ಹೆತ್ತೇನಹಳ್ಳಿ ಮಂಜುನಾಥ್
ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005 ರಲ್ಲಿ ತಂದೆಯು ಜೀವಂತವಾಗಿರದಿದ್ದರೂ ಸಹ ಹೆಣ್ಣುಮಕ್ಕಳಿಗೆ ಕೋಪರ್ಸೆನರಿ ಹಕ್ಕುಗಳಿವೆ ಎಂದು ದಿನಾಂಕ 11-08-2020 ರ ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಮಹತ್ವದ ತೀರ್ಪಿನಲ್ಲಿ, ತಿದ್ದುಪಡಿ ಸಮಯದಲ್ಲಿ ತಂದೆ ಜೀವಂತವಾಗಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, 2005 ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ನಂತರ ಮಗಳಿಗೆ ಪಾಲು ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪೂರ್ವಜರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕನ್ನು ನೀಡಿದ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ 2005, ಹಿಂದಿನ ಅವಧಿಯ ಪರಿಣಾಮವನ್ನು ಬೀರುತ್ತದೆಯೆ ಎಂದು ಕಾನೂನು ವಿಷಯವನ್ನು ಎತ್ತುವ ಮೇಲ್ಮನವಿಗಳಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ತೀರ್ಪು ಪ್ರಕಟಿಸಿದ್ದಾರೆ.
ಐತಿಹಾಸಿಕ ಸುಪ್ರಿಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ನಾವು ಅತ್ಯಂತ ಪ್ರಾಮಾಣಿಕವಾಗಿ ನೆನೆಯಬೇಕಾದದ್ದು ಈ ದೇಶದ ಸಂವಿಧಾನ ಕರ್ತೃ, ಪುಸ್ತಕ ಪ್ರೇಮಿ, ಶೋಷಿತ ಸಮುದಾಯದ ವಿಮೋಚಕ, ಜ್ಞಾನ ಸೂರ್ಯ, ಮಾತೃಹೃದಯಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಒಂದು ದೇಶದ ಅಭಿವೃದ್ಧಿ ಎಂದರೆ, “ದೇಶದ ಹೆಣ್ಣು ಮತ್ತು ಗಂಡು ಗಳ ಪಾಲ್ಗೊಳ್ಳುವಿಕೆ” ಎಂಬುದಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಧದಷ್ಟು ಜನಸಂಖ್ಯೆ ಹೆಣ್ಣುಮಕ್ಕಳೇ ಆಗಿದ್ದಾಗ ಅವರನ್ನು ವ್ಯವಸ್ಥೆ ಒಳಗೊಳ್ಳದಿದ್ದರೇ ಆ ದೇಶ ಪ್ರಗತಿ ಸಾಧಿಸಲು ಸಾಧ್ಯವೇ ಇಲ್ಲಾ ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.
ಸ್ವಾತಂತ್ರ್ಯಪೂರ್ವದಲ್ಲಿ ಶೋಷಿತರ, ಅಸ್ಪೃಶ್ಯರ ಮತ್ತು ಮಹಿಳೆಯರ ಸ್ಥಿತಿ ಒಂದೇ ಆಗಿತ್ತು. ಮೇಲ್ವರ್ಗದ ಸಮುದಾಯದಲ್ಲಿ ಹುಟ್ಟಿದಂತ ಹೆಣ್ಣುಮಗಳಿಗೂ ಕೂಡಾ ಯಾವುದೇ ರೀತಿಯಾದಂತಹ ಶೈಕ್ಷಣಿಕ, ರಾಜಕೀಯ, ಆಸ್ತಿ ಹಕ್ಕನ್ನು ಹೊಂದದೇ ಕೊನೆಯವರೆವಿಗೂ ಪುರುಷಾಶ್ರಯದಲ್ಲೆ ಜೀವಿಸಬೇಕಿತ್ತು.
ಸಾಮಾಜಿಕ ಸ್ಥಾನಮಾನಗಳು ಸಿಗದೇ, ಹೆಣ್ಣು ಕೇವಲ ಅಡುಗೆಮನೆ & ಮಕ್ಕಳನ್ನು ಹೆರುವ ಯಂತ್ರವಾಗಿದ್ದಳು.
“ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾಃ” ಎಂದು ಬಾಯಲ್ಲಿ ನುಡಿಯುತ್ತಾ, ಪುರುಷಪ್ರಧಾನ & ಮನುವಾದಿ ವ್ಯವಸ್ಥೆ ಹೆಣ್ಣನ್ನು ದಿನನಿತ್ಯ ಜೀವನದಲ್ಲಿ ನಿರಂತರವಾಗಿ ಶೋಷಣೆ ಮಾಡುತ್ತಾ, ಹೆಣ್ಣನ್ನು ಬೋಗದ ಜೀವನಕ್ಕಾಗೇ ಮಾರ್ಪಾಟು ಮಾಡಿಕೊಂಡಿದ್ದ ಸಾಮಾಜಿಕ ವ್ಯವಸ್ಥೆ ವಿರುದ್ಧ ಗುಡುಗಿದವರು ಬಾಬಾ ಸಾಹೇಬರು.
ಸಾವಿರಾರು ವರ್ಷ ಶೋಷಣಿಯ ಸ್ಥಿತಿಯಲ್ಲಿದ್ದ ಹೆಣ್ಣಿನ ನೋವು, ಅಸಹಾಯಕತೆ ಅರಿತ ಮಾತೃ ಹೃದಯಿ ಬಾಬಾ ಸಾಹೇಬರು.
ಸ್ವಾತಂತ್ರ್ಯ ನಂತರದ ದೇಶದ ಮೊದಲ ಸರ್ಕಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿದ್ದರು, ತಮ್ಮ ಅಧಿಕಾರಾವಧಿಯಲ್ಲಿ ಫೆಬ್ರವರಿ 1951 ಸಂಸತ್ತಿನಲ್ಲಿ ಸ್ತ್ರೀ ಸಮಾನತೆಗಾಗಿ “ಹಿಂಧೂ ಬಿಲ್ ಕೋಡ್” ಮಂಡಿಸಿದರು.
ಹಿಂದೂ ಕೋಡ್ ಬಿಲ್ ಕೋಡ್ ನಲ್ಲಿದ್ದ ಪ್ರಮುಖ ನಾಲ್ಕು ಅಂಶಗಳು ಹೀಗಿದ್ದವು.
1. ಮಹಿಳೆಯು ಕೂಡಾ ತನ್ನ ಪತಿಯನ್ನು ಆಯ್ಕೆಮಾಡುವ ಹಕ್ಕು
2. ಪುರುಷರ ಹಾಗೆ ವಿಚ್ಚೇಧಿಸುವ ಹಕ್ಕು
3. ತಂದೆಯ ಆಸ್ತಿಯಲ್ಲಿ ಗಂಡುಮಕ್ಕಳ ಸಮನಾಗಿ ಹೆಣ್ಣುಮಗಳಿಗೂ ಆಸ್ತಿ ಹಕ್ಕು
4.ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ವಿಧವೆ ಸೊಸೆಗೂ ಸಮ ಪಾಲು ಹಕ್ಕು.
ಹಿಂದೂ ಕೋಡ್ ಬಿಲ್ ಕೋಡ್ ಮನುವಾದಿಗಳ & ಸಂಪ್ರದಾಯವಾದಿಗಳ ನಿದ್ರೆ ಕೆಡಿಸಿತು & ಅವರ ಷಡ್ಯಂತ್ರದಿಂದ ಬಿಲ್ ಅನುಮೋದನೆಗೊಳ್ಳಲಿಲ್ಲಾ ಜೊತೆಗೆ ಅವರ ಕೆಂಗಣ್ಣಿಗೂ ಬಾಬಾ ಸಾಹೇಬರು ಗುರಿಯಾದರು.
ಬಿಲ್ ಮಂಡನೆಯಾದ ದಿನ ದೇಶದಲ್ಲಿ ಸಂಪ್ರದಾಯವಾದಿಗಳು ಗಲಭೆಯನ್ನೇ ಸೃಷ್ಟಿಸಿದರು. ದೆಹಲಿ ಒಂದರಲ್ಲೇ 72 ಕಡೆ ನೆಹರು ಮತ್ತು ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ದಹಿಸಿ ಸಂಪ್ರದಾಯವಾದಿಗಳು ವಿಕೃತಿ ಮೆರೆದರು & ಹೀನ ಮನಸ್ಥಿತಿಯ ಆಕ್ರೋಶವನ್ನು ಹೊರಹಾಕಿದರು. ಹಿಂಧೂ ಕೋಡ್ ಬಿಲ್ ನ್ನು ವಿರೋಧಿಸಿದರು.
