ರೂಪಕಲಾ
ತುಮಕೂರು: ಕೊರೊನಾ ನಡುವೆಯು ತುಮಕೂರು ಜಿಲ್ಲೆಗಳ ಈ ಊರುಗಳು ಸಾಧನೆ ಮೆರೆದಿವೆ.
ಇದೇ ಮೊದಲ ಸಲ ಎಲ್ಲರೂ ಕಣ್ಣರಳಿಸಿ ನೋಡುವಂತ ಕೆಲಸವನ್ನು ನರೇಗಾ ಯೋಜನೆಯಡಿ ಮಾಡಿ ಮುಗಿಸಿವೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 10 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಕಳೆದ ಮೇ 21ರೊಳಗೆ ಒಟ್ಟು 55456 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ತುಮಕೂರು ಜಿಲ್ಲೆ ನರೇಗಾ ಅನುಷ್ಠಾನದಲ್ಲಿ ದಾಪುಗಾಲು ಹಾಕಿದೆ.
ಪಾವಗಡ ತಾಲೂಕಿನ 39 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯದ 338 ಕಾಮಗಾರಿಗಳು ಪ್ರಗತಿಯಲ್ಲಿದ್ದು ಜಿಲ್ಲೆಗೆ 5ನೇ ಸ್ಥಾನದಲ್ಲಿದೆ.
ಕ್ಯಾತಗಾನಕೆರೆ ಹೂಳೆತ್ತುವ ಕಾಮಗಾರಿ:- ಪಾವಗಡ ತಾಲೂಕು ಬಿ.ಕೆ ಹಳ್ಳಿ ಗ್ರಾಮಪಂಚಾಯಿತಿ ಕ್ಯಾತಗಾನಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು 3 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದು, ಸಾಮಾಗ್ರಿ ವೆಚ್ಚ-20,000 ರೂ. ಕೂಲಿ ವೆಚ್ಚ 2.80 ಲಕ್ಷ ರೂಪಾಯಿಗಳು ಈವರೆಗೆ 1018 ಮಾನವ ದಿನಗಳು ಸೃಜನೆಯಾಗಿದೆ.
ಗ್ರಾಮದ ಸುತ್ತಮುತ್ತಲಿನ 11 ಜನರ 16 ಗುಂಪುಗಳಿಗೆ ಉದ್ಯೋಗ ನೀಡಲಾಗಿದೆ. ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಹೊನ್ನೆಬಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಸರ್ವೇ ನಂ-268/1 ಹೆಚ್.ಎನ್ ಚಂದ್ರಶೇಖರ್ ಬಿನ್ ನಾರಾಯಣಪ್ಪ ಅವರ ಜಮೀನಿನಲ್ಲಿ ನರೇಗಾ ಯೋಜನೆಯಡಿಯಲ್ಲಿ 73 ಸಾವಿರ ರೂಪಾಯಿಗಳಲ್ಲಿ ಕೃಷಿ ಹೊಂಡ ಕಾಮಗಾರಿ ನಿರ್ಮಾಣ ಕೈಗೊಂಡಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಪರಿತಪಿಸುತಿದ್ದ ಕುಟುಂಬಕ್ಕೆ ಕೆಲಸ ನೀಡಿದಂತಾಗಿದೆ.
ಮಳೆಗಾಲದಲ್ಲಿ ಬರುವ ಮಳೆಯಿಂದ ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚುವುದಲ್ಲದೆ, ಬೋರ್‍ವೆಲ್ ರಿಚಾರ್ಜ್ ಆಗಲಿದೆ ಎಂದು ಚಂದ್ರಶೇಖರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 7 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಿದ್ದು, ಈವರೆಗೆ 39266 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಯಲ್ಲಿ ತಾಲೂಕು 6ನೇ ಸ್ಥಾನದಲ್ಲಿದೆ.
ನಮ್ಮ ಹೊಲ ನಮ್ಮ ದಾರಿ:- ತುರುವೇಕೆರೆ ತಾಲೂಕು ಆನೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಘಟ್ಟ ಗ್ರಾಮದ ಮುಖ್ಯ ರಸ್ತೆಯಿಂದ ಶಂಕರಪ್ಪನವರ ತೋಟದಿಂದ ಕೆರೆಗೆ ಹೋಗುವ ದಾರಿಯನ್ನು ನಮ್ಮ ಹೊಲ ನಮ್ಮ ದಾರಿ 9 ಲಕ್ಷ ರೂಪಾಯಿಗಳಲ್ಲಿ ಆರಂಭಗೊಂಡಿದ್ದು, ಈವರೆಗೆ 2181 ಮಾನವ ದಿನಗಳನ್ನು ಸೃಜನೆ ಮಾಡಿದ್ದು, ಗ್ರಾಮದ ಸುತ್ತಲಿನ ಗ್ರಾಮಸ್ಥರ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದೆ. ಕೂಲಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಕೊರಟಗೆರೆ ತಾಲೂಕು ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬಾಡಿ ಗ್ರಾಮದ ಭೈರೇನಹಳ್ಳಿದಿಣ್ಣೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ 2 ಲಕ್ಷ ರೂಪಾಯಿಗಳಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿದ್ದು, 436 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.
ಕಾಂತರಾಜು ಅವರ ಜಮೀನಿನ ಮೂಲಕ ಹಳ್ಳವನ್ನು ಸೇರುತ್ತಿದ್ದ ಹರಿಯುವ ನೀರನ್ನು ಬಾವಿಯಲ್ಲಿ ಸಂಗ್ರಹಿಸುವ ಮೂಲಕ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ಕಾಂತರಾಜು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಶಿರಾ ತಾಲೂಕು ಮಾಗೋಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರು, ಬದು ನಿರ್ಮಾಣ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಕಾಮಗಾರಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ, ಗ್ರಾಮದ ಜನರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಇಂಗು ಗುಂಡಿ ನಿರ್ಮಿಸಿಕೊಳ್ಳುವ ಮೂಲಕ ತಮ್ಮ ಜಮೀನಿನಲ್ಲಿ ತಾವೇ ದುಡಿದು ತಮ್ಮ ಭೂಮಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೆ ಕೂಲಿ ರೂಪದಲ್ಲಿ ಹಣವನ್ನು ಗಳಿಸಿ ಅಭಿವೃದ್ಧಿ ಹೊಂದಲು ಅವರು ಕರೆ ನೀಡಿದರು. ಈ ವಿಷಯದಲ್ಲಿ ಆಸಕ್ತರಾದ ಎಲ್ಲಾ ರೈತರು ನರೇಗಾ ಯೋಜನೆಯ ಲಾಭ ಪಡದುಕೊಳ್ಳಲು ಅವರು ಕರೆ ನೀಡಿದ್ದರು.