ಜಿ ಎನ್ ಮೋಹನ್
ನನ್ನ ಕಣ್ಣೇ ಹನಿಗೂಡಿತ್ತು, ಅವಳಿಗೂ ಮುಂಚೆ..
‘ಪಪ್ಪಾ, ಯಾಕೆ ಅವರು ನಾನು ಬರೆದ ಚಿತ್ರ ಸರಿ ಇಲ್ಲ’ ಎನ್ನುತ್ತಾರೆ ಎಂದು ತನ್ನ ಪುಟ್ಟ ಬೆರಳಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಅವಳು ಕೇಳಿದ್ದಳು.
ಒಂದೆರಡು ಬಣ್ಣದ ಪೆನ್ಸಿಲ್ ಸಿಕ್ಕರೆ ಸಾಕು ಹಾಳೆಯ ತುಂಬಾ ಕಾಮನ ಬಿಲ್ಲನ್ನೇ ಮೂಡಿಸುತ್ತಿದ್ದ, ನನ್ನನ್ನ ಚಕಾಚಕ್ ಬರೆದು ತೋರಿಸುತ್ತಿದ್ದ ಹುಡುಗಿ ಈಗ ಕಣ್ಣಲ್ಲಿ ನೀರು ತುಂಬಿ ನಿಂತಿದ್ದಳು.
ಇದಕ್ಕೂ ಒಂದಷ್ಟು ವರ್ಷದ ಹಿಂದಿನ ಮಾತು-
ಕಲಬುರ್ಗಿಯ ಮನೆ ಹೊಕ್ಕಾಗ ಅವಳಿಗೆ ಇನ್ನೂ ಮೂರು ವರ್ಷ. ಒಂದು ದಿನ ಆಫೀಸಿನಿಂದ ಬಂದು ನೋಡುತ್ತೇನೆ ಇದ್ದ ಪೆನ್ಸಿಲ್ ಅನ್ನೇ ತೆಗೆದುಕೊಂಡು ಗೋಡೆಯ ಮೇಲೆ ಗೆರೆ ಎಳೆದಿದ್ದಳು.
ಮಾರನೆಯ ದಿನ ಇನ್ನೂ ಒಂದೆರಡು ಗೆರೆ ಹೆಚ್ಚಾಗಿತ್ತು
ನನಗೆ ಓನರ್ ಭಯ. ಗೋಡೆ ಮೇಲೆ ಇವಳು ಗೆರೆ ಎಳೆದರೆ ನನ್ನ ಎದೆ ಢವಗುಡುತ್ತಿತ್ತು
ನಾನು ಒಂದು ಉಪಾಯ ಮಾಡಿದೆ. ಬಾಡಿಗೆ ಕಲೆಕ್ಟ್ ಮಾಡಲು ಓನರ್ ಬಂದರೆ ಕಾಣದ ಜಾಗವನ್ನೆಲ್ಲ ಗುರುತಿಸಿದೆ.
‘ಇಲ್ಲಿ ಮಾತ್ರ ಬರಿ’ ಅಂದೆ. ಅವಳು ಎಷ್ಟು ಸಂಭ್ರಮವನ್ನು ತನ್ನ ಮುಖದಲ್ಲಿ ಹರಡಿಕೊಂಡಳು ಎಂದರೆ ನಾನು ಮಾಡಿದ ಕೆಲಸವೇ ಸ್ಟೇಷನ್ ಬಜಾರ್ ನಲ್ಲಿ ಮೂಲೆ ಮೂಲೆ ಹುಡುಕಿ ಬಣ್ಣದ ಪೆನ್ಸಿಲ್, ಕ್ರೆಯಾನ್ ಆರಿಸಿ ತಂದದ್ದು
ಆಮೇಲೆ ಅವಳಿಗೆ ಎದ್ದರೆ ಸಾಕು ಅದೇ ಕೆಲಸ
ನನಗೆ ಆಫೀಸ್ ನಿಂದ ಬಂದರೆ ಸಾಕು ಇವತ್ತೇನು ಬರೆದಿದ್ದಾಳೆ ಎಂದು ನೋಡುವ ಕೆಲಸ
ಒಂದು ದಿನ ಬಂದು ನೋಡುತ್ತೇನೆ ಹುಡುಗಿ ನಾನು ಎಳೆದ ಲಕ್ಷ್ಮಣ ರೇಖೆಯನ್ನು ದಾಟಿಯೇ ಬಿಟ್ಟಿದ್ದಳು. ಏಕೆಂದರೆ ಓನರ್ ಕಣ್ಣಿಗೆ ಕಾಣದ ಗೋಡೆಗಳೆಲ್ಲಾ ಚಿತ್ತಾರದಿಂದ ಬಿರಿದು ಹೋಗಿದ್ದವು
ಪುಟ್ಟ ಹುಡುಗಿ ಇದ್ದ ಗೋಡೆಗಳೆಲ್ಲಾ ತನ್ನದೇ ಕ್ಯಾನ್ ವಾಸ್ ತಂದುಕೊಂಡು ಬಿಟ್ಟಿದ್ದಳು. ಹಾಗಾಗಿ ಈಗ ಅವಳ ಚಿತ್ತಾರ ನಾನು ಕೊಟ್ಟದ್ದ ಜಾಗವನ್ನೂ ಮೀರಿ ಆಚೆ ಬಂದಿತ್ತು
ಸರಿ ಓನರ್ ಮನೆಗೆ ಹೋಗಿ ಹೇಳಿಬಿಟ್ಟೆ, ಹೋಗುವಾಗ ಬೇಕಾದರೆ ಸುಣ್ಣ ಬಣ್ಣಕ್ಕೆ ಇನ್ನೂ ಜಾಸ್ತಿಯೇ ದುಡ್ಡು ಕೊಡುತ್ತೇನೆ ಅಂತ
ಅಂತ ಆ ಹುಡುಗಿ ಈಗ ಬಿಕ್ಕಲೋ ಬೇಡವೋ ಎನ್ನುವಂತೆ ನಿಂತಿದ್ದಳು
ಆಗಿದ್ದು ಇಷ್ಟೇ
ಕ್ಲಾಸ್ ನಲ್ಲಿ ಈಗ ಡ್ರಾಯಿಂಗ್ ಪಿರಿಯಡ್ ಎಂದ ತಕ್ಷಣ ಖುಷಿಯಿಂದ ಜಿಗಿದು ತನಗೆ ತೋಚಿದ್ದೆಲ್ಲಾ ಗೆರೆ ಎಳೆದಿದ್ದಾಳೆ
ಖುಷಿಯಿಂದ ಮೇಷ್ಟ್ರ ಕಡೆ ಹೋದಾಗ ಇದೇನಿದು ಅಂತ ರೇಗಿದ್ದಾರೆ
ಅವರಿಗೆ ಡ್ರಾಯಿಂಗ್ ಎಂದರೆ ಎರಡು ಗುಡ್ಡ, ಮಧ್ಯೆ ಒಂದು ಸೂರ್ಯ, ಎರಡು ತೆಂಗಿನ ಮರ ಅಷ್ಟೇ.. ಹಾಗಾಗಿ ಈ ಹುಡುಗಿ ಹದ್ದು ಮೀರಿ ಹೋಗಿದ್ದಾಳೆ ಎನಿಸಿಬಿಟ್ಟಿದೆ. ಗದರಿಕೆಯೇ ಗೊತ್ತಿಲ್ಲದ ಹುಡುಗಿ ಬೆದರಿ ಹೋಗಿದ್ದಾಳೆ
ಈ ನೆನಪೆಲ್ಲಾ ಇವತ್ತು ಇನ್ನಿಲ್ಲದಂತೆ ನುಗ್ಗಿ ಬಂತು
ಕಾರಣ ಇಷ್ಟೇ
ದೂರದ ಅಮೆರಿಕಾದ ಓಕ್ಲಹಾಮ ದಲ್ಲಿ ಒಂದನೇ ಕ್ಲಾಸ್ ನ ಟೀಚರ್ ದುಃಖವೇ ಮಡುಗಟ್ಟಿ ಕುಳಿತಿದ್ದರು.
ಅಂದು ವರ್ಷದ ಕೊನೆಯ ಕ್ಲಾಸ್. ಪುಟ್ಟ ಪುಟ್ಟ ಮಕ್ಕಳು, ಇಡೀ ವರ್ಷ ತನ್ನೊಡನೆ ಮುದ್ದು ಮುದ್ದಾಗಿದ್ದ ಆಡುತ್ತಿದ್ದ ಮಕ್ಕಳು ಇನ್ನು ಹೊರಟುಬಿಡುತ್ತಾರಲ್ಲಾ ಅನಿಸಿದ್ದೇ ಕಣ್ಣೀರಾಗಿದ್ದರು.
ಆಗ ಹೊಳೆಯಿತು
ತಕ್ಷಣವೇ ‘ಅಮೆಜಾನ್’ ನಿಂದ ಒಂದು ಹೊಸ ಸ್ಕರ್ಟ್ ತರಿಸಿದರು. ಚಂದನೆ ಬೆಲ್ಟ್ ಏರಿಸಿ ಕ್ಲಾಸ್ ಗೆ ಬಂದರು
ಮಕ್ಕಳೇ ಇಲ್ಲಿ ಬನ್ನಿ ಎಂದವರೇ ಕೈಗೆ ಬಣ್ಣ ಬಣ್ಣದ ಪೆನ್ಸಿಲ್ ಇಟ್ಟವರೇ ಈಗ ಚಿತ್ರ ಬರೆಯಿರಿ ನೋಡೋಣ ಎಂದಿದ್ದಾರೆ.
ಮಕ್ಕಳು ಎಲ್ಲಿ ಬರೆಯೋದು ಎಂದು ಮುಖ ಮಾಡಿ ನಿಂತಾಗ ತಾನು ಧರಿಸಿದ್ದ ಹಚ್ಚ ಬಿಳಿಯ ಸ್ಕರ್ಟ್ ನ್ನೇ ತೋರಿಸಿದ್ದಾರೆ
ಮಕ್ಕಳು ‘ಹೋ’ ಎನ್ನುತ್ತಾ ಎಲ್ಲೆಲ್ಲೂ ಗೀಚಿ ಹಾಕಿದ್ದಾರೆ. ಕಾಡು ಮೇಡು, ಬೆಟ್ಟ ಗುಡ್ಡ, ಕಾಮನಬಿಲ್ಲು ಕಾರು, ಕರಡಿ ಕೋತಿ .. ಹೀಗೆ ಏನೆಲ್ಲಾ
ಈಗ ಈ ಸ್ಕರ್ಟ್ ಟೀಚರ್ ಮನೆಯಲ್ಲಿ ಗೋಡೆಯಲ್ಲಿ ಸ್ಮರಣ ಫಲಕವಾಗಿ ತೊಗಾಡುತ್ತಿದೆ
ಈ ಚಿತ್ರ ಅಳಿಸಿಹೋಗಿ ಬಿಟ್ಟರೆ ಎಂದು ಭಯವಾಗಿ ತಜ್ಞರನ್ನು ಕೇಳಿ ಮತ್ತೆ ‘ಅಮೆಜಾನ್’ ನಿಂದ ಒಂದಿಷ್ಟು ರಾಸಾಯನಿಕ ತರಿಸಿ ಲೇಪಿಸಿದ್ದಾರೆ
ಇದೇನು ಹುಚ್ಚಾಟ ಎಂದು ಬೇರೆಯವರು ಹುಬ್ಬೇರಿಸಿದರೆ ಆಕೆ ನಗುತ್ತ, ನಗು ನಗುತ್ತಾ-
‘ನೋಡಿ ನನ್ನ ಪುಟ್ಟ ಪಿಕಾಸೋಗಳು..’ ಎಂದು ಹೆಮ್ಮೆಯಿಂದ ನಗು ತುಳುಕಿಸುತ್ತಾರೆ
ಈಕೆ ಕ್ರಿಸ್
https://www.facebook.com/s.castlebury