ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣದಲ್ಲಿ ಕಣದಲ್ಲಿ ಸ್ಥಳೀಯ ನಾಯಕರಿಗಿಂತ ಹೊರಗಿನ ನಾಯಕರೇ ಕ್ಷೇತ್ರದಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ.
ಇದರಲ್ಲಿ ಮೂರೂ ಪಕ್ಷಗಳೂ ಕಮ್ಮಿ ಇಲ್ಲ. ತಮ್ಮ ಅಭ್ಯರ್ಥಿಯ ಪರ ತನ್ನದೇ ಆದ ಮಾತುಗಳಲ್ಲಿ, ಅವರ ಸಾಧನೆಗಳನ್ನು ಜನತೆಗೆ ತಿಳಿಸುತ್ತಾ ಮತ ಯಾಚಿಸುತ್ತಿರುವುದು ಕ್ಷೇತ್ರದಲ್ಲಿ ಸಾಮಾನ್ಯವಾಗಿತ್ತು.
ಬೇರೆ ಕ್ಷೇತ್ರದ ಶಾಸಕರು, ಜಿಲ್ಲಾ
ಮತ್ತು ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರ ದಂಡೇ ಸಿರಾ ಕ್ಷೇತ್ರಕ್ಕೆ ಪ್ರತಿದಿನವೂ ಬರುತ್ತಿದ್ದು, ಭರ್ಜರಿ ರೋಡ್ ಶೋ, ಮನೆಮನೆ ಪ್ರಚಾರ ಮಾಡುತ್ತ ಮತದಾರರ ಮನವೊಲಿಸಿದ್ದಾರೆ.
ಶುಕ್ರವಾರ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಆಗಮಿಸಿ,
ಹುಣಸೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರವರಹಳ್ಳಿ ಕುಂಟನಹಟ್ಟಿ ಗ್ರಾಮಗಳು ಸೇರಿದಂತೆ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿ, ಮತ ಯಾಚಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದು, ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಿದ್ದು, ಮಕ್ಕಳಿಗಾಗಿ ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿ ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿರುತ್ತಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತವನ್ನು ಜನತೆ ಮರೆಯಬಾರದೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಡಿ ಕೆ ಶಿವಮೂರ್ತಿ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಹಿಂದೆ ಸಚಿವರಾದಾಗ, ಶಿರಾ ಕ್ಷೇತ್ರಕ್ಕೆ ಸುಮಾರು ಎರಡೂವರೆ ಸಾವಿರ ಕೋಟಿಯಷ್ಟು ಅನುದಾನವನ್ನು ತಂದು ಬ್ರಿಜ್ ಕಂ ಬ್ಯಾರೇಜ್, ಮೊರಾರ್ಜಿ ಶಾಲೆ, ಶಾಲೆ ಮಿನಿ ವಿಧಾನಸೌಧ, ಪರಿಶಿಷ್ಟ ಜಾತಿ ಪಂಗಡಗಳ ಕಾಲೊನಿಯಲ್ಲಿ ಸಿಸಿ ರಸ್ತೆ, ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಿದ್ದು ಮತದಾರರು ಜಯಚಂದ್ರರವರನ್ನು ಕೈಬಿಡಬಾರದೆಂದು ಮನವಿ ಮಾಡಿದರು.
ಪ್ರಚಾರದಲ್ಲಿ ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಗ್ರಾಮದ ಮುಖಂಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಶಿಧರ್, ಲಿಂಗೇಶ್, ಉಮೇಶ್, ಸಿದ್ರಾಮಣ್ಣ, ರಂಗನಾಥ್, ಕಾಂತರಾಜು, ಜಗನ್ನಾಥ ಮುಖಂಡರೊಂದಿಗೆ ಸಭೆ ನಡೆಸಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಟಿ.ಬಿ. ಜಯಚಂದ್ರ ರವರಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಲಾಯಿತು.