Friday, December 20, 2024
Google search engine
HomeUncategorizedಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ

ಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ

‘ವಿಧಾನ್ ಸೆ ಸಮಾಧಾನ್’ ಕಾನೂನು ಅರಿವು ಕಾರ್ಯಕ್ರಮ

(ಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಪ್ರಧಾನ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ)

(ವಿಶಾಖಾ ಗೈಡ್’ಲೈನ್ಸ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು ; ಪ್ರಧಾನ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ)

ಚಿಕ್ಕನಾಯಕನಹಳ್ಳಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನುಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ವಕೀಲರ ಸಂಘದ ಸಹಯೋಗದೊಂದಿಗೆ, ಶುಕ್ರವಾರ ಬೆಳಗ್ಗೆ ಪಟ್ಟಣದ ತೀನಂಶ್ರೀ ಭವನದಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವ ಸಲುವಾಗಿ ‌’ವಿಧಾನ್ ಸೆ ಸಮಾಧಾನ್’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದಂತಹ ಶ್ರೀಮತಿ ನೂರುನ್ನೀಸ’ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ನಿತ್ಯ ಆಗುತ್ತಿರುವ ದಾಳಿ-ದೌರ್ಜನ್ಯಗಳನ್ನು ಪುರಾಣದ ಪಾತ್ರ, ಪ್ರಸಂಗ ಮತ್ತು ಕಥನಗಳನ್ನು ಉದಾಹರಿಸುತ್ತಾ ವಿವರಿಸಿದ ಶ್ರೀಮತಿ ನೂರುನ್ನೀಸಾ’ರವರು, ರಾವಣನ ಸೀತಾಪಹರಣ ಪ್ರಸಂಗವನ್ನು ಸಭೆಗೆ ನೆನಪಿಸಿ, ಅದರ ಮೂಲಕ ಕೆಡುಕು ಹೇಗೆ ಕೇಡಿನಲ್ಲೇ ಕೊನೆಯಾಗುತ್ತದೆ ಎಂದು ವಿವರಿಸಿದರು.

ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಪ್ರಸಂಗಗಳನ್ನು ಸೋದಾಹರಿಸಿ, ಪ್ರಸ್ತುತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಇರುವ ಸಾಮ್ಯತೆಯನ್ನು ಅವರು ಬಿಡಿಸಿ ತಿಳಿಸಿದರು.

ದಿಟ್ಟೆ ಭಂವರಿದೇವಿ ಮತ್ತು ವಿಶಾಖಾ ಗೈಡ್’ಲೈನ್ಸ್ ::

2013’ರಲ್ಲಿ ಜಾರಿಗೆ ಬಂದ ‘ಕೆಲಸದ ವೇಳೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ’ಯ ಬಗ್ಗೆ ಮತ್ತು ಅಂಥದೊಂದು ಚಾರಿತ್ರಿಕ ಕಾಯ್ದೆ (Sexual haraasment of Women at work place) ಬಗ್ಗೆ ಶ್ರೀಮತಿ ನೂರುನ್ನೀಸಾ’ರವರು ವಿವರಿಸಿದರು. ಮತ್ತೆ ಇಂತಹ ಈ ಚಾರಿತ್ರಿಕವಾದ ಕಾಯ್ದೆ ಜಾರಿಗೆ ಬರಲು ಕಾರಣಳಾದ ರಾಜಸ್ಥಾನದ ಭಂವರಿದೇವಿಯವರ ಹೋರಾಟ ಮತ್ತು ಹುತಾತ್ಮತೆಯ ಬಗ್ಗೆ ವಿಸ್ತಾರವಾಗಿ ಸಭೆಗೆ ತಿಳಿಸಿದರು.

