು ಕೊಟ್ಟಿದ್ದಾನೆ. ಆದರೆ, ಇದೀಗಾ ನನಗೆ ಈ ಗ್ರಾಮಸ್ಥರೇ ಅಕ್ಕ ತಂಗಿ. ಕಳೆದ ವರ್ಷಗಳಿಂದ ಗೌರಿ ಬಾಗಿನ ನೀಡುವುದು ರೂಢಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲೂ ಇದನ್ನು ಮುಂದುವರೆಸುತ್ತೇನೆ ಎಂದರು.

___________________________________________

ಇವರು ಯಾವುದೇ ರಾಜಕೀಯವಾಗಲಿ, ರಾಜಕೀಯ ಲಾಭಕ್ಕಾಗಿ ಗೌರಿ ಬಾಗಿನ ನೀಡುತ್ತಿಲ್ಲ. ತನ್ನ ತಂಗಿಯ ಸವಿನೆನಪಿಗಾಗಿ ಇಂತಹ ಕಾರ್ಯ ಮಾಡುತ್ತಿದ್ದಾರೆ. ಇವರ ಅಣ್ಣ ತಂಗಿಯ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಪಟೇಲ್ ಸಂಜೀವ್ ಗೌಡ, ಅಧ್ಯಕ್ಷ
ದೊಡ್ಡಮಾಲೂರು ಹಾಲು ಉತ್ಪಾದಕರ ಸಹಕಾರ ಸಂಘ

___________________________________________

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ  ಹನುಮಂತರಾಯ, ಗ್ರಾಪಂ ಹಾಲಿ ಸದಸ್ಯ ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಲಿಂಗಪ್ಪ,  ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟಪ್ಪ, ಎಸ್ಡಿಎಂಸಿ ಅಧ್ಯಕ್ಷ  ರಾಮಂಜಿ. ಮಾಜಿ ಸದಸ್ಯ ಎಲ್ಲಪ್ಪ, ಗಂಗಪ್ಪ, ಆನಂದ್, ಈರಣ್ಣ, ರಾಮಪ್ಪ ಹಾಜರಿದ್ದರು.

ಸೌಲಭ್ಯಗಳು ನಕಲಿ ಕಾರ್ಮಿಕರ ಪಾಲು : ಆರೋಪ

0

Publicstory/Prajayoga

ವರದಿ, ಕೆ.ಸಿ.ಪ್ರತಾಪ್‌ ಗೌಡ

ಕುಣಿಗಲ್ : ನಕಲಿ ಕಾರ್ಮಿಕರ ಹಾವಳಿ : ನಕಲಿ ಕಾರ್ಮಿಕರು ನಕಲಿ ಕಾರ್ಡ್ಗಳನ್ನು ಪಡೆದು ಸರ್ಕಾರದ ಸೌಲಭ್ಯ ಲಪಟಾಯಿಸುತ್ತಿದ್ದಾರೆ, ಇದರಿಂದ ಅರ್ಹ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಕಾರ್ಮಿಕ ಸಂಘ ರಾಜ್ಯಾಧ್ಯಕ್ಷ ಕೆ.ಎಸ್.ವೆಂಕಟಸುಬ್ಬಯ್ಯ ಆರೋಪಿಸಿದರು.

ಭಾನುವಾರ ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಮಿಕ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ  ಅರಿವು ಮತ್ತು ನೆರವು ಹಾಗೂ ನಾಯಕತ್ವ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರ ವಿವಿಧ ಸೌಲಭ್ಯಗಳು ನೀಡುತ್ತಿದೆ, ಈ ಸೌಲಭ್ಯ ಅರ್ಹ ಕಾರ್ಮಿಕರಿಗೆ ಸಿಗದೇ, ನಕಲಿ ಕಾರ್ಮಿಕರ ಪಾಲಾಗುತ್ತಿದೆ. ಇದನ್ನು ಹತ್ತಿಕುವಂತ ಕೆಲಸ ಕಾರ್ಮಿಕ ಇಲಾಖೆ ಮಾಡಬೇಕೆಂದು  ಆಗ್ರಪಡಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳು:

