ತುಳಸೀತನಯ
ತುಮಕೂರು:
ಮೇಲಾಧಿಕಾರಿಗಳಿಗೆ ಹಿಂದೆ ಸುತ್ತಿಕೊಂಡು ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಕೊಂಡು `ಜೀ ಉಝೂರ್..!’ ಎಂದರೆ ಸಾಕು ಕೆಳ ಮಟ್ಟದ ನೌಕರ ಕೂಡ ಅಧಿಕಾರ ಹಿಡಿಯಬಹುದು. ಅದೇ ಅಧಿಕಾರಿಗೆ ಸ್ಪಂದಿಸದಿದ್ದರೆ ಮೇಲ್ಮಟ್ಟದ ಅಧಿಕಾರಿಯೂ ಸಣ್ಣದೊಂದು ಕೆಲಸಕ್ಕೆ ಸೀಮಿತವಾಗವಹುದು. ಇಂತಹದಕ್ಕೊಂದು ತಕ್ಕ ಉದಾಹರಣೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳದ್ದು.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಪಾಕಟಾಕ್ಷದಿಂದ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಕಚೇರಿಯಲ್ಲಿ ಗುಮಾಸ್ತರ ಕೆಲಸ. ಗ್ರಾ.ಪಂ.ಕಾರ್ಯದರ್ಶಿಗಳಿಗೆ ಒಂದಲ್ಲಾ ಅಂತ ಎರಡೆರಡು ಗ್ರಾಮ ಪಂಚಾಯಿತಿಗಳ ಪಿಡಿಓ ಉಸ್ತುವಾರಿ. ಈ ಬಗ್ಗೆ ತಾಲ್ಲೂಕಿನಾದ್ಯಂತ ಈಗ ಬಿಸಿ ಚರ್ಚೆ ನಡೆಯುತ್ತಿದೆ. ತಾಲ್ಲೂ ಪಂಚಾಯಿತಿ . ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್ ಅವರ ವಿರುದ್ಧ ಸಾಕಷ್ಟು ಅಪಸ್ವರಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಂಗನರಸಯ್ಯ ಎಂಬುವರಿಗೆ ಚಿನ್ನಹಳ್ಳಿ ಮತ್ತು ತೋವಿನಕೆರೆ ಗ್ರಾಮ ಪಂಚಾಯಿತಿ ಸೇರಿ ಎರಡು ಕಡೆ ಪಿಡಿಓ ಹುದ್ದೆ ನೀಡಲಾಗಿದೆ. ಊರ್ಡಿಗೆರೆಯಿಂದ ಎರಡು ವರ್ಷದ ಹಿಂದೆ ಚಿನ್ನಹಳ್ಳಿ ಗ್ರಾಮಪಂಚಾಯಿತಿಗೆ ವರ್ಗವಾಗಿ ಬಂದ ಕುಮಾರಸ್ವಾಮಿ ಎಂಬುವರಿಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುಮಾಸ್ತರ ಕೆಲಸ ನೀಡಲಾಗಿದೆ. ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್-1 ಕಾರ್ಯದರ್ಶಿಗೆ ಪ್ರಭಾರ ಪಿಡಿಓ ಹುದ್ದೆ ನೀಡದೇ ಸುಮಾರು 30 ಕಿ.ಮೀ.ಗೂ ಹೆಚ್ಚು ದೂರದಿಂದ ಓಡಾಡುವ ಗ್ರಾಮ ಪಂಚಾಯಿತಿ ಕಾರ್ಯದಶರ್ಿಗೆ ಪಿಡಿಓ ಹುದ್ದೆಗೆ ನೇಮಿಸಲಾಗಿದೆ.
ಮಧುಗಿರಿಯಿಂದ ಕುರಂಕೋಟೆ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿಯಾಗಿ ವರ್ಗವಾಗಿ ಬಂದಿರುವ ಲಕ್ಷ್ಮಣ್ ಅವರನ್ನು ಪ್ರಭಾರ ಪಿಡಿಓ ಆಗಿ ನೇಮಿಸಲಾಗಿದೆ. ಆದರೆ ಈ ಸ್ಥಳಕ್ಕೆ ಕುಣಿಗಲ್ ನಿಂದ 90 ದಿನದ ಹಿಂದೆ ವರ್ಗವಾಗಿರುವ ಪಿಡಿಓ ನಾಗರಾಜು ಎಂಬುವರಿಗೆ ಇಲ್ಲಿಯವರೆಗೂ ಅಧಿಕಾರ ಅಸ್ತಾಂತರಿಸಿಲ್ಲ.
ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ಹನುಮಂತರಾಜು ತನ್ನ ಮೂಲ ಮಾವತ್ತೂರು ಗ್ರಾಮ ಪಂಚಾಯಿತಿಗೆ ವಾಪಸ್ಸಾಗಲು ಕಳೆದ 6 ತಿಂಗಳ ಹಿಂದೆಯೇ ಸೂಚಿಸಲಾಗಿದೆ. ಆದರೇ ಹಾಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ಕದರಯ್ಯ, ಹನುಮಂತರಾಜು ಎಂಬುವರಿಗೆ ಅಧಿಕಾರ ಅಸ್ತಾಂತರಿಸದೆ ದಿನ ಮುಂದೂಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕಳೆದ ಎರಡು ವರ್ಷದ ಹಿಂದೆ ಊರ್ಡಿಗೆರೆಯಿಂದ ಚಿನ್ನಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಆಗಿದೆ. ಪಂಚಾಯಿತಿ ಕಾರ್ಯದರ್ಶಿ, ಪಿಡಿಓ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈ ವರೆಗೆ ಅಧಿಕಾರ ಅಸ್ತಾಂತರಿಸಿಲ್ಲ. ತಾ.ಪಂ. ಇಓ ಸೂಚನೆಯಂತೆ ತಾಲ್ಲೂಕು ಪಂಚಾತಿ ಕಚೇರಿಯಲ್ಲೆ ಕೆಲಸ ಮಾಡುತ್ತಿದ್ದೇನೆ ಎಂದು ಚಿನ್ನಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಓ ವರ್ಗಾವಣೆಯಾಗಿ ಬಂದಿರುವ ಕುಮಾರಸ್ವಾಮಿ ತಿಳಿಸುತ್ತಾರೆ.
