ವಕೀಲರಾದ ಎಂ.ಎನ್.ಚಿನ್ಮಯ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ. ತುಮಕೂರಿನ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಹಾಪುರ ಅವರ ಜನಸ್ನೇಹಿಯ ನಡೆ ಜಿಲ್ಲೆಯಲ್ಲಿ ಮೆಚ್ಚುಗೆಗಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ ಅರ್ಥಪೂರ್ಣವಾಗಿದೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ.
ಇದೊಂದು ಆಗಾಗ್ಗೆ ಪತ್ರಿಕೆಗಳಲ್ಲಿ , ಪೊಲೀಸ್ ಉನ್ನತ ಅಧಿಕಾರಿಗಳ ಪತ್ರಿಕಾಗೋಷ್ಠಿಗಳಲ್ಲಿ ಕೇಳಿಬರುವ ಹಾಗೂ ಕ್ಷಣ ಕಾಲ ಸಾರ್ವಜನಿಕರು ನಿಟ್ಟುಸಿರು ಬಿಟ್ಟು ಖುಷಿ ಪಡುವ ವಾಕ್ಯ ಅಂದ್ರೆ ಅತಿಶಯೋಕ್ತಿಯಾಗಲಾರದು.
ಹೌದು, ಪೊಲೀಸ್ ವ್ಯವಸ್ಥೆ ಬ್ರಿಟಿಷ್ ಕಾಲದಿಂದಲೂ ಸಹ ಸಮಾಜದಲ್ಲಿ ಶಾಂತಿ ಸುವ್ಯವಸ್ತೆ ಕಾಪಾಡಲು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ತನ್ನದೇ ಆದ ಕೆಲ ಘೋಷಿತ ಹಾಗೂ ಅಘೋಷಿತ ಕಾನೂನುಗಳನ್ನು ಬಳಸಿಕೊಂಡು ಬಂದಿರುವುದು ಈಗ ಇತಿಹಾಸ.

ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದೊಂದು ಮನೆತನದ ಗೌರವಕ್ಕೆ ದಕ್ಕೆ ತರುವ ಸಂಗತಿ , ಪೊಲೀಸರು ನಮ್ಮನ್ನು ಹುಡುಕಿ ಬರುವುದು ಅವಮಾನದ ಸಂಕೇತ ಅನ್ನುವ ಕಾಲದಿಂದ ಸರಿದು ಜನಸ್ನೇಹಿ ಪೊಲೀಸ್ ಎಂಬ ಬದಲಾವಣೆಯ ಪರ್ವದ ಕಡೆ ಆದ್ಯತೆ ನೀಡುತ್ತಿರುವುದು ಸಮಾಧಾನಕರ ಸಂಗತಿ.

ಆದರೂ ಸಹ ರಾಜ್ಯದ ಬಹುಸಂಖ್ಯಾತ ಪೊಲೀಸ್ ಠಾಣೆಗಳಲ್ಲಿ ಪ್ರಾಮಾಣಿಕ, ನಿಷ್ಠಾವಂತರನ್ನು ಹೊರತುಪಡಿಸಿ ಇಂದಿಗೂ ಸಂವಿಧಾನಬದ್ದ, ಸಂಸದೀಯ ಘೋಷಿತಕಾನೂನುಗಳ ಪಾಲಿಸಿ ಕರ್ತವ್ಯ ನಿರ್ವಹಿಸುವುದಕ್ಕಿಂತ, ಅಘೋಷಿತ ದಾಖಲೆ ರಹಿತ ಕಟ್ಟಳೆಗಳನ್ನು ಅನುಸರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಕಾಣಬರುತ್ತದೆ.
ನೊಂದು ಬೆಂದು ಸಮಸ್ಯೆ ಹೊತ್ತು ತರುವ ದೂರುದಾರರನ್ನು ಸಮಾಧಾನಚಿತ್ತದಿಂದ ಕುಳ್ಳಿರಿಸಿ ಸಮಸ್ಯೆ ಕೇಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗುವ ಪೊಲೀಸ್ ಅಧಿಕಾರಿಗಳು ಕಡಿಮೆಯಾಗುತ್ತಿರುವುದು ಇಲಾಖೆಗೆ ತಲೆನೋವಾಗಿದೆ.