70’ರ ದಶಕದಲ್ಲಿ ರಾಜಸ್ಥಾನದ ಗುಜ್ಜರರಲ್ಲಿ ಇದ್ದ ಬಾಲ್ಯವಿವಾಹ ಪದ್ಧತಿ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಅಲ್ಲಿನ ಸಾಮಾಜಿಕ ಕಾರ್ಯಕರ್ತೆ ಮತ್ತು ದಿಟ್ಟ ಹೋರಾಟಗಾರ್ತಿ ಭಂವರಿದೇವಿ ತನ್ನ ಸ್ನೇಹಿತೆರೊಡನೆ ಸೇರಿಕೊಂಡು ಹಳ್ಳಳ್ಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹಗಳನ್ನು ತಡರಯುತ್ತಿದ್ದಳು. ಬಾಲ್ಯ ವಿವಾಹಗಳನ್ನು ತಡೆಯಲಿಕ್ಕಾಗಿಯೇ ‘ವಿಶಾಕಾ ಹೆಸರಿನ ಸಂಘಟನೆ’ಯನ್ನೇ ಕಟ್ಟಿಕೊಂಡು ಪುರುಷಪ್ರಧಾನ ಶೋಷಣೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟ ನಡೆಸಿದ್ದಳು. ಆಕೆಯ ಹೋರಾಟವನ್ನು ಹತ್ತಿಕ್ಕಲಾಗದ ಪ್ರಭಾವಿ ಗುಜ್ಜರರು, ಕಡೆಗೊಂದು ದಿನ ಆಕೆಯ ಗಂಡನನ್ನು ಕಟ್ಟಿಹಾಕಿ ಆತನ ಎದುರಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಿಂಸಿಸಿದ್ದರು. ನಂತರ, ಹೋರಾಟಗಾರ್ತಿ ಭಂವರಿದೇವಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ದಾಖಲಾಯಿತು. ಆದರೆ, ಸಮರ್ಪಕವಾದ ತನಿಖೆ ನಡೆಸದ ಪೊಲೀಸ್ ವ್ಯವಸ್ಥೆ ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ಪ್ರತಿಕೂಲ ಸಾಕ್ಷ್ಯಾಧಾರಗಳ ಕಾರಣದಿಂದಾಗಿ ಆಪಾದಿತರೆಲ್ಲರೂ ಆರೋಪಮುಕ್ತರಾಗಿ ಹೊರಬಂದರು. ಆಗ, ಭಂವರಿದೇವಿ ಕಟ್ಟಿಕೊಂಡಿದ್ದ ವಿಶಾಖಾ ಸಂಘದ ಸ್ನೇಹಿತೆಯರು ಮತ್ತು ದೇಶದ ಇತರ ಭಾಗಗಳ ಸಾಮಾಜಿಕ ಹೋರಾಟಗಾರರ ಬೆಂಬಲದಿಂದ ಪ್ರಕರಣದ ಸೂಕ್ತ ಮತ್ತು ಸಮಗ್ರ ತನಿಖೆಗಾಗಿ ಸುಪ್ರೀಂ ಕೋರ್ಟ್’ನಲ್ಲಿ ಮನವಿ ಸಲ್ಲಿಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮತ್ತೆ ತನಿಖೆ ನಡೆಸಿ, ಕಡೆಗೆ ಆಪಾದಿತರೆಲ್ಲರ ಅಪರಾಧ ಸಾಬೀತಾದ ಕಾರಣದಿಂದ ಅವರೆಲ್ಲರಿಗೂ ಶಿಕ್ಷೆಯಾಯಿತು. ಈ ತೀರ್ಪಿನಲ್ಲಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು, ಸುಪ್ರೀಂ ಕೋರ್ಟ್ ವಿಶಾಖಾ ಗೈಡ್’ಲೈನ್ಸ್ ನಿರ್ದೇಶನಗಳನ್ನು ನೀಡಿತ್ತು. ಅದು 2013’ರಲ್ಲಿ ಕಾಯ್ದೆಯಾಗಿ ಜಾರಿಯಾಯಿತು.

