ಸಿದ್ದೇಶ್ ತ್ಯಾಗಟೂರು
ಕುರಿ ಕಾಯೋ ಮುತ್ತಣ್ಣನ ಮುತ್ತಿನಂತ ಕಥೆ…!
ಈ ಬದುಕೇ ಹಾಗೆ..ಅದೊಂತರಾ ಕನ್ ಫ್ಯೂಷನ್… ಮನಸಿದ್ರೆ ಮಾತ್ರ ಸೆನ್ಸೇಷನ್…ಸಾಧಿಸಬೇಕು ಅನ್ನೋನಿಗೆ ಇದು ಸದಾ ಕಾಲವೂ ಟೆಮ್ಟೇಷನ್..ಅಂದ್ಹಾಗೆ,ಸಾಧಿಸೋಕೆ ನಾವು ರೆಡಿ ಇದ್ದೀವಿ.. ಆದ್ರೆ,ಅವಕಾಶ ಸಿಗ್ತಾ ಇಲ್ಲ ಅಂತಾ ಹೇಳೋರ ಸಂಖ್ಯೆನೇ ಜಾಸ್ತಿ…
ಫಾರ್ ಯುವರ್ ಕೈಂಡ್ ಇನ್ ಫರ್ಮೇಷನ್,ಈ ಸ್ಟೋರಿ ಓದಿ…
ಅವಕಾಶ ಯಾರಿಗೂ ಸಿಗೋಲ್ಲ..ನಾವೇ ಕ್ರಿಯೇಟ್ ಮಾಡ್ಕೋಬೇಕು ಅನ್ನೋ ಸತ್ಯ ನಿಮಗೂ ಅರಿವಾಗುತ್ತೆ..ಸಾಧನೆ ಮಾಡೋಕೆ ಡಿಗ್ರಿ,ಮಾಸ್ಟರ್ ಡಿಗ್ರಿ ಓದಬೇಕಿಲ್ಲ…ಡಾಕ್ಟರೇಟ್ ಪದವಿ ಗಳಿಸಬೇಕಿಲ್ಲ..
ಬದಲಿಗೆ ಕುರಿ,ಕುರಿ ಸಾಕಾಣೆ ಮಾಡಿ ಕೋಟಿಗಳ ಒಡೆಯನಾಗಬಹುದು,ಸಮಾಜಕ್ಕೆ ಆ ಮೂಲಕ ತನ್ನ ಸಾಧನೆಯ ಅನುಭವದ ಪಾಠ ಮಾಡಬಹುದು ಅನ್ನೋ ಸ್ಟೋರಿ ಇದು…ಹಂಡ್ರೆಡ್ ಪರ್ಸೆಂಟ್ ನಿಮ್ಮನ್ನ ಕನ್ ಫ್ಯೂಷನ್ ಮಾಡ್ತಾ ಇಲ್ಲ..ಇದು ಇನ್ಸ್ ಪಿರೇಷನ್ ಮಾಡೋ ರಿಯಲ್ ಸ್ಟೋರಿ…
ಆತ ಜಸ್ಟ್ 8 ರಿಂದ 9 ವರ್ಷದ ಪುಟ್ಟ ಹುಡುಗ..ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೋಕಿನ ನವಿಲೆಹಾಳು ಅನ್ನೋ ಕುಗ್ರಾಮದ ಕುರಿ ಕಾಯುವವರ ಮನೆಯಲ್ಲಿ ಹುಟ್ಟಿದ ಕೂಸು…ಆ ಕೂಸಿನ ಹೆಸರೇ ಮುತ್ತಣ್ಣ…ಬಡ ಕುಟುಂಬದಲ್ಲಿ ಹುಟ್ಟಿದ ಮುತ್ತಣ್ಣನಿಗೆ ಎಲ್ಲರಂತೆ ನಾನೂ ಶಾಲೆಗೆ ಹೋಗಿ ವಿದ್ಯಾವಂತನಾಗಬೇಕು ಎಂಬ ಮಹದಾಸೆ ಇತ್ತು..
ಬಳಿಯಲ್ಲಿತ್ತು ತಿನ್ನೋ ಬಡತನ ಮುತ್ತಣ್ಣನ ಆಸೆಗೆ ಕೊಳ್ಳಿ ಇಟ್ಟಿತ್ತು..ಯಾಕಂದ್ರೆ ಕುರಿ ಕಾಯೋದನ್ನ ಬಿಟ್ಟು ಆ ಕುಟುಂಬಕ್ಕೆ ಬೇರೆ ಉದ್ಯೋಗವಿರಲಿಲ್ಲ..ಹೀಗಾಗಿ ಮುತ್ತಣ್ಣನ ತಂದೆ ಬೀರಪ್ಪ ಹಾಗು ತಾಯಿ ಶಾರದಮ್ಮ ,ಮಗನಿಗೆ ಮನೆಯಲ್ಲಿರೋ ಒಂದೈವತ್ತು ಕುರಿಗಳನ್ನು ಮಂದೆ ಜೊತೆ ಹೋಗಿ ಮೇಯಿಸಲು ಕಳುಹಿಸುತ್ತಾರೆ.
