ಮಹೇಂದ್ರ ಕೃಷ್ಣಮೂರ್ತಿ
ತುಮಕೂರು: ರಾಜ್ಯದ ರೈತ ಸಂಘದ ಹಿರಿಯ ನಾಯಕರಾಗಿದ್ದ ಬೆನ್ನನಾಯಕನಹಳ್ಳಿ ದೇವರಾಜ್ ಅವರಿಗೆ ಸಾಯುವ ವಯಸ್ಸೇನು ಆಗಿರಲಿಲ್ಲ. ರೈತರ ಬಗೆಗಿನ ಎರಡು ಕನಸುಗಳನ್ನು ಬಿಟ್ಟು ಅವರು ಬಾರದ ಲೋಕಕ್ಕೆ ದೂರ ಸರಿದು ಹೋಗಿದ್ದಾರೆ.
ದೇವರಾಜ್ ಅವರನ್ನು ಎಲ್ಲರೂ ದೇವರಾಜಣ್ಣ ಎಂದೇ ಕರೆಯುತ್ತಿದ್ದರು. ಅಣ್ಣನೇ ರೀತೀನೆ ಎಲ್ಲರಿಗೂ ಅವರು ಪ್ರೀತಿ, ಪ್ರೇಮ, ವಾತ್ಸಲ್ಯ ನೀಡಿ ಬೆಳೆಸಿದರು. ಪೊರೆದವರು. ಯಾರಾದರೂ ರೈತರು ಕಷ್ಟದಲ್ಲಿ ಸಿಲುಕಿದ್ದಾರೆ ಎಂದರೆ ಕೂಡಲೇ ಅಲ್ಲಿ ಅವರು ಹಾಜರಿರುತ್ತಿದ್ದರು.
ರೈತರ ವಿಷಯದಕ್ಕೆ ಬಂದರೆ ಅವರು ಯಾರಿಗೂ ಹೆದರುತ್ತಿರಲಿಲ್ಲ. ಸಾಕಷ್ಟು ಸಲ ಜೈಲು ವಾಸ ಕಂಡು ಬಂದಿದ್ದ ಅವರು ರೈತ ಸಂಘಟನೆಗಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇ ಹೆಚ್ಚು. ತಮ್ಮ ವೈಯಕ್ತಿಕ ಸುಖ, ಹಣ, ಅಭಿವೃದ್ಧಿಯನ್ನೂ ಸಹ.
ಪ್ರೊ.ಎಂ.ಡಿಎನ್ ಅವರಂತೆಯೇ ಕಡು ಪ್ರಾಮಾಣಿಕ. ನಿಷ್ಠುರವಾದಿ. ಪ್ರೊಫೆಸರ್ ಅವರ ನೆರಳಿನಲ್ಲೇ ಬೆಳೆದವರು ದೇವರಾಜಣ್ಣ. ಇಡೀ ರಾಜ್ಯ, ದೇಶ, ವಿದೇಶಗಳ ಗಮನ ಸೆಳೆದ ಹಲವು ಮಹತ್ವದ ಹೋರಾಟಗಳಲ್ಲಿ ಪ್ರೊಫೆಸರ್ (ಎಂ.ಡಿ.ನಂಜುಂಡಸ್ವಾಮಿ) ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
ತಿಪಟೂರಿನ ಬೆನ್ನನಾಯಕನಹಳ್ಳಿಯಂಥ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ಅವರು ಪ್ರೊಫೆಸರ್ ಅವರ ಕಾರಣದಿಂದಾಗಿಯೇ ರೈತ ಚಳವಳಿಗೆ ದುಮುಕಿದವರು. ಅನೇಕ ಸಲ ಜೈಲು ಕಂಡಿದ್ದವರು.
ಜಿಲ್ಲೆಯ ರೈತರ ಸಂಘಟನೆಗಾಗಿ ಜೀವ ತೇಯ್ದವರ ಬಗೆಗಿನ ಕಥನಗಳನ್ನು ಪುಸ್ತಕ ರೂಪದಲ್ಲಿ ತರಬೇಕು ಎಂಬುದು ಅವರು ಮಹದಾಸೆ ಆಗಿತ್ತು. ನಮ್ಮೊಂದಿಗೆ ನಮ್ಮ ಚಳವಳಿಯ ನೆನಪು ಮಾಸಿ ಹೋಗಿ ಬಿಡುತ್ತದೆ ಮಹೇಂದ್ರ. ನೀವೊಂದು ಇಡೀ ಜಿಲ್ಲೆಯ ರೈತ ಹೋರಾಟದ, ಹೋರಾಟಗಾರರ ಬಗೆಗೆ ಒಂದು ಪುಸ್ತಕ ತರಬೇಕು. ನನ್ನ ಹೋರಾಟದ ಗಾಥೆಯನ್ನು ನಿಮಗೆ ಹೇಳುತ್ತೇನೆ. ಇಡೀ ಜಿಲ್ಲೆಯ ರೈತ ಇತಿಹಾಸ ದೊಡ್ಡದಿದೆ. ಮಣ್ಣಲ್ಲಿ ಮಣ್ಣಾಗಿ ಹೋಗಿ ಬಿಡಬಾರದು’ ಎಂದು ಹೇಳುತ್ತಿದ್ದವರು ಅವರ ಎದೆಯೊಳಗೆ ಇತಿಹಾಸವನ್ನು ಇಟ್ಟುಕೊಂಡು ಹೊರಟೇ ಬಿಟ್ಟಿದ್ದು ಇಡೀ ನಾಡಿಗೆ ಆಘಾತ ತಂದಿದೆ.