ಸರ್ಕಾರ ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು 2006 ರಲ್ಲಿ ಕಾರ್ಮಿಕ ಕಲ್ಯಾಣ ಮಂಡಲಿಯನ್ನು ಸ್ಥಾಪನೆ ಮಾಡಿ ಆ ಮೂಲಕ ಕಟ್ಟಡ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯ, ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ, ಮನೆ ಖರೀದಿ, ಮನೆ ಕಟ್ಟಲು ಸಹಾಯ ಧನ, ಎರಡು ಲಕ್ಷದವರೆಗೆ ಮುಂಗಡ ಸಾಲಸೌಲಭ್ಯ, ಹೆರಿಗೆ ಸೌಲಭ್ಯ, ಮಹಿಳಾ ಫಲಾನುಭವಿಯ ಮೊದಲು ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ 30 ಸಾವಿರ ಹಾಗೂ ಗಂಡು ಮಗುವಿನ ಜನನಕ್ಕೆ 20 ಸಾವಿರ, ಶಿಶುಪಾಲನ ಸೌಲಭ್ಯ, ಅಂತ್ಯಕ್ರಿಯೆಗೆ ನಾಲ್ಕು ಸಾವಿರ ಹಾಗೂ ಎಕ್ಸ್ಗ್ರೀಷಿಯಾ ರೂ 50 ಸಾವಿರ ಸಹಾಯಧನ, ವೈದ್ಯಕೀಯ ಸಹಾಯಧನ, ನೊಂದಾಯಿತ ಫಲಾನುಭವಿ ಹಾಗೂ ಅವರ ಅವಲಭಿತರಿಗೆ 300 ರಿಂದ 10 ಸಾವಿರ ಅವಘಡ ಪರಿಹಾರ, ಮರಣ ಹೊಂದಿದಲ್ಲಿ ಐದು ಲಕ್ಷ, ಶಾಶ್ವತ ದುರ್ಬಲತೆಯಾದಲ್ಲಿ ಎರಡು ಲಕ್ಷ ಮತ್ತು ಭಾಗಶಃ ದುರ್ಬಲತೆಯಾದಲ್ಲಿ ಒಂದು ಲಕ್ಷ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ, ಶಸ್ತ್ರಚಿಕಿತ್ಸೆಗಳಿಗೆ ಎರಡು ಲಕ್ಷ, ಮಧುವೆ ಸಹಾಯಧನ, ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮಧುವೆಗೆ ತಲಾ 50 ಸಾವಿರ,  ಎಲ್ಪಿಜಿ ಸಂಪರ್ಕ, ತಾಯಿ, ಮಗು ಸಹಾಯಹಸ್ತ, ಕನ್ನಡಕ, ಶ್ರವಣಯಂತ್ರ, ಕೃತಕ ಕೈ ಕಾಲು ಮತ್ತು ಗಾಲಿ ಖುರ್ಚಿ, ಕೆಎಸ್ಆರ್ಟಿಸಿ ಬಸ್ ಪಾಸ್ ಸೌಲಭ್ಯಗಳಿರುತ್ತವೆ ಎಂದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೊಂದಣಿಯಾಗಲು ಮತ್ತು ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ, ಈ ಸೌಲಭ್ಯವನ್ನು ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಕಾರ್ಮಿಕ ಸಂಘದ ರಾಜ್ಯ ಕಾರ್ಯಧ್ಯಕ್ಷೆ ಜಿ.ಶೃತಿ ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಲಿಗೆ ಸಂಪನ್ಮೂಲ ಕ್ರೂಡೀಕರಿಸುವ ನಿಟ್ಟಿನಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣಗಾರರು ಹಾಗೂ ನಿಯೋಜಕರಿಂದ ನಿರ್ಮಾಣದ ವೆಚ್ಚದ ಮೇಲೆ ಶೇ 1ರಷ್ಟು ಶುಲ್ಕವನ್ನು ಸಂಗ್ರಹಣ ಮಾಡಲು ಕೇಂದ್ರ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಜಾರಿಗೆ ತಂದಿದ್ದು ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚದ ಹತ್ತು ಲಕ್ಷದ ಮೇಲ್ಪಟ್ಟ ಕಾಮಗಾರಿಯ ವೆಚ್ಚಕ್ಕೆ ಶೇ 1 ರಷ್ಟು ದರವನ್ನು ಸುಂಕವೆಂದು ಕೇಂದ್ರ ಸರ್ಕಾರ ನಿಗಧಿ ಪಡಿಸಿದೆ. ಒಬ್ಬ ಅರ್ಹ ಫಲಾನುಭವಿಯು ನೊಂದಣಿ ಮಾಡಿಕೊಳ್ಳಬೇಕಾದರೆ ವರ್ಷದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿರಬೇಕು, 18 ರಿಂದ 60 ವರ್ಷದೊಳಗಿನ ವಯೋಮಿತಿಯಾಗಿರಬೇಕು ಎಂದು ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ನರಸಿಂಹರಾಜು, ತಾಲೂಕು ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಸುರೇಶ್, ಮಂಡ್ಯ, ಚಿತ್ರದುರ್ಗ, ತುರುವೇಕೆರೆ, ಶಿರಾ ತುಮಕೂರು ಅಧ್ಯಕ್ಷರಾದ ಪರಮೇಶ್, ಮಾರುತಿ, ಕೆ.ಸಿ.ಪುಟ್ಟರಾಜು, ರಾಮಕ್ಕ, ವಿಜಯಕುಮಾರ್, ಮಂಜುಳ, ಎಸ್.ರವಿಕುಮಾರ್ ಮತ್ತಿತರರು ಇದ್ದರು.

ಮಕ್ಕಳನ್ನು ಕರೆತಂದ ಶಿಕ್ಷಕರ ಕೊರಳಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಗರಿ

ತುರುವೇಕೆರೆ: ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಶಿಕ್ಷಣ, ವ್ಯಕ್ತಿ ವಿಕಸನ ಹಾಗು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ತಾಲ್ಲೂಕಿನ ಮೂವರು ಶಿಕ್ಷಕರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿಕ್ಷಕ ಸಮುದಾಯ ಅಭಿನಂಧಿಸಿದೆ.

ತಾಲ್ಲೂಕಿನ ಬಾಣಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ ಅವರು ಶಾಲೆಯಲ್ಲಿ ಮಕ್ಕಳ ಗೈರು ಹಾಜರಿಯನ್ನು ತಪ್ಪಿಸಿ ಮಕ್ಕಳ ದಾಖಲಾತಿ ಸಂಖ್ಯೆ ದ್ವಿಗುಣಗೊಳಿಸಿದರು.

