Tumkur: ನಗರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ನೂತನ ಮೇಯರ್ ಫರೀದಾ ಬೇಗಂ ತಿಳಿಸಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿರುವುದು ತಮಗೆ ಸಂತಸ ತಂದಿದೆ.
ಪಾಲಿಕೆಯ ಎಲ್ಲ ವಾರ್ಡ್‍ಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಯನ್ನು ಅರಿತು ಜನರ ಬೇಡಿಕೆಗನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅವಿರೋಧವಾಗಿ ಆಯ್ಕೆ ಮಾಡಿ ನನ್ನ ಮೇಲಿಟ್ಟಿರುವವರ ಭರವಸೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆಂದು ಪ್ರಮಾಣ ಮಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಂದ ನಗರವು ಧೂಳ್‍ಸಿಟಿಯಾಗಿ ರೂಪಾಂತರಗೊಳ್ಳುತ್ತಿದೆ. ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಳಪೆ ಕಾಮಗಾರಿ ಕಂಡುಬಂದರೆ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆಂದರು.
ನೂತನ ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ ಮಾತನಾಡಿ, ಮೇಯರ್ ಹಾಗೂ ಉಳಿದ ಸದಸ್ಯರ ವಿಶ್ವಾಸವನ್ನು ತೆಗೆದುಕೊಂಡು ಒಗ್ಗಟ್ಟಾಗಿ ನಗರದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ನಾಗರಿಕರ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ, ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಉದ್ಯಾನವನಗಳ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡಲಾಗುವುದು ಎಂದು ತಿಳಿಸಿದರು