Wednesday, May 29, 2024
Google search engine
Homeಜನಮನತುಮಕೂರು ಸ್ಲಂಗಳಲ್ಲಿ ಕೊರೊನಾ ಕಟ್ಟಿಹಾಕಿದ ಸಮಿತಿ...

ತುಮಕೂರು ಸ್ಲಂಗಳಲ್ಲಿ ಕೊರೊನಾ ಕಟ್ಟಿಹಾಕಿದ ಸಮಿತಿ…

ಕೊರೊನಾ ಹಾಟ್ ಸ್ಪಾಟ್ ಗಳಾಗಿದ್ದ ತುಮಕೂರಿನ ಕೊಳೆಗೇರಿಗಳಲ್ಲಿ ಕೊರೊ‌ನಾ ಕಟ್ಟಿ ಹಾಕಲು ಸ್ಲಂ ಜನಾಂದೋಲನ ಸಮಿತಿ ಮಾಡಿದ ಕೆಲಸ ಫಲ ನೀಡಿದೆ. ಇದೇ ಮಾನದಂಡವನ್ನು ಜಿಲ್ಲಾಡಳಿತ ಅನುಸರಿಸಿದರೆ ಸಂಭಾವಿತ ಮೂರನೇ ಅಲೆಯಿಂದ ಜಿಲ್ಲೆಯನ್ನು ಕೊರೊನಾ ಸೋಂಕಿನಿಂದ ಪಾರು ಮಾಡಬಹುದಾಗಿದೆ. ಲೇಖಕರಾದ ನರಸಿಂಹಮೂರ್ತಿ ಅವರು ಸ್ಲಂ ಜನಾಂದೋಲನ ಸಮಿತಿಯ ರಾಜ್ಯ ಸಂಚಾಲಕರು.

ಕಿರಿದಾದ ಪ್ರದೇಶದಲ್ಲಿ ಒತ್ತಾಗಿ ಬದುಕುವ ಸ್ಲಂ ನಿವಾಸಿಗಳಲ್ಲಿ ಕೊರೊನ ಸೋಂಕು ವ್ಯಾಪಕವಾಗಿ ಹರಡಿ ಬದುಕಿನ ಜಂಘಾಬಲವನ್ನೇ ಕುಸಿಯುವಂತೆ ಮಾಡಿತು. ಇಂತಹ ಸನ್ನಿವೇಶದಲ್ಲಿ ಹಲವು ವರ್ಷಗಳಿಂದ ಸ್ಲಂ ಜನರ ಬದುಕಿನ ಅಭಿವೃದ್ಧಿಗಾಗಿ ದುಡಿಯುತ್ತ ಬಂದಿರುವ ತುಮಕೂರು ಜಿಲ್ಲಾ ಕೊಳಗೇರಿ ಸಮಿತಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಳಗೇರಿ ನಿವಾಸಿಗಳ ನೆರವಿಗೆ ಧಾವಿಸುವ ಜೊತೆಗೆ ಕೊರೊನ ಸೋಂಕಿನ ಪರಿಣಾಮ, ರೋಗದ ನಿವಾರಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸ್ಲಂ ಜನರಲ್ಲಿ ಅರಿವು ಮೂಡಿಸಿ, ಮಾಡಿದ ಕೆಲಸದಿಂದ ಬರುತ್ತಿದೆ. ಇದರ ಪರಿಣಾಮ ಸ್ಲಂಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖವಾಗುವಂತೆ ಮಾಡಿದೆ.

ಅಷ್ಟೇ ಅಲ್ಲ ಕೊಳಗೇರಿ ಸಮಿತಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮೆಡಿಸಿನ್ ಕಿಟ್‌ಗಳನ್ನು ಸ್ಲಂಗಳಲ್ಲಿ ವಿತರಣೆ ಮಾಡುವ ಕೆಲಸವನ್ನೂ ಮಾಡಿದೆ.