ಪೋಷಕರ ಮನವೊಲಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದರು. ಖಾಸಗಿ ಶಾಲೆಗೆ ಹೋಗದಂತೆ ಸರ್ಕಾರಿ ಶಾಲೆಯಲ್ಲೇ ಆಂಗ್ಲಭಾಷೆ ಶಾಲೆ ತೆರೆದರು.

50 ಸಾವಿರ ವೆಚ್ಚದಲ್ಲಿ ಗ್ರಂಥಾಲಯ ತೆರೆದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ ಮಕ್ಕಳಿಗೆ ಪ್ರಾರ್ಥನಾ ಮಂದಿರ, ಊಟದ ಹಾಲು, ಶಾಲಾ ಆವರಣದಲ್ಲಿ ಗಿಡ ನೆಡುವುದು ಹೀಗೆ ಅನೇಕ ಸಾಧನ ಮಾಡಿದ್ದಾರೆ.

ತಾಲ್ಲೂಕಿನ ದೇವಿಹಳ್ಳಿಯ ಕಿರಿಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕಿ ವೈ.ಜಿ.ವನಜಾಕ್ಷಿ ಕಳೆದ ಮೂವತ್ತು ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಾ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದಾರೆ.

ವರ್ಣಮಯ ಪ್ಲಾಶ್ ಕಾರ್ಡ್, ಟಿ.ಎಲ್.ಎಂ, ದೂರದರ್ಶನ, ಮೊಬೈಲ್ ಆಡಿಯೋ, ವಿಡಿಯೋ ಬಳಸಿ ಬೋಧನೆ, ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಭಾ ಕಾರಂಜಿ, ಕ್ರೀಡಾಕೂಟ ಮತ್ತು ಯೋಗಾಭ್ಯಾಸಗಳ ಪಠ್ಯೇತರ ಚಟುವಟಿಕೆ ಮೂಲಕ ಕಲಿಕಾ ಮಾಡುತ್ತಿದ್ದಾರೆ.

ಶಾಲಾ ಆವರಣದಲ್ಲಿ ಕೈತೋಟ, ತಾಲ್ಲೂಕಿನ ಉತ್ತಮ ನಲಿಕಲಿ ಶಾಲೆ ಎಂಬ ಹೆಸರು ಪಡೆದುಕೊಂಡಿದ್ದು ವಿವಿಧ ಸಂಘ ಸಂಸ್ಥೆಗಳಿಂದ ಪುರಸ್ಕಾರ ಸಹ ಪಡೆದಿದ್ದಾರೆ.

ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆ ಮುಗಳೂರಿನ ಹಿಂದಿ ಶಿಕ್ಷಕಿ ಕಮಲಾಕ್ಷಿ ಆರಂಭದಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಆನಂತರ ಕ್ಷೇತ್ರ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಇಸಿಒ ಆಗಿ ಕಾರ್ಯ ನಿರ್ವಹಿಸಿ 2009ರಲ್ಲಿ ಪ್ರೌಢ ಶಾಲಾ ಶಿಕ್ಷಕಿಯಾಗಿ ಬಡ್ತಿ ಹೊಂದಿದರು.

ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆಯನ್ನು ಉಂಟು ಮಾಡಲು ತಮ್ಮ ಬೋಧನೆಯಲ್ಲಿನ ವಿನೂತ ಬೋಧನಾ ತಂತ್ರಗಳನ್ನುಅಳವಡಿಸಿಕೊಂಡು ಹಿಂದಿ ವಿಷಯದಲ್ಲಿ ಶೇ ನೂರಷ್ಟು ಫಲಿತಾಂಶ ತರಲು ಶ್ರಮಿಸಿದ್ದಾರೆ.
ತಮ್ಮ ಮಕ್ಕಳಿಗೆ ‘ಸಿರಿಗನ್ನಡ’ ಪರೀಕ್ಷೆ ತರಬೇತಿ ನೀಡಿದ್ದರಿಂದ 2006ರಲ್ಲಿ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಅಭಿನಂಧನಾ ಪತ್ರ ಪಡೆದಿದ್ದಾರೆ. ತುಮಕೂರು ಸಾಕ್ಷರ ಮಿತ್ರಾ ವತಿಯಿಂದ ಆರೋಗ್ಯ ಸೇವಾ ಕಾರ್ಯಕ್ರಮದಡಿ ತಾಲ್ಲೂಕಿನ ಪ್ರೌಢ ಶಾಲಾ ಹೆಣ್ಣು ಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಲಾಗಿದೆ. ಕುವೆಂಪು ಸಮುದಾಯ ಪ್ರಗತಿ ಟ್ರಸ್ಟ್ ಬೆಂಗಳೂರು ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾತ್ಮಕ ಕೆಲಸ ಮಾಡಿದ್ದಾರೆ. ಉತ್ತಮ ಶಿಕ್ಷಣ ಸಂಯೋಜಕರ ಪ್ರಶಸ್ತಿ ಪಡೆದಿದ್ದಾರೆ. ಹಿಂದಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಕೆಲಸ ಮಾಡಿದ್ದಾರೆ. ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಗೆ ಮೆರುಗು ತಂದಿವೆ.

ಬಿಜೆಪಿ ಸೇರಿದ ಮುದ್ದಹನುಮೇಗೌಡ

0

Publicstory/prajayoga


ತುಮಕೂರು: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಅಧಿಕೃತವಾಗಿ ಬಿಜೆಪಿ ಸೇರಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು ಕಮಲ ಪಾಳೆಯ ಸೇರಿಕೊಂಡರು.

