Publicstory. in
Tumkuru: ವರ್ಷದಲ್ಲಿ 100 ದಿವಸ ಶಾಲೆಗಳನ್ನು ನಡೆಸಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವುದರಿಂದ ಮಕ್ಕಳ ಭವಿಷ್ಯ ಹೇಗೆ ರೂಪಿಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉಚಿತ ಪಠ್ಯ, ಉಚಿತ ಶಿಕ್ಷಣ, ಉಚಿತ ಸಮವಸ್ತ್ರ ನೀಡುವುದರಿಂದ ಪೋಷಕರು ಶೇಕಡ 40ರಷ್ಟು ಹಣವನ್ನು ಉಳಿತಾಯ ಮಾಡಬಹುದು. ಇದರಿಂದ ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹೀಗಿರಲಿದೆ Sslc ಪರೀಕ್ಷೆ
ಪ್ರಸಕ್ತ ಸಾಲಿನಲ್ಲಿ 8 ಲಕ್ಷ 48 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಪರೀಕ್ಷೆಗಳು ಪ್ರಾರಂಭವಾಗಲಿವೆ. ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವಂತಹ ಕೆಲಸ ಮಾಡಬೇಕು ಎಂದು ಸೂಚಿಸಿದರು.
ತುಮಕೂರಿನಲ್ಲಿ ಶಿಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, 8.48 ಲಕ್ಷ ವಿದ್ಯಾರ್ಥಿಗಳಿಗೆ ಕೊರೊನ ಸಮಯದಲ್ಲಿ ಪರೀಕ್ಷೆ ನಡೆಸುವುದು ಸವಾಲಿನ ಕೆಲಸ. ದೈಹಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದರು.
ಹಿಂದೆ ಒಂದು ಕೊಠಡಿಗೆ 30 ವಿದ್ಯಾರ್ಥಿಗಳನ್ನು ಹಾಕಲಾಗುತ್ತಿತ್ತು. ಕೊರೊನ ಹಿನ್ನೆಲೆಯಲ್ಲಿ ಒಂದು ಕೊಠಡಿಗೆ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರುವಂತೆ ಪೊಲೀಸರಿಗೆ ಸೂಚಿಸಲಾಗುವುದು ಎಂದರು ಹೇಳಿದರು.