ತುಮಕೂರು: ಎಲ್ಲೆಡೆ ಜೋರು ಪ್ರಚಾರ ಪಡೆದುಕೊಂಡಿರುವ ಸ್ಮಾರ್ಟ್ ಸಿಟಿಗಳು ಹೇಗಿರಬಹುದು ಎಂಬ ಕುತೂಹಲವೇ?
ತುಮಕೂರು ನಗರಕ್ಕೆ ಬಂದು ನೋಡಿ ಎನ್ನುತ್ತಾರೆ ವಕೀಲ ಎಂ.ಬಿ.ನವೀನ ಕುಮಾರ್.
ದೇಶದಲ್ಲಿ ಎರಡನೇ ಹಂತದಲ್ಲಿ ಆಯ್ಕೆಯಾದ ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ನಗರ ಸಹ ಸೇರಿದೆ. ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾಗುತ್ತಿದ್ದಂತೆ ಜನ ಸಂಭ್ರಮಿಸಿದ್ದರು. ಈಗ ಅದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕ ವಾಗಿವೆ. ಕುಂಟುತ್ತಾ ಸಾಗಿವೆ. ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಾಮಗಾರಿಯಿಂದಾಗಿ ರಸ್ತೆ ಗಳ ದೂಳುಮಯವಾಗಿವೆ. ಇದರಿಂದ ಮಕ್ಕಳು, ದೊಡ್ಡವರು ಆಸ್ತಮಾ, ಜ್ವರ, ಕೆಮ್ಮಿನಿಂದ ನರಳುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಯಾರಿಗೂ ನೆಮ್ಮದಿ ಇಲ್ಲ. ಕಾಮಗಾರಿ ಇಷ್ಟು ನಿಧಾನವಾಗಿ ಮಾಡಬಾರದು. ಕಾಮಗಾರಿ ವೇಳೆ ರಸ್ತೆ ನಿರ್ವಹಣೆ ಗಾಗಿಯೇ ಹಣ ನೀಡುತ್ತಾರೆ. ಅಗೆದ ಮಣ್ಣನ್ನು ಹೊರಗೆ ಸಾಗಿಸುವ ಬದಲು ರಸ್ತೆಯಲ್ಲೇ ಹರಡಲಾಗುತ್ತಿದೆ. ಇದರಿಂದ ದೂಳು ಹೆಚ್ಚಾಗಿದೆ. ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಾರೆ ವಕೀಲ ನವೀನ್.
ಬಾರ್ ಲೈನ್ ರಸ್ತೆಯಲ್ಲಿ ಮೂರು ತಿಂಗಳಿಂದ ರಸ್ತೆ ಅಗೆತ ಆರಂಭಿಸಿರುವುದು ಇನ್ನು ಮುಗಿದಿಲ್ಲ. ಮಳೆ ಬಂದರೆ ರಸ್ತೆಗೆ ಕಾಲಿಡಲಾಗುವುದಿಲ್ಲ. ಮಳೆ ನಿಂತರೆ ದೂಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಇಂತ ಅದ್ವಾನ ಎಲ್ಲೂ ಕಂಡಿಲ್ಲ. ಶಾಸಕರು ಗಮನ ಹರಿಸಬೇಕು ಎಂದರು.
ಇನ್ನೊಂದೆಡೆ ದುಂಡು ಮೇಜಿನ ಸಭೆ ನಡೆಸಿರುವ ನಾಗರಿಕ ಸಂಘಟನೆ ಗಳು ಇಡೀ ಯೋಜನೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಅತ್ತ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವರ ಸಹ ಭಾಗಿತ್ವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
( ಚಿತ್ರಗಳು: ನಿರಂಜನ್)