ಸಮಿತಿಯ ನೇತೃತ್ವದಲ್ಲಿ ಸ್ವಯಂ ಸೇವಕರ ತಂಡಗಳನ್ನು ರಚಿಸಿ ಆ ತಂಡದ ಸದಸ್ಯರು ತುಮಕೂರು ನಗರದ 25 ಸ್ಲಂಗಳಲ್ಲಿ ಮನೆಮನೆಗೂ ಭೇಟಿ ನೀಡಿ ಸೋಂಕಿತರರಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿತು. ಜೊತೆಗೆ ಈವರೆಗೆ 560 ಕ್ಕೂ ಹೆಚ್ಚು ಮಂದಿ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ದೊರೆಯುವಂತೆ ಮಾಡಿತು.

ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರಿಗೆ ಮೆಡಿಸಿನ್ ಕಿಟ್‌ಗಳನ್ನು ವಿತರಿಸುವಂತಹ ಕೆಲಸ ಮಾಡುತ್ತ ಬರುತ್ತಿದೆ.
20 ಸ್ವಯಂಕಾರ್ಯಕರ್ತರು ದಿಬ್ಬೂರು ದೇವರಾಜ್‌ಅರಸು ಬಡಾವಣೆ, ಎಸ್,ಎನ್ ಪಾಳ್ಯ, ಅರಳೀಮರದ ಪಾಳ್ಯ, ಮಾರಿಯಮ್ಮ ನಗರ, ಕುರಿಪಾಳ್ಯ, ಭಾರತಿನಗರ, ಸಂಪಾಧನೆ ಮಠ, ಎನ್,ಆರ್ ಕಾಲೋನಿ, ಅಂಬೇಡ್ಕರ್ ನಗರ, ಕ್ಯಾತ್ಸಂದ್ರ ಎಳ್ಳರಬಂಡೆ, ಇಸ್ಮಾಯಿಲ್ ನಗರ, ಹಂದಿಜೋಗಿ ಕಾಲೋನಿ, ಮರಳೂರು ದಿಣ್ಣೆ, ಡಿಎಂ ಪಾಳ್ಯ, ದೇವರಾಯಪಟ್ಟಣ, ಶೆಟ್ಟಿಹಳ್ಳಿ ಜ್ಯೋತಿ ಕಾಲೋನಿ ಮುಂತಾದ ನಗರವಂಚಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ಬರದಂತೆ ತಡೆಯುವ ಬಗ್ಗೆ, ಚಿಕಿತ್ಸೆಗೆ ಅಗತ್ಯವಿರುವ ಮಾರ್ಗದರ್ಶನ ನೀಡಿದೆ.

ತತ್ಪರಿಣಾಮ ಸೋಂಕಿತರಲ್ಲಿ ನೂರಾರು ಮಂದಿ ಗುಣಮುಖರಾಗಿ ದೈನಂದಿನ ಕಾರ್ಯಗಳಿಗೆ ಮರಳುವಂತೆ ಮಾಡಿದ್ದು ಸಮಿತಿಗೆ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ತುಂಬಿದೆ.

ಕೊಳಗೇರಿ ಜನರಿಗೆ 3400 ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ವಿವಿಧ ಕೊಳಗೇರಿಗಳಲ್ಲಿ 1448 ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸಿ ಸೋಂಕಿನ ಪ್ರಮಾಣವನ್ನು ತಗ್ಗಿಸುವಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪ್ರಮುಖ ಪಾತ್ರ ವಹಿಸಿದ್ದು ಜನರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸುತ್ತಿದೆ.

ನಗರವಂಚಿತ ಸಮುದಾಯಗಳಾದ ದಲಿತರು ಅಲ್ಪಸಂಖ್ಯಾತರು ಮತ್ತು ಅಲೆಮಾರಿಗಳು, ಗೃಹ ನಿರ್ಮಾಣ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು ಲಸಿಕೆ ಪಡೆಯಲು ಮುಂದಾಗುತ್ತಿರುವುದು ಆಶಾದಾಯಕ ಬೆಳವಣ ಗೆಯಾಗಿದೆ.

ಮೊದಲು ವ್ಯಾಕ್ಸಿನೇಷನ್ ಪಡೆಯಲು ಭಯಪಡುತ್ತಿದ್ದ ಕೊಳಗೇರಿಗಳಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಎಲ್ಲರೂ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಕೊಳಗೇರಿ ಸಮಿತಿ ಲಸಿಕೆ ಬಗ್ಗೆ ಇದ್ದ ಭಯದ ವಾತಾವರಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖಪಾತ್ರ ವಹಿಸಿದೆ.

ಮೇ ಮೊದಲ ವಾರದಲ್ಲಿ ನಗರದ ಸುಮಾರು ೧೦-೧೫ ಸ್ಲಂಗಳು ಹಾಟ್‌ಸ್ಪಾಟ್‌ಗಳೆಂದು ಘೋಷಣೆ ಮಾಡಲಾಗಿತ್ತು. ಕೊಳಗೇರಿ ಸಮಿತಿ ಜಿಲ್ಲಾಧ್ಯಕ್ಷರಾದ ಎ.ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಕರ್ತರ ಕಾರ್ಯಪಡೆಯೋಂದಿಗೆ ಆರೋಗ್ಯ ಇಲಾಖೆ, ತುಮಕೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ಸ್ಲಂಗಳಲ್ಲಿ ಜನಜಾಗೃತಿ ಮೂಡಿಸಿದ ಪರಿಣಾಮ ಇಂದು ಆ ಸ್ಲಂಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು.


ಕೊಳಗೇರಿ ಸಮಿತಿ ದಾನಿಗಳಿಂದ, ಹಸಿರುದಳ, ಅಜೀಂಪ್ರೇಮ್‌ಜಿ ಫ್ರಿಲಾಂಥ್ರಾಫಿಕಲ್ ಇನ್ಸಿಟ್ಯೂಟ್, ಜನಸಹಯೋಗ ಮತ್ತು ಸಾಧನ ಮಹಿಳಾ ಸಂಘ ಹಾಗೂ ವೈಯಕ್ತಿಕ ದಾನಿಗಳಿಂದ ಆಹಾರ ಧಾನ್ಯಗಳ ಕಿಟ್‌ಗಳನ್ನು ಸಂಗ್ರಹಿಸಿ ದುಡಿಯುವ ಜನರು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಹಸಿವಿನಿಂದ ಬಳದಂತೆ ಇದುವರೆಗೂ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ತಲುಪಿಸಲಾಗಿದೆ. ಮಾಜಿ ಶಾಸಕ ರಫೀಕ್‌ಅಹ್ಮದ್ ಅಭಿಮಾನಿಗಳ ಬಳಗ, ಗೆಳೆಯರ ಬಳಗಕ್ಕೆ ಸಮಿತಿ ಮನವಿ ಮಾಡಿದ ಮೇರೆಗೆ ಸ್ಲಂಗಳಲ್ಲಿರುವ ಅಸಹಾಯಕ ಕುಟುಂಬಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದೆ.


ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

ಕೊರೊನಾ ಹಾಟ್‌ಸ್ಪಾಟ್ ಕೊಳಗೇರಿಗಳಲ್ಲಿ ಜನ ತೊಂದರೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಸಮಿತಿ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಮಹಾಪೌರರು, ಮಹಾನಗರ ಪಾಲಿಕೆ ಸದಸ್ಯರುಗಳು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆಯ ಮೇಲೆ ಒತ್ತಡ ಹೇರಿ ಕಾಲಕಾಲಕ್ಕೆ ಅಗತ್ಯವಿರುವ ನೆರವು ಮತ್ತು ಬೆಂಬಲವನ್ನು ಪಡೆಯುವಲ್ಲಿಯು ಯಶಸ್ವಿಯಾಗಿದೆ.

