ಲೇಖಕರು
ಕೆ.ಜೆ.ಹರ್ಷಿತ
ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ಮಕ್ಕಳು ಕಾಯುತ್ತಿರುತ್ತಾರೆ. ಹಬ್ಬ ಬಂದರೆ ಹೊಸ ಬಟ್ಟೆ ಜೊತೆಗೆ ಇಷ್ಟವಾದ ಪಟಾಕಿ ಸಿಡಿಸಿ ಸಂಭ್ರಮಿಸಬಹುದು ಎಂಬ ಆಸೆ ಮಕ್ಕಳದ್ದು.
ಇಂತಹ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆ ಪ್ರಚಲಿತಕ್ಕೆ ಬಂದದ್ದಕ್ಕೆ ಸಾಕಷ್ಟು ಕತೆಗಳಿವೆ. ಶ್ರೀರಾಮನಿಗೂ ದೀಪಾವಳಿಗೂ ನಂಟಿದೆಯಂತೆ.
ಹೌದು ಕಾರ್ತೀಕ ಮಾಸದ ಕೃಷ್ಣಪಕ್ಷದ ಚತುರ್ದರ್ಶಿ ಹಿಂದಿನ ದಿನದಿಂದಲೇ ದೀಪಾವಳಿಯು ಆರಂಭವಾಗುತ್ತದೆ. ಶರನ್ನವರಾತ್ರಿ ಆಗಿ ಇಪ್ಪತ್ತೊಂದನೇ ದಿನಕ್ಕೆ ದೀಪಾವಳಿ ಆಚರಿಸಲಾಗುತ್ತದೆ. ಅಸುರ ಸಂಹಾರದ ದ್ಯೋತಕವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ.
ಆಯೋದ್ಯೆಗೆ ಮರಳಿದ ದಿನ
ಶ್ರೀರಾಮನು ರಾಮ ಸೇತು ಮುಖಾಂತರ ಲಂಕೆಗೆ ಹೋಗಿ ರಾವಣ ಸೈನ್ಯದೊಡನೆ ಕಾದಾಡಿ, ರಾವಣನ್ನು ಸಂಹರಿಸುತ್ತಾನೆ. ಯುದ್ಧದಲ್ಲಿ ಜಯಗಳಿಸಿದ ನಂತರ ಲಂಕೆಯಲ್ಲಿ ಬಂಧನದಲ್ಲಿದ್ದ ಸೀತಾದೇವಿಯನ್ನು ಅಯೋಧ್ಯೆಗೆ ಕರೆತಂದ. ಶ್ರೀರಾಮಚಂದ್ರ ಲಂಕೆಯಿಂದ ಅಯೋಧ್ಯೆಗೆ ಬರಲು ತೆಗೆದುಕೊಂಡ ಸಮಯ ಇಪ್ಪತ್ತೊಂದು ದಿನ ಎಂದು ಹೇಳಲಾಗುತ್ತದೆ.
ಶ್ರೀರಾಮನಿಗೆ ದೀಪಗಳ ಸ್ವಾಗತ
ಶ್ರೀರಾಮಚಂದ್ರ ಅಯೋಧ್ಯೆಗೆ ಹಿಂತಿರುಗಿದ ದಿನದಂದು ಆಯೋಧ್ಯೆ ಜನತೆ ಸಂತೋಷ, ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ರಾವಣನ ವಧೆ ಮಾಡಿದ ಸಂಭ್ರಮಾಚರಣೆ ಅದಾಗಿತ್ತು. ಆದ್ದರಿಂದ ಆಗಿನಿಂದಲೂ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಶ್ರೀರಾಮ ಅಯೋಧ್ಯೆಗೆ ಮತ್ತೆ ಪ್ರವೇಶಿಸಿದ ದಿನವೆಂದು ಈಗಲೂ ಅಲ್ಲಿನ ಜನರು ದೀಪೋತ್ಸವ ಆಚರಿಸುತ್ತಾರೆ.
ಹಬ್ಬದ ವೈಶಿಷ್ಟ್ಯ
ದೀಪಾವಳಿಯ ಹಿಂದಿನ ದಿನ ನೀರು ತುಂಬುವ ಹಬ್ಬ ಮಾಡಲಾಗುತ್ತದೆ. ನಂತರದ ದಿನ ನರಕ ಚತುರ್ದಶಿ, ಆ ನಂತರ ಅಮಾವಾಸ್ಯೆ ಲಕ್ಷ್ಮಿ ಪೂಜೆ. ಅಮಾವಾಸ್ಯೆಯಂದು ವ್ಯಾಪಾರಸ್ಥರು ಅಂಗಡಿ ಮಳಿಗೆಗಳನ್ನು ಅಲಂಕರಿಸಿ ಲಕ್ಷ್ಮೀ ಪೂಜೆ ಆಚರಿಸುತ್ತಾರೆ. ಹಾಗೂ ಅದಾದ ಮರು ದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತದೆ.
ನರಕ ಚತುರ್ದಶಿ ಹಿನ್ನೆಲೆಯಿದು
ನರಕಾಸುರನನ್ನು ದೇವಿ ಕೊಂದ ಸ್ಮರಣೆಗಾಗಿ ನರಕ ಚತುರ್ದಶಿ ಆಚರಿಸುವ ರೂಢಿಯೂ ಇದೆ. ಬಲಿ ಪಾಡ್ಯಮಿ, ವಾಮನ ಅವತಾರದಲ್ಲಿ ಶ‍್ರೀಮಹಾವಿಷ್ಣು ಬಲಿ ಮಹಾರಾಜನನ್ನು ಪಾತಳಕ್ಕೆ ತುಳಿದ ದಿನ ಎಂದೂ ಹೇಳಲಾಗುತ್ತದೆ. ಹೀಗಾಗಿಯೇ ಹಸುವಿನ ಸಗಣಿಯಲ್ಲಿ ಬಲಿ ಕೋಟೆ ಹಾಕಿ ಪೂಜಿಸಲಾಗುತ್ತದೆ.
Nice article