Saturday, May 9, 2026
Google search engine
Home Blog Page 136

ಬಿಜೆಪಿಯ ಒಕ್ಕೂಟ ಸರ್ಕಾರದ ವಿರುದ್ಧ ಗರಂ‌ ಆದ ಪಾವಗಡ ರೈತರು

Public story


ಪಾವಗಡ: ಪ್ರಜಾಪ್ರಭುತ್ವ ವಿರೋಧಿ ರೈತ ವಿರೋಧೀ ಶಾಸನಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 7 ತಿಂಗಳು ಪೂರೈಸಿದೆ. ಆದರೆ ಈವರೆಗೆ ಸರ್ಕಾರ ರೈತರ ಕೂಗನ್ನು ಕೇಳಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಕೋಟ್ಯಂತರ ಮಂದಿಗೆ ಅನ್ನ ನೀಡುವ ಅನ್ನದಾತರ ಮೇಲೆ ಆಶ್ರುವಾಯು ಸಿಡಿಸಿ, ಲಾಟಿ ಚಾರ್ಜ್ ಮಾಡಿ ರೈತರ ಹೋರಾಟ ದಮನ ಮಾಡುವ ಸರ್ಕಾರದ ಯತ್ನ ಖಂಡನೀಯ ಎಂದು ಆರೋಪಿಸಿದರು.

ಇದನ್ನೂ ಓದಿ:https://publicstory.in/janapadanayaka-dr-rajakumar/

ಕೃಷಿಯನ್ನು ಉಳಿಸಿ ಪ್ರಜಾ ಪ್ರಭುತ್ವ ರಕ್ಷಿಸಬೇಕಾದ ಸರ್ಕಾರ ರೈತರ ಜೊತೆ ಸಮಾಲೋಚನೆ ನಡೆಸದೆ. ರೈತರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಏಕಾ ಏಕಿ ಒತ್ತಾಯ ಪೋರ್ವಕವಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ತಂದಿದೆ. ಇಂತಹ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಯಾರೂ ಕೇಳಿಕೊಂಡಿರಲಿಲ್ಲ ಕೆಲವರ ಹಿತಾಸಕ್ತಿಗಾಗಿ ಇಂತಹ ಕಾಯ್ದೆ ತರಲಾಗಿದೆ ಎಂದು ದೂರಿದರು.

ಸ್ವಾಮಿನಾಥನ್ ಅವರ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸದೆ ದಿನ ದೂಡುತ್ತಿರುವ ಸರ್ಕಾರ, 2022 ರೊಳಗಾಗಿ ರೈತರ ಆದಾಯ ದ್ವಿಗುಣಗೊಳಿಸುವ ಸುಳ್ಳು ಭರವಸೆ ನೀಡುತ್ತಿದೆ. ರೈತರು ಬೆಳೆದ ಉತ್ಪನ್ನಗಳಿಗೆ ತಕ್ಕ ಬೆಲೆ ನೀಡದೆ ಶೋಷಿಸಲಾಗುತ್ತಿದೆ. ಇದರಿಂದ ಸಾಲದ ಹೊರೆ ಹೆಚ್ಚಿ ಮೂರು ದಶಕಗಳಲ್ಲಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಸ್ವಾಮಿನಾಥನ್ ಅವರ ವರದಿ ಪ್ರಕಾರ ರೈತರು ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಕೃಷ್ಣರಾವ್, ಕಾರ್ಯದರ್ಶಿ ಶಿವರಾಜು, ನಾರಾಯಣಪ್ಪ, ವೆಂಕಟಸ್ವಾಮಿ, ರಾಮಾಂಜಿ, ದೊಡ್ಡಣ್ಣ, ಹುಲಿಯಪ್ಪ, ಕುಮಾರ, ಅನ್ನಪೂರ್ಣಪ್ಪ, ಲಕ್ಷ್ಮಾನಾಯ್ಕ, ರಾಮಕೃಷ್ಣಪ್ಪ, ಹನುಮಂತರಾಯ, ಈರಣ್ಣ ಉಪಸ್ಥಿತರಿದ್ದರು.

ನೀವು ನೋಡಲೇಬೇಕಾದ ತುರುವೇಕೆರೆಯ ಬೇಟೇರಾಯಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ

ತುರುವೇಕೆರೆ ಪ್ರಸಾದ್


ತುರುವೇಕೆರೆ: ನಾಡಿನ ಸಾವಿರಾರು ಭಕ್ತರ ಬಹುಕಾಲದ ಭಾವನಾತ್ಮಕ ನಿರೀಕ್ಷೆ ನನಸಾಗುತ್ತಿದ್ದು ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಬೇಟೇರಾಯಸ್ವಾಮಿ ದೇವಾಲಯದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳದ ಧರ್ಮೊತ್ಥಾನ ಟ್ರಸ್ಟ್ ಮತ್ತು ಸ್ಥಳೀಯ ಧೇನುಪುರಿ ರೀಜನಲ್ ಟ್ರಸ್ಟ್ ಜಂಟಿಯಾಗಿ ಚಾಲನೆ ನೀಡಿವೆ.ಶ್ರೀ ಬೇಟೆರಾಯ ದೇವಾಲಯ ಪಟ್ಟಣದ ಪ್ರಮುಖ ದೇವಾಲಯ. ಪೂರ್ವಾಭಿಮುಖವಾಗಿರುವ ಈ ದೇವಾಲಯ ದ್ರಾವಿಡಶೈಲಿಯ ವಾಸ್ತು ಕೃತಿ. ಎತ್ತರದ ಮಹಾದ್ವಾರ, ಮುಖಮಂಟಪ, ಪಾತಾಳಾಂಕಣ, ನವರಂಗ, ಸುಕನಾಸಿ ಮತ್ತು ಗರ್ಭಗೃಹ ಉತ್ತಮ ಶಿಲ್ಪದಿಂದ ಕೂಡಿವೆ.ಗರ್ಭಗೃಹದಲ್ಲಿನ ಬೇಟೆರಾಯ ಮೂರ್ತಿ 4 ಅಡಿಗಳ ಎತ್ತರವಿದ್ದು ನಾಲ್ಕು ಕೈಗಳಿಂದ ಸುಂದರವಾಗಿದೆ. ಪ್ರಾಚೀನದಲ್ಲಿ ಮಾಯಾವಿ ರಾಕ್ಷಸರು ಕಾಡುಮೃಗಗಳ ರೂಪದಲ್ಲಿ ಕಾಡುತ್ತಿದ್ದಾಗ ಮಹಾವಿಷ್ಣುವು ಬೇಟೆಗಾರನ ರೂಪದಲ್ಲಿ ಅವತರಿಸಿ ರಾಕ್ಷಸ ಸಂಹಾರ ಮಾಡಿ ಇಲ್ಲೇ ಬೇಟೆರಾಯನೆಂದು ನೆಲೆಯಾದನೆಂಬ ಪ್ರತೀತಿಯಿದೆ.ಈ ದೇವಸ್ಥಾನದಲ್ಲಿ ಚಿತ್ರಾಲಂಕಾರದಿಂದ ಕೂಡಿದ ಒಂದು ಹಳೆಯ ಮಂಚವಿದ್ದು, ಇದನ್ನು 18ನೆಯ ಶತಮಾನದಲ್ಲಿ ಮೈಸೂರಿನ ದಳವಾಯಿ ಗೋಪಾಲರಾಜ ಅರಸು ಎಂಬುವವರು ದೇವರ ಶಯನೋತ್ಸವಕ್ಕಾಗಿ ಅರ್ಪಿಸಿದರಂತೆ.ದೇವಾಲಯದ ಪ್ರಾಕಾರದ ಒಳಗೆ ನೈಋತ್ಯ ಭಾಗದಲ್ಲಿ ಅಮ್ಮವನರ ಗುಡಿ ಇದೆ. ಪ್ರತಿ ಫಾಲ್ಗುಣ ಮಾಸದಲ್ಲಿ ಈ ಗುಡಿಯ ಜಾತ್ರೆ ಜರುಗುತ್ತದೆ.
ಸುಮಾರು 800 ವರ್ಷಗಳಷ್ಟು ಹಳೆಯದಾದ ದೇವಾಲಯಕ್ಕೆ ಇತ್ತೀಚೆಗಷ್ಟೇ ಸುಮಾರು 70 ಲಕ್ಷರೂಗಳ ವೆಚ್ಚದಲ್ಲಿ ರಾಜಗೋಪುರ ಮತ್ತು ರೂ. 25 ಲಕ್ಷ ವೆಚ್ಚದಲ್ಲಿ ಲಕ್ಷ್ಮೀಗೋಪುರ ನಿರ್ಮಿಸಲಾಗಿತ್ತು.ದೇವಾಲಯದ ನವರಂಗ, ಸುಖನಾಸಿ, ಗರ್ಭಗುಡಿಯ ಗೋಡೆಗಳ ಒಳಪದರದ ಮಣ್ಣು ಶಿಥಿಲವಾಗಿತ್ತು. ಹಾಗಾಗಿ ಮಳೆ ಬಂದಾಗ ದೇವಾಲಯದ ಒಳಗೋಡೆ ನೆನೆದು ಒಳಗೆ ನೀರಿಳಿಯುತ್ತಿತ್ತು. ಜೊತೆಗೆ ಹಲವು ಗಿಡಗೆಂಟೆಗಳ ಬೇರುಗಳು ಮಣ್ಣಿನ ಪದರದೊಳಗೆ ನುಸುಳಿ ದೇವಾಲಯದ ಸುರಕ್ಷತೆಗೆ ಅಪಾಯವೊಡ್ಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ಧೇನುಪುರಿ ರೀಜನಲ್ ಟ್ರಸ್ಟ್ ದೇವಾಲಯದ ದುಸ್ಥಿತಿ ಕುರಿತು ಸರ್ಕಾರದ ಪುರಾತತ್ವ ಇಲಾಖೆಯ ಗಮನಸೆಳೆದಿತ್ತು. ಪುರಾತತ್ವ ಇಲಾಖೆ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಕ್ರಿಯಾಯೋಜನೆ ಅನುಮೋದಿಸಿ ಧರ್ಮಸ್ಥಳದ ಧರ್ಮೋತ್ಥಾನಟ್ರಸ್ಟ್‍ಗೆ ಈ ಜವಾಬ್ಧಾರಿ ವಹಿಸಿತ್ತು. ಸ್ಥಳೀಯ ಧೇನುಪುರಿ ಟ್ರಸ್ಟ್ ಸುಮಾರು 7 ಲಕ್ಷಕ್ಕೂ ಹೆಚ್ಚು ಹಣ ಹೊಂದಿಸಿ ಒಟ್ಟಾರೆ ರೂ.22 ಲಕ್ಷದಲ್ಲಿ ಸಮಗ್ರ ಜೀರ್ಣೋದ್ಧಾರದ ಕಾರ್ಯದ ಮೇಲ್ವಿಚಾರಣೆ ನಡೆಸಿದೆ.ಸದ್ಯ ಜೀರ್ಣೋದ್ಧಾರ ಪ್ರಕ್ರಿಯೆ ಮುಂದುವರೆದಿದ್ದು ಕುಶಲ ಕರ್ಮಿಗಳು ದೇವಾಲಯದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ಬರದಂತೆ ಬೃಹತ್ ಯಂತ್ರಗಳೊಂದಿಗೆ ದೇವಾಲಯದ ಹೊರಗೋಡೆಯ ಕಲ್ಲುಗಳನ್ನು ಸ್ಥಳಾಂತರಿಸಿ ಹಳೆಯ ಮಣ್ಣನ್ನು ತೆಗೆದು ಅದನ್ನು ಕಾಂಕ್ರೀಟ್‍ನಿಂದ ತುಂಬಿಸಿ ದೇವಾಲಯಕ್ಕೆ ಹೊಸ ರೂಪ ಕೊಡುವ ಪ್ರಯತ್ನದಲ್ಲಿದ್ದಾರೆ. ಟ್ರಸ್ಟ್‍ನ ಪದಾಧಿಕಾರಿಗಳಾದ ಟಿ.ಆರ್.ಶ್ರೀನಿವಾಸ್, ಟಿ.ಆರ್.ಶ್ರೀಧರ್ ಇತರರು ಜೀರ್ಣೋದ್ಧಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದು ಮೂರು ತಿಂಗಳೊಳಗೆ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳ್ಳಲ್ಲಿದೆ ಎಂದು ತಿಳಿಸಿದ್ದಾರೆ.ಜೀರ್ಣೋದ್ಧಾರ ಕಾರ್ಯಕ್ಕೆ ಮತ್ತೂ ಹೆಚ್ಚಿನ ವೆಚ್ಚ ತಗಲುವ ನಿರೀಕ್ಷೆಯಿದ್ದು ಭಕ್ತಾದಿಗಳು ಮತ್ತು ಸಾರ್ವಜನಿಕರು ಉದಾರ ಕೊಡುಗೆ ನೀಡುವಂತೆ ಟ್ರಸ್ಟ್ ಮನವಿ ಮಾಡಿದೆ. (ಸಂಪರ್ಕ ಸಂಖ್ಯೆ: 9738928454) ಶ್ರೀ ಧೇನುಪುರಿ ರೀಜನಲ್ ಟ್ರಸ್ಟ್, ಎಸ್‍ಬಿಐ ಖಾತೆ ಸಂಖ್ಯೆ: 38221820216, ಐಎಫ್‍ಎಸ್‍ಸಿ: ಎಸ್‍ಬಿಐಎನ್0040104 ಈ ಖಾತೆಗೆ ಭಕ್ತಾದಿಗಳು ನೇರವಾಗಿ ದೇಣಿಗೆ ಜಮಾ ಮಾಡಬಹುದಾಗಿದೆ.

