Friday, May 31, 2024
Google search engine
Homeಸಾಹಿತ್ಯ ಸಂವಾದವಾರದ ಪುಸ್ತಕವಾರದ ಪುಸ್ತಕ: ವರನಟನಿಗೊಂದು ಪುಟ್ಟ ಕನ್ನಡಿ : ಜನಪದ ನಾಯಕ ಡಾ. ರಾಜಕುಮಾರ್

ವಾರದ ಪುಸ್ತಕ: ವರನಟನಿಗೊಂದು ಪುಟ್ಟ ಕನ್ನಡಿ : ಜನಪದ ನಾಯಕ ಡಾ. ರಾಜಕುಮಾರ್

ಡಾ.ರಾಜ್ ಅವರೊಂದಿಗೆ ಬರಗೂರು ರಾಮಚಂದ್ರಪ್ಪ

ಡಾ.ರಾಜ್ ಕುಮಾರ್ ಸಿನಿಮಾಗಳ ಕುರಿತು ತುಮಕೂರು ವಿ.ವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಗೋವಿಂದರಾಜ ಎಂ.‌ಕಲ್ಲೂರು ಅವರು ನಾಡೋಜ ಬರಗೂರು ರಾಮಚಂದ್ರಪ್ಪನವರು ಬರೆದಿರುವ ಜನಪದ ನಾಯಕ ಡಾ.ರಾಜ್ ಕುಮಾರ್ ಪುಸ್ತಕದ ಕುರಿತು ಬರೆದಿದ್ದಾರೆ.

ಸಾಹಿತ್ಯ, ಸಿನಿಮಾ, ಸಂಘಟನೆ ಮತ್ತು ಜನಪರ ಚಳವಳಿಗಳಲ್ಲಿ ಸದಾ ಸಕ್ರಿಯರಾಗಿರುವ ಮೇಷ್ಟ್ರು ಬರಗೂರು ರಾಮಚಂದ್ರಪ್ಪನವರ ‘ಜನಪದ ನಾಯಕ ಡಾ. ರಾಜಕುಮಾರ್’ ಎಂಬ ಪುಸ್ತಕವನ್ನು ವರನಟ ರಾಜಕುಮಾರ್‌ರ ವ್ಯಕ್ತಿತ್ವಕ್ಕಿಡಿದ ಪುಟ್ಟ ಕೈಗನ್ನಡಿ ಎನ್ನಬಹುದು.

ತನ್ನ ಸಿನಿಮಾಗಳ ಮೂಲಕ ಕರ್ನಾಟಕದ ಜನರನ್ನು ವ್ಯಾಪಕವಾಗಿ ಪ್ರಭಾವಿಸಿದ ನಟ ಡಾ. ರಾಜಕುಮಾರ್. ಕನ್ನಡದ ಸಾಹಿತ್ಯ ಪಂಥಗಳಲ್ಲಿ ಮತ್ತು ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಇತಿಹಾಸದಲ್ಲಿ ಕಂಡು ಬಂದ ನಾಡು-ನುಡಿ ಪ್ರೇಮ, ಪ್ರಕೃತಿ ಪ್ರೇಮ, ಆಧ್ಯಾತ್ಮ, ಸಮಾಜವಿರೋಧಿ ನಿಲುವುಗಳ ವಿರುದ್ದದ್ದ ಬಂಡಾಯ ಧೋರಣೆ, ಸಾಮಾಜಿಕ ಕ್ರಾಂತಿ ಮತ್ತು ನ್ಯಾಯ, ಚಾರಿತ್ರಿಕ ನಾಯಕರ ಕಥನಗಳ ಮರುನಿರೂಪಣೆ, ಶ್ರಮಿಕರ, ಕಾರ್ಮಿಕರ ಜೀವನದ ನಿರೂಪಣೆ ಮುಂತಾದವು ಕನ್ನಡ ಸಾಹಿತ್ಯದ ವಿವಿಧ ಚಳವಳಿಗಳಲ್ಲಿ, ಕರ್ನಾಟಕದ ಸಮಾಜದಲ್ಲಿ ಮೂಡಿದಷ್ಟೇ ಶಕ್ತವಾಗಿ ರಾಜಕುಮಾರರ ಸಿನಿಮಾದಲ್ಲಿಯೂ ವ್ಯಕ್ತವಾದವು.

