Public story
ಪಾವಗಡ: ಪ್ರಜಾಪ್ರಭುತ್ವ ವಿರೋಧಿ ರೈತ ವಿರೋಧೀ ಶಾಸನಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 7 ತಿಂಗಳು ಪೂರೈಸಿದೆ. ಆದರೆ ಈವರೆಗೆ ಸರ್ಕಾರ ರೈತರ ಕೂಗನ್ನು ಕೇಳಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಕೋಟ್ಯಂತರ ಮಂದಿಗೆ ಅನ್ನ ನೀಡುವ ಅನ್ನದಾತರ ಮೇಲೆ ಆಶ್ರುವಾಯು ಸಿಡಿಸಿ, ಲಾಟಿ ಚಾರ್ಜ್ ಮಾಡಿ ರೈತರ ಹೋರಾಟ ದಮನ ಮಾಡುವ ಸರ್ಕಾರದ ಯತ್ನ ಖಂಡನೀಯ ಎಂದು ಆರೋಪಿಸಿದರು.
ಇದನ್ನೂ ಓದಿ:https://publicstory.in/janapadanayaka-dr-rajakumar/
ಕೃಷಿಯನ್ನು ಉಳಿಸಿ ಪ್ರಜಾ ಪ್ರಭುತ್ವ ರಕ್ಷಿಸಬೇಕಾದ ಸರ್ಕಾರ ರೈತರ ಜೊತೆ ಸಮಾಲೋಚನೆ ನಡೆಸದೆ. ರೈತರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಏಕಾ ಏಕಿ ಒತ್ತಾಯ ಪೋರ್ವಕವಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ತಂದಿದೆ. ಇಂತಹ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಯಾರೂ ಕೇಳಿಕೊಂಡಿರಲಿಲ್ಲ ಕೆಲವರ ಹಿತಾಸಕ್ತಿಗಾಗಿ ಇಂತಹ ಕಾಯ್ದೆ ತರಲಾಗಿದೆ ಎಂದು ದೂರಿದರು.
ಸ್ವಾಮಿನಾಥನ್ ಅವರ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸದೆ ದಿನ ದೂಡುತ್ತಿರುವ ಸರ್ಕಾರ, 2022 ರೊಳಗಾಗಿ ರೈತರ ಆದಾಯ ದ್ವಿಗುಣಗೊಳಿಸುವ ಸುಳ್ಳು ಭರವಸೆ ನೀಡುತ್ತಿದೆ. ರೈತರು ಬೆಳೆದ ಉತ್ಪನ್ನಗಳಿಗೆ ತಕ್ಕ ಬೆಲೆ ನೀಡದೆ ಶೋಷಿಸಲಾಗುತ್ತಿದೆ. ಇದರಿಂದ ಸಾಲದ ಹೊರೆ ಹೆಚ್ಚಿ ಮೂರು ದಶಕಗಳಲ್ಲಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ಸ್ವಾಮಿನಾಥನ್ ಅವರ ವರದಿ ಪ್ರಕಾರ ರೈತರು ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಕೃಷ್ಣರಾವ್, ಕಾರ್ಯದರ್ಶಿ ಶಿವರಾಜು, ನಾರಾಯಣಪ್ಪ, ವೆಂಕಟಸ್ವಾಮಿ, ರಾಮಾಂಜಿ, ದೊಡ್ಡಣ್ಣ, ಹುಲಿಯಪ್ಪ, ಕುಮಾರ, ಅನ್ನಪೂರ್ಣಪ್ಪ, ಲಕ್ಷ್ಮಾನಾಯ್ಕ, ರಾಮಕೃಷ್ಣಪ್ಪ, ಹನುಮಂತರಾಯ, ಈರಣ್ಣ ಉಪಸ್ಥಿತರಿದ್ದರು.