Saturday, December 21, 2024
Google search engine
HomeUncategorized'ಪಿವಿಆರ್' ಅಂದ್ರೆ ಏನು ಹೇಳಿ..??

‘ಪಿವಿಆರ್’ ಅಂದ್ರೆ ಏನು ಹೇಳಿ..??

ಜಿ.ಎನ್.ಮೋಹನ್


ಅವತ್ತೊಂದು ದಿನ ಹೀಗಾಯ್ತು. ನಂದಿನಿ ಲಕ್ಷ್ಮೀಕಾಂತ್ ಬಲವಂತದಿಂದಾಗಿ ನಾನು ಮೀಡಿಯಾ ವಿದ್ಯಾರ್ಥಿಗಳ ಮುಂದೆ ಕುಳಿತಿದ್ದೆ. ಮೀಡಿಯಾ ಬಗ್ಗೆ ಒಂದು ಗಂಟೆ ಮಾತು ಮಾತು.

ಒಳ್ಳೆ ಜೋಷ್ ನಲ್ಲಿದ್ದ ನಾನು ಅವರೆಲ್ಲರಿಗೆ ‘ಪಿವಿಆರ್’ ಅಂದರೆ ಏನು? ಅಂತ ಕೇಳಿದೆ.

ಗಲಗಲ ಅನ್ನುತ್ತಿದ್ದ ಕ್ಲಾಸು ಒಂದೇ ಕ್ಷಣಕ್ಕೆ ಸ್ಥಬ್ಧವಾಯಿತು.

ಪ್ರತಿಯೊಬ್ಬರ ಮುಖದಲ್ಲೂ ಪ್ರಶ್ನಾರ್ಥಕ ಚಿಹ್ನೆ. ಒಂದಷ್ಟು ಹುಡುಗರು ಧೈರ್ಯ ಮಾಡಿ ‘ಸರ್, ಪಿ ಅಂದ್ರೆ ಪಿಕ್ಚರ್’ ಅಂದರು. ‘ವಿ ಅಂದ್ರೆ ವಿಡಿಯೋ, ಆರ್ ಅಂದ್ರೆ ರೆಕಾರ್ಡಿಂಗ್’. ಪಿವಿಆರ್ ಅಂದರೆ ಪಿಕ್ಚರ್ ವಿಡಿಯೋ ರೆಕಾರ್ಡಿಂಗ್ ಅಂದರು.

ಈಗ ಮುಖವನ್ನು ಕ್ವಶ್ಚನ್ ಮಾರ್ಕ್ ಆಗಿ ಬದಲಿಸಿಕೊಳ್ಳುವ ಸರದಿ ನನ್ನದಾಗಿತ್ತು.

ನಾನು ಕುಳಿತಿದ್ದು ಈಗಿನ ಕಾಲದ ಹುಡುಗ ಹುಡುಗಿಯರ ಎದುರು.

ಇದ್ದಿದ್ದರಲ್ಲಿ ಜೇಬಿನ ಪರಿಸ್ಥಿತಿ ಪರವಾಗಿಲ್ಲ ಎನ್ನಬಹುದಾದವರ ಎದುರು, ಹಾಗಾಗಿ ಮಲ್ಟಿಪ್ಲೆಕ್ಸ್ ತಿರುಗಾಟ ಇವರಿಗೆ ಅಪರೂಪದ್ದೇನಲ್ಲ.

ನಾನು ಒಬ್ಬೊಬ್ಬರೂ ಮಾಡುತ್ತಿದ್ದ ಊಹೆಯನ್ನು ನೋಡಿ ಗಾಬರಿ ಆದವನೇ, ಬೇಡ ಬೇಡ, ಪಿವಿಆರ್ ಅಂದರೆ ‘ಪ್ರಿಯಾ ವಿಲೇಜ್ ರೋಡ್ ಶೋ’ ಅಂತ ಅಂದೆ.

ಅವರ ಮುಖದಲ್ಲಿ ಆದ ಬದಲಾವಣೆ ಗಮನಿಸಬೇಕಿತ್ತು. ತೆರೆದ ಬಾಯಿ ತೆರೆದೇ ಇತ್ತು. ಬಿಟ್ಟ ಕಣ್ಣು ಬಿಟ್ಟ ಹಾಗೇ ಇತ್ತು.