ಕನ್ನಡದ ಸಾಹಿತ್ಯವಲಯವು ಸೀಮಿತ ಓದುಗರು ಮತ್ತು ತರಗತಿಯ ಕೋಣೆಗಳಲ್ಲಿ ಚರ್ಚಿಸುತ್ತಿದ್ದ, ಹಂಬಲಿಸಿ ಕಟ್ಟುತ್ತಿದ್ದ ‘ಮಾದರಿ ಕರ್ನಾಟಕ’ದ ಚಿತ್ರಣವನ್ನು, ‘ಮಾದರಿ ಕನ್ನಡಿಗ’ನ ರೂಪವನ್ನು ತನ್ನ ಸಿನಿಮಾಗಳ ಮೂಲಕ ಏಕ ಕಾಲಕ್ಕೆ, ಅಪಾರ ಜನ ಸಮುದಾಯವನ್ನು ಒಟ್ಟಿಗೇ ಕೂರಿಸಿ ಕನ್ನಡ-ಕನ್ನಡಿಗ-ಕರ್ನಾಟಕದ ‘ಭಾವಿಸಿದ ಜನಪದ’ದ ಬಗ್ಗೆ ಮುಕ್ತ ವಿಶ್ವವಿದ್ಯಾನಿಲಯದಂತೆ ಪಾಠ ನಡೆಸಿದ್ದು ಸಹ ಇದೇ ರಾಜಕುಮಾರರ ಸಿನಿಮಾಗಳು.

ರಾಜಕುಮಾರರ ಕುರಿತು ಕನ್ನಡ ಮತ್ತು ಇತರ ಭಾಷೆಗಳಲ್ಲಿ ಈಗಾಗಲೇ ಸಾಕಷ್ಟು ಪುಸ್ತಕಗಳು ಬಂದಿವೆ. ಅವೆಲ್ಲವೂ ತಮ್ಮ-ತಮ್ಮ ಅನುಭವಗಳ ಮೂಲಕ,
ಒಂದೊಂದು ರೀತಿಯಲ್ಲಿ ರಾಜಕುಮಾರ್ ಎಂಬ ವಿದ್ಯಮಾನವನ್ನು ಕಟ್ಟಲು ನಡೆಸಿದ ಪ್ರಯತ್ನಗಳೇ ಆಗಿವೆ.

ಬರಗೂರು ರಾಮಚಂದ್ರಪ್ಪನವರ ‘ಜನಪದ ನಾಯಕ ಡಾ. ರಾಜಕುಮಾರ್’ ಪುಸ್ತಕವು ರಾಜಕುಮಾರರನ್ನು ಕೈಗೆಟುಕದ ತಾರೆಯಂತೆಯೋ, ತೀರಾ ನುಣ್ಣಗೆ ಕಾಣುವ ದೂರದ ಬೆಟ್ಟದಂತೆಯೋ ಕಲ್ಪಿಸಿ ಕಾಣುವ ಕ್ರಮಕ್ಕೆ ಪ್ರತಿಯಾಗಿ ರಾಜಕುಮಾರ್ ರನ್ನು ಈ ನೆಲದ ಜನಪದ ನಾಯಕನನ್ನಾಗಿ ನೋಡಲು ಪ್ರಯತ್ನಿಸಿದ ಅಪರೂಪದ ಪುಸ್ತಕ.

ಈ ಪುಸ್ತಕವು ರಾಜಕುಮಾರ್ ಅವರ ವ್ಯಕ್ತಿತ್ವದ ವಿಶ್ಲೇಷಣೆಯೊಂದಿಗೆ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ತಿಳಿಸುವ ಐದು ಲೇಖನಗಳನ್ನು ಒಳಗೊಂಡಿದೆ. ಬರಗೂರು ರಾಮಚಂದ್ರಪ್ಪನವರೇ ಹೇಳುವಂತೆ “ಡಾ. ರಾಜಕುಮಾರ ಅಂದರೆ ಏನು? ಎಂಬುದಕ್ಕೊಂದು ಶೋಧ, ಏನು ಮಾಡಿದರು ಎಂಬುದಕ್ಕೊಂದು ಉತ್ತರ ಈ ಪುಸ್ತಕ”.

“ರಾಜಕುಮಾರರ ಬಗ್ಗೆ ಬರೆಯುವುದು ಮಾತನಾಡುವುದು ನನ್ನ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು” ಎನ್ನುವ ರಾಮಚಂದ್ರಪ್ಪನವರು ಈ ಪುಸ್ತಕವನ್ನು ಜನಪದ ಕತೆಗಳ ಉದಾಹರಣೆಯೊಂದಿಗೆ ಆರಂಭಿಸುತ್ತಾರೆ. ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಛಿಸಿ ಅಪಾರ ಇಚ್ಛಾಶಕ್ತಿ, ಕರಗದ ಶ್ರದ್ಧೆ, ಬದಲಾಗದ ಸಂಕಲ್ಪ ಬಲದಿಂದ ಅಂದುಕೊಂಡ ಗುರಿಯನ್ನು ಸಾಧಿಸುವುದು, ರೈತನೊಬ್ಬ ರಾಜಕುಮಾರಿಯನ್ನು ಮದುವೆಯಾಗುವುದು ಮುಂತಾದ ಕಥನಗಳಂತೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದಿಂದ ಬಂದ ರಾಜಕುಮಾರ್ ಅಪಾರ ಮನ್ನಣೆಗೆ ಪಾತ್ರವಾದದ್ದು, ನಾಡಿನ ಅಪರಿಮಿತ ಪ್ರೀತಿಯನ್ನು ಗಳಿಸಿದ್ದು ಜನಪದರ ನಾಯಕನಾಗಿ ಎಂಬುದನ್ನು ಬರಗೂರು ರಾಮಚಂದ್ರಪ್ಪ ಗುರುತಿಸುತ್ತಾರೆ.

ರಾಜಕುಮಾರ್ ತಿರುಪತಿಯಲ್ಲಿ ವಿಶೇಷ ದರ್ಶದ ಅವಕಾಶವಿದ್ದರೂ ಸಾಮಾನ್ಯರ ಸಾಲಿನಲ್ಲಿ ನಿಂತು ದರ್ಶನ ಪಡೆದಿದ್ದು, ‘ಕರ್ನಾಟಕ ರತ್ನ ಪ್ರಶಸ್ತಿ’ (೧೯೯೨) ಪ್ರಧಾನ ಸಮಾರಂಭದಲ್ಲಿ ಜನರನ್ನು ‘ಅಭಿಮಾನಿ ದೇವರುಗಳು’ ಎಂದೂ, ರಂಗಭೂಮಿ ಕಂಪನಿಯ ಮಾಲೀಕರನ್ನೂ, ಸಿನಿಮಾ ನಿರ್ದೇಶಕರನ್ನು ‘ಅನ್ನದಾತರೇ’ ಎಂದು ಕರೆದದ್ದು, “ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲು ಕುವೆಂಪು ಅವರಿಗೆ ಕೊಡಿ ನನಗೆ ಮೊದಲು ಬೇಡ” ಎಂದದ್ದು ಚಿತ್ರೀಕರಣದ ಸಂಧರ್ಭದಲ್ಲಿ ರಾಜಕುಮಾರ್ ತಮ್ಮ ತಾರಾ ಪಟ್ಟವನ್ನು ಮರೆತು ವಿನಯದಿಂದ ವರ್ತಿಸುತ್ತಿದ್ದ ಪ್ರಸಂಗಗಳು ಈ ಪುಸ್ತಕದಲ್ಲಿ ದಾಖಲಾಗಿವೆ.

ಈ ಪುಸ್ತಕದಲ್ಲಿನ ‘ಬೆವರಿನ ಮನುಷ್ಯ ಡಾ ರಾಜಕುಮಾರ್’ ಎಂಬ ಲೇಖನವು ‘ರಾಜಕುಮಾರ್ ಕೇವಲ ಸಿನಿಮಾ ಕಲಾವಿದರಾಗಿದ್ದರೆ ಇಷ್ಟೆಲ್ಲಾ ಜನರ ಪ್ರೀತಿಗೆ ಪಾತ್ರವಾಗುತ್ತಿರಲಿಲ್ಲ’ ಎಂಬುದಕ್ಕೆ ಸಾಕ್ಷಿಗಳನ್ನು ಹುಡುಕುವಂತಿದೆ. ತಾರಾ ಮೌಲ್ಯದಿಂದ ರಾಜ್ ಸಮೀಪ ಅಂತರವನ್ನು ಕಾಯ್ದುಕೊಂಡಿದ್ದು, ಕಥಾ ವಸ್ತುವಿನ ಆಯ್ಕೆಯಲ್ಲಿ ಸಮಾಜ ವಿರೋಧಿ ಆಶಯಗಳ ಕಥೆಗಳಲ್ಲಿ ನಟಿಸದೇ ಇದ್ದದ್ದು, ಯಥಾಸ್ಥಿತಿವಾದದ ಕಥೆಗಳಲ್ಲಿ ನಟಿಸದೇ ಇದ್ದದ್ದು, ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದರೂ ಸಾಂಸ್ಥಿಕ ಧರ್ಮವನ್ನು ಪೋಷಿಸದೆ ಇದ್ದದ್ದು ಅವರನ್ನು ಜನರ ಪ್ರತಿನಿಧಿಯಾಗಿಸಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಲು ಪ್ರಯತ್ನಿಸುತ್ತಾರೆ. “ಜನರು ಇವರನ್ನು ಕೇವಲ ಸಿನಿಮಾ ನಟರೆಂದು ಗೌರವಿಸಲಿಲ್ಲ, ಇವರೂ ಕೇವಲ ಸಿನಿಮಾ ನಟರಾಗಿ ಉಳಿಯಲಿಲ್ಲ.

ಗೋಕಾಕ್ ಚಳವಳಿಯನ್ನು ಒಳಗೊಂಡಂತೆ ಕನ್ನಡ ನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರ ಶಕ್ತಿಯಾದರು” ಅರವತ್ತರ ದಶಕದಲ್ಲಿ ಉಂಟಾದ ಕರ್ನಾಟಕ ಜಲಪ್ರವಾಹ ಪೀಡಿತರ ನಿಧಿಗೆ ಹಣ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿ ನಿಂತದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಶಸ್ತಿಯಿಂದ ಬಂದ ಒಂದು ಲಕ್ಷ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟಿದ್ದನ್ನು, ಹಾಡು ಹಾಡಿದ ಚಿತ್ರಗಳಿಂದ ಮತ್ತು ರಸ ಮಂಜರಿ ಕಾರ್ಯಕ್ರಮಗಳಿಂದ ಬಂದ ಸಂಭಾವನೆಯನ್ನು ಬೀದಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ನೀಡಿದ್ದು ಚಿತ್ರ ನಟನೆಯ ಹೊರತಾಗಿ ಬಂದ ಯಾವುದೇ ಹಣವನ್ನು ಸಾಮಾಜಿಕ ಕೆಲಸಗಳಿಗೆ ಕೊಡಬೇಕೆಂದು ಅವರೇ ಮಾಡಿಕೊಂಡದ್ದ ಒಪ್ಪಂದವೂ ಈ ಪುಸ್ತಕದಲ್ಲಿದೆ.