ವಾರದ ಪುಸ್ತಕ: ವರನಟನಿಗೊಂದು ಪುಟ್ಟ ಕನ್ನಡಿ : ಜನಪದ ನಾಯಕ ಡಾ. ರಾಜಕುಮಾರ್

ಡಾ.ರಾಜ್ ಅವರೊಂದಿಗೆ ಬರಗೂರು ರಾಮಚಂದ್ರಪ್ಪ

ಡಾ.ರಾಜ್ ಕುಮಾರ್ ಸಿನಿಮಾಗಳ ಕುರಿತು ತುಮಕೂರು ವಿ.ವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಗೋವಿಂದರಾಜ ಎಂ.‌ಕಲ್ಲೂರು ಅವರು ನಾಡೋಜ ಬರಗೂರು ರಾಮಚಂದ್ರಪ್ಪನವರು ಬರೆದಿರುವ ಜನಪದ ನಾಯಕ ಡಾ.ರಾಜ್ ಕುಮಾರ್ ಪುಸ್ತಕದ ಕುರಿತು ಬರೆದಿದ್ದಾರೆ.

ಸಾಹಿತ್ಯ, ಸಿನಿಮಾ, ಸಂಘಟನೆ ಮತ್ತು ಜನಪರ ಚಳವಳಿಗಳಲ್ಲಿ ಸದಾ ಸಕ್ರಿಯರಾಗಿರುವ ಮೇಷ್ಟ್ರು ಬರಗೂರು ರಾಮಚಂದ್ರಪ್ಪನವರ ‘ಜನಪದ ನಾಯಕ ಡಾ. ರಾಜಕುಮಾರ್’ ಎಂಬ ಪುಸ್ತಕವನ್ನು ವರನಟ ರಾಜಕುಮಾರ್‌ರ ವ್ಯಕ್ತಿತ್ವಕ್ಕಿಡಿದ ಪುಟ್ಟ ಕೈಗನ್ನಡಿ ಎನ್ನಬಹುದು.

ತನ್ನ ಸಿನಿಮಾಗಳ ಮೂಲಕ ಕರ್ನಾಟಕದ ಜನರನ್ನು ವ್ಯಾಪಕವಾಗಿ ಪ್ರಭಾವಿಸಿದ ನಟ ಡಾ. ರಾಜಕುಮಾರ್. ಕನ್ನಡದ ಸಾಹಿತ್ಯ ಪಂಥಗಳಲ್ಲಿ ಮತ್ತು ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಇತಿಹಾಸದಲ್ಲಿ ಕಂಡು ಬಂದ ನಾಡು-ನುಡಿ ಪ್ರೇಮ, ಪ್ರಕೃತಿ ಪ್ರೇಮ, ಆಧ್ಯಾತ್ಮ, ಸಮಾಜವಿರೋಧಿ ನಿಲುವುಗಳ ವಿರುದ್ದದ್ದ ಬಂಡಾಯ ಧೋರಣೆ, ಸಾಮಾಜಿಕ ಕ್ರಾಂತಿ ಮತ್ತು ನ್ಯಾಯ, ಚಾರಿತ್ರಿಕ ನಾಯಕರ ಕಥನಗಳ ಮರುನಿರೂಪಣೆ, ಶ್ರಮಿಕರ, ಕಾರ್ಮಿಕರ ಜೀವನದ ನಿರೂಪಣೆ ಮುಂತಾದವು ಕನ್ನಡ ಸಾಹಿತ್ಯದ ವಿವಿಧ ಚಳವಳಿಗಳಲ್ಲಿ, ಕರ್ನಾಟಕದ ಸಮಾಜದಲ್ಲಿ ಮೂಡಿದಷ್ಟೇ ಶಕ್ತವಾಗಿ ರಾಜಕುಮಾರರ ಸಿನಿಮಾದಲ್ಲಿಯೂ ವ್ಯಕ್ತವಾದವು.

ಕನ್ನಡದ ಸಾಹಿತ್ಯವಲಯವು ಸೀಮಿತ ಓದುಗರು ಮತ್ತು ತರಗತಿಯ ಕೋಣೆಗಳಲ್ಲಿ ಚರ್ಚಿಸುತ್ತಿದ್ದ, ಹಂಬಲಿಸಿ ಕಟ್ಟುತ್ತಿದ್ದ ‘ಮಾದರಿ ಕರ್ನಾಟಕ’ದ ಚಿತ್ರಣವನ್ನು, ‘ಮಾದರಿ ಕನ್ನಡಿಗ’ನ ರೂಪವನ್ನು ತನ್ನ ಸಿನಿಮಾಗಳ ಮೂಲಕ ಏಕ ಕಾಲಕ್ಕೆ, ಅಪಾರ ಜನ ಸಮುದಾಯವನ್ನು ಒಟ್ಟಿಗೇ ಕೂರಿಸಿ ಕನ್ನಡ-ಕನ್ನಡಿಗ-ಕರ್ನಾಟಕದ ‘ಭಾವಿಸಿದ ಜನಪದ’ದ ಬಗ್ಗೆ ಮುಕ್ತ ವಿಶ್ವವಿದ್ಯಾನಿಲಯದಂತೆ ಪಾಠ ನಡೆಸಿದ್ದು ಸಹ ಇದೇ ರಾಜಕುಮಾರರ ಸಿನಿಮಾಗಳು.

ರಾಜಕುಮಾರರ ಕುರಿತು ಕನ್ನಡ ಮತ್ತು ಇತರ ಭಾಷೆಗಳಲ್ಲಿ ಈಗಾಗಲೇ ಸಾಕಷ್ಟು ಪುಸ್ತಕಗಳು ಬಂದಿವೆ. ಅವೆಲ್ಲವೂ ತಮ್ಮ-ತಮ್ಮ ಅನುಭವಗಳ ಮೂಲಕ,
ಒಂದೊಂದು ರೀತಿಯಲ್ಲಿ ರಾಜಕುಮಾರ್ ಎಂಬ ವಿದ್ಯಮಾನವನ್ನು ಕಟ್ಟಲು ನಡೆಸಿದ ಪ್ರಯತ್ನಗಳೇ ಆಗಿವೆ.

ಬರಗೂರು ರಾಮಚಂದ್ರಪ್ಪನವರ ‘ಜನಪದ ನಾಯಕ ಡಾ. ರಾಜಕುಮಾರ್’ ಪುಸ್ತಕವು ರಾಜಕುಮಾರರನ್ನು ಕೈಗೆಟುಕದ ತಾರೆಯಂತೆಯೋ, ತೀರಾ ನುಣ್ಣಗೆ ಕಾಣುವ ದೂರದ ಬೆಟ್ಟದಂತೆಯೋ ಕಲ್ಪಿಸಿ ಕಾಣುವ ಕ್ರಮಕ್ಕೆ ಪ್ರತಿಯಾಗಿ ರಾಜಕುಮಾರ್ ರನ್ನು ಈ ನೆಲದ ಜನಪದ ನಾಯಕನನ್ನಾಗಿ ನೋಡಲು ಪ್ರಯತ್ನಿಸಿದ ಅಪರೂಪದ ಪುಸ್ತಕ.

ಈ ಪುಸ್ತಕವು ರಾಜಕುಮಾರ್ ಅವರ ವ್ಯಕ್ತಿತ್ವದ ವಿಶ್ಲೇಷಣೆಯೊಂದಿಗೆ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ತಿಳಿಸುವ ಐದು ಲೇಖನಗಳನ್ನು ಒಳಗೊಂಡಿದೆ. ಬರಗೂರು ರಾಮಚಂದ್ರಪ್ಪನವರೇ ಹೇಳುವಂತೆ “ಡಾ. ರಾಜಕುಮಾರ ಅಂದರೆ ಏನು? ಎಂಬುದಕ್ಕೊಂದು ಶೋಧ, ಏನು ಮಾಡಿದರು ಎಂಬುದಕ್ಕೊಂದು ಉತ್ತರ ಈ ಪುಸ್ತಕ”.

“ರಾಜಕುಮಾರರ ಬಗ್ಗೆ ಬರೆಯುವುದು ಮಾತನಾಡುವುದು ನನ್ನ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು” ಎನ್ನುವ ರಾಮಚಂದ್ರಪ್ಪನವರು ಈ ಪುಸ್ತಕವನ್ನು ಜನಪದ ಕತೆಗಳ ಉದಾಹರಣೆಯೊಂದಿಗೆ ಆರಂಭಿಸುತ್ತಾರೆ. ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಛಿಸಿ ಅಪಾರ ಇಚ್ಛಾಶಕ್ತಿ, ಕರಗದ ಶ್ರದ್ಧೆ, ಬದಲಾಗದ ಸಂಕಲ್ಪ ಬಲದಿಂದ ಅಂದುಕೊಂಡ ಗುರಿಯನ್ನು ಸಾಧಿಸುವುದು, ರೈತನೊಬ್ಬ ರಾಜಕುಮಾರಿಯನ್ನು ಮದುವೆಯಾಗುವುದು ಮುಂತಾದ ಕಥನಗಳಂತೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದಿಂದ ಬಂದ ರಾಜಕುಮಾರ್ ಅಪಾರ ಮನ್ನಣೆಗೆ ಪಾತ್ರವಾದದ್ದು, ನಾಡಿನ ಅಪರಿಮಿತ ಪ್ರೀತಿಯನ್ನು ಗಳಿಸಿದ್ದು ಜನಪದರ ನಾಯಕನಾಗಿ ಎಂಬುದನ್ನು ಬರಗೂರು ರಾಮಚಂದ್ರಪ್ಪ ಗುರುತಿಸುತ್ತಾರೆ.