ಮುದ್ದಹನುಮೇಗೌಡ ಅವರು ಬಿಜೆಪಿ ಸೇರುವ ಮೂಲಕ ಜಿಲ್ಲೆಯಲ್ಲಿ ಕಮಲ ಪಾಳೆಯ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಒಕ್ಕಲಿಗ ಮತ ಬುಟ್ಟಿಯನ್ನು ಬಿಜೆಪಿ ಹೆಚ್ಚಿಸಿಕೊಂಡಂತಾಗಿದೆ‌.

ಮಾಜಿ ಶಾಸಕ ಬಿ.ಸುರೇಶ್ ಗೌಡ, ಮುದ್ದಹನುಮೇಗೌಡ ಜೋಡಿ ಜಿಲ್ಲೆಯಲ್ಲಿ ಒಕ್ಕಲಿಗರನ್ನು ಬಿಜೆಪಿಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಬಲ ಬರಲಿದೆ ಎಂಬ ಲೆಕ್ಕಾಚಾರ ಕಮಲ ಪಾಳೆಯದಲ್ಲಿದೆ.

ಕುಣಿಗಲ್ ನಿಂದ ಸ್ಪರ್ಧೆ; ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುದ್ದಹನುಮೇಗೌಡ ಅವರನ್ನು ಸ್ಪರ್ಧೆಗೆ ಇಳಿಸಲು ಬಿಜೆಪಿ ಮೊದಲಿಗೆ ಪ್ರಯತ್ನ ನಡೆಸಿತ್ತು. ಆದರೆ ವಿಧಾನಸಭೆ‌ಗೆ ಕುಣಿಗಲ್ ನಿಂದ ಸ್ಪರ್ಧಿಸಲು ಎಸ್ ಪಿಎಂ ಆಸಕ್ತಿ ತೋರಿರುವುದರಿಂದ ಅವರಿಗೆ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಖಾತರಿಯಾಗಿದೆ.

ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ತೊರೆಯುವುದಾಗಿ ಈಚೆಗಷ್ಟೇ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಹೇಳಿದ್ದರು. ಅಲ್ಲದೇ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ದೇವೇಗೌಡ ಅವರಿಗೆ ಬೆಂಬಲ ನೀಡಿತ್ತು. ರಾಜ್ಯಸಭಾ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಅದರಂತೆ ಕಾಂಗ್ರೆಸ್ ನಡೆದುಕೊಳ್ಳದ ಕಾರಣ ಅಸಮಾಧಾನಗೊಂಡಿದ್ದರು.

ರಫೀಕ್ ನಿರಾಳ; ಮುದ್ದಹನುನೇಗೌಡ ಬಿಜೆಪಿ ಸೇರ್ಪಡೆ ತುಮಕೂರು ನಗರದ ಮಾಜಿ ಶಾಸಕ ರಫೀಕ್ ಅಹ್ಮದ್ ಅವರನ್ನು ನಿರಾಳಗೊಳಿಸಿದೆ.

ಎಸ್ ಪಿಎಂ ಅವರನ್ನು ತುಮಕೂರು ನಗರ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಆದರೆ ಇದಕ್ಕೆ ಎಸ್ ಪಿಎಂ ಒಪ್ಪಿರಲಿಲ್ಲ. ಈಗ ಅವರು ಬಿಜೆಪಿ ಸೇರಿರುವುದರಿಂದ ರಫೀಕ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಖಾತರಿಯಾದಂತಾಗಿದೆ.

ಕಾಂಗ್ರೆಸ್ ಸಾಧನೆ ಪ್ರಶ್ನಿಸುವವರು ಇತಿಹಾಸ ತೆರೆದು ನೋಡಲಿ : ಎಂ.ಬಿ ಪಾಟೀಲ

Publicstory/Prajayoga

ತುಮಕೂರು: ದೇಶಕ್ಕೆ ಸ್ವಾತಂತ್ರ್ಯ ಕಲ್ಪಸಿಕೊಡುವ ನಿಟ್ಟಿನಲ್ಲಿ ಹಾಗೂ ಸಮೃದ್ಧಿ, ಸ್ವಾವಲಂಬನೆ ಕಾಯ್ದುಕೊಳ್ಳುವಲ್ಲಿ ಕಾಂಗ್ರಸ್ ಪಕ್ಷದ ಕೊಡುಗೆ ಅಪಾರ. ಒಮ್ಮೆ ಇತಿಹಾಸವನ್ನು ತೆರೆದು ನೋಡಲಿ  ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.

ನಗರದ ಕಾಂಗ್ರಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಆಹಾರ ಸ್ವಾಲಂಬನೆ ಇರಲ್ಲ. ಗೋದಿ, ಕೆಂಪು ಜೋಳವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕ್ಷೀರ ಕ್ರಾಂತಿ ಹಾಗೂ ಹಸಿರು ಕ್ರಾಂತಿ ಮೂಲಕ ಅನ್ಯ ರಾಷ್ಟ್ರಗಳಿಗೆ ಆಹಾರ ರಫ್ತುಮಾಡುವಷ್ಟು ಬಲಿಷ್ಟ ರಾಷ್ಟ್ರವಾಗಿದ್ದು, ಪಂಡಿತ್ ಜವಹರಲಲ್ ನೆಹರು ಕಾಲದಲ್ಲಿ. ಸ್ವಾತಂತ್ರ್ಯಾ ನಂತರ ಒಂದು ಸೂಜಿ ಉತ್ಪಾದನೆ ಮಾಡುವಷ್ಟು ಸಾಮರ್ಥ್ಯ ವಿರಲಿಲ್ಲ. ಇಂಡಿಯನ್ ಆಯಿಲ್, ಎಚ್ಎಎಲ್ ಸೇರಿದಂತೆ ನವರತ್ನ ಕಂಪನೆಗಳನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಎಂಬುದು ನೆನಪಿರಲಿ ಎಂದರು.

ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯಿಂದ ಐಐಟಿ ವರೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಏಮ್ಸ್ ವರೆಗೆ ಸಂಸ್ಥೆಗಳ ಸ್ಥಾಪನೆ ಹಾಗೂ ರೈಲ್ವೆ, ಏರ್ಪೋಟ್, ವಿದ್ಯುತ್ ಸ್ಥಾವರಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕಜಲಾಶಯಗಳ ನಿರ್ಮಾಣವಾಗಿರುವುದು ನೆಹರೂ ಕಾಲದಲ್ಲಿ. ಇವುಗಳಲ್ಲಿ ಒಂದಷ್ಟು ರಾಜರು ನಿರ್ಮಿಸಿರಬಹುದಷ್ಟೆ. ಇವೆಲ್ಲವೂ ಎಂಟು ವರ್ಷಗಳ ಅವಧಿಯಲ್ಲಿ ನಿರ್ಮಾಣವಾದವಲ್ಲ. ಪ್ರಧಾನಿನರೇಂದ್ರ ಮೋದಿ ಅದಿಕಾರಕ್ಕೆ ಬರುವ ಮುಂಚೆಯೇ ನಿರ್ಮಾಣವಾಗಿದ್ದವು ಎಂದು ಹೇಳಿದರು.

ನರೇಂದ್ರ ಮೋದಿ ಅಧಿಮಾರಕ್ಕೆ ಬರುವಾಗ  ನಾನಾ ಭರವಸೆಗಳನ್ನು ಕೊಟ್ಟರು. ದೇಶದ ಚಿತ್ರಣವೇ ಬದಲಾಯಿಸುತ್ತೇನೆ. ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದು ಎಂಟು ವರ್ಷಗಳು ಕಳೆದಿವೆ. ಇಲ್ಲೀವರೆಗೆ ಹದಿನಾರು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ದುರಾದೃಷ್ಟವಶಾತ್ ಇರುವ ಉದ್ಯೋಗಗಳನ್ನೆ ಜನರು ಕಳೆದುಕೊಂಡರು. ಬಿಜೆಪಿ ಸರ್ಕಾರ ತೆಗಸುಕೊಂಡ ತಪ್ಪು ಆರ್ಥಿಕ ನಿರ್ಧಾರ ಹಾಗೂ ನೋಟ್ ಬ್ಯಾನ್, ಜಿಎಸ್ಟಿ, ಕೊರೊನಾ ನೆರವು ನೀಡದೇ ಇರುವುದು  ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದವರು ಗುಣ ಮಾಡುತ್ತೇವೆಂದವರು, ರೈತರನ್ನೇ ಶೋಷಣೆಗೆ ಒಳಪಡಿಸಿದರು. ನಾವು ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಣ ಕಾಕುತ್ತೇವೆಂದು ಹೇಳಿದ್ದರು. ಇಲ್ಲೀವರೆಗೆ ಯಾರಿಗೂ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸಮಯದಲ್ಲಿ ಕಚ್ಚಾ ತೈಲ ಬೆಲೆ ನೂರಾ ನಲವತ್ತೈದು ಡಾಲರ್ ಇದ್ದಾಗ  ಲೀಟರ್ ಪೆಟ್ರೋಲ್ ಬೆಲೆ ಅರವತ್ತೈದಿತ್ತು ರೂಪಾಯಿ ಇತ್ತು.  ಈಗ ಕಚ್ಚಾ ನಲವತ್ತೈರಿಂದ ಎಂಬತ್ತರವರೆಗೆ ಇದೆ. ಆದರೆ, ಲೀಟರ್ ಪೆಟ್ರೋಲ್ ಬೆಲೆ ಮಾತ್ರ ನೂರಾ ಐದಕ್ಕೆ ಏರಿಕೆ ಕಂಡಿದೆ. ಇದೇ ಮೋದಿಯವರ ಅಚ್ಚೇದಿನ್. ದಿನ ನಿತ್ಯ ವಸ್ತುಗಳ ಬೆಲೆ  ಗಗನಕ್ಕೇರಿರುವುದರಿಂದ  ಬಡವರು ಬದುಕಲು ಸಾಧ್ಯವಾಗುತ್ತಿಲ್ಲ. ಜಿಎಸ್ಟಿಯಲ್ಲಿ ಅಕ್ಕಿ, ಗೋದಿ ಹಾಲು, ಸೇರಿದಂತೆ ಬಡವರ ಮೊಸರು ಅನ್ನವನ್ನೂ ಬಿಡಲಿಲ್ಲ. ಮಂಡಕ್ಕಿಗೂ ಟ್ಯಾಕ್ಸ್ ಹಾಕಿದರು. ಚಿತಾಗರಕ್ಕೂ 18.30% ತೆರಿಗೆ ಹಾಕಿದ್ದಾರೆ. ಬದುಕುಲು ಬಿಡುತ್ತಿಲ್ಲ, ಸತ್ತ ಮೇಲೂ
ಬಿಡುವುದಿಲ್ಲ ಈ ಭ್ರಷ್ಟ ಬಿಜೆಪಿ ಸರ್ಕಾರ ಎಂದು ಹೇಳಿದರು.