ಪ್ರೊಫೆಸರ್ ಅವರ ಇನ್ನೊಂದು ಕನಸನ್ನು ಕನಸು ಮಾಡಲು ಅವರು ಹಾತೊರೆಯುತ್ತಿದ್ದರು. ಸಹಕಾರ ರೂಪದಲ್ಲಿ ಎಲ್ಲವನ್ನು ರೈತರೇ ನಿಭಾಯಿಸಬೇಕೆಂಬುದು ಅವರ ಮತ್ತೊಂದು ಕನಸಗಾಗಿತ್ತು. ಬೆಲೆ ಕಾವಲು ಸಮಿತಿ ನೇತೃತ್ವದಲ್ಲಿ ನಡೆದಿದ್ದ ಕೊಬ್ಬರಿ ಚಳವಳಿಯ ಹಿಂದೆ ಇಂಥದೊಂದು ಕನಸನ್ನು ಅವರು ಕಂಡಿದ್ದರು. ಬೆಲೆ ಕಾವಲು ಸಮಿತಿಯವರು ಆನ್ ಲೈನ್ ಕೊಬ್ಬರಿ ವಹಿವಾಟು ಅಧಿಕೃತಗೊಳಿಸಲು ತಿಪಟೂರು ಮಂಡಿಯಲ್ಲಿ ಕೊಬ್ಬರಿ ಮಂಡಿ ತೆರೆದಾಗ ಅದರ ಹಿಂದೆ ಅವರ ಕನಸನ್ನು ಮತ್ತಷ್ಟು ಚಿಗುರಿಸಿತ್ತು. ಆದರೆ ಬೆಲೆ ಕಾವಲು ಸಮಿತಿ ಈ ನಿಟ್ಟಿನಲ್ಲಿ ಸೋತಾಗ ಅವರು ಅತೀವ ನೋವು ತಿಂದರು.
ದೇವರಾಜಣ್ಣ ಏನು ಎಂಬುದನ್ನು ತಿಪಟೂರಿನಲ್ಲಿ ಪ್ರತಿ ಬೀದಿಗಳು ಹೇಳುತ್ತವೆ. ತಿಪಟೂರು ತಾಲ್ಲೂಕಿನ ಪ್ರತಿ ಬೀದಿ, ಹಳ್ಳಿಗಳ ಓಣಿಗಳಲ್ಲಿ ಅವರು ನೆನಪಿನ ಘಮ ಬಿಟ್ಟು ನಮ್ಮನ್ನು ಅಗಲಿದ್ದಾರೆ.
ಕೊನೆಯುವರೆಗೂ ಹಳೇ ಬೈಕ್ ನಲ್ಲೇ ಓಡಾಡುತ್ತಿದ್ದ ಅವರಿಗೆ ಬಂದು ಆಮಿಷಗಳು ಅಗಣಿತ. ರೈತರಿಗೆ ಪರಿಹಾರವನ್ನೇ ನೀಡದೇ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಕಡೆಯಿಂದ ಅವರಿಗೆ ಲಕ್ಸುರಿ ಕಾರು ನೀಡುವ, ಕೋಟ್ಯಂತರ ಹಣ ನೀಡುವ ಆಮಿಷ ನೀಡಲಾಗಿತ್ತು. ಮನೆಗೆ ಬಂದವರನ್ನು ನೇರ ಅವರ ಕಿವಿಹಿಂಡಿ ಬೀದಿಗೆ ಬಿಟ್ಟರು. ರೈತರಿಗೆ ದ್ರೋಹ ಎಸಗುವ ಈ ಕಾಮಗಾರಿ ತಡೆಗಟ್ಟಿ ಚಳವಳಿ ರೂಪಿಸಲು ಮುನ್ನಡೆಯುತ್ತಿದ್ದ ಅವರೀಗ ಆ ಚಳವಳಿಯನ್ನು ಬಿಟ್ಟು ಅಗಲಿದ್ದಾರೆ. ಈ ಚಳವಳಿಯನ್ನು ಮುಂದುವರೆಸಲು. ಅವರ ಕನಸನ್ನು ನನಸು ಮಾಡುವ ಕೆಲಸವನ್ನು ಈಗ ತಿಪಟೂರಿನ ಗೆಳೆಯರು, ರಾಜ್ಯ ರೈತ ಸಂಘ ಮಾಡಬೇಕಾಗಿದೆ.