ಲಕ್ಷ್ಮೀಕಾಂತರಾಜು ಎಂಜಿ- 9844777110
ಪಬ್ಲಿಕ್ ಸ್ಟೋರಿ
ರೈತನೋರ್ವ ಇಂದು ಬೇಸಾಯ ಮಾಡಿ ಯಾವುದೇ ಬೆಳೆ ಬೆಳೆಯಲು ಸಾವಿರಾರು ರೂಗಳ ಆರಂಭಿಕ ಬಂಡವಾಳ ಬೇಕೆ ಬೇಕು. ಆದರೆ, ರೈತನು ಯಾವುದೇ ಆರಂಭಿಕ ಬಂಡವಾಳ ಹೂಡದೇ ಬೆಳೆ ಬೆಳೆಯುವ ಬೆಳೆಯೊಂದಿದೆ ಅದುವೆ ‘ಮಿಡಿ ಸೌತೆ’ ಬೆಳೆ
ಹೌದು. ರೈತನೋರ್ವ ಮಿಡಿ ಸೌತೆಯನ್ನ ಯಾವುದೇ ತನ್ನ ಸ್ವಂತ ಖರ್ಚಿಲ್ಲದೇ ಮಿಡಿಸೌತೆ ಬೆಳೆ ಬೆಳೆದು ಕೈತುಂಬಾ ಕಾಸುಗಳಿಸುತ್ತಿದ್ದಾನೆ. ಇದೇನು, ಬಂಡವಾಳ ಇಲ್ಲದೇ ಯಾವ ಬೆಳೆಯಲು ಸಾಧ್ಯವೆಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಎಲ್ಲ ಬೆಳೆಗಳಿಗೂ ಆರಂಭಿಕ ಬಂಡವಾಳ ಬೇಕೆಬೇಕು. ಆದರೆ,ಮಿಡಿ ಸೌತೆ ಬೆಳೆಗೆ ಮಿಡಿಸೌತೆ ಬೆಳೆಸುವ ಕಂಪನಿಗಳೂ ರೈತರಿಗೆ ಬೆಳೆಗೆ ಬೇಕಾಗುವ ಸಕಲ ಪರಿಕರಗಳನ್ನೂ ಪೂರೈಸಿ ಮಿಡಿಸೌತೆ ಕಾಯಿ ರೈತರಿಂದ ಖರೀದಿಸುತ್ತವೆ.
http://https://youtu.be/AzcKkStW3uw
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹಾಗೂ ಹಾಗಲವಾಡಿ ಭಾಗದಲ್ಲಿ ಅತಿ ಹೆಚ್ಚಾಗಿ ರೈತರು ಮಿಡಿಸೌತೆಯನ್ನ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಮೊದ ಮೊದಲು ಈ ಭಾಗದಲ್ಲಿ ಮಿಡಿಸೌತೆ ಬೆಳೆಸಿ ಕಾಯಿ ಖರೀದಿಸಲು ಹಲವು ಕಂಪನಿಗಳಿದ್ದವು. ಕ್ರಮೇಣ ಈ ಬೆಳೆಯ ಲಾಭಾಂಶವನ್ನು ತಿಳಿದ ಹಾಗಲವಾಡಿ ಹೋಬಳಿಯ ಮಠ ಗಂಗಯ್ಯನಪಾಳ್ಯದ ಯುವಕರುಗಳು ಕಂಪನಿಗಳ ರೀತಿಯಲ್ಲಿ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ರೈತರಿಂದ ಸೌತೆಕಾಯಿ ಬೆಳೆಸಲು ಆರಂಭಿಸಿ ಇಂದು ಈ ಗ್ರಾಮಗಳ ಹತ್ತಾರು ಯುವಕರುಗಳು ಈ ಭಾಗದ ರೈತರಿಂದ ಸೌತೆ ಬೆಳೆಸಿ ಕಾಯಿ ಖರೀದಿಸಿ ತಮಿಳುನಾಡಿನ ಸಂಸ್ಕರಣಾ ಪ್ಯಾಕ್ಟರಿಗಳಿಗೆ ನೇರವಾಗಿ ಮಾರಾಟ ಮಾಡುತ್ತಾರೆ.