ಪಂಚಾಯಿತಿಗೆ ಬಿಡಿಓ ಆಗಿ ವರ್ಗಾವಣೆಯಾಗಿ ಬಂದು ಮೂರು ತಿಂಗಳಾಗಿದೆ. ಆದರೆ ಅಧಿಕಾರ ಮಾತ್ರ ಸಿಕ್ಕಿಲ್ಲ. ಕಾರ್ಯನಿರ್ವಹಣಾಧಿಕಾರಿಗಳು ಹೇಳಿದ ಕೆಲಸ ಮಾಡಿಕೊಂಡು ಪಂಚಾಯಿತಿಗೆ ಓಡಾಡುತ್ತಿದ್ದೇನೆ ಎನ್ನುತ್ತಾರೆ ಕುರಂಕೋಟೆ ಗ್ರಾಮ ಪಂಚಾಯಿತಿಗೆ ವರ್ಗವಾಗಿ ಬಂದಿರುವ ನಾಗರಾಜು.
ಆದರೆ ಈ ಬಗ್ಗೆ ಕೊರಟಗೆರೆ ತಾಲ್ಲೂ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಶಿವಪ್ರಕಾಶ್ ಅವರನ್ನು ಪ್ರಶ್ನಿಸಿದರೆ `ಗ್ರಾಮ ಪಂಚಾಯಿತಿಗಳಿಗೆ ಪ್ರಭಾರ ಪಿಡಿಓ ನೇಮಿಸಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಗಮನಕ್ಕೆ ತರಲಾಗಿದೆ. ಖಾಯಂ ಪಿಡಿಓಗಳಿಗೆ ಅಧಿಕಾರ ಅಸ್ತಾಂತರಿಸುವಂತೆ ಕಾರ್ಯದರ್ಶಿಗಳಿಗೆ ಹೇಳಿದ್ದೇನೆ ಎಂದಷ್ಟೆ ಉತ್ತರ ನೀಡುತ್ತಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಕೊರಟಗೆರೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಯ ಪೈಕಿ 16 ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಖಾಯಂ ಪಿಡಿಓ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ತೋವಿನಕೆರೆ, ಬೂದಗವಿ, ಕುರಂಕೋಟೆ, ತುಂಬಾಡಿ, ವಡ್ಡಗೆರೆ, ಅರಸಾಪುರ, ಮಾವತ್ತೂರು, ಚಿನ್ನಹಳ್ಳಿ ಸೇರಿ 8 ಗ್ರಾಮ ಪಂಚಾಯಿತಿಗಳಲ್ಲಿ ಬೇರೆ ಪಂಚಾಯಿತಿಯ ಪಿಡಿಓ ಮತ್ತು ಕಾರ್ಯದರ್ಶಿಗಳನ್ನೆ ಪ್ರಭಾರ ಪಿಡಿಓಗಳಾಗಿ ನೇಮಕ ಮಾಡಲಾಗಿದೆ. ಆದರೆ ಖಾಯಂ ಪಿಡಿಓಗಳಾಗಿ ಸ್ಥಳ ನಿಯುಕ್ತಿಗೊಂಡು ಬಂದವರನ್ನು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಕಚೇರಿ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸಿಬ್ಬಂಧಿಕೊರತೆ:
ತಾಲ್ಲೂಕಿನ ಕುರಂಕೋಟೆ, ಬುಕ್ಕಾಪಟ್ಟಣ, ಕ್ಯಾಮೇನಹಳ್ಳಿ, ಹುಲೀಕುಂಟೆ, ಹಂಚಿಹಳ್ಳಿ, ತೀತಾ, ದೊಡ್ಡಸಾಗ್ಗೆರೆ, ಮಾವತ್ತೂರು, ನೀಲಗೊಂಡನಹಳ್ಳಿ, ವಜ್ಜನಕುರಿಕೆ, ಚಿನ್ನಹಳ್ಳಿ, ಕೋಳಾಲ, ಪಾತಗಾನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮತ್ತು ವಡ್ಡಗೆರೆ, ಅರಸಾಪುರ, ಕ್ಯಾಮೇನಹಳ್ಳಿ ಮತ್ತು ಪಾತಗಾನಹಳ್ಳಿ ಪಂಚಾಯಿತಿಗಳ ಕರ ವಸೂಲಿಗಾರರ ಹುದ್ದೆ ಬಹಳ ದಿನಗಳಿಂದ ಖಾಲಿ ಇವೆ.
ಪಾತಗಾನಹಳ್ಳಿ ಗ್ರಾಮ ಪಂಚಾಯಿಗೆ ಸ್ವಂತ ಕಟ್ಟಡ ಇಲ್ಲದೆ ಅಂಗನವಾಡಿ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದೆ.