Publicstory
ತುರುವೇಕೆರೆ: ‘ಕ್ಷೇತ್ರದ ಜನತೆ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿದ್ದು ಇದು ನನ್ನ ಕೊನೆಯ ವಿಧಾನಸಭಾ ಚುನಾವಣೆಯಾಗಿದ್ದು ಮುಸ್ಲಿಂ ಬಾಂಧವರು ಈ ಬಾರಿ ನನ್ನ ಗೆಲುವಿಗೆ ಕೈಹಿಡಿಯ ಬೇಕು’ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುಸ್ಲಿಂ ಕಾರ್ಯಕರ್ತರಿಗೆ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜೆಡಿಸ್ ಪಕ್ಷ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಫ್ರಲ್ಲಾ ಖಾನ್ ಸೇರಿದಂತೆ ತಾಲ್ಲೂಕಿನ ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಜೆಡಿಎಸ್ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಈ ಸಲ ಗೆದ್ದರೆ ಜಿಲ್ಲಾ ವಕ್ಫ್ ಬೋರ್ಡ್ಗೆ ಜಫ್ರಲ್ಲಾ ಖಾನ್ ಅವರನ್ನು ಆಯ್ಕೆ ಮಾಡುವೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆಂಬ ತಪ್ಪು ಗ್ರಹಿಕೆಯಿಂದ ಮುಸ್ಲಿಂರು ವೋಟ್ ಹಾಕಿದರು. ಆದರೆ ತದ್ವಿರುದ್ದವಾಗಿ ಬಿಜೆಪಿ ಗೆದ್ದಿತು. ಈಗ ಎಲ್ಲರಿಗೂ ತಪ್ಪಿನ ಅರಿವಾಗಿದೆ ಎಂದರು.
ಈ ಬಾರಿ ಯಾರೋ ಹೊಸಬರು ಬಂದಿದ್ದಾರೆಂದು ಕಾಂಗ್ರೆಸ್ ಕಡೆ ವಾಲದಿರಿ ಎಂದು ಹೆಸರು ಹೇಳದೇ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ಗೆ ವೋಟ್ ಹಾಕಿದರೆ ಪುನಃ ಬಿಜೆಪಿ ಗೆಲುವಿಗೆ ದಾರಿ ಸುಗಮವಾಗುತ್ತದೆ. ಬಿಜೆಪಿ ಸಂಸ್ಕೃತಿ ಎಂತಹದು ಎಂಬುದು ದೇಶದ ಜನತೆಗೆ ಗೊತ್ತಿದೆ. ಆಹಾರ ವಿಚಾರಗಳು ಸೇರಿದಂತೆ ಬಿಜೆಪಿಯ ಅಜೆಂಡಾಗಳನ್ನು ಮುಸ್ಲಿಂರು ಸೇರಿದಂತೆ ದೇಶದ ಜನತೆಯ ಮೇಲೆ ಹೇರಲು ಮುಂದಾಗಿರುವುದು ಖಂಡನೀಯ.
ಇಂತಹ ವಿರೋಧಗಳಿಂದಲೇ ದಿನಕಳೆದಂತೆ ಬಿಜೆಪಿಯ ಅವಸಾನದ ಕಾಲ ಸಮೀಪಿಸುತ್ತಿದೆ. ಹೀಗಾಗದಿದ್ದರೆ ಬಿಜೆಪಿ ದೇಶವನ್ನೇ ಇಬ್ಬಾಗ ಮಾಡೀತು ಎಂದು ಎಚ್ಚರಿಸಿದರು.
ಬಿಜೆಪಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವ ಉಮೇದಿನಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಂರ್ತಜಾತಿ ವಿವಾಹಕ್ಕೆ ಸರ್ಕಾರ ಪ್ರೋತ್ಸಾಹ ಧನ ಕೊಡುವುದಾಗಿ ಹೇಳಿದೆ. ಹೀಗಿರುವಾಗ ಮತಾಂತರ ಕಾಯಿದೆ ಏಕೆ ಜಾರಿ ಮಾಡಬೇಕು. ಯಾರು ಯಾವ ಧರ್ಮಕ್ಕಾದರೂ ಸೇರಲಿ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಬಿಜೆಪಿಗೇನಿದೆ.
ಶಾಸಕ ಮಸಾಲಜಯರಾಂ ನಾಲ್ಕು ವರ್ಷ ಅಧಿಕಾರ ನಡೆಸಿದ್ದಾರೆ ಅವರದೇ ಸರ್ಕಾರವಿದೆ ಹೀಗಿದ್ದರೂ ತಾಲ್ಲೂಕಿನ ಜನಪರವಾದ ಕನಿಷ್ಠ ಒಂದು ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆಗಿಲ್ಲವೆಂದು ಛೇಡಿಸಿದರು.
ಕೋಳಘಟ್ಟ ಸಮೀಪ ಜಲ್ಲಿ ಕ್ರಷರ್ ಮಾಡದಂತೆ ಗ್ರಾಮಸ್ಥರು ಶಾಸಕರಲ್ಲಿಗೆ ಅಹ್ವಾಲ ತೆಗೆದುಕೊಂಡು ಹೋದರೆ ಇದು ಕೇಂದ್ರದ ಗಡ್ಕರಿಯವರ ಆದೇಶ ಎನ್ನುತ್ತಾರೆ. ಇಲ್ಲಿ ಜಲ್ಲಿ ಒಡೆಯಲು ರಾಜ್ಯ ಸರ್ಕಾರ ಅನುಮತಿ ನೀಡ ಬೇಕೆ ವಿನಹ ಕೇಂದ್ರ ಸರ್ಕಾರವಲ್ಲ. ಈ ವಿಚಾರದಲ್ಲಿ ಶಾಸಕರು ಗ್ರಾಮಸ್ಥರನ್ನು ದಾರಿತಪ್ಪಿಸುತ್ತಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಸು.20ಕ್ಕೂ ಹೆಚ್ಚು ಮುಸ್ಲಿಂ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ವಿಜಯೇಂದ್ರ, ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಬಾಣಸಂದ್ರ ರಮೇಶ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಫ್ರಲ್ಲಾ ಖಾನ್, ಮುಖಂಡರುಗಳಾದ ವೆಂಕಟಾಪುರ ಯೋಗೀಶ್, ರಾಗು, ಕಲ್ಲಬೋರನಹಳ್ಳಿ ಜಯರಾಂ, ವಿ.ಕೆ.ಗೌಡ ಮತ್ತು ಮುಸ್ಲಿಂ ಕಾರ್ಯಕರ್ತರು ಪಾಲ್ಗೊಂಡಿದ್ದರು.