ಆರಂಭದಲ್ಲಿ ಸೌತೆ ಬೆಳೆಗಾರರಿಗೆ ಬೆಳೆಗೆ ಪೂರಕ ಗೊಬ್ಬರ ಬೀಜ,ಕ್ರಿಮಿನಾಶಕಗಳಷ್ಟೆ ವಿತರಿಸಿದರೆ ಸಾಕಿತ್ತು. ಆದರೀಗ ಕಾಲ ಬದಲಾಗಿದ್ದು ರೈತರ ಖರ್ಚುಗಳಿಗೆ ಮುಂಗಡ ಹಣವನ್ನ ಖರೀದಾರರು ನೀಡಿ ಬೆಳೆಯ ಮೊತ್ತದಲ್ಲಿಯೇ ಮುರಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಇದಕ್ಕೆಲ್ಲಾ ಕಾರಣ ಸೌತೆಕಾಯಿ ಬೆಳೆಸಿ ವ್ಯವಹಾರ ಮಾಡುತ್ತಿರುವವರ ಸಂಖ್ಯೆ ಹೆಚ್ಚಾದ ಕಾರಣವೇ ಮೂಲವಾಗಿದೆ.
ಈ ಸೌತೆ ಬೆಳೆಯು ಮೂರು ತಿಂಗಳ ಅಲ್ಪಾವಧಿಯ ಬೆಳೆಯಾಗಿದ್ದು ಕಡಿಮೆ ಅಂತರದಲ್ಲಿ ರೈತರು ಹಣವನ್ನ ನೋಡುತ್ತಾರೆ. ಮಿಡಿ ಸೌತೆಯು ಈ ಭಾಗದಲ್ಲಿ ರೈತರ ದಿಕ್ಕನ್ನೇ ಬದಲಿಸಿ ಪ್ರಮುಖ ಬೆಳೆಯಾಗಿ ಮಾರ್ಪಾಟಾಗಿ ವರ್ಷದಲ್ಲಿ ರೈತನೋರ್ವ ಮೂರು ಬೆಳೆ ಬೆಳೆಯುತ್ತಾನೆ.
ಮಿಡಿಸೌತೆಯ ಪ್ರಭಾವದಿಂದ ಸ್ಥಳೀಯ ಯುವಕರಿಗೆ ಉದ್ಯೋಗವೂ ದೊರೆತಿದೆ. ರೈತರ ಹೊಲಗಳಿಂದ ಕಾಯಿ ಖರೀದಿಸಲು ,ಲೋಡ್ ಮಾಡಲು,ಕಾರ್ಮಿಕರು ,ಚಾಲಕರು ,ರೈಟರ್ ಗಳ ಅವಶ್ಯಕತೆ ಇದ್ದು ಈ ಉದ್ಯೋಗಗಳು ಸ್ಥಳೀಯ ಯುವಕರುಗಳಿಗೆ ಸಿಗುವ ಕಾರಣ ಅದೆಷ್ಟೋ ಯುವಕರು ಉದ್ಯೋಗ ಅರಸಿ ಬೇರೆಲ್ಲೂ ಹೋಗದೆ ಇಲ್ಲಿಯೇ ಕೆಲಸ ಮಾಡುವುದು ಸ್ಥಳೀಯವಾಗಿಯೇ ಉದ್ಯೋಗವನ್ನ ಸೌತೆಕಾಯಿ ವ್ಯವಹಾರ ದೊರಕಿಸಿಕೊಟ್ಟಿದೆ ಎನ್ನಬಹುದು.ಇದೆಲ್ಲದರ ಜೊತೆಗೆ ಇಲ್ಲಿನ ಹತ್ತಾರು ಯುವಕರುಗಳು ಸೌತೆಕಾಯಿ ವ್ಯವಹಾರದಲ್ಲಿ ತೊಡಗಿ ಸ್ವಯಂ ಉದ್ಯೋಗವನ್ನ ಈ ಕೃಷಿ ಉತ್ಪನ್ನದಲ್ಲಿಯೇ ಮಾಡಿಕೊಂಡು ಲಾಭಾಂಶದತ್ತ ಸಾಗುತ್ತಿದ್ದಾರೆ
ಚೇಳೂರು ಹಾಗೂ ಹಾಗಲವಾಡಿಯ ಹೋಬಳಿಯ ಅದೆಷ್ಟೋ ರೈತರುಗಳು ಆಧುನಿಕ ಬೆಳೆಯಾದ ಮಿಡಿಸೌತೆಯಿಂದ ಬದುಕುಕಟ್ಟಿಕೊಂಡು ಬೇರೆ ಬೆಳೆಗಳಿಗಿಂತ ಯಾವುದೇ ತನ್ನ ಸ್ವಂತ ಬಂಡವಾಳ ವಿನಿಯೋಗಿಸದೇ ಒಂದಷ್ಟು ಕಾಸು ಕಂಡಿರುವದಂತೂ ಸತ್ಯ.