ವರ್ಷಗಳ ಹಿಂದೆ ನನ್ನ ಕಸಿನ್ ಧೀರಜ್ ಫೋನ್ ಮಾಡಿ ‘ಐಪಿಎಲ್ ಟಿಕೆಟ್ ಇದೆ ಬರ್ತೀಯಾ ನನ್ನ ಜೊತೆ’ ಅಂದ.

ನನಗೂ ಕ್ರಿಕೆಟ್ ಗೂ ಅಂತಾ ಒಳ್ಳೆ ನಂಟೇನಿಲ್ಲ. ಖಾಲಿ ಇದ್ದರೆ ಸ್ಕೋರ್ ಕಡೆ ಕಣ್ಣಾಡಿಸ್ತೀನಿ. ಕೆಲಸ ಇದ್ರೆ ಗೋಲಿಮಾರ್ ಅಂತೀನಿ.

ಹಾಗಾಗಿ ಅವನು ಕರೆದಾಗ ‘ಹೋಗೋ ಯಾರು ಬರ್ತಾರೆ, ಬೆಳಗ್ಗೆ ಪೇಪರ್ ನಲ್ಲಿ ಬೇರೆ ಕಾರು ತರಬೇಡಿ, ಬಸ್ ಹಿಡ್ಕೊಂಡು ಬನ್ನಿ ಅಂತ ಹೇಳಿದ್ದಾರೆ. ಅಲ್ಲಿ ಬೇರೆ ರಷ್ ಒದ್ದಾಡಬೇಕು ಅಂತ ಕಣಿ ಹೇಳಿದೆ.

ಅವನು ‘ರಷ್ ಏನಿಲ್ಲ, ಖಾಲಿ ಹೊಡೀತಾ ಇರುತ್ತೆ ಬಾ’ ಅಂದ. ಅವತ್ತು ಯಾವ ಮ್ಯಾಚಪ್ಪಾ ಅಂತ ನೋಡಿದೆ. ರಾಯಲ್ ಚಾಲೆಂಜರ್ಸ್ ಆಟ. ಹಾಗಿದ್ರೂ ಖಾಲಿ ಹೊಡೆಯುತ್ತೆ ಅಂದ್ರೆ ಯಾರು ನಂಬ್ತಾರೆ ಅಂದೆ.

ತಕ್ಷಣ ಅವನು ಹೇಳಿದ ‘ಅಯ್ಯೋ, ನಾನು ಹೇಳಿದ್ದು ಫನ್ ಮಲ್ಟಿಪ್ಲೆಕ್ಸ್ ನಲ್ಲಿ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಲ್ಲ’ ಅಂದ, ಓಹ್ ಕ್ರಿಕೆಟ್ ಇವಾಗ ಫಿಲಂ ಥಿಯೇಟರಿಗೆ ಬಂದಿದೆ. ಬಿಟ್ಟ ಬಾಯಿ ಬಿಟ್ಟ ಹಾಗೇ ಇರುವ ಪರಿಸ್ಥಿತಿ ಈಗ ನನ್ನದಾಗಿತ್ತು.

‘ಇದು ಎಂಥಾ ಕಾಲವಯ್ಯ ಹೊಸತನವ ಕೊಡುವ, ಹೊಸ ವಿಷಯ ಅರಿವ..’ ಅನ್ನೋ ಪ್ರಶ್ನೆಗೆ ಸಿಂಪಲ್ ಉತ್ತರ ‘ಇದು ಮಲ್ಟಿಪ್ಲೆಕ್ಸ್ ಕಾಲ’.

ಮಲ್ಟಿಪ್ಲೆಕ್ಸ್ ಬಿರುಗಾಳಿಗೆ ನಾಂದಿ ಹಾಡಿದ್ದೇ ‘ಪ್ರಿಯಾ ವಿಲೇಜ್ ರೋಡ್ ಶೋ’ ಅರ್ಥಾತ್ ಪಿವಿಆರ್.