ಕಾಂಗ್ರಸ್ ಜನರ ಬದುಕನ್ಬು ಕಟ್ಟಿಕೊಡುವ ಕೆಲಸ ಮಾಡಿದೆ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ.
ಸಿಲಿಕಾನ್ ವ್ಯಾಲ್ಯು ಆಫ್ ಇಂಡಿಯಾ ಆದ ಬೆಂಗಳೂರಿಗೆ ಎಲ್ಲಾ ರಾಜ್ಯಗಳಿಂದಲೂ ಬರುತ್ತಿದ್ದಾರೆ. ಮುಖ್ಯಮಂತ್ರಿ ಹೇಳುತ್ತಾರೆ, ಯುಪಿ ಮಾಡೆಲ್ ಅಂತ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಜನರಿಗೆ ನಾನಾಭಾಗ್ಯಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಎಂದರು.

ಕಳೆದ ಮೂರು ವರ್ಷದಲ್ಲಿ ಬಿಜೆಪಿ ಬಂದ ಮೇಲೆ ರಾಜ್ಯದಲ್ಲಿ ಏನಜು ಅಭಿವೃದ್ಧಿ ಆಗಿಲ್ಲ. ಯಾವ ಮಂತ್ರಿಗಳು ಏನು ಮಾಡುತ್ತಾರೆ ಎಂಬುದು ಸಿಎಂಗೇ ಗೊತ್ತಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ನಲವತ್ತು ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ ಇದು ಎಂದು ಗುತ್ತಿಗೆದಾರರ ಸಂಘ ಆರೋಪಿಸಿರುವುದು ನಮಗೆಲ್ಲಾ ಗೊತ್ತೇ ಇದೆ. ನರೇಂದ್ರ ಮೋದಿಯವರೇ.. ಭ್ರಷ್ಟಾಚಾರಿಗಳ ಮೇಲೆ ಯಾಕಿಲ್ಲ ಇಡಿ ಕೇಸ್, ಭ್ರಷ್ಟಾಚಾರದ ಸಮರ ಏನಿದ್ದರೂ ವಿರೋಧ ಪಕ್ಷಗಳ ಮೇಲೆ ಮಾತ್ರವಾ? ಎಂದು ಪ್ರಶ್ನಿಸಿದರು.

ಈ ರಾಜ್ಯದಲ್ಲಿ ಸರ್ಕಾರ ಇಲ್ಲ. ನಾವು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಅವರು ಸುಖಾ ಸುಮ್ಮನೆ ಏನನ್ನೂ ಹೇಳುವವರಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಮತ್ತು ಬಿಜೆಪಿ ಪಕ್ಷದವರೇ ಆಗಿ ಹೇಳಿದ್ದಾರೆ ಎಂದರೆ ಯೋಚಿಸಬೇಕಿದೆ. ಈ ಸರ್ಕಾವನ್ನು ಜನ ಕಿತ್ತೊಗೆಯಬೇಕೆಂದು ಕಾಯುತ್ತಿದ್ದಾರೆ ಎಂದರು.

: ತುಮಕೂರಿನಲ್ಲಿ ಇಬ್ಬರು ಕಾಂಗ್ರಸ್ ನಾಯಕರು ಬಿಟ್ಟು ಹೋಗಿದ್ದಾರೆ .
ಅದರಿಂದ ಕಾಂಗ್ರಸ್ ಪಕ್ಷ ನಿರ್ಣಾಮವಾಗಿಲ್ಲ. ಕೆಲವರು ರಾಜೀನಾಮೆ ನೀಡಿದ್ದಾರೆ. ಬೇರೆ ಪಕ್ಷ ಸೇರಿಲ್ಮ. ಇಲ್ಕಿನ ನಾಯಕರು ಮನವೊಲಿಸು ಕೆಲಸ ಮಾಡುವವರಿದ್ದಾರೆ.

ಮುರುಘಾಮಠದ ಪ್ರಕರಣ ತನಿಖಾ ಹಂತದಲ್ಲಿದೆ. ಪಾರದರ್ಶಕವಾಗಿ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಸಂತ್ರಸ್ತರನ್ನು ಭೇಟಿಯಾಗಲು ಸಾಧ್ಯವಿಲ್ಲ. ನಮ್ಮ ಮಕ್ಕಳಿಗಾದರೂ ನೋವೇ. ಅನ್ಯರ ಮಕ್ಕಳಿಗಾದರೂ ನೋವಾಗುತ್ತದೆ. ನಾನೂ ಗೃಹ ಸಚಿವರಾಗಿದ್ದವನು. ನನ್ನ ಪ್ರಕಾರ ತಕ್ಷಣವೇ ಬಂಧಿಸಬೇಕು ಎಂಬುದಿದೆ. ಇಪ್ಪತ್ನಾಲ್ಕು ಗಂಟೆಯೊಳಗಲ್ಲ ಎಂದು ತಿಳಿಸಿದರು.

