ತುಮಕೂರು ಜಿಲ್ಲೆ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ತಿಪ್ಪೆಯಲ್ಲಿ ಬೆಳೆಯುವ ಕಾಯಿಯನ್ನು ಮನೆಯ ತಲ ಬಾಗಿಲಿಗೆ ಕಟ್ಟಿದರೆ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವದಂತಿ ಹರಡುತ್ತಿದೆ.
ತಿಪ್ಪೆ, ಹೊಲ ಗದ್ದೆಗಳನ್ನು ಅಲೆದು ಜನತೆ ಕಾಯಿಯನ್ನು ಹುಡುಕಿ ತರುತ್ತಿದ್ದಾರೆ. ತಂದ ಕಾಯಿಯನ್ನು ತಂತಿ ಅಥವಾ ದಾರಕ್ಕೆ ಕಟ್ಟಿ ಮುಖ್ಯ ಧ್ವಾರದ ಮೇಲೆ ಕಟ್ಟುತ್ತಿದ್ದಾರೆ.
ಈ ಕಾಯಿಯೂ ನೋಡಲು ಕೊರೊನಾ ವೈರಸ್ ಆಕಾರದಲ್ಲಿಯೇ ಇದೆ. ಸಧ್ಯ ಕಾಯಿಗಳಿಗೆ ಸಾಕಷ್ಟು ಬೇಡಿಕೆ ಇದೆ.
ಈ ಬಗ್ಗೆ ರೊಪ್ಪ ಗ್ರಾಮದ ಪವನ್ ಪ್ರತಿಕ್ರಿಯಿಸಿ, ಕಾಯಿ ಹುಡುಕಲು ಜನತೆ ಗುಂಪಿನಲ್ಲಿ ಓಡಾಡುತ್ತಿದ್ದಾರೆ. ಈ ಕಾಯಿ ಆಯುರ್ವೇದಕ್ಕೆ ಬಳಕೆಯಾಗುತ್ತದೆ. ಆದರೆ ಇದರಿಂದ ವೈರಸ್ ನಿಯತ್ರಣವಾಗುವ ಬಗ್ಗೆ ಯಾವುದೇ ಪುರಾವೆ ಇಲ್ಲ.
ಜನತೆ ಕಾಯಿ ಹುಡುಕಲು ಅಲೆದಾಡಿ ಅಪಾಯ ತಂದುಕೊಳ್ಳುವ ಬದಲು ಮನೆಯಲ್ಲಿದ್ದರೆ ಒಳ್ಳೆಯದು. ಜನತೆ ಊಹಾ ಪೋಹಗಳಿಗೆ ಕಿವಿಗೊಡಬಾರದು ಎಂದರು.
ಬಹುತೇಕ ವೃದ್ದೆಯರು ಮನೆಯಲ್ಲಿ ಕಾಯಿ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಕಾಯಿ ಕಟ್ಟಿದರೆ ಆಗುವ ನಷ್ಟವೇನು. ಅದಕ್ಕೆ ಹಣ ಕೊಡಬೇಕೆ? ಎಂದು ಹೇಳಿ ಕಟ್ಟಿಸಲಾಗುತ್ತಿದೆ. ಕೊರೊನಾ ಕಾಯಿ ಎಂಬ ಹೆಸರಿನಿಂದಲೇ ತಿಪ್ಪೆಯಲ್ಲಿ ಬೆಳೆಯುವ ಕಾಯಿಯನ್ನು ಕರೆಯಲಾಗುತ್ತಿದೆ.