ಆವತ್ತಿಗೆ ಮುತ್ತಣ್ಣನ ವಯಸ್ಸು ಕೇವಲ ಒಂಬತ್ತು ವರ್ಷ…ಆಡಿ ನಲಿಯುತ್ತಾ ಅ ಆ ಇ ಈ ಕಲಿಯಬೇಕಾದ ಪುಟ್ಟ ವಯಸ್ಸಿನಲ್ಲಿ ಮುತ್ತಣ್ಣ ಕುರಿಗಳನ್ನು ಹೊಡೆದುಕೊಂಡು ಚಿಕ್ಕೋಡಿಯಿಂದ ಹೊರಡುತ್ತಾನೆ…ಆವತ್ತು ಅವನ ಕೈಯಲ್ಲಿ ಇದ್ದದ್ದು ಎರಡೇ..ಒಂದು ಮಾರುದ್ದದ ಬಿದಿರಿನ ಕೋಲು..ಇನ್ನೊಂದು ಕುರಿ ಉಣ್ಣೆಯ ಕರಿ ಕಂಬಳಿ…
ಹೀಗೆ ಮುತ್ತಣ್ಣನ ಕುರಿಮಂದೆ,
ಧಾರವಾಡ ಹುಬ್ಬಳ್ಳಿ ಮೂಲಕ ಶಿವಮೊಗ್ಗದ ಮಲೆನಾಡಿಗೆ ಬರುತ್ತೆ..ಭದ್ರಾವತಿಯನ್ನು ಹಾದು ಬೀರೂರನ್ನ ತಲುಪುತ್ತೆ..ಹೀಗೆ ಯಾವ ಪ್ರದೇಶದಲ್ಲಿ ಕುರಿಗಳಿಗೆ ಹೆಚ್ಚು ಮೇವು ಸಿಗುತ್ತೋ ಅಲ್ಲಿ ತಿಂಗಳುಗಳ ಕಾಲ ಉಳಿದುಕೊಳ್ಳುತ್ತಾನೆ ಮುತ್ತಣ್ಣ…ಕುರಿಗಳು ಹಾಗು ಅವುಗಳ ಜೊತೆಗಿನ ಸಂಚಾರವೇ ಅವನ ಬದುಕು..ಕುರಿ ಮಂದೆಯ ಜೊತಗೆ ಮುತ್ತಣ್ಣ ಕೂಡ ಹೆಜ್ಜೆ ಹಾಕುತ್ತಾನೆ…
ಕಾಡು ಮೇಡುಗಳನ್ನ ಅಲೆಯುತ್ತಾನೆ..ಹಳ್ಳ ಕೊಳ್ಳಗಳ ನೀರು ಕುಡಿದು ದಿನ ಕಳೆಯುತ್ತಾನೆ…
ಇಲ್ಲಿ ನಿಮಗೆ ಹೇಳಬೇಕಾದ ಒಂದು ಅಚ್ಚರಿಯ ಸಂಗತಿ ಏನಂದ್ರೆ ಕುರಿಗಳನ್ನು ಹೊಡೆದುಕೊಂಡು “ಮಂದೆ” ಜೊತೆಯಲ್ಲಿ ಬಂದ ಮುತ್ತಣ್ಣ ಪುನಃ ಮನೆಗೆ ಮರಳಿದ್ದು 25 ವರ್ಷಗಳ ಬಳಿಕ…ಬರೋಬ್ಬರಿ ಹದಿನೇಳು ವರ್ಷಗಳ ಕಾಲ ಮುತ್ತಣ್ಣ ಕುರಿ ಮೇಯಿಸುತ್ತಾ ಇಡೀ ರಾಜ್ಯವನ್ನೇ ಸುತ್ತುತ್ತಾನೆ…!
ಇದರ ನಡುವೆ ನಿಮಗೆ ಹೇಳಲೇಬೇಕಾದ ಇನ್ನೊಂದು ಇಂಟೆರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಕುರಿ ಕಾಯೋ ಕಾಯಕ ಮಾಡಿದ್ರೂ ಮುತ್ತಣ್ಣನ ಕಲಿಕೆಯ ಆಸೆ ಹೋಗಿರಲಿಲ್ಲ…ಹೀಗಾಗಿ ಮನೆಯಿಂದ ಹೊರಡುವಾಗ ಮಂದೆ ಜೊತೆಯಲ್ಲಿದ್ದ ಹಿರಿಯರ ಬಳಿ ಕಾಡಿ ಬೇಡಿ ಒಂದು ಸ್ಲೇಟು ಪಡೆದುಕೊಂಡಿದ್ದ.
