ತುರುವೇಕೆರೆ ಪ್ರಸಾದ್
ಪ್ರಿಯ ರವಿ ಬೆಳಗೆರೆ ಸರ್,
ನೀವು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತೀರಿ ಎಂದು ಅಂದುಕೊಂಡೇ ಇರಲಿಲ್ಲ, ನೀವು ಹೀಗೆ ಕಾರಣ ಹೇಳದೆ ದಿಢೀರನೆ ಎದ್ದು ಹೋಗಿದ್ದು ದೊಡ್ಡ ಆಘಾತವನ್ನೇ ಉಂಟು ಮಾಡಿದೆ.
ಇದು ನನ್ನೊಬ್ಬನಿಗೆ ಮಾತ್ರ ಅಲ್ಲ, ನಿಮ್ಮಲ್ಲಿ ಕೆಚ್ಚೆದೆಯ ಒಬ್ಬ ಪತ್ರಕರ್ತ, ಒಬ್ಬ ಅಸಮಾನ್ಯ ದೇಶಭಕ್ತ, ಒಬ್ಬ ಸಂವೇದನೆಯ ಬರಹಗಾರ, ಒಬ್ಬ ಸಮಾಜ ಸುಧಾರಕನನ್ನು ಕಂಡಿದ್ದ ನನ್ನಂತಹ ಲಕ್ಷಾಂತರ ಜನಕ್ಕೆ ಇದು ಆಘಾತಕಾರಿ ಸಂಗತಿಯೇ!
ಸದಾ ಮೌಲ್ಯಗಳ ಬಗ್ಗೆ, ಹೊಸ ಕನಸು, ಆದರ್ಶಗಳ ಬಗ್ಗೆ, ಸುಧಾರಣೆಗಳ ಬಗ್ಗೆ ಮಾತಾಡುತ್ತಿದ್ದ ನೀವು ಹೀಗೆ ಸುಳಿವೇ ಕೊಡದೆ ಬಾರದ ಲೋಕಕ್ಕೆ ಹೊರಟು ಹೋದದ್ದೇಗೆ?
ನಿಮ್ಮ ಪತ್ರಿಕೆಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತು ಬಂಡಲ್ ಬಂದೊಡನೆ ಬಿಚ್ಚಿ ನಿಮ್ಮ ಬಾಟಮ್ ಐಟಂ ಒಳಗೆ ಕಳೆದುಹೋಗುತ್ತಿದ್ದವರು ನಾವು.
ನಿಮ್ಮ ಖಾಸ್ ಬಾತ್‍ಗಳ ಮಧುರ ನೆನಪುಗಳಲ್ಲಿ ಮಿಂದೆದ್ದವರು ಅದೆಷ್ಟು ಲಕ್ಷ ಯುವಕ ಯುವತಿಯರಿದ್ದಾರೋ? ನೆರಿಗೆ ಹುಡುಗಿಯ ಮೂಗಿನ ನತ್ತು, ಮುತ್ತಿನ ಮತ್ತಿನ ಮೂಲಕ ದೇಹ ಬಾಗುವ ಹೊತ್ತಲ್ಲೂ ಹಸಿ ಹಸಿ ಪ್ರೇಮ, ಪ್ರೀತಿಯ ಸಿಂಚನವನ್ನು ಪ್ರೇಮಿಗಳ ಹೃದಯದಲ್ಲಿ ಬಿತ್ತಿದವರು ನೀವು.
ಹಳೆಯ ನೆನಪುಗಳ ನಾಸ್ಟಾಲ್ಜಿಯಾದಲ್ಲೇ ಯುವಕರಲ್ಲಿ ಹೊಸ ಕನಸುಗಳನ್ನು, ಪ್ರೇಮದ ಕನವರಿಕೆಗಳನ್ನು, ಕಾಮನಬಿಲ್ಲುಗಳನ್ನು, ಗುಲ್‍ಮೊಹರುಗಳನ್ನು ಅರಳಿಸಿದವರು ನೀವು.
ಎಂದೂ ಮರೆಯದ ಮಧುರ ಹಾಡು ಕೊನೆಗೂ ನಿಂತೇ ಹೋಯಿತಲ್ಲ?