ಸುಪ್ರೀಂಕೋರ್ಟ್ ನಿರ್ದೇಶಿಸಿದ ‘ವಿಶಾಖಾ ಗೈಡ್’ಲೈನ್ಸ್’ 2013’ರ ಕಾಯ್ದೆ ಪ್ರಕಾರ, 10 ಮಂದಿ’ಗಿಂತ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿರುವ ಯಾವುದೇ ಸ್ಥಳದಲ್ಲಿ,
ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರನ್ನು ಲೈಂಗಿಕ ಕಿರುಕುಳದಿಂದ ಪಾರುಮಾಡಲು ಆಂತರಿಕ ಕಮಿಟಿ ಹಾಗೂ ಭಯಾ ಕಮಿಟಿಗಳನ್ನು ಅಲ್ಲಿನ ಮಾಲೀಕ ಅಥವಾ ಮೇಲಿನ ಅಧಿಕಾರಿ ನೇಮಿಸಿಕೊಳ್ಳಬೇಕು.

ಯಾವುದೇ ಸಾರ್ವಜನಿಕ ಕೆಲಸದ ಜಾಗದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ವಿಶಾಖಾ ಗೈಡ್’ಲೈನ್ಸ್ ಪ್ರಬಲವಾದ ರಕ್ಷಾಕವಚದಂತಿದೆ. ಮಹಿಳೆಯರು ಇದರ ಬಗ್ಗೆ ತಿಳಿದುಕೊಂಡು, ಪ್ರಶ್ನಿಸುವಂತಾಗಬೇಕು ಎಂದರು.

ಹೆಣ್ಣುಮಕ್ಕಳ ಬಟ್ಟೆ-ಬರೆ, ಕತ್ತಲಾಗುವ ಮೊದಲು ಮನೆ ಸೇರಿಬಿಡುವ ಕಟ್ಟಳೆ, ಆಕೆಯ ಸಾರ್ವಜನಿಕ ವರ್ತನೆಗಳಿಗೆ ಸಂಬಂಧಿಸಿದ ನಿರ್ಬಂಧನೆಗಳು ಸೇರಿದಂತೆ ಹೆಣ್ಣುಮಕ್ಕಳಿಗೆ ಮಾತ್ರ ಇರುವ ಇತ್ಯಾದಿ ಕಟ್ಟುಕಟ್ಟಳೆಗಳನ್ನು ಪ್ರಶ್ನಿಸಿದ ಶ್ರೀಮತಿ ನೂರುನ್ನೀಸಾ’ರವರು, ಮನೆಯ ಗಂಡುಮಕ್ಕಳಿಗೂ ಈ ತರಹದ ನಿರ್ಬಂಧಗಳು ಮತ್ತು ಕಟ್ಟುಕಟ್ಟಳೆಗಳನ್ನು ಹಾಕಿ, ಅವರಿಗೆ ಇದರ ಬಗ್ಗೆ ಅರಿವು ಮೂಡಿಸಿದಾಗ ಸಮಾಜ ಇನ್ನಷ್ಟು ಸ್ವಸ್ಥಗೊಳ್ಳುತ್ತದೆ. ನಮ್ಮ ಮಗ, ನಮ್ಮ ತಮ್ಮ, ನಮ್ಮ ಮೊಮ್ಮಗ ಅಥವಾ ನಮ್ಮ ಗಂಡ ಹೊರಗೆ ಇದ್ದಾಗ ಆತ ಪರಸ್ತ್ರೀಯರನ್ನು ಕಾಣುವ ದೃಷ್ಟಿ ಬದಲಾಗುತ್ತದೆ. ಹೀಗಾದಾಗ ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ, ಲೈಂಗಿಕ ಶೋಷಣೆ, ಕೌಟುಂಬಿಕ ದೌರ್ಜನ್ಯ, ಕಳ್ಳ ಸಾಗಾಣಿಕೆ, ಅಪ್ರಾಪ್ತ ವಿವಾಹ ಇತ್ಯಾದಿ ಪಿಡುಗುಗಳು ತಂತಾನೆ ಕಳೆದುಹೋಗುತ್ತವೆ ಎಂದು ಅವರು ತಮ್ಮ ಮನೆಯ ಗಂಡುಮಕ್ಕಳನ್ನು ನಿಯಂತ್ರಿಸಿ ಎಂದು ಎಲ್ಲ ತಾಯಂದಿರಿಗೂ ಆಗ್ರಹಿಸಿದರು.

ಕಾಡುಗೊಲ್ಲರ ಹಟ್ಟಿಗಳಲ್ಲಿ ಆಚರಿಸಲ್ಪಡುವ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿಯ ಆಚರಣೆಯ ಬಗ್ಗೆ ನಿಷ್ಠುರವಾಗಿ ಮಾತನಾಡಿದ ನೂರುನ್ನೀಸಾ’ರವರು, ಸಮೀಪದ ಗೋಡೆಕೆರೆ ಗೊಲ್ಲರಹಟ್ಟಿಗೆ ಖುದ್ದಾಗಿ ಭೇಟಿ ನೀಡಿ, ಗ್ರಾಮದ ಪುರುಷರು ಮತ್ತು ಮಹಿಳೆಯರ ಜೊತೆ ಮಾತುಕತೆ ನಡೆಸಿದರು.

ದೇವರ ಹೆಸರಲ್ಲಿ ಮತ್ತು ಮಡಿ-ನೇಮ’ದ ಹೆಸರಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಸಲಾಗುವ ಅನಿಷ್ಟ ಪದ್ಧತಿಗಳ ಶೋಷಣೆಯ ಬಗ್ಗೆ ಆ ಹಟ್ಟಿಯ ಹೆಣ್ಣುಮಕ್ಕಳ ‌ಜೊತೆ ಮಾತನಾಡಿ ಅವರಲ್ಲಿ ಕಾನೂನು-ಸಂರಕ್ಷಣೆಯ ಸ್ಪಷ್ಟ ಅರಿವು ಮೂಡಿಸಿದರು. ಅಂತಹ ಆಚರಣೆಗಳನ್ನು ನೀವೇ ಮುಂದೆ ನಿಂತು ತಡೆಯಬೇಕು ಎಂದು ಗ್ರಾಮದ ಪುರುಷರಿಗೆ ತಾಕೀತು ಮಾಡಿದರು. ನಂತರ, ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು

. ಆಟಿಕೆಗಳನ್ನು ಅಂಗನವಾಡಿ ಮಕ್ಕಳು ಮುರಿದುಹಾಕಿದರೂ ಅಥವಾ ಚೆಲ್ಲಾಪಿಲ್ಲಿ ಮಾಡಿಟ್ಟರೂ ಸರಿ, ಮಕ್ಕಳಿಗೆ ಆಟಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಡಿ. ಅವರ ಕೈಗೆ ಮೊದಲು ಆಟಿಕೆಗಳನ್ನು ಕೊಡಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಿ ಒತ್ತಿ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ವಿಚ್ಛೇದನ, ಫೋಕ್ಸೋ, ಸಮಾನ ವೇತನ, ಕಾರ್ಮಿಕ ಹಕ್ಕು, ಆಸಿಡ್ ದಾಳಿ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಶೋಷಣೆ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಇನ್ನೂ ಹಲವು ಪ್ರಮುಖ ಕಾಯ್ದೆ-ಕಾನೂನುಗಳ ಬಗ್ಗೆ ಕಿರಿಯ ವಕೀಲ ಪ್ರತಾಪ್, ಪ್ಯಾನೆಲ್ ವಕೀಲರಾದ ನೇತ್ರಾವತಿ ಮತ್ತು ವೈ ಜಿ ಲೋಕೇಶ್ವರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ, ಚಿಕ್ಕನಾಯಕನಹಳ್ಳಿ ಜೆ ಎಮ್ ಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್ ಎ, ಅಧಿಕ ಸಿವಿಲ್ ನ್ಯಾಯಾಧೀಶರಾದ ಅಪರ್ಣ ಆರ್, ಸಹಾಯಕ ಸರ್ಕಾರಿ ಅಭಿಯೋಜಕರುಗಳಾದ ರಂಗನಾಥಪ್ಪ, ಬಸವರಾಜ ಕಾಂತಿಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಅಂಗನವಾಡಿ ಮೇಲ್ವಿಚಾರಣಾಧಿಕಾರಿ ಬಿ ರೇಖಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ ಕೆ ಸದಾಶಿವಯ್ಯ ಹಾಗೂ ತಾಲ್ಲೂಕಿನ ನೂರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?