ಇದಕ್ಕೆ ನಿದರ್ಶನ ಎನ್,ಆರ್ ಕಾಲೋನಿ ಶೈಕ್ಷಣ ಕ ಭವನದಲ್ಲಿ ನಾಗರಿಕ ಸಮಿತಿ ಮತ್ತು ಜನಪ್ರತಿಗಳ ಸಭೆ ಕರೆದು ಸ್ಲಂಗಳಿಗೆ ವಿಶೇಷ ಗಮನ ನೀಡಲು ಒತ್ತಡ ಹೇರಲಾಯಿತು.
ಸ್ಲಂಗಳಲ್ಲಿ ಸೋಂಕಿಗೆ ಒಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ನಗರ ಪಾಲಿಕೆಯಿಂದ ಕೋವಿಡ್‌ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸುವAತೆ ಒತ್ತಡ ತರಲಾಯಿತು. ಮೇಯರ್ ಬಿ.ಜಿ. ಕೃಷ್ಣಪ್ಪ ಅವರೊಂದಿಗೆ ಈ ಸಂಬAಧ ಚರ್ಚಿಸಲಾಯಿತು. ಇದಕ್ಕೆ ಸ್ಪಂದಿಸಿದ ಬಿ.ಜಿ ಕೃಷ್ಣಪ್ಪ ಕೊಳಗೇರಿಗಳಲ್ಲಿ ವ್ಯಾಕ್ಸಿನೇಷನ್ ಪಡೆಯಲು ಜಾಗೃತಿ, ಸೋಂಕು ನಿವಾರಣೆಗೆ ಲಸಿಕೆ ಪಡೆಯುವುದು ಅಗತ್ಯ. ಅಸಹಾಯಕರು ಮತ್ತು ಚಿಕಿತ್ಸೆ ಭತ್ಯೆ ಭರಿಸಲು ಸಾಧ್ಯವಾಗದ ಸ್ಲಂ ನಿವಾಸಿಳಿಗೆ ಹಾಗೂ ಬಡವರಿಗೆ ಮೇಯರ್ ಅನುದಾನ ಮತ್ತು ೨೪.೧೦% .೭.೨೫ ಅನುದಾನಗಳಲ್ಲಿ ವೆಚ್ಚ ಭರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳೊಂದಿಗೆ ಸಮಿತಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ೧೯ ಮತ್ತು ೨೦ ನೇ ವಾರ್ಡಿನ ಎನ್,ಆರ್ ಕಾಲೋನಿ ಹಾಗೂ ಅಂಬೇಡ್ಕರ್ ನಗರದ ಕೋವಿಡ್ ಸೋಂಕಿತರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭೇಟಿ ನೀಡಿ ಮೆಡಿಸಿನ್ ಕಿಟ್ ವಿತರಿಸಿದರು.

ಸೋಂಕಿತರ ಯೋಗಕ್ಷೇಮ ವಿಚಾರಿಸಿದರು. ಸ್ಲಂ ನಿವಾಸಿಗಳ ಮನೆಗಳನ್ನು ಪರಿಶೀಲಿಸಿದರು. ಐಸೋಲೇಷನ್ ಸಮಸ್ಯೆಯಾದರೆ ಕ್ಯಾತ್ಸಂದ್ರ ಕೋವಿಡ್‌ಕೇರ್ ಸೆಂಟರ್, ರೆಡ್‌ಕ್ರಾಸ್ ಮತ್ತು ರೇಣುಕಾ ವಿದ್ಯಾಪೀಠದ ಕೇರ್ ಸೆಂಟರ್‌ಗಳಿಗೆ ದಾಖಸಬಹುದು ಎಂದು ಹೇಳಿದರು. ಫಲ್ಸ್ ಆಕ್ಸಿಮೀಟರ್‌ಗಳನ್ನು ಸ್ವಯಂಕಾರ್ಯಕರ್ತರಿಗೆ ವಿತರಿಸಿ ಸೋಂಕಿತರ ಉಸಿರಾಟ ಪರೀಕ್ಷಿಸುವಂತೆ ಮತ್ತು ಇದಕ್ಕೆ ಸ್ಲಂಜನಾAದೋಲನ ಕರ್ನಾಟಕದ ಸಂಘಟನೆಯ ಸಹಕಾರ ಪಡೆಯುವಂತೆ ಸಲಹೆ ನೀಡಿದರು.