ಅತಿವೃಷ್ಟಿಯಾಗಿ ರೈತರಿಗೆ ಅನಾನುಕೂಲವಾಗಿದೆ.
ವಿರೋಧ ಪಕ್ಷದ ನಾಯಕರು ಕೊಡಗಿಗೆ ಹೋದರು. ಬಿಜೆಪಿಯವರು ಮೊಟ್ಟೆ ಹೊಗೆದರು. ಸರ್ಕಾರ ಭ್ರಷ್ಟಾಚಾರದಲ್ಲಿ ಬ್ಯುಸಿಯಾಗಿದೆ. ಕೃಷ್ಣ ಹಾಗೂ ಕೊಡಗಿನಲ್ಲಿ ಆದ ಅನಾಹುತಗಳಿಗೇ ಇನ್ನೂ ಪರಿಹಾರ ನೀಡಿಲ್ಲ ಎಂದರು.

ತುಮಕೂರು ಜಿಲ್ಲೆಯಲ್ಲಿ ಮೂರು ಜನ ಶಾಸಕರಿದ್ದೇವೆ. ಮುಂದಿನ ಬಾರಿ ಎಂಟರಿಂದ ಒಂಬತ್ತು ಸೀಟು ಪಡೆದುಕೊಳ್ಳುತ್ತೇವೆ. ಯಾರೇ ಪಕ್ಷ ತೊರೆದು ಹೋದರೂ ಪಕ್ಷಕ್ಕೆ ನಷ್ಟವಿಲ್ಲ. ಆದರೆ, ಮುದ್ದಹನುಮೇಗೌಡರ ಮನವೊಲಿಸುವ ಕೆಲಸವನ್ನು‌ ಜಿಲ್ಲೆಯ ನಾಯಕರು ಮಾಡಲಿದ್ದಾರೆ. ಅವರಿನ್ನೂ ಬೇರೆ ಪಕ್ಷ ಸೇರಿಲ್ಲ ಎಂದರು.

ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಷಫಿ ಅಹಮದ್, ಮಾಜಿ ಶಾಸಕ ಕೆ.ಶಡಕ್ಷರಿ, ವಿ.ಪ ಸದಸ್ಯ ಆರ್.ರಾಜೇಂದ್ರ, ಜಿಲ್ಲಾ ಬ್ಲಾಕ್ ಕಾಂಗ್ರಸ್ ಸಮಿತಿ ಅಧ್ಯಕ್ಷ ಆರ್.ರಾಮಕೃಷ್ಣ, ಬೆಮೆಲ್ ಕಾಂತರಾಜು, ರಾಯಸಂದ್ರ ರವಿಕುಮಾರ್ ಸೇರಿದಂತೆ ಹಲವರು ಇದ್ದರು.

ಕಟ್ಟೆಗೆ ಕಾಲುಜಾರಿ ಯುವಕ ಸಾವು

0

Publicstory/Prajayoga


ತುರುವೇಕೆರೆ : ತಾಲೂಕಿನ ತಾಳಕೆರೆ ಗ್ರಾಮದ ಬಾಳೆಗಾರನ ಕಟ್ಟೆಯಲ್ಲಿ ದನಗಳನ್ನು ಮೈ ತೊಳೆಯುತ್ತಿದ್ದ ಯುವ ಕೃಷಿಕ ಆಯತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತಪಟ್ಟ ದುರ್ದೈವಿ ತಾಳಕೆರೆ ಗ್ರಾಮದ ತಿಮ್ಮಪ್ಪ ಎಂಬುವರ ಮಗ ರವಿಚಂದ್ರ (29) ಎಂದು ತಿಳಿದು ಬಂದಿದೆ.
ದನಗಳನ್ನು ಮೈ ತೊಳೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯನ್ನು ಕಂಡ ಆಸುಪಾಸಿನವರು ರಕ್ಷಣೆ ಮಾಡಲು ಪ್ರಯತ್ನಸಿದರೂ ಸಫಲರಾಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರವಿಚಂದ್ರನ ಶವವನ್ನು ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿ ಯಾಗಿದ್ದಾರೆ.

ಘಟನೆಯ ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಬೇಟಿ ನೀಡಿ ಪರಿಶೀಲಿಸಿದರು. ಮೃತನ ತಂದೆ ತಿಮ್ಮಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ನೀರಗುಂದ  ಕೆರೆಕೋಡಿಯಲ್ಲಿ 75 ಲಕ್ಷರೂ. ವೆಚ್ಚದ ಸೇತುವೆ ನಿರ್ಮಾಣ

Publicstory/prajayoga

ತುರುವೇಕೆರೆ : ತಾಲೂಕಿನ ನೀರಗುಂದ ಕೆರೆ ಕೋಡಿ ಬಳಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನತೆಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

ತಾಲ್ಲೂಕಿನ  ಲೋಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,   ಕ್ಷೇತ್ರ ವ್ಯಾಪ್ತಿಯಲ್ಲಿ  ಈ ಹಿಂದೆ ಅಭಿವೃದ್ಧಿ ಸ್ಪರ್ಶದಿಂದ ವಂಚಿತವಾಗಿದ್ದ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೂಲಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ರಸ್ತೆ, ಕುಡಿಯುವ ನೀರು ಒದಗಿಸಲು ಒತ್ತು ನೀಡಲಾಗುತ್ತಿದೆ. ಚೌಡೇನಹಳ್ಳಿ, ಬಸವನಹಳ್ಳಿ, ಮಂತ್ರಿಕೇನಹಳ್ಳಿ, ಅಜ್ಜೇನಹಳ್ಳಿ, ಲೋಕಮ್ಮನಹಳ್ಳಿ, ಗ್ರಾಮಗಳಲ್ಲಿ ಸಿ.ಸಿ.ರಸ್ತೆಗಳು ಶೀಘ್ರದಲ್ಲಿ ನಿರ್ಮಾಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದರು.