ಇವತ್ತು ಮಲ್ಟಿಪ್ಲಿಕ್ಸ್ ವಿಚಾರದಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನ ಇದೆ. ಯಾಕೆಂದರೆ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಸ್ಕ್ರೀನ್ ಇರೋದು ಬೆಂಗಳೂರಿನ ಪಿವಿಆರ್ ನಲ್ಲಿ.

ನಾವು ಈಗ ಕಾಣ್ತಾ ಇರೋದು ಮಲ್ಟಿಪ್ಲೆಕ್ಸ್ ಬಿರುಗಾಳಿ ಮಾತ್ರ. ಆದ್ರೆ ಅದರ ಹಿಂದೆ ‘ಮೆಗಾ ಪ್ಲೆಕ್ಸ್’ ಅನ್ನೋ ಬಿರುಗಾಳಿ ಸಹಾ ಎಂಟ್ರಿ ತಗೊಳ್ಳೋಕೆ ಕಾಯ್ತಾ ನಿಂತಿದೆ.

ಒಂದಕ್ಕಿಂತ ಜಾಸ್ತಿ ಸ್ಕ್ರೀನ್ ಇದ್ದರೆ ಅದು ಮಲ್ಟಿಪ್ಲೆಕ್ಸ್. ಅದೇ 16ಕ್ಕಿಂತ ಜಾಸ್ತಿ ಸ್ಕ್ರೀನ್ ಇದ್ದರೆ ಅದು ಮೆಗಾಪ್ಲೆಕ್ಸ್.

ಕೆನಡಾದಲ್ಲಿ ನ್ಯಾಟ್ ಟೇಲರ್ ಗೆ ‘ಎಲ್ಜಿನ್’ ಅಂತ ಸಿನಿಮಾ ಥಿಯೇಟರ್ ಇತ್ತು.

ಆತ ಅದರ ಪಕ್ಕದಲ್ಲೇ ಇನ್ನೊಂದು ಥಿಯೇಟರ್ ಕಟ್ಟಿದ. ಒಂದೇ ರೀಲು ಎರಡು ಹಾಲ್ ನಲ್ಲಿ ಓಡಿಸಿ ಬೇಜಾನ್ ದುಡ್ಡು ಮಾಡ್ಬೋದಲ್ಲ ಅಂತ ಅವನ ಯೋಚನೆ.

ಆಮೇಲೆ ಇನ್ನೂ ಈಸಿಯಾಗಿ ದುಡ್ಡು ಮಾಡಬೇಕು ಅಂದ್ರೆ ಎರಡರಲ್ಲೂ ಬೇರೆಬೇರೆ ಸಿನಿಮಾ ಹಾಕಬೇಕು ಅಂತ ಅವನಿಗೆ ಗೊತ್ತಾಯ್ತು.

ಅಲ್ಲಿಂದ ಶುರುವಾಯ್ತು ನೋಡಿ ಮಲ್ಟಿಪ್ಲೆಕ್ಸ್ ಅನ್ನೋ ಬಿರುಗಾಳಿ. ಅದು ಕನ್ಸಾಸ್, ಟೊರೆಂಟೋ ಎಲ್ಲವನ್ನೂ ಆಕ್ರಮಿಸಿಕೊಂಡು ಭಾರತಕ್ಕೂ, ಬೆಂಗಳೂರಿಗೂ ಬಂದಿಳೀತು.

ಮುಧೋಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಆಗ ಜೋರಾಗಿ ಸದ್ದು ಮಾಡ್ತಿದ್ದ ಡಂಕೆಲ್ ಪ್ರಸ್ತಾವನೆ ಟಿವಿ ಮೇಲೆ, ಪತ್ರಿಕೆಗಳ ಮೇಲೆ ಏನೇನು ಪರಿಣಾಮ ಮಾಡುತ್ತೆ ಅಂತ ಒಂದೆರಡು ಪುಸ್ತಕ ಬರೆದಿದ್ದೆ.

ಅದನ್ನ ನೋಡಿಯೇ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಅದರ ಮೇಲೇ ಒಂದು ವಿಶೇಷ ಉಪನ್ಯಾಸ ಕೊಟ್ಬಿಡಿ ಅಂದ್ರು.