ಪಾಲಿಕೆ ಆಯುಕ್ತರು ಸ್ಲಂಗಳಿಗೆ ಭೇಟಿ ನೀಡಿ ಜನರಿಗೆ ತಿಳುವಳಿಕೆ ಮೂಡಿಸಿದರು. ಪೌರಕಾರ್ಮಿಕರಿಗೆ ಚಿಂದಿ ಆಯುವವರಿಗೆ ಹಾಗೂ ಸೋಂಕಿತರಿಗೆ ಮೆಡಿಸಿನ್ ಕಿಟ್ ಜೊತೆಯಲ್ಲಿ ಆಹಾರದ ಕಿಟ್‌ಗಳನ್ನು ಕೊಳಗೇರಿ ಸಮಿತಿಯು ದೊರಕಿಸಿಕೊಟ್ಟಿರುವ ಬಗ್ಗೆ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದರು. ಚಿಂದಿ ಆಯುವವರನ್ನು ಗುರುತಿಸಿ ಈಗಾಗಲೇ ಗುರುತಿನ ಕಾರ್ಡ್ಗಳನ್ನು ನೀಡಿದೆ. ಚಿಂದಿ ಆಯುವವರು ಲಸಿಕೆಗಳನ್ನು ಪಡೆಯಲು ಹಿಂಜರಿಯುತ್ತಿದ್ದು ಇದರಿಂದ ಹೊರಬಂದು ವ್ಯಾಕ್ಸಿನೇಷನ್ ಪಡೆಯಬೇಕು ಎಂದು ಹೇಳಿದರು.
ಜನಪರ ಚಿಂತಕ ಕೆ.ದೊರೈರಾಜ್ ಕೂಡ ಸಮಿತಿಯ ಸದಸ್ಯರೊಂದಿಗೆ ಕೆಲವೊಂದು ಸ್ಲಂಗಳಿಗೆ ಭೇಟಿ ನೀಡಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಡಜನರು ಉಳಿಯಬೇಕೆಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯವಿದೆ. ಮುಂಬೈನ ದಾರಾವಿ ಸ್ಲಂ ಕೊರೊನದ ರೆಡ್‌ಝೋನ್ ಆಗಿತ್ತು. ಅಲ್ಲಿಯ ಯುವಜನರು ರೋಗದ ಬಗ್ಗೆ ಸ್ವಯಂ ಜಾಗೃತರಾಗಿ ಶಿಸ್ತನ್ನು ಪಾಲಿಸಿದರು.

ಸಮುದಾಯವನ್ನು ರೋಗದಿಂದ ಮುಕ್ತವಾಗಲು ಲಸಿಕೆ ಪಡೆದರು. ಪರಿಣಾಮ ಅಲ್ಲಿ ಸೋಂಕು ಕಡಿಮೆಯಾಗಿದೆ. ಇಂತಹ ಜಾಗೃತಿ ಎಲ್ಲಾ ಕೊಳಗೇರಿಗಳಲ್ಲಿರುವ ಯುವಜನರಿಗೆ ಬರಬೇಕು. ಸಮುದಾಯದ ರಕ್ಷಣೆ ಮಾಡಬೇಕು. ಕೊರೊನ ಸಂದರ್ಭದಲ್ಲಿ ನಾನು ಉಳಿದರೆ ಸಾಕು ಎಂಬ ಮನೋಭಾವವಿದೆ. ಇಂತಹ ಮನೋಭಾವ ದೂರವಾಗಬೇಕು ಎಂದರೆ ನಾವು ಈ ರೋಗದ ಬಗ್ಗೆ ಎಚ್ಚರಗೊಳ್ಳಬೇಕು.

