ತುರುವೇಕೆರೆ: ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ತಾಲ್ಲೂಕು ಕಾಂಗ್ರೆಸ್ ವತಿಯಿಂದ ಒತ್ತಾಯಿಸಲಾಗುತ್ತಿದೆಂದು ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಕೊಬ್ಬರಿ ಬೆಲೆ ಗಣನೀಯ ಕುಸಿತ ಕಂಡಿರುವುದರಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವೇ ರೈತ ಸಂಕಷ್ಟಕ್ಕೆ ಧಾವಿಸಿ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ತಾಲ್ಲೂಕಿನಲ್ಲಿ ಕೊಬ್ಬರಿ ನಫೆಡ್ ಕೇಂದ್ರವನ್ನು ತೆರೆಯಲು ಅವಕಾಶ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತ್ ಕುಮಾರ್ ಮಾತನಾಡಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರು ತಾಲ್ಲೂಕಿನ ರಾಜಕಾರಣದಲ್ಲಿ ಅತ್ಯಂತ ಅನುಭವ ಮತ್ತು ಹೆಚ್ಚು ಪ್ರೌಢಿಮೆವುಳ್ಳವರು. ರಾಜ್ಯ ನೇಕಾರರ ಏಳಿಗಾಗಿ ಹಲವು ವರ್ಷ ದುಡಿದವರಲ್ಲದೆ ಪಕ್ಷ ಸಂಘಟನೆಗೆ ಅವಿರತವಾಗಿ ಶ್ರಮಿಸಿದ್ದಾರೆ. ಇವೆಲ್ಲದಕ್ಕಿಂತ ಮಿಗಿಲಾಗಿ ತಾಲ್ಲೂಕಿನ ಹಿಂದುಳಿದ ವರ್ಗ ಹಾಗು ರಾಜ್ಯ ಹಿಂದುಳಿದ ವರ್ಗಗಳ ಆಮೂಲಾಗ್ರ ಏಳಿಗೆಯ ಹಿತ ದೃಷ್ಟಿಯಿಂದ ಎಂಎಲ್ಸಿ ಮಾಡುವ ಅಗತ್ಯ ಮತ್ತು ಅರ್ಥಪೂರ್ಣವಾದದು ಎಂದರು.
ಇತ್ತೀಚಿನ ದಿನಗಳಲ್ಲಿ ತುರ್ತು ರಾಜಕಾರಣ ಮಾಡುವುತ್ತಿರುವರೆಲ್ಲಾ ಮೇಲ್ಮನೆಗೆ ಹೋಗಿ ಅದರ ಆಶಯವನ್ನೇ ದಿಕ್ಕುತಪ್ಪಿಸುತ್ತಿದ್ದಾರೆ. ವಿಧಾನ ಪರಿಷತ್ ಸಭೆಯಲ್ಲಿ ರಾಜ್ಯ ಮತ್ತು ಜನಕಲ್ಯಾಣಯುತ ಯೋಜನೆಗಳ ಬಗ್ಗೆ ಯಾವ ಗಂಭೀರ ಚರ್ಚೆಗಳೂ ಅಲ್ಲಿ ನಡೆಯುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಂ ಮಾತನಾಡಿ, ಲಕ್ಷ್ಮೀನಾರಾಯಣ್ ಅವರು ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಹೆಚ್ಚು ಹೋರಾಟ ನಡೆಸಿವರು ಎಂದರು.
ಸುದ್ದಿ ಗೋಷ್ಠಿಯಲ್ಲಿ ತಾ.ಪಂ ಸದಸ್ಯರುಗಳಾದ ಮಂಜುನಾಥ್, ಮಹಲಿಂಗಯ್ಯ, ಭೈರಪ್ಪ, ನಂಜೇಗೌಡ, ಮುಂಖಡರುಗಳಾದ ಕೃಷ್ಣಮೂರ್ತಿ, ಕಾಂತರಾಜು, ಅರಳೀಕೆರೆ ರವಿ ಇನ್ನಿತರರು ಇದ್ದರು.