ಪ್ರೀತಿ ಪ್ರೇಮಗಳ ಮಧುರ ನೆನಪುಗಳ ಸಂತೆಯಲ್ಲೇ ಕಂತೆ ಕಂತೆ ಆದರ್ಶಗಳನ್ನು ಕಟ್ಟಿಕೊಟ್ಟವರು ನೀವು. ಅವೇನು ಒಂದೇ ಎರಡೇ? ಕುದಿಕುದಿವ ದೇಶಪ್ರೇಮದ ಕಿಚ್ಚು ಹತ್ತಿಸಿದವರು ನೀವು! ಸ್ವಚ್ಚ ಸಮಾಜದ ಪರಿಕಲ್ಪನೆಗೆ ತುಡಿದವರು ನೀವು, ಭ್ರಷ್ಟ ಸಮಾಜಕ್ಕೆ ಚಾಟಿಯೇಟು ಕೊಟ್ಟವರು ನೀವು!
ಬಂಡಲ್ ಬಂಡಲ್ ಭ್ರಷ್ಟ ರಾಜಕಾರಣಿಗಳ ಕರ್ಮಕಾಂಡಗಳನ್ನು ಬಯಲಿಗೆಳೆದವರು ನೀವು! ರಾಜಕಾರಣಿಗಳ ಕಾಮರಾಜಮಾರ್ಗಗಳನ್ನು ಲೇವಡಿ ಮಾಡಿದವರು ನೀವು. ಆದರ್ಶಗಳೂ ವಿವಿಧ ಕಾಲಘಟ್ಟಗಳಲ್ಲಿ ಬದಲಾಗುತ್ತಾ ಹೋಗುತ್ತವೆ. ಎಲ್ಲಾ ಆದರ್ಶಗಳೂ ಎಲ್ಲಾ ಕಾಲಕ್ಕೂ ಪ್ರಸ್ತುತ ಎನಿಸಲಾರವು. ಆಯಾ ಕಾಲಮಾನದ ಬದುಕಿನ ಅಗತ್ಯಕ್ಕೆ ತಕ್ಕಂತೆ ಆದರ್ಶಗಳು ಬದಲಾಗುತ್ತವೆ, ಇಲ್ಲ ಪುನರ್‍ರೂಪಿತಗೊಳ್ಳುತ್ತಾ ಹೋಗುತ್ತವೆ. ಅಂತಹ ಸಮಾಜಮುಖಿ ಆದರ್ಶದ ಹೊಸ ಹೊಳಹುಗಳನ್ನು ಒಂದಷ್ಟು ಜನ ಯುಗಪುರುಷರು ತಮ್ಮ ಬದುಕಿನ ಮೂಲಕ ನೀಡುತ್ತಾ ಹೋಗುತ್ತಾರೆ. ಅಂತಹವರಲ್ಲಿ ನೀವೂ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲವೇನೋ?
ನಿಮ್ಮ ಒಂದೊಂದು ಪುಸ್ತಕವೂ ಒಂದೊಂದು ಯಶಸ್ಸಿನ ಜೀವನ ಗಾಥೆಯಂತೆಯೇ ಅನಿಸುತ್ತದೆ. ಈ ದೇಶದ ಬಗ್ಗೆ ನಿಮಗಿದ್ದ ಪ್ರೀತಿ, ಕಾಳಜಿ, ಭಕ್ತಿ ಅನನ್ಯವಾದುದು. ಬ್ರಿಗೇಡ್ ರೋಡಿನ ಫುಟ್‍ಪಾತಲ್ಲಿ ಸಿಕ್ಕ ಜಯಂತ್ ದಳವಿ ಅವರ ರದ್ದಿ ಪುಸ್ತಕವನ್ನು ಹಿಡಿದು ಹಿಮಾಲಯವನ್ನೇ ಸುತ್ತಿ ಹಿಮಾಲಯನ್ ಬ್ಲಂಡರ್ ಬರೆದವರು ನೀವು.
ಅಂದಿನ ಯುದ್ಧದ ದಿನಗಳ ಸೈನಿಕರ ಸ್ಥಿತಿ ಬಗ್ಗೆ ಕಣ್ಣೀರುಗರೆದವರು ನೀವು. ಆ ಕಾಲದ ರಾಜಕೀಯ ಮುತ್ಸದ್ದಿಗಳ ನಡವಳಿಕೆಗಳನ್ನು, ನಿರ್ಧಾರಗಳನ್ನು ಕಟು ಮಾತುಗಳಲ್ಲಿ ಖಂಡಿಸಿ ವಾಸ್ತವ ಸತ್ಯಗಳ ಅನಾವರಣಗೊಳಿಸಿದವರು ನೀವು. ಆ ಪುಸ್ತಕದ ಪುಟ ಪುಟದಲ್ಲೂ ದೇಶಕ್ಕಾಗಿ ಮಿಡಿವ ನಿಮ್ಮ ಹೃದಯದ ಮಾರ್ದನಿ ಇದೆ ಎನಿಸುತ್ತದೆ. ತಿರುವುವ ಪ್ರತಿ ಪುಟದಲ್ಲೂ ನಿಮ್ಮ ದೇಶಭಕ್ತಿಯ ತುಡಿತ ಪುಟಿದೇಳುತ್ತದೆ. ಇಂತ ರೋಮಾಂಚಕಾರಿ ಪುಸ್ತಕ ಓದಿದ ಪ್ರತಿಯೊಬ್ಬ ಯುವಕನಲ್ಲಿ ಈ ದೇಶದ ಬಗ್ಗೆ ಕೆಚ್ಚು ಜಾಗೃತವಾಗಲೇಬೇಕು.