ರಾಜಕುಮಾರ್ ತಿರುಪತಿಯಲ್ಲಿ ವಿಶೇಷ ದರ್ಶದ ಅವಕಾಶವಿದ್ದರೂ ಸಾಮಾನ್ಯರ ಸಾಲಿನಲ್ಲಿ ನಿಂತು ದರ್ಶನ ಪಡೆದಿದ್ದು, ‘ಕರ್ನಾಟಕ ರತ್ನ ಪ್ರಶಸ್ತಿ’ (೧೯೯೨) ಪ್ರಧಾನ ಸಮಾರಂಭದಲ್ಲಿ ಜನರನ್ನು ‘ಅಭಿಮಾನಿ ದೇವರುಗಳು’ ಎಂದೂ, ರಂಗಭೂಮಿ ಕಂಪನಿಯ ಮಾಲೀಕರನ್ನೂ, ಸಿನಿಮಾ ನಿರ್ದೇಶಕರನ್ನು ‘ಅನ್ನದಾತರೇ’ ಎಂದು ಕರೆದದ್ದು, “ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲು ಕುವೆಂಪು ಅವರಿಗೆ ಕೊಡಿ ನನಗೆ ಮೊದಲು ಬೇಡ” ಎಂದದ್ದು ಚಿತ್ರೀಕರಣದ ಸಂಧರ್ಭದಲ್ಲಿ ರಾಜಕುಮಾರ್ ತಮ್ಮ ತಾರಾ ಪಟ್ಟವನ್ನು ಮರೆತು ವಿನಯದಿಂದ ವರ್ತಿಸುತ್ತಿದ್ದ ಪ್ರಸಂಗಗಳು ಈ ಪುಸ್ತಕದಲ್ಲಿ ದಾಖಲಾಗಿವೆ.

ಈ ಪುಸ್ತಕದಲ್ಲಿನ ‘ಬೆವರಿನ ಮನುಷ್ಯ ಡಾ ರಾಜಕುಮಾರ್’ ಎಂಬ ಲೇಖನವು ‘ರಾಜಕುಮಾರ್ ಕೇವಲ ಸಿನಿಮಾ ಕಲಾವಿದರಾಗಿದ್ದರೆ ಇಷ್ಟೆಲ್ಲಾ ಜನರ ಪ್ರೀತಿಗೆ ಪಾತ್ರವಾಗುತ್ತಿರಲಿಲ್ಲ’ ಎಂಬುದಕ್ಕೆ ಸಾಕ್ಷಿಗಳನ್ನು ಹುಡುಕುವಂತಿದೆ. ತಾರಾ ಮೌಲ್ಯದಿಂದ ರಾಜ್ ಸಮೀಪ ಅಂತರವನ್ನು ಕಾಯ್ದುಕೊಂಡಿದ್ದು, ಕಥಾ ವಸ್ತುವಿನ ಆಯ್ಕೆಯಲ್ಲಿ ಸಮಾಜ ವಿರೋಧಿ ಆಶಯಗಳ ಕಥೆಗಳಲ್ಲಿ ನಟಿಸದೇ ಇದ್ದದ್ದು, ಯಥಾಸ್ಥಿತಿವಾದದ ಕಥೆಗಳಲ್ಲಿ ನಟಿಸದೇ ಇದ್ದದ್ದು, ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದರೂ ಸಾಂಸ್ಥಿಕ ಧರ್ಮವನ್ನು ಪೋಷಿಸದೆ ಇದ್ದದ್ದು ಅವರನ್ನು ಜನರ ಪ್ರತಿನಿಧಿಯಾಗಿಸಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಲು ಪ್ರಯತ್ನಿಸುತ್ತಾರೆ. “ಜನರು ಇವರನ್ನು ಕೇವಲ ಸಿನಿಮಾ ನಟರೆಂದು ಗೌರವಿಸಲಿಲ್ಲ, ಇವರೂ ಕೇವಲ ಸಿನಿಮಾ ನಟರಾಗಿ ಉಳಿಯಲಿಲ್ಲ.

ಗೋಕಾಕ್ ಚಳವಳಿಯನ್ನು ಒಳಗೊಂಡಂತೆ ಕನ್ನಡ ನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರ ಶಕ್ತಿಯಾದರು” ಅರವತ್ತರ ದಶಕದಲ್ಲಿ ಉಂಟಾದ ಕರ್ನಾಟಕ ಜಲಪ್ರವಾಹ ಪೀಡಿತರ ನಿಧಿಗೆ ಹಣ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿ ನಿಂತದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಶಸ್ತಿಯಿಂದ ಬಂದ ಒಂದು ಲಕ್ಷ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟಿದ್ದನ್ನು, ಹಾಡು ಹಾಡಿದ ಚಿತ್ರಗಳಿಂದ ಮತ್ತು ರಸ ಮಂಜರಿ ಕಾರ್ಯಕ್ರಮಗಳಿಂದ ಬಂದ ಸಂಭಾವನೆಯನ್ನು ಬೀದಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ನೀಡಿದ್ದು ಚಿತ್ರ ನಟನೆಯ ಹೊರತಾಗಿ ಬಂದ ಯಾವುದೇ ಹಣವನ್ನು ಸಾಮಾಜಿಕ ಕೆಲಸಗಳಿಗೆ ಕೊಡಬೇಕೆಂದು ಅವರೇ ಮಾಡಿಕೊಂಡದ್ದ ಒಪ್ಪಂದವೂ ಈ ಪುಸ್ತಕದಲ್ಲಿದೆ.

‘ಡಾ. ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?’ ಎಂಬ ಅಧ್ಯಾಯದಲ್ಲಿ ರಾಜಕುಮಾರ್ ಅವರ ಸಾಮಾಜಿಕ ಕೆಲಸಗಳನ್ನು ಪಟ್ಟಿಯ ರೂಪದಲ್ಲಿ ನೀಡಲಾಗಿದೆ. ವೃತ್ತಿ ಬಾಂಧವರೊಂದಿಗೆ ರಾಜ್ ಹೊಂದಿದ್ದ ಬಾಂಧ್ಯವವನ್ನು ಸಿನಿಮಾ ಕ್ಷೇತ್ರವು ಅವರಿಗೆ ನೀಡಿದ ನೋವು, ಅವಮಾನ, ಅವಕಾಶ ನಿರಾಕರಣೆ, ವಂಚನೆಗಳನ್ನು ತಣ್ಣಗೆ ನಿರೂಪಿಸಲಾಗಿದೆ. ‘ನಾನು ನನ್ನ ಕುಟುಂಬ ಮತ್ತು ಡಾ. ರಾಜಕುಮಾರ್’ ಎಂಬ ಅಧ್ಯಾಯದಲ್ಲಿ ಲೇಖಕರು ಮತ್ತು ರಾಜ್ಕುಮಾರ್ ಅವರೊಂದಿಗೆ ಇದ್ದ ಆಪ್ತ ಸನ್ನಿವೇಶಗಳು ಈ ಪುಸ್ತಕದಲ್ಲಿ ದಾಖಲಾಗಿದ್ದು ಹೆಚ್ಚು ಕಡಿಮೆ ಪುಸ್ತಕದ ಪ್ರತಿ ಪುಟದಲ್ಲೂ ರಾಜಕುಮಾರ್ ನಟನೆಯ ಅಪರೂಪದ ಸಿನಿದೃಶ್ಯಗಳ ಚಿತ್ರಗಳು, ಗೋಕಾಕ್ ಚಳವಳಿಯ ಚಿತ್ರಗಳು, ರಾಜಕುಮಾರ್ ಭಾಗವಹಿಸಿದ್ದ ಸಭೆ ಸಮಾರಂಭಗಳ, ಇತರ ಕಾರ್ಯಕ್ರಮಗಳ ಹಾಗೂ ವೀರಪ್ಪನ್‌ನಿಂದ ಅಪಹರಣಗೊಂಡ ಕಾಡಿನ ವಾಸದ ಚಿತ್ರಗಳು ಈ ಪುಸ್ತಕದ ಅಂದವನ್ನು ಹೆಚ್ಚಿಸಿವೆ.

ಕನ್ನಡದ ಸಾಂಸ್ಕೃತಿಕ ನಾಯಕನಂತೆ ಅಮರವಾಗುಳಿದ ಮತ್ತು ಇಂದಿಗೂ ತನ್ನ ಆದರ್ಶಗಳಿಂದ ಕನ್ನಡ ನಾಡಿನ ಜನರನ್ನು ಮತ್ತು ಸಿನಿಪ್ರಿಯರನ್ನು ಆಕರ್ಷಿಸುತ್ತಿರುವ ರಾಜಕುಮಾರರ ಕುರಿತು ಕುತೂಹಲ ಇರುವವರು ಅಗತ್ಯವಾಗಿ ಓದಬಹುದಾದ ಪುಸ್ತಕ ಇದಾಗಿದೆ.



ಪ್ರಕಾಶಕರು: ಜನಪ್ರಕಾಶನ, ಜಯನಗರ ಬೆಂಗಳೂರು.944324727
ಪುಟಗಳು: 128
ಬೆಲೆ: 160

ಜುಲೈ 1 ರಿಂದ ಶಾಲೆ ಪ್ರಾರಂಭ: ಜೂ. 30ರೊಳಗೆ ದಾಖಲಾತಿಗೆ ಸೂಚನೆ

Public story


ತುಮಕೂರು: ಜುಲೈ 1 ರಿಂದ ಶಾಲೆಗಳನ್ನು‌‌ ಪ್ರಾರಂಭಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಜೂನ್ 21 ರಿಂದ ಆರಂಭಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ‌ಜೂ.30ರೊಳಗೆ ಪೂರ್ಣಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.‌ನಂಜಯ್ಯ ಸೂಚಿಸಿದ್ದಾರೆ.

ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಒಂದನೇ ತರಗತಿಗೆ ಅರ್ಹ ಮಕ್ಕಳ ಪಟ್ಟಿ ಪಡೆದು ಪೋಷಕರು ಹಾಗೂ ಎಸ್.ಡಿ.ಎಂ.ಸಿ, ಸದಸ್ಯರನ್ನು ಭೇಟಿ ಮಾಡಿ ಅರ್ಹ‌ ಎಲ್ಲಾ ಮಕ್ಕಳನ್ನು ಜೂ.30 ರೊಳಗೆ ದಾಖಲಾತಿ ಮಾಡಿಕೊಂಡು ಎಸ್.ಎ.ಟಿ.ಎಸ್.ನಲ್ಲಿ ಇಂದೀಕರಿಸಬೇಕು.