.ತಾನು ಹೋಗುವ ದಾರಿಯಲ್ಲಿ ಸಿಗುವಂತಾ ಶಾಲೆಗಳ ಮುಂದೆ ಕುರಿ ಮಂದೆಯನ್ನು ಕೂಡಿ ಹಾಕಿ ,ಅಲ್ಲಿನ ಶಾಲಾ ಮಕ್ಕಳ ಜೊತೆ ಸೇರುತ್ತಿದ್ದ …ಅವರಿಂದ ಅ ಆ ಇ ಈ ಬರೆಯೋದನ್ನ ಕಲಿಯುತ್ತಿದ್ದ…ಬಳಪ ಕಾಲಿಯಾದ್ರೆ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದ…ಹೀಗೆ ಶಾಲೆಗೆ ಹೋಗದೆ ವಿದ್ಯಾವಂತನೂ ಆದ…
ಹೀಗೆ ಅವನ ಪ್ರಯಾಣ ಸಾಗಿರುವಾಗಲೇ ಭದ್ರಾವತಿ ತಾಲ್ಲೂಕಿನ ಬಂಡಿಗುಡ್ಡದ ಫಾರೆಸ್ಟ್ ಇಲಾಖೆಯ ಒಂದು ಫಲಕ ಮುತ್ತಣ್ಣನ ಕಣ್ಣಿಗೆ ಬೀಳುತ್ತೆ..ಅದರಲ್ಲಿ” ಕಾಡೆಂದರೆ ನೀರು…ನೀರೆಂದರೆ ಅನ್ನ…ಅನ್ನವೆಂದರೆ ಪ್ರಾಣ” ಅಂತ ಬರೆದಿತ್ತು…ನಿಜ ಹೇಳಬೇಕಂದ್ರೆ ಅದು ಮುತ್ತಣ್ಣ ಸರಿಯಾಗಿ ಓದಿದ ಮೊದಲ ಅಕ್ಷರಗಳಾಗಿತ್ತು..ಹೀಗಾಗಿ ಆ ಪದ ಅವನ ಮನಸಿನಲ್ಲಿ ಅಚ್ಚಳಿಯದೇ ಉಳಿದಿತ್ತು…ಅದರ ಜೊತೆ ಜೊತೆಯಲ್ಲೇ ಹಸಿರು ಪ್ರೀತಿ ಅವನನ್ನು ಆವರಿಸಿಕೊಂಡಿತ್ತು.
.ಅದು ಕೃಷಿ ಕಾಯಕದೆಡೆ ಸೆಳೆತವಾಗಿತ್ತು…
ವಿಷ್ಯ ಏನಪ್ಪ ಅಂದ್ರೆ ತನ್ನ ಒಂಬತ್ತನೇ ವಯಸ್ಸಿಗೆ ಮನೆ ಬಿಟ್ಟ ಮುತ್ತಣ್ಣನ ಬಳಿ ಇದ್ದದ್ದು ಕೇವಲ ಐವತ್ತು ಕುರಿ…ಹದಿನೇಳು ವರ್ಷದ ಬಳಿಕ ಆತನ ಬಳಿಯಲ್ಲಿ ಇದ್ದ ಕುರಿಗಳ ಸಂಖ್ಯೆ ಮೂರು ಸಾವಿರ…!
ಹೀಗೆ ಕುರಿ ಮೇಯಿಸುತ್ತಾ ಹದಿನೇಳು ವರ್ಷಗಳ ಕಾಲ ಅಲೆಮಾರಿ ಜೀವನ ಸಾಗಿಸಿದ ಮುತ್ತಣ್ಣನಿಗೆ ಮದುವೆಯೂ ಆಗುತ್ತೆ.
ಪತ್ನಿಯ ಸಂಗಡ ಮತ್ತೆ ಕುರಿ ಕಾಯೋ ಕಾಯಕ ಮುಂದುವರೆಸಿ ಅದೊಂದು ದಿನ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ಮಂತಗಿ ಅನ್ನೋ ಗ್ರಾಮದ ಬಳಿ ಬರುತ್ತಾನೆ..ಅದೇನು ದುರಂತವೋ ಗೊತ್ತಿಲ್ಲ..ಅದೊಂದು ದಿನ ಇದ್ದಕ್ಕಿದ್ದಂತೆ ಮುತ್ತಣ್ಣನ ಮುನ್ನೂರಕ್ಕು ಹೆಚ್ಚು ಕುರಿಗಳು ಸಾವನ್ನಪ್ಪುತ್ತವೆ.
ಕಣ್ಣ ಮುಂದೆಯೇ ತಾನು ಸಾಕಿ ಸಲಹಿದ ಕುರಿಗಳು ಸಾವನ್ನಪ್ಪಿದ್ದು ಮುತ್ತಣ್ಣನಿಗೆ ನೋಡಲಾಗಲಿಲ್ಲ..ಆಗಲೇ ಮುತ್ತಣ್ಣನಿಗೆ ಅಲೆಮಾರಿ ಜೀವನ ಇನ್ನು ಮುಂದೆ ಕಷ್ಟ ಅನ್ನೋ ಅರಿವಾಗುತ್ತೆ..ಆ ಕೂಡಲೇ ತನ್ನ ಬಳಿ ಇದ್ದ ಸಾವಿರಾರು ಕುರಿಗಳಲ್ಲಿ ಐನೂರು ಕುರಿಗಳನ್ನು ಮಾರಾಟ ಮಾಡುತ್ತಾನೆ.