ನಾನು ಮೊದಲಿಗೆ ಮಿಡಿಸೌತೆಯನ್ನ ಹೊರಗಿನ ಕಂಪನಿಗಳ ಮೂಲಕ ಸೌತೆ ಬೆಳೆಯುವ ರೈತನಾಗಿದ್ದು ತದನಂತರ ಈ ಬೆಳೆಯ ಬಗ್ಗೆ ತಿಳಿದ ನಂತರ ನಾನೇ ಖುದ್ದು ಸೌತೆ ಬೆಳೆಯನ್ನ ರೈತರಿಂದ ಬೆಳೆಸಿ ಸೌತಕಾಯಿ ಖರೀದಿಸಿ ತಮಿಳುನಾಡಿನ ಪ್ಯಾಕ್ಟರಿಗಳಿಗೆ ಮಾರಾಟ ಮಾಡುತ್ತೇನೆ. ಇದರಿಂದ ಈ ಮಿಡಿ ಸೌತೆಯಲ್ಲಿ ರೈತನ ಪಾತ್ರದ ಜೊತೆಗೆ ಸ್ವಯಂ ಉದ್ಯೋಗವನ್ನು ಮಾಡುತ್ತಿದ್ದೇನೆ.
ಮಂಜುನಾಥ ಜಿಎಸ್,ಗಂಗಯ್ಯನಪಾಳ್ಯ
ನಮ್ಮ ಭಾಗದಲ್ಲಿ ವರ್ಷ ಪೂರ್ತಿ ಸೌತೆ ಬೆಳೆಯಲಿದ್ದು ನಾನು ಖರೀದಿದಾರರ ಬಳಿ ಬೈಯರ್ ಆಗಿ ಕೆಲಸ ಮಾಡಲಿದ್ದು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವುದು ತಪ್ಪಿದಂತಾಗಿದೆ.
ಹರೀಶ,ಮಠ
ನಮ್ಮೂರಲ್ಲಿ ಮೊದ ಮೊದಲು ವಾಣಿಜ್ಯ ಬೆಳೆಯಾಗಿ ಶೇಂಗಾ ಬೆಳೆಯತ್ತಿದ್ವಿ. ಹದಿನೈದು ಇಪ್ಪತ್ತು ವರ್ಷಗಳಿಂದ ಈ ಮಿಡಿ ಸೌತೆಯನ್ನ ನಮ್ಮ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು ಇತರೆ ಬೆಳೆಗಿಂತ ಇದರಲ್ಲಿ ಲಾಭವನ್ನ ಕಾಣಬಹುದಾಗಿದೆ.
ಬಸವರಾಜು ಜಿಪಿ , ರೈತ ಗಂಗಯ್ಯನಪಾಳ್ಯ
ಮಿಡಿ ಸೌತೆ ಬೆಳೆದರಷ್ಟೇ ಈ ಭಾಗದ ರೈತರ ಬದುಕು ಹಸನು. ಹೇಮಾವತಿ ನೀರು ಹರಿಯದ ತಾಕುಗಳಿಗೆ ಇದು ಅನಿವಾರ್ಯವಾಗಿದೆ. ಈ ಭಾಗದ ರೈತರ ಬಗ್ಗೆ ಜನಪ್ರತಿನಿಧಿಗಳ ಹೃದಯ ಮಿಡಿಯಬೇಕಿದೆ.