ಬಸವನಹಳ್ಳಿ ಮಾರ್ಗದ  ಬೆಸ್ತರಪಾಳ್ಯದ ಜನತೆ ಒತ್ತಾಸೆಯಂತೆ ಸುಮಾರು 700 ಮೀಟರ್ ರಸ್ತೆಯನ್ನು ನಿರ್ಮಿಸಲಾಗುವುದು. ಬಹು ದಿನಗಳ ಕನಸಾದ ಲೋಕಮ್ಮನಹಳ್ಳಿಯಿಂದ ದೊಡ್ಡೇನಹಳ್ಳಿ ವರೆಗೆ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ  ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿಸಲಾಗಿದೆ. ಕಾಮಗಾರಿಯ ನಿರ್ವಹಣೆ  ವೇಳೆ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ತಾಲೂಕು  ಬಿಜೆಪಿ ಅಧ್ಯಕ್ಷ ಮೃತ್ಯಂಜಯ, ಗ್ರಾಪಂ ಅಧ್ಯಕ್ಷರಾದ ಮಮತಾಕೃಷ್ಣಮೂರ್ತಿ,  ಸದಸ್ಯರಾದ ಶಂಕರಪ್ಪ, ಶಶಿಧರ್, ಅಲ್ಲಪ್ಪ, ಕಾಳಂಜೀಹಳ್ಳಿ ಸೋಮಣ್ಣ, ದುಂಡ ರೇಣುಕಯ್ಯ,  ವಿ.ಟಿ.ವೆಂಕಟರಾಮಯ್ಯ, ಸೋಮೇನಹಳ್ಳಿ ಜಗದೀಶ್, ಅಂಗಡಿಲೋಕಣ್ಣ, ಕರುಣಾಕರ,  ಕುಮಾರಸ್ವಾಮಿ,ವಕೀಲ ನಾಗೇಶ್, ಹರಿಕಾರನಹಳ್ಳಿ ಪ್ರಸಾದ್, ಮತ್ತಿತರಿದ್ದರು.

ವಡವನಘಟ್ಟ ಗ್ರಾಪಂ ಉಪಾಧ್ಯಕ್ಷರಾಗಿ ಮಂಗಳಮ್ಮ ಆಯ್ಕೆ

Publicstory/prajaypga

ತುರುವೇಕೆರೆ : ತಾಲೂಕಿನ ವಡವನಘಟ್ಟ ಗ್ರಾಮ ಪಂಚಾಯಿತಿ ನೂತನ ಉಪಾದ್ಯಕ್ಷರಾಗಿ ಜೆ.ಡಿ.ಎಸ್. ಬೆಂಬಲಿತ ಮಂಗಳಮ್ಮಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.

ವಡವನಘಟ್ಟ ಗ್ರಾ.ಪಂ.ನ ಈ ಹಿಂದಿನ ಉಪಾಧ್ಯಕ್ಷರಾಗಿದ್ದ ಸಲೀಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 14 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ  ಉಪಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಮಂಗಳಮ್ಮ ಲೋಕೇಶ್ ಹೊರೆತುಪಡಿಸಿ ಇತರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಲಿಲ್ಲ, ಅಂತಿಮವಾಗಿ ಕಣದಲ್ಲಿ ಉಳಿದ ಮಂಗಳಮ್ಮ ಲೋಕೇಶ್ ಅವಿರೋಧವಾಗಿ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಘೋಷಣೆ ಮಾಡಿದರು.

ನೂತನ ಉಪಾಧ್ಯಕ್ಷೆ ಮಂಗಳಮ್ಮಲೋಕೇಶ್ ಮಾತನಾಡಿ, ನನ್ನನ್ನು ಅವಿರೋಧವಾಗಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಅನಂತ ವಂದನೆಗಳನ್ನು ತಿಳಿಸುತ್ತೇನೆ. ಮುಂಬರುವ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಸರ್ವ ಸದಸ್ಯರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.

ನೂತನ ಉಪಾದ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಮಂಗಳಮ್ಮಲೋಕೇಶ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಉಪಾದ್ಯಕ್ಷರನ್ನು ಅಧ್ಯಕ್ಷೆ ಯಲ್ಲಮ್ಮಅಣ್ಣೋಜಿರಾವ್, ನಿಕಟಪೂರ್ವ ಉಪಾಧ್ಯಕ್ಷ ಸಲೀಂ, ಸದಸ್ಯರಾದ ಮಂಜೇಗೌಡ, ನರಸಿಂಹಮೂರ್ತಿ,ಪ್ರಕಾಶ್, ಕಮಲಮ್ಮ, ನಾಗರತ್ನಮ್ಮ, ಜಯಮ್ಮ, ಸತೀಶ್, ಉಮೇಶ್, ವಿದ್ಯಾಶ್ರೀ, ಸುಧಾ, ಮುಖಂಡರಾದ ರಮೇಶ್, ಶಂಕರಲಿಂಗೇಗೌಡ, ಮಧು, ಕಿಟ್ಟಪ್ಪ ಮತ್ತಿತರರು ಅಭಿನಂಧಿಸಿ ಶುಭ ಹಾರೈಸಿದರು.