ದೂರು ನೀಡಲು ಹೋದವರನ್ನೇ ಅನುಮಾನಿಸುವ, ಅವಮಾನಿಸುವ, ನೈತಿಕವಾಗಿ ಕುಗ್ಗಿ ಹೋಗುವ ರೀತಿಯಲ್ಲಿ ಪ್ರಶ್ನೆ ಕೇಳುವ…… ನೊಂದು ದೂರು ಕೊಡಲು ಬಂದವ “ಠಾಣೆಗೆ ಬರಬಾರದಿತ್ತು, ಇನ್ಯಾವ್ಯಾವತ್ತೂ ಬರಬಾರದು ” ಅನ್ನುವ ಮನಸ್ಥಿತಿಗೆ ತಂದು ನೂಕುವ ವಾತಾವರಣವನ್ನು ಪೊಲೀಸ್ ಠಾಣೆಯಲ್ಲಿ ಸೃಷ್ಟಿಸುವಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದಾರೆಯೇ ವಿನಃ ಜನಸಾಮಾನ್ಯರಿಗೆ ರಕ್ಷಣೆ ನೀಡಿ ಜನಸ್ನೇಹಿ ಪೊಲೀಸರಾಗುವಲ್ಲಿ ವಿಫಲ ರಾಗುತ್ತಿದ್ದರೆ.
ಕೆಲ ಮಾಧ್ಯಮಗಳು ಹಾಗೂ ನ್ಯಾಯಾಲಯಗಳಲ್ಲಿನ ಕೆಲ ಪ್ರಕರಣಗಳ ಉಲ್ಲೇಖದಂತೆ ರಾಜ್ಯದ ಕೆಲ ಪೊಲೀಸ್ ಕಚೇರಿ ಗಳು ರಿಯಲ್ ಎಸ್ಟೇಟ್ ಏಜೆಂಟ್ ಗಳ, ತಲೆ ಮಾಸಿದ ಭ್ರಷ್ಟ ರಾಜಕಾರಣಿಗಳ, ಹಣವಂತರ ಖಾಸಗಿ ಕಚೇರಿಗಳಾಗಿ, ಮಾರ್ಪಟ್ಟಿವೆ ಎಂಬ ಸಂಶಯದ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇನ್ನೊಂದೆಡೆ, ಅತಿಯಾದ ರಾಜಕೀಯ ಹಸ್ತಕ್ಷೇಪವೇ ಇದಕ್ಕೆಲ್ಲ ಕಾರಣವಾಗುತ್ತಿದೆ ಎಂದು ಪೊಲೀಸರು ನೊಂದುಕೊಳ್ಳುತ್ತಿದ್ದಾರೆ.
* ಬದಲಾಗಬೇಕಿದೆಪೊಲೀಸ್ ಭಾಷೆ *
ಪೊಲೀಸ್ ಇಲಾಖೆಗೆ ಸಮವಸ್ತ್ರ, ಪೊಲೀಸ್ ಕಾನೂನು ಅಂತಾ ಕೂಡ ಇರುವಂತೆ ಪೊಲೀಸ್ ಭಾಷೆ ಅಂತಾ ಒಂದಿದೆ ಅಂತೆ…!!😄 ಹಾಗಂತ ಜನರಾಗಲಿ, ಮಾಧ್ಯಮದವರಾಗಲಿ ಹೇಳ್ತಾ ಇರೋದಲ್ಲ.. ಅವರೇ ಪೊಲೀಸರೇ ಆಗಾಗ ಹೇಳ್ತಿರ್ತಾರೆ “ನಾವು ಪೊಲೀಸ್ ಭಾಷೆಲಿ ಬಾಯಿಬಿಡುಸ್ತೀವಿ, ನಮ್ಮ ಭಾಷೇಲಿ ಕೇಳುದ್ರೆ ಹೇಳ್ತಾನೆ “ಅಂತಾ ಇರ್ತಾರೆ. ಅದ್ಯಾವುದು ಪೊಲೀಸ್ ಭಾಷೆ ಅಂತಾ ಅರ್ಥ ಆಗಿರುತ್ತೆ ಅನ್ಕೋತೀನಿ…
ಸುಧಾರಣೆ ಯಾವಾಗ…..?