ವ್ಯವಸ್ಥೆಯ ಬಗ್ಗೆ ಸಿಡಿದೇಳುವ ಸಾತ್ವಿಕ ರೋಷ ಉಕ್ಕಬೇಕು. ಹಾಗೆ ವಿವೇಕಾನಂದರಂತೆ ಮಾತು ಮಾತಲ್ಲೂ ಯುವಕರನ್ನು ಬಡಿದೆಬ್ಬಿಸುತ್ತಿದ್ದವರು ನೀವು. ಈಗ ನೀವೇ ಇಲ್ಲದೆ ಹಿಮಾಲಯದ ಮಂಜಿನಂತೇ ಕರಗಿ ದೊಡ್ಡ ಕಂದಕವೊಂದು ಎದರು ನಿಂತಿದೆಯಲ್ಲ ಸರ್? ಎಲ್ಲವನ್ನೂ ಅಚ್ಚರಿಯ ಕಂಗಳಿಂದ ನೋಡುತ್ತಲೇ ಬ್ಲಂಡರ್‍ಗಳನ್ನು ಬಿಚ್ಚಿಡುತ್ತಿದ್ದ ನೀವು ನಿಜಕ್ಕೂ ಕನ್ನಡ ಸಾಹಿತ್ಯ ಲೋಕ ಮತ್ತು ಪತ್ರಿಕೋದ್ಯಮದ ಒಂದು ಗ್ರೇಟ್ ವಂಡರ್ ಎಂದು ಯಾರಾದರೂ ಒಪ್ಪಲೇಬೇಕು!
ಇಷ್ಟೇ ಅಲ್ಲ, ನೀವು ಕ್ರೈಂ ಡೈರಿ ಮೂಲಕ ನೂರಾರು ಅಪರಾಧ ಪ್ರಕರಣಗಳ ಸ್ವರೂಪ,ಅಪರಾಧದದ ಹಿನ್ನಲೆ, ಕಾರಣಗಳು, ಮೋಟಿವೇಶನ್‍ಗಳು ಮೊದಲಾದ ಅಪರಾಧ ಲೋಕದ ಚಿತ್ರಣವನ್ನೇ ಈ ನಾಡಿನ ಜನತೆಗೆ ಕೊಟ್ಟಿದ್ದಿರಿ. ಇಂತಹ ಹಲವು ಎಪಿಸೋಡಿನ ಕನ್‍ಕ್ಲುಶನ್‍ನಲ್ಲಿ ನೀವು ಈ ಹೆಣ್ಣು, ಹೊನ್ನು ಮಣ್ಣು ಇವುಗಳ ನಶ್ವರತೆ ಕುರಿತಂತೆ ಸಾಕಷ್ಟು ಅರ್ಥಪೂರ್ಣವಾಗಿ ಮಾತಾಡಿದ್ದೀರಿ.
ಹೆಣ್ಣು ಮಕ್ಕಳ ಮೇಲಂತೂ ನಿಮ್ಮಗೆ ಇನ್ನಿಲ್ಲದ ಅಕ್ಕರೆ, ಅಭಿಮಾನ! ಯಾರಿಂದಲೋ ನಿರಂತರ ದೂರವಾಗಿ, ಪರಿತ್ಯಕ್ತಳಾಗಿ ಪಡಬಾರದ ಪಾಡು ಪಟ್ಟು ನೋವುಂಡ ಒಂದು ಹೆಣ್ಣಿನ ಜೀವನ ಚರಿತ್ರೆಯನ್ನೇ ಎಲ್ಲಾ ವಿರೋಧ, ಹೆದರಿಕೆಗಳಿಗೆ ಜಗ್ಗದೆ ಬರೆದವರು ನೀವು. ಹೆಣ್ಣಿನ ಬಗ್ಗೆ ಹೆಂಗಸರ ಬಗ್ಗೆ ನಿಮಗಿದ್ದ ಗೌರವ ನಿಮ್ಮ ಹಲವು ಬರಹಗಳಲ್ಲಿ ಎದ್ದು ಕಾಣುತ್ತದೆ.
ಹೆಣ್ಣಿಗಾಗಿ ಅಪರಾಧ ಮಾಡುವವರ ಜಾತಕ ಜಾಲಾಡಿ ಛೀಮಾರಿ ಹಾಕಿದ್ದವರು ನೀವು.
ನಿಮ್ಮ ‘ಓ ಮನಸೇ’ನಲ್ಲಿ ನೀವು ಹಲವು ಯುವಕ,ಯುವತಿಯರ ಸಮಸ್ಯೆಗಳಿಗೆ ಸಾಂತ್ವನ ಹೇಳುವ ಒಂದು ಅಂಕಣ ಶುರು ಮಾಡಿದ್ದಿರಿ. ಅದೊಂದು ವಿಶಿಷ್ಟವಾದ ಅಂಕಣ ಎಂದೇ ನನಗೆ ಅನಿಸಿತ್ತು, ನಾಡಿನ ಸಾವಿರಾರು ಯುವಕ, ಯುವತಿಯರು ತಮ್ಮ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರಿಗೆಲ್ಲಾ ನೀವು ಸಾಂತ್ವನ ಹೇಳಿ ಜೀವನ್ಮುಖಿಯಾಗುವಂತೆ ಮಾಡಿ ಅವರಲ್ಲಿ ಜೀವನ ಪ್ರೀತಿ ಹುಟ್ಟಿಸುವಂತೆ ಮಾಡುತ್ತಿದ್ದ ರೀತಿಯಂತೂ ಇಂದಿಗೂ ಅದ್ಭುತ.
ಹೀಗೆ ಸಾವಿರಾರು ಮಂದಿಗೆ ಸಾಂತ್ವನ ಹೇಳಿದ ನಿಮ್ಮ ಮನಸ್ಸನ್ನು ನೀವೇ ಸಿಗರೇಟ್, ವಿಸ್ಕಿ ಇಲ್ಲದೆ ಸಾಂತ್ವನಗೊಳಸಿಕೊಳ್ಳಲಾರದೇ ಹೋದದ್ದು ನಿಜಕ್ಕೂ ದುರಂತವೇ?
ರವಿ ಸರ್,ನೀವು ಯಾವಾಗಲೂ ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮಸಂತೋಷ ಪಡೆದುಕೊಳ್ಳಲು ಬದುಕುತ್ತಿರುವವನು ನಾನು, ಅದು ಬಿಟ್ಟು ಬೇರೇನೂ ಮಾಡಲು ನನಗೆ ಬರುವುದಿಲ್ಲ ಎಂದು ಪ್ರಮಾಣಿಕರಿಸಿ ಹೇಳುತ್ತಿದ್ದಿರಿ. ಅದೇ ನಿಮ್ಮ ಜೀವನದ ಅಫಿಡವಿಟ್ ಆಗಿತ್ತು.
ಹೋಟಲ್ ಮಾಣಿಯಾಗಿ, ರೂಮ್‍ಬಾಯ್ ಆಗಿ ಒಂದು ಹುಡುಗಿಯಿಂದ ದುಡಿಮೆ ಇಲ್ಲ ಎಂದು ತಿರಸ್ಕಾರಕ್ಕೆ ಒಳಗಾಗಿದ್ದ ಹುಡುಗ ರವಿಬೆಳೆಗೆರೆಯೆಂಬ ಪತ್ರಿಕೋದ್ಯಮದ ದೈತ್ಯನಾಗಿ ಬೆಳೆದಿದ್ದು ನಿಮ್ಮ ಈ ಬರವಣಿಗೆಯೆಂಬ ಕಮಿಟ್‍ಮೆಂಟ್ ಒಂದರಿಂದಲೇ ಎಂದು ಅನವರತ ನಂಬಿದವರು ನಾವು. ಮ್ಯಾತ್ಸಲ್ಲಿ ವೀಕು , ಸರಳವಾದ ಲೆಕ್ಕಚಾರವೂ ಬರಲ್ಲ ಎನ್ನುತ್ತಿದ್ದ ನೀವು ಈ 62 ವರ್ಷಗಳಲ್ಲಿ ಬದುಕಿದ ಬಗೆ ಲೆಕ್ಕಾಚಾರವಿಲ್ಲದ್ದು ಎಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವಾ?