ಇಷ್ಟೆಲ್ಲಾ ಆದರೂ ಬಾಬಾಸಾಹೇಬರು ತಮ್ಮ ನಿಲುವನ್ನು ಬದಲಾಯಿಸಲಿಲ್ಲಾ ಬದಲಿಗೆ ತಾಯ್ತನ ಮೆರೆದ ಬಾಬಾ ಸಾಹೇಬರು, ದೇಶದ ಶೇಕಡಾ 50 ರಷ್ಟಿರುವ, ಅಸಮಾನತೆ ಕೂಪದಲ್ಲಿ ಬಿದ್ದಿರುವ ಸ್ತ್ರೀಯರಿಗೆ ಸಮಾನತೆ ಇಲ್ಲದ ಸ್ಥಾನ ನನಗೇಕೆ ಬೇಕು ಎಂದು ತಮ್ಮ ಪದವಿಯನ್ನೇ ತ್ಯಾಗ ಮಾಡಿದರು. ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಇಷ್ಟೆಲ್ಲಾ ಆದರೂ ತಮ್ಮ ಹೋರಾಟವನ್ನ ಮುಂದುವರಿಸಿದರು.
ಇಂದು ದೇಶದ ಅತ್ಯಂತ ಉನ್ನತ ಹುದ್ದೆಗಳನ್ನು ಹೆಣ್ಣುಮಕ್ಕಳು ಅನುಭವಿಸಲು ಮುಖ್ಯಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರಮವೇ ಆಗಿದೆ.
ರಾಜಕೀಯ, ಆಡಳಿತ, ವಿಜ್ಞಾನ, ಸಾಹಿತ್ಯ ಕ್ಷೇತ್ರ ಬಹುತೇಕ ಎಲ್ಲಾ ರಂಗದಲ್ಲೂ ಹೆಣ್ಣು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಇಂತಹ ಅದೆಷ್ಟೋ ಮಹಿಳೆಯರ ಅಸಮಾನ್ಯ ಸಾಧನೆಗಳ ಹಿಂದಿರುವುದು ಬಾಬಾ ಸಾಹೇಬರ ಪರಿಶ್ರಮವೇ ವಿನಃ ಮತ್ಯಾವುದೂ ಅಲ್ಲಾ.
ಇವುಗಳ ಜೊತೆಗೆ ಸ್ತ್ರೀ ಪರವಾದ ಅದೆಷ್ಟೋ. ಕಾನೂನು ಜಾರಿ ಮಾಡಿದ ಯಶಸ್ಸು ಕೂಡಾ ಬಾಬಾ ಸಾಹೇಬರದ್ದೇ.
1. ಭಾರತ ದೇಶದಲ್ಲಿ ಇವತ್ತು ಎಲ್ಲಾ ಮಹಿಳೆಯರು “ಮಹಿಳಾ ಮಿಸಲಾತಿ”ಮತ್ತು ಹೆರಿಗೆ ರಜೆಯನ್ನು ಪಡೆಯುತ್ತಿದ್ದಾರೆ, ಈ ಸೌಲಭ್ಯವನ್ನ ದೊರಕಿಸಿಕೊಟ್ಟವರು.
2. ಸಂವಿಧಾನದ ಅನುಚ್ಛೇದ 14ರಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮನವಾದ ಕಾನೂನಿನ ರಕ್ಷಣೆಯನ್ನು ಒದಗಿಸಲಾಗಿದೆ.
3. ಅನುಚ್ಛೇದ 15ರಲ್ಲಿ ಲಿಂಗಬೇಧದ ಆಧಾರದ ಮೇಲೆ ತಾರತಮ್ಯ ಧೋರಣೆಯನ್ನು ತೋರಬಾರದೆಂದು ಸೂಚಿಸಲಾಗಿದೆ.
4. ಅನುಚ್ಛೇದ 18ರಲ್ಲಿ ಸರ್ಕಾರಿ ನೌಕರಿ ಅಥವಾ ಯಾವುದೇ ಹುದ್ದೆಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನೀತಿ ತೋರಬಾರದೆಂದು ನಿರ್ದೇಶಿಸಿದೆ.
5. ಅನುಚ್ಛೇದ 21ರಲ್ಲಿ ಮಹಿಳೆಯರು ಮಾನವ ಘನತೆಯಿಂದ ಬದುಕುವ ಹಕ್ಕನ್ನು ಕೊಡುತ್ತದೆ.
6. ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಪ್ರತ್ಯೇಕ ಕಾನೂನುಗಳನ್ನು ಮತ್ತು ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ನೀಡಲಾಗಿದೆ.
7. ಅನುಚ್ಛೇದ 51(ಎ)ನಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕೆಂದು ನಿರ್ದೇಶಿಸಿದೆ.
8. ಅನುಚ್ಛೇದ 243ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕಡ್ಡಾಯ ಮೀಸಲಾತಿ ಒದಗಿಸಲಾಗಿದೆ.
