Publicstory.in
ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಹಾಗೂ ಮುಂದೆ ಬರುವ ಯಾವುದೇ ಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ತುಮಕೂರು ಜಿಲ್ಲಾಸ್ಪತ್ರೆಯನ್ನು ಸಂಪೂರ್ಣವಾಗಿ ಕರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ.
ಒಟ್ಟು 400 ಬೆಡ್ ಗಳ ಸಾಮರ್ಥ್ಯದ ಈ ಆಸ್ಪತ್ರೆ ಕರೊನಾ ಸೋಂಕಿತರನ್ನಷ್ಟೇ ನೋಡುವ, ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿ ಮಾರ್ಪಾಡಾಗಲಿದೆ.
ಸದ್ಯ, ಹದಿನೈದು ಹಾಸಿಗೆಗಳ ಒಂದು ವಾರ್ಡ್ ಅನ್ನು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನೀಡಲಾಗಿತ್ತು.
ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೀತಿಯ ರೋಗಿಗಳನ್ನು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಶಿಪ್ಟ್ ಮಾಡುವ ಕೆಲಸ ನಡೆಯುತ್ತಿದೆ.
ಸಾಕಷ್ಟು ರೋಗಿಗಳನ್ನು ಈಗಾಗಲೇ ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಇವರಿಗೆಲ್ಲ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುವುದು. ರೋಗಿಗಳಿಗೆ ಬೇಕಾದ ಔಷಧಗಳನ್ನು ಜಿಲ್ಲಾಸ್ಪತ್ರೆಯಿಂದಲೇ ಪೂರೈಕೆ ಮಾಡಲಾಗುವುದು ಎಂದು ಡಾ.ವೀರಭದ್ರಯ್ಯ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ 400 ಬೆಡ್ ಗಳನ್ನು ಕರೊನಾ ಸೋಂಕಿತರಿಗೆ, ಶಂಕಿತ ಸೋಂಕಿತರನ್ನು ನೋಡಿಕೊಳ್ಳಲು ಮೀಸಲಾಗಿಡಲಾಗುವುದು. ಸಾಮಾನ್ಯ ರೋಗಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ಹೇಳಿದರು.
ಮುಂದಿನ ವಾರದ ವೇಳೆಗೆ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯಾಗಿ ಮಾರ್ಪಡಿಸಲಾಗುವುದು ಎಂದರು.