ಉಳಿದಂತೆ 2 ರಿಂದ 10ನೇ ತರಗತಿಗೆ ಜೂ.30ರೊಳಗೆ ದಾಖಲಾತಿಯನ್ನೂ ಪೂರ್ಣಗೊಳಿಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಕ್ರಮವಹಿಸಬೇಕು. ಜುಲೈ 1ರಿಂದ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುವುದರಿಂದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ವ್ಯಾಪ್ತಿಯ ಪುರಸಭೆ ಮುಖ್ಯಾಧಿಕಾರಿ/ ನಗರಪಾಲಿಕೆ ಆಯುಕ್ತರು/ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಹಕಾರದಲ್ಲಿ ಶಾಲೆಗಳಿಗೆ ಸ್ಯಾನಿಟೈಸೇಷನ್ ಮಾಡಿಸಿ ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಬೇಕು. ಶಾಲೆಯನ್ನು ಪ್ರಾರಂಭ ಮಾಡಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸುಸಜ್ಜಿತಗೊಳಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಇಲಾಖೆಯ ಆದೇಶ/ನಿರ್ದೇಶನಗಳನ್ನು ಅನುಸರಿಸಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಆಯುಕ್ತರ ಮುಂದಿನ ನಿರ್ದೇಶನದ ಮೇರೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಜುಲೈ-21 ರಿಂದಲೇ ಆನ್‌ಲೈನ್ ಅಥವಾ ಆಫ್ ಲೈನ್‌ನಲ್ಲಿ ಅನುಷ್ಠಾನಗೊಳಿಸತಕ್ಕದ್ದು ಎಂದು ಶಾಲಾ ಮುಖ್ಯಸ್ಥರಿಗೆ ಅವರು ಸೂಚಿಸಿದ್ದಾರೆ.

ಲಸಿಕಾ ಅಭಿಯಾನಕ್ಕೆ ಹೆಗಲು ನೀಡಿದ 93ರ ವೃದ್ಧೆ

0

ಪಾವಗಡ: ಪಟ್ಟಣದ 23 ನೇ ವಾರ್ಡ್ ಕನುಮಲ ಚೆರುವು ಬಡಾವಣೆಯ 93 ವರ್ಷದ ವೃದ್ಧೆ ತಾವಾಗಿಯೇ ಲಸಿಕಾ ಕೇಂದ್ರಕ್ಕೆ ಆಗಮಿಸಿ  ಲಸಿಕೆ ಹಾಕಿಸಿಕೊಂಡರು.

ದೇಶದ್ಯಂತ ಲಸಿಕಾ ಅಭಿಯಾನ ನಡೆಯುತ್ತಿದೆ. ಜಿಲ್ಲೆ, ತಾಲ್ಲೂಕುಗಳಿಗೆ ನಿತ್ಯ ಇಂತಿಷ್ಟು ಡೋಸ್ ಲಸಿಕೆ ಹಾಕಿಸಲೇ ಬೇಕು ಎಂದು ಖಡ್ಡಾಯವಾಗಿ ಆದೇಶ ನೀಡಲಾಗುತ್ತಿದೆ.

ಹೀಗಾಗಿ ಮನೆ ಮನೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುವಂತೆ ಇಲಾಖಾ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

ಇಲ್ಲೊಬ್ಬ  ವೃದ್ಧೆ ಇಲಾಖಾ ಸಿಬ್ಬಂದಿ ಮನೆ ಬಾಗಿಲು ತಟ್ಟುವ ಮುನ್ನವೇ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದು ಲಸಿಕೆ ಹಾಕಿಸಿಕೊಳ್ಳಲು ಭಯಪಡುವವರಿಗೆ ಧೈರ್ಯ ತುಂಬುವಂತಿದೆ. .

ಮಂಗಳವಾರ ಬೆಳ್ಳಂ ಬೆಳಿಗ್ಗೆ  ಪಟ್ಟಣದ 23 ನೇ ವಾರ್ಡ್ ಕನುಮಲ ಚೆರುವು ಬಡಾವಣೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ  ಅಧಿಕಾರಿಗಳು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದರು. ಆದರೆ ಲಸಿಕೆ ಹಾಕುತ್ತಿರುವ ವಿಚಾರ ತಿಳಿದು ಬೀಬಿಜಾನ್(93) ಸ್ವಯಂ ಪ್ರೇರಣೆಯಿಂದ ಲಸಿಕಾ   ಹಾಕಿಸಿಕೊಂಡರು.

ಕೇವಲ ಲಸಿಕೆ ಹಾಕಿಸಿಕೊಳ್ಳುವುದಷ್ಟೆ ಅಲ್ಲದೆ ಲಸಿಕೆ ಹಾಕಿಸಿಕೊಂಡರೆ ಅಡ್ಡ ಪರಿಣಾಮಗಳಾಗುತ್ತದೆ ಎಂದು ಅಪಪ್ರಚಾರ ಮಾಡುವವರಿಗೆ   ಅಜ್ಜಿ ಬುದ್ಧಿ ಮಾತು ಹೇಳಿದ್ದಾರೆ.   ಲಸಿಕೆ ಹಾಕಿಸಿಕೊಂಡಲ್ಲಿ ಸೋಂಕು ತಡೆಗಟ್ಟಬಹುದು ಎಂದು ನೆರೆ ಹೊರೆಯವರಿಗೆ ಇಳಿವಯಸ್ಸಿನ ವೃದ್ಧೆ ಅರಿವು ಮೂಡಿಸಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ವೃದ್ಧೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಮ್ಗೂ ಲಸಿಕೆ ಕೊಡಿ; ಕೊಳೆಗೇರಿ ಜನರ ಹಕ್ಕೋತ್ತಾಯ ಪ್ರದೇಶಕ್ಕೆ ಲಸಿಕೆಗೆ ಆದ್ಯತೆ: ಸಮಿತಿ ಮನವಿ

Public story


ತುಮಕೂರು: ಕೊಳಚೆ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಲಸಿಕೆಗಳ ಹಂಚಿಕೆ‌ ಮಾಡುವಂ ಸ್ಲಂ ಜನಾಂದೋಲನ ಸಮಿತಿಯಿಂದ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತುಮಕೂರು ನಗರ ವ್ಯಾಪ್ತಿಯಲ್ಲಿ ಸುಮಾರು 20 ದಿನಗಳಿಂದ ಕೋವಿಡ್-19 ಲಸಿಕಾ ಅಭಿಯಾನ ನಡೆಯುತ್ತಿದ್ದು ನಗರದಲ್ಲಿ ಶ್ರೀಮಂತರು ಮತ್ತು ಮದ್ಯಮ ವರ್ಗದವರೇ ಹೆಚ್ಚು ಲಸಿಕೆಯ ಪಲಾನುಭವಿಗಳಾಗುತ್ತಿದ್ದಾರೆ, ಆದರೆ ಸ್ಲಂಗಳಲ್ಲಿ ಜಾಗೃತಿ ಮತ್ತು ಕೆಲವೊಂದು ಭಯ ಮತ್ತು ಮೂಡ ನಂಬಿಕೆಗಳಿಂದ ಲಸಿಕೆ ಪಡೆಯುವಲ್ಲಿ ಹಿಂದಾಗಿದ್ದರು. ಆದರೆ ನಮ್ಮ ಸತತ ಪ್ರಯತ್ನ ಮತ್ತು ವ್ಯಾಕ್ಸಿನ್ ಕುರಿತ ಅನುಕೂಲಗಳನ್ನು ಕೊಳಚೆ ಪ್ರದೇಶಗಳಲ್ಲಿರುವ ವಂಚಿತ ಸಮುದಾಯಗಳಿಗೆ ಅರಿವು ಮೂಡಿಸಿದ ಮೇಲೆ ಲಸಿಕೆಗಳನ್ನು ಪಡೆಯಲು ಮುಂದಾಗಿದ್ದು ಇದುವರೆಗೂ ಶೇ 5 ರಿಂದ 10% ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೆಲವೊಂದು ಕೊಳಚೆ ಪ್ರದೇಶಗಳಲ್ಲಿ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆ. ಆದರೆ 18 ವರ್ಷದಿಂದ 44 ವರ್ಷದವರಗಿನ ವಯೋಮಾನದವರಿಗೆ ಕೋವ್ಯಾಕ್ಸಿನ್ ಲಸಿಕೆ ದೊರೆತಿರುವುದಿಲ್ಲ. ನಗರದ ಕೊಳೆಗೇರಿಗಳಿಗೆ ಲಸಿಕೆ ಹಂಚಿಕೆ ಮಾಟಿ ಸ್ಲಂಗಳಲ್ಲಿ ಲಸಿಕಾ ಅಭಿಯಾನಗಳು ಮತ್ತಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೆಲವೊಂದು ಅಭಿಯಾನ ಕೈಗೊಂಡು ಲಸಿಕೆ ಕೊರತೆಯಿಂದ ಅರ್ಧಕ್ಕೆ ನಿಲ್ಲಿಸಲಾಗಿದ್ದು ನಿಧಾನ ಗತಿಯಲ್ಲಿ ಸ್ಲಂ ನಿವಾಸಿಗಳು ಲಸಿಕೆ ಪಡೆಯುತ್ತಿದ್ದಾರೆ. ಇದರ ವೇಗವನ್ನು ಹೆಚ್ಚಿಸಬೇಕು ಎಂದು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಇಂದು ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಮೋಹನ್, ಮಹಾನಗರ ಪಾಲಿಕೆ ವೈದ್ಯಾಧಿಕಾರಿಯಾದ ಡಾ.ರಕ್ಷಿತ್ ರವರಿಗೆ ಮನವಿ ಸಲ್ಲಿಸಿ 7 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ 32 ಕೊಳಚೆ ಪ್ರದೇಶಗಳಿಗೆ 2600 ಡೋಸ್ಗಳನ್ನು ಹಂಚಿಕೆ ಮಾಡಲು ಒತ್ತಾಯಿಸಿದರು.

ಶೆಟ್ಟಿಹಳ್ಳಿಯಲ್ಲಿರುವ ತೃತೀಯ ಲಿಂಗಿಗಳಿಗೆ ಪ್ರತ್ಯೇಕವಾಗಿ ಲಸಿಕೆಗಳನ್ನು ಹಾಕಲು ಆಗ್ರಹಿಸಲಾಯಿತು.

ಇದಕ್ಕೆ ಸ್ಪಂಧಿಸಿದ ವೈದ್ಯಾಧಿಕಾರಿಗಳು ಈಗಾಗಲೇ ಮೊದಲನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊಳಚೆ ಪ್ರದೇಶಗಳಲ್ಲಿ ಲಸಿಕೆ ನೀಡಲಾಗಿದ್ದು ಲ, ಕೊಳೆಗೇರಿಯ ವ್ಯಾಪ್ತಿಯ ಆಸ್ಪತ್ರೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಗೌರವಧ್ಯಕ್ಷರಾದ ದೀಪಿಕಾ, ಕಾರ್ಯದರ್ಶಿ ಅರುಣ್, ಸಹಕಾರ್ಯದರ್ಶಿ ತಿರುಮಲಯ್ಯ, ಮೋಹನ್ ಟಿ.ಆರ್ ಪಾಲ್ಗೊಂಡಿದ್ದರು.