ಅಂದ್ರೆ ಪೊಲೀಸ್ ವ್ಯವಸ್ಥೆಲಿ ಸುಧಾರಣೆನೇ ಆಗಿಲ್ವಾ? ಅಂದ್ರೆ ಖಂಡಿತ ಹಾಗಿದೆ…. ಹಾಗ್ತಾ ಇದೆ….ಇನ್ನೂ ಬಹುಪಾಲು ಆಗಬೇಕಿದೆ….. ನೇಮಕಾತಿಯ ಬದಲಾವಣೆಗಳಿಂದ, ಉನ್ನತ ವ್ಯಾಸಂಗಮಾಡಿದ ಅಭ್ಯರ್ಥಿಗಳ ಆಯ್ಕೆ ಬಹುಪಾಲು ಆಗುತ್ತಿರುವ ಕಾರಣ, ಪ್ರಜ್ಞಾವಂತ ಸಾರ್ವಜನಿಕರ ಸಹಕಾರಗಳಿಂದ, ಒಂದಿಷ್ಟು ಭಾಗ ಸುಧಾರಣೆ ಆಗಿದ್ದರೂ ಸಹ ಕೆಲ ರಾಕ್ಷಸ ಪ್ರವೃತ್ತಿಯ, ಮೃಗೀಯ ವರ್ತನೆಯ, ಸಂಬಳೇತರ ಕಾಸಿಗೆ ಕೈ ಚಾಚುವ ಕೆಲವೇ ಮಂದಿಗಳ ದುರ್ವರ್ತನೆಗಳಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕಪ್ಪು ಚುಕ್ಕಿ ಇಟ್ಟಂತೆ ಆಗಿದೆ ಅಂದ್ರೆ ಭ್ರಷ್ಟರನ್ನುಬಿಟ್ಟು ಇನ್ನುಳಿದ ಪೊಲೀಸ್ ವ್ಯವಸ್ಥೆ ಹೌದು ಎಂದು ಒಪ್ಪುತ್ತದೆ.
ಹಾಗಾದರೆ ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳು ನೆಮ್ಮದಿಯಿಂದ, ಸಮಾಧಾನ ದಿಂದ, ಸರ್ವಸ್ವತಂತ್ರರಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಇಲಾಖೆಗೆ ಸೂಕ್ತ ಸೌಲಭ್ಯ ಒದಗಿಸಿದೆಯೇ….? ಇಲ್ಲಾ ಖಂಡಿತ ಇಲ್ಲಾ.
ಯಾವುದೇ ರಜಾದಿನ, ಹಬ್ಬ ಹರಿದಿನ ಎನ್ನದೆ ಪೊಲೀಸ್ ರಿಗೆ ಖಾಸಗಿ ಜೀವನವೇ ಇಲ್ಲವೆಂಬಂತೆ, ತನ್ನ ಕುಟುಂಬ, ನೋವು ಮರೆತು ಸಾರ್ವಜನಿಕರಿಗಾಗಿ ಹಗಲಿರುಳು ದುಡಿಯುವ ಪೊಲೀಸ್ ಇಲಾಖೆ ಗೆ ಒಂದಿಷ್ಟು ಮಾನಸಿಕ ಹಾಗೂ ದೈಹಿಕ ವಾಗಿ ಉತ್ತೇಜಿತ ಮಾಡುವ ಕಾರ್ಯ ಸರ್ಕಾರದಿಂದ ಆಗಬೇಕಿದೆ . ಸರ್ಕಾರ ಒಂದಿಷ್ಟು ಮಾನಸಿಕ ನೆಮ್ಮದಿಯನ್ನೂ ಕೊಡಬೇಕು.ಆಗಿಂದಾಗ್ಗೆ ಬದಲಾಗುವ ಕಾನೂನು ಕುರಿತು ಕಾನೂನಿನ ಅರಿವು ತರಗತಿಗಳ ಆಯೋಜನೆ ಮಾಡಿದ್ದಲ್ಲಿ ಸಾರ್ವಜನಿಕರ, ಕಾನೂನಿನ ಅಪಹಾಸ್ಯಕ್ಕೀಡಾಗುವ ಸಂದರ್ಭಗಳು ಕಡಿಮೆ ಆಗಬಹುದು….
ಈ ಎಲ್ಲಾ ಸಂಗತಿಗಳ ಬಗ್ಗೆ ಪೊಲೀಸ್ ವ್ಯವಸ್ಥೆ, ಹಾಗೂ ಸರ್ಕಾರ, ಕೈ ಜೋಡಿಸಿದಾಗ ಮಾತ್ರ ದಾಖಲೆಗಳಲ್ಲಿ, ಪೊಲೀಸ್ ಆದೇಶಗಳಲ್ಲಿ ಇರುವ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಾರ್ಯ ರೂಪಕ್ಕೆ ಬಂದು ಜನಮನ್ನಣೆ ಗಳಿಸುತ್ತದೆ. ಏನಂತೀರಿ….?