ಆಗ ಫ್ರಾನ್ಸ್ ದೇಶ ಡಬ್ಬಿಂಗ್ ವಿರುದ್ಧ, ಸಿನಿಮಾ ಅನ್ನೋದನ್ನು ಸರಕು ಅಂತ ಅಮೆರಿಕಾ ಗುರುತಿಸಿದ್ದನ್ನ ವಿರೋಧಿಸಿತ್ತು. ಬುದ್ಧಿಜೀವಿಗಳು ಸಿಡಿದು ನಿಂತಿದ್ದರು.

ಆಗಲೇ ಭಾರತಕ್ಕೂ ಮಲ್ಟಿಪ್ಲೆಕ್ಸ್ ಬರ್ತಾ ಇದೆ ಅನ್ನುವ ಸೂಚನೆ ಸಿಕ್ಕಿದ್ದು. ನಾನು ಖಡಾಖಂಡಿತವಾಗಿ ಮಲ್ಟಿಪ್ಲೆಕ್ಸ್ ಬರಕೂಡದು. ಅದು ಅರ್ಥಪೂರ್ಣ ಸಿನೇಮಾಗಳನ್ನು ಕೊಂದುಹಾಕಿಬಿಡುತ್ತೆ ಎಂದೆ.

ಎದುರುಗಡೆ ಸಂಸ್ಕೃತಿ ಸಚಿವ ಎಂ.ಪಿ. ಪ್ರಕಾಶ್ ಕುಳಿತಿದ್ದರು.

ಮಲ್ಟಿಪ್ಲೆಕ್ಸ್ ಗಳು ಬಂದರೆ ಅಲ್ಲಿ ಗಿರೀಶ್ ಕಾಸರವಳ್ಳಿ ಸಿನೆಮಾ ಸ್ಕ್ರೀನ್ ಆಗುತ್ತಾ ಅಂತ ಅವ್ರಿಗೆ ಪ್ರಶ್ನೆ ಕೇಳಿದ್ದೆ. ಅವರಿಗೆ ಬೇಕಾಗಿರುವುದು ಕೋಲಾ ಕುಡೀತಾ, ಪಾಪ್ ಕಾರ್ನ್ ತಿಂತಾ ಸಿನೆಮಾ ನೋಡುವ ಜನ.

ಅಂತಾ ಜನಕ್ಕೆ ಹಾಲಿವುಡ್, ಬಾಲಿವುಡ್ ಬೇಕೇ ಹೊರತು ನಮ್ಮ ಸಂವೇದನೆ ಬೇಕಾಗೋಲ್ಲ ಅಂದೆ.

ಅದಾಗಿ ಸುಮಾರು ವರ್ಷ ಉರುಳಿ ಹೋಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಸಾಕಷ್ಟು ಕೋಲಾ ಹರಿದಿದೆ. ಪಾಪ್ ಕಾರ್ನ್ ಖರ್ಚಾಗಿಹೋಗಿದೆ.

ಗಿರೀಶ್ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್’ ನೋಡಬೇಕು ಅಂತ ಒದ್ದಾಡುತ್ತಿದ್ದೆ. ಎಲ್ಲಿ ರಿಲೀಸ್ ಆಗಿದೆ ಅಂತ ನೋಡಿದರೆ ಅದೇ ಪಿವಿಆರ್ ನಲ್ಲಿ ತೆರೆ ಕಂಡಿತ್ತು. ಮಲ್ಟಿಪ್ಲೆಕ್ಸ್ ಇವತ್ತು ಎಷ್ಟೋ ಹೊಸಬರಿಗೆ, ಹೊಸ ಅಲೆ ಸಿನಿಮಾಗಳಿಗೆ ಜಾಗ ಮಾಡಿಕೊಟ್ಟಿದೆ.