ಶಾಸಕ ಮಸಾಲಜಯರಾಂ ತಂದ 922 ಕೋಟಿ ಅನುದಾನ ಎಲ್ಲಿ ?, ದೊಡ್ಡಾಘಟ್ಟ ಚಂದ್ರೇಶ್

Public story


ತುರುವೇಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಹಾಗು ತಾಲ್ಲೂಕು ಆಡಳಿತ ವೈಫಲ್ಯ ಖಂಡಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ 19-07-21 ರ ಸೋಮವಾರದಂದು ಸಾವಿರಾರು ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಮೋದಿಯವರು ಚುನಾವಣೆಗೆ ಮುನ್ನ ಜನರಿಗೆ ನೀಡಿದ್ದ ಅಚ್ಚೇ ದಿನಗಳ ಭರವಸೆ ಸುಳ್ಳಾಗಿದ್ದು ಈಗ ಜನರಿಗೆ ಮೋದಿಯವರ ಕಡೆಯಿಂದ ಸಂಕಷ್ಠದ ದಿನಗಳು ಮಾತ್ರ ಇವೆ ಎಂದು ವ್ಯಂಗ್ಯವಾಡಿದರು.
ಮೋದಿಯವರ ಬಗ್ಗೆ ಜನರು ಅಪಾರವಾದ ವಿಶ್ವಾಸವನ್ನು ಇಟ್ಟು ಗೆಲ್ಲಿಸಿದ್ದರು. ಆದರೆ ಮೋದಿಯವರು ನೀಡಿದ್ದ ಭರವಸೆಗಳು ಕೆಲವೇ ದಿನಗಳಲ್ಲಿ ಹುಸಿಯಾಗಿವೆ.

ಕೋವಿಡ್ ಬಡವರ ಬದುಕು ಕಸಿದಿರುವ ಹೊತ್ತಿನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ನೂರು ರೂಗಳ ಗಡಿ ದಾಟುತ್ತಿರುವುದು ವಿಷಾದನೀಯ. ಅಡಿಗೆ ಎಣ್ಣೆ ಸಹ 80 ರೂಗಳಿಂದ ಇನ್ನೂರು ರೂಗಳ ಗಡಿ ದಾಟಿರುವುದು ಮೋದಿಯವರು ನೀಡಿದ ಅಚ್ಚೇದಿನಗಳಾ ಇದು ಎಂದು ಕೇಳುವಂತಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕಡುಬಡವರಿಗೆ ಉಚಿತ ಗ್ಯಾಸ್ ಸಿಲೆಂಡರ್ ಕೊಟ್ಟು ಈಗ ಬೆಲೆ 900 ರೂಗಳತ್ತ ಸಾಗಿದೆ. ಹೀಗಾದರೆ ಅಚ್ಚೇದಿನ ಹೇಗೆ ಸಾಧ್ಯ ಎಂದು ಕೃಷ್ಣಪ್ಪ ಪ್ರಶ್ನಿಸಿದರು. ಇನ್ನು ಗೊಬ್ಬರದ ಬೆಲೆ ಗಗನಕ್ಕೇರಿದ್ದು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಮಾತ್ರ ಗೊಬ್ಬರಕ್ಕೆ ಸಬ್ಸಿಡಿ ನೀಡಿ ರೈತರ ಪಾಲಿಗೆ ವರವಾಗಿದ್ದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಿಸಿರುವ ಪ್ಯಾಕೇಜ್ ಕೇವಲ ರಾಜಕೀಯ ಗಿಮಿಕ್. ಅದೊಂದು ಅವೈಜ್ಞಾನಿಕವಾದ ತೀರ್ಮಾನ ಎಂದು ಆರೋಪಿಸಿದರು.

ಪ್ರತಿಯೊಬ್ಬರ ಕೂಲಿಯೇ ತಿಂಗಳಿಗೆ ಕನಿಷ್ಠ 18 ಸಾವಿರ ಇದೆ. ಆದರೆ ಕೆಲವೇ ಒಂದೆರೆಡು ಸಾವಿರ ಘೋಷಣೆ ಮಾಡಿರುವುದು ಸರಿಯಲ್ಲ.
ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಕ್ಕೆ ಮುಖ್ಯಮಂತ್ರಿಗಳು ಘೋಷಿಸಿರುವ ಒಂದು ಲಕ್ಷ ರೂಗಳ ಪರಿಹಾರವನ್ನು ಐದು ಲಕ್ಷಕ್ಕೆ ಏರಿಸಬೇಕೆಂದು ಆಗ್ರಹಿಸಿದರು.

ದೇಶದಲ್ಲಿ ಕೊರೋನಾದಿಂದ ಲಕ್ಷಾಂತರ ಜನರು ಸಾವನ್ನಪ್ಪಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಕಾರಣ. ಸಕಾಲದಲ್ಲಿ ಜನರಿಗೆ ಲಸಿಕೆಯನ್ನು ನೀಡದೇ ಬೇಜವಾಬ್ದಾರಿತನ ತೋರಿದ್ದರ ಫಲ ಅಮಾಯಕ ಜನರು ಸಾವನ್ನಪ್ಪಿದರು. ಹಲವಾರು ಕುಟುಂಬಗಳು ಅನಾಥವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಜವಾಬ್ದಾರಿ ಹೊರಬೇಕು ಎಂದರು.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರಿಸಿರುವ ಭಾರಿ ತೆರಿಗೆಯನ್ನು ಕಡಿತ ಮಾಡಿದರೆ ಕೇವಲ 40 ರೂಗಳಿಗೆ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ನೀಡಬಹುದು.
ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ತಾಲೂಕಿಗೆ ರಾಜ್ಯ ಸರ್ಕಾರದಿಂದ ಈ ಸಾಲಿನಲ್ಲಿ ಸುಮಾರು 922 ಕೋಟಿ ರೂಗಳ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ತಾಲೂಕಿಗೆ ಅನುದಾನ ಬಂದಿದ್ದರೆ ಸಂತೋಷ. ಆದರೆ 922 ಕೋಟಿ ರೂಗಳಷ್ಠು ಕಾಮಗಾರಿಗಳನ್ನು ಎಲ್ಲೆಲ್ಲಿ ಮಾಡಲಾಗಿದೆ ಹಾಗೂ ಕಾಮಗಾರಿಗಳಿಗೆ ಬಳಸಿರುವ ಹಣ ಎಷ್ಟು ಎಂಬುದರ ಬಗ್ಗೆ ಶಾಸಕ ಮಸಾಲಾ ಜಯರಾಮ್ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಯುವ ಜೆಡಿಎಸ್ ಅಧ್ಯಕ್ಷ ಬಾಣಸಂದ್ರ ರಮೇಶ್, ಎಪಿಎಂಸಿ ಸದಸ್ಯ ವಿಜಯಕುಮಾರ್, ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಂಗೀಕುಪ್ಪೆ ಬಸವರಾಜು, ಮಧುಸೂಧನ್, ಭೈತರಹೊಸಳ್ಳಿ ರಾಮಚಂದ್ರು, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ತುಮಕೂರು ಲಾಕ್ ಡೌನ್ ಸಡಿಲ: ಮನೆಯೊಳಗೆ ಮದುವೆಗೆ ಅವಕಾಶ,

Public story


ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಸರ್ಕಾರದ ಮಾರ್ಗಸೂಚಿಗಳಿಗೊಳಪಟ್ಟು ಕೆಲವು ಲಾಕ್ ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 5% ಕ್ಕಿಂತ ಕಡಿಮೆ ಇದ್ದರೂ ಸಹ ಸಾಂಕ್ರಾಮಿಕ ರೋಗವನ್ನು ಉದಾಸೀನ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಜಿಲ್ಲೆಗೆ ಅನ್ವಯಿಸುವಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿ ಮಾಡಿದ್ದು ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಕೋವಿಡ್ 19 ಸರಪಳಿಯನ್ನು ಮುರಿಯಬೇಕೆಂದು ಅವರು ಮನವಿ ಮಾಡಿದ್ದಾರೆ.

ಪರಿಷ್ಕೃತ ಮಾರ್ಗಸೂಚಿಗಳು
ಜೂನ್ 21ರ ಬೆಳಿಗ್ಗೆ 6 ರಿಂದ ಜುಲೈ 5ರ
ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಮಾರ್ಗಸೂಚಿಯನ್ವಯಕೋವಿಡ್ ನಿಯಮಗಳನ್ನು ಅನುಸರಿಸುವುದರೊಂದಿಗೆ ಎಲ್ಲಾ ಉತ್ಪಾದನಾ ಘಟಕ / ಕೈಗಾರಿಕಾ ಸ್ಥಾಪನೆ / ಕೈಗಾರಿಕೆಗಳು
ಅವರ 50% ಸಿಬ್ಬಂದಿಗಳನ್ನು ಹಾಗೂ ಉಡುಪು ಉತ್ಪಾದನೆ(ಗಾರ್ಮೆಂಟ್ಸ್)ಯಲ್ಲಿ
ತೊಡಗಿರುವ ಘಟಕ / ಕೈಗಾರಿಕಾ ಸಂಸ್ಥೆ / ಕೈಗಾರಿಕೆಗಳಲ್ಲಿ
ಉತ್ಪಾದನೆಯನ್ನು ಅವರ 30% ಸಿಬ್ಬಂದಿ ಸಾಮರ್ಥ್ಯದೊಂದಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಅಗತ್ಯ ಮತ್ತು ಅಗತ್ಯವಿಲ್ಲದ ಸರಕು / ಸೇವೆಗಳನ್ನು ನೀಡುವ ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ತೆರೆಯಲು ಅನುಮತಿಸಲಾಗಿದೆ.
ಆದರೆ ಹವಾನಿಯಂತ್ರಿತ ಅಂಗಡಿ,
ಶಾಪಿಂಗ್ ಸಂಕೀರ್ಣ, ಮಾಲ್‌ಗಳು ಕಾರ್ಯನಿರ್ವಹಿಸಲು ಅನುಮತಿ ಇರುವುದಿಲ್ಲ. ಮನೆಯ ಹೊರಗೆ ವ್ಯಕ್ತಿಗಳ ಚಲನೆಯನ್ನು ಕಡಿಮೆ ಮಾಡಲು ಮನೆಯ ಎಲ್ಲ ವಸ್ತುಗಳ ವಿತರಣೆಗಾಗಿ 24×7(ಮನೆ ವಿತರಣೆ)ಹೋಮ್ ಡೆಲಿವರಿ ಸೇವೆ ನೀಡಲು ಅವಕಾಶವಿದೆ. ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌, ತಿನಿಸು, ಬಾರ್ ಮತ್ತು ಕ್ಲಬ್‌ಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ ಶೇ.50ರಷ್ಟು ಗ್ರಾಹಕರಿಗೆ ಊಟ ಬಡಿಸಲು ಅನುಮತಿಸಲಾಗಿದೆ. ಆದರೆ ಹವಾನಿಯಂತ್ರಣದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಇರುವುದಿಲ್ಲ.
ಹೋಟೆಲ್ ಗಳಿಂದ 24×7 ಡೋರ್ ಡೆಲಿವರಿಗೆ ಅನುಮತಿಸಲಾಗಿದೆ.

