Saturday, June 22, 2024
Google search engine
Homeನಮ್ಮೂರುನೀವು ನೋಡಲೇಬೇಕಾದ ತುರುವೇಕೆರೆಯ ಬೇಟೇರಾಯಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ

ನೀವು ನೋಡಲೇಬೇಕಾದ ತುರುವೇಕೆರೆಯ ಬೇಟೇರಾಯಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ

ತುರುವೇಕೆರೆ ಪ್ರಸಾದ್


ತುರುವೇಕೆರೆ: ನಾಡಿನ ಸಾವಿರಾರು ಭಕ್ತರ ಬಹುಕಾಲದ ಭಾವನಾತ್ಮಕ ನಿರೀಕ್ಷೆ ನನಸಾಗುತ್ತಿದ್ದು ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಬೇಟೇರಾಯಸ್ವಾಮಿ ದೇವಾಲಯದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳದ ಧರ್ಮೊತ್ಥಾನ ಟ್ರಸ್ಟ್ ಮತ್ತು ಸ್ಥಳೀಯ ಧೇನುಪುರಿ ರೀಜನಲ್ ಟ್ರಸ್ಟ್ ಜಂಟಿಯಾಗಿ ಚಾಲನೆ ನೀಡಿವೆ.ಶ್ರೀ ಬೇಟೆರಾಯ ದೇವಾಲಯ ಪಟ್ಟಣದ ಪ್ರಮುಖ ದೇವಾಲಯ. ಪೂರ್ವಾಭಿಮುಖವಾಗಿರುವ ಈ ದೇವಾಲಯ ದ್ರಾವಿಡಶೈಲಿಯ ವಾಸ್ತು ಕೃತಿ. ಎತ್ತರದ ಮಹಾದ್ವಾರ, ಮುಖಮಂಟಪ, ಪಾತಾಳಾಂಕಣ, ನವರಂಗ, ಸುಕನಾಸಿ ಮತ್ತು ಗರ್ಭಗೃಹ ಉತ್ತಮ ಶಿಲ್ಪದಿಂದ ಕೂಡಿವೆ.ಗರ್ಭಗೃಹದಲ್ಲಿನ ಬೇಟೆರಾಯ ಮೂರ್ತಿ 4 ಅಡಿಗಳ ಎತ್ತರವಿದ್ದು ನಾಲ್ಕು ಕೈಗಳಿಂದ ಸುಂದರವಾಗಿದೆ. ಪ್ರಾಚೀನದಲ್ಲಿ ಮಾಯಾವಿ ರಾಕ್ಷಸರು ಕಾಡುಮೃಗಗಳ ರೂಪದಲ್ಲಿ ಕಾಡುತ್ತಿದ್ದಾಗ ಮಹಾವಿಷ್ಣುವು ಬೇಟೆಗಾರನ ರೂಪದಲ್ಲಿ ಅವತರಿಸಿ ರಾಕ್ಷಸ ಸಂಹಾರ ಮಾಡಿ ಇಲ್ಲೇ ಬೇಟೆರಾಯನೆಂದು ನೆಲೆಯಾದನೆಂಬ ಪ್ರತೀತಿಯಿದೆ.ಈ ದೇವಸ್ಥಾನದಲ್ಲಿ ಚಿತ್ರಾಲಂಕಾರದಿಂದ ಕೂಡಿದ ಒಂದು ಹಳೆಯ ಮಂಚವಿದ್ದು, ಇದನ್ನು 18ನೆಯ ಶತಮಾನದಲ್ಲಿ ಮೈಸೂರಿನ ದಳವಾಯಿ ಗೋಪಾಲರಾಜ ಅರಸು ಎಂಬುವವರು ದೇವರ ಶಯನೋತ್ಸವಕ್ಕಾಗಿ ಅರ್ಪಿಸಿದರಂತೆ.ದೇವಾಲಯದ ಪ್ರಾಕಾರದ ಒಳಗೆ ನೈಋತ್ಯ ಭಾಗದಲ್ಲಿ ಅಮ್ಮವನರ ಗುಡಿ ಇದೆ. ಪ್ರತಿ ಫಾಲ್ಗುಣ ಮಾಸದಲ್ಲಿ ಈ ಗುಡಿಯ ಜಾತ್ರೆ ಜರುಗುತ್ತದೆ.