‘ಡಾ. ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?’ ಎಂಬ ಅಧ್ಯಾಯದಲ್ಲಿ ರಾಜಕುಮಾರ್ ಅವರ ಸಾಮಾಜಿಕ ಕೆಲಸಗಳನ್ನು ಪಟ್ಟಿಯ ರೂಪದಲ್ಲಿ ನೀಡಲಾಗಿದೆ. ವೃತ್ತಿ ಬಾಂಧವರೊಂದಿಗೆ ರಾಜ್ ಹೊಂದಿದ್ದ ಬಾಂಧ್ಯವವನ್ನು ಸಿನಿಮಾ ಕ್ಷೇತ್ರವು ಅವರಿಗೆ ನೀಡಿದ ನೋವು, ಅವಮಾನ, ಅವಕಾಶ ನಿರಾಕರಣೆ, ವಂಚನೆಗಳನ್ನು ತಣ್ಣಗೆ ನಿರೂಪಿಸಲಾಗಿದೆ. ‘ನಾನು ನನ್ನ ಕುಟುಂಬ ಮತ್ತು ಡಾ. ರಾಜಕುಮಾರ್’ ಎಂಬ ಅಧ್ಯಾಯದಲ್ಲಿ ಲೇಖಕರು ಮತ್ತು ರಾಜ್ಕುಮಾರ್ ಅವರೊಂದಿಗೆ ಇದ್ದ ಆಪ್ತ ಸನ್ನಿವೇಶಗಳು ಈ ಪುಸ್ತಕದಲ್ಲಿ ದಾಖಲಾಗಿದ್ದು ಹೆಚ್ಚು ಕಡಿಮೆ ಪುಸ್ತಕದ ಪ್ರತಿ ಪುಟದಲ್ಲೂ ರಾಜಕುಮಾರ್ ನಟನೆಯ ಅಪರೂಪದ ಸಿನಿದೃಶ್ಯಗಳ ಚಿತ್ರಗಳು, ಗೋಕಾಕ್ ಚಳವಳಿಯ ಚಿತ್ರಗಳು, ರಾಜಕುಮಾರ್ ಭಾಗವಹಿಸಿದ್ದ ಸಭೆ ಸಮಾರಂಭಗಳ, ಇತರ ಕಾರ್ಯಕ್ರಮಗಳ ಹಾಗೂ ವೀರಪ್ಪನ್‌ನಿಂದ ಅಪಹರಣಗೊಂಡ ಕಾಡಿನ ವಾಸದ ಚಿತ್ರಗಳು ಈ ಪುಸ್ತಕದ ಅಂದವನ್ನು ಹೆಚ್ಚಿಸಿವೆ.

ಕನ್ನಡದ ಸಾಂಸ್ಕೃತಿಕ ನಾಯಕನಂತೆ ಅಮರವಾಗುಳಿದ ಮತ್ತು ಇಂದಿಗೂ ತನ್ನ ಆದರ್ಶಗಳಿಂದ ಕನ್ನಡ ನಾಡಿನ ಜನರನ್ನು ಮತ್ತು ಸಿನಿಪ್ರಿಯರನ್ನು ಆಕರ್ಷಿಸುತ್ತಿರುವ ರಾಜಕುಮಾರರ ಕುರಿತು ಕುತೂಹಲ ಇರುವವರು ಅಗತ್ಯವಾಗಿ ಓದಬಹುದಾದ ಪುಸ್ತಕ ಇದಾಗಿದೆ.ಪ್ರಕಾಶಕರು: ಜನಪ್ರಕಾಶನ, ಜಯನಗರ ಬೆಂಗಳೂರು.944324727
ಪುಟಗಳು: 128
ಬೆಲೆ: 160

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?