ಪಬ್‌ಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ ಹಾಗೂ ಬಾರ್ ಗಳಲ್ಲಿ ಸರ್ವೀಸ್ ಗೆ ಅವಕಾಶವಿಲ್ಲ. ಆತಿಥ್ಯ ಸೇವೆ ಒದಗಿಸುವ ವಸತಿ, ರೆಸಾರ್ಟ್‌ಗಳು,
ಇತ್ಯಾದಿಗಳು ಅದರ ಶೇ 50% ರಷ್ಟು ವಸತಿಗಳಲ್ಲಿ ಮಾತ್ರ ಸೇವೆ ಒದಗಿಸಲು ಅನುಮತಿಸಲಾಗಿದೆ.
ಹೊರಾಂಗಣ ಚಲನಚಿತ್ರ / ದೂರದರ್ಶನ-ಸರಣಿ ಸಂಬಂಧಿತ ಚಿತ್ರೀಕರಣಕ್ಕೆ ಮಾತ್ರ ಅನುಮತಿ ಇದೆ.
ಎಲ್ಲಾ ನಿರ್ಮಾಣ ಚಟುವಟಿಕೆ / ನಾಗರಿಕ ದುರಸ್ತಿ ಕಾರ್ಯಗಳು
ನಿರ್ಮಾಣ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿ/ ಸಂಸ್ಥೆಗಳಿಗೆ ಅನುಮತಿಸಲಾಗಿದೆ.
ವಾಕಿಂಗ್ ಮತ್ತು ಜಾಗಿಂಗ್‌ಗಾಗಿ ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆವರೆಗೆ ಉದ್ಯಾನವನಗಳನ್ನು ತೆರೆಯಲು ಅನುಮತಿ ಇದೆ. ಆದರೆ ಗುಂಪು ಚಟುವಟಿಕೆಗಳಿಗೆ ಅವಕಾಶವಿಲ್ಲ. ಹವಾನಿಯಂತ್ರಿತವಲ್ಲದ ಜಿಮ್ನಾಷಿಯಂಗಳು ಶೇ 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ

ಸಾರಿಗೆ ಬಸ್ಸುಗಳಲ್ಲಿ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಸಂಚಾರಿ ಕಾರ್ಯನಿರ್ವಹಿಸಲು ಅನುಮತಿ ಇದೆ.
ಆದರೆ ಪ್ರಯಾಣಿಕರು ನಿಂತು ಮಾಡುವ ಯಾವುದೇ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ. ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಓಡಾಟಕ್ಕೆ ಅನುಮತಿ ಇದ್ದು ಗರಿಷ್ಠ ಇಬ್ಬರು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬಹುದಾಗಿದೆ. ಪ್ರೇಕ್ಷಕರು ಇಲ್ಲದ ಎಲ್ಲಾ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಮತಿಸಲಾಗಿದೆ.

ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇ. 50 ಸಿಬ್ಬಂದಿ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಇದೆ. ಆದಾಗ್ಯೂ, ಅಗತ್ಯ ಮತ್ತು ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವ ಕಚೇರಿಗಳು
ಸೇವೆಗಳಿಗೆ ಅವುಗಳ ಅಗತ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಮತಿ ಇದ್ದು, ಸಾಧ್ಯವಾದಷ್ಟು
ಮನೆಯಿಂದ ಕೆಲಸ ಮಾಡುವುದನ್ನು ಪ್ರೋತ್ಸಾಹಿಸಬೇಕು.
ಘನತ್ಯಾಜ್ಯ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿ
ನಿರ್ವಹಣೆಗೆ ಅನುಮತಿ ನೀಡಲಾಗಿದೆ.
ಮಾರ್ಗಸೂಚಿಯನ್ವಯರಾತ್ರಿ ಕರ್ಫ್ಯೂ ಸಂಜೆ 7 ರಿಂದ ಬೆಳಿಗ್ಗೆ 5 ಗಂಟೆವರೆಗೆ ಹಾಗೂ ವಾರಾಂತ್ಯದ ಕರ್ಫ್ಯೂ
ಪ್ರತಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ.
ರಾತ್ರಿ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಮತ್ತು ತುರ್ತು
ಹೊರತುಪಡಿಸಿ, ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ರೋಗಿಗಳು ಮತ್ತು ಅವರ ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳುವವರಿಗೆ ಅನುಮತಿಸಲಾಗುವುದು. ಅಗತ್ಯ ಸೇವೆ ಮತ್ತು ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳು / ಸಿಬ್ಬಂದಿಗಳ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ತುರ್ತು ಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು.
ಅಧಿಕೃತ ಗುರುತಿನ‌ ಚೀಟಿ ಹೊಂದಿರುವ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳ‌ ಓಡಾಟಕ್ಕೂ ಅನುಮತಿ ನೀಡಲಾಗುವುದು. ಐಟಿ ಮತ್ತು ಐಟಿಇಎಸ್ ಕಂಪನಿಗಳು / ಸಂಸ್ಥೆಗಳ ಅಗತ್ಯವಿರುವ ಸಿಬ್ಬಂದಿ ಹಾಗೂ ನೌಕರರು ಮಾತ್ರ ಕಚೇರಿಯಿಂದ ಕೆಲಸ ಮಾಡತಕ್ಕದ್ದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
ವೈದ್ಯಕೀಯ/ತುರ್ತು/ಔಷಧಿ ಮಳಿಗೆ ಇನ್ನಿತರೆ ಅಗತ್ಯ ಸೇವೆ ಒದಗಿಸಲು ಅನುಮತಿಯಿದೆ ಆದರೆ ಯಾವುದೇ ವಾಣಿಜ್ಯ ಸೇವೆಗೆ ಅವಕಾಶವಿಲ್ಲ.
ಎಲ್ಲ ತರಹದ ಸರಕು ವಾಹನ/ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿಯಿಲ್ಲ. ಆದರೆ ಹೋಮ್ ಡೆಲಿವರಿ ವಾಹನಗಳಿಗೆ ಅನುಮತಿಯಿದೆ.
ಪ್ರಯಾಣಿಕರ ಪ್ರಯಾಣಕ್ಕೆ ಅನುವಾಗುವಂತೆ ಎಲ್ಲ ರೀತಿಯ ಸಾರಿಗೆ ವಾಹನ ಸಂಚಾರಕ್ಕೆ ಅವಕಾಶವಿದೆ ಹಾಗೂ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ‌ ಮತ್ತು ಬಸ್ ಟರ್ಮಿನಲ್ / ನಿಲ್ದಾಣಗಳಿಗೆ ಹೋಗಲು/ಬರಲು ಸಾರಿಗೆ/ಖಾಸಗಿ ವಾಹನ/ ಟ್ಯಾಕ್ಸಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ದಾಖಲೆ / ಟಿಕೆಟ್ ಅನ್ನು ಕಟ್ಟುನಿಟ್ಟಾಗಿ ಹಾಜರುಪಡಿಸಬೇಕು.
ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಶುಕ್ರವಾರ ಸಂಜೆ 7 ರಿಂದಲೇ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ
ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತತೆ
ಸಂಸ್ಥೆ, ನಿಗಮ, ಇತ್ಯಾದಿ, ತುರ್ತು, ಅಗತ್ಯ ಸೇವೆಗಳನ್ನು ಒದಗಿಸುವ
ಅಧಿಕಾರಿಗಳು / ಸಿಬ್ಬಂದಿ ಓಡಾಟಕ್ಕೆ ಅನುಮತಿಸಲಾಗುವುದು.
ತುರ್ತು ಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು. ಆದಾಗ್ಯೂ, ಸಾಧ್ಯವಾದಷ್ಟು ಮಟ್ಟಿಗೆ, ನೌಕರರು
ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.
ಅಧಿಕೃತ ಗುರುತಿನ‌ ಚೀಟಿ ಹೊಂದಿರುವ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳ‌ ಓಡಾಟಕ್ಕೂ ಅನುಮತಿ ನೀಡಲಾಗುವುದು. ಐಟಿ ಮತ್ತು ಐಟಿಇಎಸ್ ಕಂಪನಿಗಳು / ಸಂಸ್ಥೆಗಳ ಅಗತ್ಯವಿರುವ ಸಿಬ್ಬಂದಿ ಹಾಗೂ ನೌಕರರು ಮಾತ್ರ ಕಚೇರಿಯಿಂದ ಕೆಲಸ ಮಾಡತಕ್ಕದ್ದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.
ರೋಗಿಗಳು
ಅವರ ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳುವವರಿಗೆ ಅನುಮತಿಸಲಾಗುವುದು.
ಅಗತ್ಯ ಸೇವೆ ಮತ್ತು ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳು / ಸಿಬ್ಬಂದಿಗಳ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ತುರ್ತುಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ
ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು.
ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ವ್ಯವಹರಿಸುವ ಅಂಗಡಿಗಳು
ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವು ಮಾರಾಟಕ್ಕೆ
ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅನುಮತಿಸಲಾಗುವುದು. ಬೀದಿ ಬದಿ ಮಾರಾಟ, ಮದ್ಯ ಮಾರಾಟ, ಸಾರ್ವಜನಿಕ ವಿತರಣೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ.
ರೆಸ್ಟೋರೆಂಟ್ ಮತ್ತು ತಿನಿಸುಗಳನ್ನು ತೆಗೆದುಕೊಂಡು ಹೋಗಲು ಹಾಗೂ ಡೋರ್ ಡೆಲಿವರಿಗೆ ಮಾತ್ರ ಅನುಮತಿಸಲಾಗುತ್ತದೆ.
ಪ್ರಯಾಣಿಕರ ಪ್ರಯಾಣಕ್ಕೆ ಅನುವಾಗುವಂತೆ ಎಲ್ಲ ರೀತಿಯ ಸಾರಿಗೆ ವಾಹನ ಸಂಚಾರಕ್ಕೆ ಅವಕಾಶವಿದೆ ಹಾಗೂ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ‌ ಮತ್ತು ಬಸ್ ಟರ್ಮಿನಲ್ / ನಿಲ್ದಾಣಗಳಿಗೆ ಹೋಗಲು/ಬರಲು ಸಾರಿಗೆ/ಖಾಸಗಿ ವಾಹನ/ ಟ್ಯಾಕ್ಸಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ದಾಖಲೆ / ಟಿಕೆಟ್ ಅನ್ನು ಕಟ್ಟುನಿಟ್ಟಾಗಿ ಹಾಜರುಪಡಿಸಬೇಕು.
ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ರಾಜ್ಯ ಸರ್ಕಾರ ಹೊರಡಿಸಿದ ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಮನೆಯಲ್ಲಿಯೇ 40 ಜನರವರೆಗಿನ ನಿಕಟ ಕುಟುಂಬ ಸಂಬಂಧಿಗಳು ಮಾತ್ರ ಒಳಗೊಂಡಂತೆ ನೆರವೇರಿಸಬೇಕು. ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಮಾತ್ರ ನೆರವೇರಿಸಲು ಅನುಮತಿಸಲಾಗುವುದು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.

ತುಮಕೂರು ಸ್ಲಂಗಳಲ್ಲಿ ಕೊರೊನಾ ಕಟ್ಟಿಹಾಕಿದ ಸಮಿತಿ…

0
ಕೊರೊನಾ ಹಾಟ್ ಸ್ಪಾಟ್ ಗಳಾಗಿದ್ದ ತುಮಕೂರಿನ ಕೊಳೆಗೇರಿಗಳಲ್ಲಿ ಕೊರೊ‌ನಾ ಕಟ್ಟಿ ಹಾಕಲು ಸ್ಲಂ ಜನಾಂದೋಲನ ಸಮಿತಿ ಮಾಡಿದ ಕೆಲಸ ಫಲ ನೀಡಿದೆ. ಇದೇ ಮಾನದಂಡವನ್ನು ಜಿಲ್ಲಾಡಳಿತ ಅನುಸರಿಸಿದರೆ ಸಂಭಾವಿತ ಮೂರನೇ ಅಲೆಯಿಂದ ಜಿಲ್ಲೆಯನ್ನು ಕೊರೊನಾ ಸೋಂಕಿನಿಂದ ಪಾರು ಮಾಡಬಹುದಾಗಿದೆ. ಲೇಖಕರಾದ ನರಸಿಂಹಮೂರ್ತಿ ಅವರು ಸ್ಲಂ ಜನಾಂದೋಲನ ಸಮಿತಿಯ ರಾಜ್ಯ ಸಂಚಾಲಕರು.