ಅದರಿಂದ ಬಂದ ಹಣದಲ್ಲಿ ಮಂತಗಿ ಗ್ರಾಮದಲ್ಲಿ 10 ಎಕರೆ ಭೂಮಿಯನ್ನ ಖರೀದಿ ಮಾಡುತ್ತಾನೆ…ಆ ಭೂಮಿಯಲ್ಲಿ ಕೃಷಿ ಮಾಡಿ ಮಹತ್ತರವಾದದ್ದು ಏನನ್ನೋ ಸಾಧಿಸೋ ಕನಸು ಮುತ್ತಣ್ಣನದಾಗಿತ್ತು.
ಯಾಕಂದ್ರೆ,ಮುತ್ತಣ್ಣ ಹೆಚ್ಚು ಸಂಚಾರ ಮಾಡಿದ್ದು ಮಲೆನಾಡು ಭಾಗದಲ್ಲಿ..ಅಲ್ಲಿನ ಹಸಿರನುಟ್ಟು ಸದಾ ಕಂಗೊಳಿಸೋ ಹೊಲ ಗದ್ದೆ ತೋಟಗಳು ಅವರನ್ನ ಆಕರ್ಷಿಸಿದ್ದವು..ಬದುಕಿದರೆ ಭೂಮ್ತಾಯಿ ಒಡಲಲ್ಲಿ ಬದುಕಬೇಕು ಅನ್ನೋ ಆಸೆ ಹುಟ್ಟಿತ್ತು..ಹೀಗಾಗಿ ಕಡಿಮೆ ಬೆಲೆಯ ಬರಡು ಭೂಮಿಯನ್ನ ಖರೀದಿ ಮಾಡಿ ಅಲ್ಲಿ ಕೃಷಿ
ಕಾಯಕ ಆರಂಭಿಸುತ್ತಾರೆ…
ವಿಷ್ಯ ಏನಪ್ಪ ಅಂದ್ರೆ ಮುತ್ತಣ್ಣ ಜಮೀನು ಖರೀದಿಸಿದಾಗ ಕಂಡ ಕಂಡವರೆಲ್ಲಾ ನೋಡಿ ನಕ್ಕಿದ್ದರು..ಹಾಸ್ಯ ಮಾಡಿದ್ದರು..ಅದಕ್ಕೆ ಎರಡು ಕಾರಣಗಳಿದ್ದವು..ಒಂದು ಮುತ್ತಣ್ಣ ಖರೀದಿಸಿದ ಭೂಮಿ ಬರಡಾಗಿತ್ತು…ಅಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂದು ಜನ ಕೈ ಚೆಲ್ಲಿದ್ದರು..
.ಇನ್ನೊಂದು ಕುರಿ ಕಾಯೋನಿಗೆ ಭೂಮಿ ಒಲಿಯೋದಿಲ್ಲ ಅನ್ನೋದು ಕೆಲವರ ನಂಬಿಕೆಯಾಗಿತ್ತು…ಆದ್ರೆ ,ಛಲಬಿಡದ ಮುತ್ತಣ್ಣ ಬರಡು ಭೂಮಿಯಲ್ಲಿ ಮುತ್ತು ಬೆಳೆಯುತ್ತೇನೆ ಅನ್ನೋ ವಿಶ್ವಾಸದಲ್ಲಿ ಭತ್ತ ನಾಟಿ ಮಾಡುತ್ತಾರೆ…ಆದ್ರೆ, ಜನ ಹೇಳಿದ್ದೇ ನಿಜವಾಗುತ್ತೆ..ಆರಂಭದಲ್ಲಿ ಮುತ್ತಣ್ಣ ಸಾಕಷ್ಟು ನಷ್ಟ ಅನುಭವಿಸುತ್ತಾರೆ.
ನಷ್ಟವಾಯ್ತು ಅಂತ ಅವರು ಕೃಷಿಯನ್ನ ಬಿಡಲಿಲ್ಲ…ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನುತ್ತಾ ಮತ್ತೆ ಕೃಷಿಯನ್ನ ಆರಂಭಿಸುತ್ತಾರೆ..ಮುತ್ತಣ್ಣನ ಶ್ರಮ,ಅವರ ಆಸಕ್ತಿ ಹಾಗು ಅವರ ಸಾಧಿಸುವ ಛಲದ ಮುಂದೆ ಭೂಮಿತಾಯಿ ಕೂಡ ಕರಗಿ ಬಿಡ್ತಾಳೆ…ನೋಡ ನೋಡುತ್ತಲೇ ಬರಡು ಭೂಮಿಯಲ್ಲಿ ಬಂಗಾರದ ಪೈರು ಬೆಳೆದು ನಿಲ್ಲುತ್ತೆ…
ಅದು ಎಷ್ಟರ ಮಟ್ಟಿಗೆ ಅಂದ್ರೆ ಮುತ್ತಣ್ಣ ತಮ್ಮ ಜಮೀನಿನ ಒಂದು ಎಕರೆ ಪ್ರದೇಶದಲ್ಲಿ ಶ್ರೀ ಪದ್ಧತಿಯಲ್ಲಿ 44 ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ..ಇದು ಕರ್ನಾಟಕದಲ್ಲೇ ದಾಖಲೆಯಾಗುತ್ತೆ.
ಅಂದ್ಹಾಗೆ ಮುತ್ತಣ್ಣ ಕೃಷಿ ಕಾಯಕ ಆರಂಭಿಸಿದ್ದು 1999 ರಲ್ಲಿ …ಇಲ್ಲೊಂದು ಕುತೂಹಲಕಾರಿ ಸಂಗತಿ ಅಡಗಿದೆ…ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಮುತ್ತಣ್ಣನಿಗೆ ಒಂದು ಆಸೆ ಇತ್ತು..ಅದೇನಂದ್ರೆ ನಾನು ಕಷ್ಟ ಪಟ್ಟು ಅಕ್ಷರ ಕಲಿತೆ …ಅದ್ರೆ ನನ್ನ ಮಕ್ಕಳಿಗೆ ಹಾಗಾಗಬಾರದು..ಅವರು ವಿದ್ಯಾವಂತರಾಗಬೇಕು …
ಅದಕ್ಕಾಗಿಯಾದ್ರೂ ನಾನು ಒಂದಡೆ ನೆಲೆ ನಿಲ್ಲಬೇಕು ಅನ್ನೋ ಆಲೋಚನೆ ಇತ್ತು..ಹಾಗಾಗಿ ಮಂತಗಿಯಲ್ಲಿ ಭುತಾಯಿಯ ಸೇವೆಗೆ ಇಳಿಯುತ್ತಾರೆ..ಕಷ್ಟ ಪಟ್ಡು ದುಡಿಯುತ್ತಾರೆ..ಇಂದು ಮುತ್ತಣ್ಣನವರ ಮೂವರು ಮಕ್ಕಳು ಪ್ರತಿಷ್ಠಿತ ರೆಸಿಡೆನ್ಸಿಯಲ್ ಸ್ಕೂಲಿನಲ್ಲಿ ಓದುತ್ತಿದ್ದಾರೆ..
ಕೃಷಿ ಜೊತೆಗೆ ಕುರಿಕಾಯೋ ಕುಲಕಸುಬನ್ನು ಮರೆಯದ ಮುತ್ತಣ್ಣ ಕುರಿಮಂದೆಯನ್ನು ಜೊತೆಯಲ್ಲೇ ಇಟ್ಟುಕೊಳ್ಳುತ್ತಾರೆ…ಕುರಿಗಳ ಜೊತೆ ಅವರಿಗೆ ಅಂಥಾದ್ದೊಂದು ಆತ್ಮೀಯ ಭಾವವಿತ್ತು..
ಭಾವನಾತ್ಮಕ ಸಂಬಂಧವಿತ್ತು..ಹೀಗಾಗಿ ಆ ಕುರಿಗಳನ್ನ ಸಾಕೋ ಜವಾಬ್ದಾರಿಯನ್ನ ಸಹೋದರನಿಗೆ ವಹಿಸಿಕೊಡ್ತಾರೆ…ನಿಜ ಹೇಳಬೇಕಂದ್ರೆ ಇವತ್ತು ಕುರಿ ಸಾಕಾಣಿಕೆಯಲ್ಲಿ ಕೃಷಿಗಿಂತಲೂ ಅಧಿಕ ಲಾಭವಿದೆ.ಮನೆ ಪಕ್ಕದ ಕೊಟ್ಟಿಗೆಯಲ್ಲಿ ನೂರು ಕುರಿ ಇದೆ ಅಂದ್ರೆ ,ಮನೆ ಪಕ್ಕದಲ್ಲಿ ಬ್ಯಾಂಕ್ ಇದೆ ಅಂತಾನೇ ಅರ್ಥ..ಹಿರಿಯರು ಹೇಳಿದಂತೆ,ಕುರಿಗಳು ಅಂದ್ರೆ ನಡೆದಾಡೋ ಬ್ಯಾಂಕ್ ಗಳು…
ಮುತ್ತಣ್ಣನ ಜರ್ನಿಯಲ್ಲಿ ತರೀಕೆರೆ ಸುತ್ತಮುತ್ತ ಅಲ್ಲಿನ ತೆಂಗು ಹಾಗು ಅಡಿಕೆ ತೋಟಗಳನ್ನ ಕಂಡಿದ್ದ..
ತನ್ನ ಜಮೀನಿನಲ್ಲೂ ಅಂತದ್ದೇ ತೋಟ ಕಟ್ಟಬೇಕು ಅನ್ನೋ ಕನಸಿನೊಂದಿಗೆ ಕೃಷಿ ಕಾಯಕ ಆರಂಭಿಸಿದ್ದ…ನೋಡ ನೋಡುತ್ತಲೇ ಆ ಜಮೀನಿನಲ್ಲಿ ತೆಂಗಿನ ಮರಗಳು ಬೆಳೆದು ನಿಂತವು…ಅಡಿಕೆ ಮರಗಳು ತೊನೆದಾಡಿದವು..
ಹತ್ತು ಎಕರೆ ಇದ್ದ ತೋಟ ಇಪ್ಪತ್ತಾಯ್ತು..ಇಪ್ಪತ್ತು ನಲವತ್ತಾಯ್ತು…ಕೊನೆಗೊಂದು ದಿನ ಮುತ್ತಣ್ಣ ಫಾರ್ಮ್ ಅನ್ನೋ ಬೋರ್ಡ್ ಕೂಡ ಬಂತು…
ಕೃಷಿಯಲ್ಲಿ ಮುತ್ತಣ್ಣ ಯಾವ ಪರಿ ಯಶಸ್ಸು ಕಂಡರು ಅಂದ್ರೆ,ಒಂದು ಕಾಲಕ್ಕೆ ಹಾಸ್ಯ ಮಾಡಿದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡರು…
ಕೊನೆಗೆ ಮುತ್ತಣ್ಣನ ತೋಟಕ್ಕೆ ಕೂಲಿ ಮಾಡಲು ಬಂದರು..ಮುತ್ತಣ್ಣನ ಸಾಧನೆಯ ಕಥೆ ನೋಡಿ ಬೆಕ್ಕಸ ಬೆರಗಾದರು…ಯಾಕಂದ್ರೆ ಕುರಿ ಕಾಯೋ ಮುತ್ತಣ್ಣ ಒಂದು ವರ್ಷಕ್ಕೆ ಕೇವಲ ಕೃಷಿಯಿಂದಲೇ 1 ಕೋಟಿಗೂ ಅಧಿಕ ಲಾಭ ಗಳಿಸುತ್ತಿದ್ದಾರೆ.
ನೂರಾರು ಆಳು ಕಾಳು,ತೋಟದ ಮೈಂಟೆನೆನ್ಸ್ ಖರ್ಚು ವೆಚ್ಚ ಎಲ್ಲವನ್ನೂ ಕಳೆದು ಒಂದು ಕೋಟಿಗೂ ಹೆಚ್ಚು ಹಣ ಗಳಿಸುತ್ತಿದ್ದಾರೆ ಅಂದರೆ ಅದೊಂದು ಮಹತ್ತರವಾದ ಸಾಧನೆಯಲ್ಲವೇ…
ಶಾಲೆಗೆ ಹೋಗಲಿಲ್ಲ…ಗುರುಗಳ ಬಳಿ ಅಕ್ಷರ ಕಲಿಯಲಿಲ್ಲ…ಸಮಾಜದ ಜೊತೆ ಬೆರೆಯಲಿಲ್ಲ…ಆದ್ರೆ ಕುರಿ ಕಾಯೋ ಮುತ್ತಣ್ಣ ಮಾಡಿದ ಸಾಧನೆ ಇಡೀ ಸಮಾಜಕ್ಕೆ ಮಾದರಿಯಾಗಿದೆ..ಅವರ ಈ ಸಾಧನೆ ಎಲ್ಲೆಲ್ಲಿ ಪಸರಿಸುತ್ತೆ ಅಂದ್ರೆ ಸ್ವತಃ ನಮ್ಮ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದ್ರೆ 2013 ರಲ್ಲಿ “ವೈಬ್ರೆಂಟ್ ಗುಜರಾತ್” ಕಾರ್ಯಕ್ರಮಕ್ಕೆ ಮುತ್ತಣ್ಣನನ್ನು ಕರೆಸಿಕೊಂಡು ಸನ್ಮಾನ ಮಾಡಿದ್ದರು.
ಮುತ್ತಣ್ಣನ ಕೃಷಿ ಸಾಧನೆಗೆ ಶಹಬ್ಬಾಸ್ ಮುತ್ತಣ್ಣ ಅಂತ ಬೆನ್ನು ತಟ್ಟಿದ್ದಾರೆ…ಮೋದಿಯೊಬ್ಬರೇ ಅಲ್ಲ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಾಧನೆ ಗುರುತಿಸಿ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮುತ್ತಣ್ಣನ ಯಶೋಗಾಥೆಗೆ ಮರುಳಾದವರೇ ಆಗಿದ್ದಾರೆ…ಹೀಗೆ ಮುತ್ತಣ್ಣನಿಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ..ಅದರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿಕ ಹಾಗು ಸುಕೋ ಬ್ಯಾಂಕ್ ನೀಡೋ ಸುಕೃತ ಪ್ರಶಸ್ತಿಯೂ ಲಭಿಸಿದೆ.
ಅದೆಷ್ಟೇ ಸನ್ಮಾನ ಪುರಸ್ಕಾರಗಳು ಬಂದರೂ ಮುತ್ತಣ್ಣ ಹಿರಿ ಹಿರಿ ಹಿಗ್ಗಲಿಲ್ಲ…ಕರಿ ಕಂಬಳಿ ಹೆಗಲಮೇಲೆ ಹಾಕಿಕೊಂಡು ಕುರಿ ಕಾಯೋದನ್ನ ನಿಲ್ಲಿಸಲಿಲ್ಲ…ತಾನು ನಂಬಿದ ಭೂತಾಯ ಮಡಿಲಲ್ಲಿ ಕೃಷಿ ಕಾಯಕ ಮಾಡೋದನ್ನ ಮರೆಯಲಿಲ್ಲ…
ಯಾಕಂದ್ರೆ ಪ್ರಶಸ್ತಿ ಸಮಾರಂಭಗಳ ಗದ್ದಲ ಮುತ್ತಣ್ಣನಿಗೆ ಬೇಕಿಲ್ಲ..ಕಾಯಕವೇ ಕೈಲಾಸ ಅನ್ನೋ ಸಿದ್ದಾಂತ ಅವರದ್ದು…ಅಷ್ಟಕ್ಕೂ ಕೋಟಿ ಕೋಟಿ ಲಾಭ ಗಳಿಸೋ ಮುತ್ತಣ್ಣನ ಕೃಷಿ ಭೂಮಿಯಲ್ಲಿ ಏನೇನಿದೆ ಅನ್ನೋ ಕುತೂಹಲವೆ…ಹೌದು ಕುರಿ ಕಾಯುತ್ತಾ ಕೃಷಿ ಆರಂಭಿಸಿದ ಮುತ್ತಣ್ಣ ಇಂದು ಒಂದು ಕೃಷಿ ವಿಶ್ವ ವಿದ್ಯಾಲಯವನ್ನೇ ನಿರ್ಮಾಣ ಮಾಡಿದ್ದಾರೆ…!
ಅವರ ಸಾಧನೆ ನೋಡಿ ತಿಳಿಯೋಕೆ ನಿತ್ಯ ನೂರಾರು ಮಂದಿ ಬರುತ್ತಾರೆ..ಯಾಕಂದ್ರೆ ಅದೊಂದು ಸಮಗ್ರ ಕೃಷಿ ಪರಿಕಲ್ಪನೆಯ ಪರಿಪೂರ್ಣ ಪ್ರದೇಶ…ಮುತ್ತಣ್ಣನ 40 ಎಕರೆಯಲ್ಲಿ ಏನುಂಟು ಏನಿಲ್ಲ..
ಮಾವು,ಬೇವು,ಹಲಸು,ಚಿಕ್ಕು,ಅಡಿಕೆ,ತೆಂಗು,
ಬಾಳೆ,ಹೀಗೆ ತೋಟಗಾರಿಕಾ ಬೆಳೆಗಳು ನಳ ನಳಿಸುತ್ತಿವೆ..ಒಂದಿಂಚೂ ಜಾಗವನ್ನ ವ್ಯರ್ಥ ಮಾಡದೆ ಬದುಗಳ ಮೇಲೆ ಸಾಗುವಾನಿ ಮರಗಳ ಸಾಲು,
ನಿಂಬೆ,ಕರಿಬೇವು ಗಿಡಗಳು ಇದರ ಜೊತೆ ಜೋಳ,ಉದ್ದು,ಹಲಸಂದೆ,ಶೇಂಗಾ,ಸೂರ್ಯಕಾಂತಿ, ಮೆಣಸು ಸೇರಿದಂತೆ ಎಲ್ಲಾ ರೀತಿಯ ತರಕಾರಿಗಳು ಕೂಡ ಮುತ್ತಣ್ಣನ ತೋಟದಲ್ಲಿ ಸಿಗುತ್ತವೆ…ಮಳೆ ನೀರು ಸಂಗ್ರಹಕ್ಕೆ ಪುಟ್ಟ ಕೆರೆ ನಿರ್ಮಾಣ ಮಾಡಿ ಅಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ..ಮುತ್ತಣ್ಣನದ್ದು ಸಂಪೂರ್ಣ ಸಾವಯವ ಕೃಷಿ…ಒಂದೇ ಒಂದು ಹಿಡಿ ರಾಸಾಯನಿಕ ಗೊಬ್ಬರ ಬಳಸೋದಿಲ್ಲ..ಕೀಟನಾಶಕ ಉಪಯೋಗಿಸೋದಿಲ್ಲ…
ಅದಕ್ಕಾಗಿಯೇ ಅವರು ದನ ಕರುಗಳನ್ನು ಕಟ್ಟಿಕೊಂಡು ಸಾವಯವ ಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ..ಎಮ್ಮೆ ದನಗಳ ಗಂಜಲವನ್ನೇ ಜೀವಾಂಮೃತ ಮಾಡಿ ಬೆಳೆಗೆ ಸಿಂಪಡಿಸುತ್ತಿದ್ದಾರೆ…ಆ ಕಾರಣಕ್ಕೇ ಮುತ್ತಣ್ಣನ ಇಡೀ ಭೂಮಿ ಎರೆಹುಳುಗಳಿಂದ ಸಂಮೃದ್ಧಿಯಾಗಿದೆ…
ಇನ್ನು ಇದಷ್ಟೇ ಅಲ್ಲದೆ ನಾಟಿ ಕೋಳಿ ಸಾಕಾಣೆ,ಜೇನು ಸಾಕಾಣೆ,ನರ್ಸರಿ,ಸೇರಿದಂತೆ ಇನ್ನೂ ಹತ್ತು ಹಲವು ವೈಶಿಷ್ಟ್ಯತೆಗಳನ್ನ ಇಲ್ಲಿ ಕಾಣಬಹುದಾಗಿದೆ…
ನೀವು ಅಚ್ಚರಿ ಪಡೋ ಒಂದು ವಿಷ್ಯ ಏನು ಅಂದ್ರೆ ಮುತ್ತಣ್ಣನ ತೋಟದಲ್ಲಿರೋ ಪ್ರತಿ ಗಿಡ ಮರಗಳು,ಅಲ್ಲಿರೋ ಪ್ರಾಣಿ ಪಕ್ಷಿಗಳು ಸದಾ ಕಾಲವೂ ಸಂಗೀತ ಕೇಳುವಂತೆ ಮಾಡಲಾಗಿದೆ..ಅಲ್ಲಲ್ಲಿ ಸ್ಪೀಕರ್ ಬಾಕ್ಸ್ ಗಳನ್ನು ಇಟ್ಟು ಸಂಗೀತ ಹಾಕೋ ಮೂಲಕ ಸಸ್ಯಗಳಿಗೂ ಜೀವವಿದೆ,ಅವುಗಳು ಸಂಗೀತ ಕೇಳಿ ಸಂಮೃದ್ಧಿಯಿಂದ ಬೆಳೆಯುತ್ತವೆ ಅನ್ನೋ ಕಾನ್ಸೆಪ್ಟ್ ಮುತ್ತಣ್ಣನದ್ದು…
ನಿತ್ಯ ತನ್ನ ತೋಟ ನೋಡಲು ಬರೋ ನೂರಾರು ಕೃಷಿ ಆಸಕ್ತರು,ರೈತರಿಗೆ ಮುತ್ತಣ್ಣ ತನ್ನ ಅನುಭವದ ಕೃಷಿ ಪಾಠ ಮಾಡುತ್ತಾ..ಹಸಿದು ಬಂದವರಿಗೆ ಅನ್ನ ದಾಸೋಹ ನೀಡುತ್ತಾ..ನೀವೂ ಕೃಷಿಯಲ್ಲಿ ಸಾಧನೆ ಮಾಡಿ ಎಂದು ಹುರಿದುಂಬಿಸುತ್ತಾರೆ…
ಈಗ ಹೇಳಿ…ಇಂಥಾದ್ದೊಂದು ಸಾಧನೆ ಮಾಡೋಕೆ ಮುತ್ತಣ್ಣನಿಗೆ ಯಾವ ಅವಕಾಶ ಸಿಕ್ಕಿತ್ತು..ಯಾರು ಅವಕಾಶ ಮಾಡಿಕೊಟ್ರು..ಯಾರೂ
ಕೊಟ್ಟಿಲ್ಲ..ಮುತ್ತಣ್ಣನಿಗೆ ಮುತ್ತಣ್ಣನೇ ಇನ್ಸ್ ಪಿರೇಷನ್…ಅವರ ಕನಸೇ ಅವರಿಗೆ ಸ್ಪೂರ್ತಿ…ಸಾಧಿಸಬೇಕು ಅನ್ನೋ ಛಲ..ಭೂಮಿ ತಾಯಿ ಮೇಲಿನ ಪ್ರೀತಿ,ನಂಬಿಕೆ ಹಾಗು ಅವರ ಪರಿಶ್ರಮ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳಸಿದೆ…ಈ ಭೂಮಿಯ ಮೇಲೆ ಯಾರು ಬೇಕಿದ್ರೂ ಮೋಸ ಮಾಡಬಹುದು..ಆದ್ರೆ ಭೂಮಿ ತಾಯಿ ಎಂದಿಗೂ ಮೋಸ ಮಾಡೋಲ್ಲ ಅನ್ನೋದು ಮುತ್ತಿನಂತ ಮುತ್ತಣ್ಣನ ಕಟ್ಟ ಕಡೇ ಮಾತು…
….ಮುತ್ತಣ್ಣನಿಗೆ ಒಂದು ಸಲಾಂ…