ಹೀಗೆ ಹೇಳುವಾಗ ನನಗೆ ತಕ್ಷಣ ನೆನಪಾಗುತ್ತಿರುವುದು ಮಧುರ್ ಭಂಡಾರ್ಕರ್, ಪಿವಿಆರ್ ನಲ್ಲಿ ‘ಫ್ಯಾಷನ್’ ಫಿಲಂ ರಿಲೀಸಾಗಿತ್ತು. ಪ್ರಿಯಂಕಾ ಚೋಪ್ರಾ, ಮಧುರ್ ಭಂಡಾರ್ಕರ್ ಫಿಲಂ ಪ್ರಚಾರಕ್ಕೆ ಅಲ್ಲಿಗೆ ಬಂದಿದ್ದರು.

ಜರ್ನಲಿಸ್ಟುಗಳು ಮೈಕ್ ಹಿಡಿದು ಮಲ್ಟಿಪ್ಲೆಕ್ಸ್ ಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ದರು.

ಮಧುರ್ ಹೇಳಿದ್ರು ‘ಮಲ್ಟಿಪ್ಲೆಕ್ಸ್ ಗಳ ಅನ್ನೋದು ಇರುವುದರಿಂದ ಒಬ್ಬ ಮಧುರ್ ಭಂಡಾರ್ಕರೂ ಇದ್ದಾನೆ. ನನ್ನ ಫಿಲಂಗಳ ಕಥೆ, ನರೇಷನ್ ಎಲ್ಲಾ ಭಿನ್ನ’.

‘ಅದನ್ನೇ ಸಾವಿರಾರು ಸೀಟ್ ಇರುವ ಸಿಂಗಲ್ ಸ್ಕ್ರೀನ್ ಥಿಯೇಟರಿನಲ್ಲಿ ಬಿಡುಗಡೆ ಮಾಡಿ ಅಂದಿದ್ದಿದ್ರೆ ಯಾರೂ ಮೂಸಿ ನೋಡ್ತಾ ಇರಲಿಲ್ಲ. ಈಗ ನೋಡಿ. 200 ಸೀಟ್ ಇರುವ ಮಲ್ಟಿಪ್ಲೆಕ್ಸ್ ನಲ್ಲಿ ಆರಾಮಾಗಿ ಫ್ಯಾಷನ್ ಓಡುತ್ತೆ’.

ಮಲ್ಟಿಪ್ಲೆಕ್ಸ್ ಗುಟ್ಟೇ ಅದು ‘ಕಡಿಮೆ ಸೀಟು. ಹೆಚ್ಚು ರೇಟು’.

ಇವತ್ತು ಇಂಡಿಯಾದಲ್ಲಿ ದುಡ್ಡು ಮಾಡೋ ಕುದುರೆ ಅಂದ್ರೆ ಎರಡೇ ಎರಡು. ಕ್ರಿಕೆಟ್ಟು ಮತ್ತೆ ಸಿನೆಮಾ.

ಮನರಂಜನೆ ಉದ್ಯಮದಲ್ಲಿ ಶೇಕಡಾ 27ರಷ್ಟು ಆದಾಯ ಸಿನೆಮಾದಿಂದಾನೇ ಬರ್ತಾ ಇದೆ.

ಹಾಗಾಗೀನೇ ಮಲ್ಟಿಪ್ಲೆಕ್ಸ್ ಗಳ ಕಣ್ಣೂ ಅದರ ಮೇಲೆ ಬಿದ್ದಿದೆ. ಅವರ ಲೆಕ್ಕಾಚಾರ ನೋಡಿ, ಇಂಡಿಯಾದಲ್ಲಿ ಇವತ್ತು 11,500 ಸ್ಕ್ರೀನ್ ಗಳಿವೆ.

ಅಲ್ಲ, ಸಿನಿಮಾನೇ ನೋಡ್ದೇ ಇರೋ ಚೀನಾದಲ್ಲಿ 65 ಸಾವಿರ ಸ್ಕ್ರೀನ್ ಇದೆ. ಅಮೆರಿಕಾದಲ್ಲಿ 36 ಸಾವಿರ ಸ್ಕ್ರೀನ್ ಇವೆ. ಭಾರತದಲ್ಲಿ ಸಿನೆಮಾನೇ ಉಸಿರಾಡಿ ಬದುಕ್ತಾರೆ. ಆದರೂ ಇರೋದು 10 ಲಕ್ಷ ಜನಕ್ಕೆ ಹನ್ನೆರಡು ಸ್ಕ್ರೀನ್ ಮಾತ್ರ.