ತುಮಕೂರು ಕೊಳಗೇರಿ ಸಮಿತಿ ಸಂಕಷ್ಟದಲ್ಲಿರುವ ಸ್ಲಂ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸುವ ಕೆಲಸ ಮಾಡಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪಿಯುಸಿಎಲ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಬದುಕುವುದು ದುಸ್ತರವಾಗಿದೆ. ಲಾಕ್‌ಡೌನ್‌ನಿಂದ ಬಸ್ತಿ ಅಥವಾ ಭಿಕ್ಷಾಟಣೆಗೂ ಕಷ್ಟವಾಗಿದೆ. ವಾಣ ಜ್ಯ ವಹಿವಾಟು ಸ್ತಬ್ದಗೊಂಡಿದೆ. ಇದು ಮಂಗಳಮುಖಿಯರ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಕೊಳಗೇರಿ ಸಮಿತಿ ನೈತಿಕವಾಗಿ ನಮ್ಮ ಜೊತೆಗಿದೆ. ನಮಗೆ ಆಹಾರದ ಕಿಟ್‌ಗಳನ್ನು ದೊರಕಿಸಿ ಕೊಟ್ಟಿದೆ. ಇದು ತಾತ್ಕಾಲಿಕ. ಆದ್ದರಿಂದ ಸರ್ಕಾರವೇ ಪ್ರತಿ ಮಂಗಳಮುಖಿಗೆ ಮಾಸಿಕ ೧೦ ಸಾವಿರ ಲಾಕ್‌ಡೌನ್ ಭತ್ಯೆ ನೀಡಬೇಕು. ಉಚಿತ ಪಡಿತರ ಆಹಾರ ಧಾನ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ತುಮಕೂರು ಕೊಳಗೇರಿ ಸಮಿತಿಯಿಂದ ಜಾಗೃತಿ ಮುಡಿಸುವ ಜೊತೆಗೆ ಇದುವರೆಗೂ ೩೪೦೦ ಮಾಸ್ಕ್ಗಳ ವಿತರಣೆ ಮಾಡಿದೆ. ಸೋಂಕಿತರಿಗೆ ಬೆಡ್ ಮತ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಂಡಿದೆ. ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಮಹಾನಗರ ಪಾಲಿಕೆಯಿಂದ ಸ್ಲಂಗಳಲ್ಲಿ ಸ್ಯಾನಿಟೈಜರ್ ಮತ್ತು ೧ ಸಾವಿರ ಮೆಡಿಸಿನ್ ಕಿಟ್‌ಗಳನ್ನು ವಿತರಿಸುವಂತೆ ಮಾಡಿದೆ. ಪೋಲಿಸ್ ಇಲಾಖೆಯ ಸಹಕಾರದಿಂದ ಅಲೆಮಾರಿಗಳಿಗೆ ಫುಡ್‌ಕಿಟ್ ದೊರೆತಿದೆ.

ಸಮಿತಿಯೊಂದಿಗೆ ಸಹಕಾರ ನೀಡಿದ ಎಲ್ಲಾ ದಾನಿಗಳಿಗೂ ಮತ್ತು ಕೊಳಗೇರಿ ಸಮಿತಿಯ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಸ್ಲಂಜನಾAದೋಲನಾ ಕರ್ನಾಟಕ ಸಂಘಟನೆ ಕೃತಜ್ಞತೆ ಸಲ್ಲಿಸುತ್ತದೆ. ಮೂರನೇ ಅಲೆಯನ್ನು ಎದುರಿಸುವ ದೈರ್ಯ ಸ್ಲಂ ಜನರಲ್ಲಿ, ಸಮಿತಿಗೆ ಇದೆ. ಇದು ಸಮುದಾಯದ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಸಮಿತಿಯು ಜಗತ್ತಿಗೆ ತೋರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?