ಮಂಜುನಾಥ್ ತಿಪಟೂರು
ತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಆಡಿಟೋರಿಯಂನ #ಬೆನ್ನಾಯಕನಹಳ್ಳಿ_ದೇವರಾಜು_ವೇದಿಕೆಯಲ್ಲಿ #ಕುವೆಂಪು_ಯುವ_ಬಳಗದ ಕುವೆಂಪು ಯುವ ಬಳಗದ ವತಿಯಿಂದ ‘ವಿಶ್ವಮಾನವ ದಿನಾಚರಣೆ ಯನ್ನು ಆಚರಿಸಲಾಯಿತು.
ಪ್ರಾಸ್ತಾವಿಕ ನುಡಿಗಳ ನ್ನಾಡಿದ ಅಲ್ಲಾಬಕಾಷ್ ರವರು ಇಂದಿನ ಸಮಾರಂಭವನ್ನು ರೈತ ಹೋರಾಟಗಾರ ಬೆನ್ನನಾಯಕನಹಳ್ಳಿ ದೇವರಾಜು, ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರು, ನಟ ಪುನೀತ್ ರಾಜಕುಮಾರ್ ಹಾಗೂ ಕೋವಿಡ್ ನಿಂದ ಮಡಿದ ಲಕ್ಷಾಂತರ ಜನರಿಗೆ ಅರ್ಪಿಸಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಬಿ.ಡಿ. ಕುಮಾರ್ ಉಪನ್ಯಾಸಕರು, ಕೋಡಿಮಠ ಕಾಲೇಜು ಅರಸೀಕೆರೆ ಇವರು ‘ಕುವೆಂಪು ಕಾವ್ಯಗಳಲ್ಲಿ ರೈತ’ ಎಂಬ ವಿಷಯವಾಗಿ ಮಾತನಾಡುತ್ತಾ ಕುವೆಂಪು ರವರ ರೈತ ಪರ ಕಾಳಜಿ ನೈಜವಾದುದಾಗಿದ್ದು, ‘ಉಳುವಾ ಯೋಗಿಯ ನೋಡಲ್ಲಿ’ ಕವನ ರೈತಗೀತೆ ಯಾಗಿದ್ದು ಸಂತಸದ ವಿಷಯ, ‘ಜಲಗಾರ’ ನಾಟಕದ ರೈತ – ಜಲಗಾರನ ಮುಖಾಮುಖಿಯ ಸಂದರ್ಭದ ಸನ್ನಿವೇಶವನ್ನು ವರ್ಣಿಸಿದರು.
ಮತ್ತೋರ್ವ ಅತಿಥಿ ಡಾ. ನಾಗಭೂಷಣ ಬಗ್ಗನಡು ರವರು ಕು ವೆಂಪು ರವರು ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆಯನ್ನು ಎತ್ತಿ ಹಿಡಿದಿರುವುದು ಮಾತ್ರವಲ್ಲದೆ ತಮ್ಮ ಭಾಷಣಗಳಲ್ಲಿ ಅದನ್ನೇ ಪ್ರತಿಪಾದಿಸಿ ಸ್ವತಃ ಆಚರಿಸುತ್ತಾ ನುಡಿದಂತೆ ನಡೆದವರೆಂದರು.
ಕಾಡುಶೆಟ್ಟಿಹಳ್ಳಿ ಸತೀಶ್, ಕಾರ್ಯದರ್ಶಿ, ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ, ಇವರು ಮಾತನಾಡುತ್ತಾ ವಿಶ್ವಮಾನವ ಸಂದೇಶ ಗ್ರಾಮ ಮಟ್ಟದಲ್ಲಿ ಮುಟ್ಟಬೇಕಾದರೆ ನಮ್ಮ ದೇಶದ ಸಂವಿಧಾನದ ಆಶಯಗಳನ್ನು ದೇಶದ ಪ್ರತಿ ಗ್ರಾಮದಲ್ಲಿ ಗ್ರಾಮ ಸಭೆಗಳನ್ನು ನಡೆಸುವ ಮೂಲಕ, ಭಾಗವಹಿಸುವ ಮೂಲಕ ಕೈಗೂಡಿಸಿಕೊಳ್ಳಬೇಕು ಎಂದರು.
ತಾಲ್ಲೂಕಿನ ಹಿರಿಯ ರೈತ ನಾಯಕರಾದ ಶ್ರೀ ಯೋಗೀಶ್ವರಸ್ವಾಮಿ ಮತ್ತು ಶ್ರೀ ಶಿವಶಂಕರಪ್ಪ ತಿಮ್ಲಾಪುರ ಇವರನ್ನು ಬಳಗದ ಸದಸ್ಯ ಶ್ರೀಕಾಂತ್ ಕೆಳಹಟ್ಟಿ ಗೌರವಿಸಿ ಸನ್ಮಾನಿಸಿದರು.