ಸುಮಾರು 800 ವರ್ಷಗಳಷ್ಟು ಹಳೆಯದಾದ ದೇವಾಲಯಕ್ಕೆ ಇತ್ತೀಚೆಗಷ್ಟೇ ಸುಮಾರು 70 ಲಕ್ಷರೂಗಳ ವೆಚ್ಚದಲ್ಲಿ ರಾಜಗೋಪುರ ಮತ್ತು ರೂ. 25 ಲಕ್ಷ ವೆಚ್ಚದಲ್ಲಿ ಲಕ್ಷ್ಮೀಗೋಪುರ ನಿರ್ಮಿಸಲಾಗಿತ್ತು.ದೇವಾಲಯದ ನವರಂಗ, ಸುಖನಾಸಿ, ಗರ್ಭಗುಡಿಯ ಗೋಡೆಗಳ ಒಳಪದರದ ಮಣ್ಣು ಶಿಥಿಲವಾಗಿತ್ತು. ಹಾಗಾಗಿ ಮಳೆ ಬಂದಾಗ ದೇವಾಲಯದ ಒಳಗೋಡೆ ನೆನೆದು ಒಳಗೆ ನೀರಿಳಿಯುತ್ತಿತ್ತು. ಜೊತೆಗೆ ಹಲವು ಗಿಡಗೆಂಟೆಗಳ ಬೇರುಗಳು ಮಣ್ಣಿನ ಪದರದೊಳಗೆ ನುಸುಳಿ ದೇವಾಲಯದ ಸುರಕ್ಷತೆಗೆ ಅಪಾಯವೊಡ್ಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ಧೇನುಪುರಿ ರೀಜನಲ್ ಟ್ರಸ್ಟ್ ದೇವಾಲಯದ ದುಸ್ಥಿತಿ ಕುರಿತು ಸರ್ಕಾರದ ಪುರಾತತ್ವ ಇಲಾಖೆಯ ಗಮನಸೆಳೆದಿತ್ತು. ಪುರಾತತ್ವ ಇಲಾಖೆ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಕ್ರಿಯಾಯೋಜನೆ ಅನುಮೋದಿಸಿ ಧರ್ಮಸ್ಥಳದ ಧರ್ಮೋತ್ಥಾನಟ್ರಸ್ಟ್‍ಗೆ ಈ ಜವಾಬ್ಧಾರಿ ವಹಿಸಿತ್ತು. ಸ್ಥಳೀಯ ಧೇನುಪುರಿ ಟ್ರಸ್ಟ್ ಸುಮಾರು 7 ಲಕ್ಷಕ್ಕೂ ಹೆಚ್ಚು ಹಣ ಹೊಂದಿಸಿ ಒಟ್ಟಾರೆ ರೂ.22 ಲಕ್ಷದಲ್ಲಿ ಸಮಗ್ರ ಜೀರ್ಣೋದ್ಧಾರದ ಕಾರ್ಯದ ಮೇಲ್ವಿಚಾರಣೆ ನಡೆಸಿದೆ.ಸದ್ಯ ಜೀರ್ಣೋದ್ಧಾರ ಪ್ರಕ್ರಿಯೆ ಮುಂದುವರೆದಿದ್ದು ಕುಶಲ ಕರ್ಮಿಗಳು ದೇವಾಲಯದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ಬರದಂತೆ ಬೃಹತ್ ಯಂತ್ರಗಳೊಂದಿಗೆ ದೇವಾಲಯದ ಹೊರಗೋಡೆಯ ಕಲ್ಲುಗಳನ್ನು ಸ್ಥಳಾಂತರಿಸಿ ಹಳೆಯ ಮಣ್ಣನ್ನು ತೆಗೆದು ಅದನ್ನು ಕಾಂಕ್ರೀಟ್‍ನಿಂದ ತುಂಬಿಸಿ ದೇವಾಲಯಕ್ಕೆ ಹೊಸ ರೂಪ ಕೊಡುವ ಪ್ರಯತ್ನದಲ್ಲಿದ್ದಾರೆ. ಟ್ರಸ್ಟ್‍ನ ಪದಾಧಿಕಾರಿಗಳಾದ ಟಿ.ಆರ್.ಶ್ರೀನಿವಾಸ್, ಟಿ.ಆರ್.ಶ್ರೀಧರ್ ಇತರರು ಜೀರ್ಣೋದ್ಧಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದು ಮೂರು ತಿಂಗಳೊಳಗೆ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳ್ಳಲ್ಲಿದೆ ಎಂದು ತಿಳಿಸಿದ್ದಾರೆ.ಜೀರ್ಣೋದ್ಧಾರ ಕಾರ್ಯಕ್ಕೆ ಮತ್ತೂ ಹೆಚ್ಚಿನ ವೆಚ್ಚ ತಗಲುವ ನಿರೀಕ್ಷೆಯಿದ್ದು ಭಕ್ತಾದಿಗಳು ಮತ್ತು ಸಾರ್ವಜನಿಕರು ಉದಾರ ಕೊಡುಗೆ ನೀಡುವಂತೆ ಟ್ರಸ್ಟ್ ಮನವಿ ಮಾಡಿದೆ. (ಸಂಪರ್ಕ ಸಂಖ್ಯೆ: 9738928454) ಶ್ರೀ ಧೇನುಪುರಿ ರೀಜನಲ್ ಟ್ರಸ್ಟ್, ಎಸ್‍ಬಿಐ ಖಾತೆ ಸಂಖ್ಯೆ: 38221820216, ಐಎಫ್‍ಎಸ್‍ಸಿ: ಎಸ್‍ಬಿಐಎನ್0040104 ಈ ಖಾತೆಗೆ ಭಕ್ತಾದಿಗಳು ನೇರವಾಗಿ ದೇಣಿಗೆ ಜಮಾ ಮಾಡಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?