ತುಮಕೂರು ಜಿಲ್ಲೆಯ ಆಂಧ್ರ ಗಡಿಗಳಲ್ಲಿ ಆಂಧ್ರ ಸರ್ಕಾರ ನರಪಿಳ್ಳೆಯನ್ನೂ ಆಂಧ್ರ ಪ್ರದೇಶದ ಒಳ ಬಿಡದಂತೆ ತಡೆಯುತ್ತಿದೆ. ಆದರೆ ತುಮಕೂರು ಜಿಲ್ಲೆ ಪಾವಗಡ ಸೇರಿದಂತೆ ಜಿಲ್ಲೆಯಾದ್ಯಂತ ಕಾಟಾಚರದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪಾವಗಡ ಪಟ್ಟಣದ ಕುರಿ ಸಂತೆಗೆ ಸಾವಿರಾರು ಕುರಿಗಳೊಂದಿಗೆ ವ್ಯಾಪಾರಿಗಳು, ರೈತರು ಬಂದಿದ್ದರು. ಖಾಸಗಿ ಬಸ್ ಗಳಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣಿಸಿದರು. ಸಾಲದು ಎಂಬಂತೆ ಆಟೋಗಳಲ್ಲಿ ಕುರಿ ತುಂಬುವಂತೆ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೊಲೀಸರೊಂದಿಗೆ ಅಂಗಡಿ ಮಳಿಗೆ ಮಾಲೀಕರು ಸೋಮವಾರ ಕಣ್ಣಾಮುಚ್ಚಾಲೆ ಆಟ ಆಡಿದರು. ಮಧ್ಯಾಹ್ನದವರೆಗೆ ಸಂತೆ ನಡೆಯಿತು. ತರಕಾರಿ ಇತ್ಯಾದಿಗಳನ್ನು ಯಾವುದೇ ಎಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಮಾರಾಟ ಮಾಡಲಾಯಿತು.
ಆಂಧ್ರ ಸರ್ಕಾರ ಗಡಿಯಲ್ಲಿ ಚೆಕ್ ಪೋಸ್ಟ್ ಆರಂಭಿಸಿದೆ
ಆಗ ಎಚ್ಚೆತ್ತವರಂತೆ ಬಂದ ಪೊಲೀಸರು ಅಂಗಡಿಗಳನ್ನು ಮುಚ್ಚಿಸಲು ಹರಸಾಹಸ ಪಟ್ಟರು. ಒಂದು ಕಡೆಯಿಂದ ಮುಚ್ಚಿಸಿದರೆ ಮತ್ತೊಂದು ಕಡೆಯಿಂದ ಬಾಗಿಲು ತೆಗೆದು ವ್ಯಾಪಾರಿಗಳು ಮಾರಾಟ ಮಾಡಿದರು.
ಕೆಲವರು ಅರ್ಧ ಬಾಗಿಲು ತೆರೆದು ಮಾರಾಟ ಮಾಡಿದರೆ, ಮತ್ತೆ ಕೆಲವರು ಗ್ರಾಹಕರನ್ನು ಮಳಿಗೆ ಒಳ ಬಿಟ್ಟು ಹೊರಗಡೆಯಿಂದ ಯಾರೂ ಬಾರದಂತೆ ಬಾಗಿಲು ಹಾಕಿ ಕಾವಲು ಕುಳಿತಿದ್ದರು.
ಕೊರೊನಾ ಹೆಮ್ಮಾರಿಯಂತೆ ವ್ಯಾಪಿಸುತ್ತಿರುವ ಬಗ್ಗೆ ಸರ್ಕಾರ ನಿರ್ಬಂಧ ವಿಧಿಸಿದರೂ ಜನತೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ಹಾಗೂ ಜನತೆಯ ಆಟಾಟೋಪಗಳನ್ನು ನೋಡಿದ ಕೆಲವರು ಬೇಸರ ವ್ಯಕ್ತಪಡಿಸಿದರು.
ಕುರಿಸಂತೆಯಲ್ಲಿ ಹಣ ಕಳೆದುಕೊಂಡ ರೈತರು: ಏಕಾ ಏಕಿ ಪೊಲೀಸರು ಕುರಿ ಸಂತೆಯ ಮೇಲೆ ಧಾಳಿ ನಡೆಸಿದ್ದರಿಂದ ರೈತರು, ವ್ಯಾಪಾರಿಗಳು ದಿಕ್ಕಾಪಾಲಾಗಿ ಓಡಿದರು. ಇದರಿಂದ ಕೆಲವರು ಕುರಿ, ಹಣ ಕಳೆದುಕೊಂಡರು. ಲಾರಿಯಲ್ಲಿ ಹಾಗೂ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡಿದ್ದವರು ರೈತರಿಗೆ ಹಣ ಕೊಡದೆ ಪರಾರಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದವು.
ಆಂಧ್ರ ಸರ್ಕಾರ ಕಟ್ಟು ನಿಟ್ಟಾಗಿ ನಿರ್ಬಂಧ ವಿಧಿಸಿದ್ದರಿಂದ ತಾಲ್ಲೂಕಿಗೆ ಬರುವವರು, ತುಮಕೂರು, ಬೆಂಗಳೂರಿಗೆ ಹೋಗುವವರು ಸಾಕಷ್ಟು ಸಮಸ್ಯೆ ಎದುರಿಸಬೆಕಾಯಿತು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತೆ ಸುತ್ತಿ ಬಳಸಿ ಹೋಗುವ ಅನಿವಾರ್ಯತೆಗೆ ಜನತೆ ಸಿಲುಕಿದರು.