ಕಿರಿದಾದ ಪ್ರದೇಶದಲ್ಲಿ ಒತ್ತಾಗಿ ಬದುಕುವ ಸ್ಲಂ ನಿವಾಸಿಗಳಲ್ಲಿ ಕೊರೊನ ಸೋಂಕು ವ್ಯಾಪಕವಾಗಿ ಹರಡಿ ಬದುಕಿನ ಜಂಘಾಬಲವನ್ನೇ ಕುಸಿಯುವಂತೆ ಮಾಡಿತು. ಇಂತಹ ಸನ್ನಿವೇಶದಲ್ಲಿ ಹಲವು ವರ್ಷಗಳಿಂದ ಸ್ಲಂ ಜನರ ಬದುಕಿನ ಅಭಿವೃದ್ಧಿಗಾಗಿ ದುಡಿಯುತ್ತ ಬಂದಿರುವ ತುಮಕೂರು ಜಿಲ್ಲಾ ಕೊಳಗೇರಿ ಸಮಿತಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಳಗೇರಿ ನಿವಾಸಿಗಳ ನೆರವಿಗೆ ಧಾವಿಸುವ ಜೊತೆಗೆ ಕೊರೊನ ಸೋಂಕಿನ ಪರಿಣಾಮ, ರೋಗದ ನಿವಾರಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸ್ಲಂ ಜನರಲ್ಲಿ ಅರಿವು ಮೂಡಿಸಿ, ಮಾಡಿದ ಕೆಲಸದಿಂದ ಬರುತ್ತಿದೆ. ಇದರ ಪರಿಣಾಮ ಸ್ಲಂಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖವಾಗುವಂತೆ ಮಾಡಿದೆ.

ಅಷ್ಟೇ ಅಲ್ಲ ಕೊಳಗೇರಿ ಸಮಿತಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮೆಡಿಸಿನ್ ಕಿಟ್‌ಗಳನ್ನು ಸ್ಲಂಗಳಲ್ಲಿ ವಿತರಣೆ ಮಾಡುವ ಕೆಲಸವನ್ನೂ ಮಾಡಿದೆ.

ಸಮಿತಿಯ ನೇತೃತ್ವದಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ಆ ತಂಡದ ಸದಸ್ಯರು ತುಮಕೂರು ನಗರದ 25 ಸ್ಲಂಗಳಲ್ಲಿ ಮನೆಮನೆಗೂ ಭೇಟಿ ನೀಡಿ ಸೋಂಕಿತರರಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿತು. ಜೊತೆಗೆ ಈವರೆಗೆ 560 ಕ್ಕೂ ಹೆಚ್ಚು ಮಂದಿ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ದೊರೆಯುವಂತೆ ಮಾಡಿತು.

ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರಿಗೆ ಮೆಡಿಸಿನ್ ಕಿಟ್‌ಗಳನ್ನು ವಿತರಿಸುವಂತಹ ಕೆಲಸ ಮಾಡುತ್ತ ಬರುತ್ತಿದೆ.
20 ಸ್ವಯಂಕಾರ್ಯಕರ್ತರು ದಿಬ್ಬೂರು ದೇವರಾಜ್‌ಅರಸು ಬಡಾವಣೆ, ಎಸ್,ಎನ್ ಪಾಳ್ಯ, ಅರಳೀಮರದ ಪಾಳ್ಯ, ಮಾರಿಯಮ್ಮ ನಗರ, ಕುರಿಪಾಳ್ಯ, ಭಾರತಿನಗರ, ಸಂಪಾಧನೆ ಮಠ, ಎನ್,ಆರ್ ಕಾಲೋನಿ, ಅಂಬೇಡ್ಕರ್ ನಗರ, ಕ್ಯಾತ್ಸಂದ್ರ ಎಳ್ಳರಬಂಡೆ, ಇಸ್ಮಾಯಿಲ್ ನಗರ, ಹಂದಿಜೋಗಿ ಕಾಲೋನಿ, ಮರಳೂರು ದಿಣ್ಣೆ, ಡಿಎಂ ಪಾಳ್ಯ, ದೇವರಾಯಪಟ್ಟಣ, ಶೆಟ್ಟಿಹಳ್ಳಿ ಜ್ಯೋತಿ ಕಾಲೋನಿ ಮುಂತಾದ ನಗರವಂಚಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ಬರದಂತೆ ತಡೆಯುವ ಬಗ್ಗೆ, ಚಿಕಿತ್ಸೆಗೆ ಅಗತ್ಯವಿರುವ ಮಾರ್ಗದರ್ಶನ ನೀಡಿದೆ.

ತತ್ಪರಿಣಾಮ ಸೋಂಕಿತರಲ್ಲಿ ನೂರಾರು ಮಂದಿ ಗುಣಮುಖರಾಗಿ ದೈನಂದಿನ ಕಾರ್ಯಗಳಿಗೆ ಮರಳುವಂತೆ ಮಾಡಿದ್ದು ಸಮಿತಿಗೆ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ತುಂಬಿದೆ.

ಕೊಳಗೇರಿ ಜನರಿಗೆ 3400 ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ವಿವಿಧ ಕೊಳಗೇರಿಗಳಲ್ಲಿ 1448 ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸಿ ಸೋಂಕಿನ ಪ್ರಮಾಣವನ್ನು ತಗ್ಗಿಸುವಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪ್ರಮುಖ ಪಾತ್ರ ವಹಿಸಿದ್ದು ಜನರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸುತ್ತಿದೆ.

ನಗರವಂಚಿತ ಸಮುದಾಯಗಳಾದ ದಲಿತರು ಅಲ್ಪಸಂಖ್ಯಾತರು ಮತ್ತು ಅಲೆಮಾರಿಗಳು, ಗೃಹ ನಿರ್ಮಾಣ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು ಲಸಿಕೆ ಪಡೆಯಲು ಮುಂದಾಗುತ್ತಿರುವುದು ಆಶಾದಾಯಕ ಬೆಳವಣ ಗೆಯಾಗಿದೆ.

ಮೊದಲು ವ್ಯಾಕ್ಸಿನೇಷನ್ ಪಡೆಯಲು ಭಯಪಡುತ್ತಿದ್ದ ಕೊಳಗೇರಿಗಳಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಎಲ್ಲರೂ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಕೊಳಗೇರಿ ಸಮಿತಿ ಲಸಿಕೆ ಬಗ್ಗೆ ಇದ್ದ ಭಯದ ವಾತಾವರಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖಪಾತ್ರ ವಹಿಸಿದೆ.

ಮೇ ಮೊದಲ ವಾರದಲ್ಲಿ ನಗರದ ಸುಮಾರು ೧೦-೧೫ ಸ್ಲಂಗಳು ಹಾಟ್‌ಸ್ಪಾಟ್‌ಗಳೆಂದು ಘೋಷಣೆ ಮಾಡಲಾಗಿತ್ತು. ಕೊಳಗೇರಿ ಸಮಿತಿ ಜಿಲ್ಲಾಧ್ಯಕ್ಷರಾದ ಎ.ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಕರ್ತರ ಕಾರ್ಯಪಡೆಯೋಂದಿಗೆ ಆರೋಗ್ಯ ಇಲಾಖೆ, ತುಮಕೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ಸ್ಲಂಗಳಲ್ಲಿ ಜನಜಾಗೃತಿ ಮೂಡಿಸಿದ ಪರಿಣಾಮ ಇಂದು ಆ ಸ್ಲಂಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು.


ಕೊಳಗೇರಿ ಸಮಿತಿ ದಾನಿಗಳಿಂದ, ಹಸಿರುದಳ, ಅಜೀಂಪ್ರೇಮ್‌ಜಿ ಫ್ರಿಲಾಂಥ್ರಾಫಿಕಲ್ ಇನ್ಸಿಟ್ಯೂಟ್, ಜನಸಹಯೋಗ ಮತ್ತು ಸಾಧನ ಮಹಿಳಾ ಸಂಘ ಹಾಗೂ ವೈಯಕ್ತಿಕ ದಾನಿಗಳಿಂದ ಆಹಾರ ಧಾನ್ಯಗಳ ಕಿಟ್‌ಗಳನ್ನು ಸಂಗ್ರಹಿಸಿ ದುಡಿಯುವ ಜನರು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಹಸಿವಿನಿಂದ ಬಳದಂತೆ ಇದುವರೆಗೂ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ತಲುಪಿಸಲಾಗಿದೆ. ಮಾಜಿ ಶಾಸಕ ರಫೀಕ್‌ಅಹ್ಮದ್ ಅಭಿಮಾನಿಗಳ ಬಳಗ, ಗೆಳೆಯರ ಬಳಗಕ್ಕೆ ಸಮಿತಿ ಮನವಿ ಮಾಡಿದ ಮೇರೆಗೆ ಸ್ಲಂಗಳಲ್ಲಿರುವ ಅಸಹಾಯಕ ಕುಟುಂಬಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದೆ.


ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

ಕೊರೊನಾ ಹಾಟ್‌ಸ್ಪಾಟ್ ಕೊಳಗೇರಿಗಳಲ್ಲಿ ಜನ ತೊಂದರೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಸಮಿತಿ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಮಹಾಪೌರರು, ಮಹಾನಗರ ಪಾಲಿಕೆ ಸದಸ್ಯರುಗಳು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಮೇಲೆ ಒತ್ತಡ ಹೇರಿ ಕಾಲಕಾಲಕ್ಕೆ ಅಗತ್ಯವಿರುವ ನೆರವು ಮತ್ತು ಬೆಂಬಲವನ್ನು ಪಡೆಯುವಲ್ಲಿಯು ಯಶಸ್ವಿಯಾಗಿದೆ.

ಇದಕ್ಕೆ ನಿದರ್ಶನ ಎನ್,ಆರ್ ಕಾಲೋನಿ ಶೈಕ್ಷಣ ಕ ಭವನದಲ್ಲಿ ನಾಗರಿಕ ಸಮಿತಿ ಮತ್ತು ಜನಪ್ರತಿಗಳ ಸಭೆ ಕರೆದು ಸ್ಲಂಗಳಿಗೆ ವಿಶೇಷ ಗಮನ ನೀಡಲು ಒತ್ತಡ ಹೇರಲಾಯಿತು.
ಸ್ಲಂಗಳಲ್ಲಿ ಸೋಂಕಿಗೆ ಒಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ನಗರ ಪಾಲಿಕೆಯಿಂದ ಕೋವಿಡ್‌ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸುವAತೆ ಒತ್ತಡ ತರಲಾಯಿತು. ಮೇಯರ್ ಬಿ.ಜಿ. ಕೃಷ್ಣಪ್ಪ ಅವರೊಂದಿಗೆ ಈ ಸಂಬAಧ ಚರ್ಚಿಸಲಾಯಿತು. ಇದಕ್ಕೆ ಸ್ಪಂದಿಸಿದ ಬಿ.ಜಿ ಕೃಷ್ಣಪ್ಪ ಕೊಳಗೇರಿಗಳಲ್ಲಿ ವ್ಯಾಕ್ಸಿನೇಷನ್ ಪಡೆಯಲು ಜಾಗೃತಿ, ಸೋಂಕು ನಿವಾರಣೆಗೆ ಲಸಿಕೆ ಪಡೆಯುವುದು ಅಗತ್ಯ. ಅಸಹಾಯಕರು ಮತ್ತು ಚಿಕಿತ್ಸೆ ಭತ್ಯೆ ಭರಿಸಲು ಸಾಧ್ಯವಾಗದ ಸ್ಲಂ ನಿವಾಸಿಳಿಗೆ ಹಾಗೂ ಬಡವರಿಗೆ ಮೇಯರ್ ಅನುದಾನ ಮತ್ತು ೨೪.೧೦% .೭.೨೫ ಅನುದಾನಗಳಲ್ಲಿ ವೆಚ್ಚ ಭರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳೊಂದಿಗೆ ಸಮಿತಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ೧೯ ಮತ್ತು ೨೦ ನೇ ವಾರ್ಡಿನ ಎನ್,ಆರ್ ಕಾಲೋನಿ ಹಾಗೂ ಅಂಬೇಡ್ಕರ್ ನಗರದ ಕೋವಿಡ್ ಸೋಂಕಿತರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭೇಟಿ ನೀಡಿ ಮೆಡಿಸಿನ್ ಕಿಟ್ ವಿತರಿಸಿದರು.