ನಿಮ್ಮ ಪ್ರಾರ್ಥನಾ ಸ್ಕೂಲ್ ಕಟ್ಟುವ ಮುಂಚೆ ಅದೊಂದು ವಿಶಾಲವಾದ ನಿವೇಶನ. ಅಲ್ಲಿ ಯಾರೋ ಒಬ್ಬರು ಕಲ್ಯಾಣ ಮಂಟಪ ಕಟ್ಟಿ ಎಂದಾಗ ನೀವು ಬರೆದುಕೊಂಡಿದ್ದು ಜ್ಞಾಪಕ ಇದೆಯಾ ಸರ್? ನಾನು ಹಾಗೆ ಮಾಡಿದ್ದರೆ ರವಿಬೆಳಗೆರೆ ಸತ್ತ ಮೇಲೆ ಅವನು ಏನು ಮಾಡುತ್ತಿದ್ದ ಎಂದು ಯಾರಾದರೂ ಕೇಳಿದರೆ ಚೌಲ್ಟ್ರಿ ಕಟ್ಟಿಸಿ ಹಂಡೆ ಕೊಳದಪ್ಪಲೆ ಬಾಡಿಗೆಗೆ ಕೊಡುತ್ತಿದ್ದ ಎಂದು ಹೇಳುತ್ತಾರೆ.
ಹಾಗಾಗಬಾರದು ಎಂದು ನಾನು ಅಲ್ಲಿ ಪ್ರಾರ್ಥನಾ ಶಾಲೆ ಕಟ್ಟಿದೆ. ಸತ್ತ ಮೇಲೆ ನಾವು ಮಹಾತ್ಮರಾಗದಿದ್ದರೂ ಪರವಾಗಿಲ್ಲ, ಸಮಾಜ ಕೇವಲ ಮಹಾತ್ಮರನ್ನು ಮಾತ್ರ ನೆನಪಿಟ್ಟುಕೊಳ್ಳುವುದಿಲ್ಲ, ಮನುಷ್ಯನ ಘನತೆ ಅವನನ್ನು ಸತ್ತ ನಂತರವೂ ಜೀವಂತವಾಗಿಡುತ್ತದೆ.
ಇದರ ಅರಿವಿದ್ದಾಗ ನಾವು ಇನ್ನಷ್ಟು ಎಚ್ಚರಿಕೆಯಿಂದ ಬದುಕುತ್ತೇವೆ. ಮಾಡುವ ದಿನನಿತ್ಯದ ಕೆಲಸವನ್ನೇ ಶ್ರದ್ಧೆಯಿಂದ ಮಾಡುತ್ತೇವೆ. ಪಡುವ ಸುಖಕ್ಕಿಂತ ಮಾಡುವ ಸಾಧನೆಯ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ ಎಂದು ಬರೆದಿದ್ದಿರಿ. ಯೆಸ್ ಸರ್, ಕೊನೆಗೂ ಅದಕ್ಕೆ ಬದ್ಧರಾಗೇ ಬದುಕಿ ಹಂಡೆ, ಹಲ್ಲಂಡೆ ಬದುಕಾಗದೆ ಬಂಡೆಯಾಗಿ ಎಲ್ಲಾ ಎದುರಿಸಿ ಹೊರಟುಹೋದಿರಿ
ಹಾವು ಹರಿದಂತ ಬದುಕಲ್ಲಿ ಸಾಧಿಸುವ ಮನೋಬಲ
ನಶ್ವರ ಬದುಕನ್ನು ಅಕ್ಷರದಲ್ಲಿ ಸುಂದರವಾಗಿಸುವ ಹಂಬಲ
ಕರಿಗೆರೆಗಳನ್ನು ಬಿಳಿಗೆರೆಯಾಗಿಸುವ ಸಿದ್ಧಿ,ಬುದ್ದಿ
ಕಡೆದು ಕೆತ್ತಿಡುವ ನೈಪುಣ್ಯ ಕಲ್ಲುಗುದ್ದಿ!
ಬದುಕ ತುಂಬಾ ಕನವರಿಕೆಯ ಗಿರ್ಮಿಟ್ಟು,
ಜೀವಂತಿಕೆ, ಲವಲವಿಕೆಯ ಅಫಿಡವಿಟ್ಟು
ಲೋಕಾಂತರ ಪಯಣದ ಓ ಪಯಣಿಗ
ಕಾರಣ ಹೇಳದೆ ಹೋಗಿದ್ದೇ ಸೋಜಿಗ!
ನೆನಪಿನ ಕಣಿವೆಯಲ್ಲಿ ಬಗ್ಗಿಸಿದಾಗೆಲ್ಲಾ ಕೊರಳು
ಶಿಖರ ಸೂರ್ಯನೇ ಬೀಳುತ್ತದೆ ನಿನ್ನದೇ ನೆರಳು..!
ಗುಡ್ ಬೈ ರವಿ ಸರ್