publicstory.in
Tumukuru: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ದೇಶದ ಎಂಟು ಕೋಟಿ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಗಳನ್ನು ವಿತರಿಸಿದೆ. ಹಾಗೆಯೇ ಕಿಸಾನ್ ಸನ್ಮಾನ್ ಯೋಜನೆಯಡಿ 14 ಕೋಟಿ ರೈತರ ಖಾತೆಗಳಿಗೆ 6 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಒಂದು ದೇಶ ಒಂದು ತೆರಿಗೆ, ಒಂದು ಮಾರುಕಟ್ಟೆ ಒಂದು ದೇಶ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದದೆ. ಸ್ವಚ್ಚಭಾರತ ಯೋಜನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಪ್ರತಿಯೊಬ್ಬರಿಗೂ ಶುದ್ಧ ನೀರು ಪೂರೈಸುವುದಕ್ಕಾಗಿಯೂ ಆದ್ಯತೆ ಕೊಟ್ಟಿದೆ ಎಂದು ಹೇಳಿದರು.
ದೇಶದ ಅಂತರಿಕ ಭದ್ರತೆಗೆ ಅಗತ್ಯ ಗಮನ ಕೊಟ್ಟಿದೆ. ಆರೋಗ್ಯ, ಶಿಕ್ಷಣ ಮತ್ತು ಉತ್ತಮ ಆಡಳಿತ ನೀಡುವತ್ತ ಕೇಂದ್ರ ಸರ್ಕಾರ ಹೆಜ್ಜೆಗಳನ್ನು ಇಡುತ್ತಿದೆ. ಜನಾರೋಗ್ಯದ ಮುಂದುವರಿದ ಕಾರ್ಯಕ್ರಮವಾಗಿ ಆಯುಷ್ಮಾನ್ ಭಾರತ್ ಜಾರಿಗೆ ತಂದಿದೆ. ಇದರ ಉದ್ದೇಶ ಜನರಿಗೆ ಗುಣಮಟ್ಟದ ಆರೋಗ್ಯ ನೀಡುವುದಾಗಿದೆ. ದೇಶವ್ಯಾಪಿ ಜನೌಷಧ ಕೇಂದ್ರಗಳನ್ನು ತೆರೆದು ಜನರಿಗೆ ಜನರಿಕ್ ಔಷಧಿಗಳನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ ಎಂದು ಬಣ್ಣಿಸಿದರು.
ಕೇಂದ್ರ ಸರ್ಕಾರ ನೇತೃತ್ವದಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಗಗನ್ ಯಾನ್ ಯೋಜನೆಯನ್ನುರೂಪಿಸುತ್ತಿದೆ. ವಿಜ್ಞಾನ, ಆವಿಷ್ಕಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಆಗಬೇಕಾಗಿದೆ. ಕೃಷಿಗೆ ಒತ್ತು ನೀಡುತ್ತಿದೆ. ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ನಾವು 21ನೇ ಶತಮಾನದ ಮೂರನೇ ದಶಕದಲ್ಲಿದ್ದೇವೆ. ಇಂತಹ ಹೊತ್ತಿನಲ್ಲಿ ನವಭಾರತ ನಿರ್ಮಾಣ ಮಾಡಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಹಾತ್ಮ ಗಾಂಧಿ ಹೇಳಿದಂತೆ ಜನರು ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಅಹಿಂಸಾ ತತ್ವವನ್ನು ಎತ್ತಿ ಹಿಡಿಯಬೇಕು. ದೇಶ ನಿರ್ಮಾಣದಲ್ಲಿ ಅಹಿಂಸೆಯ ಪಾತ್ರ ಮಹತ್ವದ್ದಾಗಿದೆ. ಸರ್ಕಾರವು ಇದೇ ನಿಟ್ಟಿನಲ್ಲಿ ಸಾಗುತ್ತಿದೆ ಎಂದರು.
ಪ್ರಸಕ್ತ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳು ಪರಸ್ಪರ ಹೊಂದಿಕೊಂಡು ಹೋಗಬೇಕು. ಸರ್ಕಾರ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹೀಗಾಗಿ ಅಹಿಂಸೆಯ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅದನ್ನು ಈಡೇರಿಸುವತ್ತ ಹೆಜ್ಜೆ ಹಾಕಬೇಕು. ವಸುದೈವಂ ಕುಟುಂಬಕಂ ಎಂಬ ಭಾರತೀಯ ತತ್ವ ವಿಸ್ತರಿಸಬೇಕು. ಜನವರಿ 26ರಂದು ಬೋಲ್ಸೋ ನಯಿ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿ ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆ ಶುಭಕೋರಿದರು.