ಆ ಕಾರಣಕ್ಕೇ ಇವತ್ತು ಗುಜರಾತ್ ನಲ್ಲಿ ಫ್ಲೂರೋಕೆಮಿಕಲ್ಸ್ ಹೊಂದಿರೋ ಕಂಪನಿ ‘ಐನಾಕ್ಸ್’ ಥಿಯೇಟರ್ ಶುರು ಮಾಡಿದೆ.

ರಿಲಯನ್ಸ್ ಕಂಪನಿ ದೊಡ್ಡ ಹೆಜ್ಜೆ ಹಾಕಿದೆ.

ಸಿನೆಮಾ ಮಾಡೋದಕ್ಕೆ ಬಂದ ಆಡ್ ಲ್ಯಾಬ್ಸ್ ಮಲ್ಟಿಪ್ಲೆಕ್ಸ್ ಗೆ ಕಾಲಿಟ್ಟಿದೆ.

‘ರಾಶಿ ರೊಕ್ಕ ಇರೋರೆಲ್ಲಾ ರಾಚೂಟಪ್ನಂಗಿರಬೇಕು’ ಅನ್ನೋ ಸಿನೆಮಾ ಹಾಡಿನ ಥರಾ ರಾಶಿ ರೊಕ್ಕ ಇರೋರೆಲ್ಲಾ ಮಲ್ಟಿಪ್ಲೆಕ್ಸ್ ಶುರು ಮಾಡೋದಿಕ್ಕೆ ರೆಡಿ ಆಗಿ ನಿಂತಿದ್ದಾರೆ.

ಕಾರ್ಪೋರೇಟ್ ಕಂಪನಿಗಳು ಮಲ್ಟಿಪ್ಲೆಕ್ಸ್ ಹಿಂದೆ ನಿಂತ ಮೇಲೆ ರಿಯಲ್ ಎಸ್ಟೇಟ್ ನವರು ನಾವೇನ್ ಕಡಿಮೆ ಅಂತ ಅವರೂ ರೆಡಿ ಇದ್ದಾರೆ.

ಊರಿಗೆ ಬಂದವರು ನೀರಿಗೂ ಬಂದಿದ್ದಾರೆ. ಬೆಂಗಳೂರಿಗೆ ಬಂದ ಮಲ್ಟಿಪ್ಲೆಕ್ಸ್ ಮಂಗಳೂರು, ಗುಲ್ಬರ್ಗಕ್ಕೂ ಹೋಗಿದೆ.

ಮೊದಲು ದೊಡ್ಡ ದೊಡ್ಡ ಸಿಟಿ, ಆಮೇಲೆ ಜಿಲ್ಲೆಗಳು, ಆಮೆಲೆ ಗಲ್ಲಿಗಳು ಅನ್ನೋ ಸೂತ್ರ

‘ಮಾವಿನ ಮರದಲ್ಲಿ ಕೆಳಗಡೆ ತೂಗ್ತಾ ಇರೋ ಹಣ್ಣನ್ನ ಮೊದಲು ತಿನ್ನಬೇಕು. ಆಮೇಲೆ ಮೇಲಗಡೆ ಇರೋದನ್ನ ಕೈಗೆಟುಕಿಸಿಕೊಳ್ಳಬೇಕು’ ಅನ್ನೋದು ಬ್ಯುಸಿನೆಸ್ ಗೊತ್ತಿರುವವರ ಗುಟ್ಟು.

ಈಗ ಮತ್ತೆ ನನ್ನ ಚಿಂತೆ ತಲೆ ಎತ್ತಿದೆ. ಈಗೇನೋ ಸರಿ, ಆದ್ರೆ ಮುಂದೇನೂ ಮಲ್ಟಿಪ್ಲೆಕ್ಸ್ ನಲ್ಲಿ ‘ಗುಲಾಬಿ ಟಾಕೀಸ್’ನ ಗುಲಾಬಿ ಕಾಣಿಸ್ಕೊಂತಾಳ ಅಂತ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?