ಸನ್ಮಾನಿತರು ತಿಪಟೂರು ತಾಲ್ಲೂಕಿನಲ್ಲಿ ರೈತ ಹೋರಾಟದ ದಿನಗಳನ್ನು ಸ್ಮರಿಸಿಕೊಳ್ಳುತ್ತಾ, ತಾಲ್ಲೂಕು ಹಂತದ ಅಧಿಕಾರಿಗಳನ್ನು ಮಾತನಾಡಿಸಲು ಹೆದರುತ್ತಿದ್ದ ನಮ್ಮಂತಹವರಲ್ಲಿ ಆತ್ಮವಿಶ್ವಾಸ, ಹೋರಾಟ, ಪ್ರತಿಭಟನೆಗಳ ಮೂಲಕ ಅನ್ಯಾಯವನ್ನು ಪ್ರಶ್ನಿಸುವ ಕೆಚ್ಚನ್ನು ತುಂಬಿದವರು ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಎಂದರು.
ಕುವೆಂಪು ಯುವ ಬಳಗ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಆಯೋಜಿಸಿದ್ದ ಭಿತ್ತಿಚಿತ್ರ, ಪ್ರಬಂಧ, ಭಾವಗೀತೆ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಕುವೆಂಪು ರವರ ಪುಸ್ತಕಗಳ ಬಹುಮಾನ ವಿತರಣೆಯನ್ನು ಮಂಜುನಾಥ್, ನಿವೃತ್ತ ಶಿಕ್ಷಕರು, ಸಾದತ್, ಶಿಕ್ಷಣ ಕಾರ್ಯಕರ್ತರು ಹಾಗೂ ಬಳಗದ ಸದಸ್ಯರು ನೆರವೇರಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ‘ಜನಸ್ಪಂದನ’ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸಿ.ಬಿ.ಶಶಿಧರ್ (ಟೂಡ) ರವರು ಕುವೆಂಪು ನನ್ನ ಮೇಲೆ ವೈಚಾರಿಕ ಪ್ರಭಾವ ಬೀರಿದವರು ಅವರ ಸಾಹಿತ್ಯ ಸಾರ್ವಕಾಲಿಕ ಶ್ರೇಷ್ಠವಾದುದು. ನಮ್ಮ ಟ್ರಸ್ಟ್ ಇಂತಹ ಪ್ರಗತಿಪರ ಚಟುವಟಿಕೆಗಳನ್ನು ಸದಾ ಬೆಂಬಲಿಸುತ್ತದೆ. ಇಂದಿನ ಯುವ ಜನಾಂಗ ಕುವೆಂಪು ರವರ ವಿಚಾರಧಾರೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಯುವ ಬಳಗದ ಮನೋಹರ ಪಟೇಲ್ ರವರು ಬಳಗದ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಪ್ರಗತಿಪರ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಹೇಳುತ್ತಾ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರೆಲ್ಲರಿಗೂ ವಂದನೆ ಸಲ್ಲಿಸಿದರೆ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಯುವ ಬಳಗದ ಸ್ವಾಮಿ.ಕೆ.ಆರ್. ಮಾಡಿದ್ದರು.
ನಂತರ ಕುವೆಂಪು ಭಾವಗೀತೆಗಳನ್ನು ಶ್ರೀ ಹನುಮಪ್ಪ ಶಿಕ್ಷಕರು, ಪುರುಷೋತ್ತಮ್ ಹಾಗೂ ವಿಮಲಾ – ಲಕ್ಷ್ಮಿ ಸುಶ್ರಾವ್ಯವಾಗಿ ಹಾಡಿದರು.
ಬಳಗದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಶ್ರೀಹರ್ಷ ಗಂಗನಘಟ್ಟ, ಮಂಜ್ಯ ನಾಯಕ್ ಕ.ರ.ಸಾ.ನಿ. ಮಂಡಳಿ ತಿಪಟೂರು., ಚಂದನ್ ರಾಜ್ ಬೂಕರ್ ತಿಮ್ಮಾಪುರ, ವಿಶ್ವನಾಥ್ ಹೊಸಹಳ್ಳಿ, ತಾಸಿನ್ ಮೈಸೂರಿ, ಸಿದ್ದೇಶ್ ಬಳವನೇರಲು, ಹರೀಶ್ ಯಗಚಿಕಟ್ಟೆ, ಸಂತೋಷ್ ಮತ್ತಿಘಟ್ಟ ಹಾಗೂ ಸ್ವಾಮಿ.ಕೆ.ಅರ್. ಇವರುಗಳನ್ನು ದೇವರಾಜ್ ತಿಮ್ಮಾಪುರ , ಕ.ರಾ.ರೈ.ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಹಾಗೂ ಸಿ. ಬಿ. ಶಶಿಧರ್ (ಟೂಡ) ಗೌರವಿಸಿದರು.