ಸೋಂಕಿತರ ಯೋಗಕ್ಷೇಮ ವಿಚಾರಿಸಿದರು. ಸ್ಲಂ ನಿವಾಸಿಗಳ ಮನೆಗಳನ್ನು ಪರಿಶೀಲಿಸಿದರು. ಐಸೋಲೇಷನ್ ಸಮಸ್ಯೆಯಾದರೆ ಕ್ಯಾತ್ಸಂದ್ರ ಕೋವಿಡ್‌ಕೇರ್ ಸೆಂಟರ್, ರೆಡ್‌ಕ್ರಾಸ್ ಮತ್ತು ರೇಣುಕಾ ವಿದ್ಯಾಪೀಠದ ಕೇರ್ ಸೆಂಟರ್‌ಗಳಿಗೆ ದಾಖಸಬಹುದು ಎಂದು ಹೇಳಿದರು. ಫಲ್ಸ್ ಆಕ್ಸಿಮೀಟರ್‌ಗಳನ್ನು ಸ್ವಯಂಕಾರ್ಯಕರ್ತರಿಗೆ ವಿತರಿಸಿ ಸೋಂಕಿತರ ಉಸಿರಾಟ ಪರೀಕ್ಷಿಸುವಂತೆ ಮತ್ತು ಇದಕ್ಕೆ ಸ್ಲಂಜನಾAದೋಲನ ಕರ್ನಾಟಕದ ಸಂಘಟನೆಯ ಸಹಕಾರ ಪಡೆಯುವಂತೆ ಸಲಹೆ ನೀಡಿದರು.

ಪಾಲಿಕೆ ಆಯುಕ್ತರು ಸ್ಲಂಗಳಿಗೆ ಭೇಟಿ ನೀಡಿ ಜನರಿಗೆ ತಿಳುವಳಿಕೆ ಮೂಡಿಸಿದರು. ಪೌರಕಾರ್ಮಿಕರಿಗೆ ಚಿಂದಿ ಆಯುವವರಿಗೆ ಹಾಗೂ ಸೋಂಕಿತರಿಗೆ ಮೆಡಿಸಿನ್ ಕಿಟ್ ಜೊತೆಯಲ್ಲಿ ಆಹಾರದ ಕಿಟ್‌ಗಳನ್ನು ಕೊಳಗೇರಿ ಸಮಿತಿಯು ದೊರಕಿಸಿಕೊಟ್ಟಿರುವ ಬಗ್ಗೆ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದರು. ಚಿಂದಿ ಆಯುವವರನ್ನು ಗುರುತಿಸಿ ಈಗಾಗಲೇ ಗುರುತಿನ ಕಾರ್ಡ್ಗಳನ್ನು ನೀಡಿದೆ. ಚಿಂದಿ ಆಯುವವರು ಲಸಿಕೆಗಳನ್ನು ಪಡೆಯಲು ಹಿಂಜರಿಯುತ್ತಿದ್ದು ಇದರಿಂದ ಹೊರಬಂದು ವ್ಯಾಕ್ಸಿನೇಷನ್ ಪಡೆಯಬೇಕು ಎಂದು ಹೇಳಿದರು.
ಜನಪರ ಚಿಂತಕ ಕೆ.ದೊರೈರಾಜ್ ಕೂಡ ಸಮಿತಿಯ ಸದಸ್ಯರೊಂದಿಗೆ ಕೆಲವೊಂದು ಸ್ಲಂಗಳಿಗೆ ಭೇಟಿ ನೀಡಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಡಜನರು ಉಳಿಯಬೇಕೆಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯವಿದೆ. ಮುಂಬೈನ ದಾರಾವಿ ಸ್ಲಂ ಕೊರೊನದ ರೆಡ್‌ಝೋನ್ ಆಗಿತ್ತು. ಅಲ್ಲಿಯ ಯುವಜನರು ರೋಗದ ಬಗ್ಗೆ ಸ್ವಯಂ ಜಾಗೃತರಾಗಿ ಶಿಸ್ತನ್ನು ಪಾಲಿಸಿದರು.

ಸಮುದಾಯವನ್ನು ರೋಗದಿಂದ ಮುಕ್ತವಾಗಲು ಲಸಿಕೆ ಪಡೆದರು. ಪರಿಣಾಮ ಅಲ್ಲಿ ಸೋಂಕು ಕಡಿಮೆಯಾಗಿದೆ. ಇಂತಹ ಜಾಗೃತಿ ಎಲ್ಲಾ ಕೊಳಗೇರಿಗಳಲ್ಲಿರುವ ಯುವಜನರಿಗೆ ಬರಬೇಕು. ಸಮುದಾಯದ ರಕ್ಷಣೆ ಮಾಡಬೇಕು. ಕೊರೊನ ಸಂದರ್ಭದಲ್ಲಿ ನಾನು ಉಳಿದರೆ ಸಾಕು ಎಂಬ ಮನೋಭಾವವಿದೆ. ಇಂತಹ ಮನೋಭಾವ ದೂರವಾಗಬೇಕು ಎಂದರೆ ನಾವು ಈ ರೋಗದ ಬಗ್ಗೆ ಎಚ್ಚರಗೊಳ್ಳಬೇಕು.

ತುಮಕೂರು ಕೊಳಗೇರಿ ಸಮಿತಿ ಸಂಕಷ್ಟದಲ್ಲಿರುವ ಸ್ಲಂ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸುವ ಕೆಲಸ ಮಾಡಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪಿಯುಸಿಎಲ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಬದುಕುವುದು ದುಸ್ತರವಾಗಿದೆ. ಲಾಕ್‌ಡೌನ್‌ನಿಂದ ಬಸ್ತಿ ಅಥವಾ ಭಿಕ್ಷಾಟಣೆಗೂ ಕಷ್ಟವಾಗಿದೆ. ವಾಣ ಜ್ಯ ವಹಿವಾಟು ಸ್ತಬ್ದಗೊಂಡಿದೆ. ಇದು ಮಂಗಳಮುಖಿಯರ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಕೊಳಗೇರಿ ಸಮಿತಿ ನೈತಿಕವಾಗಿ ನಮ್ಮ ಜೊತೆಗಿದೆ. ನಮಗೆ ಆಹಾರದ ಕಿಟ್‌ಗಳನ್ನು ದೊರಕಿಸಿ ಕೊಟ್ಟಿದೆ. ಇದು ತಾತ್ಕಾಲಿಕ. ಆದ್ದರಿಂದ ಸರ್ಕಾರವೇ ಪ್ರತಿ ಮಂಗಳಮುಖಿಗೆ ಮಾಸಿಕ ೧೦ ಸಾವಿರ ಲಾಕ್‌ಡೌನ್ ಭತ್ಯೆ ನೀಡಬೇಕು. ಉಚಿತ ಪಡಿತರ ಆಹಾರ ಧಾನ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ತುಮಕೂರು ಕೊಳಗೇರಿ ಸಮಿತಿಯಿಂದ ಜಾಗೃತಿ ಮುಡಿಸುವ ಜೊತೆಗೆ ಇದುವರೆಗೂ ೩೪೦೦ ಮಾಸ್ಕ್ಗಳ ವಿತರಣೆ ಮಾಡಿದೆ. ಸೋಂಕಿತರಿಗೆ ಬೆಡ್ ಮತ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಂಡಿದೆ. ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಮಹಾನಗರ ಪಾಲಿಕೆಯಿಂದ ಸ್ಲಂಗಳಲ್ಲಿ ಸ್ಯಾನಿಟೈಜರ್ ಮತ್ತು ೧ ಸಾವಿರ ಮೆಡಿಸಿನ್ ಕಿಟ್‌ಗಳನ್ನು ವಿತರಿಸುವಂತೆ ಮಾಡಿದೆ. ಪೋಲಿಸ್ ಇಲಾಖೆಯ ಸಹಕಾರದಿಂದ ಅಲೆಮಾರಿಗಳಿಗೆ ಫುಡ್‌ಕಿಟ್ ದೊರೆತಿದೆ.

ಸಮಿತಿಯೊಂದಿಗೆ ಸಹಕಾರ ನೀಡಿದ ಎಲ್ಲಾ ದಾನಿಗಳಿಗೂ ಮತ್ತು ಕೊಳಗೇರಿ ಸಮಿತಿಯ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಸ್ಲಂಜನಾAದೋಲನಾ ಕರ್ನಾಟಕ ಸಂಘಟನೆ ಕೃತಜ್ಞತೆ ಸಲ್ಲಿಸುತ್ತದೆ. ಮೂರನೇ ಅಲೆಯನ್ನು ಎದುರಿಸುವ ದೈರ್ಯ ಸ್ಲಂ ಜನರಲ್ಲಿ, ಸಮಿತಿಗೆ ಇದೆ. ಇದು ಸಮುದಾಯದ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಸಮಿತಿಯು ಜಗತ್ತಿಗೆ ತೋರಿಸಿದೆ.

ಜೂನ್ 21ರಂದು ಲಸಿಕಾ ಮೇಳ

Public story


ತುಮಕೂರು: ರಾಜ್ಯಾದ್ಯಂತ ಕೋವಿಡ್-19 ಲಸಿಕಾ ಮೇಳ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಜೂನ್ 21ರಂದು ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಲಸಿಕಾ‌ ಮೇಳದ ಸಂಪೂರ್ಣ ಯಶಸ್ವಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ.

ಈ ಲಸಿಕಾ ಮೇಳದಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಲಸಿಕೆ ನೀಡಲು ಮೊದಲ ಆದ್ಯತೆ, 2ನೇ ಡೋಸ್ ಗೆ ಬಾಕಿ ಇರುವ ಫಲಾನುಭವಿಗಳಿಗೆ ಲಸಿಕಾಕರಣ, ಭಾರತ ಸರ್ಕಾರದ ವ್ಯಾಖ್ಯಾನದಂತೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ, 18 ರಿಂದ 44 ವರ್ಷ ವಯೋಮಾನದ ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ರಾಜ್ಯ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ‌ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಲಸಿಕಾಕರಣ ನಡೆಸಲಾಗುವುದು ಎಂದು ತಿಳಿಸಿದ್ದಾರೆ.