Publicstory.in
ತುಮಕೂರು: ಕೇಂದ್ರ ಸರ್ಕಾರವು ಆತುರಾತುರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವುದು ತಮಗೆ ಸಹಾಯ ಮಾಡಿದ್ದ ಕಾರ್ಪೊರೇಟ್ ಧಣಿಗಳಿಗೆ ವ್ಯಾಪಾರ ಸರಳೀಕರಣ ಹೆಸರಿನಲ್ಲಿ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಇರುವ ಹಕ್ಕುಗಳನ್ನು ಮತ್ತು ರಕ್ಷಣೆಗಳನ್ನು ದಮನ ಮಾಡುತ್ತಿದೆ ಎಂದು ಸಿಐಟಿಯು ಸಮಿತಿ ಆಪಾದಿಸಿದೆ.
ಇತ್ತೀಚೆಗೆ, 10-07-2019ರಂದು ಕೇಂದ್ರ ಕಾರ್ಮಿಕ ಸಚಿವರು ಇತರೆ ಸಚಿವರೊಂದಿಗೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಷರತ್ತುಗಳ ಮಸೂದೆ 2019’ನ್ನು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯು ಅನುಮೋದನೆ ಮಾಡಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.
ಈ ಮಸೂದೆಯು ಹಾಲಿ ಅಸ್ತಿತ್ವದಲ್ಲಿರುವ 13 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ರೂಪಿಸಿರುವ ಸಂಹಿತೆಯಾಗಿದೆ. ಈ ಮಸೂದೆಯಲ್ಲಿ ಕಾರ್ಮಿಕರಿಗೆ ಅನುಕೂಲಕರವಾದದ್ದನ್ನು ಆಯ್ದುಕೊಂಡಿರುವ ಸರ್ಕಾರವು ಕಾರ್ಮಿಕರ ರಕ್ಷಣೆಗೆ ಇದ್ದ ನಿಯಮ-ಉಪನಿಮಯಗಳನ್ನು ದುರ್ಬಲಗೊಳಿಸಿ ಹಾಳು ಮಾಡಲಾಗಿದೆ.
ಪ್ರಾಣ ಹಾನಿಗೆ ನೂಕುತ್ತಾ ಈ ಕಾಯ್ದೆ
ಆರೋಗ್ಯ ಮತ್ತು ಸುರಕ್ಷತೆಯ ವಿಷಯಗಳಲ್ಲಿಯೂ ಸಹ ಕಾರ್ಮಿಕರಾಗಲೀ, ಕಾರ್ಮಿಕರ ಸಂಘವಾಗಲೀ ತಮ್ಮ ಹಕ್ಕನ್ನು ಚಲಾಯಿಸಿ ಈ ವಿಚಾರದಲ್ಲಿ ಮಾಲೀಕರನ್ನು ಅಗತ್ಯವಾದ ಸುರಕ್ಷತೆ ಮತ್ತು ಆರೋಗ್ಯಕರ ವಾತಾವರಣವನ್ನು ಪಡೆಯಲು ಆಗದಂತಹ ರೀತಿಯಲ್ಲಿ ಈ ಸಂಹಿತೆಯನ್ನು ರೂಪಿಸಲಾಗಿದೆ. ಇದರಿಂದಾಗಿ ಮತ್ತಷ್ಟು ಅಂಗವೈಕಲ್ಯತೆ, ಗಾಯಾಳುಗಳ ಸಂಖ್ಯೆ ಹೆಚ್ಚಳ, ಪ್ರಾಣಹಾನಿ ಹೆಚ್ಚಾಗುವಂತೆ ಈ ಮಸೂದೆ ಎಂದು ಆಪಾದಿಸಿದೆ.
ಕೇಂದ್ರ ಸರ್ಕಾರ ಈ ಮಸೂದೆಯನ್ನು ರೂಪಿಸುವ ಸಂದರ್ಭದಲ್ಲಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದರು. ಅದನ್ನು ಪರಿಗಣಿಸದ ಸರ್ಕಾರ ಬಂಡವಾಳಶಾಹಿ ಕಾರ್ಪೊರೇಟ್ ವಲಯವನ್ನು ತೃಪ್ತಿಪಡಿಸಲು ಈ ಮಸೂದೆಯನ್ನು ರೂಪಿಸಲಾಗಿದೆ ಎಂದು ಸಿಐಟಿಯು ಆರೋಪಿಸಿದೆ.
₹ 18 ಸಾವಿರದಿಂದ ಇಳಿತು ಕನಿಷ್ಠ
ಕೂಲಿ ₹ 4628 ಕ್ಕೆ
ಕೇಂದ್ರ ಕಾರ್ಮಿಕ ಸಚಿವರು ಮತ್ತೊಂದು ವಿಷಯ ಪ್ರಸ್ತಾಪಿಸಿ *ವೇತನ ಸಂಹಿತೆ ಮಸೂದೆ 2019* ಅನ್ನು ಅನುಮೋದಿಸಿದ್ದಾಗಿ ತಿಳಿಸಿದ್ದಾರೆ. ಇದರನ್ವಯ ರಾಷ್ಟ್ರೀಯ ನೆಲಮಟ್ಟದ ಕನಿಷ್ಟ ವೇತನವನ್ನು ದಿನವೊಂದಕ್ಕೆ ರೂ. 178 ರೂಪಾಯಿಗಳು (ತಿಂಗಳಿಗೆ 4628) ನಿಗದಿಗೊಳಿಸಲಾಗಿದೆ. ಇದಕ್ಕಿಂತ ಕಡಿಮೆ ವೇತನವನ್ನು ರಾಜ್ಯ ಸರ್ಕಾರಗಳು ನಿಗದಿಗೊಳಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಇದೊಂದು ನಾಚಿಕೆಗೇಡಿನ ವಿಷಯವಾಗಿದೆ. ಈ ಸಂಹಿತೆಯು ಕನಿಷ್ಠ ಕೂಲಿಯ ಜಾರಿಗೆ ಬೇಕಾದ ಶಾಸನಬದ್ದ ವ್ಯವಸ್ಥೆಯನ್ನು ಸಹ ಹೊಂದಿರುವುದಿಲ್ಲ.
ಕೇಂದ್ರ ಸರ್ಕಾರವು ನೆಲಮಟ್ಟದ ಕನಿಷ್ಠ ವೇತನವನ್ನು ದಿನಕ್ಕೆ 178 ರೂಪಾಯಿ, ಮಾಸಿಕ 4,628/- ರೂಪಾಯಿಗಳೆಂದು ಘೋಷಿಸಿ ಹೆಮ್ಮಪಡುತ್ತಿರುವುದು ನಾಚಿಕೆಗೇಡು ಮತ್ತು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಸಿಐಟಿಯು ಹೇಳಿದೆ.
ಈಗಾಗಲೇ ದೇಶದ 31 ಕೇಂದ್ರಗಳು ಮತ್ತು ರಾಜ್ಯಗಳಲ್ಲಿ ಕನಿಷ್ಠ ವೇತನವು ದಿನವೊಂದಕ್ಕೆ 178ರೂಪಾಯಿಗೂ ಹೆಚ್ಚಿದೆ. ಕೇಂದ್ರ ಸರ್ಕಾರದ ಈ ಕನಿಷ್ಠ ವೇತನದ ಪ್ರಕಟಣೆಗಳು ರಾಜ್ಯ ಸರ್ಕಾರಗಳನ್ನು ಹಾಗೂ ಮಾಲೀಕರನ್ನು ಕನಿಷ್ಟ ವೇತನ ಕಡಿತ ಮಾಡಲು ಪ್ರಚೋದಿಸುವಂತಿದೆ ಎಂದು ಸಿಐಟಿಯು ಆಪಾದಿಸಿದೆ.
ಈ ನೆಲಮಟ್ಟದ ಕನಿಷ್ಠ ವೇತನ ಕಾಯ್ದೆಯು ಬಂಡವಾಳಗಾರರಿಗೆ ಕನಿಷ್ಟವೇತನವನ್ನು ಕಡಿಮೆ ಮಾಡಿ ಕಾರ್ಮಿಕರನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡಲಿದೆ ಎಂದು ಸಿಐಟಿಯು ಆರೋಪಿಸಿದೆ.
ಸುಪ್ರೀಂ ಕೋರ್ಟ್ ಸೂತ್ರ ತಲೆಕೆಳಗು
ಹದಿನೈದನೇ ಭಾರತೀಯ ಕಾರ್ಮಿಕ ಸಮ್ಮೇಳನವು ಹಾಗೂ 1992ರಲ್ಲಿ ಭಾರತೀಯ ಸರ್ವೋಚ್ಛ ನ್ಯಾಯಾಲಯವು ರಕ್ತಕೋಸ್ ಬ್ರೆಟ್ ಪ್ರಕರಣದಲ್ಲಿ ಕನಿಷ್ಠ ವೇತನವನ್ನು ನಿಗದಿಗೊಳಿಸಲು ಬೇಕಾಗಿ (2700 ಕ್ಯಾಲೊರಿ ಆಹಾರ) ರಚಿಸಿದ ಸೂತ್ರವನ್ನು ಸರ್ಕಾರ ನಿರ್ಲಕ್ಷಿಸಿದೆ. ಇದೇ ಸೂತ್ರವನ್ನು 44, 45, 46ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಸಹ ಸರ್ವಾನುಮತದಿಂದ ಶಿಫಾರಸು ಮಾಡಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಭಾಗಿದಾರವಾಗಿತ್ತು. ಮೇಲೆ ಹೇಳಲಾದ ಸೂತ್ರದನ್ವಯ 2014 ಕನಿಷ್ಟ ವೇತನ 18 ಸಾವಿರ ರೂಪಾಯಿ, (ದಿನಕ್ಕೆ 692.3) ರೂಪಾಯಿಗಳು ನಿಗದಿಯಾಗಿತ್ತು. ಇದೇ ವೇತನವನ್ನೇ ಆರನೇ ವೇತನ ಆಯೋಗವು ಶಿಫಾರಸು ಮಾಡಿತ್ತು. ಇದಾದ ನಂತರ 2018ರಲ್ಲಿ ಇದೇ ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಕನಿಷ್ಟ ವೇತನವನ್ನು ನಿಗದಿಗೊಳಿಸುವ ಕುರಿತು ಇರುವ ವಿಧಾನಗಳ ಕುರಿತು ನಿರ್ಧರಿಸಲು ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು.
ಈ ತಜ್ಞರ ಸಮಿತಿಯು ಭಾರತೀಯ ಕಾರ್ಮಿಕ ಸಮ್ಮೇಳನದ ಸರ್ವಾನುಮತದ ಶಿಫಾರಸುಗಳಾದ 2700 ಕ್ಯಾಲೊರಿ ಆಹಾರ ಸೂತ್ರವನ್ನು ಏಕಪಕ್ಷೀಯವಾಗಿ ಬದಲಿಸಿ 2400 ಕ್ಯಾಲೊರಿಗೆ ಇಳಿಸಲಾಯಿತು. ಅಲ್ಲದೆ ಕನಿಷ್ಠ ವೇತನದ ಲೆಕ್ಕಾಚಾರಕ್ಕೆ ಅಗತ್ಯವಾದ ವಸ್ತುಗಳ ದರಗಳನ್ನು 2012ರ ಮಾರುಕಟ್ಟೆಯ ದರದಂತೆ ಪರಿಗಣಿಸಿತು.
ಈ ತಜ್ಞರ ಸಮಿತಿಯು ಕನಿಷ್ಠವೇತನವನ್ನು ದಿನಕ್ಕೆ 375 ರೂನಿಂದ 447 ರೂಪಾಯಿಗಳಿಗೆ (ಮಾಸಿಕ ರೂ.9750 ರಿಂದ 11,622) ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸು ಕಾರ್ಪೊರೇಟ್ ಬಂಡವಾಳದಾರರ ಕಂಪನಿಗಳ ಕೆಂಗಣ್ಣಿಗೆ ಗುರಿಯಾಯಿತು.
ಬಲಿಷ್ಠ ಪ್ರಧಾನಿ ಸದೃಢ ಸರ್ಕಾರ ಎಂದು ಹೇಳುವ ಕೇಂದ್ರದ ಬಿಜೆಪಿ ಸರ್ಕಾರವು ನಾಚಿಕೆ ಇಲ್ಲದಂತೆ ತನ್ನದೇ ತಜ್ಞರ ಸಮಿತಿಯ ಶಿಫಾರಸುಗಳನ್ನು ಬದಿಗೆ ಸರಿಸಿ, ದಿನವೊಂದಕ್ಕೆ 178 ರೂಪಾಯಿ ನೆಲಮಟ್ಟದ ಕನಿಷ್ಟ ವೇತನವನ್ನು ಘೋಷಿಸಿದೆ ಎಂದು ಸಿಐಟಿಯು ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಇದು ಎಲ್ಲರನ್ನೂ ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದು ಜಪ ಮಾಡುತ್ತಿರುವ ಬಿಜೆಪಿ ಸರ್ಕಾರದ ನಿಜ ಮುಖವಾಗಿದೆ ಎಂದು ಸಿಐಟಿಯು ವ್ಯಂಗ್ಯವಾಡಿದೆ.
ಸಿಐಟಿಯು ಕೇಂದ್ರ ಈ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತದೆ. ಈ ನೀತಿಯ ವಿರುದ್ಧ ಕಾರ್ಮಿಕ ಸಂಘಗಳು ಮತ್ತು ಕಾರ್ಮಿಕ ವರ್ಗ ಐಕ್ಯ ಹೋರಾಟಕ್ಕೆ ಮುಂದಾಗಲು ಸಿಐಟಿಯು ಕರೆ ನೀಡುತ್ತದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.