9. ಇದರ ಜೊತೆಗೆ ಕುಟುಂಬ ಕಲ್ಯಾಣ ಯೋಜನೆಯಡಿ ತಾಯಿ ಮರಣವನ್ನು ಪ್ರಧಾನವಾಗಿಟ್ಟಕೊಂಡು, ಎರಡು ಮಕ್ಕಳ ಮೇಲೆ ನಮ್ಮ ಹೆಣ್ಣು ಮಕ್ಕಳಿಗೆ ಮಗು ಹೆರುವ ಸಾಮಾರ್ಥ್ಯವಿಲ್ಲವೆಂದು ಹೇಳಿ ಕಾನೂನು ಜಾರಿ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು & ತಾಯ್ತನ ಮೆರೆದದ್ದು ಇದೇ ಬಾಬಾ ಸಾಹೇಬರು.
ಇದನ್ನೇಲ್ಲಾ ನೀಡಿದ್ದು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ತ್ಯಾಗ, ಶ್ರಮ & ಮಾತೃ ಹೃದಯ ಎಂದು ಅರಿಯಬೇಕಿದೆ.
ಭವ್ಯ ಭಾರತದ ಹೆಣ್ಣು ಮಕ್ಕಳೇ ಅವರ ತ್ಯಾಗ ನೆನಪಿನಲ್ಲಿಡಿ & ನಿಮ್ಮ ಪೂಜೆ ನಿಜವಾಗಿಯೂ ಸೇರಬೇಕಾದದ್ದು ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ.
ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ನೋಡುವ ಸಮಾಜಕ್ಕೆ ಜಾತಿಯೇ ಮುಖ್ಯವಾಯಿತು. ಈ ದೇಶ ಬಾಬಾ ಸಾಹೇಬರನ್ನು ಜ್ಞಾನದ ದೃಷ್ಟಿಯಿಂದ ನೋಡಲೇ ಇಲ್ಲಾ. ಬಾಬಾ ಸಾಹೇಬರ ಅಪಾರ ಓದು ನಮಗೆ ಅರ್ಥವಾಗಲಿಲ್ಲ ಅರ್ಥವಾದವರೂ ಅನರ್ಥಿಸುತ್ತಾ ಹೋದೆವು.
ಅವರ ಸಂಘಟನಾ ಶಕ್ತಿ ನಮಗೆ ಗೊತ್ತಾಗಲಿಲ್ಲಾ,
ಗೊತ್ತಾದವರು ತಮ್ಮ ವೈಯಕ್ತಿಕ ಜೀವನ ಕಟ್ಟಿಕೊಂಡರು.
ಅವರ ಹೋರಾಟದ ಶ್ರಮ ನಮಗೆ ಸರಿಯಾಗಿ ಸಿಗಲಿಲ್ಲ, ಸಿಗಲು ಮನುವಾದಿಗಳು ಬಿಡಲಿಲ್ಲ.
ಅವರ ಮಾನವೀಯತೆ ನಮಗೆ ಬರಲಿಲ್ಲ, ಬಾಬಾ ಸಾಹೇಬರನ್ನೇ ಅಮಾನವೀಯವಾಗಿ ನಡೆಸಿಕೊಂಡೆವು.
ಸ್ವಾರ್ಥಿಗಳೇ ತುಂಬಿರುವ ದೇಶದಲ್ಲಿ ನಿಸ್ವಾರ್ಥವಾಗಿ ಜೀವ & ಜೀವನವನ್ನೇ ತೇಯ್ದ ಬಾಬಾ ಸಾಹೇಬರನ್ನು
ಜಾತಿ ಕನ್ನಡಕ ಧರಿಸಿ ನೋಡಬೇಡಿ, ಜಾತಿ ಕನ್ನಡಕವನ್ನು ತೆಗೆದು ನೋಡಿ ಬಾಬಾ ಸಾಹೇಬರು ಆಕಾಶದಷ್ಟು ಅಗಲವಾಗಿ ಸಮುದ್ರದಷ್ಟು ಆಳವಾಗಿ ಕಾಣುತ್ತಾರೆ”.
ಜೈ ಭೀಮ್
✍️ ಹೆಚ್. ಎನ್ ಮಂಜುನಾಥ್ ಹೆತ್ತೇನಹಳ್ಳಿ ಅವರು ತುಮಕೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮಾಜಿ ಸದಸ್ಯರು ಹಾಗೂ ಬುದ್ಧ, ಬಸವಣ್ಣ, ಅಂಬೇಡ್ಕರ್ ಕುರಿತ ಆಳ ಅಧ್